ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ


ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.


    ಬಸನಗೌಡರು ೪೦ ಎಕರೆ ಭೂಮಿಯನ್ನು ಹೊಂದಿದ್ದಾರೆ. ಇವರ ತೋಟದಲ್ಲಿ ಸುಮಾರು ೮೦ ಬಗೆಯ ಕೃಷಿ,ತೋಟಗಾರಿಕೆ,ಅರಣ್ಯ ಬೆಳೆಗಳು ಇವೆ. ಅಧಿಕಾರಿಗಳು ವಿಜ್ಞಾನಿಗಳೊಂದಿಗೆ ಚರ್ಚಿಸಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟದ ಉತ್ಪನ್ನದಿಂದ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಗಳಿಸುತ್ತಿದ್ದಾರೆ. ತಮ್ಮ ಪ್ರಯೋಗಾತ್ಮಕ ಜ್ಞಾನವನ್ನು ಆಸಕ್ತ ರೈತರೊಂದಿಗೆ ಹಂಚಿಕೊಳ್ಳುವ ಮೂಲಕ ಅವರೂ ತಮ್ಮಂತೆ ಪ್ರಗತಿ ಸಾಧಿಸಲು ದಾರಿದೀಪವಾಗಿರುವರು. ಗೌಡರ ಸಾಧನೆಯನ್ನು ಗುರುತಿಸಿದ ಕೃಷಿಇಲಾಖೆಯು ೨೦೨೩-೨೪ ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಇವರು ೨೦೨೪-೨೫ ನೇ ಸಾಲಿನ ಕೃಷಿ ಇಲಾಖೆಯ ಸಮಗ್ರ ಕೃಷಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.

    ಮೂರು ವರ್ಷಗಳ ಹಿಂದೆ ಹೊಸ ಪ್ರಯೋಗವಾಗಿ ಬನವಾಸಿಯಿಂದ ೪೦೦ ಅಡಿಕೆ ಸಸಿಗಳನ್ನು ತಂದು ಒಂದು ಎಕರೆಯಲ್ಲಿ ನಾಟಿ ಮಾಡಿದ್ದು, ಉತ್ತಮ ಬೆಳೆ ಬಂದಿದೆ. ಎರಡು ಎಕರೆ ಸೇವಂತಿಗೆ, ಒಂದು ಎಕರೆ ಬಾಳೆ, ಅರ್ಧ ಎಕರೆ ಕರಬೇವು ಬೆಳೆಸಿದ್ದಾರೆ. ಹೂವಿನ ಬೆಳೆಗಳಾದ ಗುಲಾಬಿ, ದುಂಡುಮಲ್ಲಿಗೆ, ಅಸ್ಟರ ಮತ್ತು ಕಾಯಿಪಲ್ಲೆ ಬೆಳೆಗಳಾದ ಬೀಟ್ರೂಟ್‌, ಎಲೆಕೋಸು, ಹೂಕೋಸು, ಸುವರ್ಣ ಗಡ್ಡೆ, ಬದನೆ, ಟೊಮೆಟೊ ಬೆಳೆಗಳನ್ನು ತಲಾ ಅರ್ಧ ಎಕರೆಯಲ್ಲಿ ಬೆಳೆದಿರುವರು. ಕಬ್ಬು, ಗೋದಿ, ಜೋಳ, ಕಡಲೆ, ಹೆಸರು, ಕುಸುಬಿ, ಶೇಂಗಾ, ಗೋವಿನಜೋಳ ಮುಂತಾದ ಕೃಷಿ ಬೆಳೆಗಳನ್ನು ಬೆಳೆಯುತ್ತಾರೆ. ಅರಣ್ಯ ಗಿಡಗಳಾದ ಜಟ್ರೋಪಾ, ಇಚಲ, ಬೇವು, ಬಿದಿರು, ಹೊಂಗೆ, ತೇಗ, ಶ್ರೀಗಂಧ, ಮಳೆಗಿಡ ಮುಂತಾದವುಗಳು ಗೌಡರ ತೋಟದಲ್ಲಿ ಕಂಗೊಳಿಸುತ್ತಿವೆ. ಅಲುವೇರಾ, ಜಪಾನಿ ಪುದಿನಾ, ತುಳಸಿ, ಅಂಟವಾಳಕಾಯಿ, ಅಮೃತ ಬಳ್ಳಿ, ಜೇಕಿನ ಗೆಡ್ಡಿ ಮುಂತಾದ ಔಷಧಿ ಸಸ್ಯಗಳಿವೆ. ಇವುಗಳಿಂದ ತಯಾರಿಸಿದ ಮನೆಮದ್ದನ್ನು ಅವಶ್ಯವಿರುವ ನೆರೆಹೊರೆಯವರು ಕೇಳಿದಾಗ ಉಚಿತವಾಗಿ ನೀಡುವರು.

    ಹುಣಸೆ, ತೆಂಗು, ಸೀತಾಫಲ, ರಾಮಫಲ, ನೀರಲ, ನೆಲ್ಲಿ, ಪೇರು, ಸಪೋಟ, ಚರ‍್ರಿ, ಲಿಂಬೆ, ನುಗ್ಗೆ, ಉತ್ತತ್ತಿ ಮುಂತಾದ ಗಿಡಗಳು ತೋಟವನ್ನು ಶ್ರೀಮಂತಗೊಳಿಸಿವೆ. ಎರಡು ಆಕಳು, ಎರಡು ಎತ್ತುಗಳು, ಹತ್ತು ಆಡುಗಳು, ಹದಿನೈದು ಕೋಳಿಗಳನ್ನು ಸಾಕಿರುವರು. ವಿವಿಧ ಬಗೆಯ ತರಕಾರಿಗಳು ಮತ್ತು ಹಣ್ಣುಗಳು, ಹಾಲು, ಮೊಟ್ಟೆ ಕುಟುಂಬದ ಸದಸ್ಯರಿಗೆ ಪೌಷ್ಠಿಕ ಆಹಾರವಾದರೆ, ನಾಲ್ಕು ಎರೆಹುಳು ತೊಟ್ಟಿಗಳಿಂದ ತಯಾರಾದ ಎರೆಹುಳುಗೊಬ್ಬರ ಮಣ್ಣಿನ ಫಲವತ್ತತೆ ಮತ್ತು ನೀರು ಇಂಗುವ ಸಾಮರ್ಥವನ್ನು ಹೆಚ್ಚಿಸಲು ಸಹಾಯವಾಗಿದೆ. ಸಗಣಿ ಮತ್ತು ತೋಟದ  ಕೃಷಿ ತ್ಯಾಜ್ಯ ವಸ್ತುಗಳನ್ನು ಎರೆಹುಳು ತೊಟ್ಟಿಗಳಿಗೆ ಹಾಕುವರು. ಮುಂದಿನ ದಿನಗಳಲ್ಲಿ ಆಕಳು ಮತ್ತು ಆಡುಗಳ ಸಂಖ್ಯೆ ಹೆಚ್ಚಿಸುವ ಗುರಿ ಇದೆ ಎಂದು ತಮ್ಮ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಸಗಣಿ ಸ್ಲರಿಯ ಗ್ಯಾಸ್‌ ಒಲೆ ಇದೆ.

    ತೋಟದ ನಿರ್ವಹಣೆಗೆ ಸಹಾಯಕವಾದ ಟ್ಯಾಕ್ಟರ, ಬಿತ್ತುವ ಕೂರಿಗೆ, ನೇಗಿಲ, ರೋಟಾವೇಟರ, ಎಡೆಕುಂಟೆ, ಸ್ಪ್ರೇಯರ್, ರೇನಗನ್, ತುಂತುರು ನೀರಾವರಿ ಘಟಕ, ಹನಿ ನೀರಾವರಿ ಘಟಕ ಮುಂತಾದ ಸಾಮಗ್ರಿಗಳು ಇವೆ. ಗೌಡರ ತೋಟದಲ್ಲಿ ಒಂದು ತೆರೆದ ಬಾವಿ ಇದೆ, ಮಳೆಗಾಲದಲ್ಲಿ ನೀರು ವ್ಯರ್ಥ ಮಾಡದೆ ಭಾವಿಗೆ ವೈಜ್ಞಾನಿಕವಾಗಿ ತುಂಬುತ್ತಿರುವದರಿಂದ  ಸಮೀಪದಲ್ಲಿರುವ ಕೊಳವೆ ಬಾವಿಯಲ್ಲಿ ನಿರಂತರ ನೀರು ಹೆಚ್ಚಲು ಕಾರಣವಾಗಿದೆ. ಮಣ್ಣು, ನೀರು ಸಂರಕ್ಷಣೆಗಾಗಿ ಕ್ಷೇತ್ರ ಬದು, ಒಳಗಟ್ಟಿ , ಬದುಗಳ ಮೇಲೆ ಮೇವಿನ ಹುಲ್ಲು ನಾಟಿ ಮುಂತಾದ ತಾಂತ್ರಿಕತೆಗಳನ್ನು ಅಳವಡಿಸಿರುವರು. ಎಂಟು ವರ್ಷಗಳ ಹಿಂದೆ ಕೃಷಿ ಇಲಾಖೆಯ ಕೃಷಿಭಾಗ್ಯ ಯೋಜನೆಯಡಿ ಲಕ್ಕುಂಡಿಯಲ್ಲಿರುವ ಅವರ ತೋಟದಲ್ಲಿ ೨೧ ಮೀಟರ ಅಳತೆಯ ಕೃಷಿ ಹೊಂಡ ನಿರ್ಮಿಸಿರುವರು.

    ಕರ್ನಾಟಕ ಸರಕಾರದ ವತಿಯಿಂದ ಏರ್ಪಡಿಸಿದ ರೈತರ ಪ್ರವಾಸದಲ್ಲಿ ಚೀನಾ ದೇಶ, ದೆಹಲಿ, ಮಾಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿಯ ರೈತರೊಡನೆ ಚರ್ಚಿಸಿ, ಹೊಸ ತಾಂತ್ರಿಕತೆ, ಹೊಸ ತಳಿ ಬಗ್ಗೆ ತಿಳಿದುಕೊಡು ಬಂದು, ತಮ್ಮ ತೋಟದ ವಾತಾವರಣಕ್ಕೆ ಸೂಕ್ತವೆನಿಸಿದ್ದನ್ನು ಪ್ರಯೋಗ ಮಾಡಿ, ಸುತ್ತಲಿನ ರೈತರಿಗೆ ಅಚ್ಚರಿ ಮೂಡಿಸಿರುವರು. ಅನೇಕ ಕಡೆ ಪ್ರವಾಸ ಮಾಡಿದ ಪರಿಣಾಮ ಮತ್ತು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವಿರುವ ಕಾರಣ ಸುಮಾರು ೮೦ ಬಗೆಯ ಸಸ್ಯ/ಗಿಡ/ಮರಗಳನ್ನು ಒಂದೇ ತೋಟದಲ್ಲಿ ಕಾಣಬಹುದು.

    ಒಟ್ಟಾರೆ ಬಸನಗೌಡರು ವ್ಯವಸಾಯದ ಬಗ್ಗೆ ಸದಾ ಚಿಂತನಶೀಲರಾಗಿದ್ದು, ಹೊಸದನ್ನು ಸಾಧಿಸಬೇಕೆಂಬ ಛಲದವರು. ವ್ಯವಸಾಯ ಸ್ವಾವಲಂಬಿ, ಸಂತೃಪ್ತ, ಸ್ವಂತ ಉದ್ಯಮ. ಆದ್ದರಿಂದ ಯುವ ರೈತರು ಹಿಂಜರಿಯದೆ ಸಮಗ್ರ ಕೃಷಿ ಮಾಡಿ ಯಶಸ್ಸುಗೊಳಿಸಬೇಕೆಂದು ಹೇಳುವರು. ತೋಟದ ಮತ್ತು ಕುಟುಂಬದ ಖರ್ಚು ಕಳೆದು ಅಂದಾಜು ನಾಲ್ಕರಿಂದ ಆರು ಲಕ್ಷ ನಿವ್ವಳ ಆದಾಯ ದೊರೆಯುವುದು ಎಂದು ಹೇಳುವರು. ಹೊಸದೊಂದು ಕಲಿಯಬೇಕೆನ್ನುವ ಉತ್ಸಾಹಿ ರೈತರಿಗೆ ಅವರ ತೋಟ ಸದಾ ಸ್ವಾಗತಿಸುತ್ತದೆ. ಬಸನಗೌಡರ ಮೊಬೈಲ ಸಂಖ್ಯೆ ೯೮೪೫೮೭೬೧೪೩.

 

Hema Moraba

Recent Posts

ನಗರಗಳ ಡೈರಿಗಳನ್ನು ಇನ್ನಷ್ಟು ಸುಸ್ಥಿರವಾಗಿಸುವುದು

ಕಲ್ಲಿದ್ದಲು, ತೈಲ ಮತ್ತು ಅನಿಲಗಳಂತಹ ನವೀಕರಿಸಲಾಗದ ಶಕ್ತಿ ಮೂಲಗಳ ಮೇಲೆ ಮಾನವಕುಲದ ಅವಲಂಬನೆಯು ವಿಶ್ವಾದ್ಯಂತ ಹೆಚ್ಚುತ್ತಿದೆ. ಸುಲಭವಾಗಿ...

ಕೇರಳದ ನಗರಗಳಲ್ಲಿ ಮನೆ ಕೈತೋಟದ ಚಳುವಳಿ ಸಾಮಾಜಿಕ ಮಾಧ್ಯಮಗಳ ಪಾತ್ರ

ಕೇರಳದ ನಗರಗಳಲ್ಲಿ ಮನೆ ಕೈತೋಟದ ಚಳುವಳಿ ಸಾಮಾಜಿಕ ಮಾಧ್ಯಮಗಳ ಪಾತ್ರ

ನಗರಗಳಲ್ಲಿ ಮನೆ ಕೈತೋಟಗಳು, ಖಾಸಗಿ ವಸತಿ ಸ್ಥಳಗಳಿಗೆ ಸೀಮಿತವಾಗಿದೆ. ಇದನ್ನು ವಿಸ್ತರಿಸಿದರೆ ನಗರಕ್ಕೆ ಆಹಾರ ಪೂರೈಸುವ ಸಾಮರ್ಥ್ಯವನ್ನು...

ಸಾವಯವ ರೀತಿಯಲ್ಲಿ ಸ್ಥಿತಿಸ್ಥಾಪಕತ್ವ ನಿರ್ಮಾಣ

ಸಾವಯವ ರೀತಿಯಲ್ಲಿ ಸ್ಥಿತಿಸ್ಥಾಪಕತ್ವ ನಿರ್ಮಾಣ

ಸ್ವಲ್ಪ ನೆರವು ಹಾಗೂ ಮಾರ್ಗದರ್ಶನ ನೀಡಿದರೆ ರೈತರು ಹವಾಮಾನ ಹಾಗೂ ಮಾರುಕಟ್ಟೆಯ ಬದಲಾವಣೆಗಳಿಗೆ ಸ್ಥಿತಿಸ್ಥಾಪಕತ್ವ ಗುಣವನ್ನು ಬೆಳೆಸಿಕೊಂಡು...

YouTube
Instagram
WhatsApp