ಭಾರತದಲ್ಲಿ ಕೋವಿಡ್ ೧೯ರ ಲಾಕ್‌ಡೌನ್ ಸಮಯದಲ್ಲಿ ಅಳವಡಿಸಿಕೊಳ್ಳಲಾದ ಆಹಾರ ವ್ಯವಸ್ಥೆ
ಜೊತೆಗೆ ಕೃಷಿಯು ಆರೋಗ್ಯ ಮತ್ತು ಶಿಕ್ಷಣದಷ್ಟೇ ಮುಖ್ಯವಾದದ್ದು. ಭಾರತ ಮತ್ತಿತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ೨೦೩೦ರ ವೇಳೆಗೆ ತಮ್ಮ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಇದು ಅತ್ಯಗತ್ಯವಾಗಿದೆ. ಕೊರೊನ ವೈರಸ್‌ನಂತಹ ಸಾಂಕ್ರಾಮಿಕ ಪಿಡುಗು ತಂದೊಡ್ಡುವ ಆಘಾತಗಳಿಂದ ಕೃಷಿಯನ್ನು ಹೇಗೆ ಕಾಪಾಡುವುದು ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿದೆ.
ಮೊಬೈಲ್ ಫೋನುಗಳ ಮೂಲಕ ಕೃಷಿ ವಿಸ್ತರಣೆ
ಕೃಷಿ ವಲಯವು ತಂತ್ರಜ್ಞಾನವನ್ನು ದಾಟಿಸಬಲ್ಲ ವ್ಯಕ್ತಿಗಳ ಸಮೂಹವನ್ನು ಅವಲಂಭಿಸಿದೆ. ಈ ಪರಿಣಿತರನ್ನು ಕ್ಷೇತ್ರ ವಿಸ್ತರಣಾ ಕಾರ್ಯಕರ್ತರು ಇಲ್ಲವೇ ಕೃಷಿ ವಿಸ್ತರಣಾ ಅಧಿಕಾರಿಗಳು ಎಂದು ಕರೆಯಲಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಇವರನ್ನು ಕೃಷಿ ಇಲಾಖೆಯು ನಿಯುಕ್ತಗೊಳಿಸುತ್ತದೆ. ಇತ್ತೀಚೆಗೆ ಸರ್ಕಾರದ ವಿಸ್ತರಣಾ ವ್ಯವಸ್ಥೆಯು ತಲುಪಿರದಂತಹ ಸ್ಥಳಗಳಿಗೆ ಅಭಿವೃದ್ಧಿ ಸಂಸ್ಥೆಗಳೇ ವಿಸ್ತರಣಾ ಅಧಿಕಾರಿಗಳನ್ನು ನಿಯೋಜಿಸುತ್ತಿದೆ.
ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕೆನ್ನುವ ಕ್ರಮವು ಕೃಷಿ ವಿಸ್ತರಣಾ ವ್ಯವಸ್ಥೆಗಳ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಿತು. ವಿಸ್ತರಣಾ ಕಾರ್ಯಕರ್ತರು ಹಳ್ಳಿಗಳಲ್ಲಿ ಓಡಾಡುವುದು, ರೈತರಿಗೆ ತರಬೇತಿ ನೀಡುವುದು ಇಲ್ಲವೇ ಸಾಮರ್ಥ್ಯ ವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸುವುದು ಕಷ್ಟವಾಯಿತು. ಅದೇನೇ ಇರಲಿ ಭವಿಷ್ಯದಲ್ಲಿ ಈ ಚಟುವಟಿಕೆಗಳನ್ನು ಮೊಬೈಲ್ ಫೋನುಗಳ ಮೂಲಕ ಮಾಡಬಹುದಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಮೊಬೈಲ್ ಫೋನುಗಳ ಬಳಕೆ ಮತ್ತು ನೆಟ್‌ವರ್ಕ್ ಪ್ರೋತ್ಸಾಹದಾಯಕವಾಗಿದೆ. ಭಾರತದಲ್ಲಿ ಕೆಲ ಸಮಯದಿಂದ ಇ- ವಿಸ್ತರಣೆಯು ಕೂಡ ನಡೆಯುತ್ತಿದೆ. ಈ ಪ್ರಯತ್ನಗಳು ಜಾರಿಯಲ್ಲಿದ್ದು ಮಾಹಿತಿ ಪ್ರಸಾರ ಮತ್ತು ತರಬೇತಿ ನಡೆಸಲು ಯಾವುದೇ ಒಂದು ವಿಧಾನಕ್ಕೆ ಅಂಟಿಕೊಂಡಿಲ್ಲ.
ಪ್ರಸ್ತುತ ಸನ್ನಿವೇಶದಲ್ಲಿ ರೈತರು ಫೋನುಗಳು ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ಮಾತ್ರ ಅರ್ಥಪೂರ್ಣ ಸಲಹೆಗಳನ್ನು ಪಡೆಯಬಹುದಾಗಿದೆ.
ಗುತ್ತಿಗೆ ಕೆಲಸಗಾರರು, ಯಂತ್ರೋಪಕರಣಗಳು ಮತ್ತಿತರ ಸೇವೆಗಳನ್ನು ಪಡೆಯುವ ನೂತನ ಮಾದರಿಗಳು
ತೋಟದಿಂದ ತಟ್ಟೆಯವರೆಗಿನ ಆಹಾರ ಪೂರೈಕೆ ಸರಪಳಿಯು ಉತ್ಪಾದಕರು, ಗ್ರಾಹಕರು, ಕೃಷಿ ಮತ್ತು ಮೀನು ಸಾಕಣೆ ಒಳಸುರಿಯುವಿಕೆ, ಸಂಸ್ಕರಣದಾರರು, ಸಾರಿಗೆಯವರು ಮತ್ತಿತರರನ್ನು ಒಳಗೊಂಡಿರುತ್ತದೆ. ಭಾರತದಂತಹ ದೇಶಗಳಲ್ಲಿ ೮೦% ರೈತರು ಸಣ್ಣಹಿಡುವಳಿದಾರರು (ಎರಡು ಎಕರೆಗಿಂತ ಕಡಿಮೆ ಭೂಮಿಯಿರುವವರು) ಅವರಿಗೆ ಅಗತ್ಯವಾದ ಒಳಸುರಿಯುವಿಕೆಗಳನ್ನು (ಬೀಜ, ಗೊಬ್ಬರ, ರಾಸಾಯನಿಕಗಳು) ಪೂರೈಸುವವರು ಮತ್ತು ಉತ್ಪಾದನೆ ಸಾಗಿಸುವವರು ಸಂಬಂಧ ಪರಸ್ಪರ ಹೆಣೆದುಕೊಂಡಿರುತ್ತದೆ.
ಆಹಾರ ಪೂರೈಕೆ ಸರಪಳಿಯು ಬಂಡವಾಳವನ್ನು ಬೇಡುತ್ತದೆ. ಇದು ವಿವಿಧ ಹಂತಗಳಲ್ಲಿ ಸ್ವಲ್ಪಮಟ್ಟಿಗೆ ಯಂತ್ರೀಕರಣವನ್ನು ಬೇಡುತ್ತದೆ. ಇದರಲ್ಲಿನ ಬಹುತೇಕ ಚಟುವಟಿಕೆಗಳು ಕೈಯಿಂದಲೇ ಮಾಡುವಂತಹದ್ದಾಗಿದ್ದು ಕೂಲಿಕಾರರನ್ನು ಬೇಡುತ್ತದೆ. ಹಾಗಾಗಿ ಸ್ಥಳೀಯ ಕೆಲಸಗಾರರನ್ನು ಅವಲಂಭಿಸಿದೆ.
ಅನೌಪಚಾರಿಕವಾಗಿ ಕಾರ್ಮಿಕ ಮಾರುಕಟ್ಟೆಗಳು ಕುಸಿದಿದ್ದರಿಂದ ರೈತರಿಗೆ ಕೂಲಿಯಾಳುಗಳು ಸಿಗದೆ ಕೊಯ್ಲು ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಸುದ್ದಿ ಹಲವೆಡೆ ಕೇಳಿಬಂದಿದ್ದರಲ್ಲಿ ಆಶ್ಚರ್ಯವಿಲ್ಲ. ದೊಡ್ಡ ಮಟ್ಟದಲ್ಲಿ ಕೆಲಸಗಾರರು ತಮ್ಮ ಊರುಗಳಿಗೆ ಹಿಂದಿರುಗಿದ್ದ ಮತ್ತು ಸ್ಥಳೀಯ ಕೆಲಸಗಾರರ ಮೇಲೂ ನಿರ್ಬಂಧಗಳನ್ನು ಹೇರಿದ್ದು ಈ ಸಮಸ್ಯೆಗೆ ಕಾರಣವಾಯಿತು.
ಕಳೆದ ಕೆಲವು ವರ್ಷಗಳಲ್ಲಿ ಊಬರ್ ಮಾದರಿಯಲ್ಲಿ ಯಂತ್ರೋಪಕರಣಗಳ ಸೇವೆ ಒದಗಿಸುವುದು ಕಂಡು ಬರುತ್ತಿದೆ. ಈ ಹೊಸ ಉದ್ದಿಮೆಗಳು ಬೇಡಿಕೆಯನ್ನು ಸೃಷ್ಟಿಸಲು ಡಿಜಿಟಲ್ ವೇದಿಕೆಯನ್ನು ಬಳಸುತ್ತಿದ್ದು ಯಂತ್ರೋಪಕರಣಗಳನ್ನು ಕೈಗೆಟಕುವ ದರದಲ್ಲಿ ರೈತರಿಗೆ ಒದಗಿಸಲು ಅವುಗಳ ಸಾಗಣೆ ಮಾಡುತ್ತಿವೆ. ಕೀಟನಾಶಕ ಸಿಂಪಡಣೆಗೆ ಡ್ರೋನ್‌ಗಳನ್ನು ಬಳಸುವಂತಹ ಕೆಲ ಪ್ರಯತ್ನಗಳು ಕೂಡ ನಡೆದಿವೆ.
ಈ ಮಾದರಿಗಳಿನ್ನೂ ಸಣ್ಣ ರೈತರ ದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಂಡಿಲ್ಲ. ಆದರೆ ಅನೌಪಚಾರಿಕ ಕಾರ್ಮಿಕ ಮಾರುಕಟ್ಟೆಗಳು ಕಡಿಮೆಯಾದಂತೆ ರೈತರು ಊಬರ್ ಮಾದರಿಯ ಯಂತ್ರೋಪಕರಣಗಳತ್ತ ಒಲವು ತೋರಬಹುದು.
ಸರ್ಕಾರಗಳು, ಅಭಿವೃದ್ಧಿ ವಲಯ ಕಾರ್ಮಿಕ ಮಾರುಕಟ್ಟೆಯನ್ನು ಕ್ರಿಯಾಶೀಲಗೊಳಿಸಲು ಡಿಜಿಟಲ್ ವೇದಿಕೆಯನ್ನು ಬಳಸಬಹುದು. ಉದಾಹರಣೆಗೆ ಡಿಜಿಟಲ್ ವೇದಿಕೆಯು ರೈತರು ಮತ್ತು ಕಾರ್ಮಿಕರ ನಡುವೆ ಸೇತುವೆಯಾಗಬಹುದು. ದೈಹಿಕ ಸಂಪರ್ಕ ಮತ್ತು ಗುಂಪುಗೂಡುವಿಕೆ ಕಡಿಮೆಯಾಗುವುದರಿಂದ ಅನೌಪಚಾರಿಕ ಕಾರ್ಮಿಕ ಮಾರುಕಟ್ಟೆಯಲ್ಲಿ ವೈರಸ್ ಹರಡುವಿಕೆ ತಗ್ಗಬಹುದು.
ಫೋಟೊ : ಪ್ರಶಾಂತ್ ವಿಶ್ವನಾಥನ್ / CCAFS
ಕಮಲ ದೇವಿ ಅಂಜಂತಳ್ಳಿಯಲ್ಲಿನ ತನ್ನ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಲೇ ಮೊಬೈಲಿನ ಮೂಲಕ ಹವಾಮಾನ ಹಾಗೂ ಅದಕ್ಕೆ ತಕ್ಕ ಬೆಳೆ ಪದ್ಧತಿಗಳ ಕುರಿತು ಸಂದೇಶಗಳನ್ನು ಕೇಳುತ್ತಿರುವುದು.
ಫೋಟೋ : © 2011 CIAT / ನೀಲ್ ಪಾಮರ್
ಪಂಜಾಬಿನ ಸಂಗ್ರೂರ್ನ ಅಕ್ಕಿ ಪ್ಯಾಕಿಂಗ್ ಕೇಂದ್ರದಲ್ಲಿರುವ ಮಹಿಳೆ
ಕೃಷಿ ವಲಯದಲ್ಲಿ ಡಿಜಿಟಲೀಕರಣದಿಂದ ಅನುದ್ದೇಶಿತವಾಗಿ ಆದ ಇತ್ಯಾತ್ಮಕ ಬೆಳವಣಿಗೆ ಎಂದರೆ ಅನೌಪಚಾರಿಕ ಆರ್ಥಿಕತೆಗಳು ಔಪಚಾರಿಕವಾಗುವ ಮೂಲಕ ಸರ್ಕಾರಗಳಿಗೆ ಉತ್ತಮ ಮಾಹಿತಿ ಒದಗಿಸಿದವು. ಇದರಿಂದ ಕೃಷಿ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಯಿತು.
ಮಾರುಕಟ್ಟೆಯ ವಿಕೇಂದ್ರಿಕರಣ ಮತ್ತು ಸಂಪರ್ಕ ತಗ್ಗಿಸಲು ಡಿಜಿಟಲ್ ವೇದಿಕೆಗಳ ಬಳಕೆ
ಕೂಲಿಕಾರರ ಸಮಸ್ಯೆ ಕೃಷಿಯಲ್ಲಿ ಕೇವಲ ಉತ್ಪಾದನೆಯನ್ನಷ್ಟೇ ಅಲ್ಲದೆ ಮಾರುಕಟ್ಟೆ ಚಟುವಟಿಕೆಗಳ ಮೇಲೂ ಪ್ರಭಾವ ಬೀರಿದವು. ಅದರಲ್ಲೂ ಆಹಾರ ಪೂರೈಕೆ ಸರಪಳಿಯ ಕೊಂಡಿಗಳಲ್ಲೊಂದಾದ ಮಾರುಕಟ್ಟೆ ಇಲ್ಲವೇ ಮಂಡಿಗಳ ಮೇಲೆ ಪ್ರಭಾವ ಬೀರಿದವು.
ಭಾರತದ ಮಂಡಿ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನಸಂದಣಿಯಿರುತ್ತದೆ. ಅದರಲ್ಲೂ ಕೊಯ್ಲಿನ ಸಮಯದಲ್ಲಿ ಇನ್ನೂ ಹೆಚ್ಚಿರುತ್ತದೆ. ಸರ್ಕಾರವು ರೈತರು, ವ್ಯಾಪಾರಿಗಳು, ಮಾರಾಟಗಾರರ ಸಂದಣಿಯನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದಾಹರಣೆಗೆ ಪಂಜಾಬ್ ಮತ್ತು ಹರಿಯಾಣದ ಮಂಡಿಗಳಲ್ಲಿ ರೈತರಿಗೆ ಟೋಕನ್ ವಿತರಿಸಲಾಗುತ್ತದೆ. ಅದರಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಬೇಕಾದ ಸಮಯ ನಮೂದಾಗಿರುತ್ತದೆ. ಮಾರಟ ಮಾಡುವ ಉತ್ಪಪನ್ನದ ಪ್ರಮಾಣಕ್ಕೂ ಮಿತಿ ಇರುತ್ತದೆ. ರೈತರು ಸರಕನ್ನು ಗಾಡಿಯಲ್ಲಿ ತುಂಬಲು, ಇಳಿಸಲು ಹಾಗೂ ಸಾಗಿಸಲು ಕೂಲಿಯಾಳುಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಮಾರುಕಟ್ಟೆಗಳಿಗೂ ತೊಂದರೆಯಾಗುತ್ತಿದೆ. ಈಗ ಸಣ್ಣದಾಗಿ ಕಾಣುತ್ತಿರುವ ಈ ಸಮಸ್ಯೆಗಳು ದೀರ್ಘಾವಧಿಯಲ್ಲಿ ಆಹಾರ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು.
ಭಾರತೀಯ ಕೃಷಿ ಆರ್ಥಿಕ ತಜ್ಞರು ಹಾಗೂ ನೀತಿ ರೂಪಕರು ಆದ ಡಾ. ರಮೇಶ್ ಚಂದ್ ಅವರು ಸರ್ಕಾರಕ್ಕೆ ಎಪಿಎಂಸಿ ಕಾಯ್ದೆಯಲ್ಲಿ ಸಡಲಿಕೆಗಳನ್ನು ಮಾಡಲು ಸಲಹೆ ನೀಡಿದರು. ಆಗ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ತೋಟದ ಬಳಿಯೇ ಮಾರಾಟ ಮಾಡಬಹುದು. ಆಹಾರ ಪೂರೈಕೆ ಸರಪಳಿಯಲ್ಲಿ ಉಂಟಾದ ಸಮಸ್ಯೆಯನ್ನು ತಗ್ಗಿಸಲು ಹಾಗೂ ಮಂಡಿಗಳಲ್ಲಿನ ಜನಸಂದಣಿ ತಪ್ಪಿಸಲು ಈ ಸಲಹೆಯನ್ನು ನೀಡಲಾಯಿತು.
ಎಪಿಎಂಸಿ ಕಾಯ್ದೆಯಲ್ಲಿ ಈ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸಡಿಲಿಕೆ ತಂದರೆ ಡಿಜಿಟಲ್ ವೇದಿಕೆಗಳು ವಿಕೇಂದ್ರಿಕೃತ ಮಾರುಕಟ್ಟೆ ವ್ಯವಸ್ಥೆ ತರಲು ಪರಿಣಾಮಕಾರಿ ಮಾರ್ಗಗಳಾಗುತ್ತದೆ. ಜೊತೆಗೆ ಕೃಷಿ ಉತ್ಪನ್ನಗಳನ್ನು ತಮ್ಮ ತೋಟದಲ್ಲಿಯೇ ಮಾರಾಟ ಮಾಡುವ ಅವಕಾಶ ಸಿಗುತ್ತದೆ. ಉದಾಹರಣೆಗೆ ಡಿಜಿಟಲ್ ವೇದಿಕೆಯು ಗುತ್ತಿಗೆ ಕೃಷಿಗೆ ವ್ಯವಸ್ಥೆ ಕಲ್ಪಿಸಬಹುದು, ಗುಣಮಟ್ಟದ ಮೇಲೆ ನಿಗಾವಹಿಸಿ ನಿಯಂತ್ರಿಸಬಹುದು. ಕೊಯ್ಲು, ಪ್ಯಾಕೇಜಿಂಗ್, ಸಾಗಾಣಿಕೆ, ಡೆಲಿವರಿ ಇವೆಲ್ಲವನ್ನೂ ಕೆಲಸಗಾರರನ್ನು ರಕ್ಷಿಸುವ ಸಲುವಾಗಿ ಮಿತಗೊಳಿಸಬಹುದು. ಈ ವೇದಿಕೆಗಳು ಮಂಡಿಯನ್ನೇ ನೆಚ್ಚಿಕೊಂಡಿರುವ ರೈತರಿಗೆ ಡಿಜಿಟಲ್ ಮಾರಾಟದ ಅವಕಾಶಗಳನ್ನು ತೆರೆಯಬಹುದು.
ಡಿಜಿಟಲ್ ಗುಣಮಟ್ಟ ಮೌಲ್ಯಮಾಪನ, ಶ್ರೇಣಿಕರಣ, ಸಂಗ್ರಹ ಇವೆಲ್ಲವೂ ದೊಡ್ಡ ಸವಾಲುಗಳನ್ನು ಒಡ್ಡುತ್ತವೆ. ಕೃಷಿ ಉತ್ಪನ್ನಗಳ ಗುಣಮಟ್ಟ ಮೌಲ್ಯಮಾಪನ, ಶ್ರೇಣಿಕರಣವು ವ್ಯಕ್ತಿನಿಷ್ಠವಾಗಿದೆ. ಸರ್ಕಾರವು ಮಂಡಿಗಳಲ್ಲಿ ಗುಣಮಟ್ಟ ಪರೀಕ್ಷೆಗೆ ಪ್ರಯೋಗಾಲಯಗಳನ್ನು ತೆರೆದಿದ್ದರೂ ವರ್ತಕರು ತಾವೇ ಸ್ವತಃ ಪರೀಕ್ಷಿಸಲು ಇಚ್ಛಿಸುತ್ತಾರೆ. ಮಾರುಕಟ್ಟೆಗಳನ್ನು ವಿಕೇಂದ್ರೀಕೃತಗೊಳಿಸಿದಲ್ಲಿ ಆಗಲೂ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕೊಂದು ಪರಿಹಾರ ಕಂಡುಹಿಡಿಯುವವರೆಗೆ ಸಂಯೋಜಿತ ಡಿಜಿಟಲ್ ವೇದಿಕೆಗಳು ಈ ಚಟುವಟಿಕೆಗಳನ್ನು ತೋಟದ ಬಾಗಿಲಲ್ಲೇ ನಡೆಸುತ್ತವೆ.
ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಮತ್ತೊಂದು ಮಾದರಿ ರೈತರು ನೇರವಾಗಿ ನಗರ ಸಮುದಾಯಗಳೊಂದಿಗೆ ವ್ಯವಹರಿಸುವುದು. ನಗರದಲ್ಲಿ ತಲೆಯೆತ್ತಿರುವ ಹಲವಾರು AgTech ಉದ್ದಿಮೆಗಳು ಈ ಮಾದರಿಯನ್ನು ಅಳವಡಿಸಿಕೊಂಡಿವೆ. ಅವು ನಗರಗಳಲ್ಲಿ ಬೇಡಿಕೆ ಕಂಡುಕೊಳ್ಳಲು ರೈತರಿಗೆ ತಾಜಾ ಉತ್ಪನ್ನಗಳನ್ನು ಇಲ್ಲಿಯೇ ಬೆಳೆಯಲು ಅನುವು ಮಾಡಿಕೊಡುತ್ತದೆ. ತೆಲಂಗಾಣದ ಸಿದ್ದಿಪೇಟೆಯ ೧೦೦ ಮಂದಿ ರೈತರು ವಾಟ್ಸ್‌ಅಪ್ ಮೂಲಕ ಹೈದರಾಬಾದಿನ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿದರು.
ಗುಂಪಿನ ಒಬ್ಬ ಸದಸ್ಯರು ಸಂದೇಶವನ್ನು ತಲುಪಿಸುವುದು ಹಾಗೂ ಆರ್ಡರ್‌ಗಳನ್ನು ಪಡೆದು ಅವರಿಗೆ ಉತ್ಪನ್ನ ತಲುಪಿಸುವ ಜವಾಬ್ದಾರಿಯನ್ನು ಹೊತ್ತರು. ಸರಳವಾದೊಂದು ಉಪಕರಣದ ಮೂಲಕ ಈ ರೈತರು ಬೇಡಿಕೆ ಮತ್ತು ಪೂರೈಕೆಗಳನ್ನು ಹೇಗೆ ಸಾಧಿಸಿದರು ಎನ್ನುವುದನ್ನು ಗಮನಿಸುವುದು ಮುಖ್ಯವಾಗುತ್ತದೆ. ಇಂತಹ ಸರಳ ವಿಧಾನಗಳನ್ನು ಪ್ರಚುರಗೊಳಿಸಿದರೆ ಕಷ್ಟಪಡುತ್ತಿರುವ ರೈತರಿಗೂ ಇಂತಹ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.
ಈ ಬಿಕ್ಕಟ್ಟು ಸರ್ಕಾರಕ್ಕೆ eNAM ಎನ್ನುವ ಪ್ಯಾನ್‌ಇಂಡಿಯಾ ಎಲೆಕ್ಟ್ರಾನಿಕ್ ಮಾರಾಟದ ಪೋರ್ಟಲ್ ಆರಂಭಿಸುವ ಅವಕಾಶ ಒದಗಿಸಿತು. ಗ್ರಾಮೀಣ ಭಾಗಗಳಲ್ಲಿ ಗೋದಾಮುಗಳು, ಎಪಿಎಂಸಿ ಆವರಣದಲ್ಲಿ ಗೋದಾಮುಗಳು ಇವು ಸರ್ಕಾರಿ ನೀತಿಗಳು ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಯೋಜನೆಗಳ ಭಾಗವಾಗಿದೆ. ಗ್ರಾಮೀಣ ಗೋದಾಮುಗಳು ಇನ್ನಷ್ಟೇ ಕಾರ್ಯಗತವಾಗಬೇಕಿದೆ.
ಡಿಜಿಟಲೀಕರಣಗೊಂಡ ಗೋದಾಮುಗಳು ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಸರ್ಕಾರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಈ ಹಣ ಜಮಾವಣೆ ಮಾಡಲು ಸಾಧ್ಯವಾಗುತ್ತದೆ.
ಒಳಸುರಿಯುವಿಕೆ ಪೂರೈಕೆ ಸರಪಳಿಯ ಡಿಜಿಟಲೀಕರಣ
ಒಳಸುರಿಯುವಿಕೆ ಪೂರೈಕೆ ಸರಪಳಿಯು ರೈತರಿಗೆ ಬೀಜಗಳು, ಗೊಬ್ಬರಗಳು, ರಾಸಾಯನಿಕಗಳು ಇತ್ಯಾದಿಗಳನ್ನು ಒದಗಿಸುತ್ತದೆ. ಇದು ಕೂಡ ಕೋವಿಡ್ ೧೯ರ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಡಿಜಿಟಲ್ ಕ್ರಾಂತಿಗೆ ಒಳಗಾಯಿತು. ತೋಟದಿಂದ ತಟ್ಟೆಗೆ ಎನ್ನುವ ಪೂರೈಕಾ ಸರಪಳಿಯ ಮಾದರಿಯಲ್ಲೇ ಇದು ಕೂಡ ಇತ್ತು. ರೈತರು ಬೀಜಗಳನ್ನು ಪಡೆಯಬಹುದಾಗಿದ್ದ ಪ್ರಬಲವಾದ ಅನೌಪಚಾರಿಕ ಬೀಜ ವಲಯವಿತ್ತು. ಉಪ ವಲಯಗಳಲ್ಲಿ ಕೃಷಿ ಒಳಸುರಿಯುವಿಕೆ ಸರಪಳಿಗೆ ಲಾಕ್‌ಡೌನ್ ಸಂದರ್ಭದಲ್ಲಿ ವಿನಾಯ್ತಿ ಇದ್ದರೂ ಕೂಡ ಕೂಲಿಯಾಳುಗಳು ಮತ್ತು ಸಾಗಾಣಿಕೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಯಿತು. ಇ-ಕಾಮರ್ಸ್ ವೇದಿಕೆಗಳು ಇವುಗಳನ್ನು ಪೂರೈಸುವ ಮೂಲಕ ಈ ತೊಂದರೆಯ ಪ್ರಮಾಣವನ್ನು ತಗ್ಗಿಸಿದವು. ಲಭ್ಯ ಮಾಹಿತಿಯು ಮಾರುಕಟ್ಟೆಯ ಡಿಜಿಟಲೀಕರಣ ಲಾಭದಾಯಕ ಎಂದು ತೋರುತ್ತಿವೆ.
ಜೊತೆಗೆ ಇನ್ನಿತರ ಸೇವೆಗಳೊಂದಿಗೆ ಇ-ಕಾಮರ್ಸ್ ವೇದಿಕೆಯ ಮೂಲಕ ಇ-ವಿಸ್ತರಣೆಯನ್ನು ರೈತರಿಗೆ ಒದಗಿಸಬಹುದು. ಈ ವೇದಿಕೆಗಳನ್ನು ಆರ್ಥಿಕ ಸಂಸ್ಥೆಗಳೊಂದಿಗೆ ಒಗ್ಗೂಡಿಸುವ ಮೂಲಕ ಸಣ್ಣ ರೈತರಿಗೆ ಸಾಲ ಸೌಲಭ್ಯವನ್ನು ಒದಗಿಸಬಹುದು.
ಡಿಜಿಟಲ್ ಸಲಕರಣೆಗಳು ಮತ್ತು ತಂತ್ರಜ್ಞಾನಗಳು ಪ್ರಸ್ತುತ ಕೃಷಿ ವಲಯವು ಎದುರಿಸಿದ ಕೆಲ ಸಮಸ್ಯೆಗಳನ್ನು ಪರಿಹರಿಸಲು ಕೆಲವು ವಿಧಾನಗಳನ್ನು ತೋರಿಸಿಕೊಟ್ಟಿದೆ. ಸಣ್ಣ ರೈತರನ್ನು ಒಳಗೊಂಡಿರುವ ಅಭಿವೃದ್ಧಿ ಪ್ರದೇಶಗಳಲ್ಲಿ ಇವುಗಳನ್ನು ಅಳವಡಿಸಬಹುದು. ಕೃಷಿಯು ಮುಖ್ಯ ಸಂಸ್ಥೆಗಳು ಮತ್ತು ಮನುಷ್ಯರನ್ನು ಒಳಗೊಳ್ಳದೆ ಇರಲು ಸಾಧ್ಯವಿಲ್ಲ. ಆದರೆ ಡಿಜಿಟಲ್ ಸಲಕರಣೆಗಳು ಸಾಂಕ್ರಾಮಿಕವು ತಂದೊಡ್ಡಿದ ಸವಾಲನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಲಾಕ್‌ಡೌನ್ ಸಂದರ್ಭವು ಡಿಜಿಟಲ್ ಕೃಷಿ ಪರಿಹಾರಗಳನ್ನು ಕಂಡುಕೊಳ್ಳಲು ಅವಕಾಶಗಳನ್ನು ಒದಗಿಸಿತು.
ಟಿಪ್ಪಣಿ : ಈ ಲೇಖನವು ಮೂಲತಃ CGIAR Platform for Big Dataದಲ್ಲಿ ಪ್ರಕಟಿತವಾದ ಲೇಖನದ ಸಂಕಲಿತ ರೂಪ
ರಾಮ್ ಧೂಲಿಪಾಲ
Ram Dhulipala
Theme Leader – Digital Agriculture & Youth
ICRISAT
Hyderabad, India
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್ ೨೦೨೦



