ಕೃಷಿ ಜ್ಞಾನ ವಾಹನ ಉಪಕ್ರಮವು ರಾಜ್ಯದಲ್ಲಿ ಲಭ್ಯವಿರುವ ವಿಸ್ತರಣಾ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಬಿಹಾರವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಗಳು ಮತ್ತು ತಜ್ಞರ ಮಾರ್ಗದರ್ಶನವನ್ನು ನೇರವಾಗಿ ಒದಗಿಸುವ ಮೂಲಕ, ಇದು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಸಜ್ಜಾಗಿದೆ.
ಬಹಳ ದೂರದಲ್ಲಿರುವ ರೈತರು ಎದುರಿಸುವ ಕೃಷಿ ತಂತ್ರಜ್ಞಾನಗಳಿಗೆ ಇರುವ ಸೀಮಿತ ಪ್ರವೇಶದ ಸವಾಲನ್ನು ನಿಭಾಯಿಸಲು ಬಿಹಾರದಲ್ಲಿ ಕೃಷಿ ಜ್ಞಾನ ವಾಹನ (ರೈತ ಜ್ಞಾನ ಸಾಧನ) ಉಪಕ್ರಮವನ್ನು ಪ್ರಾರಂಭಿಸಲಾಯಿತು. ಈ ಉಪಕ್ರಮವು ತಜ್ಞರ ಸಲಹೆ ಮತ್ತು ಇತ್ತೀಚಿನ ಕೃಷಿ ತಂತ್ರಗಳನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅರಿವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಶೈಕ್ಷಣಿಕ ಉಪಕರಣವನ್ನು (ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಕೃಷಿ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮಲ್ಟಿಮೀಡಿಯಾ ಡಿಜಿಟಲ್ ಪರದೆ) ಹೊಂದಿದ ಮೊಬೈಲ್ ಅನ್ನು ಸಾಧನವಾಗಿ ಬಳಸಿಕೊಂಡು, ಈ ಕಾರ್ಯಕ್ರಮವು ಲಾಜಿಸ್ಟಿಕ್ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸುತ್ತದೆ. ಇದು ಅತ್ಯಂತ ದೂರದೂರುಗಳಲ್ಲಿರುವ ರೈತರು ಸಹ ವಿಶ್ವವಿದ್ಯಾಲಯದ ತಂತ್ರಜ್ಞಾನಗಳಿಂದ ಪ್ರಯೋಜನ ಪಡೆಯಬಹುದು ಎನ್ನುವುದನ್ನು ಖಚಿತಪಡಿಸುತ್ತದೆ.
ಉದ್ದೇಶಗಳು
ಕಾರ್ಯಕ್ರಮದ ಪ್ರಮುಖ ಉದ್ದೇಶಗಳು:
- ವಿಶ್ವವಿದ್ಯಾನಿಲಯದ ಇತ್ತೀಚಿನ ಕೃಷಿ ಮಾಹಿತಿ ಮತ್ತು ಹೊಸ ತಂತ್ರಜ್ಞಾನಗಳನ್ನು ರೈತರೊಂದಿಗೆ ಹಂಚಿಕೊಳ್ಳುವುದು.
- ಮಣ್ಣು ಪರೀಕ್ಷಾ ಸೇವೆಗಳು, ಬೆಳೆ ರೋಗದ ರೋಗನಿರ್ಣಯ, ಪಶುಸಂಗೋಪನೆ ಸಂಬಂಧಿತ ಸಮಸ್ಯೆಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಸೌಲಭ್ಯಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಕೃಷಿ ಪದ್ಧತಿಗಳ ಸುಧಾರಣೆ.
- ವಿವಿಧ ಜಿಲ್ಲೆಗಳಲ್ಲಿ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಕೃಷಿ ತಂತ್ರಗಳ ಬಗ್ಗೆ ಅರಿವು ಹೆಚ್ಚಿಸುವುದು.
ಕೃಷಿ ಜ್ಞಾನ ವಾಹನ
ಕೃಷಿ ಜ್ಞಾನ ವಾಹನ (ಕೆಜಿವಿ) ರೈತರಿಗೆ ಸಮಗ್ರ ಸೇವೆಗಳನ್ನು ನೀಡುತ್ತದೆ, ಇದನ್ನು ಚೌಕ 1 ರಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. ಕೃಷಿ ಜ್ಞಾನ ವಾಹನವು ಕೃಷಿ ವಿಸ್ತರಣಾ ಚಟುವಟಿಕೆಗಳನ್ನು ಬೆಂಬಲಿಸಲು ವಿವಿಧ ಉಪಕರಣಗಳು ಮತ್ತು ಸಾಮಗ್ರಿಗಳೊಂದಿಗೆ ಸಜ್ಜುಗೊಂಡಿದೆ. ಇದು ಪೋಷಕಾಂಶಗಳ ಕೊರತೆಯನ್ನು ಪತ್ತೆಹಚ್ಚಲು ಮತ್ತು ರಸಗೊಬ್ಬರ ಯೋಜನೆಗಳನ್ನು ಸರಿಹೊಂದಿಸಲು ಪರೀಕ್ಷಾ ಕಿಟ್ ಮತ್ತು ಕೀಟ ಗುರುತಿಸುವಿಕೆ, ಬೆಳೆ ರೋಗದ ರೋಗನಿರ್ಣಯ, ಬೀಜದ ಗುಣಮಟ್ಟದ ಮೌಲ್ಯಮಾಪನ ಮತ್ತು ಮಣ್ಣಿನ ವಿಶ್ಲೇಷಣೆಗಾಗಿ ಡಿಜಿಟಲ್ ಸ್ಟೀರಿಯೊ ಮೈಕ್ರೋಸ್ಕೋಪ್ ಅನ್ನು ಒಳಗೊಂಡಿದೆ. ಡಿಜಿಟಲ್ ಕಾಂಪೌಂಡ್ ಮೈಕ್ರೋಸ್ಕೋಪ್ ವೈಜ್ಞಾನಿಕ ಅಧ್ಯಯನಗಳು, ರೋಗಗಳ ರೋಗನಿರ್ಣಯ, ಬೀಜ ಸಂತಾನೋತ್ಪತ್ತಿ ಮತ್ತು ಕೃಷಿ ನಿಯಂತ್ರಣಕ್ಕಾಗಿ ರಾಸಾಯನಿಕಗಳು ಮತ್ತು ತಳಿಗಳ ಅಧ್ಯಯನವನ್ನು ಬೆಂಬಲಿಸುತ್ತದೆ. ವಿವಿಧ ವಸ್ತುಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ರೆಫ್ರಿಜರೇಟರ್ ಲಭ್ಯವಿದೆ. BOD ಇನ್ಕ್ಯುಬೇಟರ್ ಸೂಕ್ಷ್ಮ ಜೀವವಿಜ್ಞಾನ ಅಧ್ಯಯನಗಳು ಮತ್ತು ಲಸಿಕಾ ಕಾರ್ಯಕ್ರಮಗಳಲ್ಲಿ ಸಹಾಯ ಮಾಡುತ್ತದೆ. ಎಲೆಕ್ಟ್ರಾನಿಕ್ ಬ್ಯಾಲೆನ್ಸ್ ಮಾದರಿಗಳ ನಿಖರವಾದ ಅಳತೆಯನ್ನು ಖಚಿತಪಡಿಸುತ್ತದೆ. ಸಾರ್ವಜನಿಕ ಪ್ರಕಟಣೆಗಳನ್ನು ವೈರ್‌ಲೆಸ್ ಮೈಕ್ ಮತ್ತು ಆಂಪ್ಲಿಫಯರ್ ಇರುವ ಸ್ಪೀಕರ್ ಹೊಂದಿರುವ ವ್ಯವಸ್ಥೆಯಿಂದ ನಡೆಸಲಾಗುತ್ತದೆ. ಮಡಿಸಬಹುದಾದ ಟ್ರಾವಿಸ್ ಅನ್ನು ಜಾನುವಾರುಗಳ ಕೃತಕ ಗರ್ಭಧಾರಣೆ (AI) ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ. ಹೆಮಟೊ-ವಿಶ್ಲೇಷಕವು ರಕ್ತಕಣಗಳ ಸಂಪೂರ್ಣ ಎಣಿಕೆಯನ್ನು ನೀಡುತ್ತದೆ. ರಕ್ತಹೀನತೆ ಮತ್ತು ಸೋಂಕುಗಳನ್ನು ಪತ್ತೆ ಮಾಡುತ್ತದೆ. ಮಲ್ಟಿ-ಪ್ಯಾರಾಮೀಟರ್ ಮಾನಿಟರ್ ನೈಜ-ಸಮಯದ ಮೇಲ್ವಿಚಾರಣೆ ಮತ್ತು ವಿಷಮಸ್ಥಿತಿಯ ಆರೈಕೆಯನ್ನು ಬೆಂಬಲಿಸುತ್ತದೆ. ಅಂತರ್ಜಾಲ ಸಂಪರ್ಕ ಮತ್ತು ಕಂಪ್ಯೂಟರ್ ರೈತರಿಗೆ ಮಾಹಿತಿ ಹಾಗೂ ಸಂವಾದಾತ್ಮಕ ಸಂಪನ್ಮೂಲಗಳಿಗೆ ಅಗತ್ಯ ಪ್ರವೇಶವನ್ನು ಒದಗಿಸುತ್ತದೆ.
ವಿಧಾನಗಳು
ಬಿಹಾರ ರಾಜ್ಯದಲ್ಲಿ ಒಟ್ಟು ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ: ಸಬೋರ್‌ನ ಬಿಹಾರ ಕೃಷಿ ವಿಶ್ವವಿದ್ಯಾಲಯ, ಪಾಟ್ನಾದ ಬಿಹಾರ ಪಶು ವಿಜ್ಞಾನ ವಿಶ್ವವಿದ್ಯಾಲಯ, ಸಮಸ್ತಿಪುರದ ಪುಸಾದಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಮತ್ತು ಪಾಟ್ನಾದ ಬಿಹಾರ ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (BAMETI)ಗಳಲ್ಲಿ ಇದು ನಿಯೋಜಿತವಾಗಿದೆ. ಇವು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಸಿದ್ಧಪಡಿಸಲಾದ ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ಜಿಲ್ಲೆಗಳ ವಿವಿಧ ಹಳ್ಳಿಗಳಲ್ಲಿ ಸಂಚರಿಸುತ್ತದೆ. ಇದಕ್ಕೆ ಸಂಬಂಧಿಸಿದ YouTube ಚಾನೆಲ್‌ನಲ್ಲಿ (www.youtube.com/bausabour) ಲಭ್ಯವಿರುವ ಹಿಂದಿ ಭಾಷೆಯಲ್ಲಿನ 200 ಕ್ಕೂ ಹೆಚ್ಚು ವೀಡಿಯೊಗಳ ಸಂಗ್ರಹದಿಂದ ಮಲ್ಟಿಮೀಡಿಯಾ ವೀಡಿಯೊಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಆಸಕ್ತ ರೈತರಿಗೆ ವಿವರವಾದ ಮಾಹಿತಿಯನ್ನು ಒದಗಿಸುವ ತಾಂತ್ರಿಕ ತಜ್ಞರ ಬೆಂಬಲದೊಂದಿಗೆ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಕೃಷಿ ಜ್ಞಾನ ವಾಹನ ಹಳ್ಳಿಗೆ ಬರುವ ಒಂದು ವಾರಕ್ಕೂ ಮೊದಲು, ಯುವ ವೃತ್ತಿಪರರು ಮತ್ತು ಇತರ ಪಾಲುದಾರರು ರೈತರ ಅಗತ್ಯತೆಗಳ ಬಗ್ಗೆ ಮೂಲ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಇದರ ಆಧಾರದ ಮೇಲೆ, ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ದ ಇಬ್ಬರು ತಜ್ಞರನ್ನು ರೈತರ ಪ್ರಶ್ನೆಗಳನ್ನು ಪರಿಹರಿಸಲು ನಿಯೋಜಿಸಲಾಗುತ್ತದೆ. ಕಿಸಾನ್ ಜ್ಞಾನ ವಾಹನದಲ್ಲಿ ಕನಿಷ್ಠ ನಾಲ್ಕು ತಜ್ಞರು ಯಾವಾಗಲೂ ಇರುತ್ತಾರೆ: ಕೆವಿಕೆಯಿಂದ ಇಬ್ಬರು ತಜ್ಞರು, ಎಟಿಎಂಎಯಿಂದ ಒಬ್ಬರು ಕೃಷಿ ತಂತ್ರಜ್ಞಾನ ವ್ಯವಸ್ಥಾಪಕ ಅಥವಾ ಬ್ಲಾಕ್ ತಂತ್ರಜ್ಞಾನ ವ್ಯವಸ್ಥಾಪಕರು, ಮತ್ತು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವ ವೃತ್ತಿಪರರು ಇರುತ್ತಾರೆ. ಹೀಗಾಗಿ, ಕಿಸಾನ್ ಜ್ಞಾನ ವಾಹನವು ಕೃಷಿಯ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಸೂಕ್ತವಾದ ಸಲಹೆ ಮತ್ತು ಪರಿಹಾರಗಳನ್ನು ಒದಗಿಸುವ ಮೂಲಕ ವೈವಿಧ್ಯಮಯ ಮತ್ತು ಪ್ರದೇಶ-ನಿರ್ದಿಷ್ಟ ಕೃಷಿ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಕ್ಷೇತ್ರಾನುಭವ – ಕೆವಿಕೆ ಮುಂಗೇರ್ ಪ್ರಕರಣ
ಮೇ 2023 ರಲ್ಲಿ, ವಿಸ್ತರಣಾ ಶಿಕ್ಷಣ ನಿರ್ದೇಶನಾಲಯ, ಬಿಎಯು, ಸಬೋರ್, ಮುಂಗೇರ್‌ನ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ದಲ್ಲಿ 20 ಮೇ 2024 ರಂದು ಜಿಲ್ಲೆಯಾದ್ಯಂತ ವಿವಿಧ ಬ್ಲಾಕ್‌ಗಳು ಮತ್ತು ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಎಚ್ಚರಿಕೆಯಿಂದ ಯೋಜಿಸಲಾದ ಪ್ರವಾಸ ಯೋಜನೆಯೊಂದಿಗೆ ಕೆಜಿವಿ ಪ್ರಯಾಣವನ್ನು ಆಯೋಜಿಸಿತು. ಟೆಟಿಯಾಬಾಂಬರ್ (ಮೇ 20) ಒಳಗೊಂಡಿರುವ ಸ್ಥಳಗಳು
ಸಂಗ್ರಾಮಪುರ (ಮೇ 21), ತಾರಾಪುರ ಮತ್ತು ಅಸರಗಂಜ್ (22 ನೇ ಮೇ), ಬಾರಿಯಾರ್‌ಪುರ (ಮೇ 23), ಸದರ್ (ಮೇ 24), ಮತ್ತು ಜಮಾಲ್‌ಪುರ ಮತ್ತು ಧಾರಾರಾ (ಮೇ 25).
ಚೌಕ 1: ವೈಶಿಷ್ಟ್ಯಗಳು ಮತ್ತು ಸೇವೆಗಳು
| ಉತ್ತಮ ವಿಸ್ತರಣಾ ಪದ್ಧತಿ | ವಿವರಣೆ | ಲಾಭಗಳು |
| ಮೊಬೈಲ್ ವಿಸ್ತರಣಾ ಸೇವೆಗಳು | ಕಿಸಾನ್ ಜ್ಞಾನ ವಾಹನವು ರೈತರಿಗೆ ಮೊಬೈಲ್ ವಿಸ್ತರಣಾ ಸೇವೆಗಳನ್ನು ಒದಗಿಸುತ್ತದೆ. ತಜ್ಞರ ಸಲಹೆಯನ್ನು ನೇರವಾಗಿ ಅವರ ಹಳ್ಳಿಗಳಿಗೆ ತಲುಪಿಸುತ್ತದೆ. | ದೂರದ ಪ್ರದೇಶಗಳಲ್ಲಿನ ರೈತರು ಆಧುನಿಕ ಕೃಷಿ ಜ್ಞಾನ ಮತ್ತು ತಂತ್ರಜ್ಞಾನಗಳಿಗೆ ನೇರ ಪ್ರವೇಶವನ್ನು ಪಡೆಯುತ್ತಾರೆ. |
| ಮಣ್ಣು ಪರಿಕ್ಷಾ ಸೇವೆಗಳು | ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳ ಅವಶ್ಯಕತೆಗಳನ್ನು ನಿರ್ಧರಿಸಲು ಸ್ಥಳದಲ್ಲೇ ಮಣ್ಣಿನ ವಿಶ್ಲೇಷಣೆ. | ರೈತರು ಆ ಕೂಡಲೇ ತಕ್ಷಣ ರಸಗೊಬ್ಬರ ಶಿಫಾರಸುಗಳನ್ನು ಪಡೆಯುತ್ತಾರೆ. ಇದು ಮಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಉತ್ತಮ ಬೆಳೆ ಇಳುವರಿಯನ್ನು ನೀಡುತ್ತದೆ. |
| ಬೆಳೆ-ನಿರ್ದಿಷ್ಟ ಶಿಫಾರಸುಗಳು | ಧಾನ್ಯಗಳು ಮತ್ತು ತೋಟಗಾರಿಕೆಯಂತಹ ನಿರ್ದಿಷ್ಟ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತವಾದ ಸಲಹೆಯನ್ನು ನೀಡಲಾಗುತ್ತದೆ. | ಬೆಳೆ ನಿರ್ವಹಣೆಯನ್ನು ಸುಧಾರಿಸಲು, ರೋಗಗಳು ಮತ್ತು ಕೀಟಗಳಿಂದ ಆಗುವ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. |
| ಪಶು ಆರೋಗ್ಯ ಸೇವೆಗಳು | . ರೋಗ ಗುರುತಿಸುವಿಕೆ ಸೇರಿದಂತೆ ಪ್ರಾಣಿಗಳ ಆರೋಗ್ಯ ಸಮಸ್ಯೆಗಳಿಗೆ ರೋಗನಿರ್ಣಯ ಸೇವೆಗಳು. | ತ್ವರಿತ ರೋಗನಿರ್ಣಯ ಮತ್ತು ಚಿಕಿತ್ಸೆಯು ಜಾನುವಾರು ನಷ್ಟವನ್ನು ಕಡಿಮೆ ಮಾಡಲು ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. |
| ಆಧುನಿಕ ತಂತ್ರಗಳ ಪ್ರಾತ್ಯಕ್ಷಿಕೆಗಳು | ಆಧುನಿಕ ಕೃಷಿ ವಿಧಾನಗಳ ಕುರಿತಾದ ವೀಡಿಯೊಗಳನ್ನು ರೈತರಿಗೆ ಎಲ್ಇಡಿ ಪರದೆಯ ಮೂಲಕ ತೋರಿಸಲಾಗುತ್ತದೆ. | ರೈತರು ಹೊಸ ತಂತ್ರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು, ಅಳವಡಿಸಿಕೊಳ್ಳಬಹುದು, ಉತ್ಪಾದಕತೆಯನ್ನು ಹೆಚ್ಚಿಸಬಹುದು. |
| ಕೃಷಿ ಒಳಸುರಿಯುವಿಕೆಗಳ ವಿತರಣೆ | ರೈತರಿಗೆ ಬೀಜಗಳು, ಸಾವಯವ ಗೊಬ್ಬರ, ಜೈವಿಕ ಗೊಬ್ಬರಗಳು ಮತ್ತು ಇತರ ಸಾಮಗ್ರಿಗಳ ವಿತರಣೆ. | ರೈತರಿಗೆ ಅಗತ್ಯ ಒಳಸುರಿಯುವಿಕೆಗಳು ಲಭ್ಯವಾಗುತ್ತವೆ. ಇದರಿಂದಾಗಿ ಸುಧಾರಿತ ಪದ್ಧತಿಗಳನ್ನು ಕೂಡಲೇ ಅನ್ವಯಿಸಲು ಅವಕಾಶ ಸಿಗುತ್ತದೆ. |
| ದ್ವಿಮುಖ ಸಂವಾದ ಮತ್ತು ಪ್ರತಿಕ್ರಿಯೆ | ರೈತರು ವಿಸ್ತರಣಾ ತಜ್ಞರನ್ನು ಪ್ರಶ್ನೆ ಕೇಳಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. | ರೈತರ ನಿರ್ದಿಷ್ಟ ಅಗತ್ಯಗಳಿಗೆ ಹೊಂದಿಕೊಳ್ಳುವ, ಸಲಹೆಯ ಪ್ರಸ್ತುತತೆಯನ್ನು ಸುಧಾರಿಸುವ ಸ್ಪಂದಿಸುವ ವಿಸ್ತರಣಾ ಸೇವೆಯನ್ನು ರೂಪಿಸುತ್ತದೆ. |
| ಸುಧಾರಿತ ರೋಗನಿರ್ಣಯ ತಂತ್ರಜ್ಞಾನದ ಬಳಕೆ | ಸಸ್ಯ ಮತ್ತು ಪ್ರಾಣಿಗಳ ಸಮಸ್ಯೆಗಳನ್ನು ಪತ್ತೆಹಚ್ಚಲು ಸೂಕ್ಷ್ಮದರ್ಶಕಗಳು ಮತ್ತು ವಿಶ್ಲೇಷಕಗಳಂತಹ ಸುಧಾರಿತ ಸಾಧನಗಳನ್ನು ಬಳಸಲಾಗುತ್ತದೆ. | ನಿಖರವಾದ ಮತ್ತು ವೇಗದ ರೋಗನಿರ್ಣಯವು ಉತ್ತಮ ರೋಗ ನಿರ್ವಹಣೆ ಮತ್ತು ಸುಧಾರಿತ ಕೃಷಿ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ. |
ಈ ಪ್ರವರ್ತಕ ಉಪಕ್ರಮವನ್ನು ಮುಂಗೇರ್‌ನ ಕೆವಿಕೆಯ ಇಬ್ಬರು ಅನುಭವಿ ತಜ್ಞರು ಮುನ್ನಡೆಸುತ್ತಿದ್ದಾರೆ: ವಿಸ್ತರಣಾ ಶಿಕ್ಷಣದಲ್ಲಿ ವಿಷಯ ತಜ್ಞರಾದ ಡಾ. ಬಿ.ಡಿ. ಸಿಂಗ್ ಮತ್ತು ಗೃಹ ವಿಜ್ಞಾನದಲ್ಲಿ ವಿಷಯ ತಜ್ಞರಾದ ಡಾ. ಸುಜಾತ ಕುಮಾರಿ. ಈ ವಿಜ್ಞಾನಿಗಳು ರೈತರೊಂದಿಗೆ ನೇರವಾಗಿ ತೊಡಗಿಸಿಕೊಂಡು, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ಹೊಸ ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸಿದರು. ಈ ಇಬ್ಬರು ವಿಜ್ಞಾನಿಗಳಲ್ಲದೆ, ರಾಜ್ಯ ಕೃಷಿ ಇಲಾಖೆಯ ವಿಸ್ತರಣಾ ಕಾರ್ಯಕರ್ತರು ಸಹ ಉಪಸ್ಥಿತರಿದ್ದರು.
ಲಖನ್‌ಪುರ ಗ್ರಾಮದಲ್ಲಿನ ಕೆಜಿವಿ ಅನುಭವಗಳ ವಿವರ ಹೀಗಿದೆ. ಮೇ 22 ರಂದು, ಕೃಷಿ ಜ್ಞಾನ ವಾಹನವು ತಾರಾಪುರ ಬ್ಲಾಕ್‌ನ ಲಖನ್‌ಪುರ ಗ್ರಾಮಕ್ಕೆ ಆಗಮಿಸಿತು. ವಾಹನವನ್ನು ಗ್ರಾಮದ ಚೌಪಾಲ್ ಬಳಿ ನಿಲ್ಲಿಸಲಾಗಿತ್ತು. ಇದು ದೊಡ್ಡ ಅರಳಿ ಮರದ ಬಳಿಯ ಸಭೆ ನಡೆವ ಸ್ಥಳವಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ರೈತರು ಕೆಜಿವಿ ಬಳಿ ಜಮಾಯಿಸಿದರು. ಸುಮಾರು 84 ರೈತರು ಕೃಷಿ ಜ್ಞಾನ ವಾಹನಕ್ಕೆ ಭೇಟಿ ನೀಡಿ ಚೌಪಾಲ್‌ನಲ್ಲಿ ಭಾಗವಹಿಸಿದರು. ವ್ಯಾನ್ ಒಳಗೆ, ಒಂದು ದೊಡ್ಡ ಪರದೆಯನ್ನು ಸ್ಥಾಪಿಸಲಾಯಿತು. ಸಮಗ್ರ ಕೃಷಿ ವ್ಯವಸ್ಥೆ (IFS) – ಬೆಳೆ ಉತ್ಪಾದನೆ, ಜಾನುವಾರು ನಿರ್ವಹಣೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಉತ್ಪಾದಕತೆ ಹಾಗೂ ಲಾಭದಾಯಕತೆಯನ್ನು ಹೆಚ್ಚಿಸುವಂತಹ ಸುಸ್ಥಿರ ಕೃಷಿ ಸಮಗ್ರ ವಿಧಾನದ ಕುರಿತು ಮಾಹಿತಿಯುಕ್ತ ವೀಡಿಯೊವನ್ನು ಪ್ರದರ್ಶಿಸಲಾಯಿತು.
ರೈತರು ವೀಡಿಯೊವನ್ನು ಗಮನವಿಟ್ಟು ನೋಡಿದರು. ಹಲವರು ಅಂತಹ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಮೊದಲ ಬಾರಿಗೆ ನೋಡಿದರು. ದೃಶ್ಯ ಪ್ರಸ್ತುತಿಯು ಸಂಕೀರ್ಣ ವಿಚಾರಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿತು. IFS ನ ಪ್ರಾಯೋಗಿಕ ಪ್ರಸ್ತುತತೆಯು ತಮ್ಮ ಸ್ವಂತ ಭೂಮಿಯಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ಅರ್ಥಮಾಡಿಸಿತು. ಲಭ್ಯವಿರುವ ಸಂಪನ್ಮೂಲಗಳ ಬಳಕೆಯನ್ನು ಗರಿಷ್ಠಗೊಳಿಸಲು ಮತ್ತು ಪರಿಸರದ ಪರಿಣಾಮವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ವಿಧಾನಗಳ ಸರಳತೆ ಮತ್ತು ಪರಿಣಾಮಕಾರಿತ್ವದಿಂದ ರೈತರು ವಿಶೇಷವಾಗಿ ಪ್ರಭಾವಿತರಾದರು.
ವಿಡಿಯೋ ಮುಗಿಯುತ್ತಿದ್ದಂತೆ, ಡಾ. ಬಿ.ಡಿ. ಸಿಂಗ್ ಮುಂದೆ ಬಂದು, ಜನಸಮೂಹವನ್ನು ಉದ್ದೇಶಿಸಿ ಅವರಿಗೆ ಅರ್ಥವಾಗುವಂತೆ ಅವರದೇ ಭಾಷೆಯಲ್ಲಿ ಮಾತಾಡಿದರು. ಬೆಳೆ ಆಯ್ಕೆ, ಜಾನುವಾರು ಮತ್ತು ಸಂಪನ್ಮೂಲ ನಿರ್ವಹಣೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ಐಎಫ್‌ಎಸ್ ಮಾದರಿಯನ್ನು ಅವರ ನಿರ್ದಿಷ್ಟ ಅಗತ್ಯಗಳಿಗೆ ಹೇಗೆ ಹೊಂದಿಕೊಳ್ಳಬಹುದು ಎಂಬುದನ್ನು ವಿವರಿಸಿದರು. ನೈರ್ಮಲ್ಯ ಸಂಬಂಧಿತ ಸಮಸ್ಯೆಗಳು, ಕೃಷಿ ಶ್ರಮ ಇತ್ಯಾದಿಗಳಂತಹ ಗೃಹ ವಿಜ್ಞಾನಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಡಾ. ಸುಜಾತಾ ಕುಮಾರಿ ಅವರು ಮಾತಾಡಿದರು. ಅವರು ಆಸಕ್ತ ರೈತರಿಗೆ “ಐಎಫ್‌ಎಸ್” ಕುರಿತು ಮುದ್ರಿತ ಫೋಲ್ಡರ್‌ಗಳನ್ನು ಸಹ ವಿತರಿಸಿದರು.
ಪ್ರಶ್ನೋತ್ತರ ಅವಧಿಯೊಂದಿಗೆ ಈ ಸಂವಾದ ಕೊನೆಗೊಳ್ಳಲಿಲ್ಲ. ರೈತರು ತಮ್ಮ ಅನುಭವಗಳು ಮತ್ತು ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಯಿತು. ಆ ಮೂಲಕ ಸಂವಾದವನ್ನು ಬೆಳೆಸಲಾಯಿತು. ವಿಜ್ಞಾನಿಗಳು ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದರು. ಕೆವಿಕೆಯ ಭವಿಷ್ಯದ ಮಧ್ಯಸ್ಥಿಕೆಗಳು ಇನ್ನಷ್ಟು ಸ್ಪಷ್ಟ ಗುರಿಯೊಂದಿಗೆ ಪರಿಣಾಮಕಾರಿಯಾಗುತ್ತವೆ ಎಂದು ಖಚಿತಪಡಿಸಿಕೊಂಡರು.
ಸೂರ್ಯ ಮುಳುಗುತ್ತಿದ್ದಂತೆ, ಕೃಷಿ ಜ್ಞಾನ ವಾಹನವು ತನ್ನ ಮುಂದಿನ ಗಮ್ಯಸ್ಥಾನಕ್ಕೆ ತೆರಳಲು ಸಿದ್ಧವಾಯಿತು. ಲಖನ್‌ಪುರ ಗ್ರಾಮದ ರೈತರು ತಾವು ಕಲಿತ ಹೊಸ ತಂತ್ರಗಳನ್ನು ಬಳಸಲು ಉತ್ಸುಕರಾಗಿ ಮತ್ತು ಸಿದ್ಧರಾಗಿ ಚೌಪಲ್‌ನಿಂದ ಹೊರಟರು. ವಿಜ್ಞಾನಿಗಳು ಮತ್ತು ಕೆವಿಕೆಗಳ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುವಾಗ ಅವರ ಉತ್ಸಾಹವು ಸ್ಪಷ್ಟವಾಗಿತ್ತು.
ಸವಾಲುಗಳು
ಕಿಸಾನ್ ಜ್ಞಾನ ವಾಹನ ಉಪಕ್ರಮವು ಹಲವಾರು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ಕಳಪೆ ರಸ್ತೆ ಪರಿಸ್ಥಿತಿಗಳಿಂದಾಗಿ ದೂರದ ಪ್ರದೇಶಗಳನ್ನು ತಲುಪುವಲ್ಲಿನ ತೊಂದರೆ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಇದು ಸಕಾಲಿಕ ಸೇವಾ ವಿತರಣೆಗೆ ಅಡ್ಡಿಯಾಗಿದೆ. ಇದರೊಂದಿಗೆ, ವಿವಿಧ ಪ್ರದೇಶಗಳಲ್ಲಿನ ವೈವಿಧ್ಯಮಯ ಕೃಷಿ ಪದ್ಧತಿಗಳು ಪ್ರಮಾಣೀಕೃತ ವಿಧಾನವನ್ನು ಕಾರ್ಯಗತಗೊಳಿಸಲು ಕಷ್ಟಕರವಾಗಿಸುತ್ತದೆ. ಹೆಚ್ಚು ಸ್ಥಳೀಯವಾದ ಅಲ್ಲಿಗೆ ಹೊಂದಿಕೊಳ್ಳುವ ಪರಿಹಾರಗಳ ಅಗತ್ಯವಿರುತ್ತದೆ. ಭಾಷಾ ವ್ಯತ್ಯಾಸಗಳು ಮತ್ತು ರೈತರಲ್ಲಿ ಸಾಕ್ಷರತೆಯ ಮಟ್ಟಗಳಲ್ಲಿನ ವ್ಯತ್ಯಾಸಗಳು ಸಂವಹನಕ್ಕೆ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಇದರಿಂದಾಗಿ ಮುಂದುವರೆದ ಕೃಷಿ ಜ್ಞಾನವನ್ನು ತಿಳಿಸಲು ಕಷ್ಟಕರವಾಗಿಸುತ್ತದೆ.
ವೈವಿಧ್ಯಮಯ ಕೃಷಿ ಪದ್ಧತಿಗಳ ಸವಾಲನ್ನು ಜ್ಞಾನ ಪ್ರಸರಣಕ್ಕೆ ಹೊಂದಿಕೊಳ್ಳುವ, ಮಾಡ್ಯುಲರ್ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹರಿಸಲಾಯಿತು. ಇದರರ್ಥ ಒಂದೇ ರೀತಿಯ ಪರಿಹಾರಕ್ಕೆ ಬದಲಾಗಿ, ಈ ಉಪಕ್ರಮವು ವಿವಿಧ ಸಂದರ್ಭಗಳಿಗೆ ಹೊಂದಿಕೊಳ್ಳುವಂತಹ ವಿಷಯವನ್ನು ವಿನ್ಯಾಸಗೊಳಿಸಿದೆ. ಇದನ್ನು ಮಾಡಲು, ಈ ಉಪಕ್ರಮವು ಪ್ರದೇಶ-ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಗ್ರಂಥಾಲಯಗಳನ್ನು ಸ್ಥಾಪಿಸುತ್ತಿದೆ. ಈ ಗ್ರಂಥಾಲಯಗಳು ವಿವಿಧ ಪ್ರದೇಶಗಳ ವಿಶಿಷ್ಟ ಪರಿಸ್ಥಿತಿಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ ಸ್ಥಳೀಯವಾದ ನಿರ್ದಿಷ್ಟ ಬೆಳೆಗಳು, ಅಲ್ಲಿನಸ ಹವಾಮಾನ ಅಂಶಗಳು ಮತ್ತು ಚಾಲ್ತಿಯಲ್ಲಿರುವ ಕೃಷಿ ತಂತ್ರಗಳ ವಿವರಗಳನ್ನು ಒಳಗೊಂಡಿರುತ್ತದೆ. ಈ ಸಂಪನ್ಮೂಲಗಳನ್ನು ಬಳಸಿಕೊಂಡು ತಂಡಗಳು ತಮ್ಮ ಬೋಧನೆಯನ್ನು ಅಲ್ಲಿಗೆ ತಕ್ಕಂತೆ ಹೊಂದಿಸಿಕೊಳ್ಳಲು ಅನುಮತಿಸುವ ಮೂಲಕ, ಅವರು ಸ್ಥಳೀಯ ರೈತರಿಗೆ ಸಂಬಂಧಿತ ಮಾಹಿತಿಯನ್ನು ಒದಗಿಸಬಹುದು.
ಈ ಹೊಂದಾಣಿಕೆಯು ಒದಗಿಸಲಾದ ಮಾಹಿತಿಯು ವಿವಿಧ ಪ್ರದೇಶಗಳಲ್ಲಿನ ರೈತರಿಗೆ ಪ್ರಸ್ತುತವಾಗಿದ್ದು ಕೂಡಲೇ ಅಳವಡಿಸಿಕೊಳ್ಳುವಂತೆ ಇರುವುದನ್ನು ಖಚಿತಪಡಿಸಿತು. ಭಾಷಾ ಅಡೆತಡೆಗಳು ಮತ್ತು ವಿವಿಧ ಸಾಕ್ಷರತಾ ಮಟ್ಟಗಳನ್ನು ನಿವಾರಿಸಲು, ಕಾರ್ಯಕ್ರಮವು ಬಹುಮುಖ ಸಂವಹನ ತಂತ್ರವನ್ನು ಅಳವಡಿಸಿಕೊಂಡಿತು. ಇದರಲ್ಲಿ ಪ್ರಾದೇಶಿಕ ಉಪಭಾಷೆಗಳಲ್ಲಿ ಸಂವಹನ ನಡೆಸಬಲ್ಲ ಸ್ಥಳೀಯ ಕೃಷಿ ತಜ್ಞರ (ಕೃಷಿ ತಂತ್ರಜ್ಞಾನ ವ್ಯವಸ್ಥಾಪಕರು, ಬ್ಲಾಕ್ ತಂತ್ರಜ್ಞಾನ ವ್ಯವಸ್ಥಾಪಕರು ATMA ಯೋಜನೆಯಡಿ) ಸಹಾಯವನ್ನು ಪಡೆಯಲಾಯಿತು.
ಪ್ರಯೋಜನ ಮತ್ತು ಪರಿಣಾಮ
ಬಿಹಾರ ಕೃಷಿ ವಿಶ್ವವಿದ್ಯಾಲಯದ ಕೃಷಿ ಜ್ಞಾನ ವಾಹನ, ಸಬೋರ್, 2024 ರ ಮೇ ನಿಂದ ಆಗಸ್ಟ್ ವರೆಗೆ, 12 ಜಿಲ್ಲೆಗಳ 52 ಬ್ಲಾಕ್‌ಗಳಲ್ಲಿ 87 ಕ್ಕೂ ಹೆಚ್ಚು ಸ್ಥಳಗಳಿಗೆ ಪ್ರಯಾಣಿಸಿದೆ. 6,712 ಕ್ಕೂ ಹೆಚ್ಚು ರೈತರೊಂದಿಗೆ (ಪ್ರಶ್ನೋತ್ತರ ಅಧಿವೇಶನದಲ್ಲಿ ಭಾಗವಹಿಸಿದವರು) ತೊಡಗಿಸಿಕೊಂಡಿದೆ.
ಕೃಷಿ ಜ್ಞಾನ ವಾಹನ ಉಪಕ್ರಮವು ಬಿಹಾರದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯದೊಂದಿಗೆ ರಾಜ್ಯದಲ್ಲಿ ಲಭ್ಯವಿರುವ ವಿಸ್ತರಣಾ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಗಳು ಮತ್ತು ತಜ್ಞರ ಮಾರ್ಗದರ್ಶನಕ್ಕೆ ನೇರ ಪ್ರವೇಶವನ್ನು ಒದಗಿಸುವ ಮೂಲಕ, ಇದು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಆದರೂ, ಕೇವಲ ನಾಲ್ಕು ವಾಹನಗಳಿಂದ ಇಂತಹ ಉನ್ನತ ಮಹತ್ವಾಕಾಂಕ್ಷೆಗಳನ್ನು ಸಾಧಿಸುವುದು ಸವಾಲೆಂದು ನಾವು ಒಪ್ಪಿಕೊಳ್ಳುತ್ತೇವೆ.
ಸುಸ್ಥಿರತೆ ಮತ್ತು ವಿಸ್ತರಣೆ
ಕೃಷಿ ಜ್ಞಾನ ವಾಹನ ಉಪಕ್ರಮವು ದೀರ್ಘಾವಧಿಯ ಸುಸ್ಥಿರತೆ ಮತ್ತು ಬೆಳವಣಿಗೆ ಸಾಧಿಸಲು, ಸ್ಥಿರವಾದ ಹಣಕಾಸು ಮತ್ತು ದೃಢವಾದ ಸಾಂಸ್ಥಿಕ ಬೆಂಬಲವು ನಿರ್ಣಾಯಕವಾಗಿದೆ. ಬಿಎಯುನ ಉಪಕುಲಪತಿಗಳು ಪ್ರಸ್ತಾಪಿಸಿದಂತೆ, ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲಿ ಮೀಸಲಾದ ಮೊಬೈಲ್ ಕೃಷಿ ವ್ಯಾನ್‌ಗಳೊಂದಿಗೆ ಈ ಉಪಕ್ರಮವನ್ನು ವಿಸ್ತರಿಸಲು ಸರ್ಕಾರಿ ಸಂಸ್ಥೆಗಳು, ಕೃಷಿ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳ ನಡುವೆ ಸಂಘಟಿತ ಪ್ರಯತ್ನಗಳು ಬೇಕಾಗುತ್ತವೆ. ಈ ಸಹಯೋಗವು ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳು ನಿಧಿಯನ್ನು ಪಡೆಯಲು ಮತ್ತು ಬೆಂಬಲ ನೀತಿಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಒಳಗೊಂಡಿರುತ್ತದೆ. ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳೊಂದಿಗೆ ಪಾಲುದಾರಿಕೆಯು ಅಗತ್ಯವಾದ ತಾಂತ್ರಿಕ ಪರಿಣತಿ ಮತ್ತು ತರಬೇತಿಯನ್ನು ಒದಗಿಸಬಹುದು. ಸಮುದಾಯದ ನಾಯಕರು ಮತ್ತು ರೈತರನ್ನು ತೊಡಗಿಸಿಕೊಳ್ಳುವುದರಿಂದ ಈ ಉಪಕ್ರಮವು ಸ್ಥಳೀಯ ಅಗತ್ಯಗಳನ್ನು ಪೂರೈಸುತ್ತದೆ. ತಳಮಟ್ಟದ ಬೆಂಬಲವನ್ನು ಪಡೆಯುತ್ತದೆ ಎಂದು ಖಚಿತಪಡಿಸುತ್ತದೆ. ಇದರೊಂದಿಗೆ, ಪಾಲುದಾರರ ನಡುವೆ (ಖಾಸಗಿ ಪಾಲುದಾರರು, NGOಗಳು) ಸಂಪನ್ಮೂಲ ಹಂಚಿಕೆಯನ್ನು ಗರಿಷ್ಠಗೊಳಿಸುವುದರೊಂದಿಗೆ ಅನಗತ್ಯವಾಗಿ ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ. ಪ್ರತಿಕ್ರಿಯೆ ಕಾರ್ಯವಿಧಾನಗಳು ಕಾರ್ಯಕ್ರಮಕ್ಕೆ ನೈಜ-ಸಮಯದ ಹೊಂದಾಣಿಕೆಗಳನ್ನು ಅನುಮತಿಸುತ್ತದೆ.
ಕಲಿತ ಪಾಠಗಳು ಮತ್ತು ಉಪಸಂಹಾರ
ಕೃಷಿ ಜ್ಞಾನ ವಾಹನ ಉಪಕ್ರಮವು ಕೃಷಿ ಅಭಿವೃದ್ಧಿಯಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಮಧ್ಯಸ್ಥಿಕೆಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಆದರೆ ಕೇಂದ್ರೀಕೃತ ವಿಧಾನದ ಸವಾಲುಗಳ ಬಗ್ಗೆ ಕೆಲವು ಪಾಠಗಳನ್ನು ಕೂಡ ತೆರೆದಿಟ್ಟಿತು. ರೈತರಿಗೆ ನೇರವಾಗಿ ಪರಿಣಿತ ಜ್ಞಾನ ಮತ್ತು ಸಂಪನ್ಮೂಲಗಳನ್ನು ತಲುಪಿಸುವ ಮೂಲಕ ಕೃಷಿ ಪದ್ಧತಿಗಳನ್ನು ಆಧುನೀಕರಿಸುವ ಗುರಿಯನ್ನು ಇದು ಹೊಂದಿದ್ದರೂ, ಈ ಉಪಕ್ರಮವು ಪ್ರಾದೇಶಿಕ ಅಗತ್ಯಗಳನ್ನು ಪೂರೈಸಲು ಮತ್ತು ಸ್ಥಳೀಯ ಸಮುದಾಯಗಳಲ್ಲಿ ವಿಶ್ವಾಸವನ್ನು ಬೆಳೆಸುವಂತಿರಬೇಕು. ಉತ್ಪಾದಕತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಮತ್ತು ಪಶುಸಂಗೋಪನೆಯನ್ನು ಸುಧಾರಿಸಲು, ರೈತರು ಮತ್ತು ಸ್ಥಳೀಯ ಪಾಲುದಾರರ ಪ್ರತಿಕ್ರಿಯೆಯನ್ನು ಒಳಗೊಳ್ಳುವುದು ಅತ್ಯಗತ್ಯ. ಈ ಕಾರ್ಯಕ್ರಮವು ಹೊಸತಾಗಿರುವುದಲ್ಲದೆ ತಾನು ಸೇವೆ ಸಲ್ಲಿಸುವ ಸಮುದಾಯಗಳ ವಾಸ್ತವವನ್ನು ಅರಿತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಡೆಯದಾಗಿ, ಬಿಹಾರದಲ್ಲಿ ರೈತರನ್ನು ಸಬಲೀಕರಣಗೊಳಿಸುವುದು, ಆಹಾರ ಭದ್ರತೆಯನ್ನು ಸುಧಾರಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಈ ಉಪಕ್ರಮವು ಗುರಿಯಾಗಿದೆ. ರಾಜ್ಯದ ಕೃಷಿ ವಲಯವು ಸುಸ್ಥಿರ ಭವಿಷ್ಯವನ್ನು ಸಾಧಿಸಲು, ತನ್ನ ಸಾಂಪ್ರದಾಯಿಕತೆಯನ್ನು ಮೀರಿ ವಿಕಸನಗೊಳ್ಳಬೇಕು ಮತ್ತು ಹೆಚ್ಚು ವಿಕೇಂದ್ರೀಕೃತ, ಅಂತರ್ಗತ ಮಾದರಿಯನ್ನು ಅಳವಡಿಸಿಕೊಳ್ಳಬೇಕು.
Aditya Sinha
Assistant Professor, Department of Extension
Education
Bihar Agricultural University, Sabour, Bihar
E-mail: inc.aditya@gmail.comD.R. Singh
Vice Chancellor,
Bihar Agricultural University, Sabour, BiharR.K. Sohane
Director Extension Education
Bihar Agricultural University, Sabour, Bihar
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೬; ಸಂಚಿಕೆ : ೪ ; ಡಿಸಂಬರ್ ೨೦೨೪



