ನೈಸರ್ಗಿಕ ಕೃಷಿ ಮಿಷನ್ನ ಯಶಸ್ಸಿಗೆ ಕೃಷಿ ಉತ್ಪಾದಕರ ಸಂಸ್ಥೆಗಳು(FPO)


ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿನ ಅಸಮರ್ಥತತೆಗೆ ಪ್ರತಿಕ್ರಿಯೆಯಾಗಿ ಮತ್ತು ರೈತರು, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಸಾಧ್ಯವಾಗುವಂತೆ, ದೊಡ್ಡ ಪ್ರಮಾಣದಲ್ಲಿ ಆರ್ಥಿಕತೆಯಿಂದಾಗಿ, FPO ಗಳನ್ನು ಉತ್ತೇಜಿಸಲಾಗುತ್ತಿದೆ. FPO ಗಳನ್ನು ರಚಿಸುವ ಜೊತೆಗೆ, ಅವುಗಳನ್ನು ಆರ್ಥಿಕವಾಗಿ ಬೆಂಬಲಿಸುವುದು ಹಾಗೂ ಅವುಗಳನ್ನು ಸಬಲೀಕರಣಗೊಳಿಸುವುದು ಸಹ ಮುಖ್ಯ. ಇದರಿಂದ ಅವು ದೀರ್ಘಕಾಲದವರೆಗೆ ಉಳಿಯುತ್ತವೆ.


2022 ರ ಅಂತ್ಯದ ವೇಳೆಗೆ ಭಾರತ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ (NMNF) ಪ್ರಾರಂಭಿಸಿದಾಗ, ಕಡಿಮೆ ಬಾಹ್ಯ ಒಳಸುರಿಯುವಿಕೆ ಸುಸ್ಥಿರ ಕೃಷಿಯ (LEISA) ದಶಕಗಳ ಅಭಿಯಾನದ ಹೋರಾಟವನ್ನು ಗುರುತಿಸಲಾಯಿತು. ಇದಕ್ಕೆ ಬಹುಶಃ 3 ಕಾರಣಗಳಿದ್ದವು – ಎ) ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ವಿಶಿಷ್ಟ ರೈತ ನಾಯಕ ಶ್ರೀ ಸುಭಾಷ್ ಪಾಲೇಕರ್ ಅವರು ಶೂನ್ಯ ಬಜೆಟ್ ನೈಸರ್ಗಿಕ ಕೃಷಿ (ZBNF, https://zbnf.org.in) ಬಗ್ಗೆ ರಾಷ್ಟ್ರೀಯ/ಜಾಗತಿಕ ಮಟ್ಟದಲ್ಲಿ ಚರ್ಚಿಸುತ್ತಿದ್ದಾರೆ. ಅವರು ಖರೀದಿಸುವ ಅಗತ್ಯವಿಲ್ಲದ, ಜಮೀನಿನಲ್ಲೇ ತಯಾರಿಸಿಕೊಳ್ಳಬಹುದಾದ ಸಾವಯವ ಒಳಹರಿವುಗಳಿಗೆ ಒತ್ತು ನೀಡಿದರು. ಸಾವಯವ ಎರೆಹುಳ ಗೊಬ್ಬರವು ಖರೀದಿಸಲು ದುಬಾರಿ. ಭಾರತದ ರೈತರಲ್ಲಿ ಬಹುತೇಕರು (80%) ಸಣ್ಣ ಹಾಗೂ ಅತಿಸಣ್ಣ ರೈತರಾಗಿದ್ದು ಅವರಿಗಿದು ಸೂಕ್ತವಲ್ಲ ಎಂದು ವಾದಿಸಿದರು. ಬಿ) ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕೃಷಿ) ಶ್ರೀ ಟಿ. ವಿಜಯ್ ಕುಮಾರ್ (ಐಎಎಸ್, ನಿವೃತ್ತ) ಅವರ ಸಮರ್ಥ ನಾಯಕತ್ವದಲ್ಲಿ ಆಂಧ್ರಪ್ರದೇಶ ಸಮುದಾಯ ನೈಸರ್ಗಿಕ ಕೃಷಿ (https://apcnf.in) ಕಾರ್ಯಕ್ರಮದಡಿಯಲ್ಲಿ, 2022 ರ ವೇಳೆಗೆ 6 ಮಿಲಿಯನ್ ರೈತರಿಗೆ ಮತ್ತು 8 ಮಿಲಿಯನ್ ಹೆಕ್ಟೇರ್‌ಗಳಿಗೆ ZBNF ತಂತ್ರವನ್ನು ಹರಡಲಾಯಿತು. ಇದು ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಇಂಡೋ ಜರ್ಮನ್ ಗ್ಲೋಬಲ್ ಅಕಾಡೆಮಿ ಫಾರ್ ಅಗ್ರೋಇಕಾಲಜಿ, ರಿಸರ್ಚ್ ಅಂಡ್ ಲರ್ನಿಂಗ್ (IGGAARL) ಪ್ರಾರಂಭಿಸಲು ಕಾರಣವಾಯಿತು (ಫುಚ್ಸ್, 2022). ಸಿ) ನಗರಗಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು ಮತ್ತು ಕೃಷಿ-ರಾಸಾಯನಿಕಗಳು ಮತ್ತು ಅತಿ ಒಳಸುರಿಯುವಿಕೆ ಬಳಕೆಯ ಕೃಷಿಯ ಕಾರ್ಯಸಾಧ್ಯತೆಯ ಕುರಿತು ರಾಷ್ಟ್ರೀಯ ಚರ್ಚೆ, ಸಾವಯವ ಅಥವಾ ಕೀಟನಾಶಕ-ಮುಕ್ತ ಬೆಳೆ ಉತ್ಪನ್ನಗಳ ರಫ್ತಿಗೆ ಹೆಚ್ಚುತ್ತಿರುವ ಬೇಡಿಕೆ, ಇವೆಲ್ಲವೂ  ಕೃಷಿಯನ್ನು ಕಾರ್ಯಸಾಧ್ಯವಾಗಿಸುತ್ತದೆ.

ಭಾರತದಲ್ಲಿ ಸಾವಯವ ಉತ್ಪಾದನೆಯು ಸುಮಾರು 20 ವರ್ಷಗಳ ಹಿಂದೆ ಆರಂಭವಾಗಿದ್ದು, 2023 ರ ಹೊತ್ತಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯನ್ನು ಒಳಗೊಂಡಿದೆ. ಆಂಧ್ರಪ್ರದೇಶದಲ್ಲಿ ನೈಸರ್ಗಿಕ ಕೃಷಿಯ ತ್ವರಿತ ಬೆಳವಣಿಗೆ ಅದ್ಭುತವಾಗಿದೆ. ಕಡಿಮೆ ವೆಚ್ಚ ಮತ್ತು ಸಣ್ಣ ರೈತರು ಇದರತ್ತ ಆಕರ್ಷಿತರಾಗಿರುವುದರಿಂದ ಇದು ಸಾಧ್ಯವಾಗಿರಬಹುದು. ಜೊತೆಗೆ ಪರಿಸರ/ಪುನರುತ್ಪಾದಕ ಕೃಷಿಯನ್ನು ಉತ್ತೇಜಿಸಲು ಸಹಾಯ ಮಾಡಲು ವಿಧವೆಯರಾದ ರೈತರಿಗೆ ಹೆಕ್ಟೇರ್‌ಗೆ ರೂ. 10,000 ಸಬ್ಸಿಡಿಯಂತಹ ಪ್ರೋತ್ಸಾಹ ಧನವೂ ಇದಕ್ಕೆ ಕಾರಣವಾಗಿರಬಹುದು.

ನೈಸರ್ಗಿಕ ಪ್ರಮಾಣೀಕರಣ ಮತ್ತು ಪರೀಕ್ಷೆ

ನೈಸರ್ಗಿಕ ಕೃಷಿಯಲ್ಲಿ ಕೃಷಿ ವೆಚ್ಚವು ತಗ್ಗುವುದು ಸಣ್ಣ ರೈತರು ಇದರೆಡೆಗೆ ಆಕರ್ಷಿತರಾಗಲು ಮುಖ್ಯ ಕಾರಣ. ಹೀಗಿದ್ದರೂ, ಇದರ ಕಾರ್ಯಸಾಧ್ಯತೆ ಅಥವಾ ಸುಸ್ಥಿರತೆಯು ಹೆಚ್ಚಿರುವ ಕೂಲಿ ವೆಚ್ಚ/ಶ್ರಮ ಹಾಗೂ ಬೆಲೆ ಹೆಚ್ಚಾಗದಿರುವುದರ ನಡುವಿನ ತಂತಿ ಮೇಲಿನ ನಡಿಗೆಯಾಗಿದೆ. ಸಸ್ಯಶಾಸ್ತ್ರೀಯ ಸಾರಗಳನ್ನು ಸಿದ್ಧಪಡಿಸುವುದು, ಹ್ಯೂಮಸ್‌ ತಯಾರಿಕೆ, ಜಾನುವಾರು ಸಾಕಣೆ ಇವೆಲ್ಲ ಶ್ರಮದಾಯಕ ಕೆಲಸಗಳಾಗಿದ್ದು, ಇಂದು ಕೂಲಿಯಾಳುಗಳ ವೆಚ್ಚ ಅಧಿಕವಾಗಿದ್ದು ರೈತರು ಇದರಿಂದಾಗಿ ನಿರಾಶರಾಗಿದ್ದಾರೆ. ಸಾವಯವ ಪದಾರ್ಥಗಳಿಗೆ ರಫ್ತು ಕ್ಷೇತ್ರದಲ್ಲಿ, ನಗರ ಪ್ರದೇಶಗಳಲ್ಲಿ 20-40% ಹೆಚ್ಚುವರಿ ಬೆಲೆಯಿದೆ. ನೈಸರ್ಗಿಕ ಕೃಷಿಗೂ ಸಹ PGS ಪ್ರಮಾಣೀಕರಣದ ಮೂಲಕ ಅಂತಹ ಉತ್ತಮ ಬೆಲೆ ಸಿಕ್ಕರೆ ಅದಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಕೆಲವು ಖರೀದಿದಾರರು ಸ್ವಯಂಪ್ರೇರಣೆಯಿಂದ APCNF ಬೆಳೆಗಳಿಗೆ 10% ಹೆಚ್ಚುವರಿ ಬೆಲೆಯನ್ನು ನೀಡುತ್ತಾರೆ, ಉದಾಹರಣೆಗೆ ತಿರುಪತಿ ತಿರುಮಲ ದೇವಸ್ಥಾನಂ (TTD) ಟ್ರಸ್ಟ್. ಆದರೆ ದೇಶಾದ್ಯಂತ ಇದು ಸಾಧ್ಯವಾಗುವಂತೆ, APCNF ನಲ್ಲಿ ಮಾಡಿದಂತೆ ರಾಷ್ಟ್ರೀಯವಾಗಿ PGS ಬಲಪಡಿಸುವ ಅಗತ್ಯವಿದೆ.

ಎರಡನೆಯದಾಗಿ, ಹೈದರಾಬಾದ್‌ನ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ ಮತ್ತು ಲಂಡನ್ನಿನ ಯೂನಿವರ್ಸಿಟಿ ಆಫ್‌ ರೀಡಿಂಗ್‌ ನಡೆಸಿದ APCNF ನ ಮೌಲ್ಯಮಾಪನ ಅಧ್ಯಯನಗಳು ಸುಧಾರಿತ ಕೃಷಿ ಪರಿಸರ ವ್ಯವಸ್ಥೆಯನ್ನು ಸಾಧಿಸಬಹುದು ಆದರೆ ಇದರಿಂದ ಇಳುವರಿ ಹೆಚ್ಚುವುದಿಲ್ಲ ಎಂದು ಹೇಳುತ್ತವೆ. ಏಕೆಂದರೆ ಅದು ಈ ಪ್ರಯತ್ನದ ಗುರಿಯಲ್ಲ. ಮತ್ತೊಂದು ದೊಡ್ಡ ಸವಾಲೆಂದರೆ ಕಡಿಮೆ ಕೀಟನಾಶಕ ಉಳಿಕೆಯೊಂದಿಗೆ ಸುಧಾರಿತ ಉತ್ಪನ್ನದ ಗುಣಮಟ್ಟವನ್ನು ಉತ್ತಮ ಬೆಲೆಯೊಂದಿಗೆ ಅಳೆಯಲಾಗುವುದಿಲ್ಲ. ಕೀಟನಾಶಕ ಅಥವಾ ಲೋಹದ ಉಳಿಕೆಯ ಪರೀಕ್ಷೆಗಳನ್ನು ನಾಗ್ಪುರದ ಅನಕಾನ್ ಪ್ರಯೋಗಾಲಯಗಳಂತಹ NABL ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನಡೆಸಲಾಗುತ್ತವೆ. ಈ ಪರೀಕ್ಷೆಗೆ ರೂ. 1,000-1,500 ತಗಲುತ್ತದೆ. ಎಲ್ಲಾ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಈ ಪರೀಕ್ಷೆಯನ್ನು ಕಡಿಮೆ ವೆಚ್ಚದಲ್ಲಿ ನಡೆಸಲು ಸಾಧ್ಯವಾಗುವಂತೆ ಅವುಗಳನ್ನು ಸಜ್ಜುಗೊಳಿಸಬಹುದು.

ಮಾರುಕಟ್ಟೆ ಯಶಸ್ಸಿಗೆ FPOಗಳು

ಕೃಷಿಯ ಮೂಲಾಧಾರ ಮಾರುಕಟ್ಟೆ. ತನ್ನ ಬೆಳೆಗೆ ನ್ಯಾಯಯುತವಾದ ಲಾಭ ಸಿಗದೆ ರೈತ ಬದುಕುಳಿಯಲು ಸಾಧ್ಯವಿಲ್ಲ. ಸಣ್ಣ, ಬಡ, ಕಡಿಮೆ ಶಿಕ್ಷಣ ಪಡೆದ ರೈತರು ಮಾರುಕಟ್ಟೆ ಅಸಮಾನತೆ ಮತ್ತು ಶೋಷಣೆಯನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸರ್ಕಾರವು 2002 ರಿಂದ ರೈತ ಉತ್ಪಾದಕರ ಸಂಸ್ಥೆ (FPO) ಅಥವಾ ಕಂಪನಿ (FPC) ಯನ್ನು ಪ್ರಚುರಪಡಿಸಿತು. FPOಗಳು ನೈಸರ್ಗಿಕ ಕೃಷಿ ಸಮುದಾಯದ ಉತ್ಪನ್ನಗಳನ್ನು ಒಟ್ಟುಗೂಡಿಸಿ ಸ್ಥಳೀಯ ಅಥವಾ ಮಹಾನಗರ ಅಥವಾ ಅಂತರರಾಜ್ಯ ಅಥವಾ ರಫ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಆ ಸಮುದಾಯಕ್ಕೆ ಸಹಾಯ ಮಾಡಬಹುದು. ರೈತರಿಗೆ ಸುಮಾರು 60 ರಿಂದ 70% ರಷ್ಟು ನ್ಯಾಯಯುತ ಪಾಲನ್ನು ಒದಗಿಸಬಹುದು. ಮೊದಮೊದಲ FPOಗಳು ಇದನ್ನು ಸಾಧಿಸಿದ್ದು 1 ರಿಂದ 10 ಕೋಟಿ ರೂ.ಗಳವರೆಗಿನ ವಹಿವಾಟನ್ನು ಹೊಂದಿದ್ದವು, ರೈತರಿಗೆ ರೂ. 1,000 ರಿಂದ 10,000 (ಒಂದು ಸಾವಿರದಿಂದ ಹತ್ತು ಸಾವಿರ) ಲಾಭ ಒದಗಿಸುತ್ತಿವೆ. ಇವುಗಳಲ್ಲಿ ಆಹ್ರಾಮ್ ಟ್ರೆಡಿಷನಲ್ ಕ್ರಾಪ್ ಪ್ರೊಡ್ಯೂಸರ್ ಕಂ., ಮಧುರೈನ ಚೇತನ ಆರ್ಗಾನಿಕ್, ಹೈದರಾಬಾದ್‌ನ ಚೇತನ ಆರ್ಗಾನಿಕ್, ಬೆಂಗಳೂರಿನ ಸಹಜ ಆರ್ಗಾನಿಕ್ ಮತ್ತು ಸಹಜ ಸೀಡ್ಸ್, ಮೈಸೂರು, ಟಿಂಬಕ್ಟು ಕಲೆಕ್ಟಿವ್, ಅನಂತಪುರ ಮೊದಲಾದವು ಸೇರಿವೆ. ASA, ಆಕ್ಸೆಸ್ ಲೈವ್ಲಿಹುಡ್ ಸರ್ವೀಸಸ್, BASIX, BAIF, ಸೆಂಟರ್ ಫಾರ್ ಕಲೆಕ್ಟಿವ್ ಡೆವಲಪ್‌ಮೆಂಟ್, IMMA, IRMA, PRADAN, Srijan, WOTR ಮತ್ತು Vrutti ಮೊದಲಾದ ಇನ್ಕ್ಯುಬೇಟರ್‌ಗಳಿಂದ ಪ್ರಚಾರ ಮಾಡಲ್ಪಟ್ಟ ಇತರ ಸಂಸ್ಥೆಗಳು ಸಾಕಷ್ಟು ಯಶಸ್ವಿಯಾಗಿವೆ.

20 ನೇ ಶತಮಾನದಲ್ಲಿ ಪ್ರಾಬಲ್ಯ ಹೊಂದಿದ್ದ ಸಹಕಾರಿ ಸಂಸ್ಥೆಗಳಿಗಿಂತ ಭಿನ್ನವಾಗಿ, FPOಗಳು ಸ್ವಾಯತ್ತವಾಗಿವೆ. ಉತ್ತಮ ಮಾರುಕಟ್ಟೆ ಮತ್ತು ಸಂಘಟನೆಯ ಮೂಲಕ ರೈತರ ಜೀವನೋಪಾಯ ಸುಧಾರಣೆಯನ್ನು ಉತ್ತೇಜಿಸಲು ಸರ್ಕಾರವು FPOಗಳನ್ನು ಉತ್ತೇಜಿಸುತ್ತದೆ. ನಬಾರ್ಡ್ 2018 ರಲ್ಲಿ ದೇಶಾದ್ಯಂತ 10,000 (ಹತ್ತು ಸಾವಿರ) FPOಗಳ ಬೃಹತ್ ಗುರಿಯನ್ನು ಹೊಂದಿತು. ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಸಿದ್ಧಪಡಿಸಲಾದ ಕಾರ್ಯತಂತ್ರದ ಪ್ರಕಾರ, ದೇಶದಲ್ಲಿ ಆಗ ಅಸ್ತಿತ್ವದಲ್ಲಿದ್ದ ಸುಮಾರು 5,000 FPOಗಳಲ್ಲಿ, ನಬಾರ್ಡ್ (2,086), ಎಸ್‌ಎಫ್‌ಎಸಿ (902), ಇತರ ಸರ್ಕಾರಿ ಸಂಸ್ಥೆಗಳು (641) ಮತ್ತು ಇತರವುಗಳಿಂದ (1,371) ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಅವುಗಳಲ್ಲಿ ಕೇವಲ 30% ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಅವುಗಳಲ್ಲಿ ಸುಮಾರು 20% ಉಳಿವಿಗಾಗಿ ಹೋರಾಡುತ್ತಿತ್ತು, ಮತ್ತುಳಿದ 50% ಸಂಸ್ಥೆಗಳು ಆಗಷ್ಟೇ ಆರಂಭಗೊಂಡಿದ್ದು ರೈತರನ್ನು ಸಜ್ಜುಗೊಳಿಸುವಲ್ಲಿ, ನಿಧಿ ಸಂಗ್ರಹಣೆ ಮೊದಲಾದವುಗಳಲ್ಲಿ ತೊಡಗಿಕೊಂಡಿದ್ದವು. ಬಾಕ್ಸ್ 1 ರಲ್ಲಿ ತೋರಿಸಿರುವಂತೆ ವರ್ಷಕ್ಕೆ ರೂ. 100 ಕೋಟಿ ವಹಿವಾಟು ದಾಟುವ ಒಂದೇ ಒಂದು FPO ಇದೆ. ಎಲ್ಲಾ FPO ಗಳ ಒಟ್ಟು ವ್ಯಾಪ್ತಿಯು ಸುಮಾರು 22 ಲಕ್ಷ ಅಂದರೆ 2.2 ಮಿಲಿಯನ್ ಆಗಿದೆ. ಇದು ದೇಶದ 12 ಕೋಟಿ ರೈತ ಕುಟುಂಬಗಳನ್ನು ಒಳಗೊಳ್ಳಲು ಅಗತ್ಯವಿರುವ FPOಗಳ  ಕೇವಲ 1.7% ಮಾತ್ರವಾಗಿದೆ.

ಕೋಷ್ಟಕ 1. ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿನ ವ್ಯತ್ಯಾಸಗಳು

ಸಾವಯವ ಕೃಷಿಯ ಜನಪ್ರಿಯ ಪದ್ಧತಿಗಳು

ಎರೆಹುಳುಗೊಬ್ಬರ ಶೆಡ್‌ಗಳು ಮತ್ತು ಸಂಗೋಪನಾಕೃಷಿ

ಪ್ಲಾಸ್ಟಿಕ್‌ ಮಲ್ಚಿಂಗ್‌ ವಿರೋಧಿಸಿಲ್ಲ

ಸೂಕ್ಷ್ಮಜೀವಿ ಒಳಸುರಿಯುವಿಕೆ- ಅಜೋಟೋಬ್ಯಾಕ್ಟರ್, ರೈಜೋಬಿಯಂ, ಟ್ರೈಕೊಡರ್ಮಾ ಇತ್ಯಾದಿ

ಮೂರನೇಯವರಿಂದ ದುಬಾರಿ ಪ್ರಮಾಣೀಕರಣ

ಹೆಚ್ಚಾಗಿ ಶ್ರೀಮಂತ, ನೀರಾವರಿ ಹೊಂದಿರುವ ರೈತರು ಅಭ್ಯಾಸ ಮಾಡುತ್ತಾರೆ

ಸಾಮಾನ್ಯವಾಗಿ ಟ್ರ್ಯಾಕ್ಟರ್‌ ಬಳಸಲಾಗುತ್ತದೆ

 

ನೈಸರ್ಗಿಕ ಕೃಷಿ ತತ್ವಗಳು

ವಫ್ಸಾ (ಹ್ಯೂಮಸ್)*

ಎಲೆ ಮಲ್ಚಿಂಗ್

ಜೀವಾಮೃತ, ಬ್ರಹ್ಮಾಸ್ತ್ರ ಇತ್ಯಾದಿ. ಬೆಳವಣಿಗೆಗೆ ಉತ್ತೇಜಕರು/ ರಕ್ಷಕರು#

ಭಾಗವಹಿಸುವಿಕೆ ಖಾತರಿ ವ್ಯವಸ್ಥೆ** ಕಡಿಮೆ ವೆಚ್ಚದ ಪ್ರಮಾಣೀಕರಣ

ಸಣ್ಣ, ಒಣಭೂಮಿ ರೈತರು ಇದನ್ನು ಅಳವಡಿಸಿಕೊಳ್ಳುತ್ತಾರೆ,

ಉಳುಮೆಗೆ ಎತ್ತುಗಳಿಗೆ ಆದ್ಯತೆ ನೀಡಲಾಗುತ್ತದೆ

 

 

* ಮಣ್ಣಿನ ಸಾವಯವ ಅಂಶವನ್ನು (ಇಂಗಾಲ, ತೇವಾಂಶದ ಜೊತೆಗೆ) ವೇಗವಾಗಿ ಬೆಳೆಯುವ ದ್ವಿದಳ ಧಾನ್ಯ ಬೆಳೆಗಳಾದ ಅಲಸಂದೆ, ಸೆಸ್ಬಾನ್ (ಧೈಂಚ) ಅಥವಾ ರೋಸೆಲ್ಲೆ (ಘಿಂಗುರ) ಇತ್ಯಾದಿಗಳನ್ನು ಮುಂಗಾರು ಪೂರ್ವ ಒಣ ಬಿತ್ತನೆ (ಪಿಎಂಡಿಎಸ್) ಮಾಡುವ ಮೂಲಕ ಸುಧಾರಿಸಲಾಗುತ್ತದೆ. ಇವುಗಳನ್ನು 1 ತಿಂಗಳಿಗೂ ಮೊದಲೇ ಮಣ್ಣಿನೊಂದಿಗೆ ಬೆರೆಸಲಾಗುತ್ತದೆ.

** ಇದು ಪ್ರತಿಯೊಂದು ರೈತರ ಗುಂಪಿನ ವಿಮರ್ಶೆ ಆಧಾರಿತ ವ್ಯವಸ್ಥೆಯಾಗಿದೆ.

# ಜೀವಾಮೃತಹಸುವಿನ ಸಗಣಿ, ಗೋ ಮೂತ್ರ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟು ಮತ್ತು ಕಚ್ಚಾ ಮಣ್ಣು (ಸೂಕ್ಷ್ಮಜೀವಿಯ ಇನಾಕ್ಯುಲಮ್). ಬ್ರಹ್ಮಾಸ್ತ್ರಗೋ ಮೂತ್ರ, ಬೇವಿನ ಎಲೆಗಳು, ಸೀತಾಫಲ, ಪೇರಲ, ಪರಂಗಿ, ದಾಳಿಂಬೆ, ದತುರಾ, ಲಂಟಾನ ಇತ್ಯಾದಿ.

ಮುಂದಿನ ಹಾದಿ

ಸರ್ಕಾರವು ನೇರವಾಗಿ ಅಥವಾ “ಸಾರ್ವಜನಿಕ ಸಂಗ್ರಹಣೆ” ನಿಬಂಧನೆಯ ಮೂಲಕ, ಮಹಿಳಾ ಸ್ವಸಹಾಯ ಗುಂಪುಗಳಿಂದ (SHG) ಊಟ/ಆಹಾರ ದಿನಸಿ ಇತ್ಯಾದಿಗಳನ್ನು ಖರೀದಿಸುವ ಮೂಲಕ FPO ಗಳನ್ನು ಬೆಂಬಲಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಇತ್ತೀಚೆಗೆ, ಭಾರತ ಸರ್ಕಾರವು 8 ನವೆಂಬರ್ 2023 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರಿ ಸಾವಯವ ಲಿಮಿಟೆಡ್ (NCOL) ಆಯೋಜಿಸಿದ ಸಾವಯವ ಉತ್ಪನ್ನಗಳ ಪ್ರಚಾರದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಭಾರತ್‌ ಆರ್ಗಾನಿಕ್‌” ಎನ್ನುವ ಬ್ರಾಂಡ್ ಘೋಷಿಸಿದೆ. ಬಹು ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002 ರ ಅಡಿಯಲ್ಲಿ ಸ್ಥಾಪಿಸಲಾದ NCOL, ಪ್ರಮಾಣೀಕೃತ ಸಾವಯವ ಉತ್ಪನ್ನಗಳ ಉತ್ಪಾದನೆ, ವಿತರಣೆ ಮತ್ತು ಮಾರುಕಟ್ಟೆಯನ್ನು ಸುಗಮಗೊಳಿಸುತ್ತದೆ. ಭವಿಷ್ಯದ ಪೀಳಿಗೆಗೆ ಇದರಿಂದ ಪ್ರಯೋಜನವಾಗಲಿದ್ದು ಆ ಮೂಲಕ ಸಹಕಾರಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಸಾಬೀತುಪಡಿಸಿದೆ. NCOL ನ ಐದು ಪ್ರೋತ್ಸಾಹಕ ಸಂಸ್ಥೆಗಳಲ್ಲಿ NDDB, GCMMF, NAFED, NCDC ಮತ್ತು NCCF ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿವೆ. ‘ಭಾರತ್ ಆರ್ಗಾನಿಕ್ಸ್’ ಬ್ರ್ಯಾಂಡ್ ಅಡಿಯಲ್ಲಿ ಆರು ಸಾವಯವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ 20 ಸಾವಯವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಸಾವಯವ ಉತ್ಪನ್ನಗಳ ಬೆಲೆಗಳು ಹೆಚ್ಚಿದ್ದರೂ, ಭಾರತ್ ಆರ್ಗಾನಿಕ್ಸ್ ಅವುಗಳನ್ನು ಈಗಿರುವ ಸಾವಯವ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. NCOL ಸಂಗ್ರಹದ ಹೆಚ್ಚುವರಿ 50% ರಷ್ಟನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತದೆ. ಇದು ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಅವರಿಗೆ ಅನುಕೂಲ ಉಂಟುಮಾಡುತ್ತದೆ.

ಚೌಕ 1: ಸಹ್ಯಾದ್ರಿ ಎಫ್ಪಿಒ

ಈ ಕಾನೂನು ಜಾರಿಗೆ ತಂದು 20 ವರ್ಷಗಳ ನಂತರ, ಬಹುಶಃ ವರ್ಷಕ್ಕೆ 100 ಕೋಟಿ ರೂಪಾಯಿಗಳ ವಹಿವಾಟು ದಾಟಿರುವ FPO ಒಂದೇ ಒಂದು. ಅದು ಮಹಾರಾಷ್ಟ್ರ ರಾಜ್ಯದ ನಾಸಿಕ್‌ನಲ್ಲಿರುವ ಸಹ್ಯಾದ್ರಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (https://www.sahyadriffc.com). 2010 ರಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಸ್ತುತ 18,000 ಸದಸ್ಯರನ್ನು ಹೊಂದಿದೆ. ಇದು 9 ಬೆಳೆಗಳ ವಹಿವಾಟು ನಡೆಸುತ್ತದೆ. ಅದರಲ್ಲಿ ದ್ರಾಕ್ಷಿ ಅಗ್ರಸ್ಥಾನದಲ್ಲಿದೆ. ಇದು ದ್ರಾಕ್ಷಿಯನ್ನು ರಫ್ತು ಮಾಡುವ ಮೂಲಕ ಆರಂಭವಾಯಿತು. ಇಂದು ಅದರ 18 ಪ್ರಭೇದಗಳನ್ನು ಮಾರಾಟ ಮಾಡುತ್ತಿದೆ. ಇತರ ಬೆಳೆಗಳಲ್ಲಿ ಟೊಮ್ಯಾಟೊ, ದಾಳಿಂಬೆ, ಬಾಳೆಹಣ್ಣು, ಸಿಹಿ ಜೋಳ, ಮಾವು, ಸಿಟ್ರಸ್ (ಕಿತ್ತಳೆ ಮತ್ತು ಸಿಹಿ ನಿಂಬೆ) ಮತ್ತು ಗೋಡಂಬಿ ಸೇರಿವೆ. ಇದರ ಯಶಸ್ಸಿನ ಮಂತ್ರಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು: (ಎ) ಘನ ಉತ್ಪನ್ನಗಳು, (ಬಿ) ದೊಡ್ಡ ಗುರಿ (ರಫ್ತು), (ಸಿ) ವಾಣಿಜ್ಯ ನಿರ್ವಹಣೆ (ದತ್ತಿ / ಸೌಮ್ಯ ವಿಧಾನಕ್ಕೆ ವಿರುದ್ಧವಾಗಿ ದಕ್ಷತೆ / ಕಠಿಣತೆ). ಇದು 2022 ರಲ್ಲಿ ದಾಖಲೆಯ ರೂ. 310 ಕೋಟಿ ($ 40 ಮಿಲಿಯನ್) ಯುರೋಪಿಯನ್ ಹೂಡಿಕೆಯನ್ನು ಆಕರ್ಷಿಸಿತು.

 

ಸರ್ಕಾರವು ಸಮುನ್ನತಿಯಂತಹ FPO ಮಾರ್ಗದರ್ಶಕರನ್ನು ಸಹ ಆಹ್ವಾನಿಸಬಹುದು. SFAC ಇತ್ಯಾದಿಗಳಿಂದ ಇತ್ತೀಚೆಗೆ FPO ಕಾರ್ಯತಂತ್ರಕ್ಕೆ ITC ಯನ್ನು ಪರಿಚಯಿಸಿರುವುದು ಸಹಾಯ ಮಾಡಬಹುದು. ಅಲ್ಲದೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ವತಿಯಿಂದ FPOಗೆ ಬೆಂಬಲದ ಅವಶ್ಯಕತೆಯಿದೆ. ಅದು ಮಾರುಕಟ್ಟೆ ಬೆಂಬಲದೊಂದಿಗೆ ಆರ್ಥಿಕ, ವಾಣಿಜ್ಯ ಮಾರ್ಗದರ್ಶನವನ್ನು ಒದಗಿಸಬಹುದು.

ಪರಾಮರ್ಶನಗಳು

APEDA, National Programme for Organic Production (NPOP), 2023, https://apeda.gov.in/apedawebsite/ organic/organic_products.htm#:

Fuchs S. Indo-German Academy to promote Natural Farming launched, Embassy of Federal Republic of Germany, New Delhi, 2022, https://ipr.ap.nic.in/images/ press-releases/German%20Embassy%20Press%20 Release%20Indo%20German%20Academy%20for%20 Natural%20Farming%20launched.pdf

NDDB, Organic farming to bring prosperity to farmers; NCOL to play crucial role: Shri Amit Shah, Hon’ble Union Minister of Home Affairs & Cooperation, 2023, https://www.nddb.coop/node/2423.

SFAC, Strategy Paper for promotion of 10,000 Farmer Producer Organisations (FPOs). Small Farmers’ Agribusiness Consortium (SFAC), New Delhi (http://sfacindia.com/) 2019.

Shagun, Andhra Pradesh extends support to SC women farmers for natural farming push, 2022, https://www.downtoearth.org.in/news/agriculture/ andhra-pradesh-extends-support-to-sc-women-farmersfor- natural-farming-push-81284


Utkarsh Ghate

Ecologist,

BAIF Development Research Foundation, Pune

Email: ughaate@gmail.com


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ : ೨೫; ಸಂಚಿಕೆ : ೪; ಡಿಸೆಂಬರ್‌ ೨೦೨೩

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp