ಸಾವಯವ ತರಕಾರಿ ಕೃಷಿ


ತುಮಕೂರಿನ ತರಕಾರಿ ಬೆಳೆಗಾರರು ಬದಲಿ ಪರಿಸರ ವ್ಯವಸ್ಥೆಗಳಿಗೆ ಹೊರಳುವ ಮೂಲಕ ಲಾಭವನ್ನು ಗಳಿಸುತ್ತಿದ್ದಾರೆ. ಮೂಲಕ ಅವರು ತಮ್ಮ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳು ಹಾಗೂ ಮರಗಳನ್ನು ಬೆಳೆಸುವುದರೊಂದಿಗೆ ಸುಸ್ಥಿರತೆಯನ್ನು ಗಳಿಸಿಕೊಂಡಿದ್ದಾರೆ.


ತುಮಕೂರಿನ ಉರ್ಡಿಗೆರೆ, ಕೊಲ್ಲಾಲ ಮತ್ತು ಕೊರಟೆಗೆರೆ ಸಾಂಪ್ರದಾಯಿಕವಾಗಿ ತರಕಾರಿ ಕೃಷಿಗೆ ಹೆಸರುವಾಸಿಯಾಗಿದೆ. ಸುಮಾರು ೭೬% ಕೃಷಿ ಸಮುದಾಯವು ಸಣ್ಣ ಮತ್ತು ಮಧ್ಯಮ ಗಾತ್ರದ ಭೂಮಿಯನ್ನು ಹೊಂದಿದ್ದು ಒಂದರಿಂದ ಎರಡು ಎಕರೆಗಳಷ್ಟನ್ನು ಹೊಂದಿದ್ದಾರೆ. ಹಲವಾರು ರೈತರು ತಮ್ಮ ಜೀವನೋಪಾಯಕ್ಕಾಗಿ ತರಕಾರಿ ಕೃಷಿಯನ್ನು ಅವಲಂಭಿಸಿದ್ದಾರೆ.

ಬಹಳಷ್ಟು ಮಂದಿ ರೈತರು ತರಕಾರಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಅವರು ಸಾಮಾನ್ಯವಾಗಿ ಟೊಮೊಟೊ, ಹುರಳಿಕಾಯಿ, ಬದನೆಕಾಯಿ, ಬೆಂಡೆಕಾಯಿ, ಆಲೂಗಡ್ಡೆ, ಮೆಣಸಿನಕಾಯಿ, ಹೂಕೋಸು ಮತ್ತು ಸೊಪ್ಪನ್ನು ಬೆಳೆಯುತ್ತಿದ್ದಾರೆ. ರೈತರು ಮಾರುಕಟ್ಟೆಗಾಗಿ ಬೆಳೆಯುವುದರಿಂದ ಹೆಚ್ಚಿನ ಬೆಳೆ ಪಡೆಯಲು ರಾಸಾಯನಿಕ ಗೊಬ್ಬರಗಳು, ಕೀಟ ಹಾಗೂ ಕಳೆನಾಶಕಗಳನ್ನು ಬಳಸುತ್ತಾರೆ. ರೈತರಿಗೆ ಸಾವಯವ ಪದ್ಧತಿಗಳ ಬಗ್ಗೆ ಗೊತ್ತಿಲ್ಲ. ಅವರು ಮಣ್ಣು ಮತ್ತು ನೀರಿನ ಸಂರಕ್ಷಣೆಯಂತಹ ತಂತ್ರಗಳನ್ನು ಅನುಸರಿಸುವುದಿಲ್ಲ. ಜೊತೆಗೆ ಸುಧಾರಿತ ಪದ್ಧತಿಗಳ ಕುರಿತು ಸಮಯಕ್ಕೆ ಸರಿಯಾಗಿ ಮಾರ್ಗದರ್ಶನ ದೊರಕದ ಕೊರತೆಯನ್ನು ಎದುರಿಸುತ್ತಿದ್ದಾರೆ. ಪರಸ್ಪರರ ತಿಳಿವಳಿಕೆ ಹಾಗೂ ಕಲಿಕೆಯನ್ನು ಹಂಚಿಕೊಳ್ಳುವ ಯಾವುದೇ ವೇದಿಕೆಯಿಲ್ಲ.

ರೈತರು ಸಾವಯವ ಕೃಷಿ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರತಿ ತಿಂಗಳು ಸೇರುತ್ತಾರೆ

ಆವಿಷ್ಕಾರ ಎನ್ನುವ ಅಭಿವೃದ್ಧಿ ಸಂಸ್ಥೆಯು ಈ ಭಾಗದಲ್ಲಿ ೨೦೧೧ರಿಂದ ಕೆಲಸ ಮಾಡುತ್ತಿದೆ. ಮಹಿಳಾ ಸಬಲೀಕರಣ, ಹಳ್ಳಿ ಮಟ್ಟದ ಸಂಸ್ಥೆಗಳು ಮತ್ತು ಕೃಷಿ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಇದು ಗಮನಕೇಂದ್ರೀಕರಿಸಿದೆ. ಆವಿಷ್ಕಾರ ೧೫೭ ಸ್ವಸಹಾಯ ಸಂಘಗಳು ಮತ್ತು ೨೦ ರೈತರ ಗುಂಪುಗಳನ್ನು ತುಮಕೂರು ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಪ್ರಚುರಪಡಿಸಿದೆ.

೨೦೧೭ರಲ್ಲಿ ಆವಿಷ್ಕಾರವು ಅಮೆರಿಕದ ಸೇವ್‌ ಇಂಡಿಯನ್‌ ಫಾರ್ಮರ್ಸ್‌ನೊಂದಿಗೆ ಸೇರಿ ಈ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸಲು ಸಾವಯವ ಕೃಷಿ ಯೋಜನೆಯನ್ನು ಕೈಗೆತ್ತಿಕೊಂಡಿತು. ೨೦೧೭-೧೮ರಲ್ಲಿ ಇದು ೧೫ ರೈತರಿಗೆ ಮತ್ತು ೨೦೧೮-೧೯ರಲ್ಲಿ ೧೭ ರೈತರಿಗೆ ವಿವಿಧ ಚಟುವಟಿಕೆಗಳ ಮೂಲಕ ನೆರವು ನೀಡಿತು.

ಪ್ರತಿ ಹಳ್ಳಿಯಿಂದ ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಇಬ್ಬರು ಇಲ್ಲವೇ ಮೂವರು ರೈತರನ್ನು ಹಳ್ಳಿಗಳ ಸಭೆಗೆ ಆಯ್ಕೆ ಮಾಡಲಾಯಿತು. ರೈತರಿಗೆ ಸಾವಯವ ಕೃಷಿ ಪದ್ಧತಿಯಲ್ಲಿ ತರಬೇತಿ ನೀಡಲಾಯಿತು. ಯಶಸ್ವಿ ಸಾವಯವ ತೋಟಗಳಿಗೆ ಭೇಟಿಗಳನ್ನು ಏರ್ಪಡಿಸಲಾಯಿತು. ರೈತರು ದೊಡ್ಡಬಳ್ಳಾಪುರದ ಶ್ರೀ ನಾರಾಯಣರೆಡ್ಡಿಯವರ ತೋಟಕ್ಕೆ ಮತ್ತು  ಹುಣಸೂರಿನ ಶ್ರೀ ಕೋಡಿಪಾಪಣ್ಣನವರ ತೋಟಕ್ಕೆ ಮತ್ತು ತಿಪಟೂರಿನ BAIFಗೆ ಭೇಟಿ ನೀಡಿದರು.

ಎರೆಹುಳಗೊಬ್ಬರ ಮತ್ತು ಮರ ಆಧಾರಿತ ಸಾವಯವ ಕೃಷಿ ಪದ್ಧತಿಗಳನ್ನು ಪ್ರಚುರಪಡಿಸಲು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಯಿತು. ಆರಂಭದಲ್ಲಿ ಸಾವಯವ ಪ್ರಾತ್ಯಕ್ಷಿಕೆಗಳ ಪ್ರಾತ್ಯಕ್ಷಿಕೆಗೆ ೧೦ ರಿಂದ ೧೫ ಗುಂಟೆಗಳನ್ನು ತೆಗೆದುಕೊಳ್ಳಲಾಯಿತು. ಇದರಲ್ಲಿ ಹುರುಳಿಕಾಯಿ, ಬದನೆ, ಟೊಮೊಟೊ ಮತ್ತು ಸೊಪ್ಪನ್ನು ಬೆಳೆಸಲಾಯಿತು. ಪೌಷ್ಟಿಕಾಂಶಯುಕ್ತ ಗೊಬ್ಬರ, ಜೀವಾಮೃತ, ಎರೆಹುಳು ಗೊಬ್ಬರ ಸೋಸಿದ ನೀರು, ಬೇವಿನ ಹಿಂಡಿ, ಎಎಂಸಿ (ಅರ್ಕಾ ಮೈಕ್ರೊಬಿಯಲ್‌ ಕಾನ್ಸೊರ್ಟಿಯಂ), ಟ್ರೈಕೋಡರ್ಮಾ, ಬೇವಿನ ಸೋಪು, ಬೇವಿನೆಣ್ಣೆ, ದಾಸಪರ್ನಿ ಇವುಗಳ ಬಳಕೆಯನ್ನು ಪ್ರಚುರಪಡಿಸಲಾಯಿತು. ಜೀವಾಮೃತ, ದಾಸಾಪರ್ನಿ ಮತ್ತು ಪೌಷ್ಟಿಕಾಂಶಯುಕ್ತ ಗೊಬ್ಬರಗಳನ್ನು ಅವರೇ ತಯಾರಿಸಲು ಅನುವು ಮಾಡಿಕೊಡುವ ಮೂಲಕ ತರಬೇತಿ ನೀಡಲಾಯಿತು.

ರೈತರ ತೋಟಗಳಲ್ಲಿ ಎರೆಹುಳುಗೊಬ್ಬರವನ್ನು ಬಳಸುವುದರಿಂದ ಎರೆಹುಳು ಸಂತತಿ ಹೆಚ್ಚುತ್ತದೆ.

ಆಯಾ ಹಳ್ಳಿಗಳಲ್ಲಿ ತಿಂಗಳ ಸಭೆ ನಡೆದಾಗ ಸಾವಯವ ಕೃಷಿಯಲ್ಲಿನ ಹಲವಾರು ಹೊಸ ತಂತ್ರಜ್ಞಾನಗಳ ಕುರಿತು ರೈತರಿಗೆ ತಿಳಿಸಲಾಯಿತು. ಕೆವಿಕೆ, ಹೀರೆಹಳ್ಳಿ ಮತ್ತಿತರ ತೋಟಗಾರಿಕಾ ಪರಿಣಿತರು ತಾಂತ್ರಿಕ ನೆರವನ್ನು ನೀಡಿದರು.

ರೈತರು ಎರೆಹುಳು ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸಲು, ಸಸ್ಯಜನ್ಯ ಕೀಟನಾಶಕ ತಯಾರಿಕೆಗೆ ಬೇಕಾದ ಡ್ರಮ್ಮುಗಳಿಗೆ ನೆರವು, ಸೋಲಾರ್‌ ಟ್ರಾಪ್‌ ಬಳಕೆ ಕುರಿತಂತೆ ತರಬೇತಿಯನ್ನು ನೀಡಲಾಯಿತು. ರೈತರಿಗೆ ಪ್ರತಿ ಎಕರೆಗೆ ೪೦-೫೦ ಹಣ್ಣಿನ ಗಿಡಗಳು ಮತ್ತು ೭೦-೮೦ ಕಾಡು ಮರಗಳನ್ನು ನೆಡಲು ನೀಡಲಾಯಿತು. ಮೇವು ಗಿಡಗಳಾದ ಸೇಸಬನಿಯಾ ಮತ್ತು  ಹೆಮಾಟಗಳನ್ನು ಬದುಗಳಲ್ಲಿ ನೆಡುವಂತೆ ಹೇಳಲಾಯಿತು. ಹಣ್ಣಿನ ಗಿಡಗಳು ಮತ್ತು ಕಾಡು ಮರಗಳನ್ನು ಕೂಡ ಬದುಗಳಲ್ಲಿ ನೆಡಲಾಯಿತು. ಭಾಗವಹಿಸಿದವರ ಭೂಮಿಯಲ್ಲಿ ಬಹುಬೆಳೆ ಹಾಗೂ ಬೆಳೆ ಆವರ್ತನೆಯನ್ನು ಅಳವಡಿಸಿಕೊಳ್ಳಲಾಯಿತು.

ಫಲಿತಾಂಶಗಳು

ಪ್ರತಿಯೊಬ್ಬ ರೈತನು ಒಂದು ಎಕರೆಯಲ್ಲಿ ತರಕಾರಿಗಳನ್ನು ಬೆಳೆದ. ರೈತರು ಬದನೆಕಾಯಿ, ಹೀರೆ ಕಾಯಿ, ಹಾಗಲ ಕಾಯಿ, ಟೊಮೊಟೊ ಮತ್ತು ಹುರುಳಿಕಾಯಿ ಬೆಳೆದರು.

ರೈತರಿಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಪೌಷ್ಟಿಕಾಂಶಯುಕ್ತ ಗೊಬ್ಬರ, ಜೀವಾಮೃತ, ಹಸಿರು ಗೊಬ್ಬರ ಮತ್ತು ಎರೆಹುಳಗೊಬ್ಬರದ ಮಹತ್ವದ ಅರಿವಾಯಿತು. ಅವರು ಬೀಜೋತ್ಪಾದನೆ, ಬೀಜೋಪಚಾರ, ಎರೆಹುಳುಗೊಬ್ಬರ, ಜೀವಾಮೃತ ಬಳಕೆ, ಪಾತಿಗೆ ಹೊದಿಕೆ ಹೊದಿಸುವುದು ಮತ್ತು ಸಾವಯವ ತರಕಾರಿ ಕೃಷಿ ಪದ್ಧತಿಗಳನ್ನು ಪ್ರಾಮಾಣಿಕವಾಗಿ ಅಳವಡಿಸಿಕೊಂಡರು.

ಐದು ಮಂದಿ ರೈತರು ಎರೆಹುಳು ಗೊಬ್ವರವನ್ನು ಉತ್ಪಾದಿಸುತ್ತಿದ್ದಾರೆ. ಎರೆಹುಳು ಗೊಬ್ಬರದ ಬಳಕೆಯಿಂದ ರೈತರ ತೋಟಗಳಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ.

ಯೋಜನೆಯಲ್ಲಿ ಭಾಗವಹಿಸಿದ ರೈತರೆಲ್ಲರೂ ಹುರುಳಿ, ಅಲಸಂದೆಯ ಬೀಜಗಳ ಹಸಿರು ಗೊಬ್ಬರವನ್ನು ಬೇವಿನ ಹಿಂಡಿ ಮತ್ತು ಜೀವಾಮೃತವನ್ನು ಬಳಸಲಾರಂಭಿಸಿದರು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿತು ಮತ್ತು ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವು ಹೆಚ್ಚಿತು.

ಕೃಷಿ ಪದ್ಧತಿಗಳು ರೈತರು ಅಳವಡಿಸಿಕೊಂಡ ತಂತ್ರಜ್ಞಾನ
ಮಣ್ಣು ಮತ್ತು ತೇವಾಂಶ ಸಂರಕ್ಷಣೆ ಮಣ್ಣು ಮತ್ತು ನೀರಿನ ನಿರ್ವಹಣಾ ಪದ್ಧತಿಗಳು
ಮರ ಆಧಾರಿತ ಕೃಷಿ ರೈತರು ಕ್ರಮೇಣ ಮರ ಆಧಾರಿತ ಕೃಷಿಯ ಮಹತ್ವವನ್ನು ಅರಿತರು. ಈಗವರು ಅಡವಿ ಮರಗಳು ಹಾಗೂ ತೋಟಗಾರಿಕೆ ಗಿಡಗಳನ್ನು ನೆಡುತ್ತಿದ್ದಾರೆ.
ಬೀಜೋಪಚಾರ ಎಎಂಸಿ, ಟ್ರೈಕೊಡರ್ಮಾ ಮತ್ತು ಬೀಜಾಮೃತ ಬಳಸಿ ಬೀಜೋಪಚಾರ
ಬಿತ್ತನೆ ಮತ್ತು ನಾಟಿ ಎಳೆಯ ಸಸಿಗಳನ್ನು ಬಳಸಲಾಯಿತು, ಸಸಿಗಳ ನಡುವೆ ಅಂತರ ಹೆಚ್ಚಿಸಲಾಯಿತು, ಕಳೆಗಳನ್ನು ಯಾಂತ್ರಿಕವಾಗಿ ನಿಯಂತ್ರಣಗೊಳಿಸಲಾಯಿತು.
ಮಣ್ಣಿನ ಫಲವಂತಿಕೆಯ ಹೆಚ್ಚಳ ಎರೆಹುಳು ಗೊಬ್ಬರ, ಹೊಲ ಗೊಬ್ಬರ, ಪೌಷ್ಟಿಕಾಂಶಯುಕ್ತ ಗೊಬ್ಬರ, ಬೇವಿನ ಹಿಂಡಿ, ಜೀವಾಮೃತ, ಜೈವಿಕ ಗೊಬ್ಬರಗಳು ಮತ್ತು ಸಾವಯವ ಗೊಬ್ಬರಗಳು
ಕೀಟ ಮತ್ತು ರೋಗಗಳ ನಿರ್ವಹಣೆ ಜೈವಿಕ ನಿಯಂತ್ರಕಗಳು ಮತ್ತು ಜೈವಿಕ ಕೀಟನಾಶಕಗಳ ಬಳಕೆ

ಮಣ್ಣಿನ ಗುಣಮಟ್ಟ ಉತ್ತಮಗೊಂಡಿದೆಯೆಂದು ರೈತರು ಹೇಳಿದರು. ಆಲುಮರದಪಾಳ್ಯ ಹಳ್ಳಿಯ ಶ್ರೀ ವೆಂಕಟೇಶ್‌ ಅವರು ಮಣ್ಣಿನ ಗುಣಮಟ್ಟ ಉತ್ತಮಗೊಂಡಿದ್ದು ಮಣ್ಣು ಮೃದುವಾಗಿದ್ದು ನೀರನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತಿದೆ ಎಂದು ಹೇಳಿದರು.

ರೈತರು ಏಕಬೆಳೆ ಪದ್ಧತಿಗೆ ಬದಲಾಗಿ ವಿವಿಧ ಮಿಶ್ರಬೆಳೆ ಪದ್ಧತಿಗಳ ಬಗ್ಗೆ ತಿಳಿದುಕೊಂಡರು. ಈ ಯೋಜನೆಯ ಪ್ರದೇಶದಲ್ಲಿ ಬೆಳೆ ಆವರ್ತನೆಯನ್ನು ಅಭ್ಯಾಸ ಮಾಡಿಲಾಯಿತು. ಐಪಿಎಂ ಮತ್ತು ಐಎನ್‌ಎಂ ಪದ್ಧತಿಗಳ ಮೂಲಕ ಪರಿಸರ ಸ್ನೇಹಿ ಉತ್ಪಾದನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಯಿತು. ಇದರಿಂದ ಉತ್ಪಾದನಾ ವೆಚ್ಚ ತಗ್ಗಿತು. ಪರಿಸರಾತ್ಮಕ ಬದಲಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗಿತು. ಇದರಿಂದಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತಿದ್ದ ನೈಟ್ರೇಟ್‌ನ ಪ್ರಮಾಣ ತಗ್ಗಿತು. ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗುವ ಅನಿಲಗಳಲ್ಲಿ ಇದು ಕೂಡ ಒಂದು.

ಪ್ರಸ್ತುತದ ಕೃಷಿ ವ್ಯವಸ್ಥೆಯ ಸುಸ್ಥಿರತೆಯು ಮರ ಆಧಾರಿತ ಕೃಷಿ ವ್ಯವಸ್ಥೆಯ ಅಳವಡಿಕೆಯಿಂದ ಹೆಚ್ಚಿತು. ಕಾಡು ಮರಗಳ ತಳಿಗಳು, ಹಣ್ಣಿನ ತಳಿಗಳು ಮತ್ತು ಮೇವುಗಿಡಗಳ ಕೃಷಿಯು ಆಯ್ದ ರೈತರ ತೋಟಗಳಲ್ಲಿ ಗಿಡಗಳ ವೈವಿಧ್ಯವನ್ನು ಹೆಚ್ಚಿತು. ಬರಲಿರುವ ದಿನಗಳಲ್ಲಿ ಅವು ಇನ್ನಿತರ ರೈತರಿಗೆ ಪ್ರಾತ್ಯಕ್ಷಿಕೆಯನ್ನು ನೀಡುತ್ತದೆ.

ಪೃಥ್ವಿ ಆರ್ಗಾನಿಕ್‌ ಫೋರಂ ಸ್ಥಾಪಿಸಲಾಯಿತು. ರೈತರು ತಿಂಗಳಿಗೊಮ್ಮೆ ಸಭೆ ಸೇರಿ ಸಾವಯವ ಕೃಷಿಯ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಕೆವಿಕೆ ವಿಜ್ಞಾನಿಗಳು, ಪ್ರಗತಿಪರ ಸಾವಯವ ರೈತರು ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರನ್ನು ಕೂಡ ಈ ಸಭೆಗಳಿಗೆ ಆಹ್ವಾನಿಸಲಾಯಿತು. ಪ್ರಸ್ತುತ ಈ ಫೋರಂ ಅನ್ನು ಆರ್ಗಾನಿಕ್‌ ಫಾರ್ಮರ್ಸ್‌ ಪ್ರೊಡ್ಯೂಸರ್‌ ಕಂಪನಿ ಎಂದು ಬದಲಾಯಿಸುವ ಯೋಜನೆಯಿದೆ. ನೋಂದಣಿಯ ಪ್ರಕ್ರಿಯೆಯು ನಡೆಯುತ್ತಿದೆ. ಎಫ್‌ಪಿಒ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತದೆ. ಪ್ರಸ್ತುತ ಉತ್ಪನ್ನಗಳನ್ನು ತುಮಕೂರಿನ ಸಾವಯವ ಅಂಗಡಿಗಳಲ್ಲಿ ಮತ್ತು ತುಮಕೂರಿನ ಸಾವಯವ ತರಕಾರಿ ಕೃಷಿಕರ ಮಾರುಕಟ್ಟೆಯಲ್ಲಿ ಪ್ರತಿ ಭಾನುವಾರ ಮಾರಾಟಮಾಡಲಾಗುತ್ತಿದೆ. ತುಮಕೂರಿನಲ್ಲೂಸಾವಯವ ತರಕಾರಿಗಳು ಮತ್ತಿತರ ಉತ್ಪನ್ನಗಳ ಮಾರಾಟಕ್ಕೆ  ಸಾವಯವ ಅಂಗಡಿಯನ್ನು ತೆರೆಯುವ ಯೋಜನೆಯಿದೆ.

ಚಿಕ್ಕನಿಂಗಯ್ಯ ತುಮಕೂರು ಜಿಲ್ಲೆಯ ದುರ್ಗದ ಹಳ್ಳಿಯಲ್ಲಿರುವ ಸಣ್ಣ ರೈತ. ಆತನಿಗೆ ಎರಡು ಎಕರೆ ಭೂಮಿಯಿದೆ. ಆತ ತರಕಾರಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾನೆ. ಆತನದು ಮಳೆಯಾಧಾರಿತ ಭೂಮಿ ಹೀಗಾಗಿ ನಿರಂತರ ಬರಗಾಲದಿಂದ ಆತನಿಗೆ ಹೆಚ್ಚಿನ ಇಳುವರಿ ಪಡೆಯಲಾಗಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಆತನ ಕೊಳವೆ ಬಾವಿ ಇಡೀ ತೋಟಕ್ಕೆ ನೀರನ್ನು ಪೂರೈಸುತ್ತಿರಲಿಲ್ಲ.

ಆವಿಷ್ಕಾರದವರು ಎಸ್‌ಐಎಫ್‌ ಸಾವಯವ ಕೃಷಿ ಯೋಜನೆಯಡಿ ಆಯೋಜಿಸುತ್ತಿದ್ದ ತರಬೇತಿ ಹಾಗೂ ಕ್ಷೇತ್ರ ಭೇಟಿಯಲ್ಲಿ ಚಿಕ್ಕನಿಂಗಯ್ಯ ಭಾಗವಹಿಸಿದ್ದ.  ಅವನು ಸೊಪ್ಪು, ಹುರುಳಿಕಾಯಿ, ಟೊಮೊಟೊ, ಮೆಣಸಿನಕಾಯಿ ಮತ್ತಿತರ ತರಕಾರಿಗಳನ್ನು ಮನೆಬಳಕೆಗಾಗಿ ಬೆಳೆದಿದ್ದ. ಜೊತೆಗೆ ಹುರುಳಿಕಾಯಿ, ಟೊಮೊಟೊ ಮತ್ತು ಬದನೆಯನ್ನು ಸಾವಯವ ಪದ್ಧತಿಯಲ್ಲಿ ಮಾರುಕಟ್ಟೆಗಾಗಿ ಬೆಳೆದ. ಅವನು ತನ್ನ ತರಕಾರಿಗಳನ್ನು ತುಮಕೂರಿನ ರೈತರ ಸಾವಯವ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿ ಭಾನುವಾರ ಮಾರಾಟ ಮಾಡುತ್ತಾನೆ. ಆತನ ಕುಟುಂಬದವರು ವರ್ಷಕ್ಕೆ ಸರಾರಿ ರೂ.೨೫,೦೦೦ ದಿಂದ ರೂ. ೩೦,೦೦೦ದವರೆಗೆ ಲಾಭ ಗಳಿಸುತ್ತಾರೆ. “ಪ್ರತಿವಾರ ರೂ.೧೦೦೦ ಗಳಿಸುತ್ತೇನೆ” ಎಂದು ಚಿಕ್ಕನಿಂಗಯ್ಯ ಸಂತಸದಿಂದ ಹೇಳುತ್ತಾನೆ.

ಆತ ೬೦ ನಿಂಬೆ, ೩೦ ನುಗ್ಗೆ ಮತ್ತು ೫೦ ಹೆಬ್ಬೇವಿನ ಗಿಡಗಳನ್ನು ತನ್ನ ತೋಟದಲ್ಲಿ ಬೆಳೆಸಿದ್ದಾನೆ. ಎಲ್ಲ ಗಿಡಗಳು ಉತ್ತಮ ಬೆಳವಣಿಗೆ ಹೊಂದಿವೆ. ಸ್ವಯಂಪ್ರೇರಿತನಾಗಿ ಆತ ಮತ್ತೆ ೫೦ ನಿಂಬೆ ಗಿಡಗಳನ್ನು ಕೊಂಡುತಂದು ೧೫ ಅಡಿ ಅಂತರದಲ್ಲಿ ನೆಟ್ಟಿದ್ದಾನೆ. ಪ್ರಸ್ತುತ ಸೆಸಬಾನಿಯ ಮೇವಿನ ಗಿಡದಿಂದ ಬೇಕಾದಷ್ಟು ಮೇವು ಸಿಗುತ್ತಿದ್ದು ಜಾನುವಾರುಗಳಿಗೆ ಮೇವು ಸಿಗುತ್ತಿದೆ. ಈ ಮೇವಿನ ಸದುಪಯೋಗ ಪಡೆದುಕೊಳ್ಳಲು ಆತ ಎರಡು ಮೇಕೆಗಳನ್ನು ಕೊಂಡು ತಂದಿದ್ದಾನೆ. ಆತನ ಹೆಂಡತಿ ಮೊದಲು ಹತ್ತಿರದ ಹಳ್ಳಿಗಳಲ್ಲಿ ದಿನಗೂಲಿಗೆ ಹೋಗುತ್ತಿದ್ದಳು. ಈಗ ಆ ಕೆಲಸ ಬಿಟ್ಟು ತನ್ನ ಪೂರ್ತಿ ಸಮಯವನ್ನು ಕೃಷಿಯಲ್ಲಿ ತೊಡಗಿಸಿಕೊಂಡ ರೈತ ಮಹಿಳೆಯಾಗಿದ್ದಾಳೆ.

ಕೆಲವು ರೈತರಿಗೆ ಸಾವಯವ ವಿಧಾನದಲ್ಲಿ ಬೆಳೆ ನಷ್ಟವಾದ ಉದಾಹರಣೆಗಳಿವೆ. ಆದರೂ ರೈತರ ಉತ್ಸಾಹ ಕುಗ್ಗಿಲ್ಲ. ನಿರಂತರವಾದ ವೈಯುಕ್ತಿಕ ಸಂವಾದಗಳು, ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಕೃಷಿ ಸಂಸ್ಥೆಗಳು ನೀಡುತ್ತಿವೆ. ೪-೫ ವರ್ಷಗಳಲ್ಲಿ ಯೋಜನೆಯಡಿಯ ಹಳ್ಳಿಗಳಲ್ಲಿನ ಒಣಭೂಮಿಯು ವೈವಿಧ್ಯಮಯ ತೋಟಗಳಾಗಿ ಪರಿವರ್ತಿತವಾಗುತ್ತವೆ. ಆಹಾರ ಭದ್ರತೆ, ಮೇವಿನ ಲಭ್ಯತೆ ಮತ್ತು ಹವಾಮಾನ ಬದಲಾವಣೆಗೆ ತಾಳಿಕೆಯ ಗುಣವನ್ನು ಹೊಂದುತ್ತದೆ.

ಆನಂದ ಕುಮಾರ್


A Anandakumar

Project Director

AVISHKAR, Tumkur

Karnataka

E-mail: avishkar2004@gmail.com

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೩ ; ಸೆಪ್ಟಂಬರ್‌ ೨೦‌೨೦

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp