ಮಹಿಳಾ ನೇತೃತ್ವದ ಕೃಷಿ ಉಪಕ್ರಮಗಳು


ಸಾವಯವ ಕೃಷಿ ವಿಧಾನಗಳನ್ನು ಬಳಸಿಕೊಂಡು, ಮಾರುಕಟ್ಟೆಗಳೊಂದಿಗೆ ಸಂಪರ್ಕವನ್ನು ಬೆಳೆಸಿಕೊಂಡು, ಆದಾಯ ಗಳಿಸಿ, ತಮ್ಮ ಮತ್ತು ತಮ್ಮ ಸಮುದಾಯಗಳ ಜೀವನ ಮಟ್ಟವನ್ನು ಹೆಚ್ಚಿಸುವ ಮೂಲಕ, ಇಬ್ಬರು ಮಹಿಳಾ ಉದ್ಯಮಿಗಳು ಸಾವಯವ ಕೃಷಿಯನ್ನು ಹರಡುವಲ್ಲಿ ಪ್ರಭಾವ ಬೀರುತ್ತಿದ್ದಾರೆ.  ಎಲ್ಲಕ್ಕಿಂತ ಹೆಚ್ಚಾಗಿ, ಅವರು ಇತರ ಮಹಿಳೆಯರು ಸಾವಯವ ಕೃಷಿಯನ್ನು ಒಂದು ಕಾರ್ಯಸಾಧ್ಯ ಮತ್ತು ದೀರ್ಘಕಾಲೀನ ವೃತ್ತಿಯನ್ನಾಗಿ ಮುಂದುವರಿಸಲು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ.


 

ಮಹಿಳಾ ಉದ್ಯಮಿಗಳು ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆಹಾರ ಭದ್ರತೆ, ಬಡತನ ನಿವಾರಣೆ ಮತ್ತು ಲಿಂಗ ಸಮಾನತೆಗೆ ಕೊಡುಗೆ ನೀಡುತ್ತಾರೆ. ಗ್ರಾಮೀಣ ರೈತ ಮಹಿಳೆಯರಿಗೆ ಇರುವ ಕೆಲವು ಅವಕಾಶಗಳೆಂದರೆ ಸಾವಯವ ಮತ್ತು ಆರೋಗ್ಯಕರ ಆಹಾರದ ಬೇಡಿಕೆಯನ್ನು ಹೆಚ್ಚಿಸುವುದು. ಸಾವಯವ ಕೃಷಿ ಆರೋಗ್ಯ ಮತ್ತು ಪರಿಸರಕ್ಕೆ ಪ್ರಯೋಜನಕಾರಿಯಾಗಿದ್ದರೂ, ಭೂಮಿ, ಸಾಲ, ಮಾರುಕಟ್ಟೆಗಳು, ತಂತ್ರಜ್ಞಾನ, ತರಬೇತಿ ಮತ್ತು ವಿಸ್ತರಣಾ ಸೇವೆಗಳ ಪ್ರವೇಶದ ಕೊರತೆಯಿಂದಾಗಿ ಸಾವಯವ ಕೃಷಿಗೆ ಸಂಬಂಧಿಸಿದ ಉದ್ಯಮವನ್ನು ನಡೆಸುವಲ್ಲಿ ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಮಹಿಳೆಯರು ನಡೆಸಿದ ಕೃಷಿ ಉಪಕ್ರಮಗಳು ಅಡೆತಡೆಗಳನ್ನು ನಿವಾರಿಸಿ ಯಶಸ್ವಿಯಾದ ಇಬ್ಬರ ಉದಾಹರಣೆಗಳು ಇಲ್ಲಿವೆ.

 ಶ್ರೀಮತಿ ಹಿತೇಶ್ ಚೌಧರಿ

ಶ್ರೀಮತಿ ಹಿತೇಶ್ ಚೌಧರಿ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗ್ರಾಮ ಚಕ್ ಚಾವಿಯವರು. ಪ್ರಗತಿಪರ ಮಹಿಳಾ ರೈತ ಮಹಿಳೆಯಾಗಿ, ಶ್ರೀಮತಿ ಹಿತೇಶ್ ಅವರ ಮುಖ್ಯ ಉದ್ದೇಶ ಕೃಷಿ ಚಟುವಟಿಕೆಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದಾಗಿತ್ತು. ಆರಂಭದಲ್ಲಿ, ಅವರು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಗೋಧಿ, ನಿಂಬೆ ಹುಲ್ಲು, ಕಬ್ಬು, ಅರಿಶಿನ ಮತ್ತು ಸಾಸಿವೆಗಳನ್ನು ಬೆಳೆಯುತ್ತಿದ್ದರು.

ಕೃಷಿಯಲ್ಲಿ ಸದಾ ಹೊಸತನ್ನು ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ವ್ಯಕ್ತಿ. ಅವರು ತಮ್ಮ ಶಕ್ತಿಯನ್ನು ಕೆಲವೇ ಕ್ಷೇತ್ರಗಳ ಕಡೆ ಹರಿಸಿದರು.  ಅವರು ಸಾವಯವ ನಿಂಬೆ ಹುಲ್ಲು ಕೃಷಿ; ಪೌಷ್ಟಿಕ ಅಡುಗೆಮನೆ ತೋಟಗಳನ್ನು ನಿರ್ವಹಿಸುವುದು; ಸಾವಯವ ಒಳಸುರಿಯುವಿಕೆಗಳ ಉತ್ಪಾದನಾ ತಂತ್ರಗಳಲ್ಲಿ ಪರಿಣತಿ ಪಡೆಯುವುದು; ಸಾವಯವ ಕೃಷಿಯ ಬಗ್ಗೆ ಸಹ ರೈತರಿಗೆ ಪ್ರೇರಣೆ ಮತ್ತು ತರಬೇತಿ ನೀಡುವುದು ಮುಂತಾದವುಗಳಲ್ಲಿ ಕೆಲಸ ಮಾಡಿದರು.

೨೦೧೮ ರಲ್ಲಿ ಹರಿದ್ವಾರದ ಪತಂಜಲಿ ಸಾವಯವ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ತರಬೇತುದಾರರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಅವರು ಸಾವಯವ ಮತ್ತು ನೈಸರ್ಗಿಕ ವಿಧಾನಗಳ ಮೂಲಕ ಕೃಷಿ ಮಾಡಲು ಪ್ರಾರಂಭಿಸಿದರು. ಪ್ರಸ್ತುತ 2 ಎಕರೆ ಭೂಮಿಯಲ್ಲಿ ಸಾಸಿವೆ, ತರಕಾರಿಗಳು, ನಿಂಬೆ ಹುಲ್ಲು, ಗೋಧಿ, ಕಬ್ಬು, ಅರಿಶಿನ ಮತ್ತು ಸೀಬೆ ಬೆಳೆಯುತ್ತಿದ್ದಾರೆ. ತಮ್ಮ ಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತಿಸಿದ್ದಾರೆ.

ಪೌಷ್ಟಿಕಾಂಶದ ಉದ್ಯಾನದ ಭಾಗವಾಗಿ ಈರುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಮೂಲಂಗಿ, ಪಾಲಕ್, ಕೊತ್ತಂಬರಿ, ಎಲೆಕೋಸು, ಮೆಂತ್ಯಹಣ್ಣಿನ ಗಿಡಗಳಾದ ಬಾಳೆ ಹಣ್ಣು, ಪರಂಗಿ, ಸೀಬೆ, ಬದನೆಕಾಯಿ, ಸಿಹಿ ಗೆಣಸು, ಗಡ್ಡೆಕೋಸು, ಕೆಸು, ಸೋರೆಕಾಯಿ, ತುಪ್ಪರಿಕಾಯಿ ಬೆಳೆಯುತ್ತಾರೆ.

 ಬೀಜಾಮೃತ, ಪಂಚಗವ್ಯ, ಜೀವಾಮೃತ ಮತ್ತು ಘನಜೀವಾಮೃತದಂತಹ ನೈಸರ್ಗಿಕ ವಿಧಾನಗಳ ಮೂಲಕ ತಯಾರಿಸಿದ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದರು. ಗೊಬ್ಬರ ತಯಾರಿಕೆಗೆ ಸಗಣಿ ಬಳಸಿದರು. ಒಳಸುರಿಯುವಿಕೆಗಳ ತಯಾರಿಸಲು ಗಂಜಲವನ್ನು ಸಂಗ್ರಹಿಸಿ ಬಳಸುತ್ತಾರೆ. ಇದು ಒಳಸುರಿಯುವಿಕೆಗಳಿಂದ ಆಗುವ ವೆಚ್ಚವನ್ನು ತಗ್ಗಿಸಿತು.

ಅವರು ನಿಂಬೆ ಹುಲ್ಲಿನ ಎಣ್ಣೆ, ಗೋಧಿ, ಕಬ್ಬು, ಸಾಸಿವೆ, ಜೋಳ, ಅರಿಶಿನವನ್ನು ನೇರವಾಗಿ ಗ್ರಾಹಕರಿಗೆ ಮತ್ತು ಮಂಡಿಯಲ್ಲಿ ಮಾರಾಟ ಮಾಡುತ್ತಾರೆ. ಅವರು ತಾವೇ ಬೆಳೆದ ಸಾವಯವ ತರಕಾರಿಗಳು, ಧಾನ್ಯಗಳು ಮತ್ತು ಸಾಸಿವೆಯನ್ನು ಮನೆಬಳಕೆಗೆ ಬಳಸುತ್ತಾರೆ. ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿದ್ದಾರೆ.

ಆರಂಭದಲ್ಲಿ ಕುಟುಂಬ ಮತ್ತು ಸಮಾಜದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರು. ಯಾವುದೇ ಕುಟುಂಬ ಅಥವಾ ಆರ್ಥಿಕ ಬೆಂಬಲವಿಲ್ಲದೆ, ಆತ್ಮ ವಿಶ್ವಾಸದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಈಗ ಅವರು ಸಾವಯವ ಕೃಷಿ ಕ್ಷೇತ್ರದಲ್ಲಿ ಇತರರಿಗೆ ಸಹಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಅಮ್ರೋಹಾ ಜಿಲ್ಲೆಯಲ್ಲಿನ ಹಲವಾರು ಸ್ವಸಹಾಯ ಗುಂಪುಗಳು ಮತ್ತು FPO ಗಳಿಗೆ ಬೆಂಬಲ ನೀಡುತ್ತಿದ್ದಾರೆ.

ಶ್ರೀಮತಿ ಹಿತೇಶ್ ಅವರನ್ನು ಪ್ರಗತಿಪರ ಮತ್ತು ನವೀನ ರೈತಮಹಿಳೆ ಎಂದು ಸಾಮಾಜಿಕ ಸಂಸ್ಥೆಗಳು ಮತ್ತು ಜಿಲ್ಲಾಡಳಿತ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ. ಅವರು ಭಾರತ ಸರ್ಕಾರದ ಕೃಷಿ ಸಚಿವಾಲಯದ ನಿರ್ದೇಶನಾಲಯ; ಸರ್ದಾರ್ ವಲ್ಲಭಭಾಯಿ ಪಟೇಲ್ ವಿಶ್ವವಿದ್ಯಾಲಯದ ಕುಲಪತಿಗಳು; ಕೃಷಿ ಸಚಿವಾಲಯ, ಉತ್ತರ ಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯಪಾಲರಿಂದ ಗೌರವವನ್ನು ಪಡೆದಿದ್ದಾರೆ. ಅವರ ಹೆಸರನ್ನು ಉತ್ತರ ಪ್ರದೇಶ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಶ್ರೀಮತಿ ಸವಿತಾ ಜೆ. ಯೆಲಾನೆ

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕನ್ಹಾಪುರ ಗ್ರಾಮದ ಶ್ರೀಮತಿ ಸವಿತಾ ಜೆ. ಯೆಲಾನೆ ಅವರು 2008 ರಲ್ಲಿ ಒಂದು ಎಕರೆ ಭೂಮಿಯಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿದರು. ಅವರು ತೆಲಂಗಾಣದ ಸಿಕಂದರಾಬಾದ್‌ನಲ್ಲಿರುವ ಸುಸ್ಥಿರ ಕೃಷಿ ಕೇಂದ್ರ (CSA) ದಿಂದ ತರಬೇತಿ ಪಡೆದರು. ತರುವಾಯ, ಅವರು ಮಹಾರಾಷ್ಟ್ರ ರಾಜ್ಯ ಕೃಷಿ ಇಲಾಖೆ ಆಯೋಜಿಸಿದ್ದ ತರಬೇತಿಯಲ್ಲಿ ಭಾಗವಹಿಸಿದರು. ಹೊಸತನ್ನು ತಿಳಿಯುವ ಭೇಟಿಯ ಸಮಯದಲ್ಲಿ, ಮಹಾರಾಷ್ಟ್ರದಾದ್ಯಂತ ‘ಬುದ್ಧಿವಂತ ರೈತ’ ಎಂದು ಕರೆಯಲ್ಪಡುವ ಶ್ರೀ ಸುಭಾಷ್ ಶರ್ಮಾ ಅವರ ಸಾವಯವ ಕೃಷಿ ತೋಟಕ್ಕೆ ಭೇಟಿ ನೀಡಿದರು. 2012 ರಲ್ಲಿ 6 ಎಕರೆ ಭೂಮಿಯನ್ನು ಸಾವಯವ ಕೃಷಿಗೆ ಬದಲಾಯಿಸಿದ ನಂತರ, ಇನ್ನೂ 3 ಎಕರೆ ಭೂಮಿಯನ್ನು ಖರೀದಿಸಿದರು. ಅವರು “ಮಹಾರಾಷ್ಟ್ರ ರಾಜ್ಯ ಜೀವನ್ ಉನ್ನತಿ ಅಭಿಯಾನ” ದೊಂದಿಗೆ ಸೇರಿ ವಾರ್ಧಾ ಜಿಲ್ಲೆಯ ಮಹಿಳೆಯರಿಗೆ ಸಾವಯವ ಕೃಷಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಅವರು ಪತಂಜಲಿ ಸಾವಯವ ಸಂಶೋಧನಾ ಸಂಸ್ಥೆಯ (PORI) ಯೋಗಹಾರ್ ಕಾರ್ಯಕ್ರಮದ ಸದಸ್ಯರಾಗಿದ್ದು, ಇದು ವಿಶೇಷವಾಗಿ ಸಾವಯವ ಕೃಷಿಗೆ ಮೀಸಲಾದ ಕಾರ್ಯಕ್ರಮವಾಗಿದೆ. ಪ್ರಸ್ತುತ ಅವರು PORI ಯಿಂದ ತರಬೇತುದಾರ ರೈತರಾಗಿಯೂ ಆಯ್ಕೆಯಾಗಿದ್ದಾರೆ. ಕಾಲಕಾಲಕ್ಕೆ ತಮ್ಮ ಅನುಭವಗಳನ್ನು ಸಾವಯವ ಕೃಷಿರೊಂದಿಗೆ ಹಂಚಿಕೊಳ್ಳುತ್ತಾರೆ. ಸವಿತಾ ಅವರ ಕೆಲಸದಿಂದ ಹತ್ತಿರದ ರೈತರು ಪ್ರೇರಿತರಾಗಿದ್ದಾರೆ. ಈಗ 30 ಕ್ಕೂ ಹೆಚ್ಚು ರೈತರು ಸಾವಯವ ಆಹಾರವನ್ನು ತಮ್ಮ ಸ್ವಂತ ಬಳಕೆಗಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ಹೆಚ್ಚುವರಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹ ಪ್ರಾರಂಭಿಸಿದ್ದಾರೆ. ಅವರು ಸುಮಾರು 15 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಸಾವಯವ ಮತ್ತು ಸುಮಾರು 50 ಎಕರೆ ಭೂಮಿಯನ್ನು 50% ಸಾವಯವ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ.

ಕ್ರಮೇಣ ಅವರು ವಾರ್ಧಾ-ನಾಗ್ಪುರ ರಸ್ತೆಯಲ್ಲಿರುವ ತಮ್ಮ ತೋಟದ ಹೊರಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅವರ ಸಾವಯವ ಅಂಗಡಿ ವಾರ್ಧಾ-ನಾಗ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಅಲ್ಲಿ ಅವರು ಆಯಾ ಋತುವಿನಲ್ಲಿ ಬೆಳೆದ ತರಕಾರಿಗಳು, ಗೋಧಿ ಹಿಟ್ಟು, ದ್ವಿದಳ ಧಾನ್ಯಗಳು, ಸಾಸಿವೆ, ಕೊತ್ತಂಬರಿ ಮತ್ತು ಮೆಂತ್ಯ ಮತ್ತು ಕಬ್ಬಿನ ರಸವನ್ನು ಮಾರುತ್ತಾರೆ. ಅವರು ಗೋಧಿ, ಕಬ್ಬು, ಸಾಸಿವೆ ಮತ್ತು ತೊಗರಿಬೇಳೆ ಮುಂತಾದ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ಮಾಡುತ್ತಾರೆ. ಬೇಸಿಗೆಯಲ್ಲಿ ಮುಖ್ಯವಾಗಿ ಮೇ-ಜೂನ್‌ವರೆಗೆ ತಮ್ಮ ಅಂಗಡಿಯಲ್ಲಿ ಕಬ್ಬಿನ ರಸವನ್ನು ಮಾರಾಟ ಮಾಡುತ್ತಾರೆ. ತಾವು ಬೆಳೆದ ಎಲ್ಲಾ ಕೃಷಿ ತರಕಾರಿಗಳು, ಸಂಸ್ಕರಿಸಿದ ಕಡಲೆ ಮತ್ತು ತೊಗರಿ ಬೇಳೆ, ಅರಿಶಿನ ಪುಡಿ ಮತ್ತು ಪಪ್ಪಾಯಿಯನ್ನು ಮಾರಾಟ ಮಾಡುತ್ತಾರೆ. ಸೋಯಾಬೀನ್ ಮತ್ತು ಉಳಿದ ತೊಗರಿ ಬೇಳೆಯನ್ನು ಮಂಡಿಯಲ್ಲಿ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಜನರು ಅವರ ಅಂಗಡಿಯಿಂದ ಸಾವಯವ/ನೈಸರ್ಗಿಕ ಉತ್ಪನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ ಏಕೆಂದರೆ ಅವರು ತಮ್ಮ ಎಲ್ಲಾ ಕೃಷಿ ಉತ್ಪನ್ನಗಳನ್ನು ಸಾವಯವ ಎಂದು ಯಾವುದೇ ಹೆಚ್ಚುವರಿ ಬೆಲೆಯನ್ನು ವಿಧಿಸದೆ ಮಾರಾಟ ಮಾಡುತ್ತಿದ್ದಾರೆ.

ಪೋಷಕಾಂಶಗಳ ನಿರ್ವಹಣೆಗಾಗಿ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಇತರ ಸಾವಯವ ಮೂಲಗಳ ಬಳಕೆ, ಮಲ್ಚಿಂಗ್, ಬೆಳೆ ಸರದಿ ಇತ್ಯಾದಿಗಳಂತಹ ನವೀನ ಸಾವಯವ ಕೃಷಿ ಪದ್ಧತಿಗಳಲ್ಲಿ ಅವರ ಪ್ರಯತ್ನಗಳಿಗಾಗಿ ಶ್ರೀಮತಿ ಸರಿತಾ ಅವರನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸನ್ಮಾನಿಸಿದ್ದಾರೆ.

ಆಕೆ ಉದ್ಯಮಿ. “ಮೊದಮೊದಲು ಸಮಾಜದಿಂದ ಪ್ರತಿರೋಧವನ್ನು ಎದುರಿಸಬೇಕಾಯಿತು. ಜನ ಅವಳು ಹುಚ್ಚಿ, ಗಂಡನನ್ನು ಅರ್ಥಮಾಡಿಕೊಳ್ಳುವುದಿಲ್ಲ, ಸ್ವತಃ ಬೇಸಾಯ ಮಾಡುತ್ತಾಳೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಈಗ ಅದೆಲ್ಲ ಬದಲಾಗಿದೆ. ಅವರು ಈಗ ಸಾವಯವ ಕೃಷಿಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದಾರೆ,” ಎಂದು ಶ್ರೀಮತಿ ಸರಿತಾ ಮಾತಾಡುವಾಗ ಹೇಳಿದರು. ಅವರು ಹತ್ತಿರದ ರೈತರನ್ನು ಸಾವಯವ ಕೃಷಿಯನ್ನು ಅಭ್ಯಾಸ ಮಾಡಲು ಪ್ರೇರೇಪಿಸಿದ್ದಾರೆ ಮತ್ತು ತರಬೇತಿ ನೀಡಿದ್ದಾರೆ.

ಶ್ರೀಮತಿ ಸವಿತಾ ಅವರಿಗೆ ತಾವು ನಡೆದ ಬಂದ ಹಾದಿಯ ಬಗ್ಗೆ ಖುಷಿಯಿದೆ. ತಮ್ಮ ಮಕ್ಕಳಿಗೆ ಅವರು ಇಷ್ಟಪಟ್ಟ ಓದನ್ನು ಓದಿಸಿದ್ದಾರೆ. ಅವರ ಮಗಳು ಇತ್ತೀಚೆಗೆ ಬಿ.ಇ. ಮುಗಿಸಿದ್ದಾರೆ. ಅವರ ಮಗ ಕೂಡ ಎಂ.ಎಸ್ಸಿ. ಕೃಷಿ ಮುಗಿಸಿದ್ದಾರೆ. ಗಂಡ ಮತ್ತು ಮಕ್ಕಳು ಸಹ ಕೃಷಿಯಲ್ಲಿ ಸಹಾಯ ಮಾಡುತ್ತಾರೆ.


Pawan Kumar, Manohari Rathi and Apurva Tiwari
Patanjali Organic Research Institute
Haridwar, Uttarakhand, India.
E-mail: manoharirathi19@gmail.com

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೪ ; ಡಿಸಂಬರ್ ೨೦‌೨‌೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp