ಹರಿಯಾಣದ ತೋಟಗಾರಿಕೆ ಇಲಾಖೆ ಮತ್ತು ಸೋರ್ಸ್ ಟ್ರೇಸ್ ಡಿಜಿಟಲ್ ವೇದಿಕೆಯವರು ಒಗ್ಗೂಡಿ ಉತ್ಪಾದಕರು ಮತ್ತು ಕೊಳ್ಳುವವರನ್ನು ಒಂದು ವೇದಿಕೆಯಡಿ ತಂದರು. ಇದು ರೈತ ಉತ್ಪಾದಕರ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡಿದೆ. ಅವರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟು ಬೆಳೆಗಾರರಿಗೆ ಹೆಚ್ಚಿನ ಆದಾಯವನ್ನು ತಂದುಕೊಡಬಹುದಾಗಿದೆ.
ತೋಟಗಾರಿಕೆಯು ರೈತರ ಆರ್ಥಿಕ ಪರಿಸ್ಥಿಯನ್ನು ಸುಧಾರಿಸುವುದರೊಂದಿಗೆ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಿದೆ. ಅಣಬೆ ಕೃಷಿ, ಸ್ಟ್ರಾಬೆರಿ ಕುಯ್ಯುವಿಕೆ, ಹೂ ಬೇಸಾಯ, ತರಕಾರಿ ಬೀಜ ಉತ್ಪಾದನೆಯಂತಹುವುಗಳಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಹೆಚ್ಚಿಸಿದೆ. ಇದು ದೇಶದ ಜಿಡಿಪಿಯ ಒಟ್ಟಾರೆ ೮.೫ ಕೃಷಿಯೋಗ್ಯ ಭೂಮಿಯಲ್ಲಿ ೨೪.೫%ನಷ್ಟಿದೆ. ಭಾರತವು ಹಣ್ಣು ಮತ್ತು ತರಕಾರಿ ಬೆಳೆಯ ಉತ್ಪಾದನೆ, ರಫ್ತು ಎರಡರಲ್ಲೂ ಅತಿದೊಡ್ಡದು.
ಕೃಷಿ ಉದ್ಯಮದಲ್ಲಿ ತೊಡಗಿಕೊಂಡಿರುವ ಸಣ್ಣ ರೈತರು ಎದುರಿಸುವ ಸವಾಲುಗಳು ಹಲವು. ತೋಟಗಾರಿಕೆಯ ಉತ್ಪನ್ನಗಳು ಸೂಕ್ಷ್ಮವಾಗಿದ್ದು ಉತ್ಪನ್ನಗಳ ತಾಜಾತನವನ್ನು ಕಾಪಾಡಿಕೊಳ್ಳುವುದು, ವೇರ್‌ಹೌಸುಗಳಿಗೆ ಅವುಗಳನ್ನು ಸಾಗಿಸುವುದು ಇಲ್ಲವೇ ಅವುಗಳ ಕೊಳ್ಳುವವರಿಗೆ ಸೂಕ್ತ ಬೆಲೆಗೆ ಮತ್ತು ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರಾಟ ಮಾಡುವ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಬೆಳೆಗಳ ಸಾಗಾಣಿಕೆ
ಸಾಂಕ್ರಾಮಿಕ ಪಿಡುಗು ತರಕಾರಿ, ಹಣ್ಣಿನ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಉತ್ಪನ್ನಗಳು ಹಾಳಾದ ಹಾಗೂ ಕೊಳೆತ ಕುರಿತ ಸುದ್ದಿಗಳು ಬರುತ್ತಲೇ ಇವೆ. ಸಾಗಾಣಿಕೆಯ ಕೊಂಡಿಯಲ್ಲುಂಟಾದ ವ್ಯತ್ಯಯದಿಂದ ಹೀಗಾಗಿರಬಹುದು. ಕೈಗಾರಿಕಾ ಮೂಲಗಳ ಪ್ರಕಾರ ತರಕಾರಿ ಬೀಜಗಳ ಮಾರಾಟವು ೨೦-೩೦% ತಗ್ಗಿದೆ. ಬೆಳೆಗಾರರು ಸಾರಿಗೆ, ತರಕಾರಿ ಮಾರಾಟ, ಸಲಕರಣೆಗಳ ಕೊರತೆ, ಕೊಯ್ಲಿಗೆ ಕೂಲಿಯಾಳುಗಳ ಸಮಸ್ಯೆ ಮೊದಲಾದವುಗಳನ್ನು ಎದುರಿಸುತ್ತಿದ್ದು ಧಾನ್ಯಗಳ ಕೃಷಿಯತ್ತ ಮುಖಮಾಡುತ್ತಿದ್ದಾರೆ.
ನ್ಯಾಷನಲ್ ಸೀಡ್ ಅಸೋಸಿಯೇಷನ್ ಆಫ್ ಇಂಡಿಯಾದವರು (NSAI) ಹೇಳುವಂತೆ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ತರಕಾರಿ ಬೆಳೆಯುವುದನ್ನು ಬಿಟ್ಟು ಜೋಳವನ್ನು ಬೆಳೆಯಲಾರಂಭಿಸಿದ್ದಾರೆ. ಟೊಮೊಟೊ, ಬೆಂಡೆಕಾಯಿ, ಕುಂಬಳಕಾಯಿ, ಸೋರೆಕಾಯಿಗಳು ಕಡಿಮೆಯಾಗಬಹುದು ಎಂದು NSAIನವರು ಹೇಳಿದ್ದಾರೆ. ಭಾರತದಾದ್ಯಂತ ಹೂಕೋಸಿನ ಬೆಳೆ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ. ಮತ್ತೊಂದೆಡೆ ಇದಕ್ಕೆ ತದ್ವಿರುದ್ಧವಾಗಿ ಮಧ್ಯಪ್ರದೇಶದಲ್ಲಿ ಈರುಳ್ಳಿ ಫಸಲು ಚೆನ್ನಾಗಿ ಬರುತ್ತಿರುವುದರಿಂದ ಇದರ ಇಳುವರಿ ಹೆಚ್ಚಾಗಬಹುದು.
ಭಾರತೀಯ ತರಕಾರಿ ಬೆಳೆಗಾರರ ಸಂಘ(VGAI)ದ ಪ್ರಕಾರ ಲಾಕ್‌ಡೌನ್ ಸಮಯದಲ್ಲಿ ಎಪಿಎಂಸಿಗಳನ್ನು ಮುಚ್ಚಿದ್ದು ಸೇರಿದಂತೆ ತರಕಾರಿ,ಹಣ್ಣು ಬೆಳೆಗಾರರು ಬಹಳ ನಷ್ಟವನ್ನು ಅನುಭವಿಸಿದರು. ಇದರಿಂದಾಗಿ ತರಕಾರಿ, ಹಣ್ಣಿನ ಕೃಷಿಗೆ ಅಂಟಿಕೊಂಡಿರುವುದನ್ನು ಇಷ್ಟಪಡುತ್ತಿಲ್ಲ. ಅವರಲ್ಲಿ ಬಹಳಷ್ಟು ಮಂದಿ ಕಬ್ಬು ಬೆಳೆಯಲು ಮುಂದಾಗಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಮಹಾರಾಷ್ಟ್ರದ ಸುಮಾರು ಮಂದಿ ಸಣ್ಣ ರೈತರು ಹೌಸಿಂಗ್ ಸೊಸೈಟಿಗಳು ಹಾಗೂ ರೈತ ಗುಂಪುಗಳೊಡನೆ ಕೈಜೋಡಿಸಿದರು. ಹೌಸಿಂಗ್ ಕಾಂಪ್ಲೆಕ್ಸ್‌ಗಳಿಗೆ ತಾಜಾ ತರಕಾರಿ, ಹಣ್ಣುಗಳನ್ನು ಮನೆಬಾಗಿಲಿಗೆ ತಲುಪಿಸಲು ಮುಂದಾದರು. ಸಹಜವಾಗಿಯೇ ಇದರಿಂದ ಬೆಳೆಗಾರರಿಗೆ ಹೆಚ್ಚಿನ ಆದಾಯ ಸಿಕ್ಕಿತು. ಗ್ರಾಹಕರಿಗೆ ಉತ್ತಮ ಉತ್ಪನ್ನ ದೊರಕಿತು. ಆದರೆ ಈ ಪ್ರಯೋಗಗಳು ನಗರಕ್ಕೆ ಹತ್ತಿರವಿದ್ದ ಹಳ್ಳಿಗಳಿಗೆ ಸೀಮಿತವಾಯಿತು.
ಹಣ್ಣು ಮತ್ತು ತರಕಾರಿ ಉದ್ಯಮದಲ್ಲಿ ಪ್ರಸ್ತುತದಲ್ಲಿರುವ ಕೃಷಿ ತಂತ್ರಜ್ಞಾನಗಳು
ತೋಟಗಾರಿಕೆಯಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಪ್ರಾಥಮಿಕವಾಗಿ ಮೂರು ರೀತಿಯಲ್ಲಿ ಅಳವಡಿಸಲಾಯಿತು ; ತೋಟಗಳ ಡಿಜಿಟಲೀಕರಣ ಮಾಡುವ ಮೂಲಕ ರೈತರಿಗೆ ತಮ್ಮ ತೋಟದ ಉತ್ಪಾದನೆ, ಕೀಟ ನಿಯಂತ್ರಣ, ದಾಸ್ತಾನು ನಿರ್ವಹಣೆ ಮತ್ತು ಟ್ಯಾಕಿಂಗ್ ಮಾಡಲು ಅನುಕೂಲವಾಯಿತು. ಎರಡನೆಯದಾಗಿ ಬೆಳೆಗಾರರಿಗೆ ತಂತ್ರಜ್ಞಾನದ ಕಾರಣದಿಂದ ಹವಾಮಾನ ಮುನ್ಸೂಚನೆಯ ಮಾಹಿತಿಗಳು ಸಿಗುತ್ತಿರುವುದರಿಂದ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಲು ಸಹಾಯಕವಾಗಿದೆ. ಮಣ್ಣು, ಹವಾಮಾನ ಮತ್ತು ಬೆಳೆಯ ವಿಷಯದಲ್ಲಿ ಈ ತಂತ್ರಜ್ಞಾನದ ಮಾಹಿತಿಗಳು ನೆರವಾಗುತ್ತಿವೆ. ಮೂರನೆಯದಾಗಿ, ಅಗ್ರಿ ಮಾರ್ಕೆಟ್. ಇದು ಮುಖ್ಯವಾಗಿ ಬೆಲೆ ಕುರಿತ ಸೂಚನೆ, ಕೃಷಿ ವಾರ್ತೆ, ಸಾಧ್ಯವಿದ್ದಲ್ಲಿ ಸರ್ಕಾರಿ ಮಂಡಿಗಳ ಬೆಲೆಯನ್ನು ಸ್ಥಳೀಯ ಭಾಷೆಗಳಲ್ಲಿ ತಿಳಿಸುತ್ತದೆ. ರೈತರು ಹಾಗೂ ಮಾರಾಟಗಾರರ ನಡುವೆ ಸಂಪರ್ಕದ ಕೊಂಡಿಯಾಗಿ ಚರ್ಚೆಯ ಮೂಲಕ ಬೆಲೆ ನಿಗದಿ ಮಾಡಲು ಅನುಕೂಲ ಕಲ್ಪಿಸುತ್ತದೆ.
ಇದರಿಂದಾಗಿ (ನೀರು, ಶಕ್ತಿ, ರಸಗೊಬ್ಬರ, ಕೀಟನಾಶಕ) ವೆಚ್ಚ ಉಳಿತಾಯವಾಗುತ್ತದೆ. ಉತ್ಪನ್ನಗಳ ನಷ್ಟ ತಪ್ಪಿಸುತ್ತದೆ (ಹವಾಮಾನ ಮುನ್ಸೂಚನೆ, ಕೊಯ್ಲಿನ ಸೂಕ್ತ ಸಮಯ). ದೈನಂದಿನ ತೋಟದ ಕೆಲಸಗಳನ್ನು ಸರಳಗೊಳಿಸುತ್ತದೆ. ಜೊತೆಗೆ ಹೆಚ್ಚು ಇಳುವರಿ ಪಡೆಯಲು ಸೂಕ್ತ ಸಮಯದಲ್ಲಿ ಸೂಕ್ತ ಸೂಚನೆಗಳನ್ನು ನೀಡುತ್ತದೆ.
ರೈತರನ್ನು ಡಿಜಿಟಲ್ ಮೂಲಕ ಒಗ್ಗೂಡಿಸುವುದು
ಸಣ್ಣ ರೈತರ ಕೃಷಿ ವ್ಯವಹಾರ ಒಕ್ಕೂಟ ಮತ್ತು ಹರಿಯಾಣ ತೋಟಗಾರಿಕೆ ಇಲಾಖೆಯು ಹಣ್ಣು, ತರಕಾರಿ ಬೆಳೆಗಾರರಿಗೆ ಸೋರ್ಸ್ ಟ್ರೇಸ್ ಮೂಲಕ ಡಿಜಿಟಲ್ ಪರಿಹಾರಗಳನ್ನು ಒದಗಿಸಿತು. ಹರಿಯಾಣ ತೋಟಗಾರಿಕೆ ಇಲಾಖೆಯು ರೈತರು ಮತ್ತು ಕೃಷಿ ಆಧಾರಿತ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗುವಂತಹ ವ್ಯವಸ್ಥೆ ರೂಪಿಸಲು ಬದ್ಧವಾಗಿದೆ. ಈ ಸಂಸ್ಥೆಗಳು ರಾಜ್ಯದ ರೈತರು ಮತ್ತು ಎಫ್‌ಪಿಒಗಳ ಬದುಕನ್ನು ಹಸನುಗೊಳಿಸಲು ಸಹಕಾರಿಯಾಗುವಂತಹ ವ್ಯವಸ್ಥೆ ರೂಪಿಸಲು ಐಟಿಯಲ್ಲಿ ಎದುರಾಗುವ ಸವಾಲುಗಳನ್ನು ನಿವಾರಿಸಲು ಸಜ್ಜಾಗಬೇಕಾದ ತುರ್ತನ್ನು ಮನಗಂಡಿದೆ. ಈ ಯೋಜನೆಯು ೧೦೦,೦೦೦ ರೈತರು ಮತ್ತು ಅವರ ತೋಟದ ವಿವರಗಳನ್ನು ಡಿಜಿಟಲೀಕರಣಕ್ಕೆ ಒಳಪಡಿಸಲಿದೆ.
SFACHನ ನಿರ್ದೇಶಕರಾದ ಡಾ. ಅರ್ಜುನ್ ಸಿಂಗ್ ಸಯಾನಿ ಅವರು ʼಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸುವ ಮೂಲಕ ಕೃಷಿ ಸಮುದಾಯವನ್ನು ಸಶಕ್ತರನ್ನಾಗಿಸುವುದು ನಮ್ಮ ಗುರಿ. ಪ್ರತಿ ರೈತ ಮತ್ತು ಎಫ್ಪಿಒನ ಸದಸ್ಯ ಸೋರ್ಸ್ ಟ್ರೇಸ್ನಂತಹ ವೇದಿಕೆಯ ಲಾಭ ಪಡೆಯುವಂತಾಗಬೇಕು. ಅವರಿಗೆ ತೋಟಗಾರಿಕಾ ಸೇವೆ ಸುಲಭವಾಗಿ ಲಭ್ಯವಾಗಬೇಕು. ಆಮೂಲಕ ರಾಜ್ಯದ ರೈತರ ಬದುಕು ಉತ್ತಮಗೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶʼ ಎಂದು ಹೇಳುತ್ತಾರೆ.
ಡಿಜಿಟಲ್ ವೇದಿಕೆಯು ದಲ್ಲಾಳಿಗಳ ಹಾವಳಿ ತಪ್ಪಿಸುವುದರೊಂದಿಗೆ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಿತು.
ಉತ್ತಮ ಇಳುವರಿಯ ಲಾಭ ಪಡೆಯಲು ಹರಿಯಾಣ ತೋಟಗಾರಿಕಾ ಇಲಾಖೆ ಮತ್ತು ಸೋರ್ಸ್ ಟ್ರೇಸ್ ಡಿಜಿಟಲ್ ಪ್ಲಾಟ್‌ಫಾರಂನವರು ಒಂದಾಗಿ ಮಾರುಕಟ್ಟೆ ಸಂಪರ್ಕವನ್ನು ಬೆಸೆದು ಉತ್ಪಾದಕರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯಡಿ ತಂದರು. ಇದರಿಂದ ಗ್ರಾಹಕರು ತಾಜಾ ಉತ್ಪನ್ನಗಳನ್ನು ನೇರವಾಗಿ ಎಫ್‌ಪಿಒಗಳು ಮತ್ತು ರೈತರಿಂದ ಪಡೆಯಬಹುದಾಗಿದೆ. ಇಲಾಖೆಯು ಕೊಳ್ಳುವವರನ್ನು (ರಫ್ತು ವ್ಯಾಪಾರಿಗಳು, ಮಂಡಿ ಗ್ರಾಹಕರು, ಸ್ಥಳೀಯ ಸಗಟು ಖರೀದಿದಾರರು) ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಉತ್ತೇಜಿಸುತ್ತದೆ. ನಂತರ ಜಿಲ್ಲೆ, ವೆರೈಟಿ, ಗ್ರೇಡ್ ಮತ್ತು ಎಫ್‌ಪಿಒ ಹೀಗೆ ಫಿಲ್ಟರ್‌ಗಳನ್ನು ಬಳಸಿ ಉತ್ಪನ್ನಗಳನ್ನು ನೋಡಲು ಅವಕಾಶ ಕಲ್ಪಿಸುತ್ತದೆ. ಬೆಳೆಗಾರರ ಡಿಜಿಟಲೀಕರಣಗೊಂಡ ಮಾಹಿತಿಯು ಉತ್ಪನ್ನದ ಪ್ರಮಾಣ ಎಷ್ಟಿದೆ ಎನ್ನುವುದನ್ನು ತೋರಿಸುವುದರೊಂದಿಗೆ ಅವರ ಸಂಪರ್ಕದ ವಿವರಗಳನ್ನು ಒದಗಿಸುತ್ತದೆ. ಇದರಿಂದ ಕೊಳ್ಳುವ ಪ್ರಕ್ರಿಯೆಯು ಬೇಗ ಮುಗಿಯುತ್ತದೆ.
ಮೊದಲಿಗೆ ಕೀಟ ನಿರ್ವಹಣೆ ಮತ್ತು ರೋಗಭಾದೆ ಇವುಗಳ ಕುರಿತು ಪರಿಣತರಿಂದ ರೈತರಿಗೆ ಮೊಬೈಲ್ ಅಪ್ಲೀಕೇಶನ್ ಮೂಲಕ ಸಲಹೆಯನ್ನು ಒದಗಿಸಲಾಗುತ್ತದೆ. ಈ ಮೊಬೈಲ್ ಸೇವೆಯನ್ನು ಬಳಕೆದಾರರ ಸ್ನೇಹಿಯಾಗಿಸುವ ಸಲುವಾಗಿ ಸರಳವಾಗಿ ರೂಪಿಸಲಾಗಿದೆ. ಯಾವಾಗ ಬೇಕೋ ಆವಾಗ ಸಂಪರ್ಕಿಸಲು ಅನುಕೂಲವಾಗುವಂತೆ, ಸ್ಥಳೀಯ ಭಾಷೆಯಲ್ಲಿಯೂ ಸೇವೆ ಲಭ್ಯವಾಗುವಂತೆ, ಪರಿಣತರನ್ನು ಶೀಘ್ರವಾಗಿ ಸಂಪರ್ಕಿಸಲು ಸಹಕಾರಿಯಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಸರಳವಾದ ನೋಂದಣಿ ಪ್ರಕ್ರಿಯೆಯ ಮೂಲಕ ರೈತರು ಕೀಟ ಮತ್ತು ರೋಗ ಸಂಬಂಧಿ ಮೆನುವನ್ನು ಪಡೆಯಬಹುದು. ಭಾರತೀಯ ಕೃಷಿ ಸಂಶೋಧನ ಮಂಡಳಿಯ ಒಪ್ಪಿಗೆ ಹಾಗೂ ಸಹಯೋಗದೊಂದಿಗೆ ಪ್ರಮುಖ ಕೀಟಗಳು ಮತ್ತು ರೋಗಗಳ ಚಿತ್ರಗಳನ್ನು ಇದರಲ್ಲಿ ಮೊದಲೇ ಹಾಕಲಾಗಿದೆ. ಬಳಕೆದಾರರು ಹೆಚ್ಚು ಪರಿಶ್ರಮವಿಲ್ಲದೆ ತಮ್ಮ ತೋಟದಲ್ಲಿನ ಕೀಟ/ರೋಗಗಳನ್ನು ಗುರುತಿಸಿ ಅದಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯನ್ನು ಪಡೆಯಬಹುದಾಗಿದೆ. ಇಲ್ಲವೇ ರೈತರು ರೋಗ ಪೀಡಿತ ಗಿಡದ ಫೋಟೊ ತೆಗೆದು ಅದನ್ನು ಅಪ್ಲೋಡ್ ಮಾಡಿ ತಮ್ಮ ಸಂದೇಹಗಳನ್ನು ಅದರೊಂದಿಗೆ ಕಾಮೆಂಟಿನಲ್ಲಿ ಕಳಿಸಬಹುದು. ಈ ಮಾಹಿತಿಯು ಕೃಷಿ ಇಲಾಖೆಯ ವಿಜ್ಞಾನಿ ಇಲ್ಲವೇ ಪರಿಣತರಿಗೆ ತಲುಪುತ್ತದೆ. ಅವರು ಆ ಸಮಸ್ಯೆಗೆ ಸಲಹೆಯನ್ನು ರೈತರಿಗೆ ಸಂದೇಶದ ಮೂಲಕ ಕಳುಹಿಸುವರು.

ಸೋರ್ಸ್ ಟ್ರೇಸ್ ಡಿಜಿಟಲಿಕರಣದಿಂದ ಸಬಲಗೊಂಡಿರುವ ರೈತ
ಎರಡನೆಯದಾಗಿ ಡಿಜಿಟಲ್ ವೇದಿಕೆಯು ರೈತರನ್ನು ಹರಿಯಾಣದಲ್ಲಿನ ಎಫ್‌ಪಿಒಗಳು ಮತ್ತು ಸಂಬಂಧಿಸಿದ ಗುಂಪುಗಳೊಂದಿಗೆ (೪೫೬ ಗುಂಪುಗಳು ಭಾಗವಹಿಸಿದ್ದವು) ಬೆಸೆಯುತ್ತದೆ. ಇದು ಇಲಾಖೆಗೆ ಗುಂಪುಗಳು/ಎಫ್‌ಪಿಒಗಳು/ರೈತರ ಚಿತ್ರಣವನ್ನು ಒದಗಿಸುತ್ತದೆ. ಇದು ಆ ಹೊತಿನ ಬೆಳೆ, ಉತ್ಪಾದನೆ, ಒಳಸುರಿಯುವಿಕೆಗಳ ಸಿಂಪಡಣೆ, ಯೋಜನೆಗಳನ್ನು ಕುರಿತಾದ ವಿವರಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮದಿಂದ ತೋಟಗಾರಿಕಾ ಇಲಾಖೆಯು ಸರ್ಕಾರದ ಯೋಜನೆಗಳು, ಬೀಜಗಳ ಕುರಿತಾದ ಮಾಹಿತಿ, ಲಾಭಗಳು ಮತ್ತು ಸಲಹೆಗಳನ್ನು ಆಪ್ ಮೂಲಕ ರೈತರಿಗೆ ತಲುಪಿಸಬಹುದಾಗಿದೆ.
ಕಡೆಯದಾಗಿ ಈ ಪರಿಹಾರವು ಎಫ್‌ಪಿಒಗಳು ತಮ್ಮ ಸದಸ್ಯ ರೈತರ ಇಳುವರಿಯ ಲೆಕ್ಕ ಹಾಕಿ ಅದನ್ನು ಗ್ರಾಹಕರಿಗೆ ಮಾರಟ ಮಾಡಲು ಅನುವುಮಾಡಿಕೊಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳು ಲಭ್ಯವಿರುವುದರಿಂದ ಎಫ್‌ಪಿಒ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಬೇಡಿಕೆ ಇಡಬಹುದು. ಇದರಿಂದ ಬೆಳೆಗಾರರಿಗೆ ಉತ್ತಮ ಆದಾಯ ಒದಗಿಸಬಹುದು.
ಕಂಪನಿಯು ಇಲ್ಲಿಯವರೆಗೆ ೩೪,೩೮೨ ರೈತರು, ೬೦ಕ್ಕೂ ಹೆಚ್ಚು ರೀತಿಯ ಬೆಳೆಗಳ ೪೬,೦೦೦ ಎಕರೆ ಭೂಮಿಯನ್ನು ಒಳಗೊಂಡಿದೆ.
ಉತ್ಪಾದಕರೊಂದಿಗೆ ಸಂವಹನದ ಅವಕಾಶ
ಆನ್‌ಲೈನಿನಲ್ಲಿ ಮುಖ್ಯವಾದ ಕೀಟಗಳು, ರೋಗಗಳು ಹಾಗೂ ಅವುಗಳ ನಿವಾರಣೆಯ ಸಲಹೆಗಳನ್ನು ಮೊದಲೇ ತುಂಬಲಾಗಿದೆ. ತೋಟದಲ್ಲಿನ ಕೀಟ/ರೋಗವು ಅಪ್ಲಿಕೇಶನ್‌ನಲ್ಲಿರುವ ಕೀಟ/ರೋಗದೊಂದಿಗೆ ಹೊಂದಾಣಿಕೆಯಾದಲ್ಲಿ ರೈತರು ಅದರಲ್ಲಿ ನೀಡಲಾಗಿರುವ ಸಲಹೆಯನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು.
ಒಂದು ವೇಳೆ ಹೊಂದಾಣಿಕೆಯಾಗದಿದ್ದರೆ ರೈತ ಬೆಳೆಯ ಚಿತ್ರವನ್ನು ತೆಗೆದು ತನ್ನ ಸಂದೇಹವನ್ನು ಸಂದೇಶದೊಂದಿಗೆ ಅಪ್‌ಲೋಡ್ ಮಾಡಬಹುದು. ಈ ಸಂದೇಶ ತೋಟಗಾರಿಕಾ ಇಲಾಖೆಯ ಪರಿಣಿತರು/ವಿಜ್ಞಾನಿಗಳಿಗೆ ತಕ್ಷಣವೇ ರವಾನೆಯಾಗುತ್ತದೆ. ಅವರು ಪರಿಹಾರವನ್ನು ಸೂಚಿಸಿ ಸಂದೇಶವನ್ನು ರೈತರಿಗೆ ಕಳುಹಿಸುತ್ತಾರೆ. ನೀವು ಇಂಥ ದಿನಾಂಕದಂದು ಕೇಳಿದ್ದ ಸಮಸ್ಯೆಗೆ ಈ ಮೂಲಕ ಸಲಹೆಯನ್ನು ಕಳುಹಿಸುತ್ತಿದ್ದೇವೆ ಎನ್ನುವ ಸಂದೇಶ ಬರುತ್ತದೆ. ಸಂದೇಶವು ರೈತರಿಗೆ ಅಪ್ಲಿಕೇಶನ್ ನೋಡಲು ತಿಳಿಸುತ್ತದೆ. ಅದರಲ್ಲಿ ರೈತನು ಕೈಗೊಳ್ಳಬೇಕಾದ ಕ್ರಮದ ಕುರಿತಾದ ನಿಖರ ಮಾಹಿತಿ ಇರುತ್ತದೆ.
ಎಫ್ಪಿಒಗಳು ಮೊಬೈಲ್ ಆಧಾರಿತ ತಂತ್ರಜ್ಞಾನ ಬಳಸುತ್ತಿವೆ
ರೈತರ ಮಾಹಿತಿಗಳ ಜೋಡಣೆ, ಅವರ ತೋಟಗಳನ್ನು ಜಿಯೊ ಫೆನ್ಸಿಂಗ್‌ಗೆ ಜೋಡಿಸುವುದು, ಬೆಳೆ ಉತ್ಪಾದನೆ, ಒಳಸುರಿಯುವಿಕೆಗಳು ಇತ್ಯಾದಿಗಳ ಮಾಹಿತಿ ಇವೆಲ್ಲವೂ ಸುಲಭವಾದವು. ಗುಂಪುಗಳ ಆಧಾರದ ಮೇಲೆ ಹವಾಮಾನ ಮಾಹಿತಿ ಮುನ್ಸೂಚನೆ, ಸಲಹೆಗಳನ್ನು ಎಸ್‌ಎಂಎಸ್ ಮೂಲಕ ಕಳಿಸಲಾಯಿತು. ಇದು ೩೮೪ ಎಫ್‌ಪಿಒಗಳು ಲಭ್ಯವಿರುವ ಮಾಹಿತಿ ಆಧರಿಸಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು.
ಮಾರುಕಟ್ಟೆ ಸಂಪರ್ಕಗಳನ್ನು ಏರ್ಪಡಿಸಲಾಯಿತು
ಎಫ್‌ಪಿಒಗಳು ಉತ್ಪಾದನೆ ಕುರಿತ ಮಾಹಿತಿಯನ್ನು ಪ್ರಕಟಿಸುವ ಮೂಲಕ ಕೊಳ್ಳುವವರಿಗೆ ಆನ್‌ಲೈನ್ ಮೂಲಕ ಖರೀದಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿತು. ದಲ್ಲಾಳಿಗಳ ಹಾವಳಿ ತಪ್ಪಿ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಗಳಿಸುವಂತಾಯಿತು.
ಬಾಹ್ಯ ಜಗತ್ತಿನೊಂದಿಗೆ ರೈತರನ್ನು ಬೆಸೆಯಿತು
ಮೊಬೈಲ್ ಆಪ್‌ನಲ್ಲಿ ಮೊದಲೇ ಹಾಕಿರುವ ಭಾಷೆಗಳಲ್ಲಿ ರೈತರು ಬೆಳೆಗಳು, ಬೀಜಗಳು, ಗ್ರಾಹಕರ ಕುರಿತು ಮಾಹಿತಿ ಪಡೆಯುವುದರೊಂದಿಗೆ ಬೆಳೆ ವಿಜ್ಞಾನಿಗಳು ಬೇಕೆಂದ ಕೂಡಲೇ ಸಂಪರ್ಕಿಸುವ ಅನುಕೂಲ ಕಲ್ಪಿಸುತ್ತದೆ. ಬೆಳೆಗೆ ತಗುಲಿದ ನಿರ್ದಿಷ್ಟ ಕೀಟ ರೋಗ ಬಾಧೆಗಳ ಕುರಿತು ಪರಿಣಿತರ ಸಲಹೆಯನ್ನು ಪಡೆಯಬಹುದಾಗಿದೆ. ಜೊತೆಗೆ ಹೊಸ ಒಳಸುರಿಯುವಿಕೆಗಳು, ಯಂತ್ರಗಳು, ವಿವಿಧ ಯೋಜನೆಗಳು, ಸರ್ಕಾರ ಅಥವ ಬ್ಯಾಂಕುಗಳು ಒದಗಿಸುವ ವಿವಿಧ ಲಾಭಗಳು ಇವೆಲ್ಲವುಗಳನ್ನು ಒಂದೇ ಕಡೆ ಸುಲಭವಾಗಿ ಪಡೆಯುವಂತಾಗಿದೆ.
ವೆಂಕಟ್ ಮಾರೋಜು
Venkat Maroju
SourceTrace Corporate HQ
125 Cambridgepark Drive
Suite #301, Cambridge,
Massachusetts 02140, USA.
E-mail: vmaroju@sourcetrace.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೩ ; ಸೆಪ್ಟಂಬರ್ ೨೦೨೦



