ರೈತರಿಗೆ ಉತ್ತಮ ಇಳುವರಿ ಪಡೆಯಲು ನೆರವು ನೀಡುವ ಆಪ್

ನಾ ಪಂಟ ಎನ್ನುವುದು ʼಕೃಷಿ ಬೆಳೆ ನಿರ್ವಹಣೆʼಗೆ ಸಂಬಂಧಿಸಿದ ಮೊಬೈಲ್‌ ತಂತ್ರಾಂಶ. ಇದನ್ನು ಉಚಿತವಾಗಿ ಡೌನ್ಲೌಡ್‌ ಮಾಡಿಕೊಳ್ಳಬಹುದು. ಇದು ಆಡ್ರಾಂಯ್ಡ್‌ನಲ್ಲಿ ಲಭ್ಯವಿದೆ. ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು ೧,೧೭,೦೦೦ ಬಳಕೆದಾರರಿದ್ದಾರೆ.

ಹೈದಾರಾಬಾದಿನ ನವೀನ್‌ ಕುಮಾರ್‌ ವಾರಂಗಲ್‌ನ ತಮ್ಮ ಊರಾದ ಹನುಮಕೊಂಡಾಕ್ಕೆ ಬರಲು ನಿರ್ಧರಿಸಿದರು. ಆ ವೇಳೆಗೆ ಅವರು ʼಅಪ್ನಾ ಲೋನ್‌ ಬಜಾರ್‌ʼ (ಆನ್‌ಲೈನ್‌ ರಿಟೈಲ್‌ ಲೋನ್‌ ವೇದಿಕೆ) ಸ್ಥಾಪಿಸಿದ್ದರು. ಅವರಿಗೆ ತಮ್ಮ ಊರಿಗೆ ಹೋಗುವ ನಿರ್ಧಾರ ಬದುಕನ್ನು ಬದಲಿಸಲಿದೆ ಎಂದು ತಿಳಿದಿತ್ತು.

“ಆ ಘಟನೆ ನನಗಿನ್ನೂ ನೆನಪಿದೆ. ರೈತನೊಬ್ಬ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಡೀಲರ್‌ ಒಬ್ಬ ಅವನಿಗೆ ಮುನ್ನೂರು ರೂಪಾಯಿ ಲಾಭಕ್ಕೆ ಕಳಪೆ ಗುಣಮಟ್ಟದ ಹತ್ತಿಯ ಬೀಜಗಳನ್ನು ಮಾರಿದ್ದ. ಬೆಳೆ ನಷ್ಟವಾಯಿತು. ಬೆಳೆನಷ್ಟವನ್ನು ತುಂಬಿಕೊಳ್ಳಲು, ಬೆಳೆಗಾಗಿ ಮಾಡಿದ್ದ ಸಾಲ ತೀರಿಸಲು ರೈತನಿಗೆ ಬೇರೆ ದಾರಿ ಕಾಣದೆ ಅವನು ಆತ್ಮಹತ್ಯೆ ಮಾಡಿಕೊಂಡಿದ್ದ” ಎಂದು ಅವರು ನಡೆದ ಸಂಗತಿಯನ್ನು ನೆನಪಿಸಿಕೊಳ್ಳುತ್ತಾರೆ.

 ನವೀನ್‌ಗೆ ಹಲವು ರಾತ್ರಿಗಳು ನಿದ್ರಿಸಲಾಗಲಿಲ್ಲ. ಅವರು ಹಳ್ಳಿಯಲ್ಲಿನ ರೈತರು, ಕೃಷಿ ಅಧಿಕಾರಿಗಳು, ವಿಜ್ಞಾನಿಗಳು, ಪರಿಣಿತರು ಹೀಗೆ ಹಲವರೊಂದಿಗೆ ಮಾತಾಡಿ ವಿಷಯಗಳನ್ನು ಸಂಗ್ರಹಿಸಿದರು. ಕೆಲವು ಅಪರೂಪದ ವಿಷಯಗಳನ್ನು ಕಂಡುಕೊಂಡರು.

 “ಈ ಆಪನ್ನು ಅಭಿವೃದ್ಧಿಪಡಿಸಿದ ಮೇಲೆ ಇದರ ಮಾರ್ಕೆಟಿಂಗ್‌ಗೆ ಒಂದು ನಯಾಪೈಸೆ ಕೂಡ ಖರ್ಚು ಮಾಡಲಿಲ್ಲ. ಕೇವಲ ನಾಲ್ಕೇ ತಿಂಗಳಲ್ಲಿ ೫೦,೦೦೦ ರೈತರು ಅದನ್ನು ಡೌನ್ಲೋಡ್‌ ಮಾಡಿಕೊಂಡಿದ್ದನ್ನು ನೋಡಿ ಆಶ್ಚರ್ಯವಾಯಿತು. ಬಹಳಷ್ಟು ರೈತರು ʼಶೇರ್‌ಇಟ್‌ʼ ಮೂಲಕ ಆಪ್‌ ಹಂಚಿಕೊಂಡರು. ಬಾಯಿಮಾತಿನಿಂದಲೇ ಅದು ಒಬ್ಬರಿಂದೊಬ್ಬರಿಗೆ ಹರಡಿತು. ಅಂದಿನಿಂದ ಇಂದಿನವರೆಗೆ ಈ ಪಯಣವು ರೋಲರ್‌ಕ್ಯಾಸ್ಟರ್‌ ರೀತಿಯಿದ್ದು ಹಲವು ವಿಷಯಗಳನ್ನು ಕಲಿತಂತಾಯಿತು. ಇಂದು ನಾ ಪಂಟ ರೈತರಿಗೆ ಕೃಷಿವಿಶ್ವಕೋಶವಿದ್ದಂತೆ ಎಂದು ಹೆಮ್ಮೆಯಿಂದ ಹೇಳಬಹುದು.  ಅವರು ಯಾವುದಾರೂ ಮಾಹಿತಿಗಾಗಿ ನಮ್ಮ ಆಪ್‌ ಬಳಸಿದ ಮೇಲೆ ಬೇರೆ ಯಾವುದೇ ಸಂಪನ್ಮೂಲವನ್ನು ಹುಡುಕಿಹೋಗಬೇಕಾದ ಪ್ರಮೇಯವಿಲ್ಲ.”

 ಸುಶಿಕ್ಷಿತ ರೈತರು ಸರ್ಕಾರಿ ಪೋರ್ಟಲ್‌ಗಳಲ್ಲಿ ಲಭ್ಯವಿರುವ ಮಾಹಿತಿ ಹಾಗೂ ಕೃಷಿಯ ಉತ್ತಮ ಪದ್ಧತಿಗಳ ಕುರಿತು ತಿಳಿದುಕೊಳ್ಳುವಂತೆ ಮಾಡುವುದು ಒಳ್ಳೆಯದು ಹಾಗೂ ಸುಲಭ ಎನ್ನುವುದು ನವೀನ್‌ಗೆ ಅರಿವಾಯಿತು. ಮಧ್ಯಮ ಗಾತ್ರದ ರೈತರು ತಮ್ಮ ೨೦-೩೦%ರಷ್ಟು ಸಮಯವನ್ನು ಮಾಹಿತಿಯನ್ನು ಕಲೆಹಾಕಲು ವ್ಯರ್ಥಮಾಡುತ್ತಿದ್ದಾರೆ. ಹೀಗೆ ಮಾಹಿತಿ ಸಂಗ್ರಹ ಮಾಡುವಾಗಲೂ ಅವರಿಗೆ ಮೋಸ ಹೋಗಬಹುದು.

ಮಾಹಿತಿಯ ಕೊರತೆಯಿಂದಾಗಿ ರೈತರು ಕಳಪೆ ಬೀಜಗಳು, ಕೆಟ್ಟ ಗೊಬ್ಬರಕ್ಕೆ ಮೋಸ ಹೋಗುತ್ತಾರೆ. ತಮ್ಮ ಉತ್ಪನ್ನಗಳಿಗೆ ಕಡಿಮೆ ಬೆಲೆ ಹಾಗೂ ದಳ್ಳಾಳಿಗಳ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

 “ಪರಿಣಾಮಕಾರಿ ಸಂವಹನ ಭಾರತ ಕೃಷಿಯಲ್ಲಿ ಇಂದಿನ ಅಗತ್ಯವಾಗಿದೆ. ಕೃಷಿ ಸಂದರ್ಭಗಳು ಮತ್ತು ಸರ್ಕಾರಿ ನೆರವಿನ ಚಟುವಟಿಕೆಗಳ ನಡುವೆ ದೊಡ್ಡ ಅಂತರವಿದೆ. ಈ ಅಂತರವನ್ನು ತುಂಬಲು ಈ ಆಪ್‌ನ್ನು ಅಭಿವೃದ್ಧಿಪಡಿಸಿ ರೈತರಿಗೆ ಉಚಿತವಾಗಿ ನೀಡಲಾಯಿತು. ನಮ್ಮ ಆಪ್‌ ಮುಖ್ಯವಾಗಿ ಸಣ್ಣ ಹಾಗೂ ಮಧ್ಯಮ ರೈತರಿಗಾಗಿ ವಿನ್ಯಾಸಗೊಳಿಸಲಾಗಿದೆ,” ಎಂದು ನವೀನ್‌ ಹೇಳುತ್ತಾರೆ.

ನಾ ಪಂಟ ನವೀನ್‌ರವರ ಅನನ್ಯ ಪರಿಹಾರಕ್ರಮ. ಇದು ರೈತರಿಗೆ ಉತ್ತಮ ಇಳುವರಿ ಪಡೆಯಲು ಹಾಗೂ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯನ್ನು ತಡೆಯಲು ನೆರವು ನೀಡುತ್ತಿದೆ.

ನಾ ಪಂಟ – ಕೃಷಿ ವಿಶ್ವಕೋಶ!

ನಾ ಪಂಟ ಎನ್ನುವುದು ʼಕೃಷಿ ಬೆಳೆ ನಿರ್ವಹಣೆʼಗೆ ಸಂಬಂಧಿಸಿದ ಮೊಬೈಲ್‌ ತಂತ್ರಾಂಶ. ಇದನ್ನು ಉಚಿತವಾಗಿ ಡೌನ್ಲೌಡ್‌ ಮಾಡಿಕೊಳ್ಳಬಹುದು. ಇದು ಆಡ್ರಾಂಯ್ಡ್‌ನಲ್ಲಿ ಲಭ್ಯವಿದೆ. ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು ೧,೧೭,೦೦೦ ಬಳಕೆದಾರರಿದ್ದಾರೆ.

ಇದಕ್ಕೆ ಹೈದರಾಬಾದಿನ AIP-ICRISAT ಮತ್ತು IIIT ನೆರವು ನೀಡುತ್ತಿದೆ. ಇದರಿಂದ ರೈತರು ಕೃಷಿ ಸಂಬಂಧಿತ ಎಲ್ಲ ಬಗೆಯ ಮಾಹಿತಿಗಳನ್ನು ತತ್‌ತಕ್ಷಣ ಪಡೆಯಬಹುದು.

೩೫೦೦+ ಮಾರುಕಟ್ಟೆ ದರಗಳನ್ನು ದಿನಂಪ್ರತಿಯ ಆಧಾರದ ಮೇಲೆ ಮಾತ್ರವಲ್ಲದೆ ಕಳೆದ ಮೂರು ವರ್ಷಗಳಲ್ಲಿನ ಸುಮಾರು ೩೦೦+ ಉತ್ಪನ್ನಗಳ ದರಗಳ ಅಂದಾಜನ್ನು ಪಡೆಯಬಹುದು. ಇವೆಲ್ಲವೂ ಬೆರಳ ತುದಿಯಲ್ಲೇ ಲಭ್ಯವಿದ್ದು ರೈತರಿಗೆ ಬೇಕಾದದ್ದು ಅಂತರ್ಜಾಲದ ಸಂಪರ್ಕ ಮಾತ್ರ.

ಜೊತೆಗೆ ನಾ ಪಂಟ ರೈತರಿಗೆ ತಮ್ಮ ಖರ್ಚುವೆಚ್ಚಗಳ ಲೆಕ್ಕವಿಡಲು ಸಹಾಯಮಾಡುತ್ತದೆ. ಕೀಟನಾಶಕಗಳ ತಯಾರಿಕಾ ವಿಧಾನದ ವಿಸ್ತೃತ ಮಾಹಿತಿಯು ಇಲ್ಲಿ ಸಿಗುತ್ತದೆ.

 ಇದು ಐದು ದಿನಗಳ ಹವಾಮಾನ ವರದಿಯನ್ನು ತೋರಿಸುತ್ತದೆ. ಬೆಳೆ ವಿಮೆ, ಮಣ್ಣು ಪರೀಕ್ಷಾ ಪ್ರಯೋಗಾಲಯಗಳು, ಕೋಲ್ಡ್ಸ್ಟೋರೇಜ್ಸೌಲಭ್ಯಗಳು ಮತ್ತು ಎರಡು ರಾಜ್ಯಗಳಲ್ಲಿರುವ ಕೃಷಿ ಡೀಲರುಗಳ ಸಂಪರ್ಕ ಮಾಹಿತಿಯನ್ನು ತೋರಿಸುತ್ತದೆ.

ಸದಾಕಾಲ ಅಂತರ್ಜಾಲ ಸಂಪರ್ಕ ಇಲ್ಲದಿರುವ ರೈತರಿಗಾಗಿ ಆಪ್‌ ಆಫ್‌ಲೈನ್‌ ಸೌಲಭ್ಯವನ್ನು ಕೂಡ ನೀಡುತ್ತದೆ. ಇದರಲ್ಲಿ ಸುಮಾರು ೧೦೦ ಬೆಳೆಗಳ ಕುರಿತು ಮಾಹಿತಿ ಹಾಗೂ ಕೀಟನಿರ್ವಹಣೆ ತಂತ್ರಗಳ ಕುರಿತು ಮಾಹಿತಿ ನೀಡುತ್ತದೆ.

ಪ್ರಸ್ತುತ ಈ ಆಪ್‌ನಲ್ಲಿ ತೆಲುಗು ಮತ್ತು ಇಂಗ್ಲೀಷ್‌ ಭಾಷೆಗಳಿವೆ. ಇದು ಸಣ್ಣ ಹಾಗೂ ಮಧ್ಯಮ ರೈತರಿಗೆ ಕೃಷಿ ಉಪಕರಣಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಇಲ್ಲವೆ ಬಾಡಿಗೆಗೆ ಪಡೆಯಲು ನೆರವು ನೀಡುತ್ತದೆ. ತಮ್ಮ ಉತ್ಪನ್ನಗಳನ್ನು ದಳ್ಳಾಳಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಆನ್‌ಲೈನಿನಲ್ಲಿ ಮಾರುವ ಅವಕಾಶ ಕಲ್ಪಿಸಿದೆ.

ಯಶಸ್ಸಿನ ಹಾದಿಯಲ್ಲಿ ಎದುರಾದ ಸೋಲು

ಯಶಸ್ವಿ ಆಪ್‌ ಅಭಿವೃದ್ಧಿಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇದನ್ನು ಆರಂಭಿಸಿದ ಮೂರು ತಿಂಗಳಲ್ಲೇ ೫೦,೦೦೦ ರೈತರು ಇದನ್ನು ಅಳವಡಿಸಿಕೊಂಡರು. ಆದರೆ ಕೆಲವೇ ದಿನಗಳಲ್ಲಿ ಆಪ್‌ನ್ನು ಫೋನಿನಿಂದ ತೆಗೆದುಹಾಕಿದರು. ಅದರಲ್ಲಿ ಸೀಮಿತ ಮಾಹಿತಿಯಿತ್ತು. ಇದು ರೈತರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಪ್ರತಿಯೊಬ್ಬರ ಅವಶ್ಯಕತೆಯೂ ಭಿನ್ನವಾಗಿತ್ತು. ಅವುಗಳನ್ನು ಪೂರೈಸುವುದು ಬಹಳ ಕಷ್ಟವಿತ್ತು.

“ಆಫ್‌ಲೈನಿನಲ್ಲಿ ಹೆಚ್ಚು ಫೀಚರ್‌ಗಳನ್ನು ಸೇರಿಸಿದ ತಕ್ಷಣ ಅವರ ಫೋನುಗಳು ಕ್ರಾಶ್‌ ಆದವು. ಹೀಗಾಗಿ ಅನ್‌ಇನ್ಸಾಟಾಲೇಶನ್‌ಗಳು ಹೆಚ್ಚಾದವು. ಹಲವು ಬಾರಿ ಸರಿ ತಪ್ಪುಗಳ ಮೇಲಾಟಗಳು ನಡೆದ ಮೇಲೆ ೧೬ ಸೇವೆಗಳನ್ನೊದಗಿಸುವ ೪೦ಎಂಬಿ ಆಪ್‌ನ್ನು ಸಿದ್ಧಪಡಿಸಿದೆವು. ಇದರಿಂದ ಸಣ್ಣ ಸ್ಮಾರ್ಟ್‌ಫೋನ್‌ ಇಟ್ಟುಕೊಂಡಿರುವ ರೈತನು ಈ ಆಪ್‌ನ ಲಾಭ ಪಡೆಯಲು ಸಾಧ್ಯವಾಯಿತು,” ಎಂದು ನವೀನ್‌ ಹೇಳುತ್ತಾರೆ.

“ಹೊಸ ಫೀಚರ್‌ಗಳನ್ನು ಸೇರಿಸುತ್ತಾ ಹೊಸದಾಗಿ ಮರುರೂಪಿಸುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ,” ಎಂದು ಅವರು ಹೇಳುತ್ತಾರೆ.

ಆಪ್‌ನಲ್ಲಿರುವ ಮಾಹಿತಿಗಳೆಲ್ಲವೂ CIBRC (Central Insecticides Board & Registration Committee) ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿದೆ. ಭಾರತದ ವಿವಿಧ ಮಂಡಿಗಳಲ್ಲಿನ ವಿವಿಧ ಕೃಷಿ ವಸ್ತುಗಳ ಮಾರುಕಟ್ಟೆಯ ದರವನ್ನು agmarket.nic.inನಿಂದ ಪಡೆಯಲಾಗಿದೆ.

ಇಂದು ನಾ ಪಂಟವು ೧,೧೭೦೦ ರೈತರನ್ನು ತಲುಪಿದೆ. ಸುಮಾರು ೩,೦೦೦ ಮಂದಿ ರೈತರು ದಿನವೂ ಇದಕ್ಕೆ ಭೇಟಿ ನೀಡುತ್ತಾರೆ. ದಿನವೂ ಈ ಆಪ್‌ಗೆ ೨೫,೦೦೦ಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ.

ಬರ್ಕಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯವು ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಸುಮಾರು ೧೦,೦೦೦ ರೈತರ ಸರ್ವೇ ಮಾಡಿತು. ಅದರ ಫಲಿತಾಂಶವು ನಾ ಪಂಟ ರೈತರನ್ನು ಎಷ್ಟರಮಟ್ಟಿಗೆ ತಲುಪಿದೆ ಎಂದು ತಿಳಿಸುತ್ತದೆ. ರೈತರು ತಮ್ಮ ಕೃಷಿ ಪದ್ಧತಿಗಳಿಗೆ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿದುಕೊಳ್ಳಲು ಬಯಸಿದ್ದರು.

ಆಂಧ್ರಪ್ರದೇಶದ ರಾಜ್ಯ ಸರ್ಕಾರ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದವರು ಸ್ಮಾರ್ಟ್‌ ವಿಲೇಜ್‌ ಯೋಜನೆಗಾಗಿ ಈ ಹಳ್ಳಿಗಳಲ್ಲಿ ಸರ್ವೇ ಮಾಡಲು ನಾ ಪಂಟವನ್ನು ಆಹ್ವಾನಿಸಿದ್ದರು.

ಮಹಾಬುದಾಬಾದ್‌ ಬಳಿಯ ತಲ್ಲಾಪುಸಲಪಲ್ಲಿಯ ರೈತರ ಸಭೆಯಲ್ಲಿ ಪ್ರಗತಿಪರ ರೈತರು ಕೂಡ ತಮ್ಮ ಕೆಲಸಗಳಿಗೆ ನಾ ಪಂಟವನ್ನು ಉಪಯೋಗಿಸುತ್ತಿದ್ದನ್ನು ನೋಡಿದ್ದನ್ನು ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.

“ಮುಖ್ಯ ಅತಿಥಿಯಾಗಿ ಬಂದಿದ್ದ ಜಂಟಿ ನಿರ್ದೇಶಕರ ಎದುರಲ್ಲಿ ತಮ್ಮ ಕೃಷಿ ಪದ್ಧತಿಗಳನ್ನು ಆಪ್‌ ಹೇಗೆ ಬದಲಾಯಿಸಿತು ಎಂದು ಹೇಳಿದರು. ತೆಲಂಗಾಣದ ಜಿಲ್ಲಾ ಕೃಷಿ ಅಧಿಕಾರಿ, ಕೃಷಿ ಜಂಟಿ ನಿರ್ದೇಶಕರು ಮತ್ತು ಕೃಷಿಯ ಸಹಾಯಕ ನಿರ್ದೇಶಕರು ನಾ ಪಂಟ ಕುರಿತು ಆಸಕ್ತಿ ತೋರಿದರು. ರೈತ ಸಮುದಾಯವು ಅದರ ಲಾಭ ಪಡೆಯಲು ಪ್ರೋತ್ಸಾಹಿಸಿದರು.” ನವೀನ್‌ ಈಗ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಈ ಆಪ್‌ ಅಭಿವೃದ್ಧಿಪಡಿಸಿಕೊಡಲು ಮುಂಬೈನಲ್ಲಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಈಗಾಗಲೇ ಇದನ್ನು ಅಳವಡಿಸಿಕೊಂಡಿವೆ.

ರೈತರಿಗಾಗಿ ತಂತ್ರಜ್ಞಾನದ ಸದುಪಯೋಗ ಮಾಡುವುದಕ್ಕೆ ಅವರು ಒತ್ತು ನೀಡುತ್ತಾರೆ. “ ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಸೂಕ್ತವಾಗಿ ಒಟ್ಟಾಗಿ ಬಳಸಬೇಕು. ರೈತನಿಗೆ ಕೃಷಿ ಪದ್ಧತಿಗಳು, ಸಿದ್ದಾಂತಗಳ ಕುರಿತು ಉದ್ದುದ್ದ ಲೇಖನಗಳು ಬೇಕಿಲ್ಲ ಎಂದು ಅರ್ಥಮಾಡಿಕೊಳ್ಳಬೇಕಿದೆ! ಅವರಿಗೆ ಬೇಕಿರುವುದು ಇತರ ರೈತರ ಅನುಭವಗಳು ಮಾತ್ರ. ಅವರಿಗೆ ಸರಿಯಾದ ಮಾಹಿತಿ ನೀಡಿ, ಸೂಕ್ತ ಮಾರ್ಗದರ್ಶನ ಮಾಡಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡಿ. ಇವೆಲ್ಲವೂ ಅವರಿಗೆ ಸುಲಭವಾಗಿ ಅರ್ಥವಾಗಿರುವಂತೆ ನೋಡಿಕೊಳ್ಳಿ. ಈ ರೀತಿ ಕೃಷಿಯಲ್ಲಿ ನೀವು ಕ್ರಾಂತಿಯ ಕಿಡಿಯನ್ನು ಹೊತ್ತಿಸಬಹುದು.”

ಇಂದು ನಾ ಪಂಟ ೧,೧೭,೦೦ ರೈತರನ್ನು ತಲುಪಿದೆ. ಪ್ರತಿದಿನ ೩,೦೦೦ ಮಂದಿ ಭೇಟಿ ನೀಡುತ್ತಾರೆ. ದಿನವೂ ಸುಮಾರು ೨೫,೦೦೦ಕ್ಕಿಂತ ಹೆಚ್ಚು ಸಂವಹನ ಈ ಆಪ್‌ ಮೂಲಕ ನಡೆಯುತ್ತದೆ. ಬೆಳೆ ನಿರ್ವಹಣೆಯ ತಂತ್ರಗಳನ್ನು ಕರಗತಗೊಳಿಸಿಕೊಳ್ಳಲು ರೈತರಿಗೆ ಸಹಾಯ ಮಾಡುತ್ತದೆ. ಇದಕ್ಕೆ ಮಾಡಬೇಕಿರುವುದು ಕೇವಲ ಒಂದು ಕ್ಲಿಕ್!

ಲೇಖನವು ಮೊದಲು ಪ್ರಕಟಗೊಂಡಿದ್ದುhttps://www.thebetterindia.com/170783/hyderabad-man-develops-app-that-helps-75000-farmers-get-better-yield/

 This is an edited version of the original published at https://www.thebetterindia.com/170783/hyderabad-man-develops-app-that-helps-75000-farmers-get-better-yield/

 ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೪ ; ಡಿಸಂಬರ್‌ ೨೦‌೨೦

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp