ಸಣ್ಣ ಹಿಡುವಳಿದಾರರು ಬೆಳೆ ಉತ್ಪಾದನೆಯಲ್ಲಿ ತೀವ್ರ ಒತ್ತಡ ಮತ್ತು ಪರಿಸರ ಸವಾಲುಗಳನ್ನು ಎದುರಿಸುತ್ತಾರೆ. ಕೇರಳದ ಪ್ರಮುಖ ಬೆಳೆಯಾದ ಮರಗೆಣಸನ್ನು ಸಾಂಪ್ರದಾಯಿಕವಾಗಿ ಕೈಯಿಂದ ಕೊಯ್ಲು ಮಾಡಲಾಗುತ್ತದೆ, ಇದು ಶ್ರಮದಾಯಕ, ಮತ್ತು ಸುಸ್ಥಿರವಾದ ವಿಧಾನವಲ್ಲ. ಇಬ್ಬರು ರೈತ ಸಹೋದರರು ಮರಗೆಣಸು ಕೊಯ್ಲು ಸಾಧನವನ್ನು ಅಭಿವೃದ್ಧಿಪಡಿಸಿದರು. ಇದು ಶ್ರಮವನ್ನು ಕಡಿಮೆ ಮಾಡುತ್ತದೆ, ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸುತ್ತದೆ. ಪ್ರೊಲಿನೋವಾ ನೆಟ್‌ವರ್ಕ್‌ನಿಂದ ಬೆಂಬಲಿತವಾದ ಈ ಆವಿಷ್ಕಾರವು ಈಗ ಭಾರತದಾದ್ಯಂತ ಹರಡುತ್ತಿದೆ ಮತ್ತು ಅಂತರಾಷ್ಟ್ರೀಯ ಗಮನವನ್ನು ಸೆಳೆದಿದೆ.
ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಮರಗೆಣಸನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇದು ಕೇರಳವನ್ನು ಮರಗೆಣಸಿನ ಉತ್ಪಾದನೆಯಲ್ಲಿ ಭಾರತದ ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯವನ್ನಾಗಿ ಮಾಡಿದೆ. ಸಣ್ಣ ಹಿಡುವಳಿದಾರ ರೈತರು, ಮರಗೆಣಸನ್ನು ಮನೆಯ ಬಳಕೆ ಮತ್ತು ಸ್ಥಳೀಯ ಮಾರುಕಟ್ಟೆಗಳಿಗಾಗಿ ಪ್ರಮುಖ ಬೆಳೆಯಾಗಿ ಬೆಳೆಸುತ್ತಾರೆ. ಸಾಂಪ್ರದಾಯಿಕವಾಗಿ ಕೊಯ್ಲು ಎಂದರೆ ಗೆಡ್ಡೆಗಳನ್ನು ಬಗ್ಗಿ ಕೈಯಿಂದ ಕಿತ್ತುವುದು. ಇದು ಶ್ರಮದಾಯಕ ವಿಧಾನವಾಗಿದ್ದು, ಬೆನ್ನು ಮತ್ತು ಮೊಣಕಾಲುಗಳಿಗೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಮಣ್ಣನ್ನು ಸಡಿಲಗೊಳಿಸುತ್ತದೆ. ಇದರಿಂದಾಗಿ ಸವಕಳಿಯ ಅಪಾಯ ಹೆಚ್ಚುತ್ತದೆ. ಈ ಕೆಲಸದ ಹೊರೆಯು ಮಹಿಳೆಯರ ಮೇಲೆ ಹೆಚ್ಚಾಗಿ ಬೀಲುತ್ತದೆ. ಅವರು ಈ ಕೆಲಸದೊಂದಿಗೆ ಕಳೆ ಕೀಳುವ ಜವಾಬ್ದಾರಿಯನ್ನು ಸಹ ಹೊರುತ್ತಾರೆ. ಇದು ಕೂಡ ದೈಹಿಕ ಶ್ರಮವನ್ನು ಬೇಡುವ ಕೆಲಸವಾಗಿದೆ. ಕಳೆಕೀಳುವಲ್ಲಿಯೂ ತೊಂದರೆಗಳಿದ್ದು, ರೈತರು ಸಾಮಾನ್ಯವಾಗಿ ಕಳೆಗಳನ್ನು ಕಾಂಡದವರೆಗೆ ಕತ್ತರಿಸುತ್ತಾರೆ. ಇದು ಕಳೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಬದಲು ಅದರ ಬೆಳವಣಿಗೆಯನ್ನು ಮಾತ್ರ ನಿಧಾನವಾಗಿಸುತ್ತದೆ.
ನೂತನ ಅನ್ವೇಷಣೆ
ಈ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ಇಡುಕ್ಕಿ ಜಿಲ್ಲೆಯ ತೋಡುಪುಳದ ಜೋಸ್ ಕೆ.ವಿ. ಮತ್ತು ಜೋಸ್ ಚೆರಿಯನ್ ಎಂಬ ಇಬ್ಬರು ಸಹೋದರರು, ಮರಗೆಣಸು ಮತ್ತು ಕಳೆಗಳನ್ನು ಬೇರುಸಹಿತ ಕೀಳಲು ಹಗುರವಾದ ಮತ್ತು ಸರಳ ಸಾಧನವನ್ನು ಅಭಿವೃದ್ಧಿಪಡಿಸಿದರು. ಈ ಸಾಧನದ ವಿನ್ಯಾಸವು ಸರಳ ತತ್ವವನ್ನು ಆಧರಿಸಿದೆ: ಸಸ್ಯದ ಕಾಂಡವನ್ನು ಉಪಕರಣದ ದವಡೆಗಳ ನಡುವೆ ಬಿಗಿಯಾಗಿ ಹಿಡಿದು, ಹಿಡಿಕೆಯನ್ನು ನಿಧಾನವಾಗಿ ಹಿಂದಕ್ಕೆ ತಿರುಗಿಸುವ ಮೂಲಕ, ರೈತ ಮುಂದಕ್ಕೆ ಬಾಗುವ ಅಗತ್ಯವಿಲ್ಲದೆ ಗಿಡವನ್ನು ಬೇರುಸಹಿತ ಕೀಳಲಾಗುತ್ತದೆ. ತಂತ್ರದಲ್ಲಿನ ಈ ಸಣ್ಣ ಹೊಂದಾಣಿಕೆಯು ಕೊಯ್ಲು ಪ್ರಕ್ರಿಯೆಯನ್ನು ಸರಳಗೊಳಿಸಿದೆ. ದೈಹಿಕ ಶ್ರಮವನ್ನು ಗಮನಾರ್ಹವಾಗಿ ಕಡಿಮೆ ಮಾಡುವುದರೊಂದಿಗೆ, ಮಣ್ಣು ಸಡಿಲವಾಗಿ ಸವೆತ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.
ಈ ಸಾಧನವು ಧೃಡವಾಗಿದ್ದರೂ, ಇದರ ನಿರ್ವಹಣೆ ಸುಲಭವಾಗಿದೆ. ಇದನ್ನು ಗಂಡಸರು, ಹೆಂಗಸರು ಮತ್ತು ಮಕ್ಕಳು ಸಹ ಬಳಸಬಹುದು. ಹಲವು ಬಾರಿ ಪರಿಷ್ಕರಿಸಿದ ನಂತರ ಈಗಿನ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪರಿಣಾಮವಾಗಿ ಎರಡು ವಿಶೇಷ ಮಾದರಿಗಳು ದೊರೆತಿವೆ: ಒಂದು ಮರಗೆಣಸಿನ ಕೊಯ್ಲಿಗಾಗಿ ಮತ್ತು ಇನ್ನೊಂದು ಕಳೆ ತೆಗೆಯಲು ವಿನ್ಯಾಸಗೊಳಿಸಲಾಗಿದೆ. ಈ ಸಾಧನವನ್ನು ಬಳಸುತ್ತಿರುವ ರೈತರು ಇದು ನಿಮಿಷಕ್ಕೆ ಎರಡು ಮರಗೆಣಸಿನ ಗಿಡಗಳನ್ನು ಅಥವಾ ನಾಲ್ಕು ಆಳವಾಗಿ ಬೇರೂರಿರುವ ಕಳೆಗಿಡಗಳನ್ನು ಕೀಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. ಇದರಿಂದಾಗಿ ಕೆಲಸವು ವೇಗವಾಗಿ, ಸುರಕ್ಷಿತವಾಗಿ ಮತ್ತು ಕಡಿಮೆ ಶ್ರಮದೊಂದಿಗೆ ಮುಗಿಯುತ್ತದೆ.
ಅಳವಡಿಕೆ ಮತ್ತು ಪರಿಣಾಮ
ನಾವೀನ್ಯಕಾರರು ಸಾಧನವನ್ನು ಉತ್ಪಾದಿಸಲು ಮತ್ತು ವಿತರಿಸಲು ಒಂದು ಸಣ್ಣ ವ್ಯವಹಾರ ಘಟಕವನ್ನು ಸ್ಥಾಪಿಸಿದರು. ಇಲ್ಲಿಯವರೆಗೆ, 2,000 ಕ್ಕೂ ಹೆಚ್ಚು ಸಾಧನಗಳು ಮಾರಾಟವಾಗಿವೆ. ರೈತರಿಂದ ಬಂದ ಪ್ರತಿಕ್ರಿಯೆಯು ಇದರ ಹಲವು ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ: ದೈಹಿಕ ಒತ್ತಡ ಮತ್ತು ಬೆನ್ನು ನೋವನ್ನು ಕಡಿಮೆ ಮಾಡುವುದು, ಮಣ್ಣಿನ ಸಂರಕ್ಷಣೆ ಮತ್ತು ಬೇರುಸಹಿತ ಕಿತ್ತುಹಾಕುವ ಸಮಯದಲ್ಲಿ ಮರಗೆಣಸಿನ ಗೆಡ್ಡೆಗಳಿಗೆ ಹಾನಿಯಾಗದಂತೆ ತಡೆಗಟ್ಟುವುದು. ಈ ಸಾಧನವನ್ನು ಮರಗೆಣಸಿನ ಹೊಲಗಳಲ್ಲಿ ಮಾತ್ರವಲ್ಲದೆ, ಔಷಧೀಯ ಸಸ್ಯಗಳಾದ ಕುರುಂತೊಟ್ಟಿ (ಸಿಡಾ ಕಾರ್ಡಿಫೋಲಿಯಾ) ಕೊಯ್ಲು ಮಾಡಲು ಇದು ವಿಶೇಷವಾಗಿ ಪರಿಣಾಮಕಾರಿ ಎಂದು ರೈತರು ಕಂಡುಕೊಂಡಿದ್ದಾರೆ. ಕೇರಳ ಸ್ಟಾರ್ಟ್ಅಪ್ ಮಿಷನ್ ಮತ್ತು UNDP ಗ್ರೀನ್ ಇನ್ನೋವೇಶನ್ ನಿಧಿಯ ಬೆಂಬಲದೊಂದಿಗೆ, ಲಾಭರಹಿತ ಸ್ಟಾರ್ಟ್ಅಪ್ ಆಗಿರುವ ಕ್ರಿಯೇಟಿವಿಟಿ ಕೌನ್ಸಿಲ್, ಸಣ್ಣ ರೈತರು ಮತ್ತು ಎನ್‌ಜಿಒಗಳಲ್ಲಿ ಉತ್ಪನ್ನವನ್ನು ಪ್ರಚಾರ ಮಾಡಿದೆ.
ರೈತರ ಅನುಭವಗಳನ್ನು ಆಧರಿಸಿ, ನಾವಿನ್ಯಕಾರರು ಈ ಸಾಧನದ ವಿನ್ಯಾಸವನ್ನು ಸುಧಾರಿಸಿದರು. ಗಟ್ಟಿ ಮಣ್ಣಿನಲ್ಲಿ ಅಥವ ದೊಡ್ಡ ಗಡ್ಡೆಗಳನ್ನು ಕೀಳುವಾಗ ಸಾಧನವು ಬಾಗಿತು ಎಂದು ಬಳಕೆದಾರರು ಹೇಳಿದಾಗ ಅದರ ಕಮಾನಿನಂತಿದ್ದ ಭಾಗವನ್ನು ಸುಧಾರಿಸಿದರು. ಅದೇ ರೀತಿ ಒದ್ದೆ ಮಣ್ಣಿನಲ್ಲಿ ಬಳಸುವಾಗ ಅದರ ಹಲ್ಲುಗಳು ಮುರಿದುಹೋದದ್ದನ್ನು ತಿಳಿಸಿದಾಗ ಅದನ್ನು ಬಲಗೊಳಿಸಲಾಯಿತು. ಈ ರೀತಿ ಬಳಕೆದಾರರ ಪ್ರತಿಕ್ರಿಯೆಗಳನ್ನು ಆಧರಿಸಿ ಸಾಧನದಲ್ಲಿ ನಿರಂತರವಾಗಿ ಸುಧಾರಣೆ ಮಾಡಲಾಗುತ್ತಿದೆ.
ಪ್ರೊಲಿನೋವಾ ಪಾತ್ರ
ರೈತರ ನಾವೀನ್ಯತೆಯನ್ನು ಗುರುತಿಸುವ ಮತ್ತು ಉತ್ತೇಜಿಸುವ ಜಾಗತಿಕ ಸಮುದಾಯವಾದ ಪ್ರೊಲಿನೋವಾ ನೆಟ್‌ವರ್ಕ್ (ಪರಿಸರ ಕೃಷಿ ಮತ್ತು NRM ನಲ್ಲಿ ಸ್ಥಳೀಯ ನಾವೀನ್ಯತೆಯನ್ನು ಉತ್ತೇಜಿಸುವುದು) ಈ ತಂತ್ರಜ್ಞಾನವನ್ನು ವ್ಯಾಪಕ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಏಪ್ರಿಲ್ 2024 ರಲ್ಲಿ, ಪ್ರೊಲಿನೋವಾ–ಕೀನ್ಯಾ ನೈರೋಬಿಯಲ್ಲಿ ಆಯೋಜಿಸಿದ್ದ ರೈತ ನಾವೀನ್ಯತೆ ಮೇಳದಲ್ಲಿ (FIF) ಕಸಾವ(ಮರಗೆಣಸು)-ಕೊಯ್ಲು ಸಾಧನವನ್ನು ಪ್ರದರ್ಶಿಸಲಾಯಿತು. ಸಣ್ಣ ವೀಡಿಯೊ ಪ್ರಸ್ತುತಿಗಳ ಮೂಲಕ, ಏಷ್ಯನ್ ತಳಮಟ್ಟದ ನಾವೀನ್ಯತೆಯನ್ನು ಆಫ್ರಿಕನ್ ರೈತ ನಾವೀನ್ಯಕಾರರು ಮತ್ತು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ (ARD) ಪಾಲುದಾರರಿಗೆ ಪರಿಚಯಿಸಲಾಯಿತು. ಇದು ಅಂತರ-ಪ್ರಾದೇಶಿಕ ವಿನಿಮಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿತು.
ಈ ಆವೇಗದ ಮೇಲೆ ನಿರ್ಮಿಸುತ್ತಾ, ಪ್ರೊಲಿನೋವಾ ತನ್ನ ಆತಿಥೇಯ ಸಂಸ್ಥೆ ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿಯೊಂದಿಗೆ ಸೇರಿ 2025 ರ ನವೆಂಬರ್‌ನಲ್ಲಿ ಕೇರಳದಲ್ಲಿ ತನ್ನ ದ್ವೈವಾರ್ಷಿಕ ಅಂತರರಾಷ್ಟ್ರೀಯ ಪಾಲುದಾರರ ಕಾರ್ಯಾಗಾರ (IPW) ಅನ್ನು ಆಯೋಜಿಸುತ್ತದೆ. ಈ ಕಾರ್ಯಾಗಾರವು ಆಫ್ರಿಕಾ ಮತ್ತು ಏಷ್ಯಾದಾದ್ಯಂತ ಪಾಲುದಾರರನ್ನು ಒಟ್ಟುಗೂಡಿಸಿ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಅನುವು ಮಾಡಿಕೊಡುತ್ತದೆ. ಈ ಕಾರ್ಯಕ್ರಮವು ರೈತರ ನಾವೀನ್ಯತೆಗಳ ಪ್ರದರ್ಶನಗಳು, ಜ್ಞಾನ ಹಂಚಿಕೆಗಾಗಿ ಸಂವಾದಾತ್ಮಕ ಅವಧಿಗಳು ಮತ್ತು ಕ್ಷೇತ್ರ ಭೇಟಿಗಳನ್ನು ಒಳಗೊಂಡಿರುತ್ತದೆ. ಭಾಗವಹಿಸುವವರು ಮರಗೆಣಸು ಕೊಯ್ಲು ಉಪಕರಣದ ನಾವೀನ್ಯಕಾರರನ್ನು ಭೇಟಿ ಮಾಡಲು, ಅವರ ಹೊಲಗಳಿಗೆ ಭೇಟಿ ನೀಡಲು ಮತ್ತು ಸ್ಥಳೀಯ ನಾವೀನ್ಯತೆ ಮತ್ತು ರೈತರ ನೇತೃತ್ವದ ಪ್ರಯೋಗಗಳ ಕುರಿತು ನೇರವಾಗಿ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಹೊಂದಿರುತ್ತಾರೆ.
ಈ ಚಳುವಳಿಯ ಆಧಾರದ ಮೇಲೆ, ಪ್ರೊಲಿನೋವಾ ತನ್ನ ಅತಿಥೇಯ ಸಂಸ್ಥೆ ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿಯೊಂದಿಗೆ ಸೇರಿ 2025 ರ ನವೆಂಬರ್‌ನಲ್ಲಿ ಕೇರಳದಲ್ಲಿ ತನ್ನ ದ್ವೈವಾರ್ಷಿಕ ಅಂತರರಾಷ್ಟ್ರೀಯ ಪಾಲುದಾರರ ಕಾರ್ಯಾಗಾರ (IPW) ವನ್ನು ಆಯೋಜಿಸಿತು. ಈ ಕಾರ್ಯಾಗಾರವು ಆಫ್ರಿಕಾ ಮತ್ತು ಏಷ್ಯಾದಾದ್ಯಂತ ಪಾಲುದಾರರನ್ನು ಒಟ್ಟುಗೂಡಿಸಿ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಅನುವು ಮಾಡಿಕೊಟ್ಟಿತು. ಈ ಕಾರ್ಯಕ್ರಮವು ರೈತರ ನಾವೀನ್ಯತೆಗಳ ಪ್ರದರ್ಶನಗಳು, ಜ್ಞಾನ ಹಂಚಿಕೆಗಾಗಿ ಸಂವಾದಾತ್ಮಕ ಅವಧಿಗಳು ಮತ್ತು ಕ್ಷೇತ್ರ ಭೇಟಿಗಳನ್ನು ಒಳಗೊಂಡಿತ್ತು. ಭಾಗವಹಿಸುವವರು ಮರಗೆಣಸು ಕೊಯ್ಲು ಉಪಕರಣದ ನಾವೀನ್ಯಕಾರರನ್ನು ಭೇಟಿ ಮಾಡಲು, ಅವರ ಹೊಲಗಳಿಗೆ ಭೇಟಿ ನೀಡಲು ಮತ್ತು ಸ್ಥಳೀಯ ನಾವೀನ್ಯತೆ ಮತ್ತು ರೈತರ ನೇತೃತ್ವದ ಪ್ರಯೋಗಗಳ ಕುರಿತು ನೇರವಾಗಿ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಹೊಂದಿದ್ದರು.
ಉಪಸಂಹಾರ
ಕೇರಳದ ಮರಗೆಣಸು ಕೊಯ್ಲು ಸಾಧನವು, ತಳಮಟ್ಟದ ಜಾಣ್ಮೆಯು ಸಾಮಾಜಿಕ ಮತ್ತು ಪರಿಸರ ಸವಾಲುಗಳನ್ನು ಎದುರಿಸುವ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಹೇಗೆ ಉತ್ಪಾದಿಸಬಹುದು ಎಂಬುದಕ್ಕೆ ಗಮನಾರ್ಹ ಉದಾಹರಣೆಯಾಗಿದೆ. ಶ್ರಮವನ್ನು ಕಡಿಮೆ ಮಾಡುವ ಮೂಲಕ, ಮಣ್ಣಿನ ಸವೆತವನ್ನು ತಡೆಗಟ್ಟುವ ಮೂಲಕ ಮತ್ತು ರೈತರ ಆರೋಗ್ಯವನ್ನು ರಕ್ಷಿಸುವ ಮೂಲಕ, ಈ ಸಾಧನವು ಹೆಚ್ಚು ಸುಸ್ಥಿರ ಸಣ್ಣ ಹಿಡುವಳಿದಾರ ಕೃಷಿಯೆಡೆಗಿನ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಇದರ ಯಶಸ್ಸು ಪ್ರೊಲಿನೋವಾದಂತಹ ವೇದಿಕೆಗಳ ಮೌಲ್ಯವನ್ನು ಪ್ರದರ್ಶಿಸುತ್ತದೆ, ಸಹಯೋಗವನ್ನು ಬೆಳೆಸುತ್ತದೆ, ಅಂತರ್-ಸಾಂಸ್ಕೃತಿಕ ವಿನಿಮಯವನ್ನು ಸುಗಮಗೊಳಿಸುತ್ತದೆ ಮತ್ತು ರೈತರ ನೇತೃತ್ವದ ನಾವೀನ್ಯತೆಗಳನ್ನು ಹೆಚ್ಚಿಸುತ್ತದೆ. ಅಂತಹ ಪ್ರಯತ್ನಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರಿಹಾರಗಳು ಆ ಸಂದರ್ಭದಲ್ಲಿ ಜೀವನೋಪಾಯವನ್ನು ಸುಧಾರಿಸುವುದಲ್ಲದೆ, ವಿಶ್ವಾದ್ಯಂತ ಅಳವಡಿಕೆ ಮತ್ತು ಪ್ರತಿಕೃತಿಯನ್ನು ಪ್ರೇರೇಪಿಸುತ್ತದೆ ಎಂದು ಖಚಿತಪಡಿಸುತ್ತದೆ.
ರೈತ ಕಂಡುಹಿಡಿದ ಕೈಚಾಲಿತ ಮರಗೆಣಸಿನ ಕೊಯ್ಲು ಯಂತ್ರದ ಕಾರ್ಯಕ್ಷಮತೆಯ ಮೌಲ್ಯಮಾಪನ ಮರಗೆಣಸು ಕೇರಳದ ಪ್ರಮುಖ ಆಹಾರ ಬೆಳೆಯಾಗಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ಅತಿಹೆಚ್ಚು ಬೆಳೆಯುವ ಗೆಡ್ಡೆ ಬೆಳೆಗಳಲ್ಲಿ ಇದೂ ಒಂದು. ಇದು ಕೇರಳದ ಒಟ್ಟು ಕೃಷಿ ಪ್ರದೇಶದ 20.14% ರಷ್ಟು ಅಂದರೆ 12,504 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ (ಫಾರ್ಮ್ ಗೈಡ್, 2020). ಮರಗೆಣಸು ಗೆಡ್ಡೆಗಳ ಪ್ರಮುಖ ಪೋಷಕಾಂಶ ಅಂಶವೆಂದರೆ ಪಿಷ್ಟ. ಇದು ಮರಗೆಣಸಿನಲ್ಲಿ ಸುಮಾರು 40% ವರೆಗೆ ಇರುತ್ತದೆ. ಅನುಕೂಲಕರ ಪರಿಸ್ಥಿತಿಗಳಲ್ಲಿ ಗೆಡ್ಡೆಗಳ ತೂಕವು 3.5 - 6.0 ಕೆಜಿ ವರೆಗೆ ಇರುತ್ತದೆ. ಪ್ರತಿ ಗಿಡದಲ್ಲಿ 2 ರಿಂದ 8 ಬೇರುಗಳಿರುತ್ತದೆ. ಇವುಗಳ ಸರಾಸರಿ ಉದ್ದ 250–650 ಮಿಮೀ ಮತ್ತು ಕೊಯ್ಲಿನ ಸಮಯದಲ್ಲಿ 30–60 ಮಿಮೀ ವ್ಯಾಸವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಗುದ್ದಲಿಯಂತಹ ಉಪಕರಣಗಳ ಸಹಾಯದಿಂದ ಅಥವಾ ಬರಿ ಕೈಗಳನ್ನು ಬಳಸಿ ಮರಗೆಣಸನ್ನು ಕೀಳುವುದನ್ನು ಅಭ್ಯಾಸ ಮಾಡಲಾಗುತ್ತದೆ. ಈ ವಿಧಾನವು ಶ್ರಮದಾಯಕ, ಸಮಯ ತೆಗೆದುಕೊಳ್ಳುವ ಮತ್ತು ಕೊಯ್ಲಿನ ಸಮಯದಲ್ಲಿ ಗಡ್ಡೆಯ ಒಡೆಯುವಿಕೆಗೆ ಕಾರಣವಾಗುತ್ತದೆ. ಮಣ್ಣಿನ ಪ್ರಕಾರವನ್ನು ಅವಲಂಬಿಸಿ, ಗಡ್ಡೆ ಕೀಳಲು ಅಗತ್ಯವಿರುವ ಶ್ರಮ ಹೆಚ್ಚಾಗುತ್ತದೆ. ದಿನವೊಂದಕ್ಕೆ ಕೊಯ್ಲು ಮಾಡಬಹುದಾದ ಪ್ರದೇಶವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಹೆಚ್ಚಿನ ಕೂಲಿ ವೆಚ್ಚದಿಂದಾಗಿ ರೈತರಿಗೆ ಲಾಭವು ಕಡಿಮೆಯಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, 2019 ರಲ್ಲಿ ಜೋಸ್ ಕೆ. ವಿ. ಮತ್ತು ಜೋಸ್ ಚೆರಿಯನ್ ಅಭಿವೃದ್ಧಿಪಡಿಸಿದ ಹಸ್ತಚಾಲಿತ ಮರಗೆಣಸು ಕೊಯ್ಲು ಯಂತ್ರವು ಲಿವರ್ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಶ್ರಮವನ್ನು ಕಡಿಮೆ ಮಾಡುವುದರೊಂದಿಗೆ ಕೊಯ್ಲು ದಕ್ಷತೆಯನ್ನು ಸುಧಾರಿಸುತ್ತದೆ. ಮರಗೆಣಸಿನ ಕೊಯ್ಲು ಯಂತ್ರವು ಮೂರನೇ ಕ್ರಮಾಂಕದ ಲಿವರ್ ತತ್ವವನ್ನು ಆಧರಿಸಿದೆ. ಉಪಕರಣದ ತೂಕ 3.5 ಕೆಜಿ, ಮತ್ತು ಇದನ್ನು 8 ಎಂಎಂ ಸ್ಪ್ರಿಂಗ್ ಸ್ಟೀಲ್ ಬಳಸಿ ನಿರ್ಮಿಸಲಾಗಿದೆ. ಇದು ಶಕ್ತಿ ಮತ್ತು ನಮ್ಯತೆ ಎರಡನ್ನೂ ಖಚಿತಪಡಿಸುತ್ತದೆ. ಉಪಕರಣದ ಪ್ರಮುಖ ಅಂಶಗಳಲ್ಲಿ ಹಿಡಿ, ಫುಲ್‌ಕ್ರಮ್ (ಆಧಾರ ಬಿಂದು) ಮತ್ತು ದವಡೆ ಸೇರಿವೆ. ಉಪಕರಣದ ಬೆಲೆ ಸುಮಾರು ರೂ. 2,500. ಸಾಂಪ್ರದಾಯಿಕವಾಗಿ ಕೈಯಿಂದ ಕೀಳುವ ವಿಧಾನವನ್ನು ಬಳಸಿಕೊಂಡು ಗಂಟೆಗೆ 12–15 ಗಿಡಗಳನ್ನು ಕೊಯ್ಲು ಮಾಡಲು ಸಾಧ್ಯವಾಗದಿದ್ದರೆ, ಕಸಾವ ಕೊಯ್ಲು ಯಂತ್ರವನ್ನು ಬಳಸಿಕೊಂಡು ಗಂಟೆಗೆ 50–60 ಕಸಾವ ಗಿಡಗಳನ್ನು ಕೊಯ್ಲು ಮಾಡಬಹುದು. ಈ ಸಣ್ಣ-ಪ್ರಮಾಣದ ಯಾಂತ್ರೀಕರಣದ ಪ್ರಮುಖ ಅನುಕೂಲವೆಂದರೆ ಗಮನಾರ್ಹವಾದ ಶ್ರಮ ಕಡಿತ ಮತ್ತು ಸರಿಸುಮಾರು 75% ಕೂಲಿ ಉಳಿತಾಯ.
ಕಡಿಮೆ ಬೆಲೆಯ ಈ ಉಪಕರಣ ಮತ್ತು ಸರಳ ಕಾರ್ಯಾಚರಣಾ ಕಾರ್ಯವಿಧಾನವು ತಿರುವನಂತಪುರಂ ಜಿಲ್ಲೆಯ ರೈತರಲ್ಲಿ ಇದನ್ನು ಹೆಚ್ಚು ಜನಪ್ರಿಯಗೊಳಿಸಿದೆ. ತಿರುವನಂತಪುರಂ ಜಿಲ್ಲೆಯ ವಿವಿಧ ಪಂಚಾಯತ್‌ಗಳಲ್ಲಿ ನಡೆಸಿದ ಕ್ಷೇತ್ರ ಪ್ರದರ್ಶನಗಳಲ್ಲಿ ಈ ಕೆಳಗಿನ ತಾಂತ್ರಿಕ ನಿಯತಾಂಕಗಳನ್ನು ದಾಖಲಿಸಲಾಗಿದೆ: ಉಪಸಂಹಾರ ರೈತರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ, ಅರೆ-ಹಸ್ತಚಾಲಿತ ಕಟಾವು ಮಾಡುವ ಯಂತ್ರವು ಹೆಚ್ಚು ಪರಿಣಾಮಕಾರಿ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಕಂಡುಬಂದಿದೆ. ಪ್ರಮುಖ ತೀರ್ಮಾನಗಳು ಈ ಕೆಳಗಿನಂತಿವೆ:
ಈ ನಾವೀನ್ಯತೆಯು ರೈತರ ನೇತೃತ್ವದ ತಾಂತ್ರಿಕ ಹಸ್ತಕ್ಷೇಪಗಳು ಗಡ್ಡೆ ಬೆಳೆ ಕೃಷಿಯಲ್ಲಿ ಶ್ರಮವನ್ನು ಕಡಿಮೆ ಮಾಡುವಲ್ಲಿ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ಲಾಭದಾಯಕತೆಯನ್ನು ಸುಧಾರಿಸುವಲ್ಲಿ ಯಶಸ್ಸನ್ನು ತೋರಿದೆ. Chithra G.
|
James TJ
A1 , Bhavani Residency ,Poothole PO, Thrissur ,
Kerala, India Pin 680004.
E-mail:james.tj6@gmail.com
Sharad Rai
Golfutar, Buddhanilkantha-8,
Kathmandu - 44600, Nepal.
E-mail: rsharad246@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೭; ಸಂಚಿಕೆ : ೪ ; ಡಿಸೆಂಬರ್ ೨೦೨೫



