ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿರುವ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿಯ ಬಳಕೆಯನ್ನು ಆರಂಭಿಸುವುದರಿಂದ ಜೀವನೋಪಾಯಗಳನ್ನು ಹೆಚ್ಚಿಸಬಹುದಲ್ಲದೆ ಪಳೆಯುಳಿಕೆ ಇಂಧನಗಳ ಮೇಲಿನ ವೆಚ್ಚವು ಕಡಿಮೆಯಾಗುತ್ತದೆ. ಸೌರಶಕ್ತಿಯ ಬಳಕೆಯಿಂದಾಗುವ ಪರಿಸರದ ಪ್ರಯೋಜನಗಳು ಹಲವು. ಲಡಾಕ್ ಪ್ರಕರಣವು ಇದನ್ನು ಎತ್ತಿತೋರುತ್ತದೆ.
ಲಡಾಖ್ ಪ್ರಪಂಚದ ಅತ್ಯಂತ ಶೀತಪ್ರದೇಶ ಮತ್ತು ಎತ್ತರದ ಜನವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ ಸೂರ್ಯನ ಬೆಳಕಿನಂತಹ ನೈಸರ್ಗಿಕ ಸಂಪನ್ಮೂಲವು ಹೇರಳವಾಗಿದೆ. ಈ ಪ್ರದೇಶವು ವರ್ಷದಲ್ಲಿ 320 ಕ್ಕೂ ಹೆಚ್ಚು ಬಿಸಿಲಿನ ದಿನಗಳನ್ನು ಪಡೆಯುತ್ತದೆ. ವಾರ್ಷಿಕ ಸೌರ ವಿಕಿರಣ 2149kWh/m2, ಸರಾಸರಿ ಸುತ್ತುವರಿದ ತಾಪಮಾನವು ಅಪರೂಪವಾಗಿ 27 ಡಿಗ್ರಿ ಸೆಲ್ಸಿಯಸ್ ಮೀರುತ್ತದೆ. ಈ ಕಾರಣಗಳು ಈ ಪ್ರದೇಶವನ್ನು ಸೌರಶಕ್ತಿ ಉತ್ಪಾದನೆಗೆ, ಅದರಲ್ಲೂ ವಿಶೇಷವಾಗಿ ದ್ಯುತಿವಿದ್ಯುಜ್ಜನಕ ಮತ್ತು ಉಷ್ಣ ಶಕ್ತಿ ಉತ್ಪಾದನೆಗೆ ಸೂಕ್ತವಾಗಿಸುತ್ತದೆ.
ಲಡಾಖ್‌ನ ಲಾಟೂ ಭಾರತದ ಗಡಿಯಲ್ಲಿರುವ ಕೊನೆಯ ಗ್ರಾಮ. ಇದು 1967 ರಲ್ಲಿ ನಿರಾಶ್ರಿತರಿಗೆ ಆಶ್ರಯ ಒದಗಿಸಿತ್ತು. ಗ್ರಾಮದಲ್ಲಿ ಸಾಕಷ್ಟು ಕೃಷಿಯೋಗ್ಯ ಭೂಮಿ ಇದೆ. ಆದರೆ ನೀರಾವರಿಗೆ ಅವಲಂಬಿಸಿರುವ ನೀರಿನ ಮೂಲವು ಪಾಕಿಸ್ತಾನದಲ್ಲಿದೆ. ಈ ಪ್ರದೇಶವು ಶಿಂಗೋ ನಲ್ಲಾ ನದಿಯಿಂದ 700 ಅಡಿ ಎತ್ತರದಲ್ಲಿದೆ. ವಿದ್ಯುತ್ ಅಥವಾ ಡೀಸೆಲ್ ಆಧಾರಿತ ನೀರಿನ ಪಂಪ್ ಸೆಟ್‌ಗಳ ಮೂಲಕ ಎತ್ತಲಾಗುವ ಚಿಲುಮೆಯ ನೀರು ಈ ಪ್ರದೇಶದ ಏಕೈಕ ನೀರಿನ ಮೂಲ. ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಜೊತೆಗೆ ಚಿಲುಮೆಯ ನೀರಿನ ಅತಿಯಾದ ಬಳಕೆಯು ನೀರಿನ ಕೊರತೆಗೆ ಕಾರಣವಾಗಿದೆ. ಅಲ್ಲದೆ, ನದಿಯಿಂದ ನೀರನ್ನು ಎತ್ತಲು ವಿದ್ಯುತ್ ಅಥವಾ ಡೀಸೆಲ್ ಆಧಾರಿತ ಪಂಪ್‌ಗಳ ಬಳಕೆಯು ಭಾರಿ ವಿದ್ಯುತ್ ಬಿಲ್‌ಗಳಿಗೆ ಕಾರಣವಾಗಿದೆ. ಇಂತಹ ಹಿನ್ನಲೆಯಲ್ಲಿ ಲಡಾಖ್ ಅಟಾನಮಸ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ ಕಾರ್ಗಿಲ್ (LAHDC) ಮತ್ತು ಕಾರ್ಗಿಲ್ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (KREDA) ಒಟ್ಟಾಗಿ ಸೋಲಾರ್ ಸಬ್ಮರ್ಸಿಬಲ್ ವಾಟರ್ ಪಂಪ್ ಬಳಸಿ ನೀರು ಎತ್ತುವ ವ್ಯವಸ್ಥೆಯ ಮಾದರಿ ಯೋಜನೆಯನ್ನು ಪ್ರಾರಂಭಿಸಿತು.
ಕೈಗೊಂಡ ಉಪಕ್ರಮ
ಯೋಜನಾ ಪ್ರದೇಶದಲ್ಲಿ ಏಪ್ರಿಕಾಟ್ ಮರಗಳು, ಆಲ್ಫಾಲ್ಫಾ, ಕೈ ತೋಟಗಳು ಇತ್ಯಾದಿಗಳನ್ನು ಹೊಂದಿರುವ ಸುಮಾರು 23 ಎಕರೆ ಭೂಮಿ ಬರ ಎದುರಿಸುತ್ತಿದೆ. ಸರಿಸುಮಾರು 15 ಎಕರೆ ಭೂಮಿ, ಕೃಷಿಯೋಗ್ಯವಾಗಿದ್ದರೂ ಅಲ್ಲಿ ಏನೂ ಬೆಳೆಯುತ್ತಿಲ್ಲ. ಯಾವುದೇ ಹೆಚ್ಚುವರಿ ವೆಚ್ಚ ಮತ್ತು ಪ್ರತಿಕೂಲ ಪರಿಸರ ಪರಿಣಾಮಗಳಿಲ್ಲದೆ ನೀರಾವರಿಗಾಗಿ ನೀರನ್ನು ಎತ್ತುವ ಸೋಲಾರ್ ನೀರಿನ ಪಂಪ್ ಬಳಸಿ ಈ ಪ್ರದೇಶದಲ್ಲಿ ಬೆಳೆ ಬೆಳೆಸಲಾಗುತ್ತಿದೆ.
ಭೂಮಿಗೆ ನೀರುಣಿಸಲು ಸೋಲಾರ್ ವಾಟರ್ ಲಿಫ್ಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಪಂಪಿಂಗ್ ವ್ಯವಸ್ಥೆಯು 41 ಅಶ್ವಶಕ್ತಿಯ ಸಂಪೂರ್ಣ ಸೌರ-ಆಧಾರಿತ ಸಬ್ಮರ್ಸಿಬಲ್ ಪಂಪ್ ಹೊಂದಿದೆ. ಈ ವ್ಯವಸ್ಥೆಯು ಪಂಪಿಂಗ್ ವ್ಯವಸ್ಥೆಯನ್ನು ಚಲಾಯಿಸಲು 50 ಕಿಲೊವಾಟ್ ಸಾಮರ್ಥ್ಯದ ಸೌರ ಸ್ಥಾವರವನ್ನು ಒಳಗೊಂಡಿದೆ. ಪಂಪ್ ಅನ್ನು ನದಿಯ ದಡದಲ್ಲಿ 3.35ಎಂ x 2.10ಎಂ x 3.65ಎಂ ಗಾತ್ರದ ಜಾಕ್ ವೆಲ್‌ನಲ್ಲಿ ಇರಿಸಲಾಗುತ್ತದೆ. 140ಎಂಎಂ ವ್ಯಾಸದ ವಿತರಣಾ ಪೈಪ್ ಮೂಲಕ ನೀರನ್ನು ಎತ್ತಲಾಗುತ್ತದೆ. ಪೈಪಿನ ಉದ್ದ ಸುಮಾರು 360 ಮೀಟರ್. ಈ ವ್ಯವಸ್ಥೆಯು 130-160 ಮೀಟರ್ ವ್ಯಾಪ್ತಿಯನ್ನು ಒಳಗೊಳ್ಳುತ್ತಿದೆ. ಆರು ಗಂಟೆಗಳಲ್ಲಿ ಒಂದು ಲಕ್ಷ ಲೀಟರ್ ನೀರನ್ನು ಎತ್ತಲು ಸಹಾಯ ಮಾಡುತ್ತದೆ.
ಈ ಸೌರ ನೀರಿನ ಪಂಪ್ 2019 ರಿಂದ ಇಲ್ಲಿಯವರೆಗೆ, ಬೇಸಿಗೆಯ ತಿಂಗಳುಗಳಾದ ಏಪ್ರಿಲ್ ನಿಂದ ನವೆಂಬರ್ ವರೆಗೆ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ವ್ಯವಸ್ಥೆಯಿಂದ ತುಂಬಾ ಸಂತೋಷವಾಗಿದೆ. ರೈತರು ತಮ್ಮ ಸ್ವಂತ ಬಳಕೆಗಾಗಿ ಮತ್ತು ಮಾರುಕಟ್ಟೆಗಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದು ಉತ್ತಮ ಆದಾಯಕ್ಕೆ ಕಾರಣವಾಗಿದೆ.
ಕೃಷಿ ಮಾಡದೆ ಬಿಟ್ಟಿದ್ದ ಮತ್ತು ಬರ ಪೀಡಿತ ಭೂಮಿಗೆ ನೀರಾವರಿ ಒದಗಿಸುವುದರ ಜೊತೆಗೆ, ಸೌರ ನೀರಿನ ಪಂಪ್ ಉದ್ಯೋಗವನ್ನು ಸೃಷ್ಟಿಸಿದೆ. ಹಳ್ಳಿಯಿಂದ ಇಬ್ಬರನ್ನು ಆಯ್ಕೆ ಮಾಡಿ ಪಂಪ್‌ಗಳ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿದೆ. ಮಾಸಿಕ ಆಧಾರದ ಮೇಲೆ ಪಂಪ್ ನಿರ್ವಹಣೆಗೆ ಅವರನ್ನು ನೇಮಿಸಲಾಗಿದೆ. ಇದಲ್ಲದೆ, ಕಂಪನಿಯು ಪ್ರತಿ ವರ್ಷ ತಮ್ಮ ತಂಡವನ್ನು ವಾರ್ಷಿಕ ತಪಾಸಣೆಗೆ ಕಳುಹಿಸುವುದಲ್ಲದೆ, ಅನಿರೀಕ್ಷಿತ ಸಮಸ್ಯೆ ಎದುರಾದಾಗ ಸೇವೆಗಳನ್ನು ಒದಗಿಸುತ್ತದೆ. ಭವಿಷ್ಯದ ಅಗತ್ಯಕ್ಕಾಗಿ ಕಂಪನಿಯು ಕೆಲವು ಬಿಡಿಭಾಗಗಳನ್ನು ಉಚಿತವಾಗಿ ಒದಗಿಸುತ್ತದೆ. ಪ್ರಸ್ತುತ ಪಂಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಚಳಿಗಾಲದಲ್ಲಿ ಕೃಷಿ ಉತ್ಪಾದನೆ ಇಲ್ಲದ ಕಾರಣ, ನೀರನ್ನು ಎತ್ತುವ ಅಗತ್ಯವಿಲ್ಲ. ಆದರೆ ಸರ್ಕಾರವು ಚಳಿಗಾಲದಲ್ಲಿ ಸೌರ ಪಂಪ್ ಅನ್ನು ನಿಷ್ಕ್ರಿಯವಾಗಿ ಬಿಡುವ ಬದಲು, ಹರ್ ಘರ್ ಜಲ ಜೀವನ್ ಅಭಿಯಾನ ಸಾಧಿಸಲು ಅದನ್ನು ಬಳಸಲು ಯೋಜಿಸಿದೆ. ಜೊತೆಗೆ, ತಾಂತ್ರಿಕ ಮತ್ತು ಆರ್ಥಿಕ ವಿಶ್ಲೇಷಣೆಯನ್ನು ನಡೆಸಿದ್ದು, ಸೌರಶಕ್ತಿಯ ಬಳಕೆಯು ಯಾವುದೇ ಇತರ ಶಕ್ತಿಯ ಮೂಲಗಳಿಗಿಂತ ಅಗ್ಗವಾಗಿದೆ ಎಂದು ಕಂಡುಹಿಡಿದಿದೆ. ಸೌರಶಕ್ತಿಯು ಈ ಪ್ರದೇಶವು ಇಂಗಾಲ ತಟಸ್ಥತೆಯತ್ತ ಸಾಗಲು ಸಹಾಯ ಮಾಡುತ್ತದೆ.
ಈ ಉಪಕ್ರಮದ ಯಶಸ್ಸಿನೊಂದಿಗೆ, ಲಡಾಖ್‌ನ ಹಳ್ಳಿಗಳಾದ ಡಾರ್ಗೋ, ಸಂತಕ್‌ಚನ್, ಅಡುಲ್‌ಗುಂಡ್ ಮತ್ತು ಛಾನಿಗುಂಡ್‌ಗಳಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಸೌರ ನೀರಿನ ಪಂಪ್‌ಗಳ ಜೊತೆಗೆ, ಸೌರ ವಾಟರ್ ಹೀಟರ್‌ಗಳು, ಸೌರ ಹಸಿರುಮನೆಗಳು, ಸೌರ ಪ್ಯಾನಲ್ ಅಳವಡಿಸಿದ ಮನೆಗಳು (ಸೋಲಾರ್ ಪ್ಯಾಕ್ ಹೌಸಸ್), ಸೌರ ಬೀದಿ ದೀಪಗಳಂತಹ ಇತರ ಸೌರ ಉತ್ಪನ್ನಗಳು ಸಹ ಈ ಪ್ರದೇಶದಲ್ಲಿ ಗಮನ ಸೆಳೆಯುತ್ತಿವೆ. ಲಡಾಖ್‌ನ ನಿರಂತರ ಸಮೃದ್ಧಿಯು ಸೌರಶಕ್ತಿಯಂತಹ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಅವಲಂಬಿಸಿರುತ್ತದೆ. ಇದು ಆದಾಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚುವರಿ ಅವಕಾಶಗಳು, ಪರಿಸರ ಪ್ರಯೋಜನಗಳು ಮತ್ತು ಉತ್ತಮ ಜೀವನ ಮಟ್ಟವನ್ನು ನೀಡುತ್ತದೆ.
ಪರಾಮರ್ಶನಗಳು
References
Lohan, S. K., & Sharma, S., Present status of renewable energy resources in Jammu and Kashmir State of India, 2012, Renewable and Sustainable Energy Reviews, 16(5), 3251–3258.
Bilques Fatima
Doctoral Research Scholar
Department of Economic Studies
Central University of Punjab, Bathinda-151401
E-mail: bilques.fatima93@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೨ ; ಜೂನ್ ೨೦೨೩



