ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಉತ್ತೇಜಿಸುವುದು ಇನ್ನು ಮುಂದೆ ಆಯ್ಕೆಯಲ್ಲ, ಬದಲಿಗೆ ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ನಡೆಸುತ್ತಿರುವ ವ್ಯವಹಾರಗಳು ಮುಂದುವರೆಯುವಂತೆ ನೋಡಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿನ ಬಳಕೆಯಾಗದೆ ಉಳಿದ ಸಾಮರ್ಥ್ಯವು ಬಳಕೆಯಾಗುತ್ತದೆ. ಬಡತನವನ್ನು ಕಡಿಮೆ ಮಾಡುತ್ತದೆ, ಉದ್ಯೋಗ ಸೃಷ್ಟಿಸುತ್ತದೆ ಮತ್ತು ಲಿಂಗ ಸಮಾನತೆಯಿರುವ ಸಮಾಜವನ್ನು ನಿರ್ಮಿಸುತ್ತದೆ.
56 ವರ್ಷದ ಜಮ್ನಾ ದೇವಿ, ಥಾರ್ ಮರುಭೂಮಿಯ ಜೋಧ್‌ಪುರ ಜಿಲ್ಲೆಯ ಫಲೋಡಿ ಬ್ಲಾಕ್‌ನಲ್ಲಿರುವ ಮೊಖೈ ಹಳ್ಳಿಯ ನಿವಾಸಿ. ಆಕೆ ರೈತಳಾಗಿದ್ದು ತನ್ನ ಪ್ರದೇಶದಲ್ಲಿ GRAVIS ಜಾರಿಗೆ ತಂದ ವಿವಿಧ ಕೃಷಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವರು. ಅವರು ತಮ್ಮ ಗ್ರಾಮದ ಬುಧರ್ ದಾಸ್ ರೈತ ಆಸಕ್ತ ಗುಂಪು (FIG) ಮತ್ತು ಧೋರಾ ಧರ್ತಿ ರೈತರ ಉತ್ಪಾದಕ ಸಂಘಟನೆಯ (FPO) ಸದಸ್ಯರಾಗಿದ್ದಾರೆ.
ದೇವಿ ೨೦೧೯ ರಲ್ಲಿ FIG ಸೇರಿದಾಗ, ನಿಯಮಿತವಾಗಿ ಮಾಸಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಅದೇನು ಸುಲಭದ ವಿಷಯವಾಗಿರಲಿಲ್ಲ. ಆದರೆ ಅಂತಿಮವಾಗಿ, ಇತರ ಹಲವಾರು ಮಹಿಳಾ ಸದಸ್ಯರೊಂದಿಗೆ ಒಡನಾಡುವ ಮೂಲಕ ನಾಯಕತ್ವ ಕೌಶಲ್ಯಗಳು, ಆರ್ಥಿಕ ಸಾಕ್ಷರತೆ, ವ್ಯವಹಾರ ಯೋಜನೆ, ಲೆಕ್ಕಪುಸ್ತಕ ನಿರ್ವಹಣೆ, ಉತ್ಪಾದನಾ ತಂತ್ರಜ್ಞಾನ, ಕೀಟ ಮತ್ತು ರೋಗ ನಿರ್ವಹಣೆ, ಪೋಷಕಾಂಶ ಮತ್ತು ನೀರಿನ ನಿರ್ವಹಣೆ ಮತ್ತು ಕೊಯ್ಲು ನಂತರದ ನಿರ್ವಹಣೆ ಸೇರಿದಂತೆ ಜೀರಿಗೆ ಕೃಷಿಯ ಕುರಿತು ತರಬೇತಿ ಪಡೆದರು.
ಈ ಚರ್ಚೆಗಳಲ್ಲಿ ನಿಯಮಿತವಾಗಿ ಎದುರಾಗುತ್ತಿದ್ದ ಪ್ರಮುಖ ಸವಾಲುಗಳಲ್ಲಿ ಒಂದು ಸ್ಥಳೀಯವಾಗಿ ಜೀರಿಗೆ ಬೀಜಗಳ ಲಭ್ಯತೆಯ ಕೊರತೆಯನ್ನು ಕುರಿತಾಗಿತ್ತು. ಕ್ಷೇತ್ರ ಭೇಟಿಯ ಸಮಯದಲ್ಲಿ ಅವರೊಳಗೆ ಮೊಳೆತಿದ್ದ ಬೀಜ ಬ್ಯಾಂಕಿನ ಕುರಿತಾದ ಆಲೋಚನೆಯು ರೂಪ ಪಡೆದುಕೊಳ್ಳಲಾರಂಭಿಸಿತು. ಅವರು ಕೂಡಲೇ 60 ಕೆಜಿ ಜೀರಿಗೆ ಬೀಜಗಳನ್ನು (GC4 ವಿಧ) (ಮಾರುಕಟ್ಟೆಯಲ್ಲಿ ವಿರಳವಾಗಿ ಕಂಡುಬರುತ್ತವೆ) ರೈತರ ಸ್ಥಳೀಯ ಮತ್ತು ಸಾಂಪ್ರದಾಯಿಕ ತಂತ್ರವನ್ನು ಬಳಸಿಕೊಂಡು ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿದರು. ಅವರು ತಮ್ಮ ಮನೆಯಲ್ಲಿ ಈ ಬ್ಯಾಂಕ್ ರೂಪಿಸಿದರು. FIG ನ ಇತರ ಸದಸ್ಯರೊಂದಿಗೆ ಅದನ್ನು ನಿರ್ವಹಿಸುತ್ತಿದ್ದಾರೆ.
ಮುಂದಿನ ಬಿತ್ತನೆ ಋತುವಿನಲ್ಲಿ, FIG ಸದಸ್ಯರು 25 ರೈತರಿಗೆ 60 ಕೆಜಿ ಸಂಗ್ರಹಿಸಿದ ಜೀರಿಗೆ ಬೀಜಗಳನ್ನು ವಿತರಿಸಿದರು. ರೈತರು ಬೆಳೆ ಕೊಯ್ಲು ಮಾಡಿದ ನಂತರ, ಮುಂದಿನ ರಬಿ ಋತುವಿಗೆ ಬಳಸಲು ಅವರಿಂದ ದುಪ್ಪಟ್ಟು ಜೀರಿಗೆ ಬೀಜಗಳನ್ನು ಸಂಗ್ರಹಿಸಲಾಯಿತು, ನಂತರ ಅದನ್ನು 50 ರೈತರಿಗೆ ವಿತರಿಸಲಾಯಿತು. ಇಂದು, 240 ಕೆಜಿ ಬೀಜಗಳು ಬೀಜ ಬ್ಯಾಂಕಿನಲ್ಲಿವೆ. ಅವರ ಹಳ್ಳಿಯ ರೈತರು ಉತ್ತಮ ಗುಣಮಟ್ಟದ ಬೀಜಗಳನ್ನು ತಮ್ಮ ಮನೆ ಬಾಗಿಲಲ್ಲೇ ಪಡೆಯಲು ಸಾಧ್ಯವಾಗುತ್ತಿದೆ. ಇದು ಸಮಯ ಮತ್ತು ಹಣವನ್ನು ಉಳಿಸುವುದರ ಜೊತೆಗೆ ಒಳಸುರಿಯುವಿಕೆ ಪೂರೈಕೆದಾರರು ಮತ್ತು ಕಮಿಷನ್ ದಲ್ಲಾಳಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಜಮ್ನಾ ದೇವಿ ತಮ್ಮ ಹಳ್ಳಿಯ ಹಲವಾರು ಮಹಿಳೆಯರನ್ನು ಸುಧಾರಿತ ಕೃಷಿ ಪದ್ಧತಿಗಳನ್ನು ಬಳಸುವಂತೆ ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಂಡಳಿಯ ಸದಸ್ಯರಾಗಿ, ಅವರು ತಮ್ಮ FPO ಗಾಗಿ 3 ವರ್ಷಗಳ ಸುಸ್ಥಿರತೆ/ವ್ಯವಹಾರ ಯೋಜನೆಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದನ್ನು ಕ್ರಿಯಾತ್ಮಕ ಕೃಷಿ ಉದ್ಯಮವನ್ನಾಗಿ ಮಾಡುವಲ್ಲಿ ಕೊಡುಗೆ ನೀಡುವತ್ತ ಗಮನ ಹರಿಸಿದ್ದಾರೆ. ಈ ಉದ್ಯಮವು ಯಶಸ್ವಿಯಾಗಲು ಸ್ವಲ್ಪ ಸಮಯ ಮತ್ತು ಕಲಿಕೆ ಬೇಕಾಗುತ್ತದೆ. ಜಮ್ನಾ ದೇವಿಯ ಕಥೆಯು ಬದುಕುಳಿಯಲು ಕಷ್ಟಕರವಾದ ಥಾರ್ ಪ್ರದೇಶದಲ್ಲಿ ಅಪವಾದವಾಗಿದೆ. ಈ ಪ್ರದೇಶವು ಹವಾಮಾನ ವೈಪರಿತ್ಯ, ಪುನರಾವರ್ತಿತ ಬರಗಾಲ, ನೀರಿನ ಕೊರತೆ, ಮಣ್ಣು ಸವಕಳಿ ಮತ್ತು ಲವಣಾಂಶದಿಂದ ಕೂಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಗಳನ್ನು ಹೆಚ್ಚಿಸುತ್ತದೆ. ದೂರದಿಂದ ನೀರು ತರುವುದರಲ್ಲೇ ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗುತ್ತದೆ. ಇದರೊಂದಿಗೆ ಕುಟುಂಬ ಸದಸ್ಯರನ್ನು ನೋಡಿಕೊಳ್ಳುವುದು, ದೈನಂದಿನ ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗಳು ಮತ್ತು ಇತರ ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಒತ್ತಡಗಳಿಂದಾಗಿ ಅವರಿಗೆ ಅಧ್ಯಯನಕ್ಕಾಗಲಿ, ಸ್ವಂತದ ಕಾಳಜಿ ವಹಿಸಲಾಗಲಿ ಅಥವಾ ಆದಾಯ ಗಳಿಸುವ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲಾಗಲಿ ಹೆಚ್ಚಿನ ಸಮಯ ದೊರೆಯುವುದಿಲ್ಲ.
ಮಹಿಳೆಯರ ನೇತೃತ್ವದ ಕೃಷಿ ಉದ್ಯಮಗಳು
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ನೇತೃತ್ವದ ಕೃಷಿ ಉದ್ಯಮಗಳು ಲಾಭದಾಯಕ ವ್ಯಾಪಾರ ಸಂಸ್ಥೆಗಳಾಗಿ ತಮ್ಮನ್ನು ತಾವು ಉಳಿಸಿಕೊಳ್ಳುವ ಹಾದಿಯಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸುತ್ತಿವೆ. ಇದರಲ್ಲಿ ಕೈಗೆಟುಕುವ ಮತ್ತು ಗುಣಮಟ್ಟದ ಕೃಷಿ ಸರಬರಾಜು ಮತ್ತು ಒಳಸುರಿಯುವಿಕೆಗಳ ಕೊರತೆ, ಕೆಲಸಕ್ಕೆ ಅಗತ್ಯವಾದ ಬಂಡವಾಳ, ಮಾರುಕಟ್ಟೆ, ತಂತ್ರಜ್ಞಾನ, ವೈಯಕ್ತಿಕ ಮಾರ್ಗದರ್ಶನ ಮತ್ತು ನೆರವು ಸೇರಿದಂತೆ ಶಿಕ್ಷಣದ ಕೊರತೆ, ಸೀಮಿತ ಚಲನಶೀಲತೆ, ವೃತ್ತಿಪರ ನೆಟ್‌ವರ್ಕ್‌ಗಳಿಗೆ ಪ್ರವೇಶದ ಕೊರತೆ ಮತ್ತು ಸೀಮಿತ ಉದ್ಯಮ ಜ್ಞಾನದಂತಹ ಹಲವಾರು ಇತರ ಅಂಶಗಳು ಸೇರಿವೆ. ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಗಳು ಮಹಿಳೆಯರನ್ನು ಉದ್ಯಮಗಳನ್ನು ಕೈಗೆತ್ತಿಕೊಳ್ಳಲು ಪ್ರೋತ್ಸಾಹಿಸುವ ಬದಲು ಸಾಂಪ್ರದಾಯಿಕ ಲಿಂಗ ಪಾತ್ರಗಳಿಗೆ ಸೀಮಿತಗೊಳಿಸುತ್ತವೆ.
ಸಾಮಾನ್ಯವಾಗಿ, ಅವರು ಕೃಷಿಯಲ್ಲಿ ಕಳೆ ಕೀಳುವುದು, ಬಿತ್ತನೆ, ನಾಟಿ ಮತ್ತು ಕೊಯ್ಲು ಮಾಡುವುದರ ಜೊತೆಗೆ ಜಾನುವಾರುಗಳನ್ನು ನೋಡಿಕೊಳ್ಳುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಾರುಕಟ್ಟೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಎಲ್ಲವನ್ನೂ ಸಾಮಾನ್ಯವಾಗಿ ಮನೆಯ ಪುರುಷ ಸದಸ್ಯರ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಮಹಿಳೆಯರ ದೊಡ್ಡ ಮಟ್ಟದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಕೊಡುಗೆಯ ಹೊರತಾಗಿಯೂ, ಅವರ ಕೆಲಸವನ್ನು ಆರ್ಥಿಕವಾಗಿ ಉತ್ಪಾದಕವೆಂದು ಗುರುತಿಸಲಾಗಿಲ್ಲ. ಅವರ ಮನೆಕೆಲಸಗಳು ಮತ್ತು ಉದ್ಯಮಶೀಲತಾ ಚಟುವಟಿಕೆಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸುವುದು ಕಷ್ಟಕರವಾದ್ದರಿಂದ ಅವರಿಗೆ ಉದ್ಯಮಿಗಳು ಎನ್ನುವ ಹಣೆಪಟ್ಟಿಯನ್ನು ವಿರಳವಾಗಿ ಕಟ್ಟಲಾಗುತ್ತದೆ. ಆದರೂ, ಒಟ್ಟಾರೆ ಪರಿಸ್ಥಿತಿ ಈಗ ಬದಲಾಗುತ್ತಿದೆ.
ಪುರುಷ ಸದಸ್ಯರ ವಲಸೆ ಹೆಚ್ಚಾಗುತ್ತಿರುವುದರಿಂದ ಭಾರತೀಯ ಕೃಷಿಯು ತ್ವರಿತವಾಗಿ ಸ್ತ್ರೀಕರಣಗೊಳ್ಳುತ್ತಿದೆ. ಮಹಿಳೆಯರು ಸಹಜವಾಗಿ ಕೃಷಿ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆ ಢಾಳಾಗಿ ಕಾಣುತ್ತಿದ್ದರೂ, ಮಹಿಳೆಯರು ಉದ್ಯಮಿಗಳಾಗಿ ಬೆಳೆಯಲು ಮತ್ತು ಕೌಶಲ್ಯ ವೃದ್ಧಿ, ಬಂಡವಾಳ, ಮಾರುಕಟ್ಟೆಗಳು ಮತ್ತು ಪೂರೈಕೆ ಸರಪಳಿಗಳಿಗೆ ಪ್ರವೇಶ ಪಡೆಯಲು ಸೂಕ್ತ ಪರಿಸರ ವ್ಯವಸ್ಥೆ ಇದೆಯೇ ಎಂಬುದು ಉತ್ತರ ಕಂಡುಕೊಳ್ಳಬೇಕಾದ ದೊಡ್ಡ ಪ್ರಶ್ನೆಯಾಗಿದೆ. ರೈತ ಉತ್ಪಾದಕ ಸಂಸ್ಥೆಗಳ (FPO) ಉಗಮವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಅವರು ಒಗ್ಗೂಡಲು, ಉತ್ತಮ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ. FPO ಗಳಿಗೆ ಸೇರಿದ್ದರಿಂದ ಅನೇಕ ರೈತರ ಜೀವನ ಬದಲಾಗಿದೆ. ಆದರೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪುರುಷರಂತೆ ಸಮಾನ ಅವಕಾಶಗಳು ಸಿಕ್ಕಿವೆಯೇ? ಹೆಚ್ಚಿನ ಸಂದರ್ಭಗಳಲ್ಲಿ, ಕಠಿಣ ಸಾಮಾಜಿಕ-ಸಾಂಸ್ಕೃತಿಕ ರೂಢಿಗಳು, ಕೌಟುಂಬಿಕ ಜವಾಬ್ದಾರಿಗಳು ಮತ್ತು ಸಂಕುಚಿತ ಸಾಮಾಜಿಕ ಚಲನಶೀಲತೆಯಿಂದಾಗಿ ಸಮಯದ ನಿರ್ಬಂಧಗಳಿಂದಾಗಿ ಅನೇಕ ಮಹಿಳೆಯರು ಈ ಸಂಸ್ಥೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. FPO ಸದಸ್ಯತ್ವ ಮತ್ತು ನಾಯಕತ್ವಗಳಲ್ಲಿ ಪುರುಷರದೇ ಸಿಂಹಪಾಲು. ಇಲ್ಲೆಲ್ಲ ಮಹಿಳೆಯರ ಪ್ರಾತಿನಿಧ್ಯ ಕಡಿಮೆ. ಅವರು ಸದಸ್ಯರಾದರೂ ಕೂಡ, ಸಭೆಗಳಿಗೆ ಹಾಜರಾಗುವುದಿಲ್ಲ ಅಥವಾ ಭಾಗವಹಿಸಿದಾಗ ಮಾತನಾಡುವುದಿಲ್ಲ.
ಭಾರತದಲ್ಲಿ ಮಹಿಳಾ ಕೆಲಸಗಾರರ ಭಾಗವಹಿಸುವಿಕೆಯ ದರವು ವಿಶ್ವದಲ್ಲೇ ಅತ್ಯಂತ ಕಡಿಮೆ. ಕೃಷಿಯಲ್ಲಿ ಹೆಚ್ಚಿನ ಉತ್ಪಾದನಾ ಸಂಪನ್ಮೂಲಗಳನ್ನು ಹೊಂದುವುದರಿಂದ ಅವರನ್ನು ವ್ಯವಸ್ಥಿತವಾಗಿ ಹೊರಗಿಡಲಾಗಿದೆ ಎನ್ನುವುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ಗ್ರಾಮೀಣ ಮಹಿಳೆಯರಲ್ಲಿ ಶೇ.70 ಕ್ಕಿಂತ ಹೆಚ್ಚು ಜನರು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶೇ.13 ಕ್ಕಿಂತ ಕಡಿಮೆ ಜನರು ಮಾತ್ರ ಭೂಮಿ ಹೊಂದಿದ್ದಾರೆ. 2020 ರಲ್ಲಿ, ಭಾರತ ಸರ್ಕಾರವು 2024 ರ ವೇಳೆಗೆ ದೇಶದಲ್ಲಿ 10,000 FPO ಯೋಜನೆಗಳ ಸ್ಥಾಪನೆಗೆ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿತು. ಆದರೆ ದುರದೃಷ್ಟವಶಾತ್, ಈ ಯೋಜನೆಯಲ್ಲಿ, ಕನಿಷ್ಠ ಸಂಖ್ಯೆಯ ಮಹಿಳಾ FPOಗಳನ್ನು ರಚಿಸಬೇಕೆಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಅಥವಾ FPOದಲ್ಲಿ ಇರಬೇಕಿರುವ ಕನಿಷ್ಠ ಮಹಿಳಾ ಸದಸ್ಯರ ಸಂಖ್ಯೆಯ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆಯೂ ಇಲ್ಲ. ಮಹಿಳಾ ರೈತರಿಗೆ ಮಾಹಿತಿ, ಚಲನಶೀಲತೆ ಮತ್ತು ಹಣದ ಲಭ್ಯತೆ ಬಹಳ ಕಡಿಮೆ. ಆದ್ದರಿಂದ, ಮಹಿಳೆಯರನ್ನು ಒಳಗೊಳ್ಳಲು ವಿಶೇಷ ಪ್ರಯತ್ನಗಳು ಬೇಕಾಗುತ್ತವೆ. ಏಕೆಂದರೆ ಅವರು ಸ್ವತಃ FPO ಗಳ ಭಾಗವಾಗುವುದನ್ನು ಪರಿಗಣಿಸುವುದಿಲ್ಲ.
GRAVIS ಪ್ರಸ್ತುತ 2 FPOಗಳು ಮತ್ತು 50 FIGಗಳೊಂದಿಗೆ ಕೆಲಸ ಮಾಡುತ್ತಿದೆ. ಹಾಗಾಗಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಮಾರುಕಟ್ಟೆ ಸಂಬಂಧಿತ ಚಟುವಟಿಕೆಗಳಲ್ಲಿ ಕನಿಷ್ಠ 33% ಮಹಿಳಾ ಸದಸ್ಯರಿರುವಂತೆ ನೋಡಿಕೊಂಡಿದೆ. ಈ ಗುಂಪುಗಳಲ್ಲಿರುವ ಮಹಿಳೆಯರನ್ನು ಸೂಕ್ತ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ಮಂಡಳಿಯ ಸದಸ್ಯರು ಮತ್ತು ಷೇರುದಾರರಾಗಿ ನಾಯಕತ್ವದ ಸ್ಥಾನಗಳಿಗೆ ಸೇರ್ಪಡೆಗೊಳಿಸಲಾಗಿದೆ. ಡಿಜಿಟಲ್ ವೇದಿಕೆಗಳ ಮೂಲಕ ಕಲಿಕೆ, ಮಸಾಲೆಗಳ ಉತ್ಪಾದಕತೆ ವರ್ಧನೆಗೆ ಉತ್ತಮ ಕೃಷಿ ಪದ್ಧತಿಗಳು, ಸಂಯೋಜಿತ ಮಸಾಲೆ ಸಾವಯವ ಕೃಷಿ ಮತ್ತು ಬಿತ್ತನೆ, ಜಮೀನಿನಲ್ಲಿ ತರಬೇತಿಗಳು ಮತ್ತು ಪ್ರಾತ್ಯಕ್ಷಿಕೆಗಳು, ಭೂ ಸಿದ್ಧತೆಗಾಗಿ ತಾಂತ್ರಿಕ ಉಪಕರಣಗಳು, ಸಂಗ್ರಹಣೆ, ದಾಸ್ತಾನು ನಿರ್ವಹಣೆ, ಬೆಲೆ ನಿಗದಿ, ಖರೀದಿದಾರರೊಂದಿಗೆ ಸಹಯೋಗ ಮತ್ತು ವಿವಿಧ ಹಣಕಾಸು ಸೇವೆಗಳ ಬಗ್ಗೆ ತಿಳಿವಳಿಕೆ ಹಾಗೂ ಅವುಗಳನ್ನು ಪಡೆಯುವ ಕುರಿತು ಅವರಿಗೆ ತರಬೇತಿ ನೀಡಲಾಗಿದೆ.
ರಾಜಸ್ಥಾನದ ಜೋಧಪುರ ಜಿಲ್ಲೆಯ ಓಸಿಯನ್ ಮತ್ತು ಫಲೋಡಿ ಬ್ಲಾಕ್‌ಗಳ ಒಂದು ಸಾವಿರ ಸಣ್ಣ ಮತ್ತು ಅತಿ ಸಣ್ಣ ಜೀರಿಗೆ ಮತ್ತು ಕೊತ್ತಂಬರಿ ಬೆಳೆಗಾರರು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರು ಎಫ್‌ಐಜಿಗಳು ಮತ್ತು ಎಫ್‌ಪಿಒಗಳ ಮೂಲಕ ಸಾಮೂಹಿಕವಾಗಿ ವ್ಯವಹಾರ ನಡೆಸಲು ಆರಂಭಿಸಿದ್ದಾರೆ. ಸಾಂಬಾರ ಬೆಳೆಗಾರರ ವ್ಯಕ್ತಿಗತ ಮತ್ತು ಗುಂಪು ಸಾಮರ್ಥ್ಯವು ಗಣನೀಯವಾಗಿ ಏರಿಕೆ ಕಂಡಿದೆ. 914 ಎಕರೆ ಭೂಮಿಯಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ನಿರ್ವಹಣಾ ಪದ್ಧತಿಗಳನ್ನು ಬಳಸಿದ್ದರಿಂದ, ಮಾರಾಟದ ಪ್ರಮಾಣ ಮತ್ತು ಮೌಲ್ಯವು ಗಣನೀಯವಾಗಿ ಹೆಚ್ಚಿದೆ. 100% ಪುರುಷ ಮತ್ತು ಮಹಿಳಾ ರೈತರು ಮತ್ತು ಮೌಲ್ಯ ಸರಪಳಿಯಲ್ಲಿನ ಇತರರು ಬ್ಯಾಂಕುಗಳು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಹಣಕಾಸು ಸೇವೆಗಳನ್ನು ಪಡೆಯುತ್ತಿದ್ದಾರೆ. ಎಲ್ಲಾ ರೈತರು ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅದರ ಹಣಕಾಸು ಸೇವೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ ತೊಡಗಿರುವ ರೈತರು ತಮ್ಮ ಜೀವನೋಪಾಯವನ್ನು ಗಳಿಸಲು ಇನ್ನೂ ದೀರ್ಘ ಹಾದಿ ಸವೆಸಬೇಕಿದೆ. GRAVIS ಮಸಾಲೆ ಬೆಳೆಗಾರರ, ವಿಶೇಷವಾಗಿ ಮಹಿಳೆಯರ FIGs ಮತ್ತು FPO ಗಳನ್ನು ಬೆಂಬಲಿಸುವುದನ್ನು ಮುಂದುವರಿಸಿದೆ. ಅವರಿಗೆ ಸಂಪನ್ಮೂಲಗಳನ್ನು ಪಡೆಯಲು, ನೇರ ಸಂಪರ್ಕಗಳನ್ನು ಸಕ್ರಿಯಗೊಳಿಸಲು, ಉತ್ತಮ ಆದಾಯ ಮತ್ತು ಲಾಭಕ್ಕಾಗಿ ಗುಣಮಟ್ಟದ ಕೃಷಿ ಒಳಸುರಿಯುವಿಕೆಗಳನ್ನು ಪಡೆಯಲು ಸಮರ್ಥ ಸಾಮಾಜಿಕ-ಆರ್ಥಿಕ ವಾತಾವರಣವನ್ನು ಒದಗಿಸುತ್ತದೆ.
ಮಹಿಳಾ ಕೃಷಿ ಉದ್ಯಮಶೀಲತೆಯನ್ನು ಬಲಪಡಿಸುವುದು
ಉದ್ಯಮಶೀಲತೆಯನ್ನು ಮುಂದುವರಿಸಲು ಬಯಸುವ ಗ್ರಾಮೀಣ ಮಹಿಳೆಯರು ಎದುರಿಸುವ ಸವಾಲುಗಳನ್ನು ಜಯಿಸಲು, ಕೌಶಲ್ಯ ತರಬೇತಿ, ಮೌಲ್ಯವರ್ಧನೆಯ ಒಳಸುರಿಯುವಿಕೆಗಳು, ಸುಧಾರಿತ ಆರ್ಥಿಕ ಲಭ್ಯತೆ, ಅಪಾಯ ಹಂಚಿಕೆ ಮತ್ತು ಮಾರುಕಟ್ಟೆ ಸಹಯೋಗಗಳೊಂದಿಗೆ ಮಾರ್ಗದರ್ಶನವನ್ನು ನೀಡುವ ಬೆಂಬಲಿತ ವಾತಾವರಣವನ್ನು ಪೋಷಿಸಬೇಕು. ಮಹಿಳೆಯರ ಕೃಷಿ ಉದ್ಯಮಶೀಲತೆಯನ್ನು ಬಲಪಡಿಸುವ ಮತ್ತು ಉತ್ತೇಜಿಸುವ ಇತರ ಕೆಲವು ಅಂಶಗಳು:
- ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಹಣಕಾಸು ಸಾಕ್ಷರತಾ ತರಬೇತಿ ಕಾರ್ಯಕ್ರಮಗಳು.
- ಉತ್ಪಾದನಾ-ಆಧಾರಿತ ಕಂಪನಿಯಿಂದ ಮಾರುಕಟ್ಟೆ-ನೇತೃತ್ವದ ಸಾಮಾಜಿಕ ಉದ್ಯಮವಾಗಿ FPO ವನ್ನು ಅಭಿವೃದ್ಧಿಪಡಿಸಲು ಮಹಿಳೆಯರ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದು. ಉತ್ಪಾದನೆಯ ಪ್ರಮಾಣ ಹೆಚ್ಚಿಸುವುದು ಮುಖ್ಯ. ಅದರೊಂದಿಗೆ ಬೇಡಿಕೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾರುಕಟ್ಟೆಯ ಗುಣಮಟ್ಟ ಮತ್ತು ಪ್ರಕ್ರಿಯೆಯ ಅವಶ್ಯಕತೆಗಳನ್ನು ಪೂರೈಸಲು ರೈತರನ್ನು ಸಿದ್ಧಪಡಿಸುವುದು ಸಹ ಅಗತ್ಯ. ಮೌಲ್ಯವರ್ಧನೆ ಮಾತ್ರ FPOಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ದೇಶದ ಆದ್ಯತೆಯ ವಿಷಯವಾಗಬೇಕು.
- ಮಹಿಳೆಯರು ತಮ್ಮ ವ್ಯವಹಾರಗಳನ್ನು ಆರಂಭಿಸಲು, ಆಸ್ತಿಗಳನ್ನು ಖರೀದಿಸಲು ಮತ್ತು ಮನೆಗಳನ್ನು ನಿರ್ಮಿಸಲು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಕೆಲವು ನಿಯಮಗಳ ಮೇಲೆ ಸಾಲವನ್ನು ಪಡೆಯುವಲ್ಲಿ ಆದ್ಯತೆ.
- ಗ್ರಾಮೀಣ ಪ್ರದೇಶಗಳಲ್ಲಿ ಅರ್ಹ ರೈತ ಮಹಿಳೆಯರಿಗೆ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಪರ್ಯಾಯ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವುದು.
- ಮಹಿಳಾ ಉದ್ಯಮಶೀಲತೆಯನ್ನು ಗುರಿಯಾಗಿಟ್ಟುಕೊಂಡು ನಡೆಸುವ ಕಾರ್ಯಕ್ರಮಗಳು ಅವರ ಸಮಯ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು. ರೈತ ಮಹಿಳೆಯರ ಅಗತ್ಯಗಳನ್ನು ಪೂರೈಸಲು ಅವರಿಗೆ ಹೊಂದುವಂತೆ ಮಾಡಿದ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳು ಸಿಗುವಂತೆ ಮಾಡಬೇಕು.
- ಮಹಿಳೆಯರಿಗೆ ಪರ್ಯಾಯ ಕ್ರೆಡಿಟ್ ಸ್ಕೋರ್ ವ್ಯವಸ್ಥೆಯನ್ನು ರಚಿಸುವುದು, ಚಲನಶೀಲತೆಯ ನಿರ್ಬಂಧಗಳು ಮತ್ತು ಇತರ ಸಾಮಾಜಿಕ-ಸಾಂಸ್ಕೃತಿಕ ಅಂಶಗಳನ್ನು ನಿವಾರಿಸಲು, ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗಳಲ್ಲಿ ಮತ್ತು ವಿವಿಧ ಇ-ವಾಣಿಜ್ಯ ವೇದಿಕೆಗಳಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸುವುದು.
- ಸಣ್ಣ ಮತ್ತು ಸ್ಥಳೀಯ FPOಗಳು ಬಹು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಉತ್ಪಾದಕರ ಸಾಮೂಹಿಕ ವೇದಿಕೆಗಳಲ್ಲಿ ಭಾಗವಹಿಸಲು ಸಹಾಯ ಮಾಡುವುದು ಮತ್ತು ಆ ಮೂಲಕ ಲಾಭವನ್ನು ಪಡೆಯುವುದು.
- ವಿನೂತನ ಮತ್ತು ಕೈಗೆಟುಕುವ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯಲು ಮಹಿಳೆಯರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು.
- ಮಹಿಳಾ ಉದ್ಯಮಿಗಳಿಗೆ ಸೂಕ್ತವಾದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಸರ್ಕಾರಿ ಯೋಜನೆಗಳನ್ನು ಪಡೆಯಲು ಸಹಾಯ ಮಾಡುವುದು. ಕೇಂದ್ರ ಪ್ರಾಯೋಜಿತ ಯೋಜನೆಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಉದ್ಯಮಗಳಿಗೆ ಹಣಕಾಸಿನ ಮೂಲವಾಗಬಹುದು.
- ಮಹಿಳೆಯರು ನಡೆಸುವ ಕೃಷಿ ಉದ್ಯಮಗಳಿಗೆ ಸಂವಹನ, ಬ್ರ್ಯಾಂಡಿಂಗ್, ಗುಣಮಟ್ಟ ನಿರ್ವಹಣೆ, ಬೆಲೆ ನಿಗದಿ ಮತ್ತು ವಿತರಣಾ ಮಾರ್ಗಗಳಲ್ಲಿ ಸಹಾಯ ಮಾಡಲು ಕೌಶಲ್ಯಪೂರ್ಣ ವೃತ್ತಿಪರರು ಮತ್ತು ಕೈಗಾರಿಕಾ ತಜ್ಞರನ್ನು ಕರೆತರುವುದು, ಇದರಿಂದ ಮಾರುಕಟ್ಟೆಯಲ್ಲಿ ಅವು ಕಾರ್ಯರೂಪ ಪಡೆಯಲು ನೆರವಾಗುತ್ತದೆ.
ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಉತ್ತೇಜಿಸುವುದು ಇನ್ನು ಮುಂದೆ ಆಯ್ಕೆಯಲ್ಲ, ಬದಲಿಗೆ ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ನಡೆಸುತ್ತಿರುವ ವ್ಯವಹಾರಗಳು ಮುಂದುವರೆಯುವಂತೆ ನೋಡಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿನ ಬಳಕೆಯಾಗದೆ ಉಳಿದ ಸಾಮರ್ಥ್ಯವು ಬಳಕೆಯಾಗುತ್ತದೆ. ಬಡತನವನ್ನು ಕಡಿಮೆ ಮಾಡುತ್ತದೆ, ಉದ್ಯೋಗ ಸೃಷ್ಟಿಸುತ್ತದೆ ಮತ್ತು ಲಿಂಗ ಸಮಾನತೆಯಿರುವ ಸಮಾಜವನ್ನು ನಿರ್ಮಿಸುತ್ತದೆ. ಸಾರ್ವಜನಿಕ, ವಾಣಿಜ್ಯ ಮತ್ತು ನಾಗರಿಕ ಸಮಾಜ ವಲಯಗಳನ್ನು ಒಳಗೊಂಡಿರುವ ಅಂತರ-ವಲಯ ವಿಧಾನವು, ಭಾರತದಲ್ಲಿ ಕೃಷಿಯನ್ನು ಮುಂದಕ್ಕೆ ಹೊತ್ಯೊಯ್ಯುತ್ತಿರುವ ಮಹಿಳೆಯರ ಆಕಾಂಕ್ಷೆಗಳು ಮತ್ತು ಪ್ರಗತಿಯನ್ನು ತಡೆಹಿಡಿಯುವ ಅನೇಕ ಅಂತರಗಳನ್ನು ನಿವಾರಿಸುವುದರ ಜೊತೆಗೆ ನಾವೀನ್ಯತೆ ಮತ್ತು ಬೆಳವಣಿಗೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
Krupa Gandhi
Communication & Dissemination Consultant, GRAVIS
3/437, 458, M M Colony, Pal Road
Jodhpur-342008, India.
E-mail: krupa@gravis.org.in
www.gravis.org.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್ ೨೦೨೪



