ನಗರ ಕೃಷಿಯ ಮೊದಲ ಹೆಜ್ಜೆಗಳು


ನಗರ ಪ್ರದೇಶಗಳು ಆಹಾರದೊಂದಿಗಿನ ಸಂಬಂಧವನ್ನು ಆಹಾರದ ಉತ್ಪಾದನೆ, ಬಳಕೆ, ಹವಾಮಾನ ಬದಲಾವಣೆ, ಕೃಷಿಯ ಕೈಗಾರಿಕರಣ ಸ್ವರೂಪದಿಂದ ಭೂಮಿ ಹಾಳಾಗುತ್ತಿದ್ದು ಆಹಾರ ಭದ್ರತೆಗೆ ಎದುರಾಗಿರುವ ಸವಾಲುಗಳ ಕುರಿತು ವಿಮರ್ಶಾತ್ಮಕವಾಗಿ ಯೋಚಿಸಬೇಕು. ಸಮುದಾಯ ಆಧಾರಿತ ನಗರ ಕೃಷಿಯ ಕ್ರಮಗಳು ಭೂಮಿ, ರೈತರು, ಪರಿಸರ ವ್ಯವಸ್ಥೆ ಕುರಿತಂತೆ ಸೂಕ್ಷ್ಮತೆ ಹಾಗೂ ವಿಮರ್ಶಾತ್ಮಕ ಅರಿವನ್ನು ಮೂಡಿಸುವಲ್ಲಿ ಪರಿಣಾಮಕಾರಿ ವಿಧಾನವಾಗಿದೆ.


ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯು ನಗರಗಳಲ್ಲಿದೆ. ಕಳೆದ ಶತಮಾನದಲ್ಲಿ ಊಹೆಗೂ ಮೀರಿ ನಡೆದ ನಗರೀಕರಣವು ಪರಿಸರವು ಇಷ್ಟು ವೇಗವಾಗಿ ಹಾಳಾಗಲು ಕಾರಣವಾಗಿದೆ.  ನಗರ ಪರಿಸರವು ವಿಸ್ತಾರಗೊಳ್ಳುತ್ತಿರುವುದು ಆಹಾರ ಅಭದ್ರತೆ, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ವಾಯು ಮಾಲಿನ್ಯ, ಜಲ ಸಂಪನ್ಮೂಲಗಳ ಅತಿಬಳಕೆ, ಅರಣ್ಯ ನಾಶ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಿದೆ. ನಗರೀಕರಣದ ದೆಸೆಯಿಂದ ರೂಪಿಸಲಾಗಿರುವ ನಗರಗಳಲ್ಲಿ ನಾವಿಂದು ಬದುಕುತ್ತಿದ್ದು ಅವು ಸುಸ್ಥಿರತೆಯ ಸವಾಲುಗಳನ್ನೆದುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಸಮುದಾಯವು ಒಟ್ಟಾಗಿ ಕೆಲಸ ಮಾಡಲು ನಗರ ಕೃಷಿಯೊಂದು ವೇದಿಕೆ

ಆಹಾರ ಭದ್ರತೆ ಹಾಗೂ ಉತ್ಪಾದನೆ ನಗರೀಕರಣ, ಪರಿಸರ ಸಂಬಂಧಿ ವಿಷಯಗಳೊಂದಿಗೆ ಬೆಸೆದುಕೊಂಡಿದೆ. ಆದರೆ ಇವು ಕಾಣುವುದಿಲ್ಲ.  ನಗರದಲ್ಲಿ ಸ್ಥಳಗಳು ಕೃಷಿಯಿಂದ ದೂರ ಉಳಿದಿವೆ. ಆಹಾರವನ್ನು ಸಾವಿರಾರು ಕಿಮೀಯಿಂದ ವಿವಿಧ ಮಧ್ಯವರ್ತಿಗಳ ಮೂಲಕ ತರಿಸಲಾಗುತ್ತದೆ. ಈ ಪ್ರಕ್ರಿಯೆಯು ದುಬಾರಿಯಾದದ್ದು. ಈ ವ್ಯವಸ್ಥೆಯು ಕೃಷಿಕನನ್ನೂ ಶೋಷಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಹೊಸ ಸಂಕಥನ ಶುರುವಾಗಿದೆ. ಭಾರತದಲ್ಲೂ ಇತ್ತೀಚೆಗೆ ಕಾರ್ಪೊರೇಟ್‌ ವಲಯದಲ್ಲಿರುವವರು ತಮ್ಮ ಕೆಲಸಗಳನ್ನು ಬಿಟ್ಟು ಕೃಷಿಯನ್ನು ಹವ್ಯಾಸವನ್ನಾಗಿಸಿಕೊಂಡು ತೊಡಗಿಕೊಳ್ಳುತ್ತಿದ್ದಾರೆ. ಆಹಾರ ಭದ್ರತೆ, ಪರಿಸರ ಸಮಗ್ರತೆ ಇದರ ಮುಖ್ಯ ಉದ್ದೇಶ. ಇದು ಕೃಷಿಯಲ್ಲಿನ ಸಾಂಪ್ರದಾಯಿಕ ಪದ್ಧತಿಗಳನ್ನೊಳಗೊಂಡಂತೆ ಪರಿಸರ ಸ್ನೇಹಿಯಾಗಿರುವಂತಹ ಪದ್ಧತಿಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನ. ಈ ಲೇಖನವು ನಗರ ಪ್ರದೇಶದ ಸಮುದಾಯ ಕೃಷಿ ಎನ್ನುವ ನಗರಗಳ ಪ್ರಯತ್ನವನ್ನು ಕುರಿತು ತಿಳಿಸುತ್ತದೆ.

ಡ್ರೀಮ್ಗ್ರೋವ್ (Dream Grove (DG) – ಸಮುದಾಯ ನಡೆಸುತ್ತಿರುವ ನಗರ ಫಾರಂ

ಡ್ರೀಮ್‌ ಗ್ರೋವ್‌ ಎನ್ನುವುದು ಮುಂಬಯಿಯಲ್ಲಿರುವ ೨೦೦ ಚದುರ ಅಡಿ ಸಾರ್ವಜನಿಕ ಉದ್ಯಾನದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ನಗರದ ಸಮುದಾಯ. ಈ ಉದ್ಯಾನವು ಮೊದಲು ನಿರ್ಲಕ್ಷಿತಗೊಂಡು ದುಸ್ಥಿತಿಯಲ್ಲಿತ್ತು. ಇದನ್ನು ೨೦೧೮ರಲ್ಲಿ ಮೇರಿ ಪೌಲ್‌ ಎನ್ನುವ ಸ್ಥಳೀಯರು ಇದನ್ನು ಮಕ್ಕಳು ಮತ್ತು ಹಿರಿಯರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದರು. ಆಕೆ ಅಲ್ಲಿನ ನಿವಾಸಿಗಳ ಗುಂಪನ್ನು ರಚಿಸಿಕೊಂಡು ಉದ್ಯಾನವನದ ನಿರ್ವಹಣೆಯನ್ನು ಸ್ವಯಂಪ್ರೇರಿತರಾಗಿ ಮಾಡುವಂತೆ ಮಾಡಿದರು. ಗುಂಪಿನ ಇಬ್ಬರು ಸದಸ್ಯರು ಪ್ರಮೀಳ ಮಾರ್ಟಿಸ್‌ ಮತ್ತು ದೀಪ್ತಿ ಜಾಂಗಿಯಾನಿ (ನೋಡಿ ಚೌಕ ೧) ಅರ್ಬನ್‌ ಲೀವ್ಸ್‌ ಎನ್ನುವ ನಗರದ ಕೃಷಿ ಗುಂಪಿನೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದರು. ಅವರಿಗೆ ತರಕಾರಿಗಳನ್ನು ಬೆಳೆದ ಅನುಭವವಿತ್ತು.

ಮಾರ್ಟಿಸ್‌ ಅವರು ಮುಂದೆ ಬಂದು ಪ್ರತಿಯೊಬ್ಬರು ಉದುರಿದ ಎಲೆಗಳು, ಅಡುಗೆಮನೆ ತ್ಯಾಜ್ಯ, ತೆಂಗಿನ ನಾರನ್ನು ತಮ್ಮ ನೆರೆಹೊರೆಯವರಿಂದ ಸಂಗ್ರಹಿಸುವಂತೆ ಮಾಡಿದರು. ಇದನ್ನು ಉದ್ಯಾನದಲ್ಲಿ ಸಗಣಿ ಮತ್ತು ಗಂಜಲವನ್ನು ಬಳಸಿ ಗೊಬ್ಬರವಾಗಿಸಿದರು (ಈ ಪ್ರಕ್ರಿಯೆಯನ್ನು ಅಮೃತ ಮಿಟ್ಟಿ ಎಂದು ಕರೆಯುತ್ತಾರೆ). ಸಾವಯವ ವಿಧಾನದಲ್ಲಿ ಪೌಷ್ಟಿಕಾಂಶಯುಕ್ತವಾದ ಮಣ್ಣಿನಲ್ಲಿ ಸಾವಯವ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಯಿತು. ಮೊದಲಿಗೆ ಬ್ರಿಹನ್‌ ಮುಂಬಯಿ ಮುನಿಸಿಪಲ್‌ ಕಾರ್ಪೊರೇಷನ್‌ ಈ ಐಡಿಯಾವನ್ನು ಒಪ್ಪಲಿಲ್ಲ ನಂತರ ಸ್ಥಳೀಯರ ಪ್ರತಿಕ್ರಿಯೆ ಮತ್ತು ಉದ್ಯಾನದ ಬದಲಾದ ಸ್ವರೂಪವನ್ನು ನೋಡಿ ಅದನ್ನು ಸಂರಕ್ಷಿಸಲು ಮುಂದಾಯಿತು. ಈಗ ಅವರು ಕೂಡ ಸಮುದಾಯಗಳೇ ನಡೆಸುವ ಆಹಾರ ಉದ್ಯಾನಗಳನ್ನು ಪ್ರೋತ್ಸಾಹಿಸಲಾರಂಭಿಸಿದರು.

ಜಾಂಗಿಯಾನಿಯವರ ಪ್ರಕಾರ ಕಳೆದೆರೆಡು ವರ್ಷಗಳಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಗಿಡಮೂಲಿಕೆಗಳು ಸೇರಿದಂತೆ ೫೦ ಬಗೆಯ ಗಿಡಗಳನ್ನು ಬೆಳೆಸಿದ್ದಾರೆ. ಇವುಗಳಲ್ಲಿ ಪೈನಾಪಲ್‌ಗಳು, ಬಾಳೆಹಣ್ಣು, ಸುವರ್ಣಗಡ್ಡೆ, ಮೂಲಂಗಿ, ಟೊಮೊಟೊ, ಹಾಗಲಕಾಯಿ, ಮೆಣಸಿನ ಕಾಯಿ, ಬೆಂಡೆಕಾಯಿ ಇತ್ಯಾದಿಗಳನ್ನು ಬೆಳೆಯಲಾಯಿತು. ಮಾರ್ಟಿಸ್‌ರವರ ಪ್ರಕಾರ ಜನರು ಗಿಡ ಬೆಳೆಸುವ ಚಟುವಟಿಕೆಗಳಲ್ಲಿ ಅಂದರೆ ಗೊಬ್ಬರ, ಉಳುಮೆ, ಗಿಡಗಳ ಆರೈಕೆ ಇತ್ಯಾದಿಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಆಹಾರ ಬೆಳೆದುಕೊಳ್ಳುವ ಪ್ರಕ್ರಿಯೆಯ ಭಾಗವಾದರು. ಇದರಲ್ಲಿ ೭ರಿಂದ ೮೦ರವರೆಗಿನ ವಯೋಮಾನದವರು ಇದ್ದರು.  ಇದರಿಂದ ತಲೆಮಾರುಗಳ ನಡುವಿನ ಹೊಸ ಬಗೆಯ ಸಂವಾದ ಆರಂಭವಾಯಿತು. ಪ್ರತಿ ವಾರಾಂತ್ಯದಲ್ಲಿ ಡಿಜಿಯ ೨೦ ಮಂದಿ ಸ್ವಯಂಸೇವಕರು ಉದ್ಯಾನಕ್ಕೆ ಭೇಟಿ ನೀಡಿ ಬಿತ್ತನೆ, ನಾಟಿ, ಕೊಯ್ಲು ಮತ್ತು ನೀರುಣಿಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನೀವು ವೈಯುಕ್ತಿಕವಾಗಿ ಭಾಗವಹಿಸಿದಾಗ ಇದರ ಮಹತ್ವ ಅರಿವಾಗುತ್ತದೆ. ನಾವು ಗಿಡಗಳನ್ನಷ್ಟೇ ಬೆಳೆಸುತ್ತಿಲ್ಲ. ಮನುಷ್ಯರನ್ನೂ ಬೆಳೆಸುತ್ತಿದ್ದೇವೆಎಂದಾಕೆ ಹೇಳುತ್ತಾರೆ.

 

ಚೌಕ : ಸ್ವಯಂಸೇವಕರ ವಿವರಗಳು ಪ್ರಮೀಳ ಮಾರ್ಟಿಸ್‌ರವರು ಫೈನಾನ್ಸ್‌ ಹಿನ್ನಲೆಯಿಂದ ಬಂದವರು. ಅವರು ಸ್ವಯಂನಿವೃತ್ತಿ ತೆಗೆದುಕೊಂಡು ನಗರ ಸಮುದಾಯ ಕೃಷಿ ಗುಂಪನ್ನು (ಅರ್ಬನ್‌ ಲೀವ್ಸ್‌) ೨೦೧೩ರಲ್ಲಿ ಸೇರಿದರು. ಆಕೆ ಅರ್ಬನ್‌ ಲೀವ್ಸ್‌ನವರು ಆಯೋಜಿಸಿದ್ದ ಕೈತೋಟದ ಕಾರ್ಯಾಗಾರದಲ್ಲಿ ಭಾಗವಹಿಸಿದರು.ದೀಪ್ತಿ ಜಾಂಗಿಯಾನಿಯವರು ಪತ್ರಿಕೋದ್ಯಮದ ಹಿನ್ನಲೆಯಿಂದ ಬಂದವರು. ಆಕೆಗೆ ತ್ಯಾಜ್ಯದ ಮರುಬಳಕೆಯಲ್ಲಿಆಸಕ್ತಿಯಿತ್ತು. ಅವರು ಮನೆಯಲ್ಲಿಯೇ ಗೊಬ್ಬರ ತಯಾರಿಸುತ್ತಿದ್ದರು. ನಂತರ ಅರ್ಬನ್‌ ಲೀವ್ಸ್‌ನ ಸ್ವಯಂಸೇವಕರಾದರು.ಈ ಗುಂಪು ಪ್ರತಿವಾರಾಂತ್ಯದಲ್ಲಿ ರೈತರ ಮಾರುಕಟ್ಟೆಯಿಂದ ಸಾವಯವ ಬೀಜಗಳನ್ನು, ದಿನದ ಕೊನೆಗೆ ಉಳಿಯುತ್ತಿದ್ದ ತ್ಯಾಜ್ಯವನ್ನು ಗೊಬ್ಬರಕ್ಕಾಗಿ ಸಂಗ್ರಹಿಸುತ್ತಿತ್ತು. ಆಹಾರ ವ್ಯವಸ್ಥೆಯಲ್ಲಿ ಬೆಳೆದ ಆಸಕ್ತಿಯಿಂದಾಗಿ ಪ್ರಮೀಳ ಅವರು ʼಗ್ರೋವರ್ಸ್‌ ಟೂ ಬಾಂದ್ರಾ ಹೋಮ್ಸ್‌ʼ ಎನ್ನುವ ಗುಂಪನ್ನು ಲಾಕ್‌ಡೌನ್‌ ಸಮಯದಲ್ಲಿ ರೂಪಿಸಿದರು. ಇದರ ಮೂಲಕ ಅವರು ರೈತ ಗ್ರಾಹಕರ ನಡುವೆ ಸಂಪರ್ಕಸೇತುವಾದರು. ರೈತರ ಉತ್ಪನ್ನಗಳನ್ನು ಗುಂಪಿನ ಸದಸ್ಯರು ತಮ್ಮ ಸ್ನೇಹಿತರು ಮತ್ತು ಕುಟುಂಬದ ಇತರರಿಗೆ ಪರಿಚಯಿಸಿದ ಪರಿಣಾಮವಾಗಿ ಕ್ರಮೇಣ ಈ ಜಾಲವು ವಿಸ್ತರಿಸಿತು.

ಲಾಕ್ಡೌನ್ಸಮಯದಲ್ಲಿ ಬೆಳೆದ ಸಂಪರ್ಕ ಜಾಲ

ಪ್ರಮೀಳ ಮಾರ್ಟಿಸ್‌ ಕಳೆದ ಕೆಲವು ವರ್ಷಗಳಿಂದ ಅಕ್ಕಿ ಮತ್ತು ಬೇಳೆಕಾಳುಗಳನ್ನು ಸಾವಯವ ರೈತರಿಂದ ತೆಗೆದುಕೊಳ್ಳುತ್ತಿದ್ದರು. ಅವರೊಂದು ವಾಟ್ಸಪ್‌ ಗುಂಪನ್ನು ಮಾಡಿ (ಗ್ರೋವರ್‌ ಟೂ ಬಾಂದ್ರಾ ಹೋಂ) ರಚಿಸಿಕೊಂಡರು. ಇದರಲ್ಲಿ ರೈತರು ತಮ್ಮ ಉತ್ಪನ್ನಗಳ ಕುರಿತು ವಿವರ ಹಂಚಿಕೊಳ್ಳಬಹುದಿತ್ತು. ಆಕೆಯ ಪ್ರಕಾರ ರೈತರು ಹಂಚಿಕೊಂಡ ವಿವರಗಳಿಂದಾಗಿ ಅವರ ಬಗೆಗೆ ನಂಬಿಕೆ ಬೆಳೆದು ಸಂಪರ್ಕ ಬೆಳೆಸಿಕೊಳ್ಳುವಂತೆ ಮಾಡಿತು. ಉದಾಹರಣೆಗೆ ಈ ಗುಂಪಿನಲ್ಲಿ ತನ್ನ ಉತ್ಪನ್ನಗಳನ್ನು ಮಾರಿದ ಸುಶೀಲ್‌ ಬೊರ್ಕರ್‌ ಅವರು ಬರೆದ ಪೋಸ್ಟ್‌ ಹೀಗಿತ್ತು. ಇವು ವೃತ್ತಿಯಿಂದ ವ್ಯಾಪಾರಸ್ಥರು. ಅವರಿಗೆ ಕೃಷಿಯಲ್ಲಿ ಆಸಕ್ತಿಯಿರುವುದರಿಂದ ಕಳೆದ ೩೦ ವರ್ಷಗಳಿಂದ ವಾರಾಂತ್ಯದಲ್ಲಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಐಐಟಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ವೈಲ್ಡ್‌ಲೈಫ್‌ ಕ್ಲಬ್‌ನ ಸದಸ್ಯರಾಗಿದ್ದಾಗಿನ ತಮ್ಮ  ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರು ಯಾವುದೇ ರಾಸಾಯನಿಕ ಗೊಬ್ಬರ ಅಥವ ಕೀಟನಾಶಕಗಳನ್ನು ತಮ್ಮ ಭೂಮಿಯಲ್ಲಿ ಬಳಸುವುದಿಲ್ಲ. ಹೀಗೆ ಸಾವಯವ ವಿಧಾನದಲ್ಲಿ ಬೆಳೆದ ತಮ್ಮ ಉತ್ಪನ್ನಗಳ ಕುರಿತು ಗುಂಪಿನಲ್ಲಿ ಹೀಗೆ ಬರೆದುಕೊಂಡಿದ್ದರು :

ನಮ್ಮ ಕೃಷಿ ಉತ್ಪನ್ನಗಳನ್ನು ವಾರ ನಿಮಗೆ ತಲುಪಿಸಲು ಸಂತೋಷವಾಗುತ್ತದೆ. ನಾವು ಪದ್ಮಶ್ರೀ ಸುಭಾಷ್ಪಾಳೇಕರ್ ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುತ್ತೇವೆ. ಇದು ಘನಾಮೃತ, ಜೀವಾಮೃತವನ್ನು ಬಳಸುತ್ತದೆ. ಗೊಬ್ಬರವನ್ನು ತಯಾರಿಸಲೆಂದೇ ೧೮ ದೇಸಿ ಹಸುಗಳನ್ನು (ಹಸುಗಳು, ದನಗಳು ಮತ್ತು ಕರುಗಳು) ಇಟ್ಟುಕೊಂಡಿದ್ದೇವೆ. ನಮ್ಮೆಲ್ಲ ಉತ್ಪನ್ನಗಳು ೧೦೦% ಸಾವಯವ”.

ನಮ್ಮಲ್ಲಿ ಮೂರು ರೀತಿ ಮಾವಿನ ಹಣ್ಣುಗಳು ಸಿಗುತ್ತವೆ : ಹಪೂಸ್‌ (೮೦%), ರತ್ನ (೧೦%), ಕೇಶರ್‌ (೧೦%). ಮಾವನ್ನು ಮರದಲ್ಲೇ ಅರ್ಧ ಹಣ್ಣಾಗುವವರೆಗೂ ಬಿಡಲಾಗುತ್ತದೆ. ನಂತರ ಅದನ್ನು ಹುಲ್ಲಿನಲ್ಲಿಟ್ಟು ಪೂರ್ತಿ ಹಣ್ಣು ಮಾಡಲಾಗುತ್ತದೆ. ಮಾವಿನ ಹಣ್ಣುಗಳನ್ನು ಅರ್ಧ/ಪೂರ್ತಿ ಹಣ್ಣಾದ ಸ್ಥಿತಿಯಲ್ಲಿ ತಲುಪಿಸಲಾಗುವುದು. ಕನಿಷ್ಠ ಆರ್ಡರ್ ಡಜನ್‌. ಮಾವಿನ ಗಾತ್ರದ ಆಧಾರದ ಮೇಲೆ +\- ಹೆಚ್ಚು ಕಡಿಮೆ ಆಗಬಹುದು.

ನಗರ ಗ್ರಾಹಕರು ಸೂಕ್ಷ್ಮತೆಯು ಸಮುದಾಯದ ಅನುಭವವನ್ನು ಆಧರಿಸಿರುತ್ತದೆ. ಬೇಡಿಕೆ ಪೂರೈಕೆಗಳು ಸುಸ್ಥಿರ ಕೃಷಿಯ ಪ್ರಯತ್ನಗಳಿಗೆ ಬಲ ನೀಡುತ್ತದೆ.

ಒಣಗಿದ ಎಲೆಗಳಂತಹ ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿಸುವ ಮೂಲಕ ಅಮೃತ ಮಿಟ್ಟಿ ತಯಾರಿಸಲಾಗುತ್ತದೆ. ನೀರು, ಗಂಜಲ, ಸಗಣಿ ಮತ್ತು ಸಾವಯವ ಕಪ್ಪು ಬೆಲ್ಲವನ್ನು ಬಳಸಿ ಅಮೃತ ಜಲವನ್ನು ತಯಾರಿಸಲಾಗುತ್ತದೆ.

ಗ್ರಾಹಕರು ಕೂಡ ರೈತರಿಂದ ಕೊಂಡ ಉತ್ಪನ್ನಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಅವುಗಳ ಕುರಿತು ಪ್ರಚಾರ ಹಾಗು ಜಾಗೃತಿಯನ್ನು ಮೂಡಿಸಿದರು. ದೀಪ್ತಿಯವರ ಪ್ರಕಾರ ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳ ಕುರಿತು ಗ್ರಾಹಕರು ಅರಿತರು.

 

 

ಸ್ಥಳೀಯ ಉತ್ಪನ್ನಗಳ ಪೂರೈಕೆಯನ್ನು ಬೆಂಬಲಿಸಲು ಕಾರ್ಯವಿಧಾನಗಳನ್ನು ಸೃಷ್ಟಿಸುವಲ್ಲಿ ಸಕ್ರಿಯ ಭಾಗವಹಿಸುವಿಕೆ

ಗುಂಪಿನ ಸದಸ್ಯರು ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿ ಅವುಗಳನ್ನು ನಗರಕ್ಕೆ ತರಲು ಆಗುವ ಸಾರಿಗೆಯ ವೆಚ್ಚವನ್ನು ಕಡಿಮೆಗೊಳಿಸುವ ಜವಾಬ್ದಾರಿಯನ್ನು ಹೊತ್ತರು. ಕೇವಲ ಗ್ರಾಹಕರಾಗಿರುವ ಬದಲು ಅವರು ಉತ್ಪನ್ನಗಳ ಮಾಲೀಕತ್ವವನ್ನು ಅನುಭವಿಸಿದರು. ರೈತರಿಗೆ ಜೊತೆಯಾದರು. ಉದಾಹರಣೆಗೆ ಗುಂಪಿನವರು ಈರುಳ್ಳಿ ಮತ್ತು ಹಣ್ಣುಗಳನ್ನು ವಿವಿಧ ರೈತರಿಂದ ಕೊಂಡು ಅದನ್ನು ತಮ್ಮಲ್ಲೇ ವಿತರಿಸಿಕೊಂಡರು.

ಇದರರ್ಥ ಎಲ್ಲವೂ ಯೋಜಿಸಿದಂತೆ ಆಯ್ತು ಎಂದಲ್ಲ. ಕೆಲವೊಮ್ಮೆ ಉತ್ಪನ್ನದ ಪ್ರಮಾಣ ಇಲ್ಲವೇ ಗುಣಮಟ್ಟವನ್ನು ನಿರ್ವಹಿಸುವುದು ಕಷ್ಟವಾಗುತ್ತಿತ್ತು. ಆದರೂ ಪ್ರಮೀಳ ಅವರು ರೈತರು ಮತ್ತು ಗ್ರಾಹಕರ ನಡುವೆ ಸಂಪರ್ಕಸೇತುವಾಗಲು ಮುಂದಾದರು. ಇದರಿಂದ ಆಹಾರ ವೈವಿಧ್ಯತೆಯ ಕುರಿತು ಹೆಚ್ಚು ತಿಳಿಯಬಹುದು ಎಂದು ಆಕೆಗೆ ಅನ್ನಿಸಿತು. ಗುಂಪಿನಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡದ್ದರಿಂದ ಉಳಿದವರು ಈ ಕುರಿತು ಆಸಕ್ತಿ ವಹಿಸುವಂತಾಯಿತು ಎಂದು ಹೇಳಿದರು.

ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಬಲ

ರೈತರೊಂದಿಗಿನ ನಿರಂತರ ಮಾತುಕತೆ ಮತ್ತು ಪ್ರತಿಕ್ರಿಯೆಗಳು ಗುಂಪಿಗೆ ತಮ್ಮ ಆಯ್ಕೆ, ಸಾಮೂಹಿಕ ಶ್ರಮಕ್ಕೆ ಬಲ ತುಂಬಿದೆ.

ಈರುಳ್ಳಿಯನ್ನು ಕೊಂಡುಕೊಂಡ ನಾವೆಲ್ಲರೂ ಅಮಿತ್ಗೆ ಥ್ಯಾಂಕ್ಸ್ಹೇಳಬೇಕು. ಈರುಳ್ಳಿ ರೈತ ಅವಿಯೊಂದಿಗೆ ಮಾತಾಡಿ ಅವರು ನಮಗೆ ತರಿಸಿ ವಿತರಿಸುವಂತೆ ಮಾಡಿದರು. ಅವಿ ಮತ್ತವರ ನೆರೆಹೊರೆಯ ರೈತರ ಬಳಿ ಬೇಸಿಗೆಯಲ್ಲಿ ಟನ್ಈರುಳ್ಳಿ ಇತ್ತು. ಮಾರಾಟಗಾರರಿಗೆ ಕಡಿಮೆ ಬೆಲೆಗೆ ಅವುಗಳನ್ನು ನೀಡಲು ನಿರಾಕರಿಸಿ ಮುಂಬೈನಲ್ಲಿ ತಾವೇ ಖುದ್ದು ಮಾರಲು ನಿರ್ಧರಿಸಿದರು. ಅವರು ಕಳೆದ ವಾರ ೧೫೦೦ ಕೆಜಿಯಷ್ಟು ಮಾರಲು ತಂದರು. ನಾವು ಅದರಲ್ಲಿ ೧೦೦ ಕೆಜಿಯಷ್ಟು ಮಾತ್ರ ಕೊಂಡೆವು. ಆದರೂ ಖುಷಿ ಕೊಟ್ಟಿತು.”

ಗುಂಪು ಸಣ್ಣ ಪ್ರಮಾಣ ಉತ್ಪನ್ನಗಳಿಗೂ (ತೆಂಗಿನಕಾಯಿ, ಉಪ್ಪಿನಕಾಯಿ ಇತ್ಯಾದಿ) ನೆರವು ನೀಡಿತು. ಆ ಮೂಲಕ ಸ್ಥಳೀಯ ಪೂರೈಕೆಗಳಿಗೆ ಕೊಂಡಿಯನ್ನು ನಿರ್ಮಿಸಿತು.

ಮುಂದಿನ ಹಾದಿ : ರೈತರ ಉತ್ಪನ್ನಗಳಿಗೆ  ನೆರವು ನೀಡಲಿರುವ ಹಾದಿಗಳು

ಹೊಸ ಸಂಕಥನಗಳು, ಉದಾಹರಣೆಗಳು ಗುಂಪು ನಗರ ಕೃಷಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ರೈತರ ಶ್ರಮಕ್ಕೆ ಬೆಲೆಕೊಟ್ಟು ಅವರೊಂದಿಗಿವೆ ಎನ್ನುವುದನ್ನು ತೋರುತ್ತಿದೆ. ಅವರು ಸ್ಥಳೀಯ ಹವಾಮಾನ ಪರಿಸ್ಥಿತಿಗಳು ಉತ್ಪನ್ನದ ಪ್ರಮಾಣ, ಗುಣಮಟ್ಟದ ಮೇಲೆ ಬೀರುತ್ತಿರುವ ಪ್ರಭಾವವನ್ನು ಅರ್ಥಮಾಡಿಕೊಂಡಿದ್ದಾರೆ. ರೈತರೊಂದಿಗಿನ  ನಿರಂತರ ಸಂವಾದಗಳು ಹಾಗೂ ಪ್ರತಿಕ್ರಿಯೆಗಳು ತಾವು ಕೂಡ ಈ ಪ್ರಕ್ರಿಯೆಯ ಭಾಗೀದಾರರು ಎನ್ನುವ ಭಾವವನ್ನು ಅವರಲ್ಲಿ ಹುಟ್ಟುಹಾಕಿದೆ.  ನಂಬಿಕೆಯ ಬುನಾದಿಯ ಮೇಲೆ ನಿಂತಿರುವ ಈ ಸಂಬಂಧವು ಒಬ್ಬರು ಮತ್ತೊಬ್ಬರನ್ನು ತೃಪ್ತಿಗೊಳಿಸಲು ಸದಾ ತುಡಿಯುವಂತಾಯಿತು (ಗ್ರಾಹಕರಿಗೆ ಗುಣಮಟ್ಟ ರೈತರಿಗೆ ಉತ್ತಮ ಬೆಲೆ).

ಸಮುದಾಯದ ಅನುಭವಗಳ ಆಧಾರದ ಮೇಲೆ ಬೇಡಿಕೆ ಹಾಗೂ ಪೂರೈಕೆಗಳು ಸುಸ್ಥಿರವಾದ ಕೃಷಿ ಕ್ರಮಗಳನ್ನು ಕೈಗೊಳ್ಳಲು ನೆರವು ನೀಡುತ್ತದೆ. ರೈತರ ಮಾರುಕಟ್ಟೆಗಳು ಮತ್ತು ಸ್ವಯಂಸೇವಕ ಸಂಘಗಳ ನಡುವಿನ ಸಹಯೋಗಗಳು ಸ್ಥಳೀಯ ಮಟ್ಟದಲ್ಲಿ ಸಂಪರ್ಕಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಬದಲಿ ಆರ್ಥಿಕ ವ್ಯವಹಾರ ವ್ಯವಸ್ಥೆಗಳನ್ನು ಅಂದರೆ ಬಾರ್ಟರ್‌, ಸಮಯ, ಸಂಪನ್ಮೂಲಗಳು ಇತ್ಯಾದಿಗಳನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ನಗರ ಕೃಷಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಅಥವ ಸಂಪನ್ಮೂಲಗಳನ್ನು ಪ್ರೋತ್ಸಾಹಿಸಬಹುದು. ನಗರ ಕೃಷಿಗೆ ಅಗತ್ಯವಾದ ಕ್ರಮಗಳು ಅಂದರೆ ಉದ್ಯಾನಗಳ ನಿಯೋಜನೆಯನ್ನು ನಗರ ಯೋಜನೆಯ ಭಾಗವಾಗಿರುವಂತೆ ಮಾಡಬಹುದು. ನಗರಾಧಾರಿತ ಆಹಾರ ಉದ್ಯಾನಗಳು ಜಾಗೃತಿ ಮೂಡಿಸುವಲ್ಲಿ ಹಾಗೂ ಸ್ಥಳೀಯ ರೈತರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು. ಈ ರೀತಿಯ ಕ್ರಮಗಳು ನಗರ ಯೋಜನೆ ಕುರಿತಾದ ನೀತಿರೂಪಣೆಯಲ್ಲಿ ಜಾಗ ಪಡೆಯಬೇಕು.

ದೆಬೊರಾ ದತ್ತ


ಗ್ರಂಥಸೂಚಿ :

Dutta, D., & Chandrasekharan, S. (2018). Doing to being:

farming actions in a community coalesce into proenvironment

motivations and values. Environmental

Education Research,24(8), 1192-1210.

Parnell, S., Elmqvist, T., McPhearson, T., Nagendra, H.,

& Sörlin, S. (2018). Introduction: Situating knowledge

and action for an urban planet. The urban planet:

knowledge towards sustainable cities, 1-16.

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ‌೩ ; ಸೆಪ್ಟಂಬರ್ ೨೦೨೦

Recent Posts

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

ಗ್ರಾಮೀಣ ಯುವಜನತೆ – ಭವಿಷ್ಯದ ರೈತರು

ಗ್ರಾಮೀಣ ಯುವಜನತೆ – ಭವಿಷ್ಯದ ರೈತರು

ಭಾರತದಲ್ಲಿ ಹೆಚ್ಚುತ್ತಿರುವ ಯುವ ಜನಸಂಖ್ಯೆಯು ದೇಶದ ನಿರ್ಮಾಣದಲ್ಲಿ ಬಳಸಬೇಕಾದ ಆಸ್ತಿಯಾಗಿದೆ. ಗ್ರಾಮೀಣ ಯುವಕರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಮೀಣ ಯುವಜನರ ಆಕಾಂಕ್ಷೆಗಳು ಮತ್ತು ಕೃಷಿಯಲ್ಲಿ ಅವರನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮಹಾರಾಷ್ಟ್ರದಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನದ ಸಂಶೋಧನೆಗಳು ಮತ್ತು ಒಳನೋಟಗಳು ಕೃಷಿಯಲ್ಲಿ ಗ್ರಾಮೀಣ ಯುವಕರನ್ನು ಉಳಿಸಿಕೊಳ್ಳುವಲ್ಲಿ ಸೂಕ್ತ ತಂತ್ರಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.

YouTube
Instagram
WhatsApp