ಕೃಷಿಯತ್ತ ಯುವಕರನ್ನು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು- (ARYA)


ದೇಶದ ಕೃಷಿ ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರ ಪ್ರಾಮುಖ್ಯತೆಯನ್ನು ಅರಿತ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಗ್ರಾಮೀಣ ಯುವಕರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ವಲಸೆಯನ್ನು ತಡೆಯಲು ARYA ಯೋಜನೆಯನ್ನು ಜಾರಿಗೆ ತಂದಿತು.


 

ದೇಶದ ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಅವರು ತಮ್ಮ ಸಹಜ ಉತ್ಸಾಹ, ಹೊಸತನದ ಅನ್ವೇಷಣಾ ಸಾಮರ್ಥ್ಯಗಳಿಂದ ಕೆಲಸದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಾರೆ. UNDESA (2011) ಪ್ರಕಾರ, ಜಾಗತಿಕ ಜನಸಂಖ್ಯೆಯು 2050 ರ ವೇಳೆಗೆ 9 ಬಿಲಿಯನ್ ತಲುಪುವ ನಿರೀಕ್ಷೆಯಿದೆ. 15 ರಿಂದ 24 ವರ್ಷ ವಯಸ್ಸಿನ ಯುವಜನತೆಯ ಸಂಖ್ಯೆಯು 2050 ರ ವೇಳೆಗೆ 1.3 ಬಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಜಾಗತಿಕ ಜನಸಂಖ್ಯೆಯ ಸುಮಾರು 14% ರಷ್ಟಾಗುತ್ತದೆ. ಭಾರತದಲ್ಲಿ ಯುವಸಂಪನ್ಮೂಲವು ಹೇರಳವಾಗಿದೆ. ಆದರೆ ಅವರಿಗೆ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ.

ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಗೆ ಅನುಗುಣವಾಗಿ ಕೃಷಿ ಸುಧಾರಣೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಸುಸ್ಥಿರ ಆಹಾರ ಭದ್ರತೆಗೆ ಕೃಷಿಯಲ್ಲಿ ಹೆಚ್ಚಿನ ಬೆಳವಣಿಗೆ ಅಗತ್ಯವಾಗಿದ್ದು, ಆಹಾರ ಧಾನ್ಯಗಳ ಬೇಡಿಕೆಯೂ ಮತ್ತಷ್ಟು ಹೆಚ್ಚಾಗುತ್ತದೆ. ಈ ರೀತಿಯ ವಿವಿಧ ಬೇಡಿಕೆಗಳನ್ನು ಪೂರೈಸಲು,

ಕೃಷಿಯನ್ನು ಆಧುನೀಕರಿಸುವ ಮತ್ತು ವೈವಿಧ್ಯಗೊಳಿಸುವ ಅಗತ್ಯವಿದೆ. ತಕ್ಕ ಅವಕಾಶಗಳನ್ನು ಸೃಷ್ಟಿಸಿ, ಯುವಕರನ್ನು ಒಳಗೊಳ್ಳುವ ಮೂಲಕ ದೇಶವು ಕೃಷಿಯ ಪ್ರಸ್ತುತ ಸ್ಥಿತಿಯನ್ನು ಉತ್ತಮಗೊಳಿಸಬಹುದು. ಅನೇಕ ಯುವ ರೈತರು ಸಂರಕ್ಷಿತ ಕೃಷಿ, ನಿಖರ ಕೃಷಿ, ಸಾವಯವ ಕೃಷಿ, ಹೂ ಕೃಷಿ, ಔಷಧೀಯ ಮತ್ತು ಸುಗಂಧ ದ್ರವ್ಯಗಳ ಕೃಷಿ ಮುಂತಾದ ಹೈಟೆಕ್ ಆದ, ಹೆಚ್ಚಿನ ಅಪಾಯವಿದ್ದರೂ ಹೆಚ್ಚಿನ ಆದಾಯ ತರುವ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ವಯಸ್ಸಾದ ರೈತರು ಇಂತಹ ಸಾಹಸಕ್ಕೆ ಹಿಂಜರಿಯುತ್ತಾರೆ.

ಗ್ರಾಮೀಣ ಯುವಕರು ನಗರಗಳಿಗೆ ವಲಸೆ ಹೋಗುವ ಪ್ರಮಾಣ ಸುಮಾರು 45% ರಷ್ಟಿದ್ದು, ಇದು ಸಾಕಷ್ಟು ಆತಂಕಕಾರಿಯಾಗಿದೆ. ಯುವಕರು ನಗರಗಳಿಗೆ ವಲಸೆ ಹೋಗಲು ಪ್ರಮುಖ ಕಾರಣಗಳು: ಕೃಷಿಯು ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವುದು (ಬರ, ಬಿರುಗಾಳಿ, ಇತ್ಯಾದಿ), ಸಣ್ಣ ಭೂ ಹಿಡುವಳಿಗಳು (ದೊಡ್ಡ ಹಿಡುವಳಿದಾರರ ವಾಣಿಜ್ಯೀಕೃತ ಕೃಷಿಯೊಂದಿಗೆ ಸ್ಪರ್ಧಿಸಲು ಸಾಧ್ಯವಾಗದಿರುವುದು) ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ಸಿಗದಿರುವುದು. ಇದರಿಂದಾಗಿ ಮೂಲಭೂತ ಸೌಕರ್ಯಗಳ ಕೊರತೆ, ನಿರುದ್ಯೋಗ ಮತ್ತು ಕೃಷಿಯಲ್ಲಿ ಆಸಕ್ತಿಯ ಕೊರತೆ ಉಂಟಾಗಿದೆ. ಯುವಜನರಿಗೆ ಉದ್ಯೋಗಾವಕಾಶದ ಕೊರತೆಯು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪ್ರಮುಖ ಪರಿಣಾಮಗಳಲ್ಲಿ ಒಂದಾಗಿದೆ. ಈ ಬಿಕ್ಕಟ್ಟಿನ ಪರಿಣಾಮದಿಂದ ಹಣದುಬ್ಬರ ಉಂಟಾಗಿ, ಇದು ಆಹಾರ, ಸರಕುಗಳು ಮತ್ತು ಇಂಧನಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.

ದೇಶದ ಕೃಷಿ ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರ ಪ್ರಾಮುಖ್ಯತೆಯನ್ನು ಅರಿತುಕೊಂಡು, 2015-16ರಲ್ಲಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) “ಕೃಷಿಯತ್ತ ಯುವಕರನ್ನು ಆಕರ್ಷಿಸಿ ಅಲ್ಲಿಯೇ ಉಳಿಸಿಕೊಳ್ಳುವ,” (ARYA) ಯೋಜನೆಯನ್ನು ಜಾರಿಗೆ ತಂದಿತು. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಮೀಣ ಯುವಕರ ಸಾಮರ್ಥ್ಯವನ್ನು ಕೃಷಿಯಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುವುದು. ನಗರ ಪ್ರದೇಶಗಳಿಂದ ಮರಳಿ ಗ್ರಾಮೀಣ ಪ್ರದೇಶಗಳಿಗೆ ಹಿಂತಿರುಗುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಈ ಯೋಜನೆಯು ಸಾಮಾಜಿಕ ಒಳಗೊಳ್ಳುವಿಕೆ, ಲಿಂಗ ಸಮಾನತೆ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ತತ್ವಗಳ ಮೇಲೆ ಸ್ಥಾಪಿತವಾಗಿದ್ದು, ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ.

  • ಆಯ್ದ ಜಿಲ್ಲೆಗಳಲ್ಲಿ ಸುಸ್ಥಿರ ಆದಾಯ ಮತ್ತು ಲಾಭದಾಯಕ ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶದ ಯುವಕರನ್ನು ವಿವಿಧ ಕೃಷಿ, ಸಂಬಂಧಿತ ಮತ್ತು ಸೇವಾ ವಲಯದ ಉದ್ಯಮಗಳನ್ನು ಕೈಗೆತ್ತಿಕೊಳ್ಳುವಂತೆ ಆಕರ್ಷಿಸಿ ಮತ್ತು ಅವರನ್ನು ಸಬಲರನ್ನಾಗಿಸುವುದು.
  • ಕೃಷಿ ಯುವಕರ ಸಂಪರ್ಕ ಜಾಲ ಗುಂಪುಗಳನ್ನು ಸ್ಥಾಪಿಸಿ – ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯಂತಹ ಸಂಪನ್ಮೂಲ ಮತ್ತು ಬಂಡವಾಳ-ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು – ಅನುವು ಮಾಡಿಕೊಡುವುದು.
  • ಯುವಜನರ ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು/ ಕಾರ್ಯಕ್ರಮಗಳ ಅಡಿಯಲ್ಲಿ ಲಭ್ಯವಿರುವ ಅವಕಾಶಗಳನ್ನು ಒಗ್ಗೂಡಿಸಲು ವಿವಿಧ ಸಂಸ್ಥೆಗಳು ಮತ್ತು ಪಾಲುದಾರರೊಂದಿಗೆ ಕ್ರಿಯಾತ್ಮಕ ಸಂಪರ್ಕವನ್ನು ಸಾಧಿಸುವುದು.
  • ನಿರ್ದಿಷ್ಟ ಕೃಷಿ ಪಾಲುದಾರಿಕೆಯಲ್ಲಿ ಯುವ ಸಾಮರ್ಥ್ಯವನ್ನು ನವೀಕರಿಸಲು-ಮಾದರಿಯ ಅಳವಡಿಕೆ.
  • ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯಂತಹ ಸಂಪನ್ಮೂಲ ಮತ್ತು ಬಂಡವಾಳ- ಸಂಬಂಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸಂಪರ್ಕ ಗುಂಪನ್ನು ಸ್ಥಾಪಿಸುವುದು.

ARYA ಯೋಜನೆಯನ್ನು 25 ರಾಜ್ಯಗಳಲ್ಲಿ (ಪ್ರತಿ ರಾಜ್ಯದಿಂದ ಒಂದು ಜಿಲ್ಲೆ) KVK ಗಳ ಮೂಲಕ ಜಾರಿಗೆ ತರಲಾಗಿದೆ. ಪ್ರಸ್ತುತ, 25 ಅಸ್ತಿತ್ವದಲ್ಲಿರುವ ಕೇಂದ್ರಗಳನ್ನು ಒಳಗೊಂಡಂತೆ 100 ARYA ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗಿದೆ. KVK ಗಳು ಕೃಷಿ ವಿಶ್ವವಿದ್ಯಾಲಯಗಳು ಮತ್ತು ICAR ಸಂಸ್ಥೆಗಳನ್ನು ತಂತ್ರಜ್ಞಾನ ಪಾಲುದಾರರನ್ನಾಗಿ ಒಳಗೊಂಡಿವೆ.

ಗ್ರಾಮೀಣ ಉದ್ಯಮಶೀಲತೆಯ ವಿಧಗಳು

ಬಡತನ, ವಲಸೆ, ನಿರುದ್ಯೋಗ ಕಡಿಮೆ ಮಾಡಲು ಮತ್ತು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣ ಉದ್ಯಮಶೀಲತೆಯನ್ನು ಪರಿಹಾರವೆಂದು ಪರಿಗಣಿಸಬಹುದು. ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಶೀಲತೆ ಅಭಿವೃದ್ಧಿಯ ಮುಖ್ಯ ಆಧಾರವೆಂದರೆ ಅತ್ಯುತ್ತಮ ಉದ್ಯಮವನ್ನು ಆಯ್ಕೆ ಮಾಡುವುದು. ಮುಖ್ಯವಾಗಿ, ಸಂಪನ್ಮೂಲಗಳ ಲಭ್ಯತೆ, ಕಚ್ಚಾ ವಸ್ತುಗಳು, ಕಾರ್ಮಿಕ ಬಲ ಮತ್ತು ಕೃಷಿ ಪರಿಸರ ಸುಸ್ಥಿರತೆಯು ಗ್ರಾಮೀಣ ಪ್ರದೇಶಗಳಲ್ಲಿ ಯಶಸ್ವಿ ಉದ್ಯಮಶೀಲತೆಯ ಪ್ರಮುಖ ಅಂಶಗಳಾಗಿವೆ. ARYA ಯೋಜನೆಯಡಿಯಲ್ಲಿ, ಮೇಲಿನ ಮಾನದಂಡಗಳ ಆಧಾರದ ಮೇಲೆ, ಜೇನು ಸಾಕಣೆ, ಅಣಬೆ ಕೃಷಿ, ಕೊಯ್ಲಿನ ನಂತರದ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಮೀನು ಉತ್ಪಾದನೆ, ಬೀಜ ಉತ್ಪಾದನೆ, ಎರೆಹುಳುಗೊಬ್ಬರ, ಮೇಕೆ ಮತ್ತು ಕೋಳಿ ಸಾಕಣೆ ಮುಂತಾದ ವಿಭಿನ್ನ ಉದ್ಯಮಗಳನ್ನು ಆಯ್ಕೆ ಮಾಡಲಾಗುತ್ತದೆ.

ಉದ್ಯಮಶೀಲತಾ ಅಭಿವೃದ್ಧಿ ಪ್ರಕ್ರಿಯೆ

ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದ ವಿವಿಧ ಸ್ಥಳಗಳಲ್ಲಿ, ಅನುಕ್ರಮವಾಗಿ ಹಂತದ ಪ್ರಕ್ರಿಯೆಯನ್ನು ಅನುಸರಿಸಿ ವೈವಿಧ್ಯಮಯ ಉದ್ಯಮಶೀಲತಾ ತರಬೇತಿ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.

ಚೌಕ 1

ಪ್ರಕರಣ 1:ಎರೆಹುಳು ಗೊಬ್ಬರ ಉತ್ಪಾದನೆ  

ಎರೆಹುಳುಗೊಬ್ಬರವು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ನೈಸರ್ಗಿಕ ಗೊಬ್ಬರ ಮತ್ತು ಮಣ್ಣಿನ ಪೋಷಕವಾಗಿದೆ. ಇದು ಅತ್ಯಂತ ಸೂಕ್ಷ್ಮವಾಗಿ ರಚನೆಯಾಗಿರುವ, ಏಕರೂಪದ, ಸ್ಥಿರವಾದ ಮತ್ತು ಆರ್ದ್ರತೆಯನ್ನು ಉಳಿಸಿಕೊಂಡ ಸಾವಯವ ವಸ್ತುಗಳ ಕಣಗಳಾಗಿದ್ದು, ರಂಧ್ರಗಳನ್ನು ಹೊಂದಿದ್ದು, ಗಾಳಿ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಈಗಾಗಲೇ ವಿಶ್ವಾದ್ಯಂತ ಕೃಷಿ ಸಾವಯವ ತ್ಯಾಜ್ಯ, ಒಳಚರಂಡಿ ಕೆಸರು, ಗೊಬ್ಬರ, ಅಡುಗೆಮನೆ ತ್ಯಾಜ್ಯ ಇತ್ಯಾದಿಗಳ ಸಂಸ್ಕರಣೆಗಾಗಿ ಬಳಸಲಾಗುತ್ತಿದೆ.

ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಮಹಾರಾಷ್ಟ್ರದ ಸೋಲಾಪುರ-I ರ ಕೆವಿಕೆ, 25 ಗ್ರಾಮೀಣ ಯುವಕರಿಗೆ ಎರೆಹುಳು ಗೊಬ್ಬರ ಉತ್ಪಾದನೆಯ ಬಗ್ಗೆ ವಿಶೇಷ ತರಬೇತಿ ನೀಡಿತು. ಒಟ್ಟಾರೆಯಾಗಿ, 2019-20ನೇ ಸಾಲಿನಲ್ಲಿ 21 ಯುವಕರು ತಮ್ಮ ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ನಾಲ್ಕು ಮಂದಿ ಯುವಕರು ವರ್ಷಕ್ಕೆ 50 ರಿಂದ 80 ಟನ್ ಸಾಮರ್ಥ್ಯದ ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರು. ಉಳಿದ ಯುವಕರು ವರ್ಷಕ್ಕೆ 4 ರಿಂದ 5 ಟನ್ ಸಾಮರ್ಥ್ಯದ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರು.

ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳಿಂದ ವಾರ್ಷಿಕವಾಗಿ ಸರಾಸರಿ 70 ಟನ್ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿತ್ತು. ರೂ. 5.60 ಲಕ್ಷ ಮೌಲ್ಯದ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಂದ ರೂ. 40 ಲಕ್ಷ ಮೌಲ್ಯದ 5 ಟನ್ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿತ್ತು. ಹೀಗಾಗಿ, ಒಬ್ಬ ಯುವಕ ದೊಡ್ಡ ಪ್ರಮಾಣದ ಎರೆಹುಳು ಗೊಬ್ಬರ ಘಟಕದಿಂದ ವಾರ್ಷಿಕವಾಗಿ ರೂ. 5 ರಿಂದ 5.5 ಲಕ್ಷ ಮತ್ತು ಸಣ್ಣ ಪ್ರಮಾಣದ ಘಟಕದಿಂದ ರೂ. 40 ಲಕ್ಷ ಗಳಿಸುತ್ತಿದ್ದ.

ಎರೆಹುಳು ಗೊಬ್ಬರ ತಯಾರಿಕೆಯಿಂದ ಗಳಿಸುವುದರ ಜೊತೆಗೆ, ಮೂವರು ಯುವಕರು ಎರೆಹುಳುಗಳು ಮತ್ತು ವರ್ಮಿವಾಶ್‌ನಂತಹ ಇತರ ಉತ್ಪನ್ನಗಳಿಂದಲೂ ಆದಾಯ ಗಳಿಸಿದರು. ಹೀಗಾಗಿ, ಇತರ ಉತ್ಪನ್ನಗಳ ಮಾರಾಟದಿಂದ ವರ್ಷಕ್ಕೆ ರೂ. 0.80 ರಿಂದ 1.20 ಲಕ್ಷಗಳಷ್ಟು ಆದಾಯ ಗಳಿಸಿದರು.

ಉತ್ಪನ್ನಗಳನ್ನು ಸೊಲ್ಲಾಪುರ ಮತ್ತು ಉಸ್ಮಾನಾಬಾದ್ ಜಿಲ್ಲೆಯ ಸ್ಥಳೀಯ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಯುವಕರು ತಮ್ಮ ಜಮೀನುಗಳಲ್ಲಿ ಎರೆಹುಳು ಗೊಬ್ಬರವನ್ನು ಬಳಸುತ್ತಾರೆ. ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ವೆಚ್ಚವನ್ನು ಉಳಿಸುವುದರ ಜೊತೆಗೆ ಉತ್ಪನ್ನದ ಗುಣಮಟ್ಟವನ್ನು ಸುಧಾರಿಸಿಕೊಂಡಿದ್ದಾರೆ. ಕೆಲವು ಯುವಕರು ಸ್ವಂತ ಪ್ಯಾಕೇಜಿಂಗ್ ಸೌಲಭ್ಯವನ್ನು ಪ್ರಾರಂಭಿಸಿದ್ದಾರೆ. ಪ್ರತಿ ಘಟಕದಿಂದ 39 ಗ್ರಾಮೀಣ ಯುವಕರಿಗೆ ಉದ್ಯೋಗ ಸಿಕ್ಕಿದ್ದು, ಸರಾಸರಿ 75 ದಿನಗಳು/ವ್ಯಕ್ತಿ/ವರ್ಷ ಉದ್ಯೋಗ ಸೃಷ್ಟಿಯಾಗಿದೆ.

 

  • ಮಾರ್ಗಸೂಚಿಗಳ ಪ್ರಕಾರ, ಪ್ರತಿ ARYA ಕೇಂದ್ರವು ಅಗತ್ಯತೆಗಳು ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ 18-35 ವರ್ಷ ವಯಸ್ಸಿನ 200 ಯುವಕರನ್ನು ಆಯ್ಕೆ ಮಾಡುತ್ತದೆ. ಇವರನ್ನು ಲಿಂಗ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಗುರುತಿಸಲಾಗುತ್ತದೆ. ಸಂಭಾವ್ಯ ಗ್ರಾಮೀಣ ಯುವಕರ ಆಯ್ಕೆ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
  • ಪ್ರದೇಶದ SWOT ವಿಶ್ಲೇಷಣೆಯ ಆಧಾರದ ಮೇಲೆ, ಸೂಕ್ತವಾದ ಉದ್ಯಮಗಳನ್ನು ಗುರುತಿಸಲಾಗುತ್ತದೆ. ಗ್ರಾಮೀಣ ಯುವಕರನ್ನು ಒಳಗೊಳ್ಳಲು ಸೂಕ್ತವಾದ ಸಂಭಾವ್ಯ ಉದ್ಯಮಗಳನ್ನು ಗುರುತಿಸಲಾಗುತ್ತದೆ.
  • ಗ್ರಾಮೀಣ ಯುವಕರನ್ನು ಆಯ್ಕೆ ಮಾಡಿದ ನಂತರ, ಅಗತ್ಯ ತಾಂತ್ರಿಕ ಮತ್ತು ವಾಣಿಜ್ಯ ಕೌಶಲ್ಯಗಳನ್ನು ಆಧರಿಸಿದ ತರಬೇತಿ ಕಾರ್ಯಕ್ರಮಗಳನ್ನು ಕೆವಿಕೆಗಳು ಆಯೋಜಿಸುತ್ತವೆ.
  • ಕೌಶಲ್ಯ ತರಬೇತಿಯ ನಂತರ, ಕೆವಿಕೆಗಳು ಯುವಕರಿಗೆ ಉದ್ಯಮವನ್ನು ಸ್ಥಾಪಿಸಲು ಮತ್ತು ಸ್ಥಳೀಯ ಮಾರುಕಟ್ಟೆ ಸಾಮರ್ಥ್ಯದ ಆಧಾರದ ಮೇಲೆ ಆರ್ಥಿಕ ಮಾದರಿಯನ್ನು ಅಭಿವೃದ್ಧಿಪಡಿಸಲು ಬೆಂಬಲ ನೀಡುತ್ತವೆ.
  • ತಾಂತ್ರಿಕ ಸಹಕಾರದೊಂದಿಗೆ ಅಗತ್ಯ ಸಂಪರ್ಕಗಳನ್ನು ಕೆವಿಕೆಗಳು, ಐಸಿಎಆರ್ ಸಂಸ್ಥೆಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಒದಗಿಸುತ್ತವೆ.
  • ನಿರಂತರ ಸಹಯೋಗದೊಂದಿಗೆ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ಮಧ್ಯಕಾಲೀನ ತಿದ್ದುಪಡಿಗಳು ವಿವಿಧ ಹಂತಗಳ ಸಮಿತಿಗಳಿಂದ ಬೆಂಬಲಿತವಾದ ವಿವರವಾದ ಮೌಲ್ಯಮಾಪನ ಪ್ರಕ್ರಿಯೆಯು ಯೋಜನೆಯ ಅನುಷ್ಠಾನದ ಅವಿಭಾಜ್ಯ ಅಂಗವಾಗಿದೆ.
  • ವ್ಯವಸ್ಥಿತ ಮೌಲ್ಯಮಾಪನದ ಆಧಾರದ ಮೇಲೆ, ಉದ್ಯಮವನ್ನು ಸುಸ್ಥಿರ ಮತ್ತು ಲಾಭದಾಯಕವಾಗುವಂತೆ ಮಾರ್ಪಡಿಸಿಕೊಂಡು ಅಳವಡಿಸಲಾಗಿದೆ.
  • ಗ್ರಾಮೀಣ ಯುವಕರು/ಉದ್ಯಮಿಗಳು ಸಂಪರ್ಕ ಜಾಲಗಳನ್ನು ರೂಪಿಸಿಕೊಳ್ಳಲು ಮತ್ತು ಮೌಲ್ಯ ಸರಪಳಿ ನಿರ್ವಹಣೆ ಸೇರಿದಂತೆ ಬಂಡವಾಳ ಹೂಡಿಕೆ ಸಾಧ್ಯವಾಗುವಂತಹ ಉದ್ಯಮಗಳನ್ನು ಮುಂದುವರಿಸಲು ಅನುವು ಮಾಡಿಕೊಡುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
  • ಕೃಷಿ ವಹಿವಾಟುಗಳಲ್ಲಿನ ಅಪಾಯಗಳನ್ನು ನಿಭಾಯಿಸಲು ಮತ್ತು ನಿರ್ವಹಿಸಲು ಸಮರ್ಥ ತರಬೇತುದಾರರ ಮಾರ್ಗದರ್ಶನದ ಮೂಲಕ ಉದ್ಯಮಶೀಲತಾ ಪ್ರೇರಣೆ ತರಬೇತಿಯನ್ನು ಆಯೋಜಿಸಲಾಗುತ್ತದೆ.

 

ಪುಣೆಯ ICAR-ATARI ಅಡಿಯಲ್ಲಿ ವಲಯ VIII ರಲ್ಲಿ ಅನುಷ್ಠಾನ ಮತ್ತು ಸಾಧನೆಗಳು

ವಲಯ VIIIನ್ನು ಪುಣೆಯಲ್ಲಿ ಆರಂಭದಲ್ಲಿ ಎರಡು ಕೆವಿಕೆಗಳಲ್ಲಿ (ಮಹಾರಾಷ್ಟ್ರದ ನಾಗ್ಪುರ-I ಮತ್ತು ಗುಜರಾತ್‌ನ ರಾಜ್‌ಕೋಟ್-I) ಅಳವಡಿಸಲಾಯಿತು. ಈ ವಲಯದಲ್ಲಿ, 2015-16 ರಿಂದ 2018-19 ರ ಅವಧಿಯಲ್ಲಿ 73 ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, 1,894 ಗ್ರಾಮೀಣ ಯುವಕರಿಗೆ ತರಬೇತಿ ನೀಡಲಾಯಿತು. 2019-20 ರಲ್ಲಿ, ಒಟ್ಟು 83 ತರಬೇತಿ ಕೋರ್ಸ್‌ಗಳನ್ನು ಆಯೋಜಿಸಲಾಗಿದ್ದು, 2,526 ಯುವಕರಿಗೆ ARYA-KVK ಗಳಿಂದ ತರಬೇತಿ ನೀಡಲಾಯಿತು. ಒಟ್ಟು 87 ಯುವಕರು ತಮ್ಮ ಉದ್ಯಮದ ಘಟಕಗಳನ್ನು ಸ್ಥಾಪಿಸಿದ್ದಾರೆ. 2019-20 ರಲ್ಲಿ, ಇನ್ನೂ ಹತ್ತು ಕೇಂದ್ರಗಳನ್ನು ಗುರುತಿಸಿ (ಮಹಾರಾಷ್ಟ್ರದಲ್ಲಿ: ನಾಸಿಕ್-I, ಉಸ್ಮಾನಾಬಾದ್, ಪುಣೆ-II, ವಾಶಿಮ್ ಮತ್ತು ಸೋಲಾಪುರ-I. ಗುಜರಾತ್‌ನಲ್ಲಿ: ಭಾವನಗರ, ಖೇಡಾ, ನವಸಾರಿ, ಆನಂದ್ ಮತ್ತು ಅಮ್ರೇಲಿ) ಕಾರ್ಯಾರಂಭ ಮಾಡಲಾಗಿದೆ. ಪ್ರಸ್ತುತ, 12 ಕೆವಿಕೆಗಳು ARYA ಯೋಜನೆಯನ್ನು ಕಾರ್ಯಗತಗೊಳಿಸಿವೆ.

ICAR-ATARI ವಲಯ 8 ರ ಅಡಿಯಲ್ಲಿ, 13 ಮುಖ್ಯ ಉದ್ಯಮಗಳಾದ ನರ್ಸರಿ ನಿರ್ವಹಣೆ, ಹಣ್ಣು ಮತ್ತು ತರಕಾರಿ ಸಂಸ್ಕರಣೆ, ಸಾವಯವ ಗೊಬ್ಬರ ಉತ್ಪಾದನೆ, ಸಣ್ಣ ಪ್ರಮಾಣದ ಉದ್ಯಮಗಳು, ಡೈರಿ, ಕೋಳಿ, ಮೇಕೆ ಸಾಕಣೆ, ಮೀನುಗಾರಿಕೆ ಇತ್ಯಾದಿಗಳಿವೆ. ಹಳ್ಳಿಗಳಲ್ಲಿ ನಿಯಮಿತ ಆದಾಯ ಗಳಿಕೆಯತ್ತ ತಮ್ಮ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಆಸಕ್ತ ಗ್ರಾಮೀಣ ಯುವಕರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು. ಕೃಷಿ ಮತ್ತು ಸಂಬಂಧಿತ ವಲಯದ ಉದ್ಯಮಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಅತ್ಯುತ್ತಮ ಉದಾಹರಣೆಗಳನ್ನು ಕೆವಿಕೆಗಳು ಸೃಷ್ಟಿಸಿವೆ.

ಕೋಷ್ಟಕ 1: ಗುರುತಿಸಲಾದ ಉದ್ಯಮಗಳು ಮತ್ತು ಅನುಷ್ಠಾನಗೊಳಿಸುವ ಕೆವಿಕೆಗಳು

ಉದ್ಯಮಗಳ ಹೆಸರು ಕೆವಿಕೆ ಅನುಷ್ಠಾನ
ನರ್ಸರಿಯಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸುವುದು ವಾಶಿಮ್, ಪುಣೆ-II, ಉಸ್ಮಾನಾಬಾದ್, ನಾಗ್ಪುರ, ಭಾವನಗರ, ನವಸಾರಿ
ಹಣ್ಣು ಮತ್ತು ತರಕಾರಿ ಸಂಸ್ಕರಣೆ ವಾಶಿಮ್, ಪುಣೆ-II, ಉಸ್ಮಾನಾಬಾದ್, ನಾಗ್ಪುರ, ಭಾವನಗರ, ಖೇಡಾ, ನವಸಾರಿ
ಸಾವಯವ ಗೊಬ್ಬರ ಉತ್ಪಾದನೆ ಸೊಲ್ಲಾಪುರ-I, ಪುಣೆ-II, ಉಸ್ಮಾನಾಬಾದ್, ಭಾವನಗರ
ಮೇಕೆ ಸಾಕಣೆ ಸೊಲ್ಲಾಪುರ -I, ಪುಣೆ-II, ಉಸ್ಮಾನಾಬಾದ್
ಮನೆ ಮಟ್ಟದಲ್ಲೇ ದ್ವಿದಳ ಧಾನ್ಯ/ಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆ ಖೇಡಾ
ಮೀನು ಮರಿ ಸಾಕಣೆ ವಾಶಿಮ್, ಆನಂದ್
ಕಡಲೆಬೀಜ ಉತ್ಪಾದನೆ ಸೊಲ್ಲಾಪುರ -I
ಕೋಳಿ ಸಾಕಣೆ ವಾಶಿಮ್
ಜೋಳದಲ್ಲಿ ಮೌಲ್ಯವರ್ಧನೆ ಸೊಲ್ಲಾಪುರ -I
ಲಘು ಎಣ್ಣೆ ಗಿರಣಿ ಘಟಕ ರಾಜ್‌ಕೋಟ್-I
ಹಾಲು ಕೋವಾ ತಯಾರಿಸುವ ಘಟಕ ರಾಜ್‌ಕೋಟ್-I
ಮಸಾಲೆ ಸಂಸ್ಕರಣಾ ಘಟಕ ರಾಜ್‌ಕೋಟ್-I
ನಮ್ಕೀನ್ (ಫರ್ಸಾನ್) ತಯಾರಿಕಾ ಘಟಕ ರಾಜ್‌ಕೋಟ್-I

 

ಚೌಕ 2

ಪ್ರಕರಣ 2: ಹಾಲುಕೋವಾ ತಯಾರಿಸುವ ಉದ್ಯಮ

 ಜಸ್ದಾನ್ ತಾಲ್ಲೂಕಿನ (ರಾಜ್‌ಕೋಟ್ ಜಿಲ್ಲೆ) ಅಂಬಾರ್ಡಿ ಗ್ರಾಮದ 08 ಗ್ರಾಮೀಣ ಯುವಕರ ಗುಂಪುಗಳು ಗುಜರಾತ್‌ನ ರಾಜ್‌ಕೋಟ್-1 ರ ಕೆವಿಕೆ ಜಾರಿಗೆ ತಂದ ARYA ಯೋಜನೆಯ ಪ್ರಯೋಜನವನ್ನು ಪಡೆದುಕೊಂಡವು. ಹಾಲು ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗಾಗಿ ಅಭಿವೃದ್ಧಿ ಹೊಂದಿದ ಉದ್ಯಮಗಳಿಗೆ ತಾಂತ್ರಿಕ ತರಬೇತಿ ಕಾರ್ಯಕ್ರಮಗಳು ಮತ್ತು ಕ್ಷೇತ್ರ ಭೇಟಿಗಳನ್ನು ಆಯೋಜಿಸಲಾಯಿತು.

ಹಾಲು-ಕೋವಾ ತಯಾರಿಸುವ ಘಟಕವನ್ನು ಉತ್ತಮ ಗುಣಮಟ್ಟದ ಹಾಲು-ಕೋವಾ ಮತ್ತು ಪೇಡಾದಂತಹ ಹಾಲು ಆಧಾರಿತ ಖಾದ್ಯಗಳನ್ನು ಉತ್ಪಾದಿಸಲು ಸ್ಥಾಪಿಸಲಾಯಿತು. ಪಶುಸಂಗೋಪನೆಯೊಂದಿಗೆ ಕೃಷಿಯಿಂದ ಹೆಚ್ಚಿನ ಆದಾಯವನ್ನು ಇದರ ಗಳಿಸುವುದು ಉದ್ದೇಶವಾಗಿತ್ತು. ತರಬೇತಿ ಪಡೆದ 8 ಗ್ರಾಮೀಣ ಯುವಕರಿಗೆ ರೂ. 63,000 ವೆಚ್ಚದ ಹಾಲು-ಕೋವಾ ತಯಾರಿಸುವ ಯಂತ್ರವನ್ನು ಒದಗಿಸಲಾಯಿತು.

ಹಾಲು ಕೋವಾ ತಯಾರಿಸುವ ಯಂತ್ರವನ್ನು ೨೦೧೭ ರಲ್ಲಿ ಅಂಬಾರ್ಡಿ ಗ್ರಾಮದಲ್ಲಿ ಸ್ಥಾಪಿಸಲಾಯಿತು. ಪ್ರತಿ ತಿಂಗಳು ಸರಾಸರಿ ೧,೮೦೦ ಲೀಟರ್ ಹಾಲು ಸಂಸ್ಕರಣೆ ಮಾಡಲಾಗುತ್ತಿದೆ. ಸರಿಸುಮಾರು, ಮಾಸಿಕ ೩೬೦ ಕೆಜಿ ಹಾಲು ಕೋವಾ ಉತ್ಪಾದಿಸಲಾಗುತ್ತದೆ. ಇದರಿಂದ ೧೧೦ ಕೆಜಿ ಹಾಲು ಕೋವಾವನ್ನು ಪೇಡಾ ತಯಾರಿಸಲು ಬಳಸಲಾಗುತ್ತದೆ. ಉಳಿದ ೨೫೦ ಕೆಜಿ ಹಾಲು ಕೋವಾವನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ.

ಹಾಲು-ಕೋವಾ ಮತ್ತು ಪೇಡಾ ಮಾರಾಟ ಮಾಡುವ ಮೂಲಕ ಈ ಉದ್ಯಮದಿಂದ ಗುಂಪು ತಿಂಗಳಿಗೆ ರೂ. 40,500/- ನಿವ್ವಳ ಲಾಭವನ್ನು ಗಳಿಸಿತು. ಈ ಉದ್ಯಮವು ವರ್ಷವಿಡೀ ನಡೆಯುವುದರಿಂದ, 5 ಯುವಕರಿಗೆ ವರ್ಷದಲ್ಲಿ 300 ದಿನಗಳ ಉದ್ಯೋಗ ದೊರೆಯಿತು. ಗುಂಪಿನ ಪ್ರತಿಯೊಬ್ಬ ಸದಸ್ಯರ ಆದಾಯವು ವರ್ಷಕ್ಕೆ ರೂ. 50,625 ಕ್ಕೆ ಏರಿತು. ಗುಂಪಿನ ಸದಸ್ಯರು ಹತ್ತಿರದ ಹಳ್ಳಿಗಳು ಮತ್ತು ಜಸ್ದಾನ್ ನಗರದಲ್ಲಿ “ARYA” ಬ್ರಾಂಡ್ ಹೆಸರಿನೊಂದಿಗೆ ‘ಪೇಡಾ’ ಮಾರಾಟ ಮಾಡುತ್ತಾರೆ. ಅಲ್ಲದೆ, ‘ಪೇಡಾ’ವನ್ನು ಹತ್ತಿರದ ಹಳ್ಳಿಯ “ಘೇಲಾ ಸೋಮನಾಥ” ದೇವಾಲಯದಲ್ಲೂ ಮಾರಾಟ ಮಾಡಲಾಗುತ್ತದೆ.

ಸುಮಾರು 92 ರೈತರು/ಯುವಕರು ಘಟಕಕ್ಕೆ ಭೇಟಿ ನೀಡಿದರು. ಅದು ಇನ್ನೂ ಎರಡು ಹಳ್ಳಿಗಳಿಗೆ ವಿಸ್ತರಿಸಿದೆ.

 

ಈ ಲೇಖನವು ಮೂಲ ಲೇಖನದ ಅಳವಡಿಕೆಯಾಗಿದೆ:
ATARI-Pune (2020) ARYA: Micro Enterprises for
Sustainable Income in Rural Areas. E-Publication by
ICAR-ATARI, Pune, pp. 1-35 and their website

 


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ‌೨ ; ಜೂನ್ ೨೦‌೨‌೪

Recent Posts

ಗ್ರಾಮೀಣ ಯುವಜನತೆ – ಭವಿಷ್ಯದ ರೈತರು

ಗ್ರಾಮೀಣ ಯುವಜನತೆ – ಭವಿಷ್ಯದ ರೈತರು

ಭಾರತದಲ್ಲಿ ಹೆಚ್ಚುತ್ತಿರುವ ಯುವ ಜನಸಂಖ್ಯೆಯು ದೇಶದ ನಿರ್ಮಾಣದಲ್ಲಿ ಬಳಸಬೇಕಾದ ಆಸ್ತಿಯಾಗಿದೆ. ಗ್ರಾಮೀಣ ಯುವಕರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಮೀಣ ಯುವಜನರ ಆಕಾಂಕ್ಷೆಗಳು ಮತ್ತು ಕೃಷಿಯಲ್ಲಿ ಅವರನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮಹಾರಾಷ್ಟ್ರದಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನದ ಸಂಶೋಧನೆಗಳು ಮತ್ತು ಒಳನೋಟಗಳು ಕೃಷಿಯಲ್ಲಿ ಗ್ರಾಮೀಣ ಯುವಕರನ್ನು ಉಳಿಸಿಕೊಳ್ಳುವಲ್ಲಿ ಸೂಕ್ತ ತಂತ್ರಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.

ಬೀಜ ಸಂರಕ್ಷಕರು ಮಹಿಳಾ ನೇತೃತ್ವದ ಕೃಷಿ ಉದ್ಯಮ

ಬೀಜ ಸಂರಕ್ಷಕರು ಮಹಿಳಾ ನೇತೃತ್ವದ ಕೃಷಿ ಉದ್ಯಮ

ಮಾರ್ಗದರ್ಶನ ಮತ್ತು ತರಬೇತಿ ನೆರವಿನೊಂದಿಗೆ ಮಹಾರಾಷ್ಟ್ರದ ಮಹಿಳಾ ಉದ್ಯಮಿಗಳು ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಒದಗಿಸುವ ವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ. ಯಾರೂ ಗುರುತಿಸಿದ ಕೊಡುಗೆಯ ಮೂಲಕ ತಮ್ಮ ಮನೆಗಳು ಅಥವಾ ಹೊಲಗಳಿಗೆ ಸೀಮಿತವಾಗಿದ್ದ ಅವರೀಗ ಎಲ್ಲರಿಗೂ ಕಾಣುವಂತಹ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿದ್ದು ದೊಡ್ಡ ಮಟ್ಟದ ಸಾಮಾಜಿಕ ಸ್ವೀಕಾರವನ್ನು ಪಡೆದಿದ್ದಾರೆ.

ಕೃಷಿ ಉದ್ಯಮಿಗಳಾಗುವ ಪಯಣದ ಹಾದಿಯಲ್ಲಿ ರೈತಮಹಿಳೆಯರ ಸವಾಲುಗಳು ಮತ್ತು ಮುಂದಿನ ದಾರಿ

ಕೃಷಿ ಉದ್ಯಮಿಗಳಾಗುವ ಪಯಣದ ಹಾದಿಯಲ್ಲಿ ರೈತಮಹಿಳೆಯರ ಸವಾಲುಗಳು ಮತ್ತು ಮುಂದಿನ ದಾರಿ

ಮಹಿಳಾ ನೇತೃತ್ವದ ಕೃಷಿ ಉದ್ಯಮಗಳನ್ನು ಉತ್ತೇಜಿಸುವುದು ಇನ್ನು ಮುಂದೆ ಆಯ್ಕೆಯಲ್ಲ, ಬದಲಿಗೆ ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ನಡೆಸುತ್ತಿರುವ ವ್ಯವಹಾರಗಳು ಮುಂದುವರೆಯುವಂತೆ ನೋಡಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿನ ಬಳಕೆಯಾಗದೆ ಉಳಿದ ಸಾಮರ್ಥ್ಯವು ಬಳಕೆಯಾಗುತ್ತದೆ. ಬಡತನವನ್ನು ಕಡಿಮೆ ಮಾಡುತ್ತದೆ, ಉದ್ಯೋಗ ಸೃಷ್ಟಿಸುತ್ತದೆ ಮತ್ತು ಲಿಂಗ ಸಮಾನತೆಯಿರುವ ಸಮಾಜವನ್ನು ನಿರ್ಮಿಸುತ್ತದೆ.

YouTube
Instagram
WhatsApp