ನೀರಿನ ಅಭಾವದಿಂದ ಸಮೃದ್ಧಿಯೆಡೆಗೆ


ಸಮುದಾಯಗಳಲ್ಲಿ ಹೆಚ್ಚಿದ ಜಾಗೃತಿ, ಒಗ್ಗೂಡಿ ಕೆಲಸ ಮಾಡುವ ರೈತಗುಂಪುಗಳ ಆತ್ಮವಿಶ್ವಾಸ, ಜಲಸಂರಕ್ಷಣಾ ಪದ್ಧತಿಗಳ ಅನುಷ್ಠಾನಕ್ಕೆ ಬೆಂಬಲ ಇವೆಲ್ಲವೂ ವಯನಾಡು ಪ್ರದೇಶದ ಹಳ್ಳಿಯನ್ನು ನೀರಿನ ಅಭಾವದಿಂದ ನೀರಿನ ಸಮೃದ್ಧಿಯತ್ತ ಕೊಂಡೊಯ್ಯಿತು.


 

ವಯನಾಡು ಕೇರಳದ ಈಶಾನ್ಯಕ್ಕಿರುವ ಪಶ್ಚಿಮ ಘಟ್ಟಗಳಲ್ಲಿರುವ ಸುಂದರ ಗಿರಿಧಾಮವಾಗಿದೆ. ಇದು ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಕೃಷಿ ಪರಂಪರೆಗೆ ಹೆಸರಾಗಿದೆ. ಹೀಗಿದ್ದೂ, ಹವಾಮಾನ ವೈಪರೀತ್ಯಗಳು, ಮಾನವ-ವನ್ಯಜೀವಿ ಸಂಘರ್ಷ, ಕಾರ್ಮಿಕರ ಕೊರತೆ, ಕಡಿಮೆ ಆದಾಯ ಮತ್ತು ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು – ಇವುಗಳಿಂದಾಗಿ ವಯನಾಡಿನಲ್ಲಿ ಕೃಷಿಯು ಪ್ರಸ್ತುತ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಕೃಷಿಆಧಾರಿತ ಜೀವನೋಪಾಯದ ಚಟುವಟಿಕೆಗಳಿಂದ ರೈತರು ವಿಮುಖರಾಗುತ್ತಿದ್ದಾರೆ. ನೀರಿನ ಅಭಾವ ಅವರು ಎದುರಿಸುತ್ತಿರುವ ಹಲವಾರು ಸವಾಲಗಳಲ್ಲೊಂದು. ಹವಾಮಾನ ಬದಲಾವಣೆ ಕುರಿತ ಕೇರಳ ರಾಜ್ಯ ಕ್ರಿಯಾ ಯೋಜನೆ 2023 (KSAPCC, 2023) ಕೂಡ ಕೇರಳದ ವಯನಾಡ್ ಜಿಲ್ಲೆಯನ್ನು ದುರ್ಬಲ ಎಂದು ಉಲ್ಲೇಖಿಸಿದೆ. ಈ ಪ್ರದೇಶವು ಪದೇಪದೇ ಬರಗಾಲವನ್ನು ಅನುಭವಿಸುತ್ತಿರುವುದರಿಂದ, ಜಿಲ್ಲೆಯಲ್ಲಿ ಕೃಷಿಯನ್ನು ಉಳಿಸಿಕೊಳ್ಳಲು ನೀರಿನ ಸಂರಕ್ಷಣೆ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವುದು ತುರ್ತುಅವಶ್ಯಕತೆಯಾಗಿದೆ.

ಭೌಗೋಳಿಕ ವಿಶಿಷ್ಟತೆಯ ಆಧಾರದ ಮೇಲೆ, ವಯನಾಡ್ ಪ್ರದೇಶವನ್ನು ಮೂರು ಕೃಷಿ ಪರಿಸರ ಘಟಕಗಳಾಗಿ (AEUs) ವರ್ಗೀಕರಿಸಲಾಗಿದೆ. ಅವುಗಳಲ್ಲಿ, ಸದರ್ನ್ ಹೈ ಹಿಲ್ಸ್ (SHH) ಘಟಕವು ಒಣ ಹವೆ ಮತ್ತು ಹವಾಮಾನ ವೈಪರೀತ್ಯಗಳಿಗೆ ಹೆಚ್ಚು ಎದುರಿಸುತ್ತಿದೆ. ಹೀಗಾಗಿ, ಅಂತಹ ವಲಯಗಳಲ್ಲಿ ನೀರಾವರಿಗಾಗಿ ನೀರಿನ ಅಗತ್ಯವನ್ನು ಹೆಚ್ಚಿಸುತ್ತದೆ.

ನೂಲ್ಪುಳ ಗ್ರಾಮ ಪಂಚಾಯತ್ SHH ನಲ್ಲಿ ನೆಲೆಗೊಂಡಿದ್ದು, ಇದು ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿದೆ. ಇದು ವಯನಾಡಿನ ಎರಡನೇ ಅತಿದೊಡ್ಡ ಜನಸಂಖ್ಯೆಯಿರುವ ಪ್ರದೇಶವಾಗಿದೆ. ವಯನಾಡು ವನ್ಯಜೀವಿ ಅಭಯಾರಣ್ಯವು ಈ ಪಂಚಾಯ್ತಿಯ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿನ ನೀರಿನ ಅಭಾವವು ಹೆಚ್ಚಿದೆ. ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ. ಇಲ್ಲಿ ವಿಶಾಲವಾದ ಜೌಗುಪ್ರದೇಶಗಳಿವೆ. ಭತ್ತ, ಶುಂಠಿಯಂತಹ ಪ್ರಮುಖ ಬೆಳೆಗಳೊಂದಿಗೆ ಮೇವಿನ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೊತೆಗೆ ಕಾಫಿ, ರಬ್ಬರ್‌, ಅಡಿಕೆ, ತೆಂಗು, ಮೆಣಸುಗಳನ್ನು ಎತ್ತರದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ನೈಸರ್ಗಿಕ ತೊರೆಗಳು ಮತ್ತು ಕೊಳಗಳು ಕೃಷಿಯ ಪ್ರಮುಖ ನೀರಾವರಿ ಮೂಲವಾಗಿದೆ. ನೀರಿನ ಕೊರತೆಯಿಂದಾಗಿ ಬೇಸಿಗೆ ಬೆಳೆಗಳು ಕಡಿಮೆಯಾಗುತ್ತಿದ್ದು, ಭೂಮಿ ಪಾಳು ಬೀಳುತ್ತಿದೆ. ಜನರ ಜೀವನೋಪಾಯವು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿದೆ. ಬರ ಹಾಗೂ ಕಾಡುಪ್ರಾಣಿಗಳ ಹಾವಳಿಯು ಈ ಪ್ರದೇಶದ ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಈ ಸವಾಲುಗಳಿಂದಾಗಿ, ಈ ಪ್ರದೇಶದ ರೈತರು ಹೈನುಗಾರಿಕೆ, ಅತಿಹೆಚ್ಚು ನೀರು ಬೇಡುವ ಬೆಳೆಗಳು ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನೀರಿನ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ, ನೀರಿನ ಲಭ್ಯತೆಯನ್ನು ಹೆಚ್ಚಿಸಲು ಮತ್ತು ರೈತರ ಜೀವನೋಪಾಯವನ್ನು ಕಾಪಾಡಲು, ನಬಾರ್ಡ್‌ನ ಸಮಗ್ರ ಜಲಾನಯನ ನಿರ್ವಹಣಾ ಯೋಜನೆ (IWMS) ಯನ್ನು 2019-2022 ರ ಅವಧಿಯಲ್ಲಿ ಎಂ. ಎಸ್‌ ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಸಮುದಾಯ ಕೃಷಿ ಜೀವವೈವಿಧ್ಯ ಕೇಂದ್ರವು ಜಾರಿಗೆ ತಂದಿದೆ.

ಈ ಹಸ್ತಕ್ಷೇಪಕ್ಕೂ ಮುನ್ನ, 2018 – 19 ರ ಅವಧಿಯಲ್ಲಿ ನಿರಂತರ ಪ್ರವಾಹದಿಂದಾಗಿ ಹಲವಾರು ಸವಾಲುಗಳು ಎದುರಾದವು: ಎಲ್ಲ ದೊಡ್ಡ ಹಾಗೂ ಸಣ್ಣ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿತ್ತು; ಜೌಗುಪ್ರದೇಶದ ವಿಂಗಡಣೆ; ರೈತರು ಒಗ್ಗಟ್ಟಿನ ನಿರ್ವಹಣೆಯಲ್ಲಿ ಕೊರತೆ. ಹೆಚ್ಚು ಮಳೆಯಾದಾಗ ಜೌಗುಪ್ರದೇಶಗಳಲ್ಲಿ ಹೂಳು ತುಂಬಿಕೊಳ್ಳುತ್ತಲೇ ಇತ್ತು. ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಭತ್ತದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಪರಿಣಾಮಕಾರಿಯಾದ ಬದುಗಳ ನಿರ್ಮಾಣ ಮತ್ತು ಒಳಚರಂಡಿಗಳ ಕೊರತೆಯಿಂದಾಗಿ ಅವಶೇಷಗಳು ಮತ್ತು ಹೂಳು ತುಂಬಿಕೊಂಡು ನೀರು ಅಕ್ಕಪಕ್ಕದ ಭತ್ತದ ಗದ್ದೆಗಳಲ್ಲಿ ಉಕ್ಕಿಹರಿಯುತ್ತಿತ್ತು. ಕೃಷಿಮಾಡದಿದ್ದ ಈ ಭೂಮಿಗಳಲ್ಲಿ ಶುಂಠಿ, ಗೆಣಸು ಬೆಳೆಯುತ್ತಿದ್ದ ಪದ್ಧತಿಯನ್ನು ರೈತರು ಕೈಬಿಟ್ಟರು. ಪ್ರವಾಹವು ಬೆಳೆ ವೈವಿಧ್ಯತೆಯ ಮೇಲೆ ಪರಿಣಾಮ ಬೀರಿತು. ಸ್ಥಳಾಂತರಗಳಿಂದಾಗಿ ಜೀವನೋಪಾಯದ ಬಿಕ್ಕಟ್ಟು ಉದ್ಭವಿಸಿತು. ಆದ್ದರಿಂದ, ಯೋಜನೆಯು ನೀರಾವರಿ ಸೌಲಭ್ಯಗಳನ್ನು ಬಲಪಡಿಸಲು ಹೆಚ್ಚಿನ ಆದ್ಯತೆಯನ್ನು ನೀಡಿತು; ಅಸ್ತಿತ್ವದಲ್ಲಿರುವ ಒಳಚರಂಡಿ ರಚನೆಗಳ ಪುನರ್ನಿಮಾಣ; ನೈಸರ್ಗಿಕ ಜಲಮೂಲಗಳು ಮತ್ತು ಸಾಂಪ್ರದಾಯಿಕ ನೀರಿನ ವ್ಯವಸ್ಥೆಗಳನ್ನು ಸುಧಾರಿಸುವುದು.

ನೂಲ್ಪುಳ ಜಲಾನಯನ ಪ್ರದೇಶದಲ್ಲಿ ಐದು ಚಿಕ್ಕ ಜಲಾನಯನ ಪ್ರದೇಶಗಳು ಸುಮಾರು 500 ಹೆಕ್ಟೇರ್‌ ಪ್ರದೇಶವನ್ನು ವ್ಯಾಪಿಸಿದೆ (ಕರಿಪೂರ್ 1, ಕರಿಪೂರ್ 2, ವಡಕ್ಕನಾಡ್, ವಳ್ಳುವಾಡಿ ಮತ್ತು ಪಚಾಡಿ). ಗ್ರಾಮ ಜಲಾನಯನ ಸಮಿತಿ (VWC)ಯನ್ನು ಈ ಯೋಜನೆಯ ರೂಪಣೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ  ರಚಿಸಲಾಯಿತು. ನಬಾರ್ಡ್‌ IWMS ಯೋಜನೆಯನ್ನು ನೂಲ್ಪುಳ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು VWC ಸಮಿತಿಯನ್ನು ವಿಶೇಷ ಗ್ರಾಮಸಭೆಯಲ್ಲಿ ರಚಿಸಲಾಯಿತು. VWCಯಲ್ಲಿ 3 ಮಹಿಳೆಯರು (ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪು ಕಟ್ಟುನಾಯಕ ಸಮುದಾಯದಿಂದ ಒಬ್ಬರು) ಮತ್ತು 8 ಮಂದಿ ಪುರುಷರು (ಒಂದು ಪರಿಶಿಷ್ಟ ಪಂಗಡ, ಇನ್ನೊಂದು ಹಿಂದುಳಿದ ವರ್ಗಗಳು, ಒಂದು ಇತರೆ ಅರ್ಹ ವರ್ಗಗಳು ಮತ್ತು 5 ಸಾಮಾನ್ಯ) ಸೇರಿದಂತೆ 11 ಮಂದಿ ಸದಸ್ಯರನ್ನು ಹೊಂದಿದೆ. ಎಲ್ಲ ಐದು ಸಣ್ಣ ಜಲಾನಯನ ಪ್ರದೇಶಗಳ ಸದಸ್ಯರನ್ನು ಸಮಿತಿಯಲ್ಲಿ ಸೇರಿಸಲಾಗಿದೆ.

ತುರ್ತಾಗಿ ಮಾಡಬೇಕಾದ ಕೆಲಸವೆಂದರೆ ಚರಂಡಿಗಳ ಪಕ್ಕದಲ್ಲಿ, ಚೆಕ್‌ ಡ್ಯಾಂಗಳ ಹತ್ತಿರ ರೈತರು ಅತಿಕ್ರಮಿಸಿರುವ ಭೂಮಿಯನ್ನು ವಶಪಡಿಸಿಕೊಂಡು ಜಲಮೂಲಗಳ ಮರುಸ್ಥಾಪನೆ. ಆದ್ದರಿಂದ, VWC ಯ ಮೊದಲ ಜವಾಬ್ದಾರಿ ಒಳಚರಂಡಿ ಮಾರ್ಗಗಳನ್ನು ವಿಸ್ತರಿಸಲು ಅತಿಕ್ರಮಿತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು. ಆರಂಭದಲ್ಲಿ, ಅತಿಕ್ರಮಣ ಜಮೀನುಗಳ ಒಳಚರಂಡಿ ಮಾರ್ಗದ ವಿಸ್ತರಣೆಗೆ ಸಮುದಾಯಗಳು ಆದ್ಯತೆ ನೀಡಲಿಲ್ಲ. ನಾಯಕರು, ಸ್ಥಳೀಯ ಸ್ವ ಸರ್ಕಾರಗಳು ಮತ್ತು ಆಯಾ ಪ್ರದೇಶದ ಪ್ರಭಾವಿ ವ್ಯಕ್ತಿಗಳ ನೆರವಿನಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದ ಮೇಲೆ ಸಮುದಾಯಗಳು ನಿಧಾನವಾಗಿ ಒಪ್ಪಿಕೊಂಡವು. VWC ಎಲ್ಲರ ಒಮ್ಮತದ ಮೂಲಕ ಅಸ್ತಿತ್ವದಲ್ಲಿರುವ ಜಲಮೂಲಗಳ ನವೀಕರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿತು. ಇದರಿಂದಾಗಿ ಪ್ರವಾಹದ ಪ್ರತಿಕೂಲ ಪರಿಣಾಮಗಳು ಗಣನೀಯವಾಗಿ ಕಡಿಮೆಯಾಯಿತು.

ಕ್ರಮೇಣ, ಮಧ್ಯಸ್ಥಿಕೆಯ ಪರಿಣಾಮವಾಗಿ ಮಣ್ಣಿನ ಸವಕಳಿ ನಿಯಂತ್ರಣ, ನೀರಾವರಿ ಸುಧಾರಣೆ ಮತ್ತು ಮಣ್ಣ ಹಾಗೂ ಜಲ ಸಂರಕ್ಷಣೆಯ ಅಭ್ಯಾಸಗಳು ಹೆಚ್ಚಿದವು. ಸಮರ್ಥ ನೀರಿನ ಸಂಪನ್ಮೂಲ ನಿರ್ವಹಣೆಗಾಗಿ ಸುಮಾರು 3990 ಮೀ ಒಳಚರಂಡಿ ಮಾರ್ಗಗಳಲ್ಲಿನ ಹೂಳೆತ್ತಿ, ಬದುಗಳನ್ನು ನಿರ್ಮಿಸಲಾಯಿತು. ಇದರಿಂದ ಪರಿಣಾಮಕಾರಿ ಜಲಸಂಪನ್ಮೂಲ ನಿರ್ವಹಣೆ ಸಾಧ್ಯವಾಯಿತು. ಇದರೊಂದಿಗೆ ಚೆಕ್‌ ಡ್ಯಾಂಗಳು, 15233 ಕ್ಯೂ.ಮೀ ಎತ್ತರದ ಮಣ್ಣಿನ ಬದುಗಳು, 4 ಹೊಸ ಕೆರೆಗಳ ನಿರ್ಮಾಣದೊಂದಿಗೆ 3 ಈಗಾಗಲೇ ಇರುವ ಕೆರೆಗಳ ಮರುಹೂರಣ, 13 ಬಾವಿಗಳಿಗೆ ಮರುಹೂರಣ ಸೌಲಭ್ಯ, 3910 ಇಂಗುಗುಂಡಿಗಳು, 2442 ತಾರಸಿ ಕೃಷಿ ಘಟಕಗಳು ಮತ್ತು ಐದು ಚೆಕ್‌ ಡ್ಯಾಂಗಳ ನವೀಕರಣವನ್ನು ಕೈಗೊಳ್ಳಲಾಯಿತು. ಮಣ್ಣಿನ ಒಡ್ಡುಗಳ ನಿರ್ಮಾಣದಿಂದ ಮಣ್ಣಿನ ಸವಕಳಿ ಕಡಿಮೆಯಾಗಿ ಫಲವತ್ತಾದ ಮಣ್ಣು ಉಳಿಯಿತು. ಸೆಂಟ್ರಿಪೆಟಲ್‌ ತಾರಸಿ ಮತ್ತು ಹೊದಿಕೆ ವಿಧಾನವು ಮಣ್ಣಿನ ತೇವಾಂಶವನ್ನು ಹಿಡಿದಿಡುವಲ್ಲಿ ನೆರವಾಯಿತು. ಈ ಕ್ರಮಗಳಿಂದ ಪ್ರದೇಶದಲ್ಲಿ ತೆಂಗಿನ ಇಳುವರಿ ಹೆಚ್ಚಿದೆ ಎಂದು ಸಮುದಾಯಗಳವರು ಹೇಳುತ್ತಾರೆ. ಬದುಗಳಲ್ಲಿ ನೆಟ್ಟ ಮೇವಿನ ಬೆಳೆಗಳ ಉತ್ತಮ ಇಳುವರಿಯಿಂದ ಜಾನುವಾರುಗಳಿಗೆ ಉತ್ತಮ ಪೋಷಕಾಂಶ ಒದಗಿತು.

ನಿರ್ಮಾಣ ಚಟುವಟಿಕೆಗಳೊಂದಿಗೆ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮತ್ತು ಹವಾಮಾನ ತೀವ್ರತೆಯನ್ನು ಕಡಿಮೆಗೊಳಿಸಿಕೊಳ್ಳುವುದರ ಬಗ್ಗೆ ಕೂಡ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲಾಯಿತು. ಸಮುದಾಯಗಳ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣದ ಭಾಗವಾಗಿ ಸಾವಯವ ಕೃಷಿ, ಜಲ ಸಾಕ್ಷರತೆ, ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಸ್ಮಾರ್ಟ್ ಕೃಷಿ ಪದ್ಧತಿ, ಸಮಗ್ರ ಕೀಟ ನಿರ್ವಹಣೆ, ಸಮಗ್ರ ಕೃಷಿ ವ್ಯವಸ್ಥೆ, ಜಾನುವಾರು ಮತ್ತು ಕೋಳಿ ನಿರ್ವಹಣೆ, ಆರ್ಥಿಕ ಸಾಕ್ಷರತೆ, ಅಣಬೆ ಕೃಷಿ ಮತ್ತು ಮೌಲ್ಯವರ್ಧನೆ ಸೇರಿದಂತೆ 11ವಿಷಯಗಳ ಕುರಿತು  ತರಬೇತಿಗಳನ್ನು ನಡೆಸಲಾಯಿತು. ಮಾದರಿ ತೋಟಗಳಿಗೆ ಕಲಿಕಾ ಭೇಟಿಗಳನ್ನು ಆಯೋಜಿಸಲಾಯಿತು. ಈ ಪ್ರಯತ್ನಗಳ ಪರಿಣಾಮವಾಗಿ ಸಮುದಾಯಗಳಲ್ಲಿ ಜಾಗೃತಿ ಮೂಡಿತು. ರೈತ ಗುಂಪುಗಳು ಸಾಮೂಹಿಕವಾಗಿ ಕೆಲಸ ಮಾಡುವ ಆತ್ಮವಿಶ್ವಾಸ ಹೆಚ್ಚಿತು. ಇದು ಭವಿಷ್ಯದಲ್ಲಿ ರೈತ ಉತ್ಪಾದಕ ಸಂಸ್ಥೆ ಸಮರ್ಥವಾಗಿ ರೂಪಿಸಬಲ್ಲದು.

ಕೆರೆಗಳ ಜೀರ್ಣೋದ್ಧಾರ, ಚೆಕ್‌ ಡ್ಯಾಂಗಳ ನವೀಕರಣವು ಬೇಸಿಗೆಯಲ್ಲಿ ಜೌಗುಪ್ರದೇಶಗಳ ಕೃಷಿಗೆ ನೀರು ಲಭ್ಯವಾಗುವಂತೆ ಮಾಡಿತು. ಸುಮಾರು ಐವತ್ತು ಹೆಕ್ಟೇರ್‌ ಭೂಮಿಯನ್ನು ಕೃಷಿಭೂಮಿಯಾಗಿ ಪರಿವರ್ತಿಸಲಾಯಿತು. ಜೌಗುಪ್ರದೇಶದ ಕೃಷಿಪರಿಸರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಿದ್ದರಿಂದ ಇಲ್ಲಿನ ಭತ್ತದ ಕೃಷಿ ಪ್ರದೇಶವು  20%ರಷ್ಟು ಹೆಚ್ಚಳವಾಯಿತು. ಬಾವಿ ಮರುಹೂರಣ ಸೌಲಭ್ಯಗಳು, ಸೆಂಟ್ರಿಪೆಟಲ್‌ ತಾರಸಿ ಕೃಷಿ, ಮಣ್ಣಿನ ಬದುಗಳು ಬರದ ತೀವ್ರತೆಯನ್ನು ಕಡಿಮೆಗೊಳಿಸಿ ಜಾನುವಾರು ಸಾಕಣೆಯನ್ನು ಹೆಚ್ಚಿಸಿತು. ತೊರೆಗಳ (ಕಾಂಕ್ರೀಟ್ ಚೆಕ್‌ಡ್ಯಾಮ್‌ಗಳು ಮತ್ತು ಸಡಿಲವಾದ ಬೌಲ್ಡರ್ ಚೆಕ್‌ಡ್ಯಾಮ್‌ಗಳು) ಪರಿಣಾಮಕಾರಿ ಬಳಕೆಯಿಂದಾಗಿ ನೀರಿನ ಲಭ್ಯತೆಯಲ್ಲಿ 30% ಹೆಚ್ಚಳವಾಗಿದೆ. ಇದರೊಂದಿಗೆ, ಸ್ವಚ್ಛಗೊಳಿಸಿದ ಮತ್ತು ನವೀಕರಿಸಿದ ಕೆರೆಗಳು ಮಳೆಗಾಲದಲ್ಲಿ 40% ಹೆಚ್ಚಿನ ನೀರನ್ನು ಸಂಗ್ರಹಿಸಲು ಸಹಾಯ ಮಾಡಿತು. ನೀರಿನ ಸಂರಕ್ಷಣಾ ಕ್ರಮಗಳಿಂದಾಗಿ ರೈತರು ದೂರದ ಮೂಲಗಳಿಂದ ಪಂಪಿಂಗ್ ಮೂಲಕ ನೀರು ತರಲು ಮಾಡುತ್ತಿದ್ದ ವೆಚ್ಚವನ್ನು ಎಂಬುದು ಗಮನಿಸಬೇಕಾದ ಸಂಗತಿ.

ಬಾವಿಯ ಮರುಹೂರಣವು ಅದ್ಭುತ ಫಲಿತಾಂಶಗಳನ್ನು ನೀಡಿತು. ಮೊದಲಿಗೆ ಪಂಚಾಯ್ತಿಯಲ್ಲಿನ ಎತ್ತರದಲ್ಲಿರುವ ಪ್ರದೇಶಗಳ ಬಾವಿಗಳಿಗೆ ಮರುಹೂರಣ ಮಾಡುವಂತೆ ಸಲಹೆ ನೀಡಲಾಯಿತು. ಹದಿಮೂರು ಬಾವಿಗಳ ಮರುಹೂರಣವನ್ನು ಕೈಗೊಳ್ಳಲಾಯಿತು. ಎರಡು ವರ್ಷಗಳ ತರುವಾಯ, ಕಥಂಗತ್‌ ಎನ್ನುವ ಸ್ಥಳದಲ್ಲಿನ ದೇವಾಲಯದ ಬಾವಿಯು ಇಪ್ಪತ್ತು ವರ್ಷಗಳ ನಂತರ ಮರುಹೂರಗೊಂಡಿತು! ವಳ್ಳುವಾಡಿ ಕುರುಮ ಎನ್ನುವ ಬುಡಕಟ್ಟು ಕಾಲೋನಿಯಲ್ಲಿನ ನೀರು ಸರಬರಾಜು ಸುಧಾರಣೆಗೊಂಡಿತು. ಜೊತೆಗೆ ಅದೇ ಕಾಲೋನಿಯ ಸುತ್ತಲಿದ್ದ   4-5 ಬಾವಿಗಳು ಉತ್ತಮಗೊಂಡವು.

ಈ ಚಟುವಟಿಕೆಗಳಿಂದಾಗಿ ಈ ಸ್ಥಳವು ʼನೀರಿನ ಅಭಾವದಿಂದ ನೀರಿನ ಸಮೃದ್ಧಿʼ ಹೊಂದಿದ ಸ್ಥಳಗಳಾದವು. ಇದು ಈ ಪ್ರದೇಶದ ಕೃಷಿಯ ಪುನಶ್ಚೇತನಕ್ಕೆ ನೆರವಾಯಿತು. ಈ ಪ್ರದೇಶದ ರೈತರು ಬೇರೆ ಬೆಳೆಗಳಿಗೆ ಸೂಕ್ತವಲ್ಲದ ನೀರನ್ನು ಹೆಚ್ಚು ಬೇಡುವ ಭತ್ತದ ಕೃಷಿಯನ್ನು ಮರಳಿ ಆರಂಭಿಸಿದರು. ಈ ಚಟುವಟಿಕೆಗಳಿಂದಾಗಿ ಸುಮಾರು 4690 ಕೆಲಸದ ದಿನಗಳು ಸೃಷ್ಟಿಯಾದವು. ಒಟ್ಟು 905 ರೈತ ಕುಟುಂಬಗಳು ಈ ಯೋಜನೆಯ ಹಸ್ತಕ್ಷೇಪದಿಂದ ನೇರಲಾಭ ಪಡೆದವು.

ಗಮನಾರ್ಹ ಬೆಳವಣಿಗೆಯೆಂದರೆ ಸಂಪರ್ಕಗಳು ಅಭಿವೃದ್ಧಿಗೊಂಡಿವೆ. ಚಟುವಟಿಕೆಗಳು ಸಮರ್ಥನೀಯವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಧಿ ಬಳಕೆಯನ್ನು ನಿರ್ವಹಿಸಲು MGNREGS, KSCSTEಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಒಳಚರಂಡಿ ಮಾರ್ಗ ಸಂಸ್ಕರಣೆ ಮತ್ತು ಚೆಕ್ ಡ್ಯಾಮ್‌ಗಳ ನಿರ್ಮಾಣದಂತಹ ನೀರಿನ ಸಂರಕ್ಷಣಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ನೀರಾವರಿ ಇಲಾಖೆಯೊಂದಿಗೆ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಮೇಲೆ ತಿಳಿಸಿದ ಕ್ರಮಗಳ ಯಶಸ್ಸಿನ ಪರಿಣಾಮವಾಗಿ, ಸ್ಥಳೀಯ ಪಂಚಾಯತ್‌ಗಳು ಇದೇ ಮಾದರಿಯ ಬರಪ್ರದೇಶಗಳಲ್ಲಿ ಈ ಕ್ರಮಗಳನ್ನು ಪುನರಾವರ್ತಿಸಿತು. ಇದಕ್ಕಾಗಿ ಪ್ರತ್ಯೇಕ ಬಜೆಟ್‌ ನಿಗದಿಪಡಿಸಿತು. ಇದೇ ರೀತಿಯ ಹವಾಮಾನ ಪರಿಸ್ಥಿತಿಗಳಿರುವಲ್ಲಿ ನೀರಿನ ಸಂರಕ್ಷಣಾ ಕ್ರಮಗಳನ್ನು ಪುನರಾವರ್ತಿಸಬಹುದು ಎನ್ನುವುದನ್ನು ಈ ಪ್ರಯತ್ನಗಳು ತೋರುತ್ತವೆ.

 


 

Vipindas P

Development Coordinator

Archana Bhatt

Scientist

Sujith M M and Noushique P M

Development Associates

MS Swaminathan Research Foundation-Community

Agrobiodiversity Centre

Puthoorvayal, Meppadi PO

Wayanad, Kerala – 673577

 


 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೨ ; ಜೂನ್‌ ೨೦‌೨‌೩

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp