ಹವ್ಯಾಸಿಯಾಗಿ ಕೃಷಿಯನ್ನು ಆರಂಭಿಸಿದ ಶ್ರೀಮತಿ ಇಂದುಮತಿ ರೈತ ಉದ್ಯಮಿಯಾಗಿ ಬಹುದೂರ ಸಾಗಿಬಂದಿದ್ದಾರೆ. ಇಳಿವಯಸ್ಸನ್ನು ಲೆಕ್ಕಿಸದೆ, ಸಾವಯವ ಕೃಷಿಯ ವೈವಿಧ್ಯೀಕರಣ ಮತ್ತು ಅದನ್ನು ಅಭ್ಯಾಸ ಮಾಡುವುದು ಮತ್ತು ಶ್ರಮವನ್ನು ಕಡಿಮೆ ಮಾಡುವ ಕೃಷಿ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕೃಷಿ ಆದಾಯವನ್ನು ಹೆಚ್ಚಿಸಬಹುದು ಎಂದು ಅವರು ಸಾಬೀತುಪಡಿಸಿದ್ದಾರೆ. ಕೃಷಿಯ ಬಗೆಗಿನ ಅವರ ಉತ್ಸಾಹವು ಹೊಸ ಕೌಶಲ್ಯಗಳನ್ನು ಕಲಿಯುವುದು ಮತ್ತು ಕೃಷಿ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ ಎಂದು ಸೂಚಿಸುತ್ತದೆ.
ಭಾರತದಲ್ಲಿ ರೈತ ಸಮುದಾಯದ ಪ್ರಮುಖ ಉದ್ಯೋಗ ಕೃಷಿ. ಅದು ನಮ್ಮ ಆರ್ಥಿಕತೆಯ ಬೆನ್ನೆಲುಬು. ಹೀಗಿದ್ದೂ, ಇಂದಿನ ಯುವಜನತೆ ಕಡಿಮೆ ಆದಾಯ, ಹವಾಮಾನ ಬದಲಾವಣೆಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ಎದುರಿಸಬೇಕಾಗುವ ಸವಾಲುಗಳಿಂದಾಗಿ ಕೃಷಿಯಲ್ಲಿ ಆಸಕ್ತಿ ಹೊಂದಿಲ್ಲ. ಪ್ರತಿಯೊಬ್ಬರೂ ಆಧುನಿಕ, ಶ್ರೀಮಂತ ಜೀವನವನ್ನು ಬಯಸುತ್ತಾರೆ. ಕೃಷಿಯನ್ನು ತಮ್ಮ ಜೀವನೋಪಾಯಕ್ಕೊಂದು ಆಯ್ಕೆ ಎಂದುಕೊಳ್ಳಲು ಬಯಸುವುದಿಲ್ಲ. ಅವರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, 55 ನೇ ವಯಸ್ಸಿನಲ್ಲಿ ಮಹಿಳೆಯೊಬ್ಬರು ನಗರದಿಂದ ಹಳ್ಳಿಗೆ ಕೃಷಿಯಲ್ಲಿ ತೊಡಗಿಕೊಳ್ಳಲು ಸ್ಥಳಾಂತರಗೊಳ್ಳುವುದು ಅತ್ಯಂತ ಅಪರೂಪ. ಇದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಧವಳೇಶ್ವರದ ಶ್ರೀಮತಿ ಇಂದುಮತಿ ಪಿ. ಚನ್ನಾಲ್ ಎಂಬ ರೈತ ಮಹಿಳೆಯ ಕಥೆ. ಅವರು ಸಮಗ್ರ ಕೃಷಿ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಓದಬೇಕೆಂಬ ಆಸೆಯಿದ್ದರೂ ಹಿಂದೆ ಹೆಣ್ಣುಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುತ್ತಿರಲಿಲ್ಲ. ಹಾಗಾಗಿ ಅವರಿಗೆ 7 ನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು. ಅವಿಭಕ್ತ ಕುಟುಂಬದ ಶ್ರೀ ಪಾಂಡಪ್ಪ ಚನ್ನಾಲ್ ಅವರೊಂದಿಗೆ ವಿವಾಹವಾಯಿತು. ಕುಟುಂಬದ ಜವಾಬ್ದಾರಿಗಳನ್ನು ಪೂರೈಸಿದ ನಂತರ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಏನಾದರೂ ವಿಭಿನ್ನವಾದದ್ದನ್ನು ಮಾಡಬೇಕೆಂದು ಬಯಸಿದರು.
ಶ್ರೀಮತಿ ಚನ್ನಾಲ್ 2000-01 ರಿಂದ ಕೃಷಿಯಲ್ಲಿ ತೊಡಗಿಸಿಕೊಂಡರು. ಎರಡು ಎಕರೆ ಭೂಮಿಯಲ್ಲಿ ಸಾವಯವ ಸಮಗ್ರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ-ತೋಟಗಾರಿಕೆ-ಅರಣ್ಯ ಬೆಳೆ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲೊಂದು ಮನೆ ಕಟ್ಟಿ, ಕೃಷಿ ಕೆಲಸಗಳನ್ನು ಆರಂಭಿಸಿದರು. ತಮ್ಮ ಎರಡೆಕೆರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಅರಿಶಿನವನ್ನು 30 ಗುಂಟೆಗಳಲ್ಲಿ ಬೆಳೆಯಲಾಗುತ್ತದೆ. ಅರಿಶಿನದ ನಡುವೆ ನವಣೆ, ತರಕಾರಿಗಳು, ಮೇವಿನ ಜೋಳವನ್ನು ಸಹ ಬೆಳೆಯಲಾಗುತ್ತದೆ. ಇದು ಮನೆ ಬಳಕೆಯ ಹಾಗೂ ಮೇವಿನ ಅವಶ್ಯಕತೆಗಳನ್ನು ಪೂರೈಸುತ್ತದೆ. ಅರಿಶಿನ ಮತ್ತು ನವಣೆ ಕೊಯ್ಲು ಮಾಡಿದ ನಂತರ, ಡೈಕೋಕಮ್ ಗೋಧಿಯನ್ನು ಹೊಲದಲ್ಲಿ ಬೆಳೆಯಲಾಗುತ್ತದೆ. ನವಣೆಯನ್ನು ಮಾರಾಟ ಮಾಡುವ ಬದಲು ಮನೆ ಬಳಕೆಗೆ ಬಳಸಲಾಗುತ್ತಿದೆ. ಹೊಲದ ಬೇಲಿಯಲ್ಲಿ ಸುಮಾರು 300 ತೇಗದ ಮರಗಳನ್ನು ಮತ್ತು ಕೆಲವು ತೆಂಗಿನ ಮರಗಳನ್ನು ನೆಟ್ಟಿದ್ದಾರೆ.
ತಮ್ಮ ತೋಟದಿಂದ ಮಾವು, ಬಾಳೆಹಣ್ಣು, ತೆಂಗಿನಕಾಯಿ, ಹುಣಸೆಹಣ್ಣು ಮತ್ತು ಅರಿಶಿನ ಬೇರು ಮತ್ತು ಅರಿಶಿನ ಪುಡಿಯಂತಹ ಆರೋಗ್ಯಕರ ಸಾವಯವ ಉತ್ಪನ್ನಗಳನ್ನು ಪಡೆಯುತ್ತಿದ್ದಾರೆ. ಅರಿಶಿನ ಬೆಳೆಯುವ ಮೂಲಕ, ವರ್ಷಕ್ಕೆ ರೂ. 65,000/- ನಿವ್ವಳ ಆದಾಯವನ್ನು ಪಡೆಯುತ್ತಿದ್ದಾರೆ. ಅರಿಶಿನ ಬೇರುಗಳನ್ನು ಮನೆಯಲ್ಲಿಯೇ ಪುಡಿ ಮಾಡಿ, ಶುದ್ಧ ಅರಿಶಿನ ಪುಡಿಯನ್ನು ತಯಾರಿಸಲಾಗುತ್ತದೆ. ಬೇರುಗಳು ಮತ್ತು ಪುಡಿ ಎರಡನ್ನೂ ಕಮಿಷನ್ ಏಜೆನ್ಸಿ ಮೂಲಕ ಸಾಂಗಲಿ ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಮುಂದೆ ತೇಗದ ಮರಗಳಿಂದ ಒಂದು ಕೋಟಿ ಆದಾಯ ಗಳಿಸುವ ನಿರೀಕ್ಷೆಯಿದೆ. ತೆಂಗಿನಕಾಯಿಗಳನ್ನು ಸ್ಥಳೀಯವಾಗಿ ಮತ್ತು ಹತ್ತಿರದ ನಗರದ ಹೋಟೆಲ್‌ಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ರೂ. 40,000/- ಆದಾಯವನ್ನು ಗಳಿಸಿದರು. ತಮ್ಮ ತೋಟದಲ್ಲಿ ಸುಮಾರು 200 ಬಾಳೆ ಗಿಡಗಳನ್ನು ನೆಟ್ಟಿದ್ದು, ಇದು ವರ್ಷಕ್ಕೆ ರೂ. 1 ಲಕ್ಷ ಆದಾಯವನ್ನು ತಂದುಕೊಡುತ್ತಿದೆ. ಇವುಗಳ ಜೊತೆಗೆ, ಜಮೀನಿನಲ್ಲಿ ಸಪೋಟಾ, ಸೀತಾಫಲ, ರತ್ನಗಿರಿಯ ವೈವಿಧ್ಯಮಯ ಮಾವಿನ ಪ್ರಭೇದಗಳು ಸೇರಿದಂತೆ ವಿವಿಧ ಹಣ್ಣಿನ ಮರಗಳನ್ನು ನೆಟ್ಟಿದ್ದಾರೆ. ಮಾವಿನ ಮರಗಳ ಇಳುವರಿ ಶುರುವಾಗಿದೆ. ಹುಣಸೆಹಣ್ಣು, ನಿಂಬೆ, ಚೆರ್ರಿ, ರಾಮಫಲಗಳ ಸಹ ಬೆಳೆಯಲಾಗುತ್ತದೆ. ಇದರ ಸಸಿಗಳನ್ನು ಧಾರವಾಡದ ಯುಎಎಸ್‌ನಿಂದ ತರಲಾಗಿತ್ತು. ಇವುಗಳಿಂದ ಸಿಗುವ ಬೆಳೆಯನ್ನು ಮನೆ ಬಳಕೆಗೆ ಬಳಸಲಾಗುತ್ತಿದೆ.
ಸಾವಯವ ಕೃಷಿಗೆ ನೆರವಾಗಲೆಂದು, ನಾಲ್ಕು HF ಹಸುಗಳನ್ನು ಸಾಕಲಾಗುತ್ತಿದೆ. ಈ ಹಸುಗಳು ಐದು ಲೀಟರ್ ಹಾಲನ್ನು ನೀಡುತ್ತವೆ. ಇದನ್ನು ಧವಳೇಶ್ವರದಲ್ಲಿರುವ ಸ್ಥಳೀಯ ಡೈರಿ ಘಟಕಕ್ಕೆ ಪ್ರತಿದಿನ ಲೀಟರ್‌ಗೆ ರೂ. 50 ರಂತೆ ಮಾರಾಟ ಮಾಡಲಾಗುತ್ತಿದೆ. ಎರೆಹುಳು ಗೊಬ್ಬರ, ಪಂಚಗವ್ಯ, ಜೀವಾಮೃತ, ಬಯೋ-ಡೈಜೆಸ್ಟರ್, ಕಷಾಯ (ವಿವಿಧ ಮರದ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ) ಗಳನ್ನು ಜಮೀನಿನಲ್ಲಿ ತಯಾರಿಸಲಾಗುತ್ತಿದೆ. ಇದನ್ನು ಗೊಬ್ಬರ, ಬೆಳವಣಿಗೆಯ ಉತ್ತೇಜಕ ಮತ್ತು ನೈಸರ್ಗಿಕ ಕೀಟನಾಶಕಗಳಾಗಿ ಬಳಸಲಾಗುತ್ತದೆ. ಹಿಟ್ಟು ಗಿರಣಿ, ತೆಂಗಿನ ಸಿಪ್ಪೆ ಸುಲಿಯುವ ಯಂತ್ರ, ತೆಂಗಿನಮರ ಏರುವ ಯಂತ್ರ, ಮಾವು ಕೊಯ್ಲು ಯಂತ್ರ ಇತ್ಯಾದಿ ಯಂತ್ರೋಪಕರಣಗಳು ಮತ್ತು ಕೆಲಸದ ಶ್ರಮ ಕಡಿಮೆ ಮಾಡುವ ಉಪಕರಣಗಳನ್ನು ಸಹ ಬಳಸಲಾಗುತ್ತಿದೆ. ಜಮೀನಿನಲ್ಲಿ ಹನಿ ನೀರಾವರಿಯನ್ನೂ ಅಳವಡಿಸಿಕೊಳ್ಳಲಾಗಿದೆ.
ಕೋಷ್ಟಕ 1: ಬೆಳೆ ಪದ್ಧತಿಗಳು, ವೆಚ್ಚಗಳು ಮತ್ತು ನಿವ್ವಳ ಲಾಭ
| ಬೆಳೆದ ಬೆಳೆಗಳು | ವೆಚ್ಚ | ಲಾಭ | ಉದ್ದೇಶ | ಮಾರಾಟ ವಿಧಾನ/ ಗ್ರಾಹಕರು | ||
| ಅರಿಶಿನ | 35,000/- | 65,000/- | ಮನೆಬಳಕೆ ಮತ್ತು ಮಾರಾಟ | ಕಮಿಷನ್ ಏಜೆನ್ಸಿ ಮೂಲಕ ಮತ್ತು ಸ್ನೇಹಿತರಿಂದ ಗ್ರಾಹಕರು | ||
| ನವಣೆ | ಮನೆಬಳಕೆ | |||||
| ತೇಗ | 5,000/- | ಭವಿಷ್ಯದಲ್ಲಿ ಅಂದಾಜು ಒಂದು ಕೋಟಿ ಆದಾಯ | ||||
| ಹುಣಸೆ | 100/- | 5,000/- | ಮನೆಬಳಕೆ ಮತ್ತು ಮಾರಾಟ ಎರಡಕ್ಕೂ | ಸ್ಥಳೀಯವಾಗಿ ಮಾರಾಟ | ||
| ತೆಂಗು | 2000/- | 40,000 | -“- | ಹತ್ತಿರದಲ್ಲಿರುವ ನಗರದ ಹೋಟಲುಗಳಿಗೆ | ||
| ಬಾಳೆ | 10,000/- | 1,00,000/- | -“- | ಹತ್ತಿರದಲ್ಲಿರುವ ನಗರ ಮಾರುಕಟ್ಟೆಗೆ | ||
| ಮಾವು ಮತ್ತಿತರ ಹಣ್ಣಿನ ಬೆಳೆ | 2000/- | 20,000/- | ಬಹುತೇಕ ಹಣ್ಣುಗಳು ಮನೆಬಳಕೆಗೆ | -“- | ||
ಕೋಷ್ಟಕ 2: ಉದ್ಯಮ ಹಾಗೂ ಸಾಧನಗಳ ಮೇಲಿನ ವೆಚ್ಚ
| ವಿವರಗಳು | ವೆಚ್ಚ (ರೂ.) | |
| ಹೈನುಗಾರಿಕೆ | 25000/- | |
| ಎರೆಹುಳು ಗೊಬ್ಬರ | 100/- | |
| ಬಯೋ ಡೈಜೆಸ್ಟರ್ | 5000/- | |
| ಹನಿ ನೀರಾವರಿ | 20000/- | |
| ಗೊಬ್ಬರ ತಯಾರಿಕೆ | 500/- | |
| ಯಂತ್ರಗಳು ಮತ್ತು ಶ್ರಮ ಕಡಿಮೆ ಮಾಡುವ ಸಲಕರಣೆಗಳು | ತೆಂಗಿನ ಸಿಪ್ಪೆ ಸುಲಿಯುವ ಯಂತ್ರ | 1500/- |
| ತೆಂಗಿನ ಮರ ಏರುವ ಯಂತ್ರ | 4500/- | |
| ಮಾವು ಕೊಯ್ಲಿನ ಯಂತ್ರ | 300/- | |
| ಗಿರಣಿ | 10000/- | |
| ಒಟ್ಟು | 66,800 |
ಒಟ್ಟಾರೆಯಾಗಿ, ಅವರು ವರ್ಷಕ್ಕೆ ಸುಮಾರು ರೂ. 2.5 ಲಕ್ಷ ಆದಾಯ ಗಳಿಸುತ್ತಿದ್ದಾರೆ. ವರ್ಷವಿಡೀ ಮನೆಬಳಕೆಗೆ ಕೆಲವು ತರಕಾರಿಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ತರಕಾರಿಗಾಗಿ ಮಾಡುವ ಖರ್ಚು ಕಡಿಮೆಯಾಗುತ್ತದೆ. ಹಣ ಉಳಿಸುವುದೆಂದರೆ ಹಣ ಗಳಿಸಿದಂತೆಯೇ.
ಕೃಷಿ ಕಡೆಗಿನ ಅವರ ಉತ್ಸಾಹ, ಸಮರ್ಪಣೆ ಮತ್ತು ಸಾಧನೆಗಳನ್ನು ಗುರುತಿಸಿ, ಯುಎಎಸ್ ಧಾರವಾಡ 2009-10ನೇ ಸಾಲಿನಲ್ಲಿ ಅತ್ಯುತ್ತಮ ಕೃಷಿ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯವು ನಡೆಸಿದ ರೈತರಿಂದ ರೈತರಿಗೆ ತರಬೇತಿ ಕಾರ್ಯಕ್ರಮಕ್ಕೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾದರು. ಅವರ ಉದ್ಯಮಶೀಲತಾ ಮನೋಭಾವವನ್ನು ನೋಡಲು ತೋಟಕ್ಕೆ ಭೇಟಿ ನೀಡುವ ಅನೇಕ ಸಂದರ್ಶಕರು, ಇಳಿವಯಸ್ಸಿನಲ್ಲಿಯ ಅವರ ಸಮರ್ಪಣೆ ಮತ್ತು ಉತ್ಸಾಹವನ್ನು ಬಹಳವಾಗಿ ಮೆಚ್ಚುತ್ತಾರೆ.
ಯಾರು ಕೃಷಿಯನ್ನು ಭದ್ರವಾಗಿ ಹಿಡಿಯುವರೋ ಕೃಷಿ ಅವರ ಕೈಹಿಡಿಯುತ್ತದೆ. ಕೃಷಿಗೆ ವಯಸ್ಸಿನ ಮಿತಿಯಿಲ್ಲ. ಬದಲಿಗೆ, ಅದು ಬದ್ಧತೆ, ಕಠಿಣ ಪರಿಶ್ರಮ, ಉತ್ಸಾಹವನ್ನು ಬೇಡುತ್ತದೆ. ಇದು ಶ್ರೀಮತಿ. ಚನ್ನಾಲ್ ಅವರಲ್ಲಿ ಹೇರಳವಾಗಿದೆ. ವೈವಿಧ್ಯತೆ, ಏಕೀಕರಣ ಮತ್ತು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿದೆ. ಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳ ಮೇಲಿನ ಖರ್ಚು ಕಡಿಮೆ ಇರುತ್ತದೆ. ಹೀಗಾಗಿ, ಕೃಷಿ ಆದಾಯ ಮೂಲವಾಗಿ ಲಾಭದಾಯಕವಾಗಿದೆ. ಅವರು ಯುವಕರು ಮತ್ತು ಹಿರಿಯರಿಗೆ ಸಮಾನವಾಗಿ ಸ್ಫೂರ್ತಿಯಾಗಿದ್ದಾರೆ.
Vijaya Hosamani
Asst. Prof. of Agril. Extension. Dept. of SAS.
College of Horticulture, Bagalkot-587 104
Mala Patil
Asst. Prof. of Computer Science, Dept. of SAS.
College of Horticulture, Bagalkot-587 104
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್ ೨೦೨೪



