ಬೀಜ ಸಂರಕ್ಷಕರು ಮಹಿಳಾ ನೇತೃತ್ವದ ಕೃಷಿ ಉದ್ಯಮ


ಮಾರ್ಗದರ್ಶನ ಮತ್ತು ತರಬೇತಿ ನೆರವಿನೊಂದಿಗೆ ಮಹಾರಾಷ್ಟ್ರದ ಮಹಿಳಾ ಉದ್ಯಮಿಗಳು ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಒದಗಿಸುವ ವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ. ಯಾರೂ ಗುರುತಿಸಿದ ಕೊಡುಗೆಯ ಮೂಲಕ ತಮ್ಮ ಮನೆಗಳು ಅಥವಾ ಹೊಲಗಳಿಗೆ ಸೀಮಿತವಾಗಿದ್ದ ಅವರೀಗ ಎಲ್ಲರಿಗೂ ಕಾಣುವಂತಹ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿದ್ದು ದೊಡ್ಡ ಮಟ್ಟದ ಸಾಮಾಜಿಕ ಸ್ವೀಕಾರವನ್ನು ಪಡೆದಿದ್ದಾರೆ.


ಭಾರತದ 40 ಕೋಟಿ ಗ್ರಾಮೀಣ ಮಹಿಳೆಯರು ನಮ್ಮ ಗ್ರಾಮೀಣ ಆರ್ಥಿಕತೆಯ ಆಧಾರವಾಗಿದ್ದಾರೆ. ತಮ್ಮ ಮನೆಗಳೊಂದಿಗೆ ಅವರು ಕೃಷಿ ಮತ್ತು ಜಾನುವಾರು ನಿರ್ವಹಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲಿ ತ್ವರಿತವಾಗಿ ಆಗಿರುವ ಸ್ತ್ರೀಕರಣದೊಂದಿಗೆ, ಅವರ ಪಾತ್ರವು ಇನ್ನಷ್ಟು ನಿರ್ಣಾಯಕವಾಗಿದೆ.

ಭಾರತದ 63 ಮಿಲಿಯನ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ (MSME) 20% ಮಹಿಳೆಯರು ಒಡೆತನದಲ್ಲಿದ್ದು, 22 ರಿಂದ 27 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತಿವೆ ಎಂದು ಅಂಕಿಅಂಶಗಳು ತೋರಿಸುತ್ತಿವೆ. ಇದಲ್ಲದೆ, ನಗರ ಪ್ರದೇಶಗಳಿಗಿಂತ (18.42%) ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಒಡೆತನದ ಉದ್ಯಮಗಳು (22.24%) ಹೆಚ್ಚಿವೆ. ಆದರೂ, ಈ ಮಹಿಳಾ ನೇತೃತ್ವದ ಉದ್ಯಮಗಳಿಗೆ ಅಷ್ಟಾಗಿ ಮಾನ್ಯತೆಯ ಸಿಗದಿರುವುದು ಕಳವಳಕಾರಿ ಸಂಗತಿಯಾಗಿದೆ.

ಮಹಿಳಾ ಉದ್ಯಮಶೀಲತೆಯು ಕಡಿಮೆ ಆದಾಯದ ಕೃಷಿ ಮತ್ತು ಪೂರಕ ವಲಯಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ ಈ ಉದ್ಯಮಗಳು ವಿರಳವಾಗಿ ಗುರುತಿಸಲ್ಪಡುವುದಕ್ಕೆ ಒಂದು ಕಾರಣವಾಗಿದೆ. ಇವು ದೈನಂದಿನ ಚಟುವಟಿಕೆಗಳೇ ಹೊರತು ಆದಾಯದ ಮಾರ್ಗವಲ್ಲ ಎನ್ನುವುದು ಜನಜನಿತವಾದ ನಂಬಿಕೆಯಾಗಿದೆ. ಆರನೇ ಆರ್ಥಿಕ ಜನಗಣತಿಯ ಪ್ರಕಾರ, ಮಹಿಳಾ ಒಡೆತನದ ಎಲ್ಲಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು 34.3% ಕೃಷಿಯಲ್ಲಿ, ಜಾನುವಾರುಗಳಲ್ಲಿ (92.2%), ಅರಣ್ಯ ಉತ್ಪನ್ನಗಳಲ್ಲಿ (4.5%), ಬೆಳೆಯೇತರ ಕೃಷಿ (1.9%) ಮತ್ತು ಮೀನುಗಾರಿಕೆ (1.4%) ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 99% ಕ್ಕಿಂತ ಹೆಚ್ಚು ಮಹಿಳಾ ಉದ್ಯಮಗಳು ಸೂಕ್ಷ್ಮ ವಲಯದಲ್ಲಿವೆ. ಮಹಿಳೆಯರು ನಡೆಸುವ ಉದ್ಯಮ ಮತ್ತು ಅದರ ಗಾತ್ರದ ನಡುವೆ ಪರಸ್ಪರ ವೈರುಧ್ಯವೆನಿಸುವ ಸಂಬಂಧವಿದೆ ಎಂದು ಗಮನಿಸಲಾಗಿದೆ. ಉದ್ಯಮದ ಗಾತ್ರ ಹೆಚ್ಚಾದಂತೆ, ಮಹಿಳಾ ನೇತೃತ್ವದ ಉದ್ಯಮಗಳ ಪ್ರಮಾಣವು ಕಡಿಮೆಯಾಗುತ್ತದೆ. ಮಹಿಳಾ ಉದ್ಯಮಿಗಳ ಸೀಮಿತ ಯಶಸ್ಸಿಗೆ ವೈಯಕ್ತಿಕ, ಸಾಮಾಜಿಕ ಮತ್ತು ಪರಿಸರ ವ್ಯವಸ್ಥೆಯ ಈ ಎಲ್ಲ ಅಂಶಗಳು ಒಟ್ಟಾರೆಯಾಗಿ ಕಾರಣವೆಂದು ಹೇಳಬಹುದು. ಮಹಿಳಾ ಒಡೆತನದ MSMEಗಳು ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಹೆಚ್ಚಾಗಿ ಚರ್ಚಿಸಲಾಗಿದೆ. ಇದರೊಂದಿಗೆ, ಅದಕ್ಕಿಂತ ದೊಡ್ಡ ವ್ಯವಸ್ಥೆಯಲ್ಲಿ ಹಲವು ಅಡೆತಡೆಗಳಿವೆ, ಅವುಗಳಲ್ಲಿ ಕೆಲವನ್ನು ಗುರುತಿಸಿ ಚೌಕ 1 ರಲ್ಲಿ ನೀಡಲಾಗಿದೆ.

ಚೌಕ 1: ಮಹಿಳಾ ಉದ್ಯಮಿಗಳು ಎದುರಿಸುವ ಪರಿಸರ ವ್ಯವಸ್ಥೆಯಲ್ಲಿನ ಅಡೆತಡೆಗಳು

ಎ. ಉದ್ಯಮಶೀಲತೆಯ ಬಗ್ಗೆ ಪ್ರಚಾರ. ಇದರಲ್ಲಿ ವಿವಿಧ ಉದ್ಯಮಶೀಲತಾ ಅವಕಾಶಗಳ ಕುರಿತು ಅರಿವು ಮತ್ತು ತಿಳಿವಳಿಕೆ ಸೃಷ್ಟಿಸುವುದು ಸೇರಿದೆ.

ಬಿ. ಸುಲಭವಾಗಿ ಮತ್ತು ಕೈಗೆಟುಕುವಂತೆ ಹಣಕಾಸಿನ ಲಭ್ಯತೆ

ಸಿ. ತಾಂತ್ರಿಕ ಮತ್ತು ವ್ಯವಹಾರ ಕೌಶಲ್ಯಗಳಲ್ಲಿ ತರಬೇತಿ ಮತ್ತು ಕೌಶಲ್ಯ

ಡಿ. ಉದಯೋನ್ಮುಖ ಉದ್ಯಮಿಗಳು ಮತ್ತು ಸಮಾನರ ಸಂಪರ್ಕಜಾಲಕ್ಕೆ ಮಾರ್ಗದರ್ಶನ ನೀಡಲು ಮತ್ತು ಅವುಗಳನ್ನು ಪೋಷಿಸಲು ಉದ್ಯಮ ತಜ್ಞರಿಂದ ಮಾರ್ಗದರ್ಶನ ಮತ್ತು ಸಂಪರ್ಕಜಾಲ

ಇ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಮಾರುಕಟ್ಟೆ ಸಂಪರ್ಕಗಳು

ಎಫ್. ಉತ್ತಮ ದಕ್ಷತೆ ಮತ್ತು ಉತ್ಪಾದಕತೆಗಾಗಿ ವ್ಯವಹಾರ, ಕಾನೂನು, ಡಿಜಿಟಲ್ ಮತ್ತು ಇತರ ಉನ್ನತ ಬೆಂಬಲ ಸೇವೆಗಳ ಲಭ್ಯತೆ.

 

 ಮಹಿಳಾ ನೇತೃತ್ವದ ಉಪಕ್ರಮಗಳು

ಕೃಷಿ ಮತ್ತು ಮಹಿಳಾ ಅಭಿವೃದ್ಧಿಯಂತಹ ಮೂಲಭೂತ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದ ಲಾಭರಹಿತ ಸಂಸ್ಥೆಯಾದ BAIF ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನವು, ತನ್ನ ಕಾರ್ಯಾಚರಣಾ ಪ್ರದೇಶಗಳಲ್ಲಿ 4000 ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳ (SHGs) ರಚನೆಗೆ ಅನುಕೂಲ ಮಾಡಿಕೊಟ್ಟಿದೆ. ಈ ಮಹಿಳೆಯರಿಗೆ ನರ್ಸರಿಗಳು, ಅಣಬೆ ಸಾಕಣೆ, ಕೋಳಿ ಸಾಕಣೆ ಮತ್ತು ಹೊಲಿಗೆ ಘಟಕಗಳಂತಹ ಸ್ವಂತ ಉದ್ಯಮಗಳನ್ನು ಸ್ಥಾಪಿಸಲು ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗಿದೆ. ಇದು ಸ್ವಾವಲಂಬನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಅವರ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬೀಜ ಸಂರಕ್ಷಕರಾಗಿ ಮಹಿಳೆಯರ ಯಶಸ್ಸಿನ ಕಥೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಬೀಜ ಸಂರಕ್ಷಕರು

 ಕಲ್ಸುಬಾಯಿ ಪರಿಸರ ಬಿಯಾನೆ ಸಂವರ್ಧನ್ ಸಾಮಾಜಿಕ ಸಂಸ್ಥೆ(ಕಲ್ಸುಬಾಯಿ ಸೀಡ್ ಸೇವರ್ಸ್ ಗ್ರೂಪ್) ಇದನ್ನು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಅಕೋಲೆ ಬ್ಲಾಕ್‌ನಲ್ಲಿ ಕೃಷಿ ಜೀವವೈವಿಧ್ಯತೆಯನ್ನು ಉಳಿಸಿ ಮತ್ತು ಪುನರುಜ್ಜೀವನಗೊಳಿಸಲು 2015 ರಲ್ಲಿ ರಚಿಸಲಾಯಿತು.

ಮೂಲತಃ ಭಾರತದ ಸಮೃದ್ಧ ಜೈವಿಕ ಸಂಪನ್ಮೂಲ ಕೃಷಿ ಹವಾಮಾನ ವಲಯವಾಗಿದ್ದ ಅಕೋಲ್ ಇತ್ತೀಚಿನ ವರ್ಷಗಳಲ್ಲಿ ಕೃಷಿಯ ತ್ವರಿತ ವಾಣಿಜ್ಯೀಕರಣಕ್ಕೆ ಸಾಕ್ಷಿಯಾಗಿದೆ. ಇದರಿಂದ ಬೆಳೆಯ ವೈವಿಧ್ಯತೆಯು ಕ್ಷೀಣಿಸಿದ್ದರಿಂದ ಅನುವಂಶಿಕ ಆಧಾರವು ಸಂಕುಚಿತಗೊಂಡಿತು. ಉತ್ಪಾದನೆ ಕಡಿಮೆಯಾಗಿ, ಕೀಟಬಾಧೆ ಮತ್ತು ರೋಗಗಳು ಹೆಚ್ಚಾದವು. ಇದರೊಂದಿಗೆ, ಹೆಚ್ಚಿರುವ ಏಕ ಬೆಳೆ ಪದ್ಧತಿಯಿಂದಾಗಿ ಮಣ್ಣಿನ ಆರೋಗ್ಯ ಹದಗೆಟ್ಟಿದ್ದು ಕೃಷಿ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದಾಗಿ ಸ್ಥಳೀಯ ಬುಡಕಟ್ಟು ಸಮುದಾಯಗಳ ಪೌಷ್ಟಿಕಾಂಶದ ಮೇಲೆ ಹಾನಿಕಾರಕ ಪರಿಣಾಮ ಬೀರಿದೆ. ಇದು ಪಾರಂಪರಿಕ ತಿಳಿವಳಿಕೆಯ ನಷ್ಟಕ್ಕೆ ಕಾರಣವಾಗಿರುವುದಲ್ಲದೆ, ಸಾಂಪ್ರದಾಯಿಕ ನಿರ್ವಹಣೆ, ಸಂರಕ್ಷಣಾ ಪದ್ಧತಿಗಳು ಅಪಾಯಕ್ಕೆ ಸಿಲುಕಿದೆ.

ಅಕೋಲೆಯ ಜನರಿಗೆ ಕುಟುಂಬದ ಜಮೀನಿನಲ್ಲಿ ಮಳೆಯಾಶ್ರಿತ ಕೃಷಿ ಪ್ರಾಥಮಿಕ ಉದ್ಯೋಗವಾಗಿದೆ. ಚಳಿಗಾಲ ಮತ್ತು ಬೇಸಿಗೆಯಲ್ಲಿ, ಸ್ಥಳೀಯ ಜನರು, ಹೆಚ್ಚಾಗಿ ಮಹಾದೇವ್ ಕೋಲಿ ಮತ್ತು ಠಾಕರ್ ಬುಡಕಟ್ಟು ಜನಾಂಗದವರು, ಕೃಷಿ ಕೂಲಿಯಾಳುಗಳಾಗಿ ಅಥವಾ ನೆರೆಯ ನಗರ ಪ್ರದೇಶಗಳಲ್ಲಿ ಸಾಂದರ್ಭಿಕ ಉದ್ಯೋಗವನ್ನು ಅರಸುತ್ತಿದ್ದರು. ಇದು ಕುಟುಂಬವು ಇಡೀ ವರ್ಷಕ್ಕೆ ಸಾಕಾಗುವಷ್ಟು ಆದಾಯ ಅಥವಾ ಆಹಾರ ಭದ್ರತೆಯನ್ನು ಹೊಂದಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಆರಂಭದಲ್ಲಿ, ಪ್ರಾಥಮಿಕ ದತ್ತಾಂಶವನ್ನು ವಿಷಯಕೇಂದ್ರಿತ ಗುಂಪು ಚರ್ಚೆಗಳು, ಕ್ಷೇತ್ರ ಭೇಟಿಗಳು ಮತ್ತು ವೈಯಕ್ತಿಕ ಸಂದರ್ಶನಗಳ ಮೂಲಕ ಸಂಗ್ರಹಿಸಲಾಯಿತು. ಅಕೋಲ್ ಬ್ಲಾಕ್‌ನ ವಿವಿಧ ಭಾಗಗಳಲ್ಲಿ ದೇಸಿತಳಿಗಳ ಮ್ಯಾಪಿಂಗ್‌ ಮತ್ತು ಸಂಗ್ರಹಣೆಯನ್ನು ಕೈಗೊಳ್ಳಲಾಯಿತು. ದೇಸಿ ತಿಳಿವಳಿಕೆ ಹೊಂದಿದವರೊಂದಿಗೆ ಬೀಜಸಂರಕ್ಷಕರನ್ನು ಗುರುತಿಸಲಾಯಿತು. ಶುದ್ಧೀಕರಣ ಮತ್ತು ವೈಜ್ಞಾನಿಕ ಅಧ್ಯಯನಗಳಿಗಾಗಿ ಆ ಸ್ಥಳದಲ್ಲೇ 10 ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಸ್ಥಳೀಯ ತರಕಾರಿಗಳು ಮತ್ತು ಗೆಡ್ಡೆಗಳನ್ನು ದಾಖಲಿಸಲಾಯಿತು. ಅವುಗಳ ಜರ್ಮ್‌ಪ್ಲಾಸಂ ಅನ್ನು ಸಂಗ್ರಹಿಸಿ ಗ್ರಾಮ/ಕ್ಲಸ್ಟರ್ ಮಟ್ಟದ ಬೀಜ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಯಿತು. ಬೆಳೆ ಆಯ್ಕೆಯು ವರ್ಷಪೂರ್ತಿ ಅವುಗಳ ಲಭ್ಯತೆ ಮತ್ತು ಪೌಷ್ಟಿಕಾಂಶದ ಅಂಶವನ್ನು ಆಧರಿಸಿತ್ತು. ಆಯ್ಕೆ ಮಾಡಿದ ಯೋಗ್ಯ ಬೆಳೆ ಪ್ರಭೇದಗಳ ಬೀಜ ಉತ್ಪಾದನೆಯನ್ನು ಸಮುದಾಯ ಮಟ್ಟದಲ್ಲಿ ನಡೆಸಲಾಯಿತು.

2017 ರಲ್ಲಿ ಇದನ್ನು ಟ್ರಸ್ಟ್‌ ಎಂದು ನೋಂದಾಯಿಸಲಾಯಿತು. ಈ 11 ಸದಸ್ಯರ ಬೀಜ ಸಂರಕ್ಷಕ ಸಮಿತಿಯು ಸ್ಥಳೀಯ ಸಮುದಾಯಗಳಿಗೆ ಸೇರಿದ ಸ್ವಸಹಾಯ ಸಂಘದ ಸದಸ್ಯರನ್ನು ಒಳಗೊಂಡಿತ್ತು. ಈ ಬುಡಕಟ್ಟು ಮಹಿಳೆಯರ ನೇತೃತ್ವದ ಉಪಕ್ರಮವು ರಚನೆಯಾದಾಗಿನಿಂದ, ಬೆಳೆ ತಳಿ ವೈವಿಧ್ಯತೆ, ಬೀಜಗಳು ಮತ್ತು ಕಾಡಿನ ತಿನ್ನಬಲ್ಲಂತಹ ಸಸ್ಯಗಳ ಮೇಲೆ ಗಮನವಿರಿಸುವ ಮೂಲಕ ಕೃಷಿ ಜೀವವೈವಿಧ್ಯ ಸಂರಕ್ಷಣೆ ಮತ್ತು ನಿರ್ವಹಣೆಯ ಪ್ರಯತ್ನಗಳನ್ನು ಮುನ್ನಡೆಸುತ್ತಿದೆ. ಸಾವಯವ ಒಳಸುರಿಯುವಿಕೆಗಳ ಉತ್ಪಾದನೆಯ ಜೊತೆಗೆ ಹಸಿಗೊಬ್ಬರ ಬಳಕೆ, ಬೀಜ ಆಯ್ಕೆ ಮತ್ತು ಸರಿಯಾದ ಸಂಗ್ರಹಣೆಯ ಕುರಿತು ಕ್ಷೇತ್ರ ಮಟ್ಟದ ತರಬೇತಿಯನ್ನು ನೀಡಲಾಯಿತು. ಮೊಳಕೆಯೊಡೆಯುವಿಕೆ ಪರೀಕ್ಷೆ ಮತ್ತು ಭೌತಿಕ ಶುದ್ಧತೆಯನ್ನು ಬೀಜ ಬ್ಯಾಂಕ್ ಮಟ್ಟದಲ್ಲಿ ನಡೆಸಲಾಗುತ್ತದೆ.

ಕಲ್ಸುಬಾಯಿ ಪರಿಸರ ಬಿಯಾನೆ ಸಂವರ್ಧನ್ ಸಂಸ್ಥೆಯ ಮೂಲಕ ಬೀಜಗಳ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್‌ ಕೈಗೊಳ್ಳಲಾಯಿತು. ಸಮಿತಿಯು ಗುಣಮಟ್ಟದ ಬೀಜ ಉತ್ಪಾದನೆ, ಬೀಜ ವಿನಿಮಯ ನಿರ್ವಹಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ಸ್ಥಾಪನೆಯನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಅವರು ಸ್ಥಳೀಯ ಸಮುದಾಯಕ್ಕೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಕ್ಷೇತ್ರ ತರಬೇತಿಯನ್ನು, ಭೇಟಿಗಳನ್ನು ಆಯೋಜಿಸುತ್ತಾರೆ. ಸದಸ್ಯರಿಗೆ ಬೀಜ ಲಭ್ಯತೆ ವಿವರ ಪುಸ್ತಕ, ಬೀಜಗಳ ಸಂಗ್ರಹಣೆ, ಮಾರಾಟ ಮತ್ತು ಧಾನ್ಯ ಉತ್ಪಾದನೆಯ ನಿರ್ವಹಣೆ ಮತ್ತು ದಾಖಲೆ ನಿರ್ವಹಣೆಯಲ್ಲಿ ತರಬೇತಿ ನೀಡಲಾಗಿದೆ. ಈಗ ಅವರು ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸುವ ವಿಶ್ವಾಸ ಹೊಂದಿದ್ದಾರೆ. ಮಹಿಳಾ ಸಂರಕ್ಷಣಾಕಾರರಾದ ಪದ್ಮಶ್ರೀ ರಹಿಬಾಯಿ ಪೊಪೆರೆ ಮತ್ತು ರಾಷ್ಟ್ರೀಯ ಜೀನೋಮ್ ಸಂರಕ್ಷಕ ರೈತ ಪ್ರಶಸ್ತಿ ಪುರಸ್ಕೃತರಾದ ಮಮತಾ ಭಂಗಾರೆ ಅವರು ತಮ್ಮ ಜ್ಞಾನ ಜಾಗೃತಿ ಪ್ರಯತ್ನಗಳ ಮೂಲಕ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜೋಡಿಸುವ ಮೂಲಕ ಸ್ಥಳೀಯ ಬೀಜಗಳು ಮತ್ತು ಕಾಡು ತರಕಾರಿಗಳ ಸಂರಕ್ಷಣೆಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಬಳಕೆಗಾಗಿ ಸಂಶೋಧನೆಯನ್ನು ತಳಮಟ್ಟದಿಂದ ಜಾಗತಿಕ ಮಟ್ಟಕ್ಕೆ ಏರಿಸಿದ್ದಾರೆ.

ಈ ಗುಂಪು ಮೂರು ಬೀಜ ಬ್ಯಾಂಕುಗಳನ್ನು ಸ್ಥಾಪಿಸಿದೆ. ಭತ್ತ, ರಾಗಿ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ 40 ಬೆಳೆಗಳ 118 ಬೀಜಗಳನ್ನು ಸಂರಕ್ಷಿಸಿದೆ. ಈ ಗುಂಪು 21,600 ಕ್ಕೂ ಹೆಚ್ಚು ಅಡುಗೆಮನೆ ತೋಟದ ಕಿಟ್‌ಗಳು ಮತ್ತು ಸುಮಾರು 39 ಮೆಟ್ರಿಕ್ ಟನ್ ಗುಣಮಟ್ಟದ ಬೀಜಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಅವರ ಯಶಸ್ಸು ಕೇವಲ ಅವರ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವರು ನವೀನ ಮಾರುಕಟ್ಟೆ ತಂತ್ರಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ.  ತತ್ಪಪರಿಣಾಮವಾಗಿ ಟೆರೇಸ್ ಗಾರ್ಡನ್ ಬೀಜಗಳ ಮಾರಾಟದ ಮೂಲಕ ಗ್ರಾಮೀಣ-ನಗರ ಸಂಪರ್ಕವನ್ನು ಬೆಳೆಸಲಾಗಿದೆ. ತಮ್ಮ ಪ್ರಯತ್ನಗಳಿಂದಾಗಿ ಇಲ್ಲಿಯವರೆಗೆ 46 ಲಕ್ಷ ರೂಪಾಯಿಗಳ ವಹಿವಾಟು ನಡೆಸಿದ್ದಾರೆ.

 ಪೋಷಣ್‌ ಸಖಿ ಎಂದು ಕರೆಯಲ್ಪಡುವ ಮಹಿಳಾ ಸಂಪನ್ಮೂಲ ವ್ಯಕ್ತಿಗಳ ಮೂಲಕ ಸಮುದಾಯದಲ್ಲಿ ಸಾಮರ್ಥ್ಯ ವರ್ಧನೆಯ ಮೇಲೂ ಹೆಚ್ಚಿನ ಒತ್ತು ನೀಡಲಾಗಿದೆ. ಈ ಪೋಷಣ್ ಸಖಿಗಳ ಪ್ರಯತ್ನಗಳು ಮತ್ತು ಬೀಜ ಸಂರಕ್ಷಕ ಸಮಿತಿಯಿಂದ ಪೂರೈಸಲ್ಪಟ್ಟ ಉತ್ತಮ ಗುಣಮಟ್ಟದ ಪೌಷ್ಟಿಕ ತೋಟದ ಕಿಟ್‌ಗಳಿಂದಾಗಿ, ಈ ಪ್ರದೇಶದಲ್ಲಿ ಪೌಷ್ಟಿಕ ತೋಟಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಈ ಪೌಷ್ಟಿಕ-ಉದ್ಯಾನ ಕಿಟ್‌ಗಳು 12-15 ಬೆಳೆಗಳ ಬೀಜಗಳು ಮತ್ತು ಸಸಿಗಳನ್ನು ಹೊಂದಿದ್ದು, ಇದರಿಂದ ಆಹಾರ ವೈವಿಧ್ಯತೆಯನ್ನು ಹೆಚ್ಚಿಸಬಹುದು. ಸುಮಾರು 10 ತಿಂಗಳವರೆಗೆ ಆಹಾರದ ಲಭ್ಯತೆಯಿರುವ ಖಾತ್ರಿಯಿರುತ್ತದೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರಲ್ಲಿ ಬೀಜ ಉಳಿತಾಯವನ್ನು ಪ್ರೋತ್ಸಾಹಿಸಲಾಗುತ್ತದೆ. ಇದರಿಂದಾಗಿ ಮುಂದಿನ ಋತುವಿನಲ್ಲಿ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಬಹುದು. ಆರಂಭಿಕ ದಿನಗಳಲ್ಲಿ, ಈ ಉಪಕ್ರಮವು ಮಹಾರಾಷ್ಟ್ರ ಸರ್ಕಾರದ ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗದಿಂದ (RGSTC) ಬೆಂಬಲವನ್ನು ಪಡೆಯಿತು. ನಂತರ, ಅದನ್ನು ಮರ್ಯಾದಿತ್, ನಾಸಿಕ್, ಬುಡಕಟ್ಟು ಅಭಿವೃದ್ಧಿ ಇಲಾಖೆ, ಮಹಾರಾಷ್ಟ್ರ ಸರ್ಕಾರದ ಶಬರಿ ಆದಿವಾಸಿ ವಿತ್ತ ಮತ್ತು ವಿಕಾಸ ಸಂಸ್ಥೆಯ ಸಹಾಯದಿಂದ ಮೇಲ್ದರ್ಜೆಗೇರಿಸಲಾಯಿತು.

ಉಪಸಂಹಾರ

ಈ ರೀತಿ, ಕೃಷಿ ವಲಯದಲ್ಲಿ ಮಹಿಳೆಯರ ನೇತೃತ್ವದ ಹೊಸ ಮತ್ತು ಹಸಿರು ಉದ್ಯಮಗಳನ್ನು ಉತ್ತೇಜಿಸಲು ಸಾಕಷ್ಟು ಅವಕಾಶವಿದೆ. ಇವು ಸ್ಥಾಪಿತ ಉತ್ಪನ್ನಗಳಾಗಿರಬಹುದು ಅಥವಾ ಸೇವಾ ಆಧಾರಿತ ಉದ್ಯಮಗಳಾಗಿರಬಹುದು ಅಥವಾ ಎರಡರ ಸಂಯೋಜನೆಯಾಗಿರಬಹುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂತಹ ಸರಕು ಮತ್ತು ಸೇವೆಗಳಿಗೆ ಗಣನೀಯ ಬೇಡಿಕೆ ಇರುವುದರಿಂದ, ಗ್ರಾಮೀಣ-ನಗರ ಸಂಪರ್ಕವನ್ನು ಬಳಸಿಕೊಳ್ಳುವ ಅಗತ್ಯವಿದೆ. ಕೆಲವು ಮಾರ್ಗದರ್ಶನ ಮತ್ತು ತರಬೇತಿಯೊಂದಿಗೆ, ಮಹಿಳಾ ಉದ್ಯಮಿಗಳು ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಒದಗಿಸುವ ವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ. ಯಾರೂ ಗುರುತಿಸಿದ ಕೊಡುಗೆಯ ಮೂಲಕ ತಮ್ಮ ಮನೆಗಳು ಅಥವಾ ಹೊಲಗಳಿಗೆ ಸೀಮಿತವಾಗಿದ್ದ ಅವರೀಗ ಎಲ್ಲರಿಗೂ ಕಾಣುವಂತಹ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿದ್ದು ದೊಡ್ಡ ಮಟ್ಟದ ಸಾಮಾಜಿಕ ಸ್ವೀಕಾರವನ್ನು ಪಡೆದಿದ್ದಾರೆ.

ಈ ಕೃಷಿ ಆಧಾರಿತ ಉದ್ಯಮಗಳು ಮಹಿಳೆಯರಿಗೆ ವರ್ಷವಿಡೀ ಗೌರವಾನ್ವಿತ ಜೀವನೋಪಾಯದ ಜೊತೆಗೆ ಆದಾಯವನ್ನೂ ಒದಗಿಸಿವೆ. ಹೆಚ್ಚುವರಿ ಆದಾಯವು ಕುಟುಂಬಕ್ಕೆ ಹೊಸ ಭರವಸೆಯನ್ನು ತಂದಿದೆ. ಈ ಉದ್ಯಮಗಳು ವಿವಿಧ ಬುಡಕಟ್ಟು ಭೌಗೋಳಿಕ ಪ್ರದೇಶಗಳಲ್ಲಿ ಸಲ್ಲುವ ಸಾಮರ್ಥ್ಯವನ್ನು ಹೊಂದಿವೆ. ಮಹಿಳೆಯರಿಗೆ ಹೆಚ್ಚಿನ ಲಾಭದಾಯಕತೆಯನ್ನು ಖಾತ್ರಿಪಡಿಸುವ ಮೂಲಕ ವಿಸ್ತರಿಸಿಕೊಳ್ಳುತ್ತವೆ. ಭಾರತದ ರೈತಮಹಿಳೆಯರೊಂದಿಗೆ ಮಹಿಳಾ ನೇತೃತ್ವದ ಉದ್ಯಮಗಳು ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಬಹುದು.

ಪರಾಮರ್ಶನ

https://msme.gov.in/sites/default/files/All%20India%20

Report%20of%20Sixth%20Economic%20Census.pdf

https://www.niti.gov.in/sites/default/files/2023-03/

Decoding-Government-Support-to-Women-

Entrepreneurs-in-India.pdf


Rajashree Joshi
Programme Director
BAIF Development Research Foundation, Pune.
E-mail: rajeshreejoshi@baif.org.in
Santarpana Choudhury
Associate Programme Manager
BAIF Development Research Foundation, Pune.
E-mail: santarpana.choudhury@baif.org.in


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್‌ ೨೦‌೨೪

Recent Posts

ಗ್ರಾಮೀಣ ಯುವಜನತೆ – ಭವಿಷ್ಯದ ರೈತರು

ಗ್ರಾಮೀಣ ಯುವಜನತೆ – ಭವಿಷ್ಯದ ರೈತರು

ಭಾರತದಲ್ಲಿ ಹೆಚ್ಚುತ್ತಿರುವ ಯುವ ಜನಸಂಖ್ಯೆಯು ದೇಶದ ನಿರ್ಮಾಣದಲ್ಲಿ ಬಳಸಬೇಕಾದ ಆಸ್ತಿಯಾಗಿದೆ. ಗ್ರಾಮೀಣ ಯುವಕರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಮೀಣ ಯುವಜನರ ಆಕಾಂಕ್ಷೆಗಳು ಮತ್ತು ಕೃಷಿಯಲ್ಲಿ ಅವರನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮಹಾರಾಷ್ಟ್ರದಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನದ ಸಂಶೋಧನೆಗಳು ಮತ್ತು ಒಳನೋಟಗಳು ಕೃಷಿಯಲ್ಲಿ ಗ್ರಾಮೀಣ ಯುವಕರನ್ನು ಉಳಿಸಿಕೊಳ್ಳುವಲ್ಲಿ ಸೂಕ್ತ ತಂತ್ರಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.

ಕೃಷಿಯತ್ತ ಯುವಕರನ್ನು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು- (ARYA)

ಕೃಷಿಯತ್ತ ಯುವಕರನ್ನು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು- (ARYA)

ದೇಶದ ಕೃಷಿ ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರ ಪ್ರಾಮುಖ್ಯತೆಯನ್ನು ಅರಿತ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಗ್ರಾಮೀಣ ಯುವಕರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ವಲಸೆಯನ್ನು ತಡೆಯಲು ARYA ಯೋಜನೆಯನ್ನು ಜಾರಿಗೆ ತಂದಿತು.

ಕೃಷಿ ಉದ್ಯಮಿಗಳಾಗುವ ಪಯಣದ ಹಾದಿಯಲ್ಲಿ ರೈತಮಹಿಳೆಯರ ಸವಾಲುಗಳು ಮತ್ತು ಮುಂದಿನ ದಾರಿ

ಕೃಷಿ ಉದ್ಯಮಿಗಳಾಗುವ ಪಯಣದ ಹಾದಿಯಲ್ಲಿ ರೈತಮಹಿಳೆಯರ ಸವಾಲುಗಳು ಮತ್ತು ಮುಂದಿನ ದಾರಿ

ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಉತ್ತೇಜಿಸುವುದು ಇನ್ನು ಮುಂದೆ ಆಯ್ಕೆಯಲ್ಲ, ಬದಲಿಗೆ ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ನಡೆಸುತ್ತಿರುವ ವ್ಯವಹಾರಗಳು ಮುಂದುವರೆಯುವಂತೆ ನೋಡಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿನ ಬಳಕೆಯಾಗದೆ ಉಳಿದ ಸಾಮರ್ಥ್ಯವು ಬಳಕೆಯಾಗುತ್ತದೆ. ಬಡತನವನ್ನು ಕಡಿಮೆ ಮಾಡುತ್ತದೆ, ಉದ್ಯೋಗ ಸೃಷ್ಟಿಸುತ್ತದೆ ಮತ್ತು ಲಿಂಗ ಸಮಾನತೆಯಿರುವ ಸಮಾಜವನ್ನು ನಿರ್ಮಿಸುತ್ತದೆ.

YouTube
Instagram
WhatsApp