ಬದಲಾಗುತ್ತಿರುವ ಹವಾಮಾನ ಪತ್ರಿಕೂಲ ಪರಿಸ್ಥಿತಿಗಳಿಂದಾಗಿ ಹೆಚ್ಚುತ್ತಿರುವ ಪ್ರವಾಹಗಳು ಮತ್ತು ನೀರಿನ ಸಮಸ್ಯೆಯ ನಡುವೆ ಪೂರ್ವ ಉತ್ತರ ಪ್ರದೇಶ ಮತ್ತು ವಾಯುವ್ಯ ಬಿಹಾರದಲ್ಲಿನ ಸಣ್ಣ ಮತ್ತು ಮಧ್ಯಮ ರೈತರು ಪ್ರವಾಹಭೀತಿ ತಾಳಿಕೆಯ ತರಕಾರಿ ಕೃಷಿಯ ಹೊಸ ಸುರಕ್ಷಿತ ದಾರಿಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುತ್ತಿದ್ದಾರೆ. ಬಹು ಪದರ ಒಳಗೊಂಡ ಕೃಷಿ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ತರಕಾರಿ ಬೆಳೆಗಾರರು ಇರುವ ಸಣ್ಣ ಭೂಮಿಯಲ್ಲಿಯೇ ಎರಡು ಇಲ್ಲವೇ ಮೂರು ಬೆಳೆಗಳನ್ನು ಕೊಯ್ಲು ಮಾಡುತ್ತಿದ್ದಾರೆ. ಇದರಿಂದ ಅವರ ಆದಾಯವು ದುಪ್ಪಟ್ಟಾಗಿದೆ.
ಗಂಗಾ ದಡದ ಮಧ್ಯಭಾಗದಲ್ಲು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರಗಳಿದೆ. ಇಲ್ಲಿ ಅತಿಹೆಚ್ಚು ಮಳೆ (ಸುಮಾರು ೧೨೦೦ಮಿಮೀ) ಬೀಳುತ್ತದೆ. ಜೊತೆಗೆ ಗಂಗಾ, ಗಾಗ್ರಾ, ರಪ್ಟಿ ಮತ್ತು ಗಂಡಾಕ್ ನದಿಗಳು ಇಲ್ಲಿ ಹರಿದುಹೋಗುತ್ತದೆ. ಆದರೂ ಫಲವತ್ತಾದ ಮಣ್ಣನ್ನು ಹೊಂದಿರುವ ಈ ಪ್ರದೇಶದಲ್ಲಿ ಒಂದು ಬೆಳೆ ಅಂದರೆ ರಾಬ್ಬಿ ಬೆಳೆಯನ್ನು ಮಾತ್ರ ಕೊಯ್ಲು ಮಾಡಲಾಗುತ್ತದೆ. ಖಾರಿಫ್ ಬೆಳೆಯು ಪ್ರವಾಹ ಅಥವ ತಗ್ಗು ಪ್ರದೇಶಗಳಲ್ಲಿ ನಿಲ್ಲುವ ನೀರಿನ ಸಮಸ್ಯೆಯಿಂದಾಗಿ ಹಾನಿಗೊಳಗಾಗುತ್ತದೆ. ಹವಾಮಾನ ಆಧಾರಿತವಾದ ಇಲ್ಲಿನವರ ಬದುಕಿನಲ್ಲಿ ಹೆಚ್ಚಿನವರು ಸಣ್ಣ ಮತ್ತು ಮಧ್ಯಮ ರೈತರಿದ್ದು (೮೦% ಗಿಂತ ಹೆಚ್ಚು) ಸಣ್ಣ ಮತ್ತು ಮಧ್ಯಮ ಗಾತ್ರದ ಭೂಮಿಯನ್ನು (೮೪% ೧ ಹೆಕ್ಟೇರಿಗಿಂತ ಕಡಿಮೆ) ಹೊಂದಿದ್ದಾರೆ. ಕೃಷಿಯಲ್ಲಿ ಯಂತ್ರಗಳ ಬಳಕೆಗೆ ಸೀಮಿತ ಅವಕಾಶವಿರುವುದರಿಂದ ಇಲ್ಲಿನವರ ಪರಿಸ್ಥಿತಿ ಅಭಿವೃದ್ಧಿ ಸೂಚ್ಯಂಕದಲ್ಲಿ ತಳಮಟ್ಟದಲ್ಲಿದೆ. ಜೊತೆಗೆ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಮತ್ತು ಜಲ ಹವಾಮಾನದ ವಿಪತ್ತುಗಳು ಈ ಪ್ರದೇಶದ ಜನರನ್ನು ಬಡತನದತ್ತ ತಳ್ಳಿದೆ.
ಈ ಮೇಲಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶದ ಸಣ್ಣ ಮತ್ತು ಮಧ್ಯಮ ರೈತರ ಬೆಳೆ ಹಾನಿಯ ಪ್ರಮಾಣವನ್ನು ತಗ್ಗಿಸಿ ವಿನೂತನ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ನಿವ್ವಳ ಲಾಭವನ್ನು ಗಳಿಸುವುದರತ್ತ ಗಮನನೀಡಬೇಕಾದದ್ದು ಅತ್ಯಗತ್ಯವಾಗಿದೆ. ನಮ್ಮ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ರೈತರ ಸಂಖ್ಯೆ ಹೆಚ್ಚಿದೆ. ಅವರುಗಳ ಸಣ್ಣ ಭೂಮಿಯಿಂದಾಗಿ ಅವರು ದೇಶದ ಆರ್ಥಿಕತೆ ಕೊಡುಗೆ ನೀಡುತ್ತಿರುವುದನ್ನು ಗಮನಿಸುವುದಿಲ್ಲ. ಸ್ವಾವಲಂಬಿ ದೇಶವಾಗಲು ಆತ್ಮನಿರ್ಭರ ಭಾರತ ಎನ್ನಿಸಿಕೊಳ್ಳಲು ಮೊದಲು ಸಣ್ಣ ಮತ್ತು ಮಧ್ಯಮ ರೈತರ ಕುರಿತು ಗಮನಹರಿಸಬೇಕಾಗಿದೆ. ಇವರು ಹೆಚ್ಚು ಲಾಭ ಮತ್ತು ಉತ್ಪಾದನೆಯನ್ನು ಪಡೆಯಲು ಶ್ರಮವಹಿಸಬೇಕಾಗಿದೆ.
| ಚೌಕಟ್ಟು ೧ : ಬಹು ಪದರ ಕೃಷಿಬಹುಪದರ ಕೃಷಿಯು ಸೂಕ್ತ ಬೆಳೆ ಸಂಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಭೂಮಿಯ ಗರಿಷ್ಠ ಬಳಕೆಯನ್ನು ಮಾಡುತ್ತದೆ (ಬೆಳೆಗಳನ್ನು ಅಡ್ಡ ಸಾಲು, ಉದ್ದ ಸಾಲು ಮತ್ತು ನೆಲದಡಿ) ಬೆಳೆಯಲಾಗುತ್ತದೆ. ಸಮಯ ನಿರ್ವಹಣೆ (ಬೆಳೆಯ ಬೆಳವಣಿಗೆಯ ಸಮಯ, ಫಲ ಬಿಡುವ ಸಮಯ) ಮಾಡುತ್ತದೆ. ಕೃಷಿ ಪದ್ಧತಿಯಲ್ಲಿ ಮೊದಲ ಮಟ್ಟ ನೆಲದಡಿಯ ಜಾಗ ಇಲ್ಲಿ ಬಳ್ಳಿಗಳು ಬೆಳೆಯುತ್ತವೆ, ಎರಡನೆಯದು ನೆಲಮಟ್ಟ ಇಲ್ಲಿ ವಿವಿಧ ಸೊಪ್ಪು, ತರಕಾರಿ, ಹಣ್ಣುಗಳನ್ನು ಬೆಳೆಸಲಾಗುತ್ತದೆ. ಮೂರನೆಯದು ಬಿದಿರಿನ ಮಚನಲ್ (ನೆಲದಿಂದ ೮ ಅಡಿ ಎತ್ತರದಲ್ಲಿ) ಇದರಲ್ಲಿ ತರಕಾರಿ ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಈ ಕೃಷಿ ತಂತ್ರವು ಒಟ್ಟು ಬಿತ್ತನೆಯ ಭೂಮಿಯನ್ನು ಹೆಚ್ಚಿಸುತ್ತದೆ. ಒಳಸುರಿಯುವಿಕೆಗಳ ವೆಚ್ಚ ತಗ್ಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಮಣ್ಣಿಗೆ ಸಾವಯವ ಪೋಷಕಾಂಶಗಳನ್ನು ಸೇರಿಸುತ್ತದೆ.ಮೊದಲಿಗೆ ಇದನ್ನು ಸಾಧಿಸುವುದು ಕಷ್ಟವೆನಿಸಿತ್ತು. ಈ ರೈತರು ಸ್ಮಾರ್ಟ್ ಕೃಷಿ ಯೋಜನೆ ರೂಪಿಸಿಕೊಂಡು ಬಹುಪದರ ಕೃಷಿ ಪದ್ಧತಿಯಲ್ಲಿ ಸೂಕ್ತ ಬೆಳೆ ಸಂಯೋಜನೆಯನ್ನು ಅಳವಡಿಸಿಕೊಂಡರು. |
ತಂತ್ರಜ್ಞಾನ
ಬಹುಪದರ ಕೃಷಿ ಪದ್ಧತಿಯು ಹೊಸ ಕೃಷಿ ತಂತ್ರವಲ್ಲ (ನೋಡಿ ಚೌಕ ೧). ರೈತರು ಈ ಪದ್ಧತಿಯನ್ನು ಬಹಳ ಸಮಯದಿಂದ ಅನುಸರಿಸುತ್ತಿದ್ದಾರೆ. ಈ ತಂತ್ರವನ್ನು ಸ್ಥಳೀಯ ಜ್ಞಾನಬಳಸಿ ಸೂಕ್ತ ಬೆಳೆ ಸಂಯೋಜನೆ (ತರಕಾರಿ ಬೆಳೆ) ಮೂಲಕ ಸುಧಾರಿಸಲಾಯಿತು. ನೀರು ಹೆಚ್ಚಾಗಿ ನಿಲ್ಲುವ ಪರಿಸ್ಥಿಯಲ್ಲಿ ಬೆಳೆ ವಿಫಲವಾಗುವ ಆಪತ್ತನ್ನು ಕಡಿಮೆ ಮಾಡಿತು.
ಈ ತಂತ್ರವು ಜಾಗ ಮತ್ತು ಸಮಯ ನಿರ್ವಹಣೆಗೆ ಒತ್ತು ನೀಡುತ್ತದೆ. ಇದು ಸ್ಮಾರ್ಟ್ ಯೋಜನೆ ಮತ್ತು ಸೂಕ್ತ ತರಕಾರಿಗಳ ಸಂಯೋಜನೆ, ವಿವಿಧ ಪ್ರದೇಶ, ಫಲ ನೀಡುವ ಅವಧಿ, ಸೌರಶಕ್ತಿ ಮತ್ತು ಗಿಡಗಳ ಎತ್ತರ ಇವುಗಳ ಮೇಲೆ ಗಮನಕೇಂದ್ರೀಕರಿಸುತ್ತದೆ.
ಈ ಕೃಷಿ ತಂತ್ರವನ್ನು ಚಂಪೇರ್‌ಗಂಜ್ ಮತ್ತು ಜಂಗಲ್ ಕೌಡಿಯಾ ಬ್ಲಾಕ್, ಗೋರಖ್‌ಪುರ್ ಜಿಲ್ಲೆ ಮತ್ತು ಪಶ್ಚಿಮ ಚಂಪಾರಣ್‌ನ ನೌಟಾನ್ ಬ್ಲಾಕ್, ಬಿಹಾರ್ ಇಲ್ಲಿ ದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಆರಂಭಿಸಲಾಯಿತು. ಇದರ ವಿಶಿಷ್ಟತೆ ಮತ್ತು ಭೂಮಿಯ ಗರಿಷ್ಠ ಬಳಕೆಗೆ ದಾರಿ ಮಾಡಿಕೊಡುವ ಮೂಲಕ ರೈತರಿಗೆ ಒಳಸುರಿಯುವಿಕೆಗಳ ವೆಚ್ಚವನ್ನು ತಗ್ಗಿಸಿ ಅವರಿಗೆ ದುಪ್ಪಟ್ಟು ಲಾಭವನ್ನು ತಂದುಕೊಟ್ಟಿತು.
ತರಕಾರಿ ಆಧಾರಿತ ಬಹುಪದರ ಕೃಷಿಯು ಹೆಚ್ಚು ಕೂಲಿಯನ್ನು ಬೇಡುವ ತಂತ್ರ, ನಿಯಮಿತ ನಿಗಾವನ್ನು ಬೇಡುತ್ತದೆ, ಸ್ಮಾರ್ಟ್ ಪ್ಲಾನಿಂಗ್ ಅಂದರೆ ಸೂಕ್ತ ಬೆಳೆ ಆಯ್ಕೆಯನ್ನು ಮಾಡಬೇಕಾಗುತ್ತದೆ. ಆಯ್ಕೆ ತಪ್ಪಾದಲ್ಲಿ ಬೆಳೆಯ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಒಟ್ಟಾರೆ ಲಾಭದ ಪ್ರಮಾಣ ಕಡಿಮೆಯಾಗುತ್ತದೆ. ಇದನ್ನು ಹೊರತುಪಡಿಸಿ ಪ್ರತಿ ಎಕರೆಗೆ ಬಿದಿರಿನ ವೇದಿಕೆ ನಿರ್ಮಿಸಲು ೨೫ ಸಾವಿರ ಬೇಕಾಗುತ್ತದೆ ಇತ್ಯಾದಿ. ಇದು ವರ್ಷಕ್ಕೊಮ್ಮೆ ಮಾಡಬೇಕಾದ ಹೂಡಿಕೆ. ಒಮ್ಮೆ ಮಾಡಿದರೆ ಮೂರರಿಂದ ನಾಲ್ಕು ವರ್ಷಗಳವರೆಗೆ ಬಾಳಿಕೆ ಬರುತ್ತದೆ.
ಆರಂಭ
ಮೊದಲಿಗೆ ಬಹುಪದರ ಕೃಷಿಯನ್ನು ಸೂಕ್ತ ಬೆಳೆ ಸಂಯೋಜನೆಯೊಂದಿಗೆ ಪ್ರಯೋಗದ ಮಾದರಿಯಲ್ಲಿ ೨೦೧೯ರಲ್ಲಿ ಗೋರಖಪುರ ಮತ್ತು ಪಶ್ಚಿಮ ಚಂಪಾರಣ್‌ನಲ್ಲಿ ಮೂರು ಎಕರೆಗಳಲ್ಲಿ ಆರಂಭಿಸಲಾಯಿತು. ಅಧ್ಯಯನ ತಂಡವು ಸ್ಥಳೀಯವಾಗಿ ಬೆಳೆಯುವ ತರಕಾರಿಗಳ ಪಟ್ಟಿಯನ್ನು ತಯಾರಿಸಿ ಅದನ್ನು ಬಳ್ಳಿಗಳು, ಗಡ್ಡೆಗೆಣಸು ಮತ್ತು ಸೊಪ್ಪು ಹೀಗೆ ಮೂರು ಗುಂಪುಗಳಾಗಿ (ಆರು ಬೆಳೆಗಳು) ವಿಭಜಿಸಿತು. ಈ ವಿಭಜನೆಯು ಮಣ್ಣಿನ ಪಿಎಚ್ ಮಟ್ಟ, ಬೆಳೆಗಳ ಬೇರು ಎಷ್ಟು ಆಳಕ್ಕೆ ಇಳಿಯುತ್ತದೆ ಎನ್ನುವುದು, ಸೂರ್ಯನ ಬೆಳಕು, ಬೆಳೆಯ ಗುಣಲಕ್ಷಣಗಳು, ನೀರನ್ನು ತಾಳಿಕೊಳ್ಳುವ ಬೆಳೆಗಳ ಶಕ್ತಿ ಮತ್ತು ಬೆಳೆಯ ಜೀವನ ಚಕ್ರ ಅಂದರೆ ಬಿತ್ತನೆ, ನಾಟಿ, ಬೆಳವಣಿಗೆ ಹಾಗೂ ಬೆಳೆಯ ಕೊಯ್ಲಿನ ಅವಧಿಯನ್ನು ಆಧರಿಸಿರುತ್ತದೆ.
ಬೆಳೆ ಸಂಯೋಜನೆ ಪ್ರಯೋಗಗಳು
ಮೂರು ಜೊತೆ ಬೆಳೆಗಳ ಸಂಯೋಜನೆಯು ಆರು ಬೆಳೆಗಳಾದವು. ಈ ಎಲ್ಲ ಆರು ಬೆಳೆಗಳನ್ನು ಬಿತ್ತನೆ, ಬೆಳವಣಿಗೆಯ ಸಮಯ, ಕೊಯ್ಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದಕ್ಕೆ ಬೇಕಾಗುವ ಸೂರ್ಯನಬೆಳಕನ್ನು ಆಧರಿಸಿ ಆಯ್ಕೆ ಮಾಡಲಾಯಿತು.
೧. ಹಾಗಲಕಾಯಿ ಮತ್ತು ಆಲೂಗಡ್ಡೆ :
ಇದು ಬಳ್ಳಿ (ಹಾಗಲ) ಮತ್ತು ಗಡ್ಡೆ(ಆಲೂಗಡ್ಡೆ) ಸಂಯೋಜನೆಯ ಬೆಳೆ. ಹಾಗಲಕಾಯಿ ಆರು ತಿಂಗಳ ಬೆಳೆ (ಆಗಸ್ಟ್ – ಫೆಬ್ರವರಿ), ಆಲೂಗಡ್ಡೆ ನಾಲ್ಕು ತಿಂಗಳ ಬೆಳೆ. ಹಾಗಲಕಾಯಿ ಆಗಸ್ಟ್‌ನಿಂದ ಅಕ್ಟೋಬರ್ ಹೊತ್ತಿಗೆ ಬೆಳೆದಿರುತ್ತದೆ. ನವಂಬರ್ – ಡಿಸಂಬರ್ ತಿಂಗಳಲ್ಲಿ ವಾತಾವರಣದಲ್ಲಿನ ತೇವಾಂಶ ತಗ್ಗುತ್ತಿದ್ದಂತೆ ಬಳ್ಳಿಯ ಎಲೆಗಳು ಉದುರುತ್ತವೆ. ಆಗ ಸಾಕಷ್ಟು ಬೆಳಕು ನೆಲದ ಮೇಲೆ ಬೀಳಲಾರಂಭಿಸುತ್ತದೆ. ಇದು ಮತ್ತೊಂದು ಬೆಳೆ ಬೆಳೆಯಲು ಅವಕಾಶವಾಗುತ್ತದೆ. ಹಾಗಲಕಾಯಿ ಜೀವನಕ್ರಮಕ್ಕೆ ಹೊಂದುವಂತಹ ಬೆಳೆ ಆಲೂಗಡ್ಡೆ. ಬಹುಬೇಡಿಕೆಯ ಈ ತರಕಾರಿಯನ್ನು ಹಾಗಲಕಾಯಿಯೊಂದಿಗೆ ಬೆಳೆಯಬಹುದು. ಹಾಗಾಗಿ ರೈತ ಅದೇ ಭೂಮಿಯಲ್ಲಿ ಅಕ್ಟೋಬರ್‌ನಲ್ಲಿ ಆಲೂಗಡ್ಡೆಯನ್ನು ಚಪ್ಪರದಡಿಯಲ್ಲಿ ಬಿತ್ತುತ್ತಾನೆ. ಅದಕ್ಕೆ ಅಗತ್ಯವಾದ ಸೂರ್ಯನಬೆಳಕು ನವಂಬರ್, ಡಿಸಂಬರ್ ತಿಂಗಳಲ್ಲಿ ಸಿಗುತ್ತದೆ. ಆಲೂಗಡ್ಡೆಯನ್ನು ಫೆಬ್ರವರಿ – ಮಾರ್ಚ್ ತಿಂಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಈ ರೀತಿ ಸೂಕ್ತರೀತಿಯಲ್ಲಿ ಜಾಗ ಮತ್ತು ಸಮಯ ನಿರ್ವಹಣೆ ಮಾಡಿಕೊಳ್ಳುವ ಮೂಲಕ ರೈತರ ಮತ್ತೊಂದು ಬೆಳೆಯನ್ನು ಬೆಳೆಯುವುದರೊಂದಿಗೆ ಹೆಚ್ಚುವರಿ ಆದಾಯವನ್ನು ಗಳಿಸಬಹುದು.
ಏಕಬೆಳೆ ಮತ್ತು ಈ ಸಂಯೋಜನೆಯ ಬೆಳೆಯಿಂದ ಸಿಗುವ ನಿವ್ವಳ ಲಾಭವನ್ನು ಅಂದಾಜು ಮಾಡಲು ಒಂದು ಎಕರೆಯ ಮೂರು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಎರಡರಲ್ಲಿ ಏಕಬೆಳೆ (ಹಾಗಲಕಾಯಿ ಮತ್ತು ಆಲೂಗಡ್ಡೆ ಬೇರೆಬೇರೆಯಾಗಿ) ಮತ್ತೊಂದರಲ್ಲಿ ಬಹುಪದರ ಪದ್ಧತಿಯಂತೆ ಈ ಎರಡು ಬೆಳೆಗಳ ಸಂಯೋಜನೆಯನ್ನು ಬೆಳೆಯಲಾಯಿತು. ಹಾಗಲಕಾಯಿ ಮತ್ತು ಆಲೂಗಡ್ಡೆಯನ್ನು ಎರಡು ಬೇರೆ ತೋಟಗಳಲ್ಲಿಹಾಗಲಕಾಯಿ ಮತ್ತು ಆಲೂಗಡ್ಡೆಯನ್ನು ಬೆಳೆಯಲು ಒಂದು ಎಕರೆಗೆ ಒಳಸುರಿಯುವಿಕೆಗಳ ವೆಚ್ಚ ಸುಮಾರು ರೂ.೫೯,೦೦೦. ಆದರೆ ಎರಡೂ ಬೆಳೆಗಳನ್ನು ಬಹುಪದರ ಕೃಷಿ ವಿಧಾನದಲ್ಲಿ ಎರಡನ್ನೂ ಒಟ್ಟಾಗಿ ಬೆಳೆದಾಗ ಉತ್ಪಾದನ ವೆಚ್ಚ ರೂ.೩೮,೩೮೦ಗಳಷ್ಟಾಯಿತು. ಹಾಗಾಗಿ ಬಹುಪದರ ಕೃಷಿ ವ್ಯವಸ್ಥೆಯಲ್ಲಿ ಹಾಗಲಕಾಯಿ ಮತ್ತು ಆಲೂಗಡ್ಡೆಯನ್ನು ಒಟ್ಟಾಗಿ ಬೆಳೆಯಲು ಒಳಸುರಿಯುವಿಕೆಯ ವೆಚ್ಚ ೩೫%ನಷ್ಟು ತಗ್ಗಿತು. ಎರಡರಿಂದ ಬಂದ ಲಾಭದ ವ್ಯತ್ಯಾಸವು ಕ್ರಮವಾಗಿ ೨೫.೮೯% ಮತ್ತು ೪೫.೫೧%. ಆದ್ದರಿಂದ ಒಳಸುರಿಯುವಿಕೆ ಮತ್ತು ನಿವ್ವಳ ಲಾಭವು ಈ ಬೆಳೆ ಸಂಯೋಜನೆಯಲ್ಲಿ ಏಕಬೆಳೆಗೆ ಹೋಲಿಸಿದಾಗ ಹೆಚ್ಚು. ಇದನ್ನು ಕೋಷ್ಟಕ ೧ರಲ್ಲಿ ತೋರಿಸಲಾಗಿದೆ.
ಕೋಷ್ಟಕ ೧ : ಏಕಬೆಳೆ ಮತ್ತು ಹಾಗಲಕಾಯಿ ಮತ್ತು ಆಲೂಗಡ್ಡೆ ಬೆಳೆ ಸಂಯೋಜನೆಯಲ್ಲಿ ತಗಲುವ ಒಳ – ಹೊರ ಸುರಿಯುವಿಕೆಗಳ ವೆಚ್ಚ ಮತ್ತು ಲಾಭಗಳ ಹೋಲಿಕೆ
| ಬೆಳೆ | ಇಳುವರಿ (ಕ್ವಿಂಟಾಲ್ನಲ್ಲಿ)/ ಎಕರೆಗೆ | ಒಳಸುರಿಯುವಿಕೆ ವೆಚ್ಚ (ರೂ.ಗಳಲ್ಲಿ) | ಆದಾಯ (ರೂ.ಗಳಲ್ಲಿ) | ನಿವ್ವಳ ಲಾಭ (ರೂ.ಗಳಲ್ಲಿ) |
| ಹಾಗಲ ಕಾಯಿ | 56.70 | 29,880.00 | 56,700.00 | 26,900.00 |
| ಆಲೂಗಡ್ಡೆ | 98.92 | 29,200.00 | 49,460.00 | 20,260.00 |
| ಹಾಗಲ ಕಾಯಿ + ಆಲೂಗಡ್ಡೆ | 122.60 | 38,380.00 | 82,475.00 | 44,095.00 |
ಕೋಷ್ಟಕ ೨ : ತೊಂಡೆಕಾಯಿ ಮತ್ತು ಕೆಸುವಿನ ಗಡ್ಡೆಯನ್ನು ಏಕಬೆಳೆಗಳಾಗಿ ಮತ್ತು ಬೆಳೆಸಂಯೋಜನೆಯಲ್ಲಿ ಬೆಳೆಯಲು ತಗಲುವ ಒಳ – ಹೊರ ಸುರಿಯುವಿಕೆಗಳ ವೆಚ್ಚ ಮತ್ತು ಲಾಭಗಳ ಹೋಲಿಕೆ
| ಬೆಳೆ | ಇಳುವರಿ(ಕ್ವಿಂಟಾಲ್ನಲ್ಲಿ)/ ಎಕರೆಗೆ | ಒಳಸುರಿಯುವಿಕೆ ವೆಚ್ಚ (ರೂ.ಗಳಲ್ಲಿ) | ಆದಾಯ (ರೂ.ಗಳಲ್ಲಿ) | ನಿವ್ವಳ ಲಾಭ (ರೂ.ಗಳಲ್ಲಿ) |
| ಕೆಸುವಿನ ಗಡ್ಡೆ | 32.60 | 28,550.00 | 48,900.00 | 20,350.00 |
| ತೊಂಡೆಕಾಯಿ | 42.50 | 27,500.00 | 42,500.00 | 15,000.00 |
| ಕೆಸುವಿನ ಗಡ್ಡೆ + ತೊಂಡೆಕಾಯಿ | 69.25 | 33,840.00 | 81,625.00 | 47,785.00 |
೨. ತೊಂಡೆ ಕಾಯಿ ಮತ್ತು ಕೆಸುವಿನ ಗಡ್ಡೆ :
ತೊಂಡೆಕಾಯಿ (ಸ್ಥಳೀಯ ಹೆಸರು ʼಕುಂದ್ರುʼ) ಸಾಂಪ್ರದಾಯಿಕ ಬಳ್ಳಿಯಾಗಿದ್ದು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ತೊಂಡೆಕಾಯಿಯೊಂದಿಗೆ ಕೆಸುವಿನ ಗಡ್ಡೆಯನ್ನು ಬೆಳೆಯುವ ಯಶಸ್ವಿ ಪ್ರಯೋಗವನ್ನು ಒಂದು ಎಕರೆ ಭೂಮಿಯಲ್ಲಿ ಕೈಗೊಳ್ಳಲಾಯಿತು. ಇವೆರೆಡೂ ಖಾರಿಫ್ ಬೆಳೆಗಳು. ಇವುಗಳ ಸಂಯೋಜನೆಯನ್ನು ಆಯ್ಕೆ ಮಾಡುವ ಮೊದಲು ಇವು ನೀರನ್ನು ತಡೆದುಕೊಳ್ಳುವ ಗುಣ, ಸೂರ್ಯರಶ್ಮಿಯ ಲಭ್ಯತೆ ಇವುಗಳನ್ನು ಮುಖ್ಯವಾಗಿ ಗಮನಿಸಲಾಯಿತು. ತೊಂಡೆಕಾಯಿ ನಿಂತನೀರನ್ನು ೧೫-೧೮ ದಿನಗಳವರೆಗೂ ತಡೆದುಕೊಳ್ಳಬಲ್ಲ ಬೆಳೆ. ಕೆಸುವಿನ ಗಡ್ಡೆಗೆ ಹೆಚ್ಚಿನ ಸೂರ್ಯರಶ್ಮಿ ಬೇಕಿಲ್ಲ. ಈ ಬೆಳೆ ಸಂಯೋಜನೆಯ ವೆಚ್ಚ ಹಾಗೂ ಲಾಭವನ್ನು ಕೋಷ್ಟಕ ೨ರಲ್ಲಿ ಕೊಡಲಾಗಿದೆ. ಈ ಪ್ರಯೋಗದಲ್ಲಿ ಹೆಚ್ಚುವರಿ ಬೆಳೆಯು ಲಾಭವನ್ನು ಹೆಚ್ಚಿಸುತ್ತದೆ. ಜೊತೆಗೆ ಒಂದು ವೇಳೆ ಪ್ರವಾಹ ಅಥವಾ ಮತ್ತಾವುದಾದರೂ ಕಾರಣಕ್ಕೆ ತೊಂಡೆಕಾಯಿ ಬೆಳೆಗೆ ಹಾನಿಯಾಗಿ ಇಳುವರಿ ಕಡಿಮೆಯಾದಲ್ಲಿ ಅದನ್ನು ಸರಿದೂಗಿಸುತ್ತದೆ. ಏಕಬೆಳೆಯಾಗಿ ಮತ್ತು ಬೆಳೆ ಸಂಯೋಜನೆಯಡಿ ಬೆಳೆದಾಗ ಇವೆರೆಡರ ನಡುವಿನ ಲಾಭದಲ್ಲಿ ೭೫.೯% ಮತ್ತು ೯೨.೫%ನಷ್ಟು ವ್ಯತ್ಯಾಸವಿತ್ತು.
ಕೋಷ್ಟಕ ೩ : ಸೋರೆಕಾಯಿ ಮತ್ತು ಎಲೆಕೋಸುಗಳನ್ನು ಏಕಬೆಳೆ ಮತ್ತು ಸಂಯೋಜಿತ ಬೆಳೆಯಾಗಿ ಬೆಳೆದಾಗ ತಗಲುವ ಒಳ – ಹೊರ ಸುರಿಯುವಿಕೆಗಳ ವೆಚ್ಚ ಮತ್ತು ಲಾಭಗಳ ಹೋಲಿಕೆ
| ಬೆಳೆ | ಇಳುವರಿ (ಕ್ವಿಂಟಾಲ್ನಲ್ಲಿ)/ಎಕರೆಗೆ | ಒಳಸುರಿಯುವಿಕೆಯ ವೆಚ್ಚ (ರೂ.ಗಳಲ್ಲಿ) | ಆದಾಯ (ರೂ. ಗಳಲ್ಲಿ) | ನಿವ್ವಳ ಲಾಭ (ರೂ. ಗಳಲ್ಲಿ) |
| ಸೋರೆಕಾಯಿ | 53.50 | 28,186.00 | 53,500.00 | 25,314.00 |
| ಎಲೆಕೋಸು | 120.00 | 33,800.00 | 60,000.00 | 26,200.00 |
| ಸೋರೆಕಾಯಿ + ಎಲೆಕೋಸು | 145.00 | 40,360.00 | 96,800.00 | 56,440.00 |
೩. ಸೋರೆಕಾಯಿ ಮತ್ತು ಎಲೆಕೋಸು : ಮೂರನೆಯ ಯಶಸ್ವಿ ಸಂಯೋಜನೆ – ಸೋರೆಕಾಯಿ ಬಳ್ಳಿ ತರಕಾರಿಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುವ ಎಲೆಕೋಸಿನೊಂದಿಗೆ ಬೆಳೆಸಲಾಯಿತು. ಎರಡೂ ತರಕಾರಿಗಳಿಗೂ ಹೆಚ್ಚಿನ ಸೂರ್ಯನಬೆಳಕು ಬೇಕು. ಈ ಬೆಳೆಗಳ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡ ಹಿನ್ನಲೆಯಲ್ಲಿ ಸೂರ್ಯನ ಬೆಳಕಿನ ಲಭ್ಯತೆಯನ್ನು ಮುಖ್ಯವಾದ ಅಂಶವಾಗಿ ಪರಿಗಣಿಸಲಾಯಿತು. ಸೋರೆಕಾಯಿಯನ್ನು ಜೂನ್ – ಜುಲೈ ತಿಂಗಳಲ್ಲಿ ನೆಡಲಾಗುತ್ತದೆ. ಇದು ಬೆಳೆಯಲು (ಆಗಸ್ಟ್ – ಸೆಪ್ಟಂಬರ್) ಎರಡು ತಿಂಗಳು ಬೇಕಾಗುತ್ತದೆ. ನವಂಬರ್ – ಡಿಸಂಬರ್‌ನಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿ ಎಲೆಗಳು ಉದುರುತ್ತವೆ. ಹಾಗಾಗಿ ಸೂರ್ಯರಶ್ಮಿ ನೆಲತಾಗುತ್ತದೆ. ರೈತರು ಎಲೆಕೋಸಿನ ಸಸಿಗಳನ್ನು ನವಂಬರ್ ಕೊನೆಯ ವೇಳೆಗೆ ನರ್ಸರಿಯಿಂದ ತಂದು ನಾಟಿ ಮಾಡುತ್ತಾರೆ. ಎಲೆಕೋಸು ಡಿಸಂಬರ್ – ಜನವರಿ -ಫೆಬ್ರವರಿಯಲ್ಲಿ ಕೊಯ್ಲು ಮಾಡಲಾಗುತ್ತದೆ. ಆದ್ದರಿಂದ ಬಹುಪದರ ಕೃಷಿ ತಂತ್ರವು ಎರಡೂ ಬೆಳೆಗಳನ್ನು ಬೆಳೆದು ಲಾಭ ಪಡೆಯಲು ನೆರವಾಗುತ್ತದೆ.
ಬೀರಲ್ ಸಣ್ಣ ತರಕಾರಿ ಬೆಳೆಗಾರ ಗೋರಖಪುರ್ ಜಿಲ್ಲೆಯ ಕ್ಯಾಪೇರ್‌ಗಂಜ್‌ನ ಸೂರಸ್ ಎನ್ನುವ ಹಳ್ಳಿಯಲ್ಲಿದ್ದಾನೆ. ಆತ ತನ್ನ ೦.೧೮ ಎಕರೆ ಭೂಮಿಯಲ್ಲಿ ಮುಖ್ಯವಾಗಿ ತರಕಾರಿಗಳನ್ನು ಬೆಳೆಯುತ್ತಾನೆ. ಅವನು ತುಪ್ಪರಿ ಕಾಯಿ, ಹಾಗಲ ಕಾಯಿ, ಹುರುಳಿ ಕಾಯಿ, ಬದನೆ ಕಾಯಿ, ಹೀರೆಕಾಯಿ ಮತ್ತು ಟೊಮೊಟೊ ಬೆಳೆಯುತ್ತಾನೆ. ಮೊದಲ ಬಾರಿಗೆ ೨೦೨೦-೨೧ರಲ್ಲಿ ಆತ ತನ್ನ ಭೂಮಿಯಲ್ಲಿ ಬಹುಪದರ ಕೃಷಿ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆದ. ಆತ ಚಪ್ಪರದ ಮೇಲೆ ಹಾಗಲ ಕಾಯಿ ಬೆಳೆದ. ಜೊತೆಗೆ ತುಪ್ಪರಿ ಕಾಯನ್ನು ತೋಟದ ನಾಲ್ಕೂ ಕಡೆ ನೆಟ್ಟ. ಇದರಿಂದ ಆತನಿಗೆ ಒಳಸುರಿಯುವಿಕೆಗಳಿಗೆ ತಗುಲಿದ ವೆಚ್ಚ ಬೀಜಗಳು, ತೋಟದ ನಿರ್ಮಾಣ ಮತ್ತು ನೀರಾವರಿಗೆ ರೂ. ೫,೮೭೦.೦೦ ಮತ್ತು ಚಪ್ಪರ ಹಾಕಲು ರೂ.೪,೫೦೦.
ಮಾರ್ಚ್‌ನಿಂದ ಮೇ ೨೦೨೦ರವರೆಗಿನ ಲಾಕ್‌ಡೌನ್ ಸಮಯದಲ್ಲಿ ಕೂಡ “ಕಳೆದ ಮೂರು ತಿಂಗಳಲ್ಲಿ ಹುರುಳಿಕಾಯಿ ಮಾರಾಟದಿಂದ ರೂ.೫,೮೯೦ ಮತ್ತು ಹಾಗಲ ಕಾಯಿ ಮಾರಾಟದಿಂದ ರೂ. ೧೩,೯೭೦” ಗಳಿಸಿದ್ದೇನೆ ಎಂದು ಬೀರಬಲ್ ಹೇಳುತ್ತಾನೆ. ಈ ರೀತಿ ಆತ ಒಟ್ಟಾರೆ ರೂ. ೧೦,೩೭೦ ಹೂಡಿಕೆ ಮಾಡಿ ಒಟ್ಟಾರೆಯಾಗಿ ಎರಡು ಬೆಳೆಗಳಿಂದ ರೂ. ೧೯,೮೬೦ ಗಳಿಸಿದ್ದಾನೆ. ಆತ ಗಳಿಸಿದ ನಿವ್ವಳ ಲಾಭ ರೂ.೯,೪೯೦ (ಒಳಸುರಿಯುವಿಕೆಗಳ ವೆಚ್ಚಕ್ಕಿಂತ ೯೧% ಹೆಚ್ಚು). ಬೀರಬಲ್‌ನ ಆದಾಯವನ್ನು ಆತನ ಪಕ್ಕದ ತೋಟದ ರೈತ ಶ್ರೀ ಪಾಯಿಕರಣ್ ನೊಂದಿಗೆ ಹೋಲಿಸಲಾಯಿತು. ಆತ ತನ್ನ ೦.೧೮ ಎಕರೆಯಲ್ಲಿ ಒಳಸುರಿಯುವಿಕೆಗಳಿಗಾಗಿ ರೂ. ೧೧,೫೦,೦೦೦ರಷ್ಟನ್ನು ವೆಚ್ಚ ಮಾಡಿದ. ಆತ ಹಾಗಲ ಕಾಯಿಂದ ಒಳ್ಳೆಯ ಇಳುವರಿ ಪಡೆದ. ಅದನ್ನು ರೂ.೧೬,೦೦೦ಕ್ಕೆ ಮಾರಾಟ ಮಾಡಿದ. ಒಟ್ಟು ಲಾಭವನ್ನು ಗಮನಿಸಿದಾಗ ಬೀರಬಲ್ ಶ್ರೀ ಪಾಯಿಕರಣ್ ಆತನಷ್ಟೇ ಭೂಮಿ ಹೊಂದಿದ್ದು ೫೨.೩೭% ಗಳಿಸಿದ.
ಪರಿಣಾಮಗಳು
ಮೇಲೆ ಹೇಳಿದ ಬೆಳೆ ಸಂಯೋಜನೆಗಳು ಬಹುಪದರ ಕೃಷಿ ಪದ್ಧತಿಯಲ್ಲಿ ರೈತರ ಲಾಭವನ್ನು ಹೆಚ್ಚಿಸಿದವು. ಅದೇ ಸಂದರ್ಭದಲ್ಲಿ ಕೊಯ್ಲಿನ ಸಮಯವನ್ನು ಹೆಚ್ಚಿಸಿ ರೈತರಿಗೆ ದೀರ್ಘಾವಧಿಗೆ ಆದಾಯ ತಂದುಕೊಟ್ಟವು. ಈ ತಂತ್ರಜ್ಞಾನದ ಉಪಯೋಗಗಳು :
- ಭೂಮಿಯ ಪ್ರತಿ ಘಟಕದ ಉತ್ಪಾದನೆ ಹೆಚ್ಚಿತು.
- ಹೆಚ್ಚುವರಿ ಸಮಯಕ್ಕೆ ಮಾರುಕಟ್ಟೆ ಆದಾಯ
- ಮಣ್ಣಿನ ತೇವಾಂಶದ ರಕ್ಷಣೆಯೊಂದಿಗೆ ಮಣ್ಣಿನ ಪೌಷ್ಟಿಕಾಂಶಗಳ ಗರಿಷ್ಠ ಬಳಕೆ
- ಹೆಚ್ಚು ಭೂಮಿಯ ಸಮಾನ ಅನುಪಾತ (Land Equivalent Ratio (LER)
ಹಲವು ಪ್ರಯೋಗಗಳಲ್ಲಿ ಗಮನಿಸಿದಂತೆ ಬೆಳೆ ಸಂಯೋಜನೆ ಮತ್ತು ಬಹುಪದರ ಕೃಷಿ ಪದ್ಧತಿಯು ರೈತರಿಗೆ ಒಳಸುರಿಯುವಿಕೆಗಳ ವೆಚ್ಚ ತಗ್ಗಿಸಿ ಹೆಚ್ಚಿನ ಲಾಭ ತಂದುಕೊಟ್ಟಿದೆ. ಇದಕ್ಕೆ ಕಾರಣ ಸಂಪನ್ಮೂಲಗಳ ಸಮರ್ಪಕ ಬಳಕೆ, ಒಳಸುರಿಯುವಿಕೆಗಳ ಅಗತ್ಯ ತಗ್ಗಿದ್ದು (ರಸಗೊಬ್ಬರಗಳು, ಕೀಟನಾಶಕಗಳು, ನೀರಾವರಿ, ಕೂಲಿ) ಮತ್ತು ಪ್ರವಾಹ ಮತ್ತಿತರ ಕಾರಣಗಳಿಂದಾಗುವ ಬೆಳೆ ಹಾನಿ ತಪ್ಪಿದ್ದು. ನಿವ್ವಳ ಲಾಭದೊಂದಿಗೆ LER ಹೆಚ್ಚಾದದ್ದರಿಂದ ರೈತರು ಕೃಷಿಯಿಂದ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಮೇಲೆ ವಿವರಿಸಿದ ವಿಶ್ಲೇಷಣೆಯನ್ನು ನೋಡಿದಾಗ ತರಕಾರಿ ಆಧಾರಿತ ಪ್ರವಾಹ ತಾಳಿಕೆಯ ಬಹುಪದರ ಕೃಷಿ ತಂತ್ರವು ಹೆಚ್ಚು ಲಾಭದಾಯಕವಾಗಿದೆ.
ಇದರಿಂದಾಗುವ ಲಾಭಗಳು ಹೀಗಿವೆ :
- ರೈತರು ಒಂದೇ ಭೂಮಿಯಲ್ಲಿ ಎರಡೂ ಅಥವ ಹೆಚ್ಚು ಬೆಳೆಗಳನ್ನು ಏಕಕಾಲಕ್ಕೆ ಬೆಳೆಯಬಹುದು. ಇದರಿಂದ ಪ್ರತಿ ಸಂಯೋಜನೆಯಿಂದ ಹೆಚ್ಚಿನ ಲಾಭವನ್ನು (೧೧೫% ಇಂದ ೧೪೭%)ವರೆಗೆ ಅದೇ ಭೂಮಿಯಿಂದ ಪಡೆಯಬಹುದಾಗಿದೆ.
- ಎರಡೂ ಬೆಳೆಗಳ ಅವಶ್ಯಕತೆಗಳನ್ನು ಒಂದೇ ನೀರಾವರಿ, ಗೊಬ್ಬರ, ಕಳೆ ಮತ್ತು ಉತ್ತುವಿಕೆಯೊಂದಿಗೆ ಮಾಡಬಹುದು. ಇದರಿಂದ ಸರಿಸುಮಾರು ೩೩% ಹೆಚ್ಚುವರಿ ಒಳಸುರಿಯುವಿಕೆಗಳ ವೆಚ್ಚ ತಗ್ಗಿ ಲಾಭಾಂಶ ಹೆಚ್ಚುತ್ತದೆ.
- ಬಹುಪದರ ಕೃಷಿಯಲ್ಲಿ ವೈವಿಧ್ಯತೆಯನ್ನು ಒಳಗೊಳ್ಳುವುದರಿಂದ ಮಣ್ಣಿನ ಗುಣಮಟ್ಟ ಮತ್ತು ಪೌಷ್ಟಿಕಾಂಶ ಹೆಚ್ಚುತ್ತದೆ. ಜೊತೆಗೆ ಒಂದೇ ಭೂಮಿಯಲ್ಲಿ ಒಂದೇ ಸಾರಿಗೆ ಅನೇಕ ಬೆಳೆಗಳನ್ನು ಬೆಳೆಯುವುದರಿಂದ ರೋಗ ಮತ್ತು ಸೋಂಕಿನ ತೊಂದರೆಗಳು ಕಡಿಮೆಯಾಗುತ್ತವೆ.
ಉಪಸಂಹಾರ
ಈ ತಂತ್ರಜ್ಞಾನವು ಇಂಡೋ-ಗಂಗಾ ಬ್ರಹ್ಮಪುತ್ರ ಬಯಲು ಪ್ರದೇಶದಲ್ಲಿನ ಸಣ್ಣ ಹಾಗೂ ಮಧ್ಯಮ ರೈತರಿಗೆ ಸೂಕ್ತವಾಗಿದೆ. ಇಲ್ಲಿ ಯಂತ್ರಗಳ ಬಳಕೆಗೆ ಅವಕಾಶ ಬಹಳ ಕಡಿಮೆ. ಆರಂಭದಲ್ಲಿ ಈ ತಂತ್ರವನ್ನು ಸಣ್ಣ ಪ್ರದೇಶದಲ್ಲಿ ೯ ಮಂದಿ ಮಾದರಿ ರೈತರನ್ನಿಟ್ಟುಕೊಂಡು ಆರು ತರಕಾರಿ ಸಂಯೋಜನೆಗಳೊಂದಿಗೆ ಪರೀಕ್ಷಿಸಲಾಯಿತು. ಇವರು ಉತ್ತರಪ್ರದೇಶದ ಗೋರಖ್‌ಪುರದ ಕ್ಯಾಂಪಿಯರ್‌ಗಂಜ್‌ನ ಜಂಗಲ್ ಕೌಡಿಯ, ಬಿಹಾರದ ಪಶ್ಚಿಮ ಚಂಪಾರಣ್‌ನ ನೌಟನ್ ಭಾಗಕ್ಕೆ ಸೇರಿದವರು. ಎರಡು ವರ್ಷಗಳಲ್ಲಿ ಇದು ಗೋರಖ್‌ಪುರ ಮತ್ತು ಪಶ್ಚಿಮ ಚಂಪಾರಣ್‌ನ ೨೬೫ ಕುಟುಂಬಗಳಿಗೆ ವಿಸ್ತರಿಸಿತು. ಈಗ ರೈತರು ಇನ್ನಷ್ಟು ಸಂಯೋಜನೆಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಜೊತೆಗೆ ಹೆಚ್ಚಿನ ಲಾಭ ಪಡೆಯಲು ಮತ್ತು ಪ್ರವಾಹ ಮತ್ತಿತರ ಕಾರಣಗಳಿಂದಾಗುವ ಬೆಳೆಹಾನಿಯನ್ನು ತಪ್ಪಿಸಿಕೊಳ್ಳುವ ಹೊಸದಾರಿಗಳನ್ನು ಹುಡುಕುತ್ತಿದ್ದಾರೆ.
ಕೃತಜ್ಞತೆಗಳು
ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ SEED ವಿಭಾಗದವರು ಸಣ್ಣ ಮತ್ತು ಮಧ್ಯಮ ರೈತರಿಗೆ ಉಪಯೋಗವಾಗುವಂತೆ CORE ಯೋಜನೆಯಡಿ ತಂತ್ರಜ್ಞಾನ ಅಭಿವೃದ್ಧಿ ಮಾಡಲು ಆರ್ಥಿಕ ನೆರವನ್ನು ನೀಡಿದ್ದಕ್ಕೆ ಅಭಾರಿಯಾಗಿದ್ದೇವೆ.
ವಾಜಿಹ್ ಎಸ್, ಸಿಂಗ್ ಬಿಕೆ, ಸಿಂಗ್ ಎಕೆ ಮತ್ತು ಶ್ರೀವತ್ಸ ಎ
Wajih S
Gorakhpur Environmental Action Group
224, Purdilpur, M G College Road
Gorakhpur – 273 001, Uttar Pradesh, INDIA
E-mail: geag@geagindia.org
Website: www.geagindia.org
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೩ ; ಸೆಪ್ಟಂಬರ್ ೨೦೨೦



