ಸಣ್ಣ ತೋಟಗಳು ರೈತರ ತಿಳುವಳಿಯೊಂದಿಗೆ ಇನ್ನಿತರ ಸಂಪನ್ಮೂಲಗಳಿಂದ ಪಡೆದ ಜ್ಞಾನವನ್ನು ಒಗ್ಗೂಡಿಸಿಕೊಂಡರೆ ಹೆಚ್ಚು ಸಮರ್ಥವಾಗುತ್ತವೆ. ಡಿಜಿಟಲ್ ಸಲಕರಣೆಗಳು ಇದನ್ನು ಸಾಧ್ಯವಾಗಿಸುತ್ತದೆ ಎಂದು ICAR ಕ್ರಮಗಳು ತೋರಿಸಿಕೊಟ್ಟಿವೆ.
ಹತ್ತು ಮಿಲಿಯನ್‌ಗಿಂತಲೂ ಹೆಚ್ಚು ರೈತಾಪಿ ಕುಟುಂಬಗಳು ತೆಂಗು ಹಾಗೂ ತೆಂಗು ಆಧಾರಿತ ಕೃಷಿ ಪದ್ಧತಿಯನ್ನೇ ತಮ್ಮ ಜೀವನೋಪಾಯಕ್ಕಾಗಿ ಕುಟುಂಬದ ಪೌಷ್ಟಿಕಾಂಶಕ್ಕಾಗಿ ಆಧರಿಸಿವೆ. ತೆಂಗನ್ನು ದೊಡ್ಡ ಪ್ರಮಾಣದಲ್ಲಿ ಸಣ್ಣ ಹಾಗೂ ಮಧ್ಯಮ ಗಾತ್ರದ ಭೂಮಿಯಿರುವವರು ಬೆಳೆಸುತ್ತಾರೆ. ಇದರಲ್ಲಿ ಕುಟುಂಬದವರ ಶ್ರಮ ಮುಖ್ಯವಾಗುತ್ತದೆ. ರೈತರು ಸಂಪನ್ಮೂಲವನ್ನು ಮರುಬಳಕೆ ಮಾಡುವ ಮೂಲಕ ಕೃಷಿ ವೆಚ್ಚವನ್ನು ತಗ್ಗಿಸಿಕೊಳ್ಳುತ್ತಾರೆ.
ಮನೆಯ ತೋಟಗಳು ಅವರ ಅನುಕೂಲಕ್ಕೆ ತಕ್ಕಂತೆ, ಸ್ಥಳೀಯತೆಗೆ ತಕ್ಕಂತೆ ರೂಪಿಸಿಕೊಂಡಿರುತ್ತಾರೆ. ಇದು ತಲೆಮಾರುಗಳಿಂದ ಪ್ರಯೋಗ ಮಾಡುತ್ತಾ ಬಂದ ಕಲಿಕೆಯನ್ನು ಆಧರಿಸಿರುತ್ತದೆ. ಸಣ್ಣ ರೈತರು ತಮ್ಮ ಸಮುದಾಯಗಳು ಹಾಗೂ ಹೊರಗಿನ ಸಂಪನ್ಮೂಲಗಳಿಂದ ಕಲಿಯಲು ಮುಕ್ತವಾಗಿರುತ್ತಾರೆ. ತೆಂಗು ಕೃಷಿಗೆ ಬೇಕಾದ ಮಾಹಿತಿ ಹಾಗೂ ಸಲಹೆಗಳು ಭಿನ್ನ. ಪ್ರಸ್ತುತ ಅವೆಲ್ಲವೂ ಒಂದೇ ಕಡೆ ಸಿಗುತ್ತಿಲ್ಲ.

ಲೇಖಕರು ತೋಟದಲ್ಲಿ ಎದುರಾದ ಸಮಸ್ಯೆಯನ್ನು ತತ್‌ಕ್ಷಣವೇ ಒಂದೇ ಕ್ಲಿಕ್ ಮೂಲಕ ವರದಿ ಮಾಡುತ್ತಿರುವುದು.
ತಂತ್ರಜ್ಞಾನ ಅಭಿವೃದ್ಧಿ, ಪ್ರಸರಣ ಮತ್ತು ಅದನ್ನು ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸರಳವಾದ ಪ್ರಕ್ರಿಯೆ ಅಲ್ಲ. ಅದಕ್ಕೆ ಪ್ರತಿಕ್ರಿಯೆಗಳು ಬೇಕು, ತಂತ್ರಜ್ಞಾನದ ಜೋಡಣೆ, ಪರಿಷ್ಕರಣೆಯೊಂದಿಗೆ ಕೃಷಿ ಸಮುದಾಯಗಳ ಜ್ಞಾನ ಹಾಗೂ ಕೌಶಲ್ಯಗಳು ಇದರೊಂದಿಗೆ ಒಗ್ಗೂಡಬೇಕು. ಡಿಜಿಟಲ್ ತಂತ್ರಜ್ಞಾನವು ಸಂವಾದ ವೇದಿಕೆಯನ್ನು ಒದಗಿಸುತ್ತದೆ. ಹೆಚ್ಚು ತೆಂಗು ಕೃಷಿಕರಿರುವಂತಹ ತಮಿಳುನಾಡು (೧೧೫.೬೨%), ಕೇರಳ (೧೨೪.೧೭%), ಕರ್ನಾಟಕ (೧೦೯.೫೭%) ಮತ್ತು ಆಂಧ್ರಪ್ರದೇಶ (೯೭.೨೧%)ಗಳು ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಮೊಬೈಲ್ ಬಹಳ ಉಪಕಾರಿ ಎನ್ನುವುದನ್ನು ತೋರಿಸಿಕೊಟ್ಟಿದೆ.
ರೈತ ಸ್ನೇಹಿ ಮೊಬೈಲ್ ಆಪ್ ಇ–ಕಲ್ಪ ಅಭಿವೃದ್ಧಿ
ಡಿಜಿಟಲ್ ಸಂವಹನವು ಸಣ್ಣ ಮತ್ತು ಮಧ್ಯಮ ತೆಂಗು ರೈತರಿಗೆ ಅವರಿಗೆ ಬೇಕಾದಂತಹ ಸಲಹೆಗಳನ್ನು, ವಾಸ್ತವ ಮಾಹಿತಿಯನ್ನು ತತ್‌ಕ್ಷಣ ಒದಗಿಸಬಲ್ಲದು. ಸರಿಯಾದ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಕಡಿಮೆ ದರದಲ್ಲಿ ಇದು ಒದಗಿಸುತ್ತದೆ. ತೆಂಗು ಕೃಷಿಕ ಸಮುದಾಯಕ್ಕೆ ನೆರವಾಗಲು ಬೆಳೆ ಕುರಿತ ಸಲಹೆಗಳನ್ನು ಡಿಜಿಟಲ್ ಮೂಲಕ ಪಡೆಯಲು ಸಾಧ್ಯವಾಗುವಂತೆ ICAR CPCRI ಇ – ಕಲ್ಪವನ್ನು ಅಭಿವೃದ್ಧಿ ಪಡಿಸಿತು. ಇದು ತೆಂಗು, ಅಡಕೆ ಮತ್ತು ಕೊಕಾಗೆ ಸಂಬಂಧಿಸಿದ ಮೊಬೈಲ್ ಆಧಾರಿತ ಆಂಡ್ರಾಯ್ಡ್ ಅಪ್ಲಿಕೇಶನ್.
ಈ ಆಪ್ ಅಭಿವೃದ್ಧಿಯೊಂದು ದೀರ್ಘ ಪ್ರಕ್ರಿಯೆ. ಇದನ್ನು ಅಭಿವೃದ್ಧಿಪಡಿಸುವ ಮೊದಲು ಮೂರು ವರ್ಷಗಳವರೆಗೆ ಕೃಷಿ ಸಮುದಾಯಗಳ ಅವಶ್ಯಕತೆ ಮತ್ತು ಬಳಕೆಯನ್ನು ಅಭ್ಯಸಿಸಲಾಯಿತು. ಅಳಪುಜ ಜಿಲ್ಲೆಯ ೭೫೦ ತೆಂಗು ಕೃಷಿಕರನ್ನಿಟ್ಟುಕೊಂಡು ಅಧ್ಯಯನ ನಡೆಸಲಾಯಿತು. ಅಧ್ಯಯನದ ಪ್ರಕಾರ ೯೨% ರೈತರ ಬಳಿ ಮೊಬೈಲ್ ಫೋನಿತ್ತು. ಅವರಲ್ಲಿ ಬಹಳಷ್ಟು ಮಂದಿ ಆಂಡ್ರಾಯ್ಡ್ ಫೋನುಗಳನ್ನು ಹೊಂದಿದ್ದರು. ಆದರೆ ಅವರಲ್ಲಿ ಯಾರೂ ಜ್ಞಾನದುದ್ದೇಶಕ್ಕಾಗಿ ಮೊಬೈಲ್ ಆಪ್ ಬಳಸುತ್ತಿರಲಿಲ್ಲ. ಅವರಿಗೆ ಅದರ ಬಗ್ಗೆ ಗೊತ್ತಿರಲಿಲ್ಲ.
೨೦೧೬ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಇದರ ಪೈಲೆಟ್ ವರ್ಷನ್ ಬಿಡುಗಡೆ ಮಾಡಲಾಯಿತು. ಇದರಲ್ಲಿ ೩೦% ಮಾತ್ರ ಮಲೆಯಾಳಂ ಭಾಷೆಯಿತ್ತು. ದೂರವಾಣಿ ಮೂಲಕ ಮಾಡಿದ ಸರ್ವೆಯಲ್ಲಿ ತಿಳಿದುಬಂದ ಅಂಶವೇನೆಂದರೆ ರೈತರು ತಂತ್ರಜ್ಞಾನದ ವಿವರಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ಇದ್ದರೆ ಅನುಕೂಲಕರ ಎಂದು ಹೇಳಿದ್ದರು. ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಸೇರಿ ಇವನ್ನೆಲ್ಲ ಸೇರಿಸಿ, ಸಂಗ್ರಹಿಸಿ, ಪರಿಷ್ಕರಿಸಿ ಬಹುಭಾಷೆಯ ತಂತ್ರಜ್ಞಾನ ವಿವರವನ್ನೊಳಗೊಂಡ ಆಪ್ ಸಿದ್ಧಪಡಿಸಿದರು.
ಬಹುತೇಕ ತೆಂಗು ಬೆಳೆಗಾರರು ಮಧ್ಯಮ ಗಾತ್ರದ ಭೂಮಿಯನ್ನು ಹೊಂದಿರುತ್ತಾರೆ. ತೆಂಗು ಆಧಾರಿತ ಮನೆತೋಟ ವ್ಯವಸ್ಥೆಯಲ್ಲಿ ರೈತರಿಗೆ ಅಂತರ ಬೆಳೆಗಳು, ಮಿಶ್ರ ಬೆಳೆಗಳು, ಜಾನುವಾರು, ಕೋಳಿ, ಮೀನುಸಾಕಣೆ ಇತ್ಯಾದಿಗಳ ಮಾಹಿತಿಯ ಅಗತ್ಯವಿರುತ್ತದೆ. ಆ ಮೂಲಕ ಅವರು ಸುಸ್ಥಿರ ಪರಿಸರವನ್ನು ಕಾಪಾಡಿಕೊಳ್ಳುವುದರೊಂದಿಗೆ ತಮ್ಮ ಕುಟುಂಬದ ಆರ್ಥಿಕ ಹಾಗೂ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಬಳಕೆದಾರರ ಪ್ರತಿಕ್ರಿಯೆ ಹಾಗೂ ಒತ್ತಾಯದ ಮೇರೆಗೆ ಅಂತರ/ಮಿಶ್ರ ಬೆಳೆ ಮಾಹಿತಿಯನ್ನು ʼ೭೯ ಬೆಳೆಗಳ ಮಾಹಿತಿʼ ಹಾಗೂ ʼತೆಂಗಿನ ಒಳಸುರಿಯುವಿಕೆಗಳ ಕ್ಯಾಲ್ಯುಕ್ಲೇಟರ್ʼಗಳನ್ನು ಸೇರಿಸಲಾಯಿತು. ICAR CPCRIನವರು ೨೦೧೭ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ರೈತರು ಸ್ಥಳೀಯ ಸಂಪನ್ಮೂಲಗಳ ಮಾಹಿತಿಯನ್ನು ಬಣ್ಣದ ಚಿತ್ರಗಳು ಹಾಗೂ ಸ್ಥಳೀಯ ಭಾಷೆಯಲ್ಲಿ ಇರಬೇಕೆಂದು ಬಯಸಿದ್ದರು. ಬದಲಾವಣೆ, ತಿದ್ದುವಿಕೆ ಹಾಗೂ ಸೇರ್ಪಡೆ ಇವೆಲ್ಲವೂ ಗುಣಮಟ್ಟ, ಬಳಕೆ ಹಾಗೂ ತಂತ್ರಜ್ಞಾನದ ನಂಬಿಕಾರ್ಹತೆಯನ್ನು ಕಾಯ್ದುಕೊಳ್ಳಲು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ.
ಇ ಕಲ್ಪ ಮೊದಲು ಆನ್‌ಲೈನಿನಲ್ಲಿ ಮಾತ್ರ ಲಭ್ಯವಾಗುವಂತೆ ಮಾಡಲಾಗಿತ್ತು. ನಂತರ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲದ ಅವಲಂಬನೆ ಹಾಗೂ ಖರ್ಚು ಕಡಿಮೆ ಮಾಡಲು ಆಫ್‌ಲೈನಿನಲ್ಲೂ ಅದರ ಮಾಹಿತಿಗಳು ಲಭ್ಯವಾಗುವಂತೆ ಮಾಡಲಾಯಿತು. ಇದನ್ನು ರೈತರು ಸ್ವಾಗತಿಸಿದರು. ಆಪ್ ಅನ್ನು ಉಚಿತವಾಗಿ ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು (https://goo.gl/b3GTk0).
ಇ ಕಲ್ಪದ ವೈಶಿಷ್ಟ್ಯಗಳು
ಇ ಕಲ್ಪದಲ್ಲಿ ಈ ಕೆಳಗಿನ ವೈಶಿಷ್ಟ್ಯಗಳಿವೆ.
ಅ) ತಂತ್ರಜ್ಞಾನ ವಿವರಗಳು/ತೆಂಗು, ಅಡಿಕೆ ಮತ್ತು ಕೊಕೊ ಕುರಿತ ಜ್ಞಾನ
ತಂತ್ರಜ್ಞಾನದ ವಿವರಗಳನ್ನು ವಿಜ್ಞಾನಿಗಳ ತಂಡವು ರೂಪಿಸುತ್ತದೆ. ವಿಷಯವನ್ನು ಸರಳ ಭಾಷೆಯಲ್ಲಿ ಸೂಕ್ತ ಚಿತ್ರಗಳೊಂದಿಗೆ ನೀಡಲಾಗುತ್ತದೆ. ತೆಂಗು, ಅಡಿಕೆ ಮತ್ತು ಕೊಕೊಗೆ ಸಂಬಂಧಿಸಿದಂತೆ ಒಟ್ಟು ೨೭೧ ತಂತ್ರಜ್ಞಾನ ವಿವರಗಳಿವೆ. ಇವು ತಳಿ ವೈವಿಧ್ಯ, ಉತ್ಪಾದನಾ ತಂತ್ರಜ್ಞಾನ, ಬೆಳೆ ರಕ್ಷಣೆ ತಂತ್ರಜ್ಞಾನ, ಬೆಳೆ ಪದ್ಧತಿ, ಕೊಯ್ಲು, ಕೊಯ್ಲಿನ ನಂತರದ ತಂತ್ರಜ್ಞಾನಗಳು ಅಂದರೆ ಯಂತ್ರಗಳು ಮತ್ತು ಸಂಸ್ಕರಣೆ ಇವುಗಳನ್ನು ಒಳಗೊಂಡಿದೆ. ಹಿಂದಿ, ಇಂಗ್ಲೀಷ್, ಮಲೆಯಾಳಂ, ಕನ್ನಡ ಮತ್ತು ಬಂಗಾಳಿ ಹೀಗೆ ಬಹುಭಾಷೆಗಳಲ್ಲಿ ಇದರಲ್ಲಿನ ವಿಷಯಗಳು ಲಭ್ಯವಿದೆ.
ಆ) ತೆಂಗು ಒಳಸುರಿಯುವಿಕೆಯ ಕ್ಯಾಲ್ಯುಕ್ಲೇಟರ್
ತೆಂಗಿನ ಗಿಡಗಳಿಗೆ ಒಳಸುರಿಯುವಿಕೆಯ ಪ್ರಮಾಣವು ತೋಟದ ಗಾತ್ರ ಹಾಗೂ ಗಿಡದ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ. ಒಳಸುರಿಯುವಿಕೆಯ ಕ್ಯಾಲ್ಯುಕ್ಲೇಟರ್‌ನಲ್ಲಿ ರೈತನು ತನ್ನ ತೋಟದಲ್ಲಿನ ಒಟ್ಟು ತೆಂಗಿನ ಗಿಡಗಳು, ಅವುಗಳ ವಯಸ್ಸನ್ನು ಆಧರಿಸಿ ವಿವರಗಳನ್ನು ನೀಡಬೇಕು. ಈ ವಿವರಗಳನ್ನು ನೀಡಿದ ತಕ್ಷಣ ಒಳಸುರಿಯುವಿಕೆಗಳ ಪ್ರಮಾಣದ ವಿಸ್ತೃತ ವರದಿಯು (ಉದಾ: ಸಾವಯವ ಗೊಬ್ಬರ, ಡಾಲಮೈಟ್/ಸುಣ್ಣ, ರಾಸಾಯನಿಕ ಗೊಬ್ಬರಗಳು, ಮುಚ್ಚಿಗೆ ಬೆಳೆಯಾಗಿ ಅಲಸಂದೆ) ಪ್ರತಿ ಗಿಡಕ್ಕೆ ಹೊಂದುವಂತೆ ಹಾಗೂ ಒಟ್ಟಾರೆ ಅಗತ್ಯದ ವಿವರಗಳನ್ನು ನೀಡುತ್ತದೆ. ರಸಗೊಬ್ಬರಗಳನ್ನು ನೀಡಲು ನೆನಪಿಟ್ಟುಕೊಳ್ಳಬೇಕಾದ ವಿಷಯಗಳನ್ನು ಕೂಡ ಈ ಅಪ್ಲಿಕೇಶನ್ ಒದಗಿಸುತ್ತದೆ.
ಕಾಯಂಕುಲಂನ ಕೊಟ್ಟಿನಾಟು ಮನೆಯ ಶ್ರೀಮತಿ ಉಷಾ ಗೋಪಾಲಕೃಷ್ಣನ್ ಹೇಳುವಂತೆ “ಇದು ಬಹಳ ಸಹಕಾರಿಯಾದ ಸರಳ ವೈಶಿಷ್ಟ್ಯ. ಯಾವುದೇ ತೆಂಗು ಕೃಷಿಕನಿಗೆ ಅಗತ್ಯವಾದ ಒಳಸುರಿಯುವಿಕೆ ಕುರಿತಾದ ನಿಖರ ಮಾಹಿತಿ ಅತ್ಯಂತ ಅಗತ್ಯ.”
ಇ) ಬೆಳೆ ಮಾಹಿತಿ
ಮನೆತೋಟ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ತೆಂಗನ್ನು ಉಳಿದ ಬೆಳೆಗಳೊಂದಿಗೆ ಬೆಳೆಸಲಾಗುತ್ತದೆ. ಅದನ್ನು ಕಾಡುಕೃಷಿಯ ಭಾಗವಾಗಿ ನೋಡಲಾಗುತ್ತದೆ. ಆದ್ದರಿಂದ ಸಣ್ಣರೈತರಿಗೆ ಈ ವಿವಿಧ ಬೆಳೆಗಳ ಕುರಿತು ನಿಯಮಿತವಾಗಿ ಮಾಹಿತಿ ಬೇಕಾಗುತ್ತದೆ. ಇ ಕಲ್ಪವು ಮೂಲಭೂತ ಮಾಹಿತಿಯನ್ನು ಒದಗಿಸುವುದರೊಂದಿಗೆ ಋತುಮಾನಕ್ಕೆ ತಕ್ಕ ಬೆಳೆಗಳು, ಬೀಜಗಳ ದರಗಳು, ಅವಕಾಶಗಳು ಮತ್ತು ೭೯ ಬೆಳೆಗಳಿಗೆ ಸಂಬಂಧಿಸಿದಂತೆ ಪೌಷ್ಟಿಕಾಂಶ ನಿರ್ವಹಣೆ ಮಾಹಿತಿಯನ್ನು ನೀಡುತ್ತದೆ. ಈ ವೈಶಿಷ್ಟ್ಯವು ಕೇವಲ ರೈತರಿಗೆ ಮಾತ್ರವಲ್ಲದೆ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಹಾಗೂ ಸಂಬಂಧಿಸಿದ ಸಿಬ್ಬಂದಿವರ್ಗದವರಿಗೂ ಉಪಯುಕ್ತವಾಗಿದೆ.
ಈ) ನೈಜಸಮಯದಲ್ಲಿ ಎದುರಾದ ಕೃಷಿ ಸಮಸ್ಯೆಯ ನಿರ್ವಹಣಾ ವರದಿ
ಇದು ʼಇ ಕಲ್ಪʼದ ಸಂವಾದಕ್ಕೆ ಅನುವು ಮಾಡಿಕೊಡುವ ವೈಶಿಷ್ಟ್ಯ. ಇದರಲ್ಲಿ ಕ್ಷೇತ್ರದ ಸಮಸ್ಯೆಯನ್ನು ವರದಿ ಮಾಡಬಹುದು. ಅವುಗಳಿಗೆ ಪರಿಹಾರಗಳನ್ನು ವಿಜ್ಞಾನಿಗಳಿಂದ ಆನ್‌ಲೈನಿನಲ್ಲಿ ಪಡೆಯಬಹುದು. ರೈತರು ತಮ್ಮ ತೋಟದಲ್ಲಿ ಸಮಸ್ಯೆ ಕಂಡುಬಂದ ತಕ್ಷಣ ಅದನ್ನು ವರದಿ ಮಾಡಬಹುದು. ಇದನ್ನು ಸಂದೇಶ, ಚಿತ್ರ, ಆಡಿಯೋ ಇಲ್ಲವೇ ವಿಡಿಯೋ ಮೂಲಕ ಕಳುಹಿಸಬಹುದು. ಸಮಸ್ಯೆಯ ಪರೀಕ್ಷೆ ಹಾಗೂ ಪರಿಹಾರಗಳನ್ನು ನೇರವಾಗಿ ICAR CPCRI ವಿಜ್ಞಾನಿಗಳು ಇಲ್ಲವೇ ವಿವಿಧ ವಿಷಯಗಳ ಪರಿಣಿತ ವಿಜ್ಞಾನಿಗಳ ತಂಡ ನೀಡುತ್ತದೆ. ಸಮಸ್ಯೆಯನ್ನು ವರದಿ ಮಾಡಿದ ತಕ್ಷಣ ಅದರೊಂದಿಗೆ ಅದನ್ನು ಕಳುಹಿಸಿದವರ ಮೊಬೈಲ್ ಸಂಖ್ಯೆ ದಾಖಲಾಗುತ್ತದೆ. ಜೊತೆಗೆ ಕ್ಷೇತ್ರದ ಸಮಸ್ಯೆಗಳನ್ನು ಗಮನಿಸಲು ಜಿಪಿಎಸ್ ಕೂಡ ಇದೆ.
ICAR CPCRI ನಲ್ಲಿ ಕಲ್ಪದ ಹೊರತಾಗಿ ತೆಂಗನ್ನು ಕುರಿತ ಮಾಹಿತಿಯನ್ನು ICAR CPCRIನ ಯೂ ಟ್ಯೂಬ್ ಚಾನೆಲ್ ಮೂಲಕ ಪಡೆಯಬಹುದು. ಇದು ಬಹುಭಾಷೆಗಳಲ್ಲಿ ತೆಂಗು ತಂತ್ರಜ್ಞಾನದ ಕುರಿತು ವಿಷಯಗಳನ್ನು ಒದಗಿಸುತ್ತದೆ. ಜೊತೆಗೆ ಸಲಹಾ ಸೇವೆಗಳನ್ನು ವಾಟ್ಸಾಪ್ ಮತ್ತು ಫೇಸ್‌ಬುಕ್ ಮೂಲಕ ಒದಗಿಸುತ್ತದೆ.
ತಲುಪುವಿಕೆ, ಬಳಕೆ ಹಾಗೂ ಪ್ರತಿಕ್ರಿಯೆ
ಆರಂಭದಲ್ಲಿ ಮೊಬೈಲ್ ಆಪ್‌ನ ಬಳಕೆ ಬಹಳ ನಿಧಾನವಾಗಿತ್ತು. ಮೊದಲೆರೆಡು ವರ್ಷಗಳಲ್ಲಿ ೧೦೦೦ ದಿಂದ ೧೬೦೦ರಷ್ಟು ಮಾತ್ರ ಬಳಕೆದಾರರಿದ್ದರು. ಕ್ರಮೇಣ ಇದರಲ್ಲಿ ಸುಧಾರಣೆ ಕಂಡುಬಂದಿತು. ಹಿಂದಿನ ಸಮಯಕ್ಕೆ ಹೋಲಿಸಿದಲ್ಲಿ ಲಾಕ್‌ಡೌನ್ ಸಮಯದಲ್ಲಿ ೩೦% ಸುಧಾರಣೆ ಕಂಡುಬಂದಿದೆ. NABARD ಮತ್ತು ICAR CPCRI ನೆರವಿನ ಒಡನಾಡು ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿ., ತನ್ನ ಭಾಗೀದಾರರ ಸರ್ವೆಯನ್ನು ದೂರವಾಣಿ ಮೂಲಕ ನಡೆಸಿತು. ವಯಸ್ಸಾದವರು ಹಾಗೂ ಮಹಿಳಾ ಸ್ವ ಸಹಾಯ ಸಂಘದ ರೈತರು ಇದರಲ್ಲಿ ಇರಲಿಲ್ಲವೆನ್ನುವುದನ್ನು ಕಂಡುಕೊಂಡರು. ತಕ್ಷಣವೇ ಈ ಕಂಪನಿ ಕೌಶಲ್ಯಾಧಾರಿತ ತರಬೇತಿ ನಡೆಸಿತು. ಇದರಲ್ಲಿ ಮೊಬೈಲಿನಲ್ಲಿ ಫೇಸ್‌ಬುಕ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್‌ಗಳು, ಅಂತರ್ಜಾಲ ಹುಡುಕಾಟ, ಯೂ ಟ್ಯೂಬ್ ಮತ್ತಿತರ ಕೃಷಿ ಸಂಬಂಧಿತ ಜ್ಞಾನದ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ತರಬೇತಿ ನೀಡಲಾಯಿತು. ಇದಕ್ಕಾಗಿ ಅಳವಡಿಸಿಕೊಂಡ ಪಠ್ಯ ಕುಟುಂಬಾಧಾರಿತವಾಗಿತ್ತು. ಇದರಿಂದ ಒಟ್ಟಾಗಿ ಕಲಿಯುವುದರ ಮೂಲಕ ಕಲಿತದ್ದನ್ನು ಅಳವಡಿಸಿಕೊಳ್ಳಬಹುದಾಗಿತ್ತು. ಈ ಆಪ್‌ನ ಬಳಕೆಯನ್ನು ಹೆಚ್ಚಿಸಲು ಕಂಪನಿಯು ತನ್ನೆಲ್ಲ ಭಾಗೀದಾರರ ಸಭೆಗಳಲ್ಲಿ, ತರಬೇತಿ ಕಾರ್ಯಕ್ರಮಗಳಲ್ಲಿ ಮತ್ತು ರೈತರ ಸಭೆಗಳಲ್ಲಿ ಇದನ್ನು ಪ್ರಚುರಗೊಳಿಸುತ್ತಿದೆ. ಪ್ರಸ್ತುತ ರೈತರು ಇಲ್ಲವೇ ಸಂಬಂಧಿತ ಸಿಬ್ಬಂದಿಗಳು ಬಳಕೆಯ ಆಧಾರದ ಮೇಲೆ ನೋಡಿದಾಗ ೫೦೦೦ ಡೌನ್ಲೌಡುಗಳಾಗಿವೆ.
೧೦೦ ಮಂದಿ ಬಳಕೆದಾರರ ಮೇಲೆ ೨೦೧೮ರಲ್ಲಿ ನಡೆಸಿದ ಅಧ್ಯಯನದ ಆಧಾರದ ಮೇಲೆ ತಿಳಿದುಬಂದ ಸಂಗತಿಯೆಂದರೆ ೯೩.೨೦% ಬಳಕೆದಾರರು ಜ್ಞಾನ/ತಂತ್ರಜ್ಞಾನವನ್ನು ಸ್ಥಳೀಯ ಭಾಷೆಯಲ್ಲಿ ಪಡೆಯುವ ವೈಶಿಷ್ಟ್ಯವನ್ನು, ಆಫ್‌ಲೈನ್ ಮಾಹಿತಿ ಲಭ್ಯತೆ (೮೪.೪%), ವಿಜ್ಞಾನಿಗಳೊಡನೆ/ಪರಿಣಿತರೊಂದಿಗೆ ನೇರ ಸಂವಾದ (೭೩%), ಕ್ಷೇತ್ರ ಸಮಸ್ಯೆಗಳ ಕುರಿತು ನೈಜಸಮಯದಲ್ಲಿ ಸಲಹೆಗಳು (೭೧.೩%) ಮತ್ತು ಮಾಹಿತಿಯ ತ್ವರಿತ ನವೀಕರಣ (೬೪.೯೦%) ಬಯಸಿದರು. ಈ ಅಧ್ಯಯನವು ರೈತರು ಐಸಿಟಿಯ ಸಲಕರಣೆಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತೆ ನಿರಂತರವಾಗಿ ಶ್ರಮಿಸಬೇಕೆಂಬುದನ್ನು ತೋರಿಸಿತು. ಸಮಾನವಾಗಿ ಎಲ್ಲರನ್ನೂ ಒಳಗೊಳ್ಳಲು ಲಿಂಗಾಧಾರಿತ ದೃಷ್ಟಿಕೋನವು ಆಳವಾದ ವಿಶ್ಲೇಷಣೆಯನ್ನು ಬಯಸುತ್ತದೆ.
ತೆಂಗು, ಅಡಿಕೆ ಅಥವ ಕೊಕೊಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಉಳಿದ ಬೆಳೆಗಳಿಗೆ ಸಂಬಂಧಿಸಿದ ವೈವಿಧ್ಯಮಯ ಸಮಸ್ಯೆಗಳನ್ನು ನೈಜಸಮಯದಲ್ಲಿ ವರದಿ ಮಾಡುವುದು ಬಹಳ ಆಸಕ್ತಿಕರವಾಗಿದೆ. ವರದಿ ಮಾಡಲಾದ ಸುಮಾರು ೮೦ರಿಂದ ೮೫% ಕ್ಷೇತ್ರದ ಸಮಸ್ಯೆಗಳು ವಿವಿಧ ಕಾರಣಗಳನ್ನು ಹೊಂದಿತ್ತು (ಉದಾ. ಎಲೆಗಳು ಹಳದಿಯಾಗುವುದು), ರೈತರಿಗೆ ಗುರುತಿಸಲು ಕಷ್ಟವಾದದ್ದು (ಉದಾ. ಕೆಂಪು ಮೂತಿ ಹುಳು, ಎಲೆ ಕೊಳೆಯುವುದು) ಮತ್ತು ಕಂಡುಹಿಡಿಯಲು ಕಷ್ಟವಾದ ಸಮಸ್ಯೆ (ಉದಾ: ಪೋಷಕಾಂಶ ಕೊರತೆ ಇಲ್ಲವೆ ಮಣ್ಣಿನ ಸಮಸ್ಯೆಗಳು).
ಈ ಆಪ್ ಕೇವಲ ರೈತರಿಗೆ ಮಾಹಿತಿಯನ್ನು ಪಡೆಯಲು ಮಾತ್ರ ನೆರವಾಗಲಿಲ್ಲ. ಬದಲಿಗೆ ಇದರಲ್ಲಿನ ಸಂವಾದದ ಆಯ್ಕೆಯು ರೈತರು ಮತ್ತು ಸಂಬಂಧಿತ ಸಿಬ್ಬಂದಿಗಳು ಜ್ಞಾನಪ್ರಸರಣವನ್ನು ಆತ್ಮವಿಶ್ವಾಸದೊಂದಿಗೆ ಮಾಡುವಂತೆ ಸಬಲರನ್ನಾಗಿಸಿತು. ಕೇರಳದ ಪತಿಯೂರು ಪಂಚಾಯ್ತಿಯ ಶ್ರೀ ಜಗ್ಗೇಶ್ ಕುಮಾರ್, ಕೆ.ಟಿ. ಸದಾನಂ ಯುವ ತೆಂಗು ಕೃಷಿಕರು ಹೇಳುತ್ತಾರೆ “ಕೃಷಿ ಎನ್ನುವುದು ಸಮಯಾಧಾರಿತ ಹಾಗೂ ಜ್ಞಾನಾಧಾರಿತ. ಇ ಕಲ್ಪವು ಬಹು ಭಾಷೆಗಳಲ್ಲಿ ಮಾಹಿತಿ ಲಭ್ಯವಾಗುವಂತೆ ಮಾಡಿದೆ, ಇದರೊಂದಿಗೆ ಅಂತರ/ಮಿಶ್ರ ಬೆಳೆಗಳ ಮಾಹಿತಿಯನ್ನು ಕೈಗೆಟುಕುವಂತೆ ನೀಡುವುದರೊಂದಿಗೆ, ತೆಂಗಿನ ಒಳಸುರಿಯುವಿಕೆಗಳ ಕ್ಯಾಲ್ಯುಕ್ಲೇಟರ್ ಒದಗಿಸುತ್ತದೆ. ಇದು ವ್ಯಕ್ತಿಯ ಅಗತ್ಯಗಳಿಗೆ ಪೂರಕವಾಗಿದ್ದು ತಂತ್ರಜ್ಞಾನದ ವಿವರಗಳು ಸ್ಥಳೀಯ ಭಾಷೆಗಳಲ್ಲಿ ಸರಳ ಪಠ್ಯ ಹಾಗೂ ಚಿತ್ರಗಳೊಂದಿಗಿದೆ”.
ಈ ಸಂವಾದಾತ್ಮಕ ಆಪ್ ರೈತರು ಹಾಗೂ ಸಂಬಂಧಿತ ಸಿಬ್ಬಂದಿಗಳು ಆತ್ಮವಿಶ್ವಾಸದೊಂದಿಗೆ ಜ್ಞಾನವನ್ನು ಪಡೆಯಲು ಮತ್ತು ಪಸರಿಸಲು ಸಬಲರನ್ನಾಗಿಸಿತು.
ಡಿಜಿಟಲ್ ಕೃಷಿಯ ಸಾಧ್ಯತೆಗಳು ಸ್ಮಾರ್ಟ್ ತೋಟಗಳನ್ನು ಹೆಚ್ಚಿಸುತ್ತಿವೆ. ಸಣ್ಣ ತೋಟಗಳು ಕೂಡ ಸ್ಮಾರ್ಟ್ ಆಗಬೇಕಾದ ಅಗತ್ಯವಿದೆ. ಇದು ಸಾಧ್ಯವಾಗುವುದು ಡಿಜಿಟಲ್ ಸಲಕರಣೆಗಳನ್ನು ಒಗ್ಗೂಡಿಸಿದಾಗ. ರೈತರ ತಿಳುವಳಿಕೆ ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಡಿಜಿಟಲ್ ಜ್ಞಾನದೊಂದಿಗೆ ಒಗ್ಗೂಡಿಸುವುದು ಈಗ ನಮ್ಮ ಮುಂದಿರುವ ಹಾದಿ. ಇದು ಹವಾಮಾನ ಬದಲಾವಣೆ ಮತ್ತು ಮಾರುಕಟ್ಟೆ ಸವಾಲುಗಳನ್ನು ಎದುರಿಸಲು ಸರಿಯಾದ ದಾರಿ. ಇತ್ತೀಚಿನ ಅನುಭವಗಳು ಡಿಜಿಟಲ್ ಜ್ಞಾನ ಸಂಪನ್ಮೂಲಗಳು ಪ್ರಾಯೋಗಿಕ ಮೌಲ್ಯವನ್ನು ಹೊಂದಿದ್ದು ದೂರದ ಪ್ರದೇಶಗಳಲ್ಲಿರುವ ರೈತರು ಅಥವ ಗ್ರಾಹಕರನ್ನು ಕೂಡ ತಲುಪಬಲ್ಲದು. ಅದರಲ್ಲೂ ಇಂಥ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೂಡ ಅವು ತಲುಪಬಲ್ಲವು.
ಅದೇನೇ ಇದ್ದರೂ ಇದು ಕೂಡ ಸವಾಲುಗಳಿಗೆ ಹೊರತಾಗಿಲ್ಲ. ಹಲವು ಬಳಕೆದಾರರ ಪ್ರಕಾರ ಅಂತರ್ಜಾಲ ಸಂಪರ್ಕ ಸಮರ್ಪಕವಾಗಿಲ್ಲದಿರುವುದು ದೊಡ್ಡ ಮಿತಿ. ಇನ್ನಿತರ ಪ್ರಮುಖ ಸವಾಲುಗಳು ನೇರ ಸಂವಾದಕ್ಕೆ ಬೇಕಾಗುವ ಸಮಯ ಮತ್ತು ಸಮಸ್ಯೆಗೆ ತಕ್ಷಣವೇ ಪರಿಹಾರ ಸೂಚಿಸಲು ಹಲವು ಪರಿಣಿತರ ಸಲಹೆಯ ಅಗತ್ಯವಿರುವುದು. ಜೊತೆಗೆ ಬಹುಭಾಷೆಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಸವಾಲು. ಈ ಅಂತರವನ್ನು ಕಡಿಮೆಮಾಡಲು ಕೆಲವು ಅನ್ವೇಷಣಾತ್ಮಕ ಪರಿಹಾರಗಳಿವೆ. ʼಸ್ಥಳೀಯ ಪ್ರದೇಶಗಳಲ್ಲಿ ನಿರ್ದಿಷ್ಟ ಜಾಗಗಳಲ್ಲಿ ವೈಫೈ ಲಭ್ಯವಾಗುವಂತೆ ಮಾಡುವುದುʼ ಮತ್ತು ʼಸಮುದಾಯ ಡಿಜಿಟಲ್ ಪರಿಣತ ರೈತರ ತರಬೇತಿ ಕಾರ್ಯಕ್ರಮಗಳುʼ. ಡಿಜಿಟಲ್ ಆಧಾರಿತ ಮಾಹಿತಿ ಅಪ್ಲಿಕೇಶನ್‌ಗಳು ತೆಂಗು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಲವು ಭಾಗೀದಾರರಿಗೆ ನೆರವು ನೀಡಬಲ್ಲುದು. ಇದರಿಂದ ಆ ರೈತರು ಮುಂದುವರೆಯಬಹುದು.
ಅನಿತಕುಮಾರಿ ಪಿ
Anithakumari P
Principal Scientist (Agricultural Extension),
ICAR Central Plantation Crops Research Institute
(CPCRI),
Regional Station, Krishnapuram P.O.,
Kayamkulam – 690533
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್ ೨೦೨೦



