ಪೌಷ್ಟಿಕಾಂಶ ತೋಟಗಳು ಆರೋಗ್ಯ ಹಾಗೂ ಸಂಪತ್ತಿನ ಲಾಭಕ್ಕೆ ರಹದಾರಿ

ಆಂಧ್ರಪ್ರದೇಶದ ವೀರಭದ್ರಪುರಂ ಗ್ರಾಮದ ಜಾನಕಿ ಬೊಬ್ಬಿಲಿ, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಕಾಲಕ್ಕೆ ತಕ್ಕಂತೆ ವೈವಿಧ್ಯಮಯ, ಪೌಷ್ಟಿಕ ಆಹಾರವನ್ನು ಉತ್ತಮವಾಗಿ ಪಡೆಯುವ ಮೂಲಕ ಗ್ರಾಮೀಣ ಕುಟುಂಬಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನ್ಯೂಟ್ರಿ-ಗಾರ್ಡನ್ ಉಪಕ್ರಮದ ಪ್ರತಿಪಾದಕರಲ್ಲಿ ಒಬ್ಬರು. ಈ ಉಪಕ್ರಮವು ಗ್ರಾಮೀಣ ಭಾರತದಾದ್ಯಂತ ಬದಲಾವಣೆಯ ಪ್ರಬಲ ಅಲೆಯನ್ನು ಸೃಷ್ಟಿಸುತ್ತಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ

ಗ್ರಾಮೀಣ ಭಾರತದಲ್ಲಿ ಆಹಾರ ಭದ್ರತೆಯಲ್ಲಿ ಸುಧಾರಣೆಗಳಿದ್ದರೂ, ಪೌಷ್ಟಿಕಾಂಶದ ಕೊರತೆ, ವಿಶೇಷವಾಗಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯು ದೊಡ್ಡ ಕಳವಳದ ಸಂಗತಿಯಾಗಿದೆ. ಆದ್ದರಿಂದಲೇ, 2021 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನ್ಯೂಟ್ರಿಗಾರ್ಡನ್ ಉಪಕ್ರಮವನ್ನು ಪ್ರಾರಂಭಿಸಿತು. ಇದು ‘ನೀವು ತಿನ್ನುವುದನ್ನೇ ಬೆಳೆಯಿರಿ ಮತ್ತು ನೀವು ಬೆಳೆದದ್ದನ್ನು ತಿನ್ನಿರಿ’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಉತ್ತಮವಾಗಿ ಯೋಜಿಸಲಾದ ಪೌಷ್ಟಿಕ ಉದ್ಯಾನ(ಅಡುಗೆ ತೋಟ)ಗಳನ್ನು ಉತ್ತೇಜಿಸುತ್ತದೆ. ಈ ಉಪಕ್ರಮವು ರಾಸಾಯನಿಕ ಒಳಸುರಿಯುವಿಕೆಗಳನ್ನು ಬಳಸದೆ ಸ್ಥಳೀಯ ತರಕಾರಿಗಳು, ಹಣ್ಣುಗಳು, ಗಿಡಮೂಲಿಕೆಗಳು ಮತ್ತು ಸಾಂಬಾರು ಪದಾರ್ಥಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತದೆ. ಅಡುಗೆ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಮರುಬಳಕೆ ಮಾಡುವುದನ್ನು ಉತ್ತೇಜಿಸುತ್ತದೆ. ಹೀಗಾಗಿ, ಈ ಉಪಕ್ರಮವು ಅಮೂಲ್ಯವಾದ ಕೃಷಿ ಜೀವವೈವಿಧ್ಯತೆ ಮತ್ತು ನೀರನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

 ದೇಶಾದ್ಯಂತ ನ್ಯೂಟ್ರಿ-ಗಾರ್ಡನ್ ಉಪಕ್ರಮವನ್ನು ಜಾರಿಗೆ ತರುವ ವಿಧಾನದಲ್ಲಿ ಪರಿಸರ ಮತ್ತು ಕೃಷಿ ಸಂಪ್ರದಾಯಗಳನ್ನು ಅವಲಂಬಿಸಿ ಬಹಳಷ್ಟು ವ್ಯತ್ಯಾಸಗಳಿವೆ. ಉದಾಹರಣೆಗೆ, ಪ್ರಕೃತಿಯೊಂದಿಗೆ ಸಾಮರಸ್ಯದ ಕೃಷಿಯನ್ನು ಉತ್ತೇಜಿಸುವ APCNF (ಆಂಧ್ರಪ್ರದೇಶ ಕಮ್ಯುನಿಟಿ ಮ್ಯಾನೇಜ್ಡ್‌ ನ್ಯಾಚುರಲ್‌ ಫಾರ್ಮಿಂಗ್) ಕಾರ್ಯಕ್ರಮವು ತನ್ನ ATM (ಎನಿ ಟೈಮ್ ಮನಿ) ಮಾದರಿಯಡಿಯಲ್ಲಿ ಪೌಷ್ಟಿಕ ತೋಟಗಳನ್ನು ಪರಿಚಯಿಸಿತು.‌

ನೈಸರ್ಗಿಕ ಕೃಷಿ ವಿಧಾನಗಳನ್ನು ಬಳಸಿಕೊಂಡು ಒಂದೇ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದನ್ನು (ರಿಲೇ ಕ್ರಾಪಿಂಗ್) ಉತ್ತೇಜಿಸುವ ಮೂಲಕ ಗ್ರಾಮೀಣ ಯುವಕರನ್ನು ಕೃಷಿಯತ್ತ ಆಕರ್ಷಿಸುವುದು ಎಟಿಎಂ ಮಾದರಿಯ ಗುರಿಯಾಗಿದೆ. ಇದು ವಿವಿಧ ಸಮಯಗಳಲ್ಲಿ ಕೊಯ್ಲು ಮತ್ತು ಬಿತ್ತನೆ ಮಾಡಿದ ಒಂದೆರಡು ವಾರಗಳಲ್ಲಿ ಸ್ಥಿರವಾದ ಆದಾಯದ ಹರಿವನ್ನು ಖಚಿತಪಡಿಸುತ್ತದೆ. ಯುವ ರೈತ ಮಹಿಳೆಯರು ತಮ್ಮ ಪೌಷ್ಟಿಕ ತೋಟಗಳನ್ನು ಸ್ಥಾಪಿಸುವ ಮೊದಲು, ನಾವು ಅವರಿಗೆ ಪ್ರತಿ ಹಂತದಲ್ಲೂ ತರಬೇತಿ ನೀಡುತ್ತೇವೆ ಎಂದು ಎಟಿಎಂ ಮಾದರಿಗೆ ಸಂಬಂಧಿಸಿದ ಜಾಗೃತಿ ಅಭಿಯಾನಗಳು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಾನಕಿ ಹೇಳುತ್ತಾರೆ.

ಜಾನಕಿ ರೈತ ಕುಟುಂಬದಿಂದ ಬಂದಿರುವುದರಿಂದ ಮಹಿಳಾ ರೈತರು ಎದುರಿಸುವ ಸವಾಲುಗಳನ್ನು ಚೆನ್ನಾಗಿ ತಿಳಿದಿದ್ದಾರೆ. ರಸಾಯನಶಾಸ್ತ್ರದಲ್ಲಿ ವಿಜ್ಞಾನ ಪದವಿ ಪಡೆದ ನಂತರ ಕೃಷಿ ತಂತ್ರಗಳ ಬಗ್ಗೆ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಉತ್ಸುಕತೆಯಿಂದ, ಸ್ಥಳೀಯ ಸರ್ಕಾರೇತರ ಸಂಸ್ಥೆಯಾದ ಸಬಲ ಆಯೋಜಿಸಿದ ಜೀವನೋಪಾಯ ಉದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ, 2016 ರಲ್ಲಿ, ಜಾನಕಿ ರೈತ ಉತ್ಪಾದಕ ಸಂಘಟನೆಗಳನ್ನು ರೂಪಿಸಲು ಮತ್ತು ತರಬೇತಿ ನೀಡಲು ಸಬಲಾವನ್ನು ಸೇರಿದರು. APCNF ಕಾರ್ಯಕ್ರಮದ ಸಂಪನ್ಮೂಲ ಸಂಸ್ಥೆಗಳಲ್ಲಿ ಒಂದಾದ ಸಬಲ, ನೈಸರ್ಗಿಕ ಕೃಷಿ, ಸಾವಯವ ಉತ್ಪಾದನೆ ಮತ್ತು ದುರ್ಬಲ ಮಹಿಳೆಯರ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿದೆ.

 ಜೀವವೈವಿಧ್ಯ ಮೇಳಗಳು ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ, ಸಬಲ ಭಾರತದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯ ಭಾಗವಾಗಿರುವ ಬರ-ನಿರೋಧಕ, ಪೋಷಕಾಂಶ-ಸಮೃದ್ಧವಾದ ಸಿರಿ ಧಾನ್ಯಗಳ ಸ್ಥಳೀಯ ಉತ್ಪಾದನೆ, ಬಳಕೆ ಮತ್ತು ಸಂಗ್ರಹಣೆಯನ್ನು ಉತ್ತೇಜಿಸುತ್ತದೆ. ದೀರ್ಘಕಾಲದವರೆಗೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಸಿರಿಧಾನ್ಯಗಳು ಕ್ರಮೇಣ ಮತ್ತೆ ಜನಪ್ರಿಯವಾಗುತ್ತಿವೆ. 2022 ರಲ್ಲಿ, ಜಾನಕಿ ಅವರಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಆಕ್ಸೆಸ್ ಅಗ್ರಿಕಲ್ಚರ್ ಯಂಗ್ ಎಂಟರ್‌ಪ್ರೆನಿಯರ್ ಚಾಲೆಂಜ್ ಫಂಡ್ ನೀಡುವ ಉಪಕ್ರಮದ ಬಗ್ಗೆ ತಿಳಿಯಿತು. ಅವರು ತಮ್ಮ ಸಹೋದ್ಯೋಗಿಗಳಾದ ಶ್ಯಾಮಲಾ ಬೊಬ್ಬಿಲಿ ಮತ್ತು ಕೊಮ್ಮು ಈಶ್ವರ ರಾವ್ ಅವರೊಂದಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಸಬಲ ಗ್ರಾಮೀಣ ಮಹಿಳೆಯರು ಮತ್ತು ಸ್ಥಳೀಯ ಬುಡಕಟ್ಟು ಯುವಕರಲ್ಲಿ ನೈಸರ್ಗಿಕ ಕೃಷಿ ಮತ್ತು ಕೃಷಿ ಜೀವವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ, ಆದ್ದರಿಂದ ಇದು ನಮಗೆ ಅರ್ಜಿ ಸಲ್ಲಿಸಲು ಪ್ರೇರಣೆ ನೀಡಿತು ಎಂದು ಜಾನಕಿ ನೆನಪಿಸಿಕೊಳ್ಳುತ್ತಾರೆ.

ಆಂಧ್ರಪ್ರದೇಶದ ಯಂಗ್‌ ಎಂಟರ್‌ಪ್ರೈನರ‍್ಸ್‌ ಫಾರ್‌ ರೂರಲ್‌ ಆಕ್ಸೆಸ್‌ (ERAs)ಗೆ ತಮ್ಮ ತಂಡವನ್ನು ಆಯ್ಕೆ ಮಾಡಿದಾಗ ಅವರಿಗೆ ಸಂತೋಷವಾಯಿತು. ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ, ಅವರ ತಂಡವು ಆಕ್ಸೆಸ್ ಅಗ್ರಿಕಲ್ಚರ್ ತರಬೇತಿ ವೀಡಿಯೊಗಳ ಸಂಪೂರ್ಣ ಗ್ರಂಥಾಲಯದ ಲಭ್ಯತೆಯನ್ನು ಹೊಂದಿರುವ ಸ್ಮಾರ್ಟ್ ಪ್ರೊಜೆಕ್ಟರ್ ಪಡೆಯಿತು. ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ (MANAGE) ಮಹಾನಿರ್ದೇಶಕ ಡಾ. ಪಿ. ಚಂದ್ರ ಶೇಖರ ಅವರು ಆಯ್ದ ಎಲ್ಲಾ ERA ತಂಡಗಳಿಗೆ: “ನಿಮ್ಮ ಕೈಯಲ್ಲಿರುವ ಈ ಮ್ಯಾಜಿಕ್ಸ್‌ ಬಾಕ್ಸ್‌ನಿಂದಾಗಿ ನೀವೆಲ್ಲರೂ ಈಗ ಸೂಪರ್‌ಹೀರೊಗಳು. ಏಕೆಂದರೆ ನೀವೀಗ ರೈತರಿಗೆ ಕೃಷಿ ಪರಿಸರ ವಿಜ್ಞಾನ ಮತ್ತು ನೈಸರ್ಗಿಕ ಕೃಷಿಯ ಪ್ರಯೋಜನಗಳನ್ನು ಮನವರಿಕೆಯಾಗುವಂತೆ ತೋರಿಸಬಹುದು,” ಎಂದು ಹೇಳಿದರು. ಇದು ಅವರಿಗೆ ಹೆಮ್ಮೆಯ ಕ್ಷಣವೆನಿಸಿತು.

ತೆಲುಗು ಭಾಷೆಯಲ್ಲಿಯೇ ರೈತರಿಂದ ರೈತ ಕಲಿಕೆಯ ಗುಣಮಟ್ಟದ ವೀಡಿಯೊಗಳನ್ನು ತೋರಿಸಿದಾಗ ಮಹಿಳಾ ರೈತರು ಮತ್ತು ಬುಡಕಟ್ಟು ಯುವಕರ ಉತ್ಸಾಹವನ್ನು ನೋಡಿದಾಗ, ಜಾನಕಿ ಮತ್ತು ಅವರ ತಂಡದ ಸದಸ್ಯರು ಈ ಹೇಳಿಕೆಯ ಸತ್ಯ ಅರಿವಾಯಿತು. ಮಹಿಳೆಯರನ್ನು ಸಬಲರಾಗಿಸಲು, ಸಬಲ 40 ಹಳ್ಳಿಗಳ ಸುಮಾರು 1,200 ಮಹಿಳಾ ರೈತರೊಂದಿಗೆ ಮಿಲೆಟ್ ಸಿಸ್ಟರ್ಸ್ ಎನ್ನುವ ಸಂಪರ್ಕಜಾಲವನ್ನು ರೂಪಿಸಿತು. ‘ಆರೋಗ್ಯ ಮಿಲೆಟ್ಸ್’ ಎಂಬ ಹೆಸರಿನಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ. ಇದು ತನ್ನ ಸದಸ್ಯರಿಗೆ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಲು ತರಬೇತಿ ನೀಡುತ್ತದೆ. ಎಲ್ಲಾ ಸದಸ್ಯರ ಸಾಮರ್ಥ್ಯವನ್ನು ಹೆಚ್ಚಿಸಲು ಸ್ಮಾರ್ಟ್ ಪ್ರೊಜೆಕ್ಟರ್ ಒಂದು ಆಯುಧದಂತೆ, ಎಂದು ಜಾನಕಿ ಹೇಳುತ್ತಾರೆ.

 ಮಣ್ಣಿನ ಫಲವತ್ತತೆ, ನೀರಿನ ಸಂರಕ್ಷಣೆ, ಗಿಡಗಳ ಆರೋಗ್ಯ ಮತ್ತು ಸಾವಯವ ಗೊಬ್ಬರಗಳ ಕುರಿತು ಸುಧಾರಿತ ಅಭ್ಯಾಸಗಳನ್ನು ಉತ್ತೇಜಿಸಲು ಸಬಲಾ ERA ತಂಡವು ಅನೇಕ ಹಳ್ಳಿಗಳಲ್ಲಿ ಸಂಬಂಧಿತ ವೀಡಿಯೊಗಳನ್ನು ಪ್ರದರ್ಶಿಸುತ್ತಿದೆ. ಇದರಲ್ಲಿ: ಭತ್ತದ ಒಣಹುಲ್ಲು, ತೆಂಗಿನಕಾಯಿ ಸಿಪ್ಪೆಯಿಂದ ಗೊಬ್ಬರ ತಯಾರಿಕೆ, ತರಕಾರಿಗಳಲ್ಲಿ ಕೀಟಬಾಧೆ ನಿರ್ವಹಣೆ, ಭತ್ತದ ಎಲೆಗಳ ಮುದುರುವಿಕೆಯನ್ನು ನಿರ್ವಹಿಸುವುದು ಮತ್ತು ಸೈನಿಕ ಹುಳುಗಳನ್ನು ನೈಸರ್ಗಿಕವಾಗಿ ಕೊಲ್ಲುವುದು ಇವು ಸೇರಿವೆ. ಸಮಗ್ರ ಕೃಷಿ ಮತ್ತು ಪೌಷ್ಟಿಕ ತೋಟಗಳಿಗೆ ಸಬಲಾದಲ್ಲಿ ಒತ್ತು ನೀಡಲಾಗಿರುವುದರಿಂದ, ತಂಡವು ತೋರಿಸಿದ ಇತರ ಜನಪ್ರಿಯ ವೀಡಿಯೊಗಳಲ್ಲಿ ತೊಗರಿಕಾಯಿಯೊಂದಿಗೆ ಮೆಕ್ಕೆಜೋಳವನ್ನು ಅಂತರ ಬೆಳೆಯಾಗಿ ಬೆಳೆಯುವುದು, ಸಾಲಾಗಿ ಬೆಳೆಸುವುದು, ಬೆಂಡೆಕಾಯಿಯ ಉತ್ತಮ ಬಿತ್ತನೆ, ನಿರ್ವಹಣೆ, ಟೊಮೆಟೊ ಗಿಡಗಳ ನಾಟಿ, ಉತ್ತಮ ನಿರ್ವಹಣೆ, ತಾಜಾ ಮತ್ತು ಒಣಗಿದ ಟೊಮೆಟೊಗಳ ಸಂಗ್ರಹಣೆ ಮತ್ತು ಮೆಣಸಿನಕಾಯಿಗಳನ್ನು ಒಣಗಿಸುವುದು ಮತ್ತು ಸಂಗ್ರಹಿಸುವುದು ಸೇರಿವೆ.

 ವಿಡಿಯೋ ಪ್ರದರ್ಶನಗಳ ನಂತರ ಈ ಅಭ್ಯಾಸಗಳನ್ನು ಅವರ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಗುಂಪಿನಲ್ಲಿ ಚರ್ಚೆಗಳು ನಡೆಯುತ್ತವೆ. ತರಕಾರಿಗಳು, ಹೂವುಗಳು, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳನ್ನು ಒಳಗೊಂಡಿರುವ ಎಟಿಎಂ ಮಾದರಿಯ ಬಗ್ಗೆ ಜಾಗೃತಿ ಮೂಡಿಸಲು ಸಬಲಾ ERA ತಂಡವು ಸ್ಮಾರ್ಟ್ ಪ್ರೊಜೆಕ್ಟರ್ ಬಳಸುತ್ತದೆ. ರೈತರು ತಮ್ಮ ಜಮೀನಿನಲ್ಲಿ ಏನು ಬೆಳೆಯಬೇಕೆಂದು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಎಟಿಎಂ ಮಾದರಿಯಿಂದ ಶಿಫಾರಸು ಮಾಡಲಾದ ಪ್ರತಿಯೊಂದು ವರ್ಗದಿಂದ ಕನಿಷ್ಠ ಒಂದು ವಿಧವನ್ನು ಆಯ್ಕೆ ಮಾಡಿಕೊಳ್ಳಬೇಕು.  ರೈತರು ಬದನೆಕಾಯಿ, ಬೆಂಡೆಕಾಯಿ, ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ, ಮೂಲಂಗಿ, ಕ್ಯಾರೆಟ್, ಸಿಹಿ ಗೆಣಸು, ವಿವಿಧ ರೀತಿಯ ಕಾಯಿಗಳು, ಕರಬೇವು, ಕೊತ್ತಂಬರಿ ಸೊಪ್ಪು ಮತ್ತು ಪಾಲಕ್ ಮತ್ತು ಮೆಂತ್ಯ ಸೊಪ್ಪುಗಳಂತಹ ವ್ಯಾಪಕ ಶ್ರೇಣಿಯ ಸ್ಥಳೀಯ ತರಕಾರಿಗಳನ್ನು ಒಳಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಬಿರುಬೇಸಿಗೆಯಲ್ಲೂ ಎಟಿಎಂ ಮಾದರಿಯಡಿಯಲ್ಲಿ ಬೆಳೆಗಳು ಬದುಕುಳಿಯುತ್ತವೆ, ಆಹಾರ ಭದ್ರತೆಯನ್ನು ಖಚಿತಪಡಿಸುತ್ತವೆ.

 ರೈತರು ಸಾಮಾನ್ಯವಾಗಿ ಬೆಳೆಗಳನ್ನು ಸುಮಾರು 400 ಚದರ ಮೀಟರ್ಗಳ ಸಣ್ಣ ಜಮೀನುಗಳಲ್ಲಿ ಬೆಳೆಯುತ್ತಾರೆ. ಅವರು ವರ್ಷವಿಡೀ ಕೊಯ್ಲು ಮಾಡಬಹುದಾದ್ದರಿಂದ, ವಾರಕ್ಕೊಮ್ಮೆ ಹಣವನ್ನು ಗಳಿಸುತ್ತಾರೆ. ಅವರು ಹೆಚ್ಚಾಗಿ ತಮ್ಮ ಉತ್ಪನ್ನವನ್ನು ತಮ್ಮ ಹಳ್ಳಿಗಳಲ್ಲೇ ಮಾರಾಟ ಮಾಡುತ್ತಾರೆ. ಯಾವುದೇ ಹೆಚ್ಚುವರಿ ಉತ್ಪನ್ನವಿದ್ದರೆ, ಆಗ ನಾವು ಅವರಿಗೆ ಇತರ ಜಿಲ್ಲೆಗಳ ಖರೀದಿದಾರರೊಂದಿಗೆ ಸಂಪರ್ಕ ಕಲ್ಪಿಸುತ್ತೇವೆ ಎಂದು ಸಬಲ ತಂಡ ಹೇಳುತ್ತದೆ.

 ಕೋಟಾನುವರಿಪಾಪೆಮ್ ಗ್ರಾಮದ ರೈತ ಮಹಿಳೆ ಸಪ್ಪಳ ಪ್ರಮೀಳ ಅವರು ರೂ. 9,600  ಹೂಡಿಕೆಯೊಂದಿಗೆ 4,000 ಚದರ ಮೀಟರ್ ಜಾಗದಲ್ಲಿ ಎಟಿಎಂ ಮಾದರಿ ತೋಟವನ್ನು ಸ್ಥಾಪಿಸಿದರು. ಅವರು 13 ಬಗೆಯ ತರಕಾರಿಗಳು, 3 ಬಗೆಯ ದ್ವಿದಳ ಧಾನ್ಯಗಳು ಮತ್ತು ಚೆಂಡು ಹೂಗಳನ್ನು ಬೆಳೆಯಲು ಆಯ್ಕೆಮಾಡಿಕೊಂಡರು. ಇದರಿಂದಾಗಿ ವಾರಕ್ಕೆ ರೂ. 3,500 ಗಳಿಸಲಾರಂಭಿಸಿದರು. ನಾಲ್ಕು ತಿಂಗಳಲ್ಲಿ ರೂ. 45,000 ಗಳಿಸಿದರು. ಅಲ್ಲದೆ, ಅವರು ತರಕಾರಿಗಳನ್ನು ಖರೀದಿಸುವ ಅಗತ್ಯ ಬೀಳಲಿಲ್ಲ. ಅವರ ಕುಟುಂಬವು ರಾಸಾಯನಿಕ ಮುಕ್ತ, ಮನೆಯಲ್ಲೇ ಬೆಳೆದ ತರಕಾರಿಗಳನ್ನು ತಿನ್ನಲು ಸಾಧ್ಯವಾಯಿತು.

 ಆಹಾರ ಉತ್ಪಾದನೆ ಮತ್ತು ಜೀವವೈವಿಧ್ಯತೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ERA ತಂಡವು ಸ್ಮಾರ್ಟ್ ಪ್ರೊಜೆಕ್ಟರ್ ಬಳಸುತ್ತದೆ. ಸ್ಮಾರ್ಟ್ ಪ್ರೊಜೆಕ್ಟರ್ ಪಡೆದ ಒಂದು ವರ್ಷದೊಳಗೆ, ಜಾನಕಿ ಮತ್ತು ಅವರ ಸಹೋದ್ಯೋಗಿಗಳು ಸುಮಾರು 1,000 ಜನರಿಗೆ ವೀಡಿಯೊಗಳನ್ನು ತೋರಿಸಿದ್ದಾರೆ. ಅವರಲ್ಲಿ 68% ಮಹಿಳೆಯರು ಮತ್ತು 78% ಯುವಕರಿದ್ದಾರೆ. ರೈತ ಸಂಘಟನೆಗಳ ಸದಸ್ಯರು ಪೌಷ್ಟಿಕ ತೋಟಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲು, ಅವರು ತಮ್ಮ ವೀಡಿಯೊಗಳು ಮತ್ತು ನೈಸರ್ಗಿಕ ಕೃಷಿಯ ಕುರಿತು APCNF ನಲ್ಲಿನ ಯಶಸ್ವಿ ಪ್ರಕರಣಗಳನ್ನು ಕೂಡ ತೋರಿಸುತ್ತಾರೆ. ಗುಂಪು ಚರ್ಚೆಗಳ ಸಂದರ್ಭದಲ್ಲಿ ಜಾನಕಿಯವರು ಉಳಿದ ರೈತರಿಗೆ ಈ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸುತ್ತಾರೆ. ಆಗಸ್ಟ್ 2023 ರಲ್ಲಿ, ಜಾನಕಿಯವರ ಬದ್ಧತೆ ಮತ್ತು ಅನುಭವವನ್ನು ಗಮನಿಸಿ, ಅವರನ್ನು APCNF ನಲ್ಲಿ ಕ್ಲಸ್ಟರ್ ಕಾರ್ಯಕರ್ತೆಯಾಗಿ ಸೇರಲು ಆಹ್ವಾನಿಸಲಾಯಿತು. ಅಲ್ಲಿಯೂ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದನ್ನು ಮುಂದುವರೆಸಿದ್ದಾರೆ.

ಆಹಾರ ವ್ಯವಸ್ಥೆಗಳನ್ನು ಹವಾಮಾನ ಬದಲಾವಣೆಗೆ ಹೆಚ್ಚು ಸ್ಥಿತಿಸ್ಥಾಪಕತ್ವ ಗುಣ ಹೊಂದಿರುವಂತೆ ಮಾಡಲು ಸಮಗ್ರ ವಿಧಾನದ ಅಗತ್ಯವಿದೆ. ನೈಸರ್ಗಿಕ ಕೃಷಿ ಮತ್ತು ಪೌಷ್ಟಿಕ ತೋಟಗಳನ್ನು ಉತ್ತೇಜಿಸುವುದರ ಜೊತೆಗೆ, ಸಬಲಾ ಕಂಪನಿಯು ಸಿರಿಧಾನ್ಯ ಆಧಾರಿತ ಆಹಾರದ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಾಗಿ, ಹಲಸು, ನೆಲಗಡಲೆ ಮತ್ತು ಅರಿಶಿನದ ಜೈವಿಕ ಸಂಪನ್ಮೂಲ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಹೆಚ್ಚಿಸಲು ಸ್ಮಾರ್ಟ್ ಪ್ರೊಜೆಕ್ಟರ್ ಅನ್ನು ಬಳಸಲು ಯೋಜಿಸಿದೆ.

 Ms. Janaki Bobbili can be contacted at +91 934 739 9363 or bobbilijanaki02@gmail.com;

 ಗಮನಿಸಿ: ಇದರ ಮೂಲಪ್ರಕಟಣೆ – Van Mele, P., Mohapatra, S., Tabet, L. and Flao, B. 2024. Young changemakers:

Scaling agroecology using video in Africa

and India., Access Agriculture, Brussels, 175 pp.

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೨ ; ಜೂನ್‌ ೨೦‌೨೪

 

 

 

Recent Posts

ಪುನರುತ್ಪಾದಕ ಕೃಷಿವಿಜ್ಞಾನದ ಸಲಕರಣೆಯಾಗಿ ತಂತ್ರಜ್ಞಾನದ ಬಳಕೆ

ಪುನರುತ್ಪಾದಕ ಕೃಷಿವಿಜ್ಞಾನದ ಸಲಕರಣೆಯಾಗಿ ತಂತ್ರಜ್ಞಾನದ ಬಳಕೆ

ಸಾಂಪ್ರದಾಯಿಕ ಡಿಜಿಟಲ್‌ ಮಾರುಕಟ್ಟೆಯ ವೇದಿಕೆಗಳು ಕೇವಲ ಬಳಕೆಗಷ್ಟೇ ಗಮನ ನೀಡುತ್ತವೆ. ತಮಿಳುನಾಡಿನ ಕೃಷಿಜನನಿ ಎನ್ನುವ ವೇದಿಕೆಯು...

YouTube
Instagram
WhatsApp