ನಮ್ಮ ಕೈತೋಟ ನಮ್ಮ ಬದುಕು

ಪ್ರಪಂಚದಾದ್ಯಂತ ʼನಿಮ್ಮ ಆಹಾರವನ್ನು ನೀವೇ ಬೆಳೆಯಿರಿʼ ಎನ್ನುವ ಸಿದ್ಧಾಂತ ನಗರ,ಪಟ್ಟಣಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಮಿಂಚಿನ ವೇಗದಲ್ಲಿ ನಡೆಯುತ್ತಿರುವ ನಗರೀಕರಣವು ರಸ್ತೆಗಳನ್ನು, ನೀರನ್ನೂ ಘನತ್ಯಾಜ್ಯದಿಂದ ಮಲಿನಗೊಳಿಸುತ್ತಿದೆ. ಬಡತನ ಹೆಚ್ಚಲು ಇಂಧನ ಹಾಗೂ ನೀರಿನ ಕೊರತೆ ಹೆಚ್ಚಲು ಕಾರಣವಾಗಿದೆ. ಪ್ರತಿಮನೆಯಲ್ಲೂ ಹಿತ್ತಲ ಇಲ್ಲವೇ ತಾರಸಿ ಮೇಲೆ ಕೈತೋಟ ಮಾಡುವುದು ಈ ಸಮಸ್ಯೆಯೆದುರಿಸಲು ನೆರವು ನೀಡಬಹುದು. ನಗರದಲ್ಲಿ ಹಸಿರನ್ನು ಉಳಿಸಿಕೊಳ್ಳಲು ಈ ತಂತ್ರ ನೆರವಾಗುತ್ತದೆ. ಜೊತೆಗೆ ಜನರ ವರ್ತನೆಯಲ್ಲೂ ಬದಲಾವಣೆ ತರುತ್ತದೆ. ನಾಗರಿಕರಿಗೆ ತಮ್ಮ ತರಕಾರಿ ಕೈತೋಟಗಳಿಗೆ ಬೇಕಾದ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳಲು ಉತ್ತೇಜನ ನೀಡಬೇಕು. ಆಗ ಮನೆಯಿಂದ ಹೊರಬೀಳುವ ತ್ಯಾಜ್ಯದ ಪ್ರಮಾಣ ತಗ್ಗುತ್ತದೆ.

ಈ ರೀತಿಯ ಕೈತೋಟಗಳು ಹಲವು ವಿಧದಲ್ಲಿ ಲಾಭದಾಯಕವಾಗಿದೆ. ಇವುಗಳಿಂದ ಸುರಕ್ಷಿತ, ಪೌಷ್ಟಿಕಾಂಶಯುಕ್ತ ತಾಜಾ ಆಹಾರವನ್ನು ಪಡೆಯಬಹುದು. ತ್ಯಾಜ್ಯ ನಿರ್ವಹಣೆಯು ಸುಲಭವಾಗಿ ಪರಿಸರ ಸ್ವಚ್ಛವಾಗಿರುತ್ತದೆ. ಅನಾರೋಗ್ಯದ ಸಮಸ್ಯೆಗಳು ಕಡಿಮೆಯಾಗುತ್ತದೆ. ದುರ್ಬಲ ಗುಂಪುಗಳು ಇದರಿಂದ ಹೆಚ್ಚುವರಿ ಆದಾಯವನ್ನು ಪಡೆಯಬಹುದು. ನಾಗರಿಕರು ಇತ್ಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ತಾಪಮಾನದೊಂದಿಗೆ ಇಂಗಾಲದ ಪ್ರಮಾಣವು ತಗ್ಗುತ್ತದೆ.

ಕೈತೋಟದ ನನ್ನ ಅನುಭವ

ಸುರೇಶ್‌ ತಮ್ಮ ಕೈತೋಟದಲ್ಲಿ ಬೆಳೆದ ಉತ್ಪನ್ನದೊಂದಿಗೆ

ತಿರುಚ್ಚಿಯಲ್ಲಿ ೨೦೦೦ದಿಂದ ವಾಸಿಸುತ್ತಿದ್ದೇನೆ.  ಮೊದಲಿಗೆ ನಾವು ಬಾಡಿಗೆ ಮನೆಯಲ್ಲಿದ್ದೆವು. ಅಲ್ಲಿ ಏನನ್ನಾದರೂ ಬೆಳೆಯಲು ಸಾಕಷ್ಟು ಜಾಗವಿರಲಿಲ್ಲ. ಸ್ವಲ್ಪ ಸೊಪ್ಪು ಹಾಗೂ ಸಣ್ಣ ಗಿಡಗಳನ್ನು ಬಾಟಲಿಗಳು ಮತ್ತಿತರ ವಸ್ತುಗಳಲ್ಲಿ ಬಳಸಿ ಬಾಲ್ಕನಿಯಲ್ಲಿ ಬೆಳೆಯುತ್ತಿದ್ದೆವು. ವರ್ಷದ ಹಿಂದೆ ತಿರುಚ್ಚಿಯ ಹೊರವಲಯದಲ್ಲಿರುವ ಸ್ವಂತ ಮನೆಗೆ ಬಂದೆವು. ೮೦೦ ಚದರಡಿಯಲ್ಲಿ ಮನೆಯನ್ನು ಕಟ್ಟಿದೆವು. ಉಳಿದ ೧೬೦೦ ಚದುರಡಿಗಳಷ್ಟನ್ನು ಕೈತೋಟಕ್ಕೆಂದೇ ಖಾಲಿಯಾಗಿ ಉಳಿಸಿಕೊಂಡೆವು.

ಸಸ್ಯವಿಜ್ಞಾನವನ್ನು ಓದಿರುವುದರೊಂದಿಗೆ ೧೯೯೫ರಿಂದ ತಿರುಚ್ಚಿಯ ಕುಟುಂಬಂ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಆ ಅನುಭವದಿಂದ ಸುಸ್ಥಿರ ಕೃಷಿಯ ತಂತ್ರಗಳನ್ನು ಕಲಿತೆ. ಮೊದಲಿಗೆ ಮನೆಯ ಸುತ್ತ ಬೇಲಿ ಹಾಕಿದೆವು. ಆಮೇಲೆ ನಮ್ಮ ಕೈತೋಟವನ್ನು ರೂಪಿಸಿದೆವು.

 

ನಮ್ಮ ಮನೆಯಲ್ಲಿ ನನ್ನ ಹೆಂಡತಿ ಗಜ, ಮಗಳು ಶೃತಿ, ಮಗ ಹರೀಶ್‌ ಹಾಗೂ ನಾನು ಒಟ್ಟು ನಾಲ್ಕು ಮಂದಿಯಿದ್ದೇವೆ. ನಾವೇ ಈ ಕೈತೋಟವನ್ನು ವಿನ್ಯಾಸಗೊಳಿಸಿದೆವು. ಈ ಕೈತೋಟದ ವಿನ್ಯಾಸಗೊಳಿಸಲು ಸರಳ ಐಡಿಯಾ ಬಳಸಿದೆವು. ಮೊದಲಿಗೆ ನಾವೇನು ತಿನ್ನಲು ಇಷ್ಟಪಡುತ್ತೇವೋ ಅದನ್ನೇ ಬೆಳೆಯಲು ಶುರುಮಾಡಿದೆವು.  ನಮ್ಮ ಮನೆಯಲ್ಲಿ ಅಡುಗೆಗೆ ಏನು ಬೇಕು ಎನ್ನುವುದನ್ನು ಮೊದಲು ಪಟ್ಟಿ ಮಾಡಿಕೊಂಡೆವು. ಅದರಲ್ಲಿ ಅಡುಗೆ ಮನೆ ಅಗತ್ಯಕ್ಕೆ ಬೇಕಾಗಿರುವುದನ್ನು ಅಲ್ಪಕಾಲಿಕ ಎಂದು ಪಟ್ಟಿ ಮಾಡಿದೆವು. ಅಡುಗೆಮನೆಗೆ ಸಂಬಂಧಿಸಿಲ್ಲದಿರುವುದನ್ನು ದೀರ್ಘಕಾಲಿಕ ಎಂದು ಪಟ್ಟಿ ಮಾಡಿಕೊಂಡೆವು. ನಮ್ಮ ಕೈತೋಟಕ್ಕೆ ತಗಲುವ ವೆಚ್ಚದ ಕುರಿತು ಎಚ್ಚರಿಕೆಯಿಂದ ಗಮನಿಸಿ ಹೆಜ್ಜೆಯಿಟ್ಟೆವು. ಮೊದಲಿಗೆ ನಮ್ಮಲ್ಲಿ ಇದ್ದುದ್ದನ್ನಷ್ಟೇ ಬಳಸಲು ನಿರ್ಧರಿಸಿದೆವು. ಮೂರು Rಗಳನ್ನು ಅಂದರೆ – refuse (ನಿರಾಕರಣೆ) , recycle (ಪುನರ್‌ಬಳಕೆಗೆ ಯೋಗ್ಯ), reuse (ಮರುಬಳಕೆ) ಇವಿಷ್ಟನ್ನೇ ಬಳಸಿದೆವು. ಈ ರೀತಿ ನಮ್ಮ ಮನೆಯ ಕೈತೋಟವನ್ನು ಎಂಟು ತಿಂಗಳ ಹಿಂದೆ ಶುರುಮಾಡಿದೆವು.

ಅಡುಗೆಮನೆಯ ಅಗತ್ಯಕ್ಕೆ ಬೆಳೆಸಿದ ಗಿಡಗಳು

ಅಡುಗೆ ಮನೆಯ ಅಗತ್ಯಕ್ಕೆ ತಕ್ಕಂತೆ ಬಸಳೆ ಸೊಪ್ಪು, ಹೊನ್ನಗೊನ್ನೆ ಸೊಪ್ಪು, ಪುಂಡಿ ಸೊಪ್ಪು, ಮೆಂತ್ಯೆ, ನುಗ್ಗೆಯನ್ನು ಬೆಳೆದೆವು. ಇವುಗಳನ್ನು ತಿಂಡಿಗೆ, ಊಟಕ್ಕೆ ಬಳಸುತ್ತಿದ್ದೆವು. ಸಾಮಾನ್ಯವಾಗಿ ರಾತ್ರಿಯೂಟಕ್ಕೆ ಇದನ್ನು ಬಳಸುತ್ತಿರಲಿಲ್ಲ. ಇದರೊಂದಿಗೆ ಆಗಾಗ ಕರಬೇವನ್ನು ಬಳಸುತ್ತೇವೆ. ಇದರೊಂದಿಗೆ ಟೊಮೊಟೊ, ಬೆಂಡೆ, ಬದನೆ, ಸುಂಡೆ/ಉಸ್ತಿಕಾಯಿ, ಗೋರಿಕಾಯಿನುಗ್ಗೆ ಕಾಯಿ, ಹಾಗಲ ಕಾಯಿ, ಸೊರೆ ಕಾಯಿ, ಬೂದುಗುಂಬಳ ದಂತಹ ತರಕಾರಿಗಳನ್ನು ಬೆಳೆದವು. ಇವುಗಳನ್ನು ಪಲ್ಯ ಮತ್ತು ಸಾಂಬಾರಿಗೆ ಬಳಸುತ್ತೇವೆ.

ಆರೋಗ್ಯಕ್ಕಾಗಿ ಬೆಳೆದ ಗಿಡಗಳು

ಕೃಷ್ಣ ತುಳಸಿ, ಅಲೊವೆರಾ, ಆಡುಸೋಗೆ, ಗರಿಕೆ, ಬನತುಳಸಿ, ಅಂಬುಸೊಂಡೆ/ಕಾಕಮುಂಜಿ, ಮಂಗರವಳ್ಳಿ, ವಿಳ್ಯೆದೆಲೆ, ನಿಂಬೆ ಹುಲ್ಲು, ಕಾಡುಬಸಳೆ, ದೊಡ್ಡಪತ್ರೆ, ನೆಲನೆಲ್ಲಿ, ಸಾಸಿವೆ, ಕರಬೇವು, ಇನ್ಸುಲಿನ್‌, ಮೆಹಂದಿ, ಕುಪ್ಪಿಗಿಡಗಳನ್ನು ಬೆಳೆಸಿದೆವು. ಈ ಗಿಡಗಳ ಜಾಗವನ್ನು ನಮ್ಮ ಮನೆಯ ಔಷಧಾಲಯ ಎಂದು ಕರೆಯುತ್ತೇವೆ. ಈ ಗಿಡಗಳು ಸಾಮಾನ್ಯ ಕಾಯಿಲೆಗಳಾದ ಶೀತ, ಕೆಮ್ಮು, ನೆಗಡಿ, ಜ್ವರ, ಮೈಕೈನೋವು, ತಲೆನೋವು, ಅಜೀರ್ಣಗಳಿಗೆ ಔಷಧಿಯಾಗಿ ಬಳಕೆ ಮಾಡಬಹುದು ದೇಹದ ಉಷ್ಣಾಂಶ, ರಕ್ತದೊತ್ತಡ, ಸಕ್ಕರೆಯನ್ನು ನಿಯಂತ್ರಿಸಲು ಇವು ಸಹಾಯಕ. ಇವುಗಳನ್ನು ಹಸಿಯಾಗಿಯೇ ತಿನ್ನಬಹುದು ಇಲ್ಲವೆ ಟೀ, ಸೂಪ್‌, ಸಾಂಬಾರು ಅಥವ ಚಟ್ನಿ ಮಾಡಿಕೊಂಡು ಸೇವಿಸಬಹುದು.

ಧಾರ್ಮಿಕ ಆಚರಣೆಗಳಿಗೆ ಬೆಳೆದ ಗಿಡಗಳು

ನಮ್ಮ ಕೈತೋಟದಲ್ಲಿ ಹೂವಿನ ಗಿಡಗಳು ಕೂಡ ಇವೆ. ಮಲ್ಲಿಗೆ, ದಾಸವಾಳ, ಸಂಜೆಮಲ್ಲಿಗೆ, ಜಾಜಿ, ಕಾಕಡ, ಕಣಗಿಲೆ ಹೂಗಳನ್ನು ಬೆಳೆದಿದ್ದೇವೆ. ಮಲ್ಲಿಗೆ ನನ್ನ ಹೆಂಡತಿ, ಮಗಳಿಗಾಗಿ ಉಳಿದ ಹೂಗಳನ್ನು ದೇವರ ಪೂಜೆಗಾಗಿ ಬಳಸುತ್ತೇವೆ. ಪ್ರತಿದಿನ ಬೆಳಗ್ಗೆ ಹಿಂದಿನ ದಿನ ದೇವರಿಗೆ ಇಟ್ಟಿದ್ದ ಹೂಗಳನ್ನು ತೆಗೆದು ಗೊಬ್ಬರದ ಗುಂಡಿಗೆ ಹಾಕಿ ಹೊಸ ಹೂಗಳನ್ನು ಇಡುತ್ತೇವೆ. ದಾಸವಾಳದ ದಳಗಳು ರಕ್ತಶುದ್ಧಿ ಮಾಡುವ ಗುಣವನ್ನು ಹೊಂದಿದೆ. ಹಾಗಾಗಿ ದೇವರಿಗಿಟ್ಟು ಮಾರನೆಯ ದಿನ ಈ ಹೂಗಳನ್ನು ತೆಗೆದಾಗ ಅದರ ದಳಗಳನ್ನು ನಾವು ತಿನ್ನುತ್ತೇವೆ.

ಮರಗಳು

ನಾವು ಬಹುಪಯೋಗಿ ಮರಗಳನ್ನು ಬೆಳೆಸಿದ್ದೇವೆ. ಹಣ್ಣಿನ ಮರಗಳಾದ ಮಾವು, ಪರಂಗಿ, ಗೋಡಂಬಿ, ಹಲಸು, ಸೀಬೆ, ಬಾಳೆ, ಸೀಮೆಹುಣಸೆ ಮತ್ತು ನೆಲ್ಲಿ ಇದೆ. ಬೆಲೆಬಾಳುವ ಮರಗಳಾದ ತೇಗ, ಮುಳ್ಳುಮುತ್ತುಗ, ಗಾಳಿಮರ, ಬೇವು ಮತ್ತು ಬುಗುರಿ ಮರಗಳನ್ನು ಬೆಳೆಯಲಾಗಿದೆ. ಹಣ್ಣಿನ ಮರಗಳು ಇನ್ನೆರೆಡು ವರ್ಷಗಳಲ್ಲಿ ಫಲ ಬಿಡುತ್ತವೆ. ಬೆಲೆಬಾಳುವ ಮರಗಳು ದೀರ್ಘಾವಧಿಯಲ್ಲಿ ನಮ್ಮ ಕುಟುಂಬಕ್ಕೆ ಲಾಭವನ್ನು ತಂದುಕೊಡುತ್ತದೆ.

ಸಣ್ಣ ಸಂಗತಿಗಳು ಬಹುದೊಡ್ಡ ವ್ಯತ್ಯಾಸವನ್ನು ಮಾಡುತ್ತವೆ

ನಮ್ಮ ಕೈತೋಟದಲ್ಲಿ ಹಕ್ಕಿಗಳು ಕುಡಿಯಲೆಂದು ಅಲ್ಲಲ್ಲಿ ಬಾಟಲಿಗಳಲ್ಲಿ ನೀರನ್ನು ಇಟ್ಟಿದ್ದೇವೆ. ಅವು ನೀರು ಕುಡಿಯಲು ಬಂದಾಗ ಕೈತೋಟದಲ್ಲಿನ ಹುಳುಗಳನ್ನು ತಿಂದು ನಮಗೆ ಸಹಾಯ ಮಾಡುತ್ತದೆ. ನಾವು ಕೀಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತೋಟವಿರುವುದು ಮನುಷ್ಯರಿಗಾಗಿ ಮಾತ್ರವಲ್ಲ ಎಲ್ಲ ಜೀವಿಗಳಿಗಾಗಿ. ನವಿಲುಗಳು, ಮೈನಾಗಳು, ಗುಬ್ಬಿಗಳು ನಮ್ಮ ತೋಟಕ್ಕೆ ಬರುತ್ತಲೇ ಇವೆ. ಗುಬ್ಬಿಗಳಿಗೆ ತೊಂದರೆಯಾಗದಂತೆ ಗೂಡುಕಟ್ಟಿಕೊಳ್ಳಲು ಸ್ಥಳ ಒದಗಿಸಿದ್ದೇವೆ. ನಮ್ಮ ಕೈತೋಟದಲ್ಲಿ ಬೇಕಾದಷ್ಟು ಎರೆಹುಳಗಳಿವೆ. ಇದರರ್ಥ ಕೈತೋಟದ ಮಣ್ಣು ಆರೋಗ್ಯಕರವಾಗಿ ಜೀವಂತವಾಗಿದೆ ಎಂದು.

ಈ ಕೈತೋಟದಿಂದಾಗಿ ಮುಂಜಾನೆ ತಾಜಾ ಗಾಳಿ ಸಿಗುತ್ತದೆ. ದಿನವೂ ನಾವೆಲ್ಲ ಕನಿಷ್ಠ ಒಂದು ಗಂಟೆ ಕೈತೋಟದಲ್ಲಿ ಕೆಲಸ ಮಾಡುತ್ತೇವೆ. ಇದು ನಮ್ಮನ್ನು ಸಧೃಡವಾಗಿ ಆರೋಗ್ಯವಾಗಿ ಇಡುವದರೊಂದಿಗೆ ನಮ್ಮ ಕುಟುಂಬವನ್ನು ನಿಸರ್ಗಕ್ಕೆ ಹತ್ತಿರವಾಗಿಸುತ್ತದೆ.  ನಿಸರ್ಗ ನಮಗೆ ನೀಡಿರುವುದನ್ನು ಸಂತೋಷದಿಂದ ಅನುಭವಿಸಲು ಕಲಿಸುತ್ತದೆ. ತರಕಾರಿಗಳು, ಹಣ್ಣುಗಳು, ಸೊಪ್ಪುಗಳು, ಹೂವು ಎಲ್ಲವೂ ನಮ್ಮ ಮನೆಗೆ ನಮ್ಮ ಕೈತೋಟದಿಂದಲೇ ಬರುತ್ತದೆ. ಅಡುಗೆ ಮನೆಯ ತ್ಯಾಜ್ಯ ಮರಳಿ ಕೈತೋಟದ ಗೊಬ್ಬರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಬೇಕಾದ ಬೀಜಗಳನ್ನು ನಾವೇ ಸಂಗ್ರಹಿಸಲು ಶುರುಮಾಡಿದ್ದೇವೆ. ತರಕಾರಿಗಳು, ಕಾಳುಗಳು, ಗಿಡಮೂಲಕೆಗಳು, ಸೊಪ್ಪು ಮತ್ತು ಹೂವಿನ ಬೀಜಗಳ ಬ್ಯಾಂಕ್‌ ನಮ್ಮಲ್ಲಿದೆ.

ಇದು ಪರಿಸರಕ್ಕೆ ಹತ್ತಿರವಾದ, ಪುನರ್‌ಬಳಕೆ ಮಾಡುವ ಜೀವನ ವಿಧಾನ. ನಾವು ನಿರಾಕರಣೆ, ಪುನರ್‌ಬಳಕೆಗೆ ಯೋಗ್ಯವಾಗಿಸುವುದು ಮತ್ತು ಮರುಬಳಕೆಯ ತತ್ವದಲ್ಲಿ ನಂಬಿಕೆಯಿಟ್ಟಿದ್ದೇವೆ. ಎಲ್ಲ ಗಿಡಗಳನ್ನು ಹಳೆಯ ಪ್ಲಾಸ್ಟಿಕ್‌ ಟಬ್‌ಗಳು ಮತ್ತು ಬಾಟಲುಗಳಲ್ಲಿ ಬೆಳೆಸುತ್ತೇವೆ. ನಮ್ಮ ಬಹುತೇಕ ಕೈತೋಟದ ಸಲಕರಣೆಗಳನ್ನು ನಿರಪಯುಕ್ತ ವಸ್ತುಗಳಿಂದಲೇ ಮಾಡಿಕೊಂಡಿದ್ದೇವೆ. ಕೋಳಿ, ಮೀನು ಮತ್ತು ಮೇಕೆ ಸಾಕಣೆಯನ್ನು ನಮ್ಮ ಕೈತೋಟದಲ್ಲಿ ಮಾಡಬೇಕೆಂದಿದ್ದೇವೆ.

ನಮ್ಮ ಕೈತೋಟದ ಉತ್ಪನ್ನಗಳನ್ನು ನಮ್ಮ ನೆರೆಹೊರೆಯವರೊಂದಿಗೆ, ಬಂಧುಗಳೊಂದಿಗೆ, ಹಾಲಿನವರೊಂದಿಗೆ, ಕಸಗುಡಿಸುವವರೊಂದಿಗೆ ಉಚಿತವಾಗಿ ಹಂಚಿಕೊಳ್ಳುತ್ತೇವೆ. ಇದರಿಂದ ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಮೂಡುವುದರೊಂದಿಗೆ ಅವರಿಗೂ ಕೈತೋಟ ಮಾಡಲು ಉತ್ತೇಜನ ಕೊಟ್ಟಂತಾಗುತ್ತದೆ.

ಕೋವಿಡ್‌ ೧೯ ಹಾಗೂ ಅದರ ಪರಿಣಾಮವಾಗಿ ಮಾಡಲಾದ ಎರಡು ತಿಂಗಳ ಲಾಕ್‌ಡೌನ್‌ನಲ್ಲಿ ನಮ್ಮ ಕುಟುಂಬವು ಕೈತೋಟದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಂತಾಯಿತು. ಇದರಿಂದ ನಮ್ಮ ಕೈತೋಟದಲ್ಲಿ ತರಕಾರಿ, ಹಣ್ಣುಗಳು, ಹೂಗಳು ಮತ್ತು ಸೊಪ್ಪಿನ ಉತ್ಪಾದನೆ ಹೆಚ್ಚಿತು.  ಎಲೆಕ್ಟ್ರಾನಿಕ್‌ ಅಲಾರಂ ಬದಲಿಗೆ ಹಕ್ಕಿಗಳ ಚಿಲಿಪಿಲಿ ನಮ್ಮನ್ನು ಬೆಳಗ್ಗೆ ಎಚ್ಚರಿಸುವ ಅಲಾರಂ ಆಯಿತು. ಹೀಗೆ ನಮ್ಮ ಕೈತೋಟವೇ ನಮ್ಮ ಬದುಕು ಎನ್ನುವುದು ನಮಗೆ ಅರ್ಥವಾಯಿತು.

ಸುರೇಶ್ಕಣ್ಣ


Suresh Kanna

Kudumbam,

No. 113/118, Sundaraj Nagar, Subramaniyapuram,

Trichy – 620 020, Tamil Nadu, India

E-mail: sureshkanna_kudumbam@yahoo.in

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ‌೩ ; ಸೆಪ್ಟಂಬರ್ ೨೦೨೦

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp