ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ


ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.


ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ಹೆಚ್ಚಿರುವ ಬೇಡಿಕೆ, ಮೌಲ್ಯ ಸರಪಳಿಯ ಅಭಿವೃದ್ಧಿ, ನಿರಂತರ ಸಂಶೋಧನೆ ಮತ್ತು ನಾವೀನ್ಯತೆ (ತೂರ್ ಮತ್ತು ಗೋಯೆಲ್, 2022) ನಂತಹ ಹಲವು ಅಂಶಗಳಿಂದಾಗಿ ಭಾರತೀಯ ಕೋಳಿ ಸಾಕಣೆ ವಲಯವು ವಾರ್ಷಿಕವಾಗಿ ಸುಮಾರು 8% ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಕಳೆದ ಕೆಲವು ದಶಕಗಳಲ್ಲಿ, ಈ ವಲಯವು ಹಿತ್ತಲಲ್ಲಿ ಕೋಳಿ ಸಾಕಣೆ ಎನ್ನುವುದಕ್ಕಿಂತ ಹೆಚ್ಚಾಗಿ ವಾಣಿಜ್ಯ ಆಧಾರಿತ ಚಟುವಟಿಕೆ ಎನ್ನುವ ರೀತಿಯಲ್ಲಿ ಸ್ಪಷ್ಟ ಬದಲಾವಣೆ ಕಂಡಿದೆ. ಹೀಗಿದ್ದೂ ಸಾಂಪ್ರದಾಯಿಕವಾಗಿ ತಮ್ಮ ಹಿತ್ತಲಿನಲ್ಲಿ ಸಣ್ಣ ಹಿಂಡುಗಳಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ರೈತ ಮಹಿಳೆಯರಲ್ಲಿ ಹಲವರಿಗೆ ಈ ಬಗ್ಗೆ ಇನ್ನೂ ತಿಳಿದಿಲ್ಲ. ಬ್ರಾಯ್ಲರ್ ಸಾಕಣೆಗೆ ಅಗತ್ಯವಾದ ತಾಂತ್ರಿಕ ಪರಿಣತಿಯಾಗಲಿ, ಆರ್ಥಿಕತೆ ಆಗಲಿ ಅವರ ಬಳಿ ಇಲ್ಲ.

ಈ ಹಿನ್ನೆಲೆಯಲ್ಲಿ, 2016 ರಲ್ಲಿ, ಕೋಲ್ಕತ್ತಾದ ದಕ್ಷಿಣ 24 ಪರಗಣ ಜಿಲ್ಲೆಯ ಸಸ್ಯ ಶ್ಯಾಮಲ ಕೃಷಿ ವಿಜ್ಞಾನ ಕೇಂದ್ರ (SS KVK), ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ತಂತ್ರವಾಗಿ ಹಿತ್ತಲಿನಲ್ಲಿ ಟರ್ಕಿ (ಮೆಲಿಯಾಗ್ರಿಸ್ ಗ್ಯಾಲೋಪಾವೊ) ಕೋಳಿ ಸಾಕಣೆಯನ್ನು ಉತ್ತೇಜಿಸಲು ಪ್ರಯತ್ನಿಸಿತು. ಇದಕ್ಕೆ ಹಲವು ಅಂಶಗಳು ಕಾರಣವಾಗಿದ್ದವು. ಟರ್ಕಿ ಕೋಳಿಗಳನ್ನು ಸುಲಭವಾಗಿ ಅತ್ಯಂತ ಕಡಿಮೆ ವ್ಯವಸ್ಥೆಯೊಳಗೆ ಬೆಳೆಸಬಹುದು. ಬ್ರಾಯ್ಲರ್ ಕೋಳಿಗಳಂತೆ ಇವುಗಳನ್ನು ಸಾಕಲು ಹೆಚ್ಚಿನ ವ್ಯವಸ್ಥೆ ಬೇಕಿಲ್ಲ. ಅವುಗಳಂತೆ ಇವು ರೋಗಬಾಧೆಗೆ ತುತ್ತಾಗುವುದಿಲ್ಲ. ಟರ್ಕಿ ಕೋಳಿಗಳ ಮಾಂಸದ ಗುಣಮಟ್ಟ, ವಿಶಿಷ್ಟ ರುಚಿ ಮತ್ತು ಸುವಾಸನೆಯ ಕಾರಣದಿಂದಾಗಿ ನಗರ ಪ್ರದೇಶದ ಗ್ರಾಹಕರು ಇದನ್ನು ಇಷ್ಟಪಡುತ್ತಾರೆ. ಟರ್ಕಿ ಮಾಂಸವು ಬಾಯ್ಲರ್ ಮಾಂಸಕ್ಕಿಂತ (140 ಕಿ.ಕ್ಯಾಲೊರಿ/85 ಗ್ರಾಂ) ಕಡಿಮೆ ಕ್ಯಾಲೋರಿ ಮೌಲ್ಯವನ್ನು (125 ಕಿ.ಕ್ಯಾಲೊರಿ /85 ಗ್ರಾಂ) ಹೊಂದಿದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವ ಜನರ ಖಾದ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಎನ್ನುವುದು ಕಂಡುಬಂದಿದೆ. ಕಲ್ಕತ್ತಾ ನಗರವು ಅಲ್ಲಿನ ಗ್ರಾಹಕರಿಂದಾಗಿ ಟರ್ಕಿ ಮಾಂಸಕ್ಕೆ ಉತ್ತಮ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಬಹುದು ಎಂದು ನಂಬಲಾಗಿತ್ತು.

ಟರ್ಕಿ ಕೋಳಿ ಸಾಕಣೆಯನ್ನು ಅಳವಡಿಸಿಕೊಳ್ಳಲು ಮಹಿಳಾ ಗುಂಪನ್ನು ಸಜ್ಜುಗೊಳಿಸುವ ಗುರಿ

ಕೆಲವು ರೈತಮಹಿಳೆಯರು ಮೊದಲು ಹೆಚ್ಚುವರಿ ಆದಾಯ ಗಳಿಕೆಗಾಗಿ ಮನೆಯ ಹಿತ್ತಲಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದರು. ಅವರು ಸಣ್ಣ ಹಿಂಡುಗಳಲ್ಲಿ ಕುರೋಯಿಲರ್/ಆರ್‌ಐಆರ್ ಮಾದರಿಯ ಕೋಳಿ ತಳಿಗಳನ್ನು ಸಾಕುತ್ತಿದ್ದರು. ಕ್ರಮೇಣ ಈ ಮೂರು ಕಾರಣಗಳಿಂದಾಗಿ ಸಾಂಪ್ರದಾಯಿಕ ಕೋಳಿ ಸಾಕಣೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದರು. i) ಬಾಯ್ಲರ್ ಸಾಕಣೆಗೆ ಹೋಲಿಸಿದರೆ ಆರ್ಥಿಕ ಲಾಭ ಕಡಿಮೆ ii) ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಯಾವುದೇ ನಿರ್ದಿಷ್ಟ ಮಾರುಕಟ್ಟೆ ಮಾರ್ಗಗಳಿಲ್ಲದ ಕಾರಣ ಮೊಟ್ಟೆಗಳು ಮತ್ತು ಕೋಳಿಗಳನ್ನು ದಲ್ಲಾಳಿಗಳಿಗೆ ಬಲವಂತವಾಗಿ ಮಾರಾಟ ಮಾಡಬೇಕಿದೆ ಮತ್ತು iii) ಹಕ್ಕಿಗಳ ಮರಣದ ಪ್ರಮಾಣ ಹೆಚ್ಚು. ಟರ್ಕಿ ಸಾಕಣೆಯ ಮೂಲಕ ಪರ್ಯಾಯ ಜೀವನೋಪಾಯವನ್ನು ಅಳವಡಿಸಿಕೊಳ್ಳಲು ಅವರನ್ನು ಸಂಪರ್ಕಿಸಿದಾಗ, ಅದರಲ್ಲಿ ಆಸಕ್ತಿ ತೋರಿದರು. ದಕ್ಷಿಣ 24 ಪರಗಣ ಜಿಲ್ಲೆಯ ಮೂರು ಅಭಿವೃದ್ಧಿ ಬ್ಲಾಕ್‌ಗಳಾದ ಸೋನಾರ್‌ಪುರ, ಬರುಯಿಪುರ ಮತ್ತು ಬಡ್ಜ್ ಬಡ್ಜ್ II ರಿಂದ ಸುಮಾರು ಹದಿನೈದು ಸ್ವಸಹಾಯ ಗುಂಪುಗಳ ನಾಯಕಿಯರನ್ನು ಟರ್ಕಿ ಕೋಳಿ ಸಾಕಣೆಗೆ ಆಯ್ಕೆ ಮಾಡಲಾಯಿತು.

ಮಹಿಳಾ ಗುಂಪುಗಳಿಗೆ ಮೊದಲು ಟರ್ಕಿ ಕೋಳಿ ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ರಾಜ್ಯ ಸರ್ಕಾರವು ನಿರ್ವಹಿಸುವ ಮಧ್ಯಮ ಗಾತ್ರದ ಟರ್ಕಿ ಕೋಳಿ ಸಾಕಾಣಿಕೆ ಕೇಂದ್ರಗಳ ಬಗ್ಗೆ ಅರಿವು ಮೂಡಿಸಲಾಯಿತು. ಬೆಲ್ಟ್ಸ್‌ವಿಲ್ಲೆ ಸಣ್ಣ ಬಿಳಿ ಟರ್ಕಿ ತಳಿಯನ್ನು ಬಳಸಿಕೊಂಡು ವೈಜ್ಞಾನಿಕ ಟರ್ಕಿ ಕೋಳಿ ಸಾಕಣೆಯ ಕುರಿತು ರೈತರ ಹೊಲದಲ್ಲಿ ಕಾಲಕಾಲಕ್ಕೆ ಪ್ರದರ್ಶನಗಳನ್ನು ನಡೆಸಲಾಗುತ್ತಿತ್ತು. ಇದು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಮತ್ತು ಸಾಕಾಣಿಕೆಯ ಪದ್ಧತಿಗಳನ್ನು ಹರಡುವಲ್ಲಿ ನೆರವಾಯಿತು. ಹಿತ್ತಲಲ್ಲಿನ ಟರ್ಕಿ ಕೋಳಿ ಸಾಕಾಣಿಕೆ ಪದ್ಧತಿಗಳ ಪ್ಯಾಕೇಜ್‌ ವೈಜ್ಞಾನಿಕ ವಸತಿ, ಮೇವು, ಕಟ್ಟುನಿಟ್ಟಾದ ತಡೆಗಟ್ಟುವಿಕೆಯ ಆರೈಕೆಯ ತತ್ವಗಳನ್ನು ಆಧರಿಸಿದೆ. ಈ ರೀತಿಯ ಆರೈಕೆಯಲ್ಲಿ ಬೆಳೆಸಿದ ಟರ್ಕಿ ಕೋಳಿಯು 5 ತಿಂಗಳಿಗೆ 5 ಕೆಜಿಯಷ್ಟಾಗಿರುತ್ತದೆ. ಆಗ ಅದನ್ನು ಮಾರಾಟ ಮಾಡಲಾಗುತ್ತದೆ.

ದೊಡ್ಡ ಪ್ರಮಾಣದಲ್ಲಿ ಅಳವಡಿಕೆ

ಸ್ವಸಹಾಯ ಸಂಘದ ಸದಸ್ಯರು ಸಾಕಿರುವ ಟರ್ಕಿ ಕೋಳಿಗಳ ಮಾರಾಟಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಅಂಗಸಂಸ್ಥೆಯಾದ ಪಶ್ಚಿಮ ಬಂಗಾಳ ಜಾನುವಾರು ಅಭಿವೃದ್ಧಿ ನಿಗಮ (WBLDC) ದೊಂದಿಗೆ KVK ಒಪ್ಪಂದ ಮಾಡಿಕೊಂಡಾಗ ಈ ಕಾರ್ಯಕ್ರಮವು ಪ್ರಗತಿ ಕಂಡಿತು. ಈ ಒಪ್ಪಂದದೊಂದಿಗೆ WBLDC ರೈತರ ಮನೆಯಿಂದ ನೇರವಾಗಿ ಟರ್ಕಿ ಕೋಳಿಗಳನ್ನು ಕೊಳ್ಳಲಾರಂಭಿಸಿತು. ಟರ್ಕಿ ಕೋಳಿಗಳ ಸರಾಸರಿ ಫಾರ್ಮ್ ಗೇಟ್ ಬೆಲೆ ಕೆಜಿಗೆ ರೂ. 270, ಇದು ವಾಣಿಜ್ಯ ಉದ್ದೇಶದ ಬ್ರಾಯ್ಲರ್ ಕೋಳಿಗಳಿಗಿಂತ ಹೆಚ್ಚು.‌ ಈ ಮೊತ್ತವನ್ನು WBLDC ನೇರ ಬ್ಯಾಂಕ್ ವರ್ಗಾವಣೆಯ ಮೂಲಕ ಪಡೆಯುತ್ತದೆ. ಸರಾಸರಿ 20 ಕೋಳಿಗಳ ಹಿಂಡು ಹೊಂದಿರುವ ಟರ್ಕಿ ಸಾಕಣೆದಾರ ಒಂದು ಸಲಕ್ಕೆ ರೂ. 15000-20000 ನಿವ್ವಳ ಆದಾಯವನ್ನು ಗಳಿಸಬಹುದು. ಕೋಳಿಗಳಿಗೆ ಸ್ಥಳೀಯವಾಗಿ ಲಭ್ಯವಿರುವ ಆಹಾರ, ಅಡುಗೆ ತ್ಯಾಜ್ಯ ಮತ್ತು ಅಜೋಲ್ಲಾಗಳನ್ನು ನೀಡಿದರೆ ನಿವ್ವಳ ಆದಾಯವನ್ನು ಮತ್ತಷ್ಟು ಹೆಚ್ಚಿಸಬಹುದು.

ಸ್ವಸಹಾಯ ಸಂಘದ ಸದಸ್ಯರಿಂದ ಹೀಗೆ ಸಂಗ್ರಹಿಸಲಾದ ಟರ್ಕಿ ಮಾಂಸವನ್ನು ಪಶ್ಚಿಮ ಬಂಗಾಳದಾದ್ಯಂತ WBLDC ಯ ವಿವಿಧ ಚಿಲ್ಲರೆ ಕೌಂಟರ್‌ಗಳಲ್ಲಿ ‘ಹರಿಂಗಟ ಮೀಟ್‌ʼ ಎಂಬ ಬ್ರಾಂಡ್ ಹೆಸರಿನಲ್ಲಿ ಫ್ರೋಜನ್‌ ಮೀಟ್‌ ವರ್ಗದ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಟರ್ಕಿ ಸಾಕಾಣಿಕೆಯ ದೊಡ್ಡ ಪ್ರಮಾಣದ ಅಳವಡಿಕೆಯ ಕಾರ್ಯಕ್ರಮವು 2019 ರಿಂದ ಕ್ರಮೇಣ ವೇಗವನ್ನು ಪಡೆಯುತ್ತಿದೆ (ಚಿತ್ರ 1). ಸಾಲಕ್ಕಾಗಿ ಹಣಕಾಸು ಸಂಸ್ಥೆಗಳೊಂದಿಗೆ, ತಂತ್ರಜ್ಞಾನ ಸಹಯೋಗಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರದ ವಿವಿಧ ಲೈನ್ ಇಲಾಖೆಗಳೊಂದಿಗೆ ಮತ್ತು ಮಾರುಕಟ್ಟೆ ಸಂಪರ್ಕಕ್ಕಾಗಿ WBLDC ಯೊಂದಿಗೆ ಉತ್ತಮ ರೀತಿಯಲ್ಲಿ ಸಂಬಂಧಹೊಂದಿದೆ. ಟರ್ಕಿ ಕೋಳಿ ಸಾಕಣೆ ಮತ್ತು ಅದರ ಮಾರ್ಕೆಟಿಂಗ್‌ ಕಾರ್ಯಕ್ರಮವನ್ನು ಕೆವಿಕೆ ಒಟ್ಟಾರೆಯಾಗಿ ಮುನ್ನಡೆಸಿತು.

ಪ್ರಸಕ್ತ ವರ್ಷದಲ್ಲಿ, ಸುಮಾರು 160 ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಟರ್ಕಿ ಸಾಕಣೆಯಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಮತ್ತು ಅತಿಸಣ್ಣ ಹಿಂದುಳಿದ ಕೃಷಿ ಸಮುದಾಯಕ್ಕೆ ಸೇರಿದ ಟರ್ಕಿ ಕೋಳಿ ಸಾಕಣೆದಾರ ಮಹಿಳೆಯರು ಈಗ ಪ್ರತಿ ತ್ರೈಮಾಸಿಕಕ್ಕೆ ಸುಮಾರು 1.5 ಟನ್ ಟರ್ಕಿ ಕೋಳಿಗಳನ್ನು WBLDC ಗೆ ಪೂರೈಸುತ್ತಿದ್ದಾರೆ. ಟರ್ಕಿ ಕೋಳಿ ಸಾಕಣೆ ಮೂಲಕ ಗ್ರಾಮೀಣಾಭಿವೃದ್ಧಿಯ ಪಥದಲ್ಲಿ ಅವರು ತಮ್ಮದೇ ಆದ ಯಶೋಗಾಥೆಯನ್ನು ರೂಪಿಸಿಕೊಂಡಿದ್ದಾರೆ. ಟರ್ಕಿ ಕೋಳಿ ಸಾಕಣೆ ಕೇವಲ ಅವರ ಹೆಚ್ಚುವರಿ ಆದಾಯದ ಮೂಲವಲ್ಲದೆ, ಆತ್ಮವಿಶ್ವಾಸ, ತೃಪ್ತಿ, ಹೆಮ್ಮೆ ಮತ್ತು ಕುಟುಂಬದ ಪೋಷಣೆಗೆ ಉತ್ತಮ ಮೂಲವಾಗಿದೆ.

ಮಹಿಳಾ ಟರ್ಕಿ ಸಾಕಣೆದಾರರ ಉದಾಹರಣೆಗಳಿಂದ ಪ್ರೇರಿತರಾಗಿ, ಪಶ್ಚಿಮ ಬಂಗಾಳ ಸರ್ಕಾರದ ARD ಇಲಾಖೆಯು 2023 ರಿಂದ ಸೋನಾರ್‌ಪುರ ಬ್ಲಾಕ್‌ನಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕೃಷಿ ಕುಟುಂಬಗಳಿಗೆ ಉತ್ತಮ ಆದಾಯವನ್ನು ಒದಗಿಸುವ ಉದ್ದೇಶದಿಂದ, ವಿಶೇಷ ಯೋಜನೆಯಡಿಯಲ್ಲಿ, ಎಆರ್‌ಡಿ ಇಲಾಖೆ ಕೆವಿಕೆ ಜೊತೆಗೂಡಿ ಗ್ರಾಮೀಣ ಯುವಕರಿಗೆ ಟರ್ಕಿ ಕೋಳಿಗಳನ್ನು ವಿತರಿಸುತ್ತಿದೆ.

ಯಶಸ್ಸಿನ ಅಂಶಗಳು

ಕೆವಿಕೆ ನಡೆಸಿದ ತರಬೇತಿ, ಪ್ರಾತ್ಯಕ್ಷಿಕೆ ಮತ್ತು ಪ್ರೇರಣೆ ತರಗತಿಗಳು ರೈತ ಸಮುದಾಯದ ಮೇಲೆ ಅಪಾರ ಪರಿಣಾಮ ಬೀರಿದೆ. ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಅಗತ್ಯವಾದ ವೈಜ್ಞಾನಿಕ ಅಡಿಪಾಯವನ್ನು ಹಾಕಿದವು. ಇದು ಪ್ರತಿಯೊಬ್ಬ ಸ್ವಸಹಾಯ ಸಂಘದ ಸದಸ್ಯರೊಳಗೆ ಸುಪ್ತವಾಗಿದ್ದ ನಾಯಕತ್ವದ ಕೌಶಲ್ಯಗಳನ್ನು ಹೊರತಂದಿತು.

KVK, ICAR -IVRI ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ತಾಂತ್ರಿಕ ಬೆಂಬಲದೊಂದಿಗೆ ಖಚಿತವಾದ ಮಾರುಕಟ್ಟೆ ಸಂಪರ್ಕಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿವೆ.

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಇತರ ಹಲವು ಕೃಷಿ ಕ್ಷೇತ್ರಗಳು ಸ್ಥಗಿತಗೊಂಡಾಗಲೂ ಈ ಖಚಿತವಾದ ಮಾರ್ಕೆಟಿಂಗ್ ಚಾನೆಲ್ ಟರ್ಕಿ ಸಾಕಾಣಿಕೆಯ ಸಮುದಾಯವನ್ನು ಪೋಷಿಸಿತು. ಪಶ್ಚಿಮ ಬಂಗಾಳ ಸರ್ಕಾರದ ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ARD) ಈ ಕಾರ್ಯಕ್ರಮದ ಆರಂಭದಿಂದಲೂ ಟರ್ಕಿ ಸಾಕಣೆದಾರರಿಗೆ  ಕೋಳಿಮರಿಗಳನ್ನು ನಿರಂತರವಾಗಿ ಪೂರೈಸುವ ಮೂಲಕ ಮತ್ತು ಹಳ್ಳಿಗಳಲ್ಲಿ ರೋಗಪ್ರತಿರಕ್ಷಣೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬೆಂಬಲ ನೀಡುತ್ತಿದೆ. ಈ ಸಹಯೋಗವು ಅತ್ಯುತ್ತಮ ಮೌಲ್ಯ ಸರಪಳಿಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೊಡ್ಡ ನಗರ ಹತ್ತಿರವಿರುವುದು, ಟರ್ಕಿ ಮಾಂಸಕ್ಕಿರುವ ದೊಡ್ಡ ಗ್ರಾಹಕ ವರ್ಗವು ಸ್ವಸಹಾಯ ಗುಂಪಿನ ಮಹಿಳೆಯರ ಯಶಸ್ವಿ ಟರ್ಕಿ ಸಾಕಣೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಒಮ್ಮುಖ ಮಾದರಿಯು ಅಭಿವೃದ್ಧಿಯ ಅಡೆತಡೆಗಳನ್ನು ಮೀರಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿತು. ಟರ್ಕಿ ಸಾಕಣೆಯ ಯಶಸ್ಸನ್ನು ಸ್ಥಳೀಯ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿ ಮಾಡಲಾಗಿದೆ.

ಚೌಕ 1: ಗೃಹಿಣಿಯಿಂದ ಟರ್ಕಿ ಉದ್ಯಮಿಯಾಗಿ:

ಶ್ರೀಮತಿ ನಿಯತಿ ಮಂಡಲ್ ಅವರ ಸ್ಪೂರ್ತಿದಾಯಕ ಕಥೆ

41 ವರ್ಷದ ನಿಯತಿ ಮಂಡಲ್ ಗೃಹಿಣಿಯಾಗಿದ್ದು, ತನ್ನ ಮಗಳ ಶಿಕ್ಷಣಕ್ಕಾಗಿ ಹೆಚ್ಚುವರಿ ಹಣ ಸಂಪಾದನೆಗಾಗಿ ಹೆಣಗಾಡುತ್ತಿದ್ದಳು. ಆಕೆ ಸೋನಾರ್ಪುರ್ ಬ್ಲಾಕ್‌ನ ಜೈಕೃಷ್ಣಪುರ ಗ್ರಾಮದ ಪುಷ್ಪಾ ಗೋಷ್ಠಿ (ಸ್ವಸಹಾಯ ಗುಂಪು) ಸದಸ್ಯೆ. ಹೆಚ್ಚುವರಿ ಆದಾಯಕ್ಕಾಗಿ ಹಿತ್ತಲಿನಲ್ಲಿ ಸಣ್ಣ ಕೋಳಿ ಹಿಂಡನ್ನು ಸಾಕುತ್ತಿದ್ದಳು. ದುರದೃಷ್ಟವಶಾತ್‌, ಈ ಸಾಕಣೆಯಿಂದ ಹೆಚ್ಚಿನ ಆದಾಯ ಸಿಗುತ್ತಿರಲಿಲ್ಲ. ಕೆವಿಕೆಯಲ್ಲಿ ನಡೆಸಲಾದ ತರಬೇತಿಯಲ್ಲಿ ಟರ್ಕಿ ಸಾಕಾಣಿಕೆಯ ಬಗ್ಗೆ ಮೊದಲು ತಿಳಿದುಕೊಂಡಾಗ ಪರಿಸ್ಥಿತಿ ಸುಧಾರಿಸಿತು. ಟರ್ಕಿ ಸಾಕಾಣಿಕೆಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡ ಸಹ ರೈತರ ನಿರೂಪಣೆಗಳಿಂದ ಪ್ರೇರಿತಳಾಗಿ, ಆಕೆ ಕೂಡ ಟರ್ಕಿ ಸಾಕಾಣಿಕೆ ಗುಂಪುಗಳಿಗೆ ಸೇರಲು ಇಚ್ಛಿಸಿದಳು.

ಮೊದಲಿಗೆ ಆಕೆ ಕೆವಿಕೆಯಿಂದ 10 ಟರ್ಕಿ ಕೋಳಿಗಳನ್ನು ಪಡೆದಳು. ಕ್ರಮೇಣ ಅವುಗಳ ನಿರ್ವಹಣೆ, ಆಹಾರಕ್ಕಾಗಿ ಅಜೋಲ್ಲಾ ಕೃಷಿ, ಮರಿಗಳಿಗೆ ಲಸಿಕೆ ಹಾಕುವುದು ಮತ್ತು ದಾಖಲೆಗಳನ್ನು ನಿರ್ವಹಿಸುವುದರ ಕುರಿತಾದ ವೈಜ್ಞಾನಿಕ ಪರಿಕಲ್ಪನೆಗಳನ್ನು ಕಲಿತಳು. 6 ತಿಂಗಳ ನಂತರ, ತನ್ನ ಕೋಳಿ ಹಿಂಡನ್ನು ಸಂಪೂರ್ಣವಾಗಿ ಟರ್ಕಿ ಕೋಳಿಗಳಿಗೆ ಬದಲಾಯಿಸಿದಳು. ಕೋಳಿ ಸಾಕಣೆ, ಅವುಗಳಿಗೆ ಮೇವು ಹಾಕುವುದು, ಔಷಧಿಗಳನ್ನು ಕೊಡುವುದು ಎಲ್ಲವನ್ನೂ ಕಲಿತು ಅಳವಡಿಸಿಕೊಂಡಳು. ಕೊನೆಗೆ, ಅಜೋಲ್ಲಾ ಕೃಷಿ, ತರಕಾರಿ ತ್ಯಾಜ್ಯಗಳ ಮೇವು, ಕಸದ ಮರುಬಳಕೆ ಮತ್ತು ವೈಜ್ಞಾನಿಕ ಜೈವಿಕ ಸುರಕ್ಷತಾ ನಿರ್ವಹಣೆಯಂತಹ ಚತುರ ಮಧ್ಯಸ್ಥಿಕೆಗಳನ್ನು ಬಳಸಿಕೊಂಡು 50 ಟರ್ಕಿ ಕೋಳಿಗಳ ಹಿಂಡನ್ನು ಸ್ವಂತವಾಗಿ ನಿರ್ವಹಿಸಲು ಪ್ರಾರಂಭಿಸಿದರು. ತನ್ನ ಸಣ್ಣ ತರಕಾರಿ ತೋಟದಲ್ಲಿ ಟರ್ಕಿ ಗೊಬ್ಬರವನ್ನು ಬಳಸಿ ಉತ್ತಮ ಫಲಿತಾಂಶಗಳನ್ನು ಪಡೆದಳು. ಈ ಎಲ್ಲಾ ಪ್ರಯತ್ನಗಳಿಂದ, ಆಕೆ ಟರ್ಕಿ ಸಾಕಾಣಿಕೆ ಉದ್ಯಮದಿಂದ ವರ್ಷಕ್ಕೆ ಸರಾಸರಿ ರೂ. 60,000-75,000 ನಿವ್ವಳ ಆದಾಯವನ್ನು ಗಳಿಸಲು ಸಾಧ್ಯವಾಯಿತು. ಆಕೆಯ ಪ್ರಕಾರ, ಟರ್ಕಿ ಸಾಕಣೆಯು ಸಾಂಪ್ರದಾಯಿಕ ಹಿತ್ತಲಿನ ಕೋಳಿ ಸಾಕಣೆಗೆ ಉತ್ತಮ ಪರ್ಯಾಯವಾಗಿದೆ. ಏಕೆಂದರೆ ಟರ್ಕಿ ಸಾಕಣೆಯಲ್ಲಿ ರೋಗ ಹರಡುವಿಕೆ ಕಡಿಮೆ ಮತ್ತು ಖಚಿತವಾದ ಮಾರುಕಟ್ಟೆಯಿದೆ.

ಆಕೆ ನಿಧಾನವಾಗಿ ತನ್ನ ಹಳ್ಳಿಯ ಎಲ್ಲಾ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸಿದಳು. ಅವಳ ಯಶಸ್ಸನ್ನು ನೋಡಿ ಅವಳ ಸಮುದಾಯದ 50 ಮಹಿಳಾ ರೈತರು ಸೋನಾರ್ಪುರ್ ಬ್ಲಾಕ್‌ನಲ್ಲಿ ಟರ್ಕಿ ಸಾಕಣೆ ಗುಂಪನ್ನು ಸೇರಿದರು. ತನ್ನ ಹಳ್ಳಿಯಲ್ಲಿ, ಆಕೆ ಕ್ರಮೇಣ ಟರ್ಕಿ ಸಾಕಣೆಯ ಮೂಲಕ ಪರ್ಯಾಯ ಜೀವನೋಪಾಯವನ್ನು ಕಂಡುಕೊಳ್ಳಲು ಅನೇಕರಿಗೆ ಸ್ಫೂರ್ತಿಯ ಮಾದರಿಯಾದಳು. ಹಳ್ಳಿಯಲ್ಲಿನ ಪ್ರಸ್ತುತ ಕೃಷಿ ಪರಿಸ್ಥಿತಿ ಮೊದಲಿಗಿಂತ ವಿರುದ್ಧವಾಗಿದೆ. 2022 ರಲ್ಲಿ, ಆಕೆ ಕೃಷಿ ತಜ್ಞಳಾಗಿ ಟಿವಿ ಚಾನೆಲ್ ಚರ್ಚೆಯಲ್ಲಿ ಭಾಗವಹಿಸಿದಳು. 2023 ರಲ್ಲಿ, ಪಶ್ಚಿಮ ಬಂಗಾಳ ಸರ್ಕಾರದ ARD ಇಲಾಖೆಯಿಂದ ಆಕೆಗೆ ‘ರೈತ ಸಾಧಕಿ’ ಪ್ರಶಸ್ತಿ ನೀಡಲಾಯಿತು. ಇದು ಆಕೆಯ ಟರ್ಕಿ ಸಾಕಣೆ ವ್ಯವಹಾರದೊಂದಿಗೆ ಅನೇಕ ಸಹ ರೈತರ ಜೀವನೋಪಾಯವನ್ನು ಸುಧಾರಿಸಿತು. ಟರ್ಕಿ ಕೋಳಿ ಮರಿಗಳ ಸುಲಭ ಲಭ್ಯತೆಗಾಗಿ ಈಗ ತಮ್ಮ ಗುಂಪಿನ ಅಡಿಯಲ್ಲಿ ಇನ್ಕ್ಯುಬೇಟರ್ ಯಂತ್ರವನ್ನು ಸ್ಥಾಪಿಸಲು ಮುಂದಾಗಿದ್ದಾಳೆ. ಭವಿಷ್ಯದಲ್ಲಿ, ಗ್ರಾಮದಲ್ಲಿ ಸಣ್ಣ ಮಾಂಸ ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಲು ಸಹ ಆಕೆ ಯೋಜಿಸುತ್ತಿದ್ದಾಳೆ. ಹಿತ್ತಲಿನ ಕೋಳಿ ಸಾಕಾಣಿಕೆದಾರರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಶ್ರೀಮತಿ ನಿಯತಿ ಮಂಡಲ್ ಈಗ ತನ್ನ ಉತ್ಸಾಹ, ಸಾಮೂಹಿಕ ವಿಧಾನ ಮತ್ತು ಚತುರ ಮಧ್ಯಸ್ಥಿಕೆಗಳಿಂದ ಪ್ರಸಿದ್ಧ ಟರ್ಕಿ ಕೋಳಿ ಸಾಕಣೆದಾರಳಾಗಿದ್ದಾಳೆ.

 

ಇದಲ್ಲದೆ, ವೈಜ್ಞಾನಿಕ ಜ್ಞಾನ ಮತ್ತು ಮನೋಭಾವವನ್ನು ಬಳಸಿಕೊಂಡು ವೈವಿಧ್ಯೀಕರಣದ ಮೂಲಕ ಕೃಷಿ ಆದಾಯವನ್ನು ಉತ್ತಮಗೊಳಿಸಲು ಸ್ವಸಹಾಯ ಗುಂಪುಗಳು, ರೈತರ ಕ್ಲಬ್‌ಗಳು ಮತ್ತು FPO ಗಳಂತಹ ಹೆಚ್ಚಿನ ರೈತ ಸಂಸ್ಥೆಗಳನ್ನು ಈ ಪರ್ಯಾಯ ಲಾಭದಾಯಕ ಉದ್ಯಮದೊಂದಿಗೆ ಸಂಪರ್ಕಿಸಲು ಒತ್ತು ಕೊಡಬಹುದು.

 ಪರಾಮರ್ಶನಗಳು

  • Ghosh Sarbaswarup, Narayan Chandra Sahu, and Avijit Haldar. (2023) Status of Backyard Turkey(Meleagris Gallopavo) Production System in South 24 Parganas District of West Bengal,India. Journal of the Indian Society of Coastal Agricultural Research 41: 1 https://doi.org/10.54894/jiscar.41.1.2023.128933
  • Ghosh Sarbaswarup and Manidipta Saha. (2023).

Growth Performance and Meat Quality of Turkey birds Produced by the Small Holders in South 24 Parganas district of West Bengal India. Exploratory Animal & Medical Research 13: 2. pp184-190.

  • Toor, J.S. and Goel, R. (2022). Poultry Farming in India with Special Reference to Punjab: An Overview. Agricultural Science Digest. DOI:10.18805/ag.D-5540 (13) (PDF) Poultry Farming in India with Special Reference to Punjab: An Overview. Available from: https://www.researchgate.net/publication/362220105_Poultry_Farming_in_India_with_Special_Reference_to_Punjab_An_Overview[accessed Feb 10 2024].

Sarbaswarup Ghosh
Sasya Shyamala Krishi Vigyan Kendra
Ramakrishna Mission Vivekananda Educational &
Research Institute (RKMVERI)
Arapanch, Sonarpur, South 24 Parganas, West Bengal
E-mail: drsarba@rediffmail.com

 


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೧ ; ಮಾರ್ಚ್‌ ೨೦‌೨೪

Recent Posts

ತರಕಾರಿ ಆಧಾರಿತ ಕೃಷಿ ವ್ಯವಸ್ಥೆ ಸೂಕ್ತ ಬೆಳೆ ಸಂಯೋಜನೆಗಳ ಮೂಲಕ ಲಾಭ ಹೆಚ್ಚಳ

ತರಕಾರಿ ಆಧಾರಿತ ಕೃಷಿ ವ್ಯವಸ್ಥೆ ಸೂಕ್ತ ಬೆಳೆ ಸಂಯೋಜನೆಗಳ ಮೂಲಕ ಲಾಭ ಹೆಚ್ಚಳ

  ಬದಲಾಗುತ್ತಿರುವ ಹವಾಮಾನ ಪತ್ರಿಕೂಲ ಪರಿಸ್ಥಿತಿಗಳಿಂದಾಗಿ ಹೆಚ್ಚುತ್ತಿರುವ ಪ್ರವಾಹಗಳು ಮತ್ತು ನೀರಿನ ಸಮಸ್ಯೆಯ ನಡುವೆ ಪೂರ್ವ...

ಡಿಜಿಟಲೀಕರಣದ ಹಾದಿಯಲ್ಲಿ ತೆಂಗು ಕೃಷಿಯಲ್ಲಿ ಹೊಸ ಅನ್ವೇಷಣೆಗಳ ಒಳಗೊಳ್ಳುವಿಕೆ

ಡಿಜಿಟಲೀಕರಣದ ಹಾದಿಯಲ್ಲಿ ತೆಂಗು ಕೃಷಿಯಲ್ಲಿ ಹೊಸ ಅನ್ವೇಷಣೆಗಳ ಒಳಗೊಳ್ಳುವಿಕೆ

ಸಣ್ಣ ತೋಟಗಳು ರೈತರ ತಿಳುವಳಿಯೊಂದಿಗೆ ಇನ್ನಿತರ ಸಂಪನ್ಮೂಲಗಳಿಂದ ಪಡೆದ ಜ್ಞಾನವನ್ನು ಒಗ್ಗೂಡಿಸಿಕೊಂಡರೆ ಹೆಚ್ಚು ಸಮರ್ಥವಾಗುತ್ತವೆ....

YouTube
Instagram
WhatsApp