ಡಿಜಿಟಲ್ ವೇದಿಕೆ ಸುಧಾರಿತ ತಂತ್ರಜ್ಞಾನಗಳ ಪ್ರಚಾರ


ಮೊಬೈಲ್ಫೋನು ಎಲ್ಲರಿಗೂ ಕೈಗೆಟುಕುವಂತಿದ್ದು, ಎಲ್ಲೆಡೆ ನೆಟ್ವರ್ಕ್ಇರುವುದರಿಂದ ಮಾಹಿತಿ ಪಡೆಯಲು ಸಣ್ಣ ರೈತರಿಗೆ ಇದೊಂದು ಮುಖ್ಯ ಡಿಜಿಟಲ್ಸಲಕರಣೆಯಾಗಿದೆ. ಡಿಜಿಟಲೇತರ ವಿಧಾನಗಳಿಗೆ ಹೋಲಿಸಿದರೆ ಇದರ ಅಳವಡಿಕೆ ಹೆಚ್ಚಾಗಿದೆ.


ಸರ್ಕಾರಿ ಸಂಸ್ಥೆಗಳು ನೀಡುತ್ತಿರುವ ಸೇವೆಗಳು ರೈತರಿಗೆ ತಲುಪಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಮುಖ್ಯವಾದವು. ಕೃಷಿ ಸಲಹೆಗಾರರಾಗಿ ಅವು ರೈತರಿಗೆ ಒಳ್ಳೆಯ ಕೃಷಿ ಮತ್ತು ಬೆಳೆ ನಿರ್ವಹಣೆ ಪದ್ಧತಿಗಳ ಕುರಿತು ಶಿಕ್ಷಣ ನೀಡಲು, ಬದಲಾಗುವ ಹವಾಮಾನ ಪರಿಸ್ಥಿತಿಗಳಲ್ಲಿ ರೈತರಿಗೆ ಸಹಾಯ ಮಾಡಲು ನೆರವು ನೀಡುತ್ತಿವೆ. ಆದರೆ ಪ್ರಸ್ತುತದಲ್ಲಿರುವ ಸಲಕರಣೆಗಳು ದೂರದ ಹಳ್ಳಿಗಾಡಿನಲ್ಲಿ, ಬೆಟ್ಟದ ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ತಲುಪಲು ಸಾಲುತ್ತಿಲ್ಲ. ಜೊತೆಗೆ ಇವು ಹೆಚ್ಚಾಗಿ ಇಳುವರಿ ಹೆಚ್ಚಿಸುವಲ್ಲಿ ಗಮನಹರಿಸುತ್ತಿವೆ ಹೊರತು ಮಾರುಕಟ್ಟೆಯ ಅಂಶವನ್ನು ಕಡೆಗಣಿಸಿವೆ.

ಡಿಜಿಟಲ್‌ ಕೃಷಿಯು ರೈತರು ನೇರವಾಗಿ ಸೂಕ್ತ ಸಮಯದಲ್ಲಿ ಅಗತ್ಯ ಮಾಹಿತಿ ಪಡೆಯುವಂತೆ ಮಾಡಿದೆ. ಜೊತೆಗೆ ರೈತ ಸಮುದಾಯವು ತಿಳಿವಳಿಕೆಯನ್ನು ಹಂಚಿಕೊಳ್ಳುವಂತೆ ಮಾಡಿದೆ. ಹಿಂದೆ ಟಿವಿ ಮತ್ತು ರೇಡಿಯೊ ಗ್ರಾಮೀಣ ಸಮುದಾಯವನ್ನು ತಲುಪಲು ಮುಖ್ಯ ಎಲೆಕ್ಟ್ರಾನಿಕ್‌ ಮಾಧ್ಯಮವಾಗಿತ್ತು. ಕಳೆದ ಎರಡು ದಶಕಗಳಲ್ಲಿ ಅಂತರ್ಜಾಲ ಮತ್ತು ಮೊಬೈಲ್‌ ಆಧಾರಿತ ಚಾನೆಲ್‌ಗಳು ಹುಟ್ಟಿಕೊಂಡಿವೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ಕಂಪ್ಯೂಟರ್‌ ಆಧಾರಿತ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಸೋಶಿಯಲ್‌ ಮೀಡಿಯಾ, ಡಿಜಿಟಲ್‌ ಮಾಹಿತಿ (ಆನ್‌ಲೈನ್‌ ಅಥವ ಆಫ್‌ಲೈನ್‌) ಡಿಜಿಟಲ್‌ ಫೋಟೊಗ್ರಫಿ, ವಿಡಿಯೋ, ಮೊಬೈಲ್‌ ಫೋನುಗಳಂತಹ ಸಲಕರಣೆಗಳನ್ನು ಒಳಗೊಂಡಿದೆ.

ಮೊಬೈಲ್‌ ಫೋನು ಎಲ್ಲರ ಕೈಗೆಟುಕುವಂತಿರುವುದರಿಂದ, ಅದನ್ನು ಬಳಸಲು ಬೇಕಾಗುವ ಕೌಶಲ ಅತ್ಯಲ್ಪವಾದ್ದರಿಂದ, ನೆಟ್‌ವರ್ಕ್‌ ಸೌಲಭ್ಯ ಎಲ್ಲೆಡೆ ಇರುವುದರಿಂದ ಇತ್ಯಾದಿ ಕಾರಣಗಳಿಂದ ಸಣ್ಣ ರೈತರಿಗೆ ಇದು ಮುಖ್ಯವಾದ ಡಿಜಿಟಲ್‌ ಸಲಕರಣೆಯಾಗಿದೆ. ಮೊಬೈಲ್‌ ಮೂಲಕ ರೈತರಿಗೆ ತಿಳಿಸಬಹುದಾದ ಮಾಹಿತಿಗಳಿಗಾಗಿ ಹಲವು ವಿಧಾನಗಳನ್ನು ಬಳಸಲಾಗುತ್ತಿದೆ. ಇವುಗಳಲ್ಲಿ IKSL (IFFCO ಕಿಸಾನ್‌ ಸಂಚಾರ್‌ ಲಿ., ಏರ್‌ಟೆಲ್‌ ಸಹಯೋಗದೊಂದಿಗೆ), ಮಂಡಿಯಲ್ಲಿ ಮೊಬೈಲ್‌ (ಬಿಎಸ್‌ಎನ್‌ಎಲ್‌ ಮತ್ತು ಉತ್ತರ ಪ್ರದೇಶ ಮಾರುಕಟ್ಟೆ ಮಂಡಳಿ), ರಾಯಿಟರ್ಸ್‌ ಮಾರ್ಕೆಟ್‌ ಲೈಟ್‌, ನೋಕಿಯಾ ಲೈಫ್‌ ಟೂಲ್ಸ್‌ ಮತ್ತು mKRISHI ಸೇರಿದೆ.

ತಂತ್ರಜ್ಞಾನದ ಪ್ರಸಾರ ಮತ್ತು ಉತ್ತಮ ಅಳವಡಿಕೆಗಾಗಿ ಡಿಜಿಟಲ್‌ ಮತ್ತು ಡಿಜಿಟಲೇತರ ವಿಧಾನಗಳ ಅಗತ್ಯವಿದೆ.

ಫೋಟೊ : ಮಾಹಿತಿ ಸಂಗ್ರಹಣೆಯಲ್ಲಿ ನಿರತರಾದವರು

ಮಾಹಿತಿಗೆ ಮೌಲ್ಯಮಾಪನದ ಅಗತ್ಯತೆ

ಐಸಿಟಿ ಯೋಜನೆಗಳು ಮಾಹಿತಿ ನೀಡಲು ರೈತರು ಮತ್ತು ಸೂಕ್ತ ವಸ್ತುವಿನ ಅಗತ್ಯವಿರುತ್ತದೆ. ವಸ್ತುವನ್ನು ಎಷ್ಟರಮಟ್ಟಿಗೆ ರೈತರ ಅಗತ್ಯಕ್ಕೆ ತಕ್ಕಂತೆ, ಸ್ಥಳೀಯತೆಗೆ ತಕ್ಕಂತೆ ಹೊಂದಿಸಲಾಗಿದೆ ಎನ್ನುವುದರ ಮೇಲೆ ಅದರ ಪ್ರಸ್ತುತತೆಯಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಏನು ಬೇಕು ಎನ್ನುವುದನ್ನು ತಿಳಿಯಲು ಸರ್ವೇ ಕೈಗೊಳ್ಳಲಾಯಿತು.

ಈ ಸರ್ವೆಯನ್ನು ಡೆಹ್ರಾಡೂನಿನ ವಿಕಾಸನಗರ, ಕಲ್ಸಿ, ರಾಯ್ಪುರದ ೨೧ ಹಳ್ಳಿಗಳಲ್ಲಿ ೨೦೧೬-೧೭ರಲ್ಲಿ ನಡೆಸಲಾಯಿತು. ವಿವಿಧ ಹಳ್ಳಿಗಳ ಮುಖ್ಯವಾದ ಬೆಳೆಗಳ ಮಾಹಿತಿಯನ್ನು ಸಂಗ್ರಹಿಸಲಾಯಿತು. ಜೋಳ, ತೊಗರಿ, ರಾಗಿ, ಅಕ್ಕಿ, ಅಲಸಂದೆ ಇತ್ಯಾದಿಗಳು ಖಾರಿಫ್‌ನಲ್ಲಿ; ಗೋಧಿ, ಬಾರ್ಲಿ, ಕಡಲೆ, ಸಾಸಿವೆ ಇತ್ಯಾದಿಗಳು ರಾಬಿ ಋತುವಿನಲ್ಲಿ ಬೆಳೆಯುವ ಮುಖ್ಯಬೆಳೆಗಳು ಎಂದು ತಿಳಿಯಿತು. ಹಣ್ಣು ತರಕಾರಿಗಳಲ್ಲಿ ಮಾವು, ಸೀಬೆ, ಹಲಸು, ಲಿಚಿ, ನಿಂಬೆ, ಟೊಮೊಟೊ, ಶುಂಠಿ, ಕೆಸು, ಮೆಣಸಿನ ಕಾಯಿ, ಬಟಾಣಿ, ಅರಿಶಿಣ ಇತ್ಯಾದಿಗಳನ್ನು ರೈತರು ಮಳೆ ಬಿದ್ದ ಸಂದರ್ಭಗಳಲ್ಲಿ ಬೆಳೆಯುತ್ತಿದ್ದರು.

ಫೋಟೊ :  mKrishi PAWS ಆಪ್ ಸ್ಕ್ರೀನ್ಶಾಟ್

ರೈತರಿಗೆ ಇಲಾಖೆಗಳ ಸೇವೆಗಳ ಲಭ್ಯತೆ ಸೀಮಿತವಾಗಿತ್ತು ಎನ್ನುವುದು ಸರ್ವೆಯಿಂದ ತಿಳಿಯಿತು. ದಿನಪತ್ರಿಕೆ, ಟಿವಿ ಮತ್ತು ರೇಡಿಯೊ ಅವರ ಮಾಹಿತಿ ಮೂಲವಾಗಿತ್ತು.

ಸರ್ವೆಯಲ್ಲಿ ೮೫% ರೈತರು ಮೊಬೈಲ್‌ ಬಳಸುತ್ತಿರುವುದು ತಿಳಿದುಬಂತು. ಅವರು ಆಂಡ್ರಾಯ್ಡ್‌ ಮತ್ತು ಐವಿಆರ್‌ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ. ರೈತರಲ್ಲಿ ಬಹುತೇಕರು ಐವಿಆರ್‌ ಮಾದರಿಯ ಮೊಬೈಲುಗಳನ್ನು ಬಳಸುತ್ತಿದ್ದಾರೆ.

ಈ ಯೋಜನೆಯಡಿಯ ಪ್ರದೇಶದಲ್ಲಿ ಬಹುತೇಕ ರೈತರು ಬೆಳೆ ಸಂಬಂದಿ (ಧಾನ್ಯ, ಕಾಳುಗಳು) ಮಾಹಿತಿ ಮತ್ತು ಬೆಳೆ ಸುರಕ್ಷತೆಯ ಕುರಿತು ತಿಳಿಯಲು ಬಯಸುತ್ತಿದ್ದರು ಎನ್ನುವುದು ತಿಳಿದುಬಂದಿತು. ೮೩%ಗಿಂತ ಹೆಚ್ಚು ಮಂದಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯ ಕುರಿತು ತಿಳಿಯಲು ಆಸಕ್ತರಾಗಿದ್ದರು. ಅವರಲ್ಲಿ ೩/೪ರಷ್ಟು ಮಂದಿ ತೋಟಗಾರಿಕಾ ಬೆಳೆಗಳು, ಮಣ್ಣಿನ ಆರೋಗ್ಯ ಕುರಿತ ತಂತ್ರಜ್ಞಾನಗಳ ಬಗ್ಗೆ ಮಾಹಿತಿಗಾಗಿ ಬೇಡಿಕೆ ಇಟ್ಟಿದ್ದರು. ರೈತರಲ್ಲಿ ಶೇ.೫೦% ಮಂದಿ ಮಾರುಕಟ್ಟೆ, ಜಾನುವಾರು ಮತ್ತು ವಿವಿಧ ಕೃಷಿ ಅಭಿವೃದ್ಧಿ ಯೋಜನೆಗಳ ಕುರಿತು ತಿಳಿಯಲು ಬಯಸುತ್ತಿದ್ದರು. ಹವಾಮಾನ ಕುರಿತ ಮಾಹಿತಿಯ ಅವಶ್ಯಕತೆಯಿದೆ ಎನ್ನುವುದು ಮಾತುಕತೆಯ ಸಂದರ್ಭದಲ್ಲಿ ತಿಳಿದುಬಂದಿತು.

ಕೋಷ್ಟಕ : ಸರ್ವೀಸ್ಮ್ಯಾಟ್ರಿಕ್ಸ್‌ – ವಿವಿಧ ಬಗೆಯ ಬಳಕೆದಾರರು

ಕ್ರ. ಸಂ ಮಧ್ಯಸ್ಥಗಾರರು/ ಬಳಕೆದಾರರು ಮಾಧ್ಯಮ ಪ್ರಾಯೋಗಿಕ ಯೋಜನೆಗೆ ಲಭ್ಯವಿರುವ ಸೇವೆಗಳು
1 ಆಗ್ರೋ ಎಕ್ಸ್ಪರ್ಟ್ ವೆಬ್ಕನ್ಸೋಲ್ ವೆಬ್ಕನ್ಸೋಲ್ಸೇವೆಗಳು:1) ರೈತರ ನೋಂದಣಿ (ವೈಯುಕ್ತಿಕ ಮಾಹಿತಿ, ಭೂಮಿಯ ಮಾಹಿತಿ, ಬೆಳೆ ಮಾಹಿತಿ, ಮಣ್ಣಿನ ಮಾಹಿತಿ)

2) ಮಣ್ಣು ಮತ್ತು ನೀರು ನಿರ್ವಹಣೆಯ ಕ್ರಮಗಳು (ರೈತರ ಮೊಬೈಲ್‌ ಆಪ್‌ನಲ್ಲಿ ಆಡ್‌, ಡಿಲೀಟ್‌, ಡಿಜಿಟಲ್‌ ಡೇಟಾಬೇಸ್‌ನಲ್ಲಿ ಪ್ರಶ್ನಾವಳಿಯ ಬದಲಾವಣೆ)3) ಫೋಟೊ ಗ್ಯಾಲರಿ – (ಮೊಬೈಲ್‌ ಆಪ್‌ ಬಳಸುವ ರೈತರದು)4) ಸಲಹೆ : (ಸ್ಥಳೀಯ ಭಾಷೆಯಲ್ಲಿ ಮೊಬೈಲ್‌ ಆಪ್‌ ಮೂಲಕ ರೈತರಿಗೆ ಪ್ರಶ್ನೆ ಕೇಳುವ ಅವಕಾಶ)5) ಟೆಕ್ಸ್ಟ್‌ ಮತ್ತು ವಾಯ್ಸ್‌ ಅಲರ್ಟ್ಸ್‌6) ವರದಿಗಳು

2 ಮೊಬೈಲ್ಆಪ್ರೈತರು ಆಂಡ್ರಾಯ್ಡ್ಮೊಬೈಲ್ಆಪ್‌, ಜಾವ ಆಪ್‌ – (ಇಂಟರ್ನೆಟ್‌) ಮೊಬೈಲ್ಆಪ್ಲಕ್ಷಣಗಳು : 1) ಮೊಬೈಲ್‌ ಆಪ್‌ ಮೂಲಕ ಸಂದೇಹಗಳನ್ನು ರೆಕಾರ್ಡ್‌ ಮಾಡಿ ಕಳಿಸಬಹುದು. ಫೋಟೊ ತೆಗೆದು ಕಳಿಸಬಹುದು.2) ಹವಾಮಾನ ಮಾಹಿತಿ3) ಮಣ್ಣಿನ ಆರೋಗ್ಯ ಕಾರ್ಡ್‌ (ಮಣ್ಣಿನ ಪರೀಕ್ಷೆಯ ನಂತರ ಸೀಮಿತ ಸಂಖ್ಯೆಯ ರೈತರಿಗೆ ನೀಡಲಾದದ್ದು)4) ಪ್ರಶ್ನೆಗಳು ಮತ್ತು ಫೋಟೊ ಗ್ಯಾಲರಿ5) ಪ್ರತಿಕ್ರಿಯೆ
3 ಮೊಬೈಲ್ಆಪ್ಇಲ್ಲದ ರೈತರು ಸಾಮಾನ್ಯ ಮೊಬೈಲ್ಫೋನುಗಳು (ಇಂಟರ್ನೆಟ್ಇಲ್ಲದ್ದು) ಸಾಮಾನ್ಯ ಫೋನ್ಬಳಕೆದಾರರು: 1) ನಿಯಮಿತವಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಎಸ್‌ಎಂಎಸ್‌ಗಳನ್ನು ಕಳಿಸುವರು (ನಿರ್ದಿಷ್ಟ ಬೆಳೆಗೆ ಸಂಬಂಧಿಸಿದಂತೆ)2) ನಿಯಮಿತವಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತಂತೆ ವಾಯ್ಸ್‌ ಅಲರ್ಟ್‌ಗಳನ್ನು ಕಳಿಸುವರು (ನಿರ್ದಿಷ್ಟ ಬೆಳೆಗೆ ಸಂಬಂಧಿಸಿದಂತೆ

ಎಂಕೃಷಿ ಪಿಎಡಬ್ಲ್ಯೂವ್ಸ್

ಐಸಿಟಿಯು ಸರ್ವೆಯೊಂದಿಗೆ ಡೆಹ್ರಾಡೂನಿನಲ್ಲಿ ಪರ್ಸೊನಲೈಜ್ಡ್‌ ಅಡ್ವೈಸರಿ ಆನ್‌ ವಾಟರ್‌ ಅಂಡ್‌ ಸಾಯಿಲ್‌ (PAWS) ಇದನ್ನು ICAR-IISWCನಲ್ಲಿ ಅಭಿವೃದ್ಧಿ ಪಡಿಸಿದರು.  ಇದರಲ್ಲಿ ದೂರದ ಬೆಟ್ಟ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ರೈತರು, ಒಳಸುರಿಯುವಿಕೆ ಡೀಲರ್‌ಗಳು, ಕೆಲಸಗಾರರು ಮತ್ತು ಸಂಶೋಧಕರನ್ನು ಒಳಗೊಳ್ಳಲಾಯಿತು. ಇದನ್ನು ಮುಖ್ಯವಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ತಿಳಿವಳಿಕೆಯನ್ನು ಹಂಚಿಕೊಳ್ಳಲು ಅಭಿವೃದ್ಧಿಪಡಿಸಲಾಯಿತು. mKRISHI® PAWS ಇದನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಲಿಮಿಟೆಡ್‌ನವರ ತಾಂತ್ರಿಕ ಸಹಾಯದೊಂದಿಗೆ ಅಭಿವೃದ್ಧಿ ಪಡಿಸಲಾಯಿತು. ಕೃಷಿ, ಮಣ್ಣು, ನೀರಿನ ಸಂರಕ್ಷಣೆ  ಕುರಿತಾದ ಸಂದೇಶಗಳು/ಉತ್ತಮ ಪದ್ಧತಿಗಳನ್ನು ಹಿಮಾಲಯದ ವಾಯುವ್ಯ ಪ್ರದೇಶದಲ್ಲಿರುವ ರೈತರೊಂದಿಗೆ ಹಂಚಿಕೊಳ್ಳಲು ಇದನ್ನು ಬಳಸಲಾಯಿತು. ಒದಗಿಸಲಾದ ವಿವಿಧ ಸೇವೆಗಳು, ಅದಕ್ಕಾಗಿ ವಿವಿಧ ಮಧ್ಯಸ್ಥಗಾರರು ಬಳಸಿದ ವಿವಿಧ ವಿಧಾನಗಳನ್ನು ಕೋಷ್ಟಕ ೧ರಲ್ಲಿ ನೀಡಲಾಗಿದೆ.

ವಸ್ತು ಅಭಿವೃದ್ಧಿ

ವಸ್ತುವನ್ನು ಪ್ರಸ್ತುತದಲ್ಲಿರುವ ಕೃಷಿಪರಿಸರ ವ್ಯವಸ್ಥೆಯ ಆಧಾರದ ಮೇಲೆ ಅಭಿವೃದ್ಧಿ ಪಡಿಸಲಾಯಿತು. ಸಂದೇಶಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಸಂಸ್ಥೆಯ ಯೋಜನಾ ತಂಡಕ್ಕೆ ಕಳಿಸಲಾಯಿತು. ವಾರಕ್ಕೆ ಮೂರರಿಂದ ನಾಲ್ಕು ಸಂದೇಶಗಳನ್ನು ಋತು ಹಾಗೂ ಬೆಳೆ ಬೆಳೆಯಲಾಗುವ ವಿವಿಧ ಹಂತಕ್ಕೆ ತಕ್ಕಂತೆ ಕಳುಹಿಸಲಾಯಿತು. ವಾರವೊಂದಕ್ಕೆ ಒಟ್ಟಾರೆಯಾಗಿ ೧೩೬ ಸಂದೇಶಗಳನ್ನು ವಿವಿಧ ಕೃಷಿ ವಿಷಯಗಳಿಗೆ ಸಂಬಂಧಿಸಿದಂತೆ ನೋಂದಾಯಿತ ರೈತರು, ಮಧ್ಯಸ್ಥಗಾರರು, ಕಾರ್ಯಕರ್ತರು, ಒಳಸುರಿಯುವಿಕೆ ಡೀಲರ್‌ಗಳು, ಅಭಿವೃದ್ಧಿ ಸಂಸ್ಥೆಗಳಿಗೆ ಕಳುಹಿಸಲಾಯಿತು.

ವಸ್ತುವನ್ನು ವಿವಿಧ ಅಂಶ/ಥೀಮ್‌ಗಳ ಆಧಾರದ ಮೇಲೆ ವರ್ಗೀಕರಿಸಲಾಯಿತು. ಬೆಳೆ ಸಂರಕ್ಷಣೆ ಕುರಿತಂತೆ ೪೪ ಸಂದೇಶಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ಮೊಬೈಲ್‌ ಮೂಲಕ ಕಳುಹಿಸಲಾಯಿತು. ಬೆಳೆ ಉತ್ಪಾದನಾ ತಂತ್ರಜ್ಞಾನ (೩೫ ಸಂದೇಶಗಳು), ಮಣ್ಣು, ನೀರು ಸಂರಕ್ಷಣೆ (೨೧ ಸಂದೇಶಗಳು) ಕುರಿತಾದ ಸಂದೇಶಗಳನ್ನು ಕಳುಹಿಸಲಾಯಿತು.

ಬಳಕೆ ಮತ್ತು ತಲಪುವಿಕೆ

ಆಪ್‌ನ ಮೂಲಕ ನೀಡಿದ ಸೇವೆಯು ರೈತರ ವೈಯುಕ್ತಿಕ ಮಾಹಿತಿ, ಹಳ್ಳಿಗಳ ಭೌಗೋಳಿಕತೆ, ಬೆಳೆದ ಬೆಳೆಗಳು ಮಣ್ಣಿನ ಪರಿಸ್ಥಿತಿಗಳು, ರೈತರ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿತ್ತು. ರೈತರು ತಮ್ಮ ಮೊಬೈಲ್‌ ನಂಬರ್‌ ಮೂಲಕ ಈ ಆಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು.

ಆಂಡ್ರಾಯ್ಡ್‌ ಬಳಕೆದಾರರು ಮಾತ್ರ ನೋಂದಣಿ ಮಾಡಿಕೊಂಡಾಗ ಈ ಆಪ್‌ ಬಳಸಬಹುದು. ಐವಿಆರ್‌ ಬಳಕೆದಾರರು ಸಂದೇಶ ಮತ್ತು ಅಲರ್ಟ್‌ಗಳನ್ನು ಮಾತ್ರ ಪಡೆಯುವರು. ಅವರು ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತು (ನಿರ್ದಿಷ್ಟ ಬೆಳೆ) ನಿಯಮಿತವಾಗಿ ಸಂದೇಶಗಳನ್ನು ಮತ್ತು ವಾಯ್ಸ್‌ ಅಲರ್ಟ್‌ಗಳನ್ನು ಪಡೆಯುತ್ತಿದ್ದರು.

ರೈತರು ಪ್ರಶ್ನೆಗಳನ್ನು ಕೇಳಬಹುದು, ತೊಂದರೆಗೊಳಗಾದ ಬೆಳೆಯ ಚಿತ್ರ ಕಳಿಸಬಹುದು, ಆಡಿಯೋ ಸಂದೇಶಗಳನ್ನು mKRISHI®PAWS ಮೊಬೈಲ್‌ ಆಪ್‌ ಮೂಲಕ ಕಳುಹಿಸಬಹುದು. ಇದಕ್ಕೆ ಅಂತರ್ಜಾಲ ಪರಿಹಾರ ಸೇವೆಯ ಮೂಲಕ ಪರಿಣಿತರು ಉತ್ತರಿಸುತ್ತಾರೆ. ಜೊತೆಗೆ ವಾಯ್ಸ್‌ ಮತ್ತು ಟೆಕ್ಸ್ಟ್‌ ಅಲರ್ಟ್‌ಗಳನ್ನು ರೈತರೊಂದಿಗೆ ಹಂಚಿಕೊಳ್ಳಲಾಗುವುದು. ಈ ವೇದಿಕೆಯ ಮೂಲಕ ರೈತರು ಫೋಟೊ ಗ್ಯಾಲರಿ ನೋಡಬಹುದು, ಹವಾಮಾನ ಮಾಹಿತಿ, ಮಣ್ಣಿನ ಆರೋಗ್ಯ ಕಾರ್ಡ್‌ ಪಡೆಯಬಹುದು. ರೈತರು ತಮ್ಮ ಅನಿಸಿಕೆಗಳನ್ನು ಕಳುಹಿಸಬಹುದು, ಪ್ರತಿಕ್ರಿಯೆಗಳನ್ನು ಪಡೆಯಬಹುದು.

ಈ ಆಪ್‌ ಹಿಂದಿ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿದೆ. ಬಳಕೆದಾರರು mKRISHI PAWS ಆಪ್‌ ಅನ್ನು https://www.tcsmkrishi.com/app/mpaws/ ನಿಂದ ಡೌನ್ಲೋಡ್‌ ಮಾಡಿಕೊಳ್ಳಬಹುದು. ಪ್ರಸ್ತುತ ಗುಡ್ಡಗಾಡು ಪ್ರದೇಶದಲ್ಲಿನ ೪೦೦ಕ್ಕೂ ಹೆಚ್ಚು ರೈತರು ಈ ಆಪ್‌ ಡೌನ್ಲೋಡ್‌ ಮಾಡಿಕೊಂಡಿದ್ದಾರೆ.

ಪ್ರತಿಕ್ರಿಯೆ ಮತ್ತು ಪರಿಣಾಮ

ವಸ್ತುವಿನ ಅಗತ್ಯತೆ, ಸೂಕ್ತತೆ, ಸಾಧ್ಯತೆಗಳು, ಅರ್ಥಪೂರ್ಣತೆ, ಸಂದೇಶದ ಉದ್ದ ಹಾಗೂ ಗುಣಮಟ್ಟದಂತಹ ಮಾನದಂಡಗಳ ಆಧಾರದ ಮೇಲೆ ಸಂದೇಶಗಳನ್ನು ವಿಶ್ಲೇಷಿಸಲಾಗುವುದು. ತಾಂತ್ರಿಕ ಪದಗಳನ್ನು ಕಳುಹಿಸಿ ಅವು ರೈತರಿಗೆ ಅರ್ಥವಾಗುತ್ತಿದೆಯೇ ಎನ್ನುವುದನ್ನು ೨೪೦ ರೈತರೊಂದಿಗೆ ಮಾತಾಡುವ ಮೂಲಕ ಖಚಿತಪಡಿಸಿ ಕೊಳ್ಳಲಾಯಿತು. ಅವರಲ್ಲಿ ೮೫% ರೈತರು ಸಂದೇಶಗಳು ತಮ್ಮ ಅಗತ್ಯತೆಗೆ ಸೂಕ್ತವಾಗಿದೆ ಎಂದು ಹೇಳಿದರು. ಬಹುತೇಕರು (೭೭.೫೦%) ಸಂದೇಶಗಳು ತಮ್ಮ ಜಮೀನಿನ ಅಗತ್ಯತೆಗೆ ತಕ್ಕಂತಿದ್ದು ಸುಲಭವಾಗಿ ಅರ್ಥವಾಗುತ್ತವೆ ಎಂದು ಹೇಳಿದರು. ಸಂದೇಶಗಳಲ್ಲಿ ತಾಂತ್ರಿಕ ಪದಗಳನ್ನು ಸರಳವಾಗಿ ಬಳಸಲಾಗಿದ್ದು ಉತ್ತಮ ಗುಣಮಟ್ಟದ್ದಾಗಿದ್ದವು.

mKRISHI® PAWS ಸೇವೆಗಳ ಪರಿಣಾಮವನ್ನು ರೈತರ ಹೊಲಗಳಲ್ಲಿ ತಂತ್ರಜ್ಞಾನದ ಬಳಕೆಯನ್ನಾಧರಿಸಿ ವಿಶ್ಲೇಷಿಸಲಾಯಿತು. ಇದಕ್ಕಾಗಿ ಎರಡು ಬೇರೆ ಬೇರೆ ಪ್ರದೇಶಗಳಲ್ಲಿನ ಭಿನ್ನ ಮಾಹಿತಿಗಳನ್ನು ಪಡೆಯುತ್ತಿದ್ದ ರೈತರನ್ನು ಹೋಲಿಸಲಾಯಿತು. ಡೆಹ್ರಾಡೂನ್‌ನ ಕಲ್ಸಿಯ ರೈತರಿಗೆ ಕೇವಲ ಟೆಕ್ಸ್ಟ್‌ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ರಾಯ್ಪುರದ ರೈತರಿಗೆ ಸಾಮರ್ಥ್ಯ ವೃದ್ಧಿಯ ವಿವಿಧ ವಿಧಾನಗಳನ್ನು ಟೆಕ್ಸ್ಟ್‌ ಸಂದೇಶದೊಂದಿಗೆ ಕಳುಹಿಸಲಾಯಿತು.

ಡೆಹ್ರಾಡೂನಿನ ಕಲ್ಸಿ ಹಳ್ಳಿಯಲ್ಲಿ ಬೆಳೆ ಸಂರಕ್ಷಣಾ ಕ್ರಮಗಳ ಕುರಿತು ಟೆಕ್ಸ್ಟ್‌ ಸಂದೇಶಗಳನ್ನು ರೈತರಿಗೆ ಕಳುಹಿಸಲಾಗುತ್ತಿತ್ತು. ಅವರಲ್ಲಿ ೪೫% ಮಂದಿ ಇದನ್ನು ಅಳವಡಿಸಿಕೊಂಡಿದ್ದು ಕಂಡುಬಂದಿತು. ೨೫% ರೈತರು ಮಣ್ಣಿನ ಪೌಷ್ಟಿಕತೆ ಕುರಿತ ಮಾಹಿತಿ ಅನುಸರಿಸಿದರೆ ೨೦% ರೈತರು ಕೃಷಿಆರ್ಥಿಕ ಪದ್ಧತಿಗಳನ್ನು ಅನುಸರಿಸಿದರು. ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತಾದ ಎನ್‌ಆರ್‌ಎಂ ತಂತ್ರಜ್ಞಾನಗಳನ್ನು ಕಡಿಮೆ ಮಂದಿ ಅಂದರೆ ೧೦% ಮಂದಿ ಮಾತ್ರ ಅನುಸರಿಸಿದರು.

ರಾಯ್ಪುರದಲ್ಲಿ ಟೆಕ್ಸ್ಟ್‌ ಸಂದೇಶಗಳ ಜೊತೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಕ್ಷೇತ್ರ ಭೇಟಿ, ಸಭೆಗಳು, ಗುಂಪು ಚರ್ಚೆಗಳು, ತರಬೇತಿಗಳನ್ನು ಆಯೋಜಿಸಲಾಗಿತ್ತು. ಇಲ್ಲಿನ ಫಲಿತಾಂಶ ಉತ್ತೇಜನಕಾರಿಯಾಗಿತ್ತು. ೯೧%ಗಿಂತ ಹೆಚ್ಚು ರೈತರು ಬೆಳೆ ಸಂರಕ್ಷಣೆ ತಂತ್ರಜ್ಞಾನ, ೮೩% ಮಂದಿ ಹವಾಮಾನ ಮಾಹಿತಿ, ೬೬% ಮಣ್ಣು ಪೌಷ್ಟಿಕತೆ ಮಾಹಿತಿ ಮತ್ತು ೪೫% ಇತ್ತೀಚಿನ ಕೃಷಿಆರ್ಥಿಕ ಪದ್ಧತಿಗಳನ್ನು ತಮ್ಮ ತೋಟಗಳಲ್ಲಿ ಅಳವಡಿಸಿಕೊಂಡರು.

ಡಿಜಿಟಲ್‌ ಸಲಕರಣೆಗಳು ಹೆಚ್ಚು ಮಂದಿಗೆ ಮಾಹಿತಿ ತಲುಪಿಸಲು ಸಹಕಾರಿ ಎನ್ನುವುದು ಅಧ್ಯಯನಗಳಲ್ಲಿ ತಿಳಿದುಬಂದಿತು. ಆದರೂ ಇದು ಹೆಚ್ಚಾಗಿ ತಲುಪಿದ್ದು ಶಿಕ್ಷಿತ ಹಾಗೂ ಸಂಪನ್ಮೂಲಗಳ ಅರಿವಿದ್ದ ರೈತರಿಗೆ. ಇಂತಹ ವಿಷಯಗಳ ಕುರಿತು ಅರಿವಿಲ್ಲದ ರೈತರಿಗೆ ಕೃಷಿ ಮತ್ತು ಗ್ರಾಮೀಣ ಹೊಸ ಅನ್ವೇಷಣೆಗಳ ಕುರಿತು ತಾಂತ್ರಿಕ ಮಾರ್ಗದರ್ಶನ, ಈ ಕುರಿತ ತಿಳುವಳಿಕೆ, ಪ್ರೋತ್ಸಾಹ, ತರಬೇತಿ ಮತ್ತಿತರ ಸಹಕಾರವನ್ನು ನಿಯಮಿತವಾಗಿ ನೀಡಬೇಕಾಯಿತು. ತಂತ್ರಜ್ಞಾನ ಮತ್ತು ಪದ್ಧತಿಗಳನ್ನು ಕೇವಲ ಸಂದೇಶಗಳಲ್ಲಿ ವಿವರಿಸುವುದು ಸಾಧ್ಯವಿಲ್ಲ. ಹಾಗಾಗಿ ಡಿಜಿಟಲ್‌ ಹಾಗೂ ನೇರ ಪ್ರಾತ್ಯಕ್ಷಿಕೆ ಎರಡೂ ತಂತ್ರಜ್ಞಾನದ ಪ್ರಸರಣ ಮತ್ತು ಅಳವಡಿಕೆಗೆ ಅತ್ಯಗತ್ಯ.

ಬಂಕಿ ಬಿಹಾರಿ, ರಾಜೇಶ್ಬಿಷ್ಣೋಯ್‌, ಲಖನ್ಸಿಂಗ್ ಮತ್ತು ಸುರೇಶ್ಕುಮಾರ್


Bankey Bihari

Principal Scientist (Agricultural Extension) and I/c

Head (HRD&SS),

E-mail: biharibankey_bankey@yahoo.co.in

Rajesh Bishnoi

Scientist (Agricultural Extension),

E-mail: rajesh3017@gmail.com

Shri Suresh Kumar

ACTO (Agricultural Extension)

ICAR-IISWC, Dehradun

E-mail: sureshiiswc@gmail.com

Lakhan Singh

Director,

ICAR-Agricultural Technology Application Research

Institute (ATARI) (Zone-VIII), Pune, Maharashtra.

E-mail: lakhanextn@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್‌ ೨೦‌೨೦

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp