ಆರೋಗ್ಯಕರ ಸಸ್ಯ ಪರಿಸರ ಸುಸ್ಥರತೆ ಮತ್ತು ಪೌಷ್ಟಿಕಾಂಶದ ಬುನಾದಿ


ಜಾರ್ಖಂಡದ ರೈತರು ಪರಿಣಾಮಕಾರಿ ಉತ್ಪಾದನಾ ವ್ಯವಸ್ಥೆಗಳು ಮತ್ತು ಕೃಷಿ ಸುಸ್ಥಿರತೆಯ ಕುರಿತು ಹೆಚ್ಚಿನ ಜಾಗೃತಿ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸುತ್ತಿದ್ದಾರೆ. ಐಸಿಎಆರ್‌ನ ವಿಜ್ಞಾನಿಗಳ ನೆರವಿನೊಂದಿಗೆ ಫುಸ್ರಿ ಹಳ್ಳಿಯ ರೈತರು ಪಾಳುಬಿದ್ದ ಗಣಿಭೂಮಿಯನ್ನು ಉತ್ತಮ ಕೃಷಿ ಭೂಮಿಯಾಗಿ ಪರಿವರ್ತಿಸಿದ್ದಾರೆ.


ಸಸ್ಯ ಎನ್ನುವುದು ಕೃಷಿಯ ಮೂಲಭೂತ ಘಟಕ. ಕೃಷಿಯ ಎಲ್ಲ ಚಟುವಟಿಕೆಗಳಿಗೂ ಗಿಡವೇ ಕೇಂದ್ರ. ಅಣಬೆಯಾಗಲಿ ಇಲ್ಲವೇ ಮಾವಿನ ಮರವಾಗಲಿ ಪ್ರತಿಯೊಂದರ ಉತ್ಪಾದನೆ ಮತ್ತು ಒಳಸುರಿಯುವಿಕೆ ಎಲ್ಲವೂ ಆಯಾ ಗಿಡವನ್ನು ಅವಲಂಭಿಸಿರುತ್ತದೆ. ನಾಗರಿಕತೆಗಳು ಗಿಡಗಳನ್ನು ಅವಲಂಭಿಸಿರುತ್ತದೆ. ನಮ್ಮ ವೈವಿಧ್ಯಮಯವಾದ ಅಗತ್ಯಗಳನ್ನು ನಮ್ಮ ಸುತ್ತಲಿರುವ ವೈವಿಧ್ಯಮಯವಾದ ಗಿಡಗಳು ಪೂರೈಸುತ್ತವೆ. ಸಸ್ಯವೈವಿಧ್ಯವು ಸಮಾಜದ ಸಂಪತ್ತಿಗೆ ಕೊಡುಗೆ ನೀಡಿ ಅದನ್ನು ಸ್ವಾವಲಂಬಿಯಾಗಿಸುತ್ತದೆ. ಉದಾಹರಣೆಗೆ ವೈವಿಧ್ಯಮಯ ಜೀವಾಣುಗಳು ಮಣ್ಣಿನಲ್ಲಿದ್ದರೆ ಅದು ಹೆಚ್ಚು ಫಲವತ್ತತೆಯಿಂದ ಕೂಡಿರುತ್ತದೆ. ಅಂತಹ ಮಣ್ಣಿನಲ್ಲಿ ಜೈವಿಕ ಚಟುವಟಿಕೆಗಳು ಹೆಚ್ಚಿರುತ್ತದೆ. ನಮ್ಮ ಪರಿಸರ ವ್ಯವಸ್ಥೆಯಲ್ಲಿನ ಸಸ್ಯ ಮತ್ತು ಜೀವ ವೈವಿಧ್ಯತೆ ಹೆಚ್ಚಾದಷ್ಟು ನಮಗೆ ವೈವಿಧ್ಯಮಯ ವಸ್ತುಗಳು ಹೆಚ್ಚಾಗಿ ಸಿಗುತ್ತವೆ.

ಫೋಟೊ : ಮಣ್ಣಿನ ಫಲವತ್ತತೆ ಹೆಚ್ಚಿಸಲು ಬಿಲ್ವ ಪತ್ರೆ ಗಿಡದ ಬುಡಕ್ಕೆ ಕೊಗ್ಗೆ ಗಿಡದೆಲೆಗಳ ಹೊದಿಕೆ

ಸಸ್ಯ ವೈವಿಧ್ಯತೆ ಮತ್ತದರ ಉತ್ಪನ್ನಗಳು ಪ್ರಪಂಚದಾದ್ಯಂತದ ಹಲವು ಗ್ರಾಮಗಳ ಸಮುದಾಯಗಳಿಗೆ ಬದುಕಿನ ಆಧಾರವಾಗಿದೆ. ರೈತರು ತಮ್ಮ ಹಿತ್ತಲಲ್ಲಿ ಬೆಳೆಸುತ್ತಿರುವ ಗಿಡಗಳು ಕೂಡ ಸಸ್ಯ ವೈವಿಧ್ಯಕ್ಕೆ ಕೊಡುಗೆ ನೀಡುತ್ತಿವೆ. ಕೈತೋಟಗಳು ಮಾರುಕಟ್ಟೆಯಲ್ಲಿ ಹಣ್ಣನ್ನು ಖರೀದಿಸಲಾಗದ ಬಡ ರೈತರ ಕುಟುಂಬಕ್ಕೆ ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುತ್ತದೆ. ಇದರೊಂದಿಗೆ ಇವು ಉದ್ಯೋಗ ಸೃಷ್ಟಿ ಕೂಡ ಮಾಡುತ್ತಿದ್ದು ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನವನ್ನು ಗಳಿಸಿಕೊಂಡಿದೆ.

ಗ್ರಾಮೀಣ ಮಹಿಳೆಯರು ತಮಗಿರುವ ಸೀಮಿತ ಸಮಾಜೋಆರ್ಥಿಕ ಅವಕಾಶದಲ್ಲಿಯೇ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅವರು ರಾಸಾಯನಿಕೇತರ ಪದ್ಧತಿಗಳತ್ತ ಸಾಗುತ್ತಿದ್ದಾರೆ. ಉದಾಹರಣಗೆ ಜಾರ್ಖಂಡದ ಗುಮ್ಲಾ ಜಿಲ್ಲೆಯ ಫಾಲ್ಕೋಟ್‌ನ ಮಹಿಳೆಯರು ಸಸ್ಯಗಳ ಸುರಕ್ಷತೆಗಾಗಿ ಸಾಂಪ್ರದಾಯಿಕ ಪದ್ಧತಿಗಳು ಮತ್ತು ಸಾವಯವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಮಾವಿನ ತೋಟಗಳಲ್ಲಿ ಹಣ್ಣುಗಳ ರಕ್ಷಣೆಗೆ ಕಾಗದದ ಕವರುಗಳ ಬಳಕೆ, ಫೆರ್ಮೊನೆ ಬಲೆಗಳ ಬಳಕೆ, ವಿಷಕಾರಿ ಕೀಟನಾಶಕಗಳ ಬದಲಿಗೆ ಮಿಥೈಲ್‌ ಬಳಕೆ ಇವೆಲ್ಲವನ್ನೂ ೨೦೧೨ರಿಂದ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವನ್ನು ಸುಮಾರು ೧೦೦೦ ಎಕರೆ ಮಾವಿನ ತೋಟದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಗಣಿಗಾರಿಕೆ ಭೂಮಿಯನ್ನು ಉತ್ಪಾದನಾ ಭೂಮಿಯಾಗಿ ಪರಿವರ್ತನೆ

ಜಾರ್ಖಂಡ ರಾಜ್ಯದಲ್ಲಿ ೧೮೦ ಕಲ್ಲಿದ್ದಲು ಗಣಿಗಳಿವೆ. ಹಲವು ವರ್ಷಗಳ ಗಣಿಗಾರಿಕೆಯ ನಂತರ ಆ ಭೂಮಿಯು ಯಾವುದೇ ರೀತಿಯ ಬಳಕೆಗೆ ಅದರಲ್ಲೂ ಕೃಷಿಗೆ ಯೋಗ್ಯವಾಗಿ ಉಳಿದಿರಲಿಲ್ಲ. ಈ ರೀತಿ ಸಾವಿರಾರು ಹೆಕ್ಟೇರ್‌ಗಟ್ಟಲೇ ಭೂಮಿ ಪುನಶ್ಚೇತನಕ್ಕಾಗಿ ಕಾಯುತ್ತಾ ನಿಂತಿತ್ತು.

ಫುರ್ಸಿ ಬುಡಕಟ್ಟು ಹಳ್ಳಿಯು ಜಾರ್ಖಂಡ್‌ನ ಚರ್ಚಿ, ಮಂಡು, ರಾಮಗಡದ ಹತ್ತಿರದಲ್ಲಿದೆ. ಕಲ್ಲಿದ್ದಲನ್ನು ತೆಗೆದು ಹತ್ತಿರದ ಮಾರುಕಟ್ಟೆಯಲ್ಲಿ ಮಾರುವುದು ಈ ಬುಡಕಟ್ಟು ಕುಟುಂಬಗಳ ಏಕೈಕ ಜೀವನೋಪಾಯ. ತಮ್ಮ ಭೂಮಿಗಳಲ್ಲಿ ಅವರು ಮಳೆಆಧಾರಿತ ಭತ್ತವನ್ನು ಖಾರಿಫ್‌ ಬೆಳೆಯಾಗಿ ಬೆಳೆಯುತ್ತಾರೆ. ಮಳೆಗಾಲದಲ್ಲಿ ಪಾಳುಬಿದ್ದ ಗಣಿಯ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ನೀರನ್ನು ಬಟ್ಟೆ, ಪಾತ್ರೆ ತೊಳೆಯಲು, ಸ್ನಾನಕ್ಕೆ ಮತ್ತು ಬೆಳೆಗಳಿಗೆ ಬಳಸುತ್ತಾರೆ. ಗುಂಡಿಗಳಲ್ಲಿರುವ ನೀರು ಮಾರ್ಚ್‌ ನಂತರ ಒಣಗಿಹೋಗುತ್ತದೆ. ಹಳ್ಳಿಯಲ್ಲಿ ಕೆಲವು ಮರಗಳಿವೆ. ಹಳ್ಳಿಯಲ್ಲಿ ಮಾವು, ಸೀಬೆ, ಕಾಡು ಇಪ್ಪೆ ಮತ್ತು ಸಾಲ್‌  ಮರಗಳನ್ನು ಕಾಣಬಹುದು.

ಫೋಟೊ: ಗುಲ್ಮಾ ಜಿಲ್ಲೆಯಲ್ಲಿ ಮಾವಿನ ಹಣ್ಣುಗಳನ್ನು ಕೀಟಬಾಧೆಯಿಂದ ರಕ್ಷಿಸಲು ಕಾಗದದ ಕವರುಗಳಿಂದ ಮುಚ್ಚಲಾಗಿದೆ

ಈ ಹಾಳಾದ ಭೂಮಿಯನ್ನು ಪುನಶ್ಚೇತನಗೊಳಿಸಲು ಪೂರ್ವ ವಿಭಾಗದ ಐಸಿಎಆರ್‌ ಸಂಶೋಧನ ಸಂಕೀರ್ಣ, ಫಾರ್ಮಿಂಗ್‌ ಸಿಸ್ಟಂ ರಿಸರ್ಚ್‌ ಸೆಂಟರ್‌ ಫಾರ್‌ ಹಿಲ್‌ ಅಂಡ್‌ ಪ್ಲಾಟೂ ರೀಜನ್‌, ಪ್ಲಾಂಡು ರಾಂಚಿ ಇವರು ಫುಸ್ರಿಯಲ್ಲಿ ೨೦೧೪ರ ತರುವಾಯ ಕೆಲಸ ಆರಂಭಿಸಿದರು.

ಹಾಳಾಗಿರುವ ಮಣ್ಣಿನ ಸ್ಥಿತಿಯನ್ನು ಉತ್ತಮಗೊಳಿಸಲು ಕೆಲವು ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಯಿತು (ಉದಾ: ಪ್ಲಾಸ್ಟಿಕ್‌ ತೆಳು ಪದರ ಹೊದಿಕೆ, ವೃತ್ತಾಕಾರದ ಪಾತಿಗಳು, ಅರ್ಧಚಂದ್ರಾಕಾರದ ಪಾತಿಗಳು, ಮಡಿಗಳಿಗೆ ಹೊದಿಕೆಗಳು ಇತ್ಯಾದಿ). ಮಣ್ಣಿನ ತೇವಾಂಶದಲ್ಲಾಗುವ ಬದಲಾವಣೆಗಳನ್ನು ಬೇಸಿಗೆಯಲ್ಲಿ ಪ್ರತಿದಿನ ದಾಖಲಿಸಲಾಯಿತು. ಇದರ ಆಧಾರದ ಮೇಲೆ ನೀರಾವರಿ ವ್ಯವಸ್ಥೆಯನ್ನು ಮಾಡಲಾಯಿತು. ಈ ಯೋಜನೆ ಆರಂಭವಾದ ಸಮಯದಲ್ಲಿ ಗಿಡಗಳಿಗೆ ನೀರನ್ನುಣಿಸಿದ ೨೪ ಗಂಟೆಗಳ ಬಳಿಕ ಮಣ್ಣಿನ ತೇವಾಂಶ ೬-೮%ಗೆ ಇಳಿದು ಕ್ರಮೇಣ ಕಡಿಮೆಯಾಗಿಬಿಡುತ್ತಿತ್ತು. ೨೦೧೮ರ ವೇಳೆಗೆ ಮಣ್ಣಿನ ನೀರನ್ನು ಹಿಡಿದಿಡುವ ಸಾಮರ್ಥ್ಯವು ಸಾಕಷ್ಟು ಸುಧಾರಿಸಿತು. ನೀರು ಹಾಯಿಸಿದ ಬಳಿಕೆ ೬-೮%ಗೆ ಬರಲು ಸುಮಾರು ೭೨ ಗಂಟೆಗಳಷ್ಟು ಸಮಯ ತೆಗೆದುಕೊಳ್ಳಲು ಆರಂಭಿಸಿತು. ಬೆಳೆ ತ್ಯಾಜ್ಯವನ್ನು ಗಿಡಗಳಿಗೆ ಹಾಕಿದ ಪರಿಣಾಮವಾಗಿ ಮಣ್ಣಿನಲ್ಲಿ ಜೀವಾಂಶಗಳು ಹೆಚ್ಚಿ ಜೈವಿಕ ಚಟುವಟಿಕೆ ಚುರುಕುಗೊಂಡಿತು. ಮಣ್ಣಿನ ಸಾಂದ್ರತೆಯು ೨.೩ -೩ ರಿಂದ ೧.೧ -೩ ಕ್ಕೆ ಇಳಿಯಿತು. ಸಾವಯವ ಕಾರ್ಬನ್‌ ಮಟ್ಟವು ೦.೨೩% ಇಂದ ೦.೫೮%ಗೆ ಹೆಚ್ಚಿತು. ಮಣ್ಣಿನ ಪಿಎಚ್‌ ಮತ್ತು ಇಸಿ ಮೌಲ್ಯ ಕೂಡ ಹೆಚ್ಚಾಯಿತು.

ಗಿಡಗಳ ಹೆಚ್ಚಳ

ಕೃಷಿ- ತೋಟಗಾರಿಕೆ – ಪಶುಸಂಗೋಪನಾ ಪದ್ಧತಿಯನ್ನು ಕಲ್ಲಿದ್ದಲು ಗಣಿಪ್ರದೇಶಗಳಿರುವ ಹಳ್ಳಿಗಳಲ್ಲಿ ಅಭಿವೃದ್ಧಿಗೊಳಿಸಲಾಯಿತು. ಇದು ಆಯ್ದ ಕೃಷಿಅರಣ್ಯ ತಳಿಗಳನ್ನು ಬೆಳೆಸುವುದನ್ನು ಒಳಗೊಂಡಿತ್ತು. ಉದಾಹರಣೆಗೆ ಬಿಲ್ವಪತ್ರೆ,, ಹಲಸು, ನಿಂಬೆ, ಬೀಟೆ, ಮಾವು, ಕಾಡುಬೇವು, ಹೊಂಗೆ ಮರ, ಸೀಬೆ ಹಣ್ಣು, ದಾಳಿಂಬೆ, ಮಹೊಗನಿ ಮತ್ತು ತೇಗ. ಇದರೊಂದಿಗೆ ಬಿದಿರು ಮತ್ತು ಕೊಗ್ಗೆಯನ್ನು ಮೇವು ಮತ್ತು ಪೂರಕ ಪೌಷ್ಟಿಕಾಂಶ ಒದಗಿಸಲು ಬೆಳೆಸಲಾಯಿತು.

ಹಣ್ಣಿನ ಗಿಡಗಳಾದ ಮಾವು, ಸೀಬೆ, ನಿಂಬೆ, ಬಿಲ್ವಪತ್ರೆಗಳು ಕಾಡುಮರಗಳಾದ ಕಾಡುಬೇವು, ಮಹೊಗನಿ ಮತ್ತು ಬೀಟೆಗಳಿಗಿಂತ ಒತ್ತಡವನ್ನು ತಡೆದುಕೊಳ್ಳಬಲ್ಲವು. ಹವಾಮಾನ ಬದಲಾವಣೆಯಿಂದ ಕೀಟ ಮತ್ತು ರೋಗಬಾಧೆಗಳು ಹೆಚ್ಚಾಗುತ್ತಿರುವುದು ವರದಿಯಾಗುತ್ತಿದೆ. ವೃತ್ತಾಕಾರ, ಅರ್ಧವೃತ್ತಾಕಾರ ಪಾತಿ, ಉದಿಬದು ನಿರ್ಮಾಣ, ಮಡಿಗಳಿಗೆ ಹೊದಿಕೆ ಈ ವಿಧಾನಗಳು ಗಿಡಗಳು ಹಾಳಾಗುವುದು ಕಡಿಮೆಯಾಯಿತು. ಉದಾಹರಣೆಗೆ ಕಲ್ಲಿದ್ದಲ ಗಣಿ ಪ್ರದೇಶಗಳಲ್ಲಿ ಅತಿಯಾದ ಒಣ ವಾತಾವರಣದಲ್ಲಿ ಬೆಳೆಸಿದ ಗಿಡಗಳು ತೇವಾಂಶಕ್ಕೆ ಬೇರೆಯದೇ ರೀತಿಯಲ್ಲಿ ಸ್ಪಂದಿಸುತ್ತವೆ. ಇದು ತಳಿಯಿಂದ ತಳಿಗೆ ಭಿನ್ನವಾಗಿರುತ್ತದೆ.

ತರಕಾರಿ ಕೃಷಿ

ಪೌಷ್ಟಿಕಾಂಶ ಮತ್ತು ಆದಾಯ ಎರಡಕ್ಕೂ ನೆರವಾಗಲಿ ಎನ್ನುವ ಉದ್ದೇಶದಿಂದ ತರಕಾರಿ ಕೃಷಿಯನ್ನು ಯೋಜನೆಯಲ್ಲಿ ಪ್ರೋತ್ಸಾಹಿಸಲಾಯಿತು. ಹಳ್ಳಿಗರು ಇದಕ್ಕೆ ಮೊದಲು ತರಕಾರಿಗಳನ್ನು ಬೆಳೆಯುತ್ತಿರಲಿಲ್ಲ. ಆದ್ದರಿಂದ ಸಾಂಪ್ರದಾಯಿಕ ವಿಧಾನಗಳು, ನರ್ಸರಿ, ನಾಟಿ, ಗಿಡಗಳ ಸಂರಕ್ಷಣೆ ಮೊದಲಾದವುಗಳನ್ನು ಕುರಿತು ತರಬೇತಿ ನೀಡಲಾಯಿತು. ಇದರೊಂದಿಗೆ ಮಣ್ಣು ಮತ್ತು ನೀರಿನ ಸಂರಕ್ಷಣಾ ವಿಧಾನಗಳ ಕುರಿತು ಸಹ ತರಬೇತಿ ನೀಡಲಾಯಿತು. ಈ ತರಬೇತಿಯನ್ನು ೨೦೧೬-೧೭ರಲ್ಲಿಮಂಡುವಿನ ಕೆವಿಕೆಯಲ್ಲಿ ಐಸಿಎಆರ್-‌ ಆರ್‌ಸಿಇಆರ್‌ ಪರಿಣಿತರು ನೀಡಿದರು. ಕ್ಷೇತ್ರ ತರಬೇತಿಗಳು ಮತ್ತು ಅಗತ್ಯವಿದ್ದವರಿಗೆ ತೋಟದಲ್ಲೇ ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು. ಮಂಡುವಿನ ಕೆವಿಕೆ ಸಿಬ್ಬಂದಿ ವರ್ಗದವರ ನೆರವಿನೊಂದಿಗೆ ಈ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಯಿತು.

ವೈವಿಧ್ಯತೆಯು ಸುಸ್ಥಿರತೆಯ ಎಂಜಿನ್.

ವಿವಿಧ ತಳಿಗಳ ಬೀಜಗಳನ್ನು ರೈತರಿಗೆ ಒದಗಿಸಲಾಯಿತು. ಉದಾಹರಣೆಗೆ ಟೊಮೊಟೊ ತಳಿ ಸ್ವರ್ಣ ಲಲಿಮ, ಹೈಬ್ರಿಡ್‌ ಸ್ವರ್ಣ ಸಂಪದ, ಬದನೆ, ಸ್ವರ್ಣ ಶ್ಯಾಮಲಿ, ಹಾಗಲಕಾಯಿ ಸ್ವರ್ಣ ಯಾಮಿನಿ, ಸೋರೆಕಾಯಿ. ಸ್ವರ್ಣ ಪ್ರಭ ಕಲ್ಲಂಗಡಿ ಅರ್ಕಾ ಮಾಣಿಕ್ಮುಖ್ಯವಾದವುಗಳು. ಇವುಗಳಲ್ಲಿ ಹಲವನ್ನು ಐಸಿಎಆರ್‌ ಆರ್‌ಸಿಇಆರ್‌ ನವರು ಅಭಿವೃದ್ಧಿಪಡಿಸಿದರು. ತರಕಾರಿಗಳನ್ನು ಈಗ ಕೃಷಿಭೂಮಿಯಲ್ಲಿ ಹಾಗೂ ಕೈತೋಟಗಳಲ್ಲಿ ಕೂಡ ಬೆಳೆಯಲಾಗುತ್ತಿದೆ. ಟೊಮೊಟೊ, ಮೆಣಸಿನಕಾಯಿ, ಬದನೆ, ಹೂಕೋಸು, ಎಲೆಕೋಸು, ಹುರುಳಿ ಕಾಯಿ, ಬೆಂಡೆಕಾಯಿ, ಆಲೂಗಡ್ಡೆ ಮತ್ತು ಬಯಲಿನಲ್ಲಿ ಬೆಳೆಯುವಂತಹ ತೊಗರಿ, ಅಲಸಂದೆ ಮತ್ತು ಸಾಸಿವೆಯನ್ನು ೨೦೧೮-೧೯ರಲ್ಲಿ ಬೆಳೆಯಲಾಯಿತು.

ಫಲಿತಾಂಶಗಳು ಮತ್ತು ಪರಿಣಾಮಗಳು

ಬಂಜರು ಭೂಮಿಯಲ್ಲಿ ಕೃಷಿ ಆರಂಭಿಸಲಾಯಿತು. ೨೦೧೯ರಲ್ಲಿ ಮೊದಲ ಬಾರಿಗೆ ಗಣಿ ಭೂಮಿಯನ್ನು ಖಾರಿಫ್‌ ಭತ್ತ ಬೆಳೆಯ ನರ್ಸರಿಯಾಗಿ ಮಾಡಿಕೊಂಡು ಅದನ್ನು ಮಳೆ ಬೀಳುವ ಪ್ರದೇಶಗಳಲ್ಲಿನಾಟಿ ಮಾಡಲಾಯಿತು. ರೈತರು ಈಗ ಹಣ್ಣುಗಳು, ತರಕಾರಿಗಳು, ಆಹಾರ ಧಾನ್ಯಗಳು, ಉರುವಲು ಕಟ್ಟಿಗೆ, ಮೇವು ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಆದಾಯ, ಪೌಷ್ಟಿಕಾಂಶ, ಮೇವು ಮತ್ತು ಉತ್ತಮ ಉದ್ಯೋಗಾವಕಾಶಗಳಂತಹ ಲಾಭಗಳುಂಟಾದವು.

ರೈತರು ಪ್ರತಿ ಹೆಕ್ಟೇರಿಗೆ ಮಳೆಗಾಲದ ಬೆಳೆಗಳಿಂದ (ಟೊಮೊಟೊ, ಮೆಣಸಿನಕಾಯಿ, ಕುಕರ್ಬಿಟೇಸೀ) ರೂ. ೪೨೬೮೩, ಚಳಿಗಾಲದ ಬೆಳೆಗಳಿಂದ (ಸಾಸಿವೆ, ನೆಲಗಡಲೆ, ಕಡಲೆ, ತೊಗರಿ, ಕೋಸು, ಹೂಕೋಸು, ಆಲೂಗಡ್ಡೆ) ರೂ. ೧೮೨೯೩ ಆದಾಯವನ್ನು ಗಳಿಸಿದರು. ೬೦.೨೫% ತರಕಾರಿಗಳನ್ನು ಮತ್ತು ೨೨.೩೪% ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು ಎನ್ನುವುದು ಸರ್ವೆಯಿಂದ ತಿಳಿದುಬಂದಿತು. ಬೆಳೆದ ಸಾಸಿವೆಯನ್ನೆಲ್ಲ ಮಾರಾಟ ಮಾಡಲಾಯಿತು. ಹೆಚ್ಚುವರಿ ಅಲಸಂದೆಯನ್ನು ಕುಟುಂಬಗಳವರು ಮಾರಾಟಮಾಡಿದರು.

ಸಮುದಾಯದ ಪೌಷ್ಟಿಕಾಂಶದ ಮೇಲೆ ಇತ್ಯಾತ್ಮಕ ಪರಿಣಾಮ ಬೀರಿತು. ತರಕಾರಿ ಕೃಷಿಯಿಂದಾಗಿ ಕುಟುಂಬದ ಸದಸ್ಯರ ತರಕಾರಿ ಸೇವನೆ ೩೦%ನಷ್ಟು ಹೆಚ್ಚಾಯಿತು. ತಾವು ಬೆಳೆದ ತೊಗರಿಯನ್ನು ತಾವೇ ಬಳಸಿದ್ದರ ಪರಿಣಾಮವಾಗಿ ಕುಟುಂಬದ ಪ್ರೋಟೀನ್‌ ಸೇವನೆಯು ಹೆಚ್ಚಾಯಿತು.

ಮರುಬಳಕೆಯ ಭೂಮಿಯಲ್ಲಿನ ಮೇವು ಜಾನುವಾರಗಳಿಗೆ ಉತ್ತಮ ಆಹಾರವಾಯಿತು. ಮೇವಿನ ಗಿಡಗಳನ್ನು ಬೆಳೆಸಿದ್ದರಿಂದ ಹಸುಗಳು, ಮೇಕೆಗಳು, ಎಮ್ಮೆಗಳನ್ನು ಸಾಕಿಕೊಂಡಿದ್ದ ರೈತರಿಗೆ ಬಹಳ ಅನುಕೂಲವಾಯಿತು. ಅವು ನಿರಂತರವಾಗಿ ಜಾನುವಾರುಗಳಿಗೆ ಮೇವನ್ನು ಒದಗಿಸಿದವು. ಬಹುಪಯೋಗಿಯಾದ ಕಾಡುಬೇವನ್ನು ಅಂತರ ಬೆಳೆಯಾಗಿ ಬೆಳೆಯಲಾಯಿತು. ಕಾಡುಕಬ್ಬನ್ನು ಹಣ್ಣಿನ ಮರಗಳು ಮತ್ತು ಅಡವಿ ಮರಗಳ ನಡುವೆ ಮೇವಿಗಾಗಿ ಬೆಳೆಸಲಾಯಿತು. ಬಹುಪಯೋಗಿ ಸಸ್ಯವಾದ ಕೊಗ್ಗೆ/ಇಂಪಿಲಿಯನ್ನು ಹಸಿರು ಗೊಬ್ಬರ, ಮೇವಿಗಾಗಿ ಬೆಳೆಯಲಾಯಿತು. ಹಸಿರು ಮೇವು ಹಸುಗಳಿಗೆ ಮತ್ತು ಮೇಕೆಗಳಿಗೆ ಉತ್ತಮ ರೀತಿಯಲ್ಲಿ ವಿಟಮಿನ್‌, ಪ್ರೊಟೀನ್‌ ಮತ್ತು ಖನಿಜಾಂಶಗಳನ್ನು ಒದಗಿಸಿತು.

ಚೌಕ : ಯಶಸ್ವಿ ಕಥನ

ಯೋಜನೆಯ ಲಾಭ ಪಡೆದ ಶ್ರೀ ಸುನೀಲ್‌ ಮರ್ಮು ಎನ್ನುವ ರೈತ ವಿವಿಧ ರೀತಿಯ ಹಣ್ಣುಗಳು, ತರಕಾರಿಗಳು ಮತ್ತು ಮೇವಿನ ಗಿಡಗಳನ್ನು ತನ್ನ ಜಮೀನಿನಲ್ಲಿ ಬೆಳೆದರು. ಅವರ ಕುಟುಂಬವು ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ತಮ್ಮ ಜಾನುವಾರುಗಳಿಗೆ ಮೇವು ಹಾಗೂ ಮೂರು ನಾಲ್ಕನೇ ವರ್ಷದ ನಂತರ ಒಣರೆಂಬೆಗಳನ್ನು ಉರುವಲಿಗೆ ಪಡೆಯಲಾರಂಭಿಸಿದರು. ಇವರ ಕುಟುಂಬವು ಮಾವು (೧೬೮.೬೮ ಕೆಜಿ), ಸೀಬೆ (೨೭೩.೩೪ ಕೆಜಿ), ದಾಳಿಂಬೆ (೧೧೭.೧೫ ಕೆಜಿ) ಮತ್ತು ನಿಂಬೆ (೭೨.೯ ಕೆಜಿ)ಯಷ್ಟನ್ನು ೦.೮೨ ಹೆಕ್ಟೇರ್‌ ಪ್ರದೇಶದಿಂದ ಪಡೆದರು. ಎಲ್ಲವನ್ನೂ ಮನೆಬಳಕೆಗೆ ಬಳಸಿಕೊಂಡರು.

೨೦೧೮-೧೯ರಲ್ಲಿ ಮಳೆಗಾಲದ ತರಕಾರಿ ಕೃಷಿಯಿಂದ ಕುಟುಂಬವು ಹೆಕ್ಟೇರೊಂದಕ್ಕೆ ರೂ.೪೦,೦೦೦ಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿತು. ಚಳಿಗಾಲದಲ್ಲಿ ಸಾಸಿವೆ, ನೆಲಗಡಲೆ, ಅಲಸಂದೆ, ತೊಗರಿ, ಕೋಸು, ಹೂಕೋಸು ಮತ್ತು ಆಲೂಗಡ್ಡೆಯಿಂದ ಸುನೀಲ್‌ ಹೆಕ್ಟೇರಿಗೆ ರೂ.೧೮,೦೦೦ಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದರು.

ಶ್ರೀ ಸುನೀಲ್‌ ಮುರ್ಮು ಅವರು ತಮ್ಮ ಉಳಿದ ಬಂಜರು ಭೂಮಿಯಲ್ಲಿ ಕೂಡ ವಿವಿಧ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಜೊತೆಗೆ ಅವರು ಸುತ್ತಲ ರೈತರನ್ನು ಕೂಡ ವಿವಿಧ ಬೆಳೆ ಮತ್ತು ಮರಗಳನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಜನರು ಕ್ಷೇತ್ರ ಪ್ರಾತ್ಯಕ್ಷಿಕೆಗಳಲ್ಲಿ ಆಸಕ್ತಿ ತೋರಿದರು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದರು.  ಈಗ ಆತ ಆ ಗ್ರಾಮೀಣ ಭಾಗದ ಯುವಕರಿಗೆ ಮಾದರಿಯಾಗಿದ್ದಾರೆ. ಆತನ ಅದ್ಭುತ ಕೆಲಸ ಮತ್ತು ಬದ್ಧತೆಯನ್ನು ಗುರುತಿಸಿ ೨೨ ಫೆಬ್ರವರಿ ೨೦೧೮ರಂದು ಕೇಂದ್ರ ಕೃಷಿ ಸಚಿವರು “ಅತ್ಯುತ್ತಮ ಕೃಷಿ ಪ್ರಶಸ್ತಿ”ಯನ್ನು ನೀಡಿದ್ದಾರೆ.

ಈ ಎಲ್ಲ ಪ್ರಯತ್ನಗಳ ಫಲವಾಗಿ ಈ ಭಾಗದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಜೊತೆಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ.

ಪರಿಸರ ಮತ್ತು ಜೀವವೈವಿಧ್ಯತೆಯ ಮೇಲಿನ ಪರಿಣಾಮ

ಬೆಳೆ ಬೆಳೆಯುವುದನ್ನು ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ಮಣ್ಣು ಮತ್ತು ಪರಿಸರದಲ್ಲೂ ಬದಲಾವಣೆ ಕಂಡುಬಂದಿತು. ವಿವಿಧ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳಾದ ಅರ್ಧಚಂದ್ರಾಕಾರ, ಚಂದ್ರಾಕಾರ ಪಾತಿಗಳು, ಉದಿ ಬದುಗಳು, ಗಿಡಗಳ ಬುಡಗಳಿಗೆ ಹೊದಿಕೆ, ಉಳುಮೆ ರಹಿತ ಕೃಷಿ ಪದ್ಧತಿಗಳು ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾದವು. ಇದು ಮಣ್ಣಿನ ಮೇಲೆ ಇತ್ಯಾತ್ಮಕ ಪರಿಣಾಮ ಬೀರಿತು. ಮಣ್ಣಿನ ಸವಕಳಿಯನ್ನು ಬಹುಮಟ್ಟಿಗೆ ತಡೆಯಿತು. ಮಣ್ಣಿನ ಸವಕಳಿಯು ೨೩೨ ಜಿ ಎಂ -೩ ರಿಂದ ೧೮೧ ಜಿಎಂ -೩ಕ್ಕೆ ಇಳಿಯಿತು. ಬುಡಗಳಿಗೆ ಹೊದಿಕೆ, ಉದುರಿದ ಎಲೆಗಳನ್ನು ಅಲ್ಲೇ ಕೊಳೆಯುವಂತೆ ಮಾಡಿದ್ದು, ಒಣಗಿದ ಬೇರುಗಳನ್ನು ಮಣ್ಣಿನಲ್ಲೇ ಕೊಳೆಸಿದ್ದು, ವಿವಿಧ ಕೃಷಿ ಚಟುವಟಿಕೆಗಳಿಂದಾಗಿ ಮಣ್ಣಿನಲ್ಲಿ ಜೀವಾಣುಗಳು ಹೆಚ್ಚಿ ಕ್ರಿಯಾಶೀಲವಾದವು. ಕಳೆ ಸಸ್ಯಗಳು ಕೂಡ ೨೦೧೪ರಲ್ಲಿ ೭ ಇದ್ದದ್ದು ೨೦೧೭ರ ವೇಳೆಗೆ ೧೮ರಷ್ಟಾಯಿತು. ಈ ಅವಧಿಯಲ್ಲಿ ಶನಾನ್‌ ಸೂಚ್ಯಂಕದ ಪ್ರಕಾರದ ಕಳೆಯ ವೈವಿಧ್ಯತೆಯು ೦.೩೪ರಿಂದ ೦.೭೯ಕ್ಕೆ ಹೆಚ್ಚಾಯಿತು. ಕಂದು ಬಣ್ಣದ ಭೂಮಿಗಳು ಹಸಿರಾದವು. ಸಸ್ಯಸಮೃದ್ಧಿ ಹೆಚ್ಚಿದಂತೆ ಜೀವವೈವಿಧ್ಯವು ಹೆಚ್ಚಿತು. ವಿವಿಧ ಹಕ್ಕಿಗಳು, ಜೇನ್ನೊಣಗಳು, ಕಾಡು ಪ್ರಾಣಿಗಳು, ಸರಿಸೃಪಗಳು ಇತ್ಯಾದಿಗಳು ಕೂಡ ಹೆಚ್ಚಾದವು.

ನೀತಿ ರೂಪಣಾ ಕ್ರಮಗಳು

 ಯೋಜನೆಗಳ ಹಸ್ತಕ್ಷೇಪದಿಂದಾಗಿ ಇತ್ಯಾತ್ಮಕ ಪರಿಣಾಮಗಳುಂಟಾಗಿವೆ. ಪೌಷ್ಟಿಕಾಂಶ, ಶಿಕ್ಷಣ, ಸಾಮಾಜಿಕ ಸ್ಥಿರತೆ, ಗ್ರಾಮೀಣ ಪ್ರದೇಶದ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ರೈತರಲ್ಲಿ ಜಾಗೃತಿ ಮೂಡಿದೆ. ಕೃಷಿ ಸುಸ್ಥಿರತೆ ಮತ್ತು ಪರಿಣಾಮಕಾರಿ ಉತ್ಪಾದನಾ ವ್ಯವಸ್ಥೆಯ ಕುರಿತು ಜವಾಬ್ದಾರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ವಿಜ್ಞಾನಿಗಳು ಹವಾಮಾನವನ್ನು ನಿಭಾಯಿಸಬಲ್ಲ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ. ರೈತರ ಶ್ರಮ ಮತ್ತು ಸಂಶೋಧನಾ ಸಂಸ್ಥೆಗಳ ಅನ್ವೇಷಣೆಗಳನ್ನು ಅನುಷ್ಟಾನಗೊಳಿಸಲು ನೆರವಾಗುವಂತಹ ನೀತಿಗಳನ್ನು ರೂಪಿಸುವುದು ಈಗ ಸರ್ಕಾರದ ಜವಾಬ್ದಾರಿ. ಸಸ್ಯವು ಉತ್ಪಾದನಾ ಘಟಕವಾಗಿರುವುದರಿಂದ ರೈತರು, ವಿಜ್ಞಾನಿಗಳು, ಕೈಗಾರಿಕೆಗಳು ಮತ್ತು ನೀತಿ ರೂಪಕರು ಪ್ರತಿ ಗಿಡದ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ನಿರ್ಮಿಸಿ ಉತ್ತಮ ಉತ್ಪಾದನೆ ಸಾಧ್ಯವಾಗಿಸಲು ಗಮನಹರಿಸಬೇಕು.

ಪ್ರದೀಪ್ಕುಮಾರ್ಸರ್ಕಾರ್‌, ಎಂ.ಕೆ. ಧಾಕರ್‌, ವಿಕಾಸ್ದಾಸ್‌, ಪ್ರಿಯ ರಂಜನ್ಕುಮಾರ್‌, ಸುದರ್ಶನ್ಮೌರ್ಯ, ಎಸ್ಎಸ್ಮಾಲಿ, ರೇಷ್ಮ ಶಿಂಧೆ, ಜೆ.ಎಸ್‌. ಚೌಧರಿ, ಎಸ್‌.ಕೆ. ನಾಯಕ್‌, ಧರ್ಮಜಿತ್ಖೇರ್ವಾರ್‌, ಅಸಿತ್ಚಕ್ರವರ್ತಿ, ಡಿ. ಕೆ. ರಾಘವ್‌, .ಕೆ. ಸಿಂಗ್ಮತ್ತು ಬಿ.ಪಿ. ಭಟ್


Pradip Kumar Sarkar, M K Dhakar, Bikash Das,

Priya Ranjan Kumar, Sudarshan Maurya, S S Mali,

Reshma Shinde, J S Choudhary, S K Naik, Asit

Chakrabarti and A K Singh

Indian Council of Agricultural Research – Research

Complex for Eastern Region,

Farming System Research Centre for Hill and Plateau

Region, Plandu, Ranchi, Jharkhand.

E-mail: ourprk@gmail.com

Dharamjit Kherwar and D K Raghav

Krishi Vigyan Kendra, Mandu, Ramgarh, Jharkhand.

B P Bhatt

Indian Council of Agricultural Research

Research Complex for Eastern Region, ICAR Parisar, Patna, Bihar.

 

 

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೪; ಡಿಸೆಂಬರ್‌ ೨೦೧೯

 

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp