ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಸಿಲುಕಿರುವ ಕೃಷಿ ಆಧಾರಿತ ಸಣ್ಣ ಹಿಡುವಳಿದಾರರ ಜೀವನೋಪಾಯಕ್ಕೆ ವೈವಿಧ್ಯೀಕರಣವು ಒಂದು ಮಾರ್ಗವಾಗಿದೆ. ಪಶುಸಂಗೋಪನೆಯೂ ಅದರಲ್ಲೊಂದು. ವಿದರ್ಭದ ಪಶುಸಂಗೋಪಕರು ಒಟ್ಟಾಗಿ ಶ್ರೀ ಕಾಮಧೇನು ಡೈರಿ ಫಾರ್ಮರ್ ಲಿ., ಎನ್ನುವ FPO ಸ್ಥಾಪಿಸಿಕೊಂಡಿದ್ದಾರೆ. ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಹಾಲು ಉತ್ಪಾದನೆಯ ಹೆಚ್ಚಳಕ್ಕೆ ಹಲವಾರು ಸೇವೆಗಳನ್ನು ಒದಗಿಸುತ್ತಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶವು ಬರ ಮತ್ತು ಬೆಳೆ ವೈಫಲ್ಯಗಳಿಗೆ ಗುರುತಿಸಲ್ಪಟ್ಟಿದೆ. ಬಹುಪಾಲು ರೈತರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಸೂಕ್ಷ್ಮವಾದ ಮಳೆಯಾಶ್ರಿತ ಪರಿಸರ ವ್ಯವಸ್ಥೆ, ಕೊಳೆತ ಮಣ್ಣು, ಹೆಚ್ಚಿನ ಒಳಸುರಿಯುವಿಕೆಗಳ ವೆಚ್ಚಗಳು, ಕೀಟ ಮತ್ತು ರೋಗಬಾಧೆಗಳು, ಬೆಳೆ ಆಯ್ಕೆಗಳು ಮತ್ತು ವಿಪರೀತ ಅವಲಂಬನೆಗಳು, ಸೀಮಿತ ಸಾಲದ ಲಭ್ಯತೆ, ಮಾರುಕಟ್ಟೆಯಂತಹ ಪ್ರತಿಕೂಲ ಅಂಶಗಳು ಒಟ್ಟಾಗಿ ಕೃಷಿಯನ್ನು ಅಪಾಯಕಾರಿ ಹಾಗೂ ಕಡಿಮೆ ಲಾಭದಾಯಕವಾಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಹತ್ತಿ ರೈತರಿಗೆ ಕೃಷಿ ಸವಾಲಾಗುತ್ತದೆ. ಮತ್ತೆ ಮತ್ತೆ ಎದುರಾಗುವ ನಷ್ಟಗಳು, ಹತಾಶ ಪರಿಸ್ಥಿತಿಗಳು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದ್ದು, ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಿದೆ.
ವೈವಿಧ್ಯೀಕರಣವು ಸವಾಲನ್ನು ಎದುರಿಸುವ ಒಂದು ಮಾರ್ಗವಾಗಿದೆ. ಅದರಲ್ಲಿ ಪಶುಸಂಗೋಪನೆಯೂ ಒಂದು. ಪಶುಸಂಗೋಪನೆಯು ಕುಟುಂಬಗಳಿಗೆ ಹೆಚ್ಚುವರಿ ಹಾದಿಗಳನ್ನು ತೆರೆಯುತ್ತದೆ. ಈ ಲೇಖನವು ಕೃತಕ ಗರ್ಭಧಾರಣೆ ಮತ್ತು ವ್ಯಾಪಕ ಶ್ರೇಣಿಯ ಪೋಷಕ ಚಟುವಟಿಕೆಗಳ ಮೂಲಕ ಉತ್ತಮ ಹಾಲು ಉತ್ಪಾದನೆಗಾಗಿ ಸ್ಥಳೀಯ ದನ ಮತ್ತು ಎಮ್ಮೆಗಳ ಆನುವಂಶಿಕ ಸಾಮರ್ಥ್ಯವನ್ನು ಸುಧಾರಿಸಲು ಮಾಡಿದ ಪ್ರಯತ್ನಗಳ ಕುರಿತದ್ದಾಗಿದೆ.
ಉಪಕ್ರಮ
BAIF ನ ಜಾನುವಾರು ಸಾಕಣೆ ಕೇಂದ್ರವನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಪ್ರಾಣಿಗಳ ಉತ್ತಮ ತಳಿಗಳನ್ನು ಉತ್ಪಾದಿಸಲು ಹಲವಾರು ಸೇವೆಗಳನ್ನು ಸಲ್ಲಿಸಲಾಗಿದೆ. BAIF ಮನೆ ಬಾಗಿಲಿಗೆ ಕೃತಕ ಗರ್ಭಧಾರಣೆ ಸೇವೆಗಳನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಐದು ವರ್ಷಗಳಲ್ಲಿ ಈ ಪ್ರದೇಶದಲ್ಲಿ 940 ಹೆಣ್ಣು ಕರುಗಳು ಜನಿಸಿವೆ. (ನೋಡಿ ಕೋಷ್ಟಕ 1). ಆರಂಭದಲ್ಲಿ, ರೈತರಿಗೆ ಕೃತಕ ಗರ್ಭಧಾರಣೆಯ ಬಗ್ಗೆ ಅರಿವಿರಲಿಲ್ಲ. ಹಾಗಾಗಿ ಇದನ್ನು ಉತ್ತೇಜಿಸಲು ಹೋರಾಡಬೇಕಾಯಿತು. ರೈತರ ಮನಸ್ಥಿತಿಯನ್ನು ಬದಲಾಯಿಸುವುದು ದೊಡ್ಡ ಸವಾಲಾಗಿತ್ತು. ಕ್ರಮೇಣ ಜಾಗೃತಿ ಕಾರ್ಯಕ್ರಮಗಳ ಮೂಲಕ ರೈತರಿಗೆ ಹೈನುಗಾರಿಕೆ ವ್ಯವಹಾರದ ಬಗ್ಗೆ ಅರಿವು ಮೂಡಿಸಿದರು.
ಹಾಲು ಉತ್ಪಾದನೆಯ ಬೆಳವಣಿಗೆ
ಹೆಚ್ಚುತ್ತಿರುವ ಪ್ರಾಣಿಗಳ ಸಂಖ್ಯೆಯೊಂದಿಗೆ, ಹಾಲಿನ ಉತ್ಪಾದನೆಯೂ ಹೆಚ್ಚಾಗಿದೆ. ಪ್ರದೇಶದ ಅಂಕಿಅಂಶಗಳು ಹಾಲು ಉತ್ಪಾದನೆಯು ಹೆಚ್ಚಾಗಿರುವುದನ್ನು ತೋರುತ್ತವೆ. 2016 ರಲ್ಲಿ, 6 ಹಳ್ಳಿಗಳಿಂದ (ಉದಾ., ಪರ್ಸೋಡಿ, ಲಾಡ್‌ಗಾಂವ್, ಕೇದಾರಪುರ, ಕುಕಾಡಿ ಪಂಜಾರ, ಪಾರ್ಡಿ (ಗೋ), ಬೋರ್ಗೊಂಡಿ) ಕೇವಲ 150-ಲೀಟರ್ ಹಾಲು ಉತ್ಪಾದನೆಯು ದಾಖಲಾಗಿದೆ. 2020 ರಲ್ಲಿ, ಅದೇ ಹಳ್ಳಿಗಳಲ್ಲಿ, ಹಾಲು ಉತ್ಪಾದನೆಯು ದಿನಕ್ಕೆ 1250 ಲೀಟರ್‌ಗೆ ಏರಿದೆ. ಹಾಲಿನ ವ್ಯಾಪಾರದ ಸಾಮರ್ಥ್ಯ ಅರಿವಾದ ಬಳಿಕ, 2021 ರಲ್ಲಿ 17 ಹಳ್ಳಿಗಳಿಂದ 150 ಕ್ಕೂ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರು. ಹಾಲಿನ ಉತ್ಪಾದನೆಯು ದಿನಕ್ಕೆ 2500 ಲೀಟರ್‌ಗಿಂತ ಹೆಚ್ಚಿತು. (ನೋಡಿ ಕೋಷ್ಟಕ 1)
ಕೋಷ್ಟಕ 1: ಹೆಚ್ಚಿದ ಹಾಲುಕರೆಯುವ ಹಸುಗಳು, ಹಾಲು ಉತ್ಪಾದನೆ ಮತ್ತು ರೈತರ ಪಾಲ್ಗೊಳ್ಳುವಿಕೆಯ ವರ್ಷವಾರು ಅಂಕಿಅಂಶಗಳು
| ವರ್ಷ |
ಹಾಲು ಕರೆಯುವ ಹಸುಗಳು (ಸಂಖ್ಯೆ) |
ಹಾಲಿನ ಉತ್ಪಾದನೆ (ಲೀಟರ್ಗಳಲ್ಲಿ) |
ಭಾಗವಹಿಸಿದ ರೈತರು (ಸಂಖ್ಯೆ) |
| 2016 | 91 | 261 | 43 |
| 2017 | 113 | 430 | 53 |
| 2018 | 223 | 750 | 67 |
| 2019 | 249 | 983 | 79 |
| 2020 | 263 | 1250 | 89 |
| 2021 | 443 | 2500 | 151 |
ರೈತರು ಉತ್ಪಾದಿಸಿದ ಹಾಲನ್ನು ಮಾರಾಟ ಮಾಡುವ ಸವಾಲು ಎದುರಿಸಲಾರಂಭಿಸಿದರು. ಅವರು ಎದುರಿಸಿದ ಸವಾಲುಗಳನ್ನು ಕೆಳಗೆ ನೀಡಲಾಗಿದೆ.
- ಹಾಲು ಉತ್ಪಾದನೆ ಹೆಚ್ಚಾಯಿತು ಆದರೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಇರಲಿಲ್ಲ.
- ಕೆಲವು ಗ್ರಾಹಕರು ಇದ್ದರಾದರೂ ಅವರ ಉತ್ಪಾದನೆಗೆ ಒಳ್ಳೆಯ ಬೆಲೆ ಸಿಗುತ್ತಿರಲಿಲ್ಲ.
- ಶೇಖರಣೆಗಾಗಿ ಹತ್ತಿರದಲ್ಲಿ ಡೈರಿಯಾಗಲಿ ಶೈತ್ಯೀಕರಣ ಘಟಕಗಳಾಗಲಿ ಇಲ್ಲದಿದ್ದ ಕಾರಣ ಅವರು ತಮ್ಮ ಹಾಲನ್ನು ಮಾರಾಟ ಮಾಡಲು ದೂರದ ಬ್ಲಾಕ್‌ಗಳಿಗೆ ಹೋಗಬೇಕಾಯಿತು.
- ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದರು.
- ರೈತರು ತಮ್ಮ ಸ್ಥಳದಲ್ಲಿರುವ ಗ್ರಾಹಕರಿಗೆ ನೇರವಾಗಿ ಮನೆಗಳಿಗೆ ಮಾರಾಟ ಮಾಡುವ ಹಾದಿಯನ್ನು ಕಂಡುಕೊಂಡರು. ಇದು ಹೆಚ್ಚು ಒತ್ತಡ ಹಾಗೂ ಸಮಯವನ್ನು ಬೇಡುವಂತಹದ್ದಾಗಿತ್ತು.
FPO ರಚನೆ
ಸದ್ಯದ ಪರಿಸ್ಥಿತಿಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ತಳಮಟ್ಟದಲ್ಲಿ ಸವಾಲನ್ನು ಎದುರಿಸಲು ರೈತ ಉತ್ಪಾದಕ ಸಂಸ್ಥೆಯನ್ನು ಉತ್ತೇಜಿಸಲು ಕಾರ್ಯತಂತ್ರವನ್ನು ರೂಪಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ, ಪಶುಸಂಗೋಪನೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಏಕಗವಾಕ್ಷಿ ಪರಿಹಾರ/ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ FPO ಅನ್ನು ಸ್ಥಾಪಿಸಲಾಯಿತು. ಆ ಪ್ರದೇಶದಲ್ಲಿ ಡೈರಿ ಆಧಾರಿತ ರೈತ ಉತ್ಪಾದಕ ಕಂಪನಿಯನ್ನು ಬೆಂಬಲಿಸಲು ನಬಾರ್ಡ್ ಮುಂದೆ ಬಂದಿತು. 2020 ರಲ್ಲಿ, ನಬಾರ್ಡ್‌ನ ಪ್ರೊಡ್ಯೂಸರ್ ಆರ್ಗನೈಸೇಶನ್ ಡೆವಲಪ್ಮೆಂಟ್ ಫಂಡ್ ಅಡಿಯಲ್ಲಿ, ಒಂದು ಕಂಪನಿಗೆ ಶ್ರೀ ಕಾಮಧೇನು ಡೈರಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎಂದು ಹೆಸರಿಸಲಾಯಿತು. ನಬಾರ್ಡ್ 2020 ರಿಂದ 2022 ರವರೆಗೆ 3 ವರ್ಷಗಳವರೆಗೆ ಹಣಕಾಸಿನ ನೆರವು ನೀಡಿದೆ.
ಶ್ರೀ ಕಾಮಧೇನು ಡೈರಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಅನ್ನು 2020 ರಲ್ಲಿ ನಾಗ್ಪುರದ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ಸೀಮಿತ ಕಂಪನಿಯಾಗಿ ನೋಂದಾಯಿಸಲಾಗಿದೆ. FPO 17 ಹಳ್ಳಿಗಳಿಂದ 362 ಹಾಲು ಉತ್ಪಾದಕರನ್ನು ಒಳಗೊಂಡಿದೆ. ಅದರಲ್ಲಿ 2 ಹೆಕ್ಟೇರಿಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ 224 (61.87%) ರೈತರು ಷೇರುದಾರರು. ಇದನ್ನು 11ನೇ ಸೆಪ್ಟೆಂಬರ್ 2020 ರಂದು ಡೈರಿ ಮತ್ತು ಹಾಲು ಸಂಗ್ರಹಣಾ ಕೇಂದ್ರಗಳನ್ನು ಕೆಲಸಮಾಡಿದ ಅನುಭವ ಹೊಂದಿರುವ ಹತ್ತು ಯುವ ನಿರ್ದೇಶಕರ ಮಂಡಳಿಯೊಂದಿಗೆ ಸ್ಥಾಪಿಸಲಾಯಿತು. ಚುನಾಯಿತ ಮಂಡಳಿಯ ನಿರ್ದೇಶಕರು ನಾಲ್ವರು ಮಹಿಳಾ ಸದಸ್ಯರು ಮತ್ತು ಆರು ಪುರುಷ ಸದಸ್ಯರನ್ನು ಒಳಗೊಂಡಿರುತ್ತಾರೆ. FPC ಅಧಿಕೃತ ಬಂಡವಾಳ ರೂ. 10 ಲಕ್ಷಗಳು ಮತ್ತು ಪಾವತಿಸಿದ ಬಂಡವಾಳ ರೂ. 5 ಲಕ್ಷ.
ಎಫ್‌ಪಿಒ ಆಡಳಿತ ಮತ್ತು ನಿರ್ವಹಣೆಯಲ್ಲಿ ನಿರ್ದೇಶಕರು, ಸಿಇಒ ಮತ್ತು ಷೇರುದಾರ ಸದಸ್ಯರ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಯಿತು. ವ್ಯಾಪಾರ ಯೋಜನೆ ಅಭಿವೃದ್ಧಿ, ಸಂಪರ್ಕಗಳ ಮುಂದುವರಿಕೆ, ಹಾಲಿನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮತ್ತು ಎಫ್‌ಪಿಒ ಮೂಲಕ ಡೈರಿ ಸಂಸ್ಕರಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸಲಾಗಿದೆ. ಸಿಇಒಗೆ ಮೌಲ್ಯವರ್ಧನೆ ಮತ್ತು ಹಾಲು ಸಂಸ್ಕರಣೆ, ಲಾಭ ಮತ್ತು ನಷ್ಟಗಳ ಲೆಕ್ಕಾಚಾರ ಮತ್ತು ಎಫ್‌ಪಿಒದ ಆಡಳಿತದ ಅಂಶಗಳ ಬಗ್ಗೆ ತರಬೇತಿ ನೀಡಲಾಯಿತು. ಇದಲ್ಲದೆ, ಸಂಸ್ಕರಣಾ ಘಟಕವನ್ನು ಸ್ಥಾಪಿಸುವುದು, ಮಾರುಕಟ್ಟೆ ಸಂಪರ್ಕಗಳನ್ನು ಸ್ಥಾಪಿಸುವುದು ಮತ್ತು ಅದಕ್ಕೆ ಅಗತ್ಯವಾದ ಮೂಲ ಪರವಾನಗಿಗಳನ್ನು ಪಡೆಯುವ ಕುರಿತು ಮಾರ್ಗದರ್ಶನ ನೀಡಲಾಯಿತು.
ಒಳಸುರಿಯುವಿಕೆಗಳ ಪೂರೈಕೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಶ್ರೀ ಕಾಮಧೇನು ಡೈರಿ ಫಾರ್ಮರ್ ಲಿಮಿಟೆಡ್ ಈ ಕೆಳಗಿನ ಸೇವೆಗಳನ್ನು ಕೈಗೊಂಡಿದೆ.
ಒಳಸುರಿಯುವಿಕೆಗಳ ಪೂರೈಕೆ
- ಮನೆ ಬಾಗಿಲಿಗೆ ಕೃತಕ ಗರ್ಭಧಾರಣೆ (ಷೇರುದಾರರಿಗೆ ಮತ್ತು ಅನಿಯಮಿತ ರೈತರಿಗೆ ವಿಭಿನ್ನ ದರಗಳು)
- ಜಾನುವಾರುಗಳಲ್ಲಿನ ಖನಿಜಗಳ ಕೊರತೆಯನ್ನು ಪರಿಹರಿಸಲು ಉತ್ತಮ ಗುಣಮಟ್ಟದ ಖನಿಜ ಮಿಶ್ರಣವನ್ನು ಪೂರೈಸುತ್ತದೆ.
- ಜಾನುವಾರುಗಳ ಮೇವಿನ ನಿರ್ವಹಣೆಗಾಗಿ ಸುಧಾರಿತ ಮೇವಿನ ತಳಿಗಳನ್ನು ಒದಗಿಸುತ್ತದೆ
- ಮಾರುಕಟ್ಟೆಗೆ ಹೋಲಿಸಿದರೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಜಾನುವಾರು ಆಹಾರವನ್ನು ಪೂರೈಸುತ್ತದೆ.
- ಸೈಲೇಜ್ ತಯಾರಿಸಲು FPO ಮೂಲಕ ಮಾರಾಟ ಮಾಡಲು ರೈತರನ್ನು ಪ್ರೋತ್ಸಾಹಿಸುತ್ತದೆ
ಮೌಲ್ಯವರ್ಧನೆ
- ಹಾಲನ್ನು ಖೋವಾ, ಪನೀರ್, ಮೊಸರು, ಮಜ್ಜಿಗೆ, ತುಪ್ಪ, ಸಿಹಿತಿಂಡಿಗಳು, ಶ್ರೀ ಖಂಡ ಇತ್ಯಾದಿಗಳಾಗಿ ಸಂಸ್ಕರಿಸುವುದು.
- ಹತ್ತಿ, ಸೋಯಾಬೀನ್ ಮತ್ತು ತೊಗರಿ ಬೆಳೆಗಳ ಕೃಷಿ ತ್ಯಾಜ್ಯಗಳನ್ನು ಒಟ್ಟುಗೂಡಿಸಿ ಪ್ರೊಸೆಸರ್ಗೆ ಸರಬರಾಜು ಮಾಡುವುದು.
ಹೊರ ಮಾರುಕಟ್ಟೆ – ಸಂಪರ್ಕಗಳ ಮುಂದುವರಿಕೆ
- ಬ್ಲಾಕ್ ಮಟ್ಟದಲ್ಲಿ ಎಲ್ಲಾ ಡೈರಿ ಉತ್ಪನ್ನಗಳಿಗೆ ಏಕಗವಾಕ್ಷಿ ಕೇಂದ್ರಗಳನ್ನು ರಚಿಸುವುದು.
- ಇತರ ಡೈರಿಗಳು/ದೊಡ್ಡ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ.
- ರೈತರಿಗೆ ಸಾವಯವ ಗೊಬ್ಬರವನ್ನು ಒದಗಿಸುವುದು (ಎರೆಹುಳುಗಳೊಂದಿಗೆ ಎರೆಹುಳುಗೊಬ್ಬರ).
- ಯಾವುದೇ ಕ್ಷೇತ್ರದ ರೈತರ ಅಗತ್ಯಗಳ ಪೂರೈಕೆ.
ಆರಂಭದಲ್ಲಿ, ಒಂದು ಗುಂಪು (ಸಣ್ಣ ಪ್ರಮಾಣದಲ್ಲಿ ವಿವಿಧ ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ) ಆ ಹಳ್ಳಿಯಲ್ಲಿ ಖೋವಾ ತಯಾರಿಸುತ್ತಿತ್ತು. FPO ಸ್ಥಾಪನೆಯಾದ ಬಳಿಕ, ಆ ಘಟಕವನ್ನು FPOದೊಂದಿಗೆ ವಿಲೀನಗೊಳಿಸಲು ನಿರ್ಧರಿಸಲಾಯಿತು. ಹಾಲು ಮಾರಾಟದಿಂದ ಆರಂಭಿಸಿ, ಪನೀರ್, ಶ್ರೀ ಖಂಡ, ಮೊಸರು, ಮಜ್ಜಿಗೆ, ಬೆಣ್ಣೆ ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನಗಳಿಗೆ ವಿಸ್ತರಿಸಿತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದದ್ದು, ಕ್ರಮೇಣ ವ್ಯಾಪಾರ ಚಟುವಟಿಕೆಯಾಗಿ ವಿಕಸನಗೊಂಡಿತು.
ಚೌಕ 1: ಡೈರಿಯ ಉತ್ತಮ ನಿರ್ವಹಣೆಗಾಗಿ ಮಹಿಳೆಯರು ಅನುಸರಿಸುವ ಹತ್ತು ನಿರ್ವಹಣಾ ಅಭ್ಯಾಸಗಳು.
- ಮನೆಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಳಕ್ಕಾಗಿ ಕೃತಕ ಗರ್ಭಧಾರಣೆ ಹಾಗೂ ಉತ್ತಮ ತಳಿಗಳ ಹಸುಗಳನ್ನು ಸಾಕಲು ಉತ್ತೇಜನ
- ಜಾನುವಾರುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಂತುಹುಳು ನಿವಾರಕ ಮತ್ತು ಲಸಿಕಾ ವೇಳಾಪಟ್ಟಿಯನ್ನು ಅನುಸರಿಸುವುದು
- ಜಾನುವಾರುಗಳಿಗೆ ಪ್ರಾಥಮಿಕ ಚಿಕಿತ್ಸೆ (ಪಶುವೈದ್ಯ ಪ್ರಾಥಮಿಕ ಚಿಕಿತ್ಸಕರಿಂದ).
- ಮೇವು ಉತ್ಪಾದನೆ – ಮಹಿಳೆಯರಿಗೆ ಮೇವಿನ ಬೆಳೆಗಳ ಬಗ್ಗೆ ತಿಳಿದಿರುತ್ತದೆ; ಕೃಷಿ ಸಮಯ; ಸೈಲೇಜ್ ಮೌಲ್ಯವರ್ಧನೆ; ಜಾನುವಾರುಗಳಿಗೆ ಆಹಾರ ನೀಡುವ ವಿಧಾನಗಳು.
- ಜಾನುವಾರುಗಳಿಗೆ ಉಂಟಾಗಬಹುದಾದ ಖನಿಜಗಳ ಕೊರತೆಯ ಬಗ್ಗೆ ತಿಳಿದು ಅವುಗಳಿಗೆ ನಿಯಮಿತವಾಗಿ ಖನಿಜ ಮಿಶ್ರಣಗಳನ್ನು ನೀಡುವುದು.
- ಪ್ರಾಣಿಗಳ ದೇಹದ ತೂಕಕ್ಕೆ ಅನುಗುಣವಾಗಿ ಅವುಗಳ ಆಹಾರದ ಅವಶ್ಯಕತೆಗಳನ್ನು ನಿರ್ಣಯಿಸುವುದು
- ಜಾನುವಾರುಗಳಿಗೆ ಮೇವು ಹಾಕಲು ಗೋದಲಿ/ಮೇವಿನ ತೊಟ್ಟಿಯನ್ನು ಬಳಸುವ ಮೂಲಕ ಮೇವು ವ್ಯರ್ಥವಾಗುವುದನ್ನು ತಪ್ಪಿಸುವುದು
- ಕೊಟ್ಟಿಗೆಯ ಸ್ವಚ್ಛತೆಯನ್ನು ಕಾಪಾಡುವುದು. ಹವಾಮಾನ ಸ್ನೇಹಿತ ಕೊಟ್ಟಿಗೆ ನಿರ್ಮಿಸಿಕೊಳ್ಳುವುದು.
- ಸುಧಾರಿತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಹಾಲು ಕರೆಯುವ ಅಭ್ಯಾಸಗಳು
- ಜೈವಿಕ ಇಂಧನ ತಯಾರಿಕೆಗೆ ಸಗಣಿ ಮತ್ತು ಎರೆಹುಳ ಗೊಬ್ಬರ ತಯಾರಿಕೆಗೆ ಸಗಣಿಯನ್ನು ಸಮರ್ಪಕವಾಗಿ ಕೊಳೆಯಿಸುವುದು.
ಮಹಿಳಾ ಕೇಂದ್ರಿತ ವಿಧಾನ
ಇದರ ಮುಖ್ಯ ತಂತ್ರಗಳು ಮತ್ತು ಕಲಿಕೆಯನ್ನು ಮಹಿಳಾ ಕೇಂದ್ರಿತವಾಗಿಸುವುದು. ಮಹಿಳೆಯರ ಭಾಗವಹಿಸುವಿಕೆಯು ಡೈರಿ ವ್ಯವಹಾರದ ಪ್ರಕ್ರಿಯೆ ಮತ್ತು ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿದೆ. ಏಕೆಂದರೆ ಅವರು ಹಾಲುಕರೆಯುವುದರಿಂದ ಹಿಡಿದು ದನಗಳ ಒಟ್ಟಾರೆ ನಿರ್ವಹಣೆಯವರೆಗೆ ಹಸುಗಳ ಸಾಕಣೆ ನಿರ್ವಹಣೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆದ್ದರಿಂದ ಸಾಕಣೆಯ ಅಭ್ಯಾಸಗಳನ್ನು ಸುಧಾರಿಸುವುದಕ್ಕೆ ಒತ್ತು ನೀಡಲಾಯಿತು. 100ಕ್ಕೂ ಹೆಚ್ಚು ಮಹಿಳಾ ಪಶುಸಂಗೋಪಕರು ಸ್ವಚ್ಛ ಹಾಗೂ ಆರೋಗ್ಯಕರ ಹಾಲು, ಹಾಲಿನ ಉತ್ಪನ್ನಗಳನ್ನು ಉತ್ತೇಜಿಸುತ್ತಾರೆ.
ಜಾನುವಾರುಗಳನ್ನು ಪರಿಣಾಮಕಾರಿಯಾಗಿ ಸಾಕುವುದರೊಂದಿಗೆ ಆದಾಯವನ್ನು ಹೆಚ್ಚಿಸಲು ನಿರ್ವಹಣಾ ಅಭ್ಯಾಸಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. (ನೋಡಿ ಚೌಕ 1).
ಆರಂಭದಲ್ಲಿ ಅಂದರೆ 2016ರಲ್ಲಿ ಕೇವಲ 40 ಮಹಿಳಾ ರೈತರು ಭಾಗಿಯಾಗಿದ್ದರು. 2020 ರ ಕೊನೆಯಲ್ಲಿ, 100 ಕ್ಕೂ ಹೆಚ್ಚು ಮಹಿಳೆಯರು BAIF ನ ಜಾನುವಾರು ಸಾಕಣೆ ಕಾರ್ಯಕ್ರಮದಿಂದ ಪಡೆದ ಕೌಶಲ್ಯಗಳ ಮೂಲಕ ಕಲಿತ ಸರಿಯಾದ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ.
ಕೋಷ್ಟಕ 2: ಎಫ್ಪಿಸಿ ಮಾರಾಟ ಮಾಡುವ ಹಾಲಿನ ಉತ್ಪನ್ನಗಳು
| ಕ್ರಮ ಸಂಖ್ಯೆ | ವಿವರಗಳು |
ಉತ್ಪಾದನೆ (ಕೆಜಿಗಳಲ್ಲಿ) |
ದರ | ಮೊತ್ತ |
| 1 | ಖೋವಾ ತಯಾರಿಕೆ | 2464.89 | 291.59 | 7,18,729.90 |
| 2 | ಪನೀರ್ | 5338 | 267.91 | 14,30,100.26 |
| 3 | ಪೇಡ | 1328.7 | 272.80 | 3,62,473.76 |
| 4 | ಬೆಣ್ಣೆ | 37.7 | 441.91 | 16,660.00 |
| 5 | ಬಾಸುಂಡಿ | 133 | 167.59 | 22,289.81 |
| 6 | ತುಪ್ಪ | 109.33 | 441.63 | 48,283.14 |
| 7 | ಮೊಸರು | 64.79 | 25.00 | 1,619.75 |
| 8 | ಕ್ರೀಂ | 815.83 | 160.61 | 1,31,029.11 |
| 9 | ರಬ್ಡಿ | 87 | 250.00 | 21,750.00 |
| 10 | ಡೈರಿಗೆ ಮಾರಾಟ | 6352 | 42.64 | 2,70,849.28 |
| 11 | ಮನೆಯಿಂದ ಮನೆಗೆ | 32203 | 44.77 | 14,41,623.52 |
| ಒಟ್ಟು | 44,65,408.53 | |||
| ಒಟ್ಟು ವೆಚ್ಚ | 43,39,377.53 | |||
| ಲಾಭ | 1,26,031.00 | |||
ಸುಮಾರು 100 ಮಹಿಳೆಯರಿಗೆ ಪಶುಸಂಗೋಪನೆಯ ಅಭ್ಯಾಸಗಳ ಕುರಿತು “ಮಹಿಳಾ ಪಶು ಪಾಲಕ್” ಎಂದು ತರಬೇತಿ ನೀಡಲಾಗಿದೆ. ಮಹಿಳೆಯರು ಎರೆಹುಳು ಗೊಬ್ಬರ ತಯಾರಿಕೆ, ಬಯೋಗ್ಯಾಸ್ ಬಳಕೆ, ಪ್ರಾಥಮಿಕ ಚಿಕಿತ್ಸೆ (ಪ್ರಾಥಮಿಕ ಚಿಕಿತ್ಸಕರು ಪಶಸಂಗೋಪನೆ), ಸ್ವಚ್ಛ ಹಾಲು ಕರೆಯುವ ಅಭ್ಯಾಸಗಳು, ಜಾನುವಾರು ಮೇವು ನಿರ್ವಹಣೆ, ಮೇವಿನ ಮೌಲ್ಯವರ್ಧನೆ, ಹವಾಮಾನ ಸ್ನೇಹಿ ಕೊಟ್ಟಿಗೆ ನಿರ್ಮಾಣ, ತಳಿ ಸಂವರ್ಧನೆ ಸೇವೆಗಳ ಕುರಿತು ಅಭ್ಯಾಸ ಮಾಡುತ್ತಾರೆ. 80% ಕ್ಕಿಂತ ಹೆಚ್ಚು ಕುಟುಂಬಗಳು ಜಾನುವಾರು ಸಾಕಣೆ ವೆಚ್ಚವನ್ನು ಉಳಿಸಿವೆ.
ಮೂರು ಸ್ವಸಹಾಯ ಗುಂಪುಗಳು ಹಾಗೂ ಮಹಿಳೆಯರು ಎರೆಹುಳು ಗೊಬ್ಬರ ತಯಾರಿಕೆ ಮಾಡುತ್ತಿದ್ದು, ಇದರಿಂದಾಗಿ ಉತ್ತಮ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ.
ರೈತರ ಜೀವನೋಪಾಯದ ಮೇಲೆ ಪರಿಣಾಮ
ಎಫ್‌ಪಿಒ ವಿಭಿನ್ನ ಸಂದರ್ಭಗಳಲ್ಲಿ ಹಲವು ರೈತರ ಬದುಕನ್ನು ಇತ್ಯಾತ್ಮಕವಾಗಿ ಬದಲಿಸಿದೆ. ಈ ಕೆಳಗಿನ ಮಾಹಿತಿಯು ಮೂರು ವರ್ಷಗಳಲ್ಲಿ ರೈತರು ಹೇಗೆ ಈ ಸೇವೆಗಳ ಪ್ರಯೋಜನವನ್ನು ಪಡೆದಿದ್ದಾರೆ ಎಂಬುದನ್ನು ತಿಳಿಸುತ್ತದೆ.
- 55 ರೈತರು ಎಫ್‌ಪಿಸಿಗೆ ಹಾಲು ಸರಬರಾಜು ಮಾಡಿದ್ದು, ಎರಡು ವರ್ಷಗಳಲ್ಲಿ ತಮ್ಮ ಆದಾಯವನ್ನು 15% ಹೆಚ್ಚಿಸಿಕೊಂಡಿದ್ದಾರೆ.
- 137ಕ್ಕೂ ಹೆಚ್ಚು ರೈತರು ಮೇವಿನ ವೆಚ್ಚವನ್ನು ಉಳಿಸಿದ್ದಾರೆ.
- 12 ಮಂದಿ ರೈತರು ಮತ್ತು 4 ಸ್ವಸಹಾಯ ಗುಂಪುಗಳು ಎರಡು ವರ್ಷಗಳಲ್ಲಿ ತಮ್ಮ ಆದಾಯವನ್ನು 20% ಹೆಚ್ಚಿಸಿಕೊಂಡಿದ್ದಾರೆ.
- 179 ರೈತರು ಗ್ರಾಹಕರಾಗಿದ್ದರು.
- ಪೂರೈಕೆದಾರರು ತಮ್ಮ ಆದಾಯವನ್ನು ಕನಿಷ್ಠ 10% ಹೆಚ್ಚಿಸಿಕೊಂಡರು.
- 194 ರೈತರು ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಪ್ರಯೋಜನ ಪಡೆದಿದ್ದಾರೆ; ಶೇ.15ರಷ್ಟು ಹಸುಗಳ ನಿರ್ವಹಣಾ ವೆಚ್ಚ ಉಳಿತಾಯವಾಗಿದೆ.
- ಎಫ್‌ಪಿಒ ಬ್ರಿಕೆಟ್ ತಯಾರಕರಿಗೆ ಹತ್ತಿ ತ್ಯಾಜ್ಯವನ್ನು ಪೂರೈಸಿದೆ. ಇದರಿಂದ 50 ಕ್ಕೂ ಹೆಚ್ಚು ರೈತರು 5-7% ಹೆಚ್ಚುವರಿ ಆದಾಯವನ್ನು ಪಡೆದಿದ್ದಾರೆ.
- ಎಫ್‌ಪಿಒ ಬ್ಲಾಕ್‌ನ 20 ಕ್ಕೂ ಹೆಚ್ಚು ಷೇರುದಾರರಿಗೆ ಹಾಲನ್ನು ಪೂರೈಸಿದೆ. ಇದರಿಂದಾಗಿ ಪ್ರತಿ ಕುಟುಂಬವು ಇತರರಿಂದ ಹಾಲನ್ನು ಖರೀದಿಸಲು ಪ್ರತಿದಿನ ತಗಲುತ್ತಿದ್ದ ವೆಚ್ಚದಲ್ಲಿ 10% ಉಳಿಸುತ್ತದೆ.
ಮಾರ್ಕೆಟಿಂಗ್
SKDFPCL, ತನ್ನದೇ ಆದ ಶ್ರೀ ಕಾಮಧೇನು ಎನ್ನುವ ಬ್ರಾಂಡ್ ಸ್ಥಾಪಿಸಿದೆ. ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಗುಣಮಟ್ಟದ ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್ ಜೊತೆಗೆ ತಮ್ಮ ಬ್ರ್ಯಾಂಡ್ ಅನ್ನು ಸ್ಥಾಪಿಸುವುದು ಬಹಳ ಅಗತ್ಯವಾಗಿತ್ತು. ಈಗ, SKDFPCL ಕಟೋಲ್ ನಗರದಲ್ಲಿ ತನ್ನನ್ನು ವಿಸ್ತರಿಸಿಕೊಂಡಿದೆ. ಮುಂಬರುವ ವರ್ಷಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸಲು ಯೋಜಿಸಲಾಗಿದೆ. ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. SKDFPCL ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. (ನೋಡಿ ಕೋಷ್ಟಕ 2)
ಎದುರಾಗಲಿರುವ ಸವಾಲುಗಳು ಮತ್ತು ಮುಂದಿನ ಹಾದಿ
ಹಲವಾರು ಸವಾಲುಗಳು ಮುಂದಿವೆ. ಶ್ರೀ ಕಾಮಧೇನು ಡೈರಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎದುರಿಸುತ್ತಿರುವ ಪ್ರಮುಖ ಸವಾಲು ಆರ್ಥಿಕ ಮತ್ತು ಮಾರುಕಟ್ಟೆಯ ವಿಸ್ತರಣೆಯ ಮಿತಿ. ಆದರೂ, ಇದು ನಿರಂತರವಾಗಿ ವಿವಿಧ ಪ್ರದರ್ಶನಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ.
ಡೈರಿ ವ್ಯವಹಾರದ ಸಾಮರ್ಥ್ಯದ ಬಗ್ಗೆ ರೈತರು ಸಂಪೂರ್ಣವಾಗಿ ಅರಿತಿದ್ದಾರೆ ಎನ್ನುವುದು ಅತ್ಯಂತ ತೃಪ್ತಿಕರ ಸಂಗತಿ. ಅವರು ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
FPO ವಿಸ್ತರಣೆಯನ್ನು ಎದುರುನೋಡುತ್ತಿದೆ. ವಿದರ್ಭದ ಹತ್ತಿರದ ಜಿಲ್ಲೆಗಳಿಗೆ ಎಫ್‌ಪಿಒ ವ್ಯವಹಾರವನ್ನು ವಿಸ್ತರಿಸುವ ದೃಷ್ಟಿಯಿಂದ ವಿಸ್ತರಣಾ ಕಾರ್ಯತಂತ್ರವನ್ನು ಒಳಗೊಂಡಿದೆ; ರೈತರಿಗೆ ವಿಸ್ತರಣಾ ಸೇವೆಗಳನ್ನು ಒದಗಿಸುವುದು; ರಾಜಧಾನಿ ನಗರಗಳಲ್ಲಿ ಆದಷ್ಟು ಬೇಗ ಸ್ವಯಂ ಮಳಿಗೆಗಳನ್ನು ತೆರೆಯುವುದು; PMFME, SMART, PoCRA ಮತ್ತಿತರ ಸರ್ಕಾರಿ ಯೋಜನೆಗಳು ನೀಡುವ ಅವಕಾಶಗಳನ್ನು ಪಡೆದುಕೊಳ್ಳುವುದು.
Amar Raipure District Program Officer, BAIF C/o: Amol Pethe House, Uttam City, Ward No. 01, Hinganghat Road, Near Grampanchayat, Inzapur, At. Inzapur, Post. Borgaon (Meghe), Ta. Dist. Wardha - 442001, Maharashtra, India E-mail: amarraipure2908@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೪ ; ಡಿಸಂಬರ್ ೨೦೨೩



