ರೈತನ ಡೈರಿ

ಸುಸ್ಥಿರ ಕೃಷಿ ಮಾರ್ಗ

ಶ್ರೀ ಮಲ್ಲಿಕಾರ್ಜುನ ಪಾಟೀಲರು ಕರ್ನಾಟಕದ ಧಾರವಾಡ ಜಿಲ್ಲೆಯ ಕಲ್ಲಘಟ್ಟಿ ತಾಲ್ಲೂಕಿನ ಮುಕ್ಕಾಲು ಹಳ್ಳಿಗೆ ಸೇರಿದವರು. ದೇಶದ ಬಹುತೇಕ ರೈತರು ಕೃಷಿಯಲ್ಲಿ ಆದಾಯವಿಲ್ಲ ಎಂದು ಅದನ್ನು ತೊರೆಯುತ್ತಿರುವಾಗ ಪಾಟೀಲರು ಇವರ ನಡುವೆ ವಿಭಿನ್ನರಾಗಿ ನಿಲ್ಲುತ್ತಾರೆ. ಕೃಷಿಯಿಂದ ಸುಸ್ಥಿರ ಆದಾಯವನ್ನು ಗಳಿಸಬಹುದು ಎಂದು ಸಾಧಿಸಿ ತೋರಿಸಿ ಯುವಜನಾಂಗವು ಕೃಷಿಯಲ್ಲಿ ತೊಡಗಿಕೊಳ್ಳುವುದಕ್ಕೆ ಮಾದರಿಯಾಗಿದ್ದಾರೆ. ಸುಸ್ಥಿರವಾದ ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ರಾಸಾಯನಿಕಗಳನ್ನು ಬಳಸದೆ ಮಲ್ಲಿಕಾರ್ಜುನ ಪಾಟೀಲರು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.

ಶ್ರೀ ಪಾಟೀಲರು ಸಜ್ಜೆ, ರಾಗಿ ಮತ್ತು ನವಣೆಯನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಉದ್ದು, ಅಲಸಂದೆ, ಸೋಯಾಬೀನ್‌ ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ. ಇಂದಿಗೂ ಇವುಗಳ ಬೀಜವನ್ನು ಕೇಳಿದ ರೈತರಿಗೆ ಒದಗಿಸುತ್ತಿದ್ದಾರೆ. ಅವರ ಬಳಿ ಮೂರು ಹಸುಗಳಿವೆ. ಹತ್ತು ಗುಂಟೆ ಭೂಮಿಯಲ್ಲಿ ಇವುಗಳಿಗಾಗಿ ಮೇವನ್ನು ಬೆಳೆಯುತ್ತಿದ್ದಾಋಎ. ಪ್ರತಿವಾರ ಸುಮಾರು ೨೨೫ ಲೀಟರ್‌ನಷ್ಟು ಹಾಲನ್ನು ಮಾರಾಟ ಮಾಡುತ್ತಿದ್ದಾರೆ.

ಇದರೊಂದಿಗೆ ಹಿತ್ತಲಲ್ಲಿ ಗಿರಿರಾಜ ಕೋಳಿ ಮತ್ತು ದೇಸಿ ಕೋಳಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಇವುಗಳಿಂದ ಮಾಸಿಕ ರೂ.೫,೦೦೦ ಗಳಿಸುತ್ತಿದ್ದಾರೆ.

ಪ್ರತಿ ಹೆಕ್ಟೇರಿಗೆ ೨೪ ಕ್ವಿಂಟಾಲ್‌ ಜೋಳವನ್ನು ಬೆಳೆಯುವ ಮೂಲಕ ತಾಲ್ಲೂಕಿನಲ್ಲಿ ಅತಿಹೆಚ್ಚು ಜೋಳ ಬೆಳೆದ ದಾಖಲೆಯನ್ನು ಮಾಡಿದ್ದಾರೆ. ಅದೇ ರೀತಿ ಒಂದು ಎಕರೆಗೆ ೩೮ ಕ್ವಿಂಟಾಲ್‌ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ.

ಶ್ರೀ ಮಲ್ಲಿಕಾರ್ಜುನ ಪಾಟೀಲರು ತಮ್ಮ ಶ್ರಮಕ್ಕೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ೨೦೧೪-೧೫ರಲ್ಲಿ ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ೨೦೧೭ರಲ್ಲಿ ಶ್ರೀ ಸಿದ್ಧರೂಢ ರಾಜ್ಯ ಪ್ರಶಸ್ತಿ ಪಡೆದವರಲ್ಲಿ ಇವರು ಕೂಡ ಸೇರಿದ್ದಾರೆ.

ಶ್ರೀ ಪಾಟೀಲರು ಕುಟುಂಬವು ಮಣ್ಣನ್ನು ನಂಬಿ ಹಾಳಾದವರಿಲ್ಲ ಎಂಬ ಬಗ್ಗೆ ಅಚಲವಿಶ್ವಾಸವನ್ನು ಹೊಂದಿದ್ದಾರೆ. ಕೃಷಿಯ ಬಗೆಗಿನ ಅವರ ಈ ನಂಬಿಕೆಗೆ ಸಾಕ್ಷಿಯಾಗಿ ಅವರ ಮಕ್ಕಳಿಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಪಾಟೀಲರು ತಮ್ಮೆಲ್ಲ ಯಶಸ್ಸಿನ ಶ್ರೇಯ ತಮ್ಮೊಂದಿಗೆ ಈ ಪಯಣದಲ್ಲಿ ಜೊತೆಯಾಗಿ ನಿಂತಿರುವ ತಮ್ಮ ಪತ್ನಿಗೆ ಸಲ್ಲಬೇಕೆಂದು ಹೇಳುತ್ತಾರೆ.

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ‌೩ ; ಸೆಪ್ಟಂಬರ್ ೨೦೧೯

Recent Posts

ಯುವಜನತೆ ಮತ್ತು ಕೃಷಿ: ಪ್ರಮುಖ ಸವಾಲುಗಳು ಮತ್ತು ಪರಿಹಾರಗಳು

ಯುವಜನತೆ ಮತ್ತು ಕೃಷಿ: ಪ್ರಮುಖ ಸವಾಲುಗಳು ಮತ್ತು ಪರಿಹಾರಗಳು ಎಂಬ ಪ್ರಕಟಣೆಯು ಯುವಕರನ್ನು ಕೃಷಿಯಲ್ಲಿ ಹೇಗೆ ಮರು ತೊಡಗಿಸಿಕೊಳ್ಳುವುದು ಎಂಬುದರ ಕುರಿತು ನಿಜ ಜೀವನದ ಉದಾಹರಣೆಗಳನ್ನು ಒದಗಿಸುತ್ತದೆ. ಗ್ರಾಮೀಣ ಯುವಕರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಕೌಶಲ್ಯ ಮತ್ತು ಒಳನೋಟಗಳನ್ನು ಸೂಕ್ತ ಶೈಕ್ಷಣಿಕ ಕಾರ್ಯಕ್ರಮಗಳು ಹೇಗೆ ಒದಗಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಪ್ರಕಟಣೆಯ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ಸೌರಶಕ್ತಿ ಚಾಲಿತ ಶೀತಲೀಕರಣ ವ್ಯವಸ್ಥೆ- ಸುಸ್ಥಿರ ತಾಂತ್ರಿಕ ಪರಿಹಾರ

ಸೌರಶಕ್ತಿ ಚಾಲಿತ ಶೀತಲೀಕರಣ ವ್ಯವಸ್ಥೆ- ಸುಸ್ಥಿರ ತಾಂತ್ರಿಕ ಪರಿಹಾರ

ಕರ್ನಾಟಕದ ಸಾದಲಿ ಗ್ರಾಮದಲ್ಲಿ ನವೀಕರಿಸಬಹುದಾದ ಇಂಧನದಿಂದ ನಡೆಯುವ ಶೀತಲೀಕರಣ ವ್ಯವಸ್ಥೆಯ ಸ್ಥಾಪನೆಯಿಂದ ಸಣ್ಣ ತೋಟಗಾರಿಕಾ ರೈತರ ಜೀವನೋಪಾಯದ ಸುಧಾರಣೆಗಿಂತ ಹೆಚ್ಚಿನ ಪ್ರಯೋಜನಗಳಾಗಿವೆ. ಮಹಿಳೆಯರು ಮತ್ತು ಯುವಕರನ್ನು ಸಕ್ರಿಯವಾಗಿ ಒಳಗೊಂಡ ಈ ಉಪಕ್ರಮವು ತ್ಯಾಜ್ಯವನ್ನು ಕಡಿಮೆ ಮಾಡಲು, ಆಹಾರ ಭದ್ರತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುವ ಮಾದರಿಯಾಗಿದೆ.

10-ಡ್ರಮ್ ಥಿಯರಿ- ಜೈವಿಕ ಸಂಪನ್ಮೂಲ ನಿರ್ವಹಣೆಗೆ ಸುಸ್ಥಿರ ಚೌಕಟ್ಟು

10-ಡ್ರಮ್ ಥಿಯರಿ- ಜೈವಿಕ ಸಂಪನ್ಮೂಲ ನಿರ್ವಹಣೆಗೆ ಸುಸ್ಥಿರ ಚೌಕಟ್ಟು

ಸುಸ್ಥಿರ ಕೃಷಿಯೆಡೆಗಿನ ಬದಲಾವಣೆ ಭರವಸೆ ನೀಡುವಂತಹದ್ದಾದರೂ ಸವಾಲುಗಳು ಇನ್ನೂ ಉಳಿದಿವೆ. ಖಾರಿಫ್‌ ಋತುವಿನಲ್ಲಿಯ ಭಾರಿ ಮಳೆಯು ಬೇರುಕಾಂಡ ಕೊಳೆಯುವಂತಹ ಸಮಸ್ಯೆಗಳನ್ನು ಹೆಚ್ಚಿಸಿದೆ. ಇದರಿಂದಾಗಿ ರೈತರು ರಾಸಾಯನಿಕ ಒಳಸುರಿಯುವಿಕೆಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಕೃಷಿವೆಚ್ಚಗಳನ್ನು ಹೆಚ್ಚಿಸಿವೆ. 10-ಡ್ರಮ್ ಥಿಯರಿಯಂತಹ ಉಪಕ್ರಮಗಳು ರೈತರಿಗೆ ಇಂತಹ ಸವಾಲುಗಳನ್ನು ಸುಸ್ಥಿರ ರೀತಿಯಲ್ಲಿ ಎದುರಿಸುವ ಸಾಧನವಾಗಿದೆ.