ಕುಟುಂಬ ಕೈ ತೋಟಗಳು


ಕುಟುಂಬ ಕೈ ತೋಟʼಗಳನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರಚುರಪಡಿಸಲಾಗಿದೆ. ಕುಟುಂಬಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಹಾಗೂ ಆದಾಯ ಗಳಿಸಲು ಇದೊಂದು ದಾರಿಯಾಗಿದೆ.


ಉತ್ತಮಗುಣಮಟ್ಟ ಹಾಗೂ ಸುರಕ್ಷಿತ ಆಹಾರದ ಬಗೆಗೆ ಹೆಚ್ಚುತ್ತಿರುವ ಅರಿವಿನಿಂದಾಗಿ ಈ ತರಕಾರಿಗಳ ತಾಜಾತನ, ಸ್ವಚ್ಛತೆ ಮತ್ತು ಪೌಷ್ಟಿಕಾಂಶದ ಕಾರಣದಿಂದ ಗ್ರಾಹಕರ ಗಮನಸೆಳೆಯುತ್ತಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿನ ರೈತರು, ಉದ್ಯಮಿಗಳು ಹಾಗೂ ಹವ್ಯಾಸಿ ಕೃಷಿಕರು ತರಕಾರಿ ಕೃಷಿಯನ್ನು ಕೈಗೊಳ್ಳುತ್ತಿದ್ದಾರೆ. ತರಕಾರಿ ಕೃಷಿಯು ಇಂದು ಹಿತ್ತಿಲುಗಳಲ್ಲಿ, ನಗರ ಪ್ರದೇಶಗಳಲ್ಲಿ ತಾರಸಿಗಳಲ್ಲಿ ಜಾಗ ಕಂಡುಕೊಳ್ಳುತ್ತಿದೆ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳಿಂದ ಮುಕ್ತವಾದ ಸಾವಯವ ತರಕಾರಿಗಳನ್ನು ತಾವೇ ಬೆಳೆದುಕೊಳ್ಳಬಯಸುತ್ತಿದ್ದಾರೆ.

ಗ್ರೀನ್‌ ಫೌಂಡೇಶನ್‌ ಎನ್ನುವ ಎನ್‌ಜಿಒ ಕರ್ನಾಟಕದ ಕನಕಪುರ ತಾಲ್ಲೂಕಿನಲ್ಲಿ ರೈತರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ರೈತರ ಬಳಿ ಒಂದು ಇಲ್ಲವೆ ಎರಡು ಎಕರೆ ಭೂಮಿಯಿದ್ದು ಅವರು ಏಕಬೆಳೆಪದ್ಧತಿ ಅನುಸರಿಸುತ್ತಿದ್ದಾರೆ. ರೈತರು ಕೃಷಿಗೆ ಮಳೆಯನ್ನೇ ಅವಲಂಭಿಸಿದ್ದು ವಾರ್ಷಿಕವಾಗಿ ರೂ. ೩೦೦೦೦ ಗಳಿಸುತ್ತಿದ್ದಾರೆ. ಕೃಷಿ ಕೆಲಸಗಳು ಇಲ್ಲದಿರುವ ಸಮಯದಲ್ಲಿ ರೈತರು ಹತ್ತಿರದ ಹಳ್ಳಿಗಳು ಇಲ್ಲವೇ ಬೇರೆ ರಾಜ್ಯಗಳಿಗೆ ಕೃಷಿ ಸಂಬಂಧಿತ ಇಲ್ಲವೇ ಬೇರೆ ರೀತಿಯ ಕೆಲಸಗಳಿಗೆ ಕೂಲಿಗಾಗಿ ಹೋಗುತ್ತಾರೆ.

ಗ್ರೀನ್‌ ಫೌಂಡೇಶನ್‌ನವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ವೈದ್ಯಕೀಯ ಕ್ಯಾಂಪುಗಳನ್ನು ಆಯೋಜಿಸಿ ಆರೋಗ್ಯ ಪರೀಕ್ಷೆ ನಡೆಸಿ ಜನರ ಆರೋಗ್ಯದ ಬಗ್ಗೆ ನಿಗಾವಹಿಸುತ್ತಾರೆ. ಪೌಷ್ಟಿಕಾಂಶ ಕೊರತೆಯಿಂದ ಹಲವಾರು ಕಾಯಿಲೆಗಳು ಇರುವುದು ಈ ಕ್ಯಾಂಪುಗಳಿಂದ ತಿಳಿದುಬಂದಿದೆ. ಕುಟುಂಬಗಳು ಪ್ರತಿತಿಂಗಳು ಸರಿಸುಮಾರು ರೂ.೪೦೦ ತರಕಾರಿಗಳಿಗಾಗಿ ಖರ್ಚುಮಾಡುತ್ತಾರೆ. ಕೃಷಿಯಲ್ಲಿನ ಅನಿಶ್ಚತತೆ ಅದರಿಂದ ಗಳಿಸುವ ಅಲ್ಪ ಆದಾಯ ಇವುಗಳಿಂದ ತರಕಾರಿಗಳಂತಹ ಪೌಷ್ಟಿಕಾಂಶಯುಕ್ತ ಆಹಾರ ಕೊಳ್ಳವುದು ಕಷ್ಟ. ಆದ್ದರಿಂದ ಈ ಕುಟುಂಬಗಳು ಪೌಷ್ಟಿಕಾಂಶ ಅಭದ್ರತೆಯನ್ನು ಎದುರಿಸುತ್ತವೆ.

ಕೈತೋಟಗಳು ಕೇವಲ ಪೌಷ್ಟಿಕಾಂಶದ ಮೂಲವಲ್ಲ ಅವು ಆದಾಯ ಗಳಿಕೆಯ ದಾರಿಗಳೂ ಕೂಡ.

ಈ ಪರಿಸ್ಥಿತಿಯಿಂದಾಗಿಯೇ ಗ್ರೀನ್‌ ಫೌಂಡೇಶನ್‌ನವರು ರೈತ ಕುಟುಂಬಗಳು ʼಕುಟುಂಬ ಕೈತೋಟʼಗಳಿಂದ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಆದಾಯ ಗಳಿಸಲು ನೆರವು ನೀಡಿದವು.

ಸಾಮರ್ಥ್ಯ ವೃದ್ಧಿ

ಕ್ಷೇತ್ರ ಸಿಬ್ಬಂದಿ ವರ್ಗದವರು ಹಿತ್ತಲಲ್ಲಿ ತರಕಾರಿ ಬೆಳೆಯಲು ಜಾಗವಿರುವ ಕುಟುಂಬಗಳನ್ನು ಗುರುತಿಸಿದರು. ಆ  ಕುಟುಂಬಗಳ ಮಹಿಳೆಯರಿಗೆ ಕೈತೋಟದ ಪೌಷ್ಟಿಕಾಂಶ ಮತ್ತು ಆರ್ಥಿಕ ಲಾಭಗಳ ಕುರಿತು ಮನದಟ್ಟು ಮಾಡಿಸಿದರು. ಮಹಿಳೆಯರು ಬೀಜಗಳನ್ನು ಸಂರಕ್ಷಿಸುವಲ್ಲಿ ತರಕಾರಿ ಬೆಳೆಯುವುದರಲ್ಲಿ ಎಂದಿಗೂ ಮುಂಚುಣಿಯಲ್ಲಿದ್ದಾರೆ. ಮಹಿಳೆಯರಿಗೆ ತಮ್ಮ ಮನೆಯ ಹಿತ್ತಲಲ್ಲಿ ಸಾವಯವ ವಿಧಾನದಲ್ಲಿ ತರಕಾರಿಗಳನ್ನು ಬೆಳೆಸಲು ತರಬೇತಿ ನೀಡಲಾಯಿತು. ದೇಸಿ ಬೀಜಗಳನ್ನು ಪ್ರಚುರಪಡಿಸಲಾಯಿತು. ರೈತರಿಗೆ ರೋಗ ಹಾಗೂ ಕೀಟಬಾಧೆಗಳಿಂದ ಮುಕ್ತವಾದ ಈ ಬೀಜಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡಲಾಯಿತು.

ಸಿಬ್ಬಂದಿಗಳು ಕುಟುಂಬಗಳ ಭೂಮಿಯನ್ನಾಧರಿಸಿ ಬದುಗಳಲ್ಲಿ ಕೃಷಿ ವಿಧಾನ, ಪರ್ಮಾಕಲ್ಚರ್‌ ಮತ್ತು ಬೇಸಿನ್‌ ವಿಧಾನಗಳನ್ನು ಅನುಸರಿಸಲು ಹೇಳುತ್ತಾರೆ. ರೈತರಿಗೆ ೨೨ ಬಗೆಯ ತರಕಾರಿ ಬೀಜಗಳ ಆಯ್ಕೆಯನ್ನು ನೀಡಲಾಗಿತ್ತು. ಸಿಬ್ಬಂದಿ ವರ್ಗದವರು ಆಯಾ ಕುಟುಂಬಗಳಿಗೆ ಹೊಂದುವಂತೆ ಅಂದರೆ ಅವರಿಗಿರುವ ಜಾಗ, ಮಣ್ಣು, ಕೀಟಬಾಧೆ ಮತ್ತಿತರ ಅಂಶಗಳನ್ನು ಗಮನಿಸಿ ಸಲಹೆಗಳನ್ನು ನೀಡಿದರು. ಕೆಲವು ರೈತರು ತಮ್ಮ ಹಿತ್ತಲಲ್ಲಿ ಹತ್ತು ತರಹದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಕೃಷಿಕರು ಈ ಕೈತೋಟಗಳನ್ನು ಮಾಡುತ್ತಿದ್ದಾರೆ. ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸೊಪ್ಪು, ಕ್ಯಾರೆಟ್‌, ಹುರುಳಿಕಾಯಿ, ಮೂಲಂಗಿ, ಟೊಮೊಟೊ, ಸೌತೆಕಾಯಿ, ಸೋರೆಕಾಯಿ, ಹೀರೆಕಾಯಿ ಮತ್ತು ಹಾಗಲ ಕಾಯಿಗಳನ್ನು ಹಿತ್ತಲಲ್ಲಿ ಬೆಳೆಯುತ್ತಿದ್ದಾರೆ. ಆರೋಗ್ಯದ ಹಿತದೃಷ್ಟಿಯಿಂದ ನುಗ್ಗೆಕಾಯಿ ಮತ್ತು ಕರಬೇವನ್ನು ಇತರ ತರಕಾರಿಗಳೊಂದಿಗೆ ಬೆಳೆಯಲು ಹೇಳಲಾಗುತ್ತದೆ. ತಮ್ಮ ಪೌಷ್ಟಿಕಾಂಶದ ಗುಣಗಳಿಂದ ಇವು ರಕ್ತಹೀನತೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಇತ್ಯಾದಿ ಕಾಯಿಲೆಗಳನ್ನು ತಡೆಯಬಲ್ಲದು.

ಫೋಟೊ : ಕೈತೋಟಗಳಲ್ಲಿ ಹಲವು ವಿಧದ ತರಕಾರಿಗಳನ್ನು ಒದಗಿಸುತ್ತವೆ

ರೈತರಿಗೆ ಜೈವಿಕ ಒಳಸುರಿಯುವಿಕೆಗಳನ್ನು ತಯಾರಿಸುವುದನ್ನು ಕೂಡ ಹೇಳಿಕೊಡಲಾಗಿದೆ. ಹಾಗಾಗಿ ದುಬಾರಿ ಅಜೈವಿಕ ಒಳಸುರಿಯುವಿಕೆಗಳಿಗಾಗಿ ಖರ್ಚುಮಾಡುವ ಅವಶ್ಯಕತೆಯಿಲ್ಲ. ಈ ಜೈವಿಕ ಒಳಸುರಿಯುವಿಕೆಗಳು ಹೊಲಗೊಬ್ಬರ, ದ್ರವ ಜೀವಾಮೃತ, ಪೂಚಿಮರಂದು, ಪಂಚಗವ್ಯ, ಮೆಣಸಿನಕಾಯಿ ಬೆಳ್ಳುಳ್ಳಿ ಡಿಕಾಕ್ಷನ್‌, ನಿಂಬೆ ಕಷಾಯ,  ಘನ ಜೀವಾಮೃತ ಇತ್ಯಾದಿಗಳನ್ನು ಒಳಗೊಂಡಿದೆ. ಜೈವಿಕ ಒಳಸುರಿಯುವಿಕೆಗಳನ್ನು ಜನಾಧ್ಯಯನ ಫಾರ್ಮರ್‌ ಪ್ರೊಡ್ಯೂಸರ್‌ ಕಂಪನಿ ಲಿಮಿಟೆಡ್‌ (JFPCL) ಇಂದ ಕೊಳ್ಳಬಹುದು. ಇದನ್ನು ಕೃಷಿ ಸಮುದಾಯದ ಸದಸ್ಯರ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಅವರೆಲ್ಲರೂ ಕೃಷಿಪರಿಸರವೈವಿಧ್ಯವನ್ನು ಕಾಪಾಡಲು, ಕೃಷಿಕರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ಸಾವಯವ ಕೃಷಿಯನ್ನು ಪ್ರಚುರಪಡಿಸಲು ಮತ್ತಿತರ ವಿಷಯಗಳು ಕುರಿತು ಒಟ್ಟಾಗಿ ಕೆಲಸಮಾಡುತ್ತಿದ್ದಾರೆ.

ಆಸಕ್ತ ರೈತರಿಗೆ ಬೀಜಗಳ ಉತ್ಪಾದನೆ ಕುರಿತು ತರಬೇತಿ ನೀಡಲಾಗುತ್ತದೆ. ಮುಂದಿನ ಬಾರಿ ಬಿತ್ತನೆಗೆ ಇಟ್ಟುಕೊಂಡು ಉಳಿದ ಬೀಜಗಳನ್ನು JFPCLನಲ್ಲಿ ಮಾರಾಟ ಮಾಡಲಾಗುತ್ತದೆ. ಇದು ರೈತರಿಗೆ ಹೆಚ್ಚುವರಿ ಆದಾಯವನ್ನು ತಂದುಕೊಡುತ್ತದೆ.

ಗ್ರೀನ್‌ ಫೌಂಡೇಶನ್‌ನವರು ಕನಕಪುರ ಜಿಲ್ಲೆಯ ರಾಮನಗರ ಜಿಲ್ಲೆಯ ೧೬೦ ಕೃಷಿಕುಟುಂಬಗಳಿಗೆ ಕೈತೋಟಗಳನ್ನು ಮಾಡಲು ನೆರವು ನೀಡಿದೆ.

ಲಾಭಗಳು

ತಮ್ಮ ಮನೆಯ ಹಿತ್ತಲಲ್ಲಿ ಇರುವ ಜಾಗದಲ್ಲೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚುವರಿ ಆದಾಯ ಗಳಿಸಲು ಮತ್ತು ತಮ್ಮ ಕುಟುಂಬಗಳ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗಿದೆ. ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸೊಪ್ಪು, ಕ್ಯಾರೆಟ್‌, ಹುರಳಿಕಾಯಿ, ಮೂಲಂಗಿ, ಟೊಮೊಟೊ, ಅಮರಂತುಸ್‌, ಬೆಂಡೆಕಾಯಿ, ಸೌತೆಕಾಯಿ, ಸೋರೆಕಾಯಿ, ಹೀರೆಕಾಯಿ ಮತ್ತು ಹಾಗಲ ಕಾಯಿ ಹೀಗೆ ಕೆಲವು ತರಕಾರಿಗಳನ್ನು ತಮ್ಮ ಕೈತೋಟಗಳಲ್ಲಿ ಬೆಳೆಯುತ್ತಾರೆ.

ತಾಯಿಮುದ್ದಮ್ಮನ ಕುಟುಂಬದಲ್ಲಿ ನಾಲ್ಕು ಮಂದಿ ಇದ್ದಾರೆ. ಮಾರಸಾರಹಳ್ಳಿಯ ಆಕೆಯ ಮನೆಯ ಹಿತ್ತಲಲ್ಲಿ ಆಕೆ  ಕೈತೋಟ ಮಾಡುವವರೆಗೂ ಖಾಲಿಯಾಗೇ ಇತ್ತು. ಕೈತೋಟದ ನಿರ್ವಹಣೆ ಹಾಗೂ ಯಾವ ತರಕಾರಿಗಳನ್ನು ಬೆಳೆಯಬೇಕು ಎನ್ನುವುದರ ಕುರಿತು ಆಕೆಗೆ ತರಬೇತಿ ನೀಡಲಾಯಿತು. ಇಂದು ಆಕೆ ತನ್ನ ೨.೨ ಸೆಂಟ್‌ ಭೂಮಿಯಲ್ಲಿ ಪರ್ಮಾಕಲ್ಚರ್‌ ವಿಧಾನದಲ್ಲಿ ೧೫ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾಳೆ. ಜನಧನ್ಯದವರು ಆಕೆಗೆ ಪಂಚಗವ್ಯ, ವರ್ಮಿವಾಷ್‌, ಅಗ್ನಿ ಅಸ್ತ್ರಂ ಮತ್ತು ಪೊಂಗಾಮಿಯ ಪುಡಿಯಂತಹ ಜೈವಿಕ ಒಳಸುರಿಯುವಿಕೆಗಳನ್ನು ನೀಡಿದ್ದಾರೆ. ಆಕೆ ಸುಮಾರು ೯ಕೆಜಿ ಬದನೆ, ೮ ಕೆಜಿ ಹೀರೆಕಾಯಿ, ೬ ಕೆಜಿ ಸೋರೆಕಾಯಿ, ೧೩ ಕೆಜಿ ಕುಂಬಳಕಾಯಿ, ೨೫ ಕೆಜಿ ಬೆಂಡೆಕಾಯಿ, ೪೦ ಕೆಜಿ ಟೊಮೊಟೊ ಮತ್ತು೧೨ ಕೆಜಿ ಮೆಣಸಿನಕಾಯಿ ಬೆಳೆಯುತ್ತಿದ್ದಾಳೆ. ತಮ್ಮ ಮನೆಯ ಅವಶ್ಯಕತೆಗೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದದ್ದನ್ನು ಆಕೆ ನೆರೆಹೊರೆಯವರಲ್ಲಿ ಹಾಗೂ ಬಂಧುಗಳಲ್ಲಿ ವಿತರಿಸುತ್ತಾಳೆ. ತಾಯಿಮುದ್ದಮ್ಮ ಬೀಜಗಳ ಉತ್ಪಾದನೆಯಲ್ಲೂ ತರಬೇತಿ ಪಡೆದಿದ್ದಾಳೆ.

ಪ್ರತಿ ಕುಟುಂಬದ ಉತ್ಪಾದನೆಯು ಅವರಿಗಿರುವ ಭೂಮಿಯನ್ನಾಧರಿಸಿ ಪ್ರತಿವರ್ಷ ೧೦೦ರಿಂದ ೨೦೦ ಕೆಜಿಯಷ್ಟಿರುತ್ತದೆ. ಈ ಉತ್ಪಾದನೆಯು ಮುಖ್ಯವಾಗಿ ಕುಟುಂಬದ ಬಳಕೆಗಾಗಿ ಉಳಿದದ್ದನ್ನು ನೆರೆಹೊರೆಯವರಿಗೆ ಬಂಧುಗಳಿಗೆ ಹಂಚಿ ಹೆಚ್ಚುವರಿಯಾದದ್ದನ್ನು JFPCL ಮೂಲಕ ಇಲ್ಲವೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಆದ್ದರಿಂದ ಕೈತೋಟಗಳ ಪೌಷ್ಟಿಕತೆಯ ಸಂಪನ್ಮೂಲ ಮಾತ್ರವಲ್ಲದೆ ಆದಾಯದ ಮೂಲ ಕೂಡ ಹೌದು. ಇದರೊಂದಿಗೆ ಅವರು ಈ ಮೊದಲು ತರಕಾರಿಗಾಗಿ ಖರ್ಚು ಮಾಡುತ್ತಿದ್ದ ರೂ.೪೦೦ ಉಳಿತಾಯವಾಗುತ್ತದೆ.

ಪೌಷ್ಟಿಕಾಂಶದ ಹೊರತಾಗಿ ಬಡ ಕುಟುಂಬಗಳಿಗೆ ತರಕಾರಿ ಕೃಷಿಯು ಶೀಘ್ರ ಆದಾಯ ತರುವ ಸಂಪನ್ಮೂಲವಾಗಿ ಜನಪ್ರಿಯವಾಗಿದೆ. ಕಾಳುಗಳು ಹಾಗೂ ಹಣ್ಣಿನ ಬೆಳೆಗಳಿಗೆ ಹೋಲಿಸಿದರೆ ತರಕಾರಿಯನ್ನು ಕಡಿಮೆ ಸಮಯದಲ್ಲಿ ಬೆಳೆಯಬಹುದು. ಇವುಗಳಿಗೆ ಬೇಕಾಗುವ ಒಳಸುರಿಯುವಿಕೆಗಳು ಕಡಿಮೆ. ಲೀಸಾ ರೈತರಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಿದೆ. ರೈತರು ದುಬಾರಿ ಅಜೈವಿಕ ಒಳಸುರಿಯುವಿಕೆಗಳಿಗೆ ಬದಲಾಗಿ ಜೈವಿಕವಾದದ್ದನ್ನು ಬಳಸುತ್ತಾರೆ. ಅವರ ದೇಸಿ ತಿಳಿವಳಿಕೆಯು ಇವುಗಳನ್ನು ತಯಾರಿಸಲು ಹಾಗೂ ಬಳಸಲು ನೆರವಾಗುತ್ತವೆ.

ತಮ್ಮ ಮನೆಯ ಹಿತ್ತಲಲ್ಲೂ ತರಕಾರಿ ಬೆಳೆದು ತಮ್ಮ ಕುಟುಂಬಗಳಿಗೆ ಪೌಷ್ಟಿಕಾಂಶದ ಅವಶ್ಯಕತೆ ಪೂರೈಸಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ಸುಮಾರು ೩೮೦ ರೈತರು ಕೈತೋಟವನ್ನು ಪ್ರಚುರಪಡಿಸಲು ಇರುವ ರಾಜ್ಯ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಫಲಾನುಭವಿಗಳಿಗೆ ರೂ.೨೭೫೦ ಸಹಾಯಧನ ಬೀಜಗಳೊಂದಿಗೆ ದೊರಕುತ್ತದೆ.

ಗ್ರೀನ್ಫೌಂಡೇಶನ್


GREEN Foundation

#25, ACES Layout,1st Main Road, Ashwath Nagar,

RMV 2nd stage, Bangalore-560094

E-mail: contact@greenfoundation.in

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೩ ; ಸೆಪ್ಟಂಬರ್ ೨೦‌೨೦

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp