ಕೋವಿಡ್ ಪಿಡುಗಿನ ಸಮಯದಲ್ಲಿ ಪ್ರತಿರೋಧಕ ಶಕ್ತಿಯನ್ನು ಗಳಿಸುವುದು ಹಿಂದೆಂದಿಗಿಂತ ಮಹತ್ವವನ್ನು ಪಡೆದುಕೊಂಡಿತು. ಕೇರಳದ ಜನ ತಮ್ಮ ಹಿತ್ತಿಲಲ್ಲಿ, ಛಾವಣಿಗಳಲ್ಲಿ ಸುರಕ್ಷಿತ ಆಹಾರವನ್ನು ಬೆಳೆಯಲು ಸಾಕಷ್ಟು ವಿಧಾನಗಳನ್ನು ಪ್ರಯತ್ನಿಸಿದರು. ಆ ಮೂಲಕ ಆರೋಗ್ಯಕರ ಪೌಷ್ಟಿಕಾಂಶ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಬಯಸಿದರು.
ಕಳೆದ ೨-೩ ದಶಕಗಳಿಂದ ವೇಗವಾಗಿ ನಗರೀಕರಣವಾಗುತ್ತಿರುವ ಗ್ರಾಹಕರ ರಾಜ್ಯವಾಗಿದೆ. ಕಳೆದ ೧೦-೧೫ ವರ್ಷಗಳಿಂದ ನಮ್ಮ ಥನಾಲ್ ಸಂಸ್ಥೆಯೂ ಸೇರಿದಂತೆ ಹಲವು ಗುಂಪುಗಳು ಕೇರಳದಲ್ಲಿ ಸಾವಯವ ತರಕಾರಿ ಕೃಷಿಯನ್ನು ಪ್ರಚುರಪಡಿಸಲು ಪ್ರಯತ್ನಿಸುತ್ತಿವೆ. ಇದು ಕೆಲವು ನಗರವಾಸಿಗಳಲ್ಲಿ ಸ್ವಲ್ಪ ಬದಲಾವಣೆಯನ್ನು ತಂದಿದೆ. ಆರೋಗ್ಯದ ಕಾಳಜಿಯಿರುವವರು ತಮ್ಮ ಮನೆಗೆ ಅಗತ್ಯವಿರುವಷ್ಟು ತರಕಾರಿಗಳನ್ನು ತಮ್ಮ ಮನೆಯ ಹಿತ್ತಿಲಲ್ಲಿ, ಛಾವಣಿಗಳಲ್ಲಿ ಬೆಳೆಯಲಾರಂಭಿಸಿದರು. ಅವರಲ್ಲಿ ಹಲವರು ತಮ್ಮ ಉತ್ಪನ್ನಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಹಾಗೂ ವಾರಾಂತ್ಯದ ಮಾರುಕಟ್ಟೆಗಳಲ್ಲಿ ಸಮಾನಮನಸ್ಕರಿಗೆ ಮಾರಾಟಮಾಡಲು ಶುರುಮಾಡಿದರು.

ಸಾಜಿ ಕುಮಾರಿ ಪಿಜಿಎಸ್ ಮಾನ್ಯತೆ ಪಡೆದ ಕೃಷಿಕರು. ಈಕೆ ಸಾವಯವ ಮಾರುಕಟ್ಟೆಗೆ ತರಕಾರಿಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ಕೋವಿಡ್ – ೧೯ ಬದಲಿಸಿದ ಬದುಕು
ಕೋವಿಡ್ ೧೯ ಪಿಡುಗು ಹಾಗೂ ಲಾಕ್‌ಡೌನ್ ಬದುಕಿನ ಗತಿಯನ್ನು ಬದಲಿಸಿಬಿಟ್ಟಿತು. ಲಾಕ್‌ಡೌನ್‌ನಂತಹ ಅನಿಶ್ಚತತೆಯನ್ನು ಎದುರಿಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಥಳೀಯ ಆಹಾರ ಉತ್ಪಾದಕರು ಅದರಲ್ಲೂ ತರಕಾರಿ ಕೃಷಿಕರಿಗೆ “ಆಹಾರ ಸ್ವಾವಲಂಬನೆ”ಗೆ ಕರೆಕೊಟ್ಟರು. ಕೃಷಿ ನಿರ್ದೇಶಕರಾದ ಡಾ. ಕೆ. ವಾಸುಕಿಯವರು ಮನೆಯಲ್ಲೇ ಆಹಾರವನ್ನು ಬೆಳೆದುಕೊಳ್ಳಲು ಸ್ಥಳೀಯ ಕೃಷಿಕರು ಮತ್ತು ಯುವಸ್ವಯಂಸೇವಕರ ಚಳುವಳಿಯನ್ನು ಬೆಂಬಲಿಸಿದರು. ಕಳೆದ ಮೂರು ತಿಂಗಳುಗಳಲ್ಲಿ ರಾಜ್ಯವು ಆಹಾರ ಭದ್ರತೆಯ ಯೋಜನೆಯನ್ನು ಆರಂಭಿಸಿತು. ಇದು ಮನೆಗಳಲ್ಲಿ ಹಾಗೂ ಪಾಳುಬಿದ್ದ ಭೂಮಿಗಳಲ್ಲಿ ಕೃಷಿಯನ್ನು ಪ್ರೋತ್ಸಾಹಿಸಿತು. ಇದು ಮುಖ್ಯವಾಗಿ ತಮಗಾಗಿ ತರಕಾರಿಗಳನ್ನು ಬೆಳೆದುಕೊಳ್ಳುವುದು ಜಾನುವಾರು ಸಾಕಾಣಿಕೆಯನ್ನು ಒಳಗೊಂಡಿತ್ತು. ಮಾಧ್ಯಮಗಳು ಅದರಲ್ಲೂ ಸಾಮಾಜಿಕ ಮಾಧ್ಯಮಗಳು ತರಕಾರಿ ಕೃಷಿ ಮಾಡಲು ಪ್ರೋತ್ಸಾಹಿಸಿದವು. ಕೃಷಿ ಇಲಾಖೆಯು ಬೀಜಗಳನ್ನು ಪೂರೈಸಿತು. ಕೃಷಿಕರೊಂದಿಗೆ ಕೆಲಸ ಮಾಡುತ್ತಿರುವ ಹಲವು ಗುಂಪುಗಳು ಸ್ಥಳೀಯವಾಗಿ ತರಕಾರಿ ಬೀಜಗಳನ್ನು ವಿತರಿಸಿದವು. ಇದು ನೈಸರ್ಗಿಕ ಕೃಷಿ ವಿಧಾನದಲ್ಲಿ ಅಲ್ಲವಾದರೂ ಗಿಡಗಳನ್ನು ಬಹಳ ಜತನದಿಂದ ಬೆಳೆಸಲಾಯಿತು. ಗೊಬ್ಬರಗಳು (ಒಣ ಸಗಣಿ ಗೊಬ್ಬರ), ಕೀಟನಾಶಕಗಳನ್ನು (ಸಸ್ಯಗಳು, ಬೇವಿನ ಎಣ್ಣೆ, ಕಾಂತಾರಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಸೋಪು) ಹೆಚ್ಚಾಗಿ ಬಳಸಲಾಯಿತು. ಈ ಉತ್ಪನ್ನಗಳನ್ನು ನೆರೆಹೊರೆಯವರೊಂದಿಗೆ ಲಾಕ್‌ಡೌನ್ ಸಮಯದಲ್ಲಿ ಹಂಚಿಕೊಳ್ಳಲಾಯಿತು. ಲಾಕ್‌ಡೌನ್ ತೆರವಾದ ನಂತರವೂ ಇದು ಮುಂದುವರೆದಿದೆ. ಜನರು ಚೈನೀಸ್ ಆಲೂಗಡ್ಡೆ, ಕೆಸುವಿನ ಗಡ್ಡೆ, ಮರಗೆಣಸು, ಸುವರ್ಣಗಡ್ಡೆ ಇತ್ಯಾದಿಗಳನ್ನು ತಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಯಲಾರಂಭಿಸಿದರು.
ಪಾಳುಬಿದ್ದ ಭೂಮಿಗಳು ಆಹಾರ ಭೂಮಿಗಳಾಗಿ ಪರಿವರ್ತನೆ
ರೈತರೊಂದಿಗೆ ಕಳೆದೆರಡು ದಶಕಗಳಿಂದ ಕೆಲಸ ಮಾಡುತ್ತಿರುವ ಥನಾಲ್ ಸಂಸ್ಥೆಯು ಪ್ರಾಜೆಕ್ಟ್ ಫುಡ್ ಸ್ಕೇಪ್ ಎನ್ನುವ ಯೋಜನೆಯನ್ನು ಏಪ್ರಿಲ್‌ನಲ್ಲಿ ಆರಂಭಿಸಿತು. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿನ ಪಾಳುಭೂಮಿಯನ್ನು ಆಹಾರ ಪ್ರದೇಶಗಳಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ಜನರಿಂದ ಹಣವನ್ನು ಸಂಗ್ರಹಿಸಿ ಆ ಹಣವನ್ನು ರೈತರು ಬೆಳೆ ಕೊಯ್ಲು ಮಾಡಿದ ನಂತರ ಆಹಾರ ಪದಾರ್ಥಗಳಾಗಿ ನೀಡುವುದು ಇದರ ಹಿಂದಿದ್ದ ಐಡಿಯಾ.
ರೈತರು ಹಾಗೂ ಗ್ರಾಮೀಣ ಯುವಕರಿಗೆ ಬೀಜಗಳು ಮತ್ತು ಜೈವಿಕ ಗೊಬ್ಬರಗಳಂತಹ ಒಳಸುರಿಯುವಿಕೆಗಳನ್ನು ನೀಡಲಾಯಿತು. ಜೊತೆಗೆ ಕೀಟ ಹಾಗೂ ರೋಗ ನಿರ್ವಹಣೆ ಮತ್ತು ಕೃಷಿಪರಿಸರ ಪದ್ಧತಿಗಳ ಕುರಿತು ತರಬೇತಿ ನೀಡುವ ಮೂಲಕ ನೆರವು ನೀಡಲಾಯಿತು. ಕಳೆದೆರಡು ತಿಂಗಳಲ್ಲಿ ನಾವು ಸುಮಾರು ೮೦೦ ರೈತರಿಗೆ ಈ ಒಳಸುರಿಯುವಿಕೆಗಳನ್ನು ಒದಗಿಸಿ ಸಾವಯವ ವಿಧಾನದಲ್ಲಿ ಮಣ್ಣು, ಕೀಟ ಮತ್ತು ರೋಗ ನಿರ್ವಹಣಾ ವಿಧಾನಗಳ ಕುರಿತು ತರಬೇತಿ ನೀಡಿದೆವು. ಇದು ಪಾಲಕ್ಕಾಡಿನ ಅಟ್ಟಪ್ಪಾಡಿ ಮತ್ತು ನಾರನಮೂಜಿಯ ಪಥನಮತ್ತಟ್ಟ ಜಿಲ್ಲೆಗಳಲ್ಲಿನ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದೆ. ಇಲ್ಲಿ ಕಳೆದ ೨೦-೩೦ ವರ್ಷಗಳಲ್ಲಿ ಆಹಾರ ಉತ್ಪಾದನೆಯ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದೆ.
ನಾವು ೨೦೧೯ರಿಂದ ಅಟ್ಟಪಾಡಿಯ ೧೯ ಹಳ್ಳಿಗಳಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ʼಕೃಷಿಪರಿಸರದ ಮೂಲಕ ಪೌಷ್ಟಿಕಾಂಶ ಸಮರ್ಪಕತೆʼಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯು ಅವರ ಸಾಂಪ್ರದಾಯಿಕ ಕೃಷಿ ಪದ್ಧತಿ ಪಂಚಕೃಷಿಯನ್ನು ಹಾಗೂ ಅವರ ಸಿರಿಧಾನ್ಯ ಆಧಾರಿತ ಆಹಾರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿತ್ತು. ಇದನ್ನು ಆರಂಭಿಸಿದಾಗ ಹಿರಿಯರಲ್ಲಿ ಉತ್ಸಾಹವಿತ್ತು. ಹಲವಾರು ಶಿಕ್ಷಿತ ಯುವಸಮುದಾಯದವರು ಸರಿಯಾದ ಕೆಲಸವಿಲ್ಲದೆ ಇದ್ದದ್ದರಿಂದ ಈ ಯೋಜನೆಯಲ್ಲಿ ತೊಡಗಿಸಿಕೊಂಡರು. ಅವರಲ್ಲಿ ಕೆಲವರು ಒಟ್ಟಾಗಿ ಪಂಚಕೃಷಿ ಹಾಗೂ ಕೃಷಿಪರಿಸರ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದರು. ದೇಸಿ ಬೀಜಗಳು ಮತ್ತು ಪದ್ಧತಿಗಳನ್ನು ಆ ಸಮುದಾಯದ ಹಿರಿಯರ ನೆರವಿನೊಂದಿಗೆ ಸಂರಕ್ಷಿಸಲು ಈ ಯೋಜನೆಯನ್ನು ಆರಂಭಿಸಲಾಯಿತು. ಇದಕ್ಕೆ ʼವೇದೆ ವ್ಯಾಲೆʼ ಅಂದರೆ ಬೀಜಗಳ ಬುಟ್ಟಿ ಎಂದು ಹೆಸರಿಡಲಾಯಿತು.
ಆಂಧ್ರಪ್ರದೇಶದಲ್ಲಿ ಸಮುದಾಯ ನಿರ್ವಹಿಸುವ ನೈಸರ್ಗಿಕ ಕೃಷಿಯ ಕುರಿತು ನಮ್ಮಿಂದ ತಿಳಿದಾಗ ಅದನ್ನು ಪ್ರಯತ್ನಿಸಲು ಮುಂದಾದರು. ಹಲವು ರೈತರು ಈ ಪ್ರಯೋಗಕ್ಕೆ ಸಹಕಾರ ನೀಡಿದರು. ಎಲ್ಲವೂ ಕೋವಿಡ್ ೧೯ರಿಂದಾಗಿ ಸ್ಥಗಿತವಾಯಿತು. ಮೊದಲನೆಯ ಬಾರಿ ಲಾಕ್‌ಡೌನ್ ಆದಾಗ ತಂಡದ ಸದಸ್ಯರೊಂದಿಗೆ ನಿರಂತರ ಸಂವಾದ ನಡೆಸಲಾಯಿತು. ಲಾಕ್‌ಡೌನ್ ಮುಗಿದಾಗ ಪ್ರಾಜೆಕ್ಟ್ ಫುಡ್ ಸ್ಕೇಪ್ ಯೋಜನೆಯನ್ನು ಆರಂಭಿಸಲಾಯಿತು. ಇದನ್ನು ದೇಸಿಯ ಆಹಾರ ಮತ್ತು ಕೃಷಿಯ ಮಹತ್ವ ಅರಿತ ಯುವಕರು ಮತ್ತು ಹಿರಿಯರಿಗೆ ನೆರವು ನೀಡಲು ಆರಂಭಿಸಲಾಯಿತು. ಅವರಲ್ಲಿ ಉತ್ಸಾಹ, ಮಾನವ ಸಂಪನ್ಮೂಲವಿತ್ತು ಆದರೆ ಆರ್ಥಿಕ ಸಂಪನ್ಮೂಲವಿರಲಿಲ್ಲ. ಪ್ರತಿ ಎಕರೆಗೆ ರೂ.೫೦೦೦ವನ್ನು ಮುಂಗಡವಾಗಿ ಪಡೆಯಬಯಸಿದರು. ಪ್ರಾಜೆಕ್ಟ್ ಫುಡ್ ಸ್ಕೇಪ್ ಮೂಲಕ ಥನಾಲ್ ಹಣವನ್ನು ಸಂಗ್ರಹಿಸಿತು. ಹಲವಾರು ಸ್ನೇಹಿತರು ಮತ್ತು ಗ್ರಾಹಕರು ತಾವಾಗೇ ಸಂಪನ್ಮೂಲಗಳನ್ನು ಒದಗಿಸಲು ಮುಂದೆಬಂದರು. ನಾವು ಹಣವನ್ನು ಆಹಾರ ಧಾನ್ಯಗಳು, ಬೇಳೆಕಾಳುಗಳು ಮತ್ತು ತರಕಾರಿಗಳ ಮೂಲಕ ಹಿಂತಿರುಗಿಸಲು ಉದ್ದೇಶಿಸಿದೆವು. ಹಲವರು ನಮ್ಮಿಂದ ಏನನ್ನೂ ತೆಗೆದುಕೊಳ್ಳಲು ಬಯಸಲಿಲ್ಲ.
ಥನಾಲ್ ಕಡೆಯಿಂದ ಸಾವಯವ ತರಕಾರಿ ಕೃಷಿಯ ಆರಂಭ
ನಾವು ೨೦೨೧ರಲ್ಲಿ ತಿರುವನಂತಪುರದ ಎರಡು ಪಂಚಾಯತ್‌ಗಳ ರೈತರೊಂದಿಗೆ ಕೆಲಸ ಮಾಡಲಾರಂಭಿಸಿದೆವು. ಕೋವಲಂನ ಮಹಿಳಾ ಕೃಷಿಕರೊಂದಿಗೆ ಸಾವಯವ ಕೃಷಿಯ ಯೋಜನೆಯನ್ನು ಆರಂಭಿಸಲಾಯಿತು. ಕೇರಳವು ಕೀಟನಾಶಕಗಳಿಂದಾಗಿ ಸಾಲದಲ್ಲಿ ಸಿಲುಕಿತ್ತು. ಅದರಲ್ಲೂ ಎಂಡೋಸಲ್ಫಾನ್ ಕೀಟನಾಶಕದ ಕುರಿತು ಮಾಹಿತಿಯನ್ನು ನೀಡುವಲ್ಲಿ ಥನಾಲ್ ಮುಖ್ಯಪಾತ್ರ ವಹಿಸಿತು. ಈ ಯೋಜನೆಯ ಉದ್ದೇಶ ರಾಸಾಯನಿಕ ಕೀಟನಾಶಕಗಳಿಲ್ಲದೆ ಕೃಷಿ ಸಾಧ್ಯ ಎನ್ನುವುದನ್ನು ತೋರಿಸುವುದಾಗಿತ್ತು. ಕೇರಳದಲ್ಲಿ ಆಹಾರ ಉತ್ಪಾದನೆ ಹಾಗೂ ಸ್ವಾವಲಂಬನೆಗೆ ದೊಡ್ಡ ಅಡ್ಡಿ ಇಲ್ಲಿ ಹೆಚ್ಚು ಸಣ್ಣರೈತರು ಹೆಚ್ಚು ಎನ್ನುವುದು ವಿಜ್ಞಾನಿಗಳು ಸೇರಿದಂತೆ ಹಲವರ ಅಭಿಮತವಾಗಿತ್ತು. ನಮ್ಮ ಯೋಜನೆಯಲ್ಲಿ ಈ ಅಂಶವನ್ನು ಮುಖ್ಯವಾಗಿ ಪರಿಗಣಿಸಿ ಸಣ್ಣಹಿಡುವಳಿದಾರರು, ಸಣ್ಣ ರೈತರು ಹೇಗೆ ಸಾಕಷ್ಟು ತರಕಾರಿ ಉತ್ಪಾದನೆ ಮಾಡಬಹುದು ಎನ್ನುವುದಕ್ಕೆ ಒತ್ತು ಕೊಡಲಾಯಿತು. ಕೇರಳದ ಮಣ್ಣು ಮತ್ತು ಹವಾಮಾನವು ತರಕಾರಿ ಹಾಗೂ ಹಣ್ಣಿನ ಕೃಷಿಗೆ ಸೂಕ್ತವಾಗಿದೆ. ಮೂರು ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ ನಾವು ಕೆಲಸ ಆರಂಭಿಸಿದೆವು. ಅವರ ಬಳಿ ಹೆಚ್ಚು ಭೂಮಿಯಿರಲಿಲ್ಲ. ವರ್ಷದೊಳಗೆ ಯಶಸ್ಸು ಸಿಕ್ಕಿತು. ಪಂಚಾಯ್ತಿಯ ಮಂದಿ ನಮ್ಮನ್ನು ಸಾವಯವ ತರಕಾರಿ ಮತ್ತು ಬಾಳೆ ಕೃಷಿಗೆ ಸಹಾಯ ಮಾಡಲು ಕೋರಿದರು. ನಂತರ ಥನಾಲ್‌ನಲ್ಲಿ ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುತ್ತಾ ರಾಜ್ಯ ಸರ್ಕಾರವು ಸಾವಯವ ಕೃಷಿ ನೀತಿ ರೂಪಿಸಲು ಸಹಕಾರಿಯಾಯಿತು.
ರೈತರು ತಮ್ಮ ಭೂಮಿಯನ್ನು ಉತ್ತು ಬೀಜ ಬಿತ್ತಿದರು. ನಮ್ಮ ಯುವ ತಂಡವು ಈ ಯೋಜನೆಯೊಂದಿಗೆ ಕೈಜೋಡಿಸಿತು. ಅವರು ಸ್ವಲ್ಪ ಭೂಮಿಯನ್ನು ವಾಯಿದೆಗೆ ತೊಗೊಂಡು ಸಾವಯವ ತರಕಾರಿ ಕೃಷಿಯನ್ನು ರೈತರ ನೆರವಿನೊಂದಿಗೆ ಆರಂಭಿಸಿದರು. ಯುವ ತಂಡಕ್ಕೆ ನೈಸರ್ಗಿಕ ಕೃಷಿ, ಕೃಷಿ ಪರಿಸರ ಪದ್ಧತಿಗಳಲ್ಲಿ ತರಬೇತಿ ನೀಡಿದವು. ಅದರಲ್ಲೂ ಕೀಟ, ರೋಗ ನಿರ್ವಹಣೆ ಮತ್ತು ಜೈವಿಕ ಗೊಬ್ಬರ ತಯಾರಿಕೆಯನ್ನು ೬ ತರಗತಿಗಳಲ್ಲಿ ಕಲಿಸಲಾಯಿತು. ಇತರ ಸಂಸ್ಥೆಗಳು ನೈಸರ್ಗಿಕ ಕೃಷಿಯ ಕುರಿತು ನಡೆಸುವ ಆನ್‌ಲೈನ್ ಕೋರ್ಸುಗಳಲ್ಲೂ ಭಾಗವಹಿಸುವಂತೆ ಅವರಿಗೆ ಉತ್ತೇಜನ ನೀಡಿದೆವು.
ಪಥನಮತ್ತಟ್ಟ ಜಿಲ್ಲೆಯಲ್ಲಿನ ಮತ್ತೊಂದು ಬುಡಕಟ್ಟು ಸಮುದಾಯದವರು ಕೋವಿಡ್ ಕಾರಣದಿಂದ ಊರಿನಲ್ಲಿ ಹೆಚ್ಚು ಕೆಲಸವಿರಲಿಲ್ಲ. ಅಲ್ಲದೆ ಕೆಲಸಕ್ಕಾಗಿ ಬೇರೆಡೆಗೆ ಹೋಗಲು ಸಾಧ್ಯವಿರಲಿಲ್ಲ. ಸುಮಾರು ೪೮೦ ಮಂದಿಗೆ ೧೩ ಬಗೆಯ ವಿವಿಧ ತರಕಾರಿ ಬೀಜಗಳನ್ನು, ಜೈವಿಕ ಒಳಸುರಿಯುವಿಕೆಗಳನ್ನು ನೀಡಿ ಸಾವಯವ ತರಕಾರಿ ಕೃಷಿ ಮಾಡುವ ವಿಧಾನದ ಕುರಿತು ಮಾರ್ಗದರ್ಶನ ನೀಡಲಾಯಿತು. ಮಳೆ ಹೆಚ್ಚಾದದ್ದರಿಂದ ಹಲವರಿಗೆ ಕೆಲಸ ಆರಂಭಿಸಲು ಸಾಧ್ಯವಾಗಲಿಲ್ಲ. ಈ ಪರಿಸ್ಥಿತಿಯ ನಡುವೆಯೇ ಈ ಗುಂಪಿನ ಆಯ್ದ ಮಂದಿಗೆ ತರಬೇತಿ ನೀಡಲು ನಾವು ಯೋಜಿಸಿದೆವು.
ಸಮುದಾಯ ಅಡುಗೆಮನೆಗಳು
ಸ್ಥಳೀಯ ಆಹಾರ ಉತ್ಪಾದನೆಯ ಮಹತ್ವವನ್ನು ಅರಿತ ಕೇರಳದ ಪಂಚಾಯತ್‌ಗಳು ಲಾಕ್‌ಡೌನ್ ಸಮಯದಲ್ಲಿ ಸಮುದಾಯ ಅಡುಗೆಮನೆಗಳನ್ನು ಆರಂಭಿಸಿದವು. ನಾವು ತಿರುವನಂತಪುರದಲ್ಲಿನ ಕರಕುಳಂ ಪಂಚಾಯತ್ ಜೊತೆಗೆ ಕೆಲಸ ಮಾಡಲು ಆರಂಭಿಸಿದೆವು. ಇದು ನಗರದ ಹತ್ತಿರವೇ ಇದ್ದರೂ ಇಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಂಚಾಯತ್ ನಮ್ಮೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದರು.
ಸುಮಾರು ೧೩೦ ಕೃಷಿಕರಲ್ಲಿ ಹಲವರು ಮಹಿಳೆಯರು. ಅವರಿಗೆ ವಿವಿಧ ತರಕಾರಿ ಬೀಜಗಳು ಮತ್ತು ಮಣ್ಣಿನ ಗುಣಮಟ್ಟ ಹೆಚ್ಚಿಸಲು ಜೈವಿಕ ಒಳಸುರಿಯುವಿಕೆಗಳನ್ನು ನೀಡಲಾಯಿತು. ಆಯ್ದ ಕೆಲವು ರೈತರಿಗೆ ಸಾವಯವ ತರಕಾರಿ ಕೃಷಿಯಲ್ಲಿ ಎರಡು ತರಬೇತಿಗಳನ್ನು ನೀಡಲಾಯಿತು. ಕಳೆದ ತಿಂಗಳು ಲಾಕ್‌ಡೌನ್ ಕಾರಣದಿಂದಾಗಿ ಸರ್ಕಾರವು ಓಡಾಟಕ್ಕೆ ನಿರ್ಬಂಧ ಹೇರಿದ್ದರಿಂದ ನಮ್ಮಿಂದ ಬೀಜ ಪಡೆದುಕೊಂಡು ತರಬೇತಿ ನೊಂದಾಯಿಸಿದ್ದ ಎಲ್ಲ ರೈತರನ್ನು ತಲುಪಲು ಸಾಧ್ಯವಾಗಲಿಲ್ಲ. ಅವರು ಕೃಷಿಯನ್ನು ಆರಂಭಿಸಿದ್ದರು. ನಾವು ಈ ಪಂಚಾಯತ್‌ನಲ್ಲಿ ಮೊಬೈಲ್ ಆರ್ಗಾನಿಕ್ ಆಗ್ರೋ ಕ್ಲಿನಿಕ್ ಸರ್ವೀಸ್ ನೀಡಲು ತೀರ್ಮಾನಿಸಿದೆವು.
ನನ್ನ ಆಹಾರ ಉದ್ಯಾನ ಸವಾಲು
ಈ ಪಿಡುಗಿನಿಂದ ನಮ್ಮ ತಂಡಕ್ಕೆ ಹಾಗೂ ನಮ್ಮೊಂದಿಗೆ ಕೈಜೋಡಿಸಿದ್ದ ರೈತರಿಗೆ ಸಾಕಷ್ಟು ತೊಂದರೆಯಾಯಿತು. ಓಡಾಟಕ್ಕೆ ನಿರ್ಬಂಧ ಹೇರಿದ್ದರಿಂದ ಕೆಲವು ಕೆಲಸಗಳನ್ನು ಮುಗಿಸಲಾಗಲಿಲ್ಲ, ರೈತರನ್ನು ಭೇಟಿಯಾಗಲು, ದಾಖಲಿಸಲು ಸಾಧ್ಯವಾಗಲಿಲ್ಲ ಇತ್ಯಾದಿ. ಅವರ ಪರಿಣಿತಿಯನ್ನು ಬಳಸಿಕೊಂಡು ಸಾವಯವ ಕೃಷಿಯಲ್ಲಿ ʼನನ್ನ ಆಹಾರ ಉದ್ಯಾನ ಸವಾಲುʼ ಕಾರ್ಯಕ್ರಮವನ್ನು ಆರಂಭಿಸಿ ಅವರೆಲ್ಲರನ್ನೂ ಕೃಷಿಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು. ನಾವೊಂದು ವಾಟ್ಸಾಪ್ ಗುಂಪನ್ನು ನಿರ್ಮಿಸಿ ಅದರಲ್ಲಿ ಕೃಷಿ ಕುರಿತಾದ ಚಿತ್ರಗಳನ್ನು ಹಂಚಿಕೊಳ್ಳಲಾಯಿತು. ಕೀಟಗಳ ನಿರ್ವಹಣೆ, ಮಣ್ಣಿನ ನಿರ್ವಹಣೆ, ಜಾಗದ ಸಮಸ್ಯೆ ಇತ್ಯಾದಿ ಸಂಗತಿಗಳ ಕುರಿತು ತಿಳಿಸಲಾಯಿತು. ಎಲ್ಲರೂ ತಮ್ಮ ಯಶಸ್ಸು ಹಾಗೂ ಆಸೆಯ ಕತೆಗಳನ್ನು ಹಂಚಿಕೊಂಡಿದ್ದರಿಂದ ಗುಂಪು ಹೆಚ್ಚು ಆಸಕ್ತಿಯುತ ಹಾಗೂ ಅರ್ಥಪೂರ್ಣವಾಯಿತು. ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಲಾಗಿದೆ.
“ ೧೨ ವರ್ಷಗಳ ಹಿಂದೆ ನಾನು ಥನಾಲ್ ಸೇರಿಕೊಳ್ಳುವ ಮೂಲಕ ಸಾವಯವ ತರಕಾರಿ ಉದ್ಯಾನ ಕುರಿತ ಆಸಕ್ತಿ ಹೆಚ್ಚಿತು. ನಾನು ಹೊಸ ಜಾಗಕ್ಕೆ ಹೋದೆ ಅಲ್ಲಿಯೂ ಮನೆಯ ಛಾವಣಿಯ ಮೇಲೆ ತರಕಾರಿಗಳನ್ನು ಬೆಳೆಯಲಾರಂಭಿಸಿದೆ. ಥನಾಲ್ ಇಂದ ಪಡೆದಿದ್ದ ಕೆಲವು ಗ್ರೋಬ್ಯಾಗ್ಗಳು ಮತ್ತು ಬೀಜಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಂಡೆ. ತರಕಾರಿಗಳನ್ನು ಬೆಳೆಯಲು ಅವರನ್ನು ಪ್ರೋತ್ಸಾಹಿಸಿದೆ. ಬೆಂಡೆಕಾಯಿ, ಮೆಣಸಿನಕಾಯಿ, ಬದನೆ, ಸೋರೆಕಾಯಿ ಇತ್ಯಾದಿಗಳನ್ನು ಬೆಳೆಸಿದೆ. ನಾವು ಬೀಜಗಳು, ಸಸಿಗಳು, ಫಸಲನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಹತ್ತಿರವಾದೆವು. ಹಿಂದಿನ ಕೃಷಿಯ ಅನುಭವದಿಂದ ಹಾಗೂ ಥನಾಲ್ನ ಕಾರ್ಯಕ್ರಮ ಅಧಿಕಾರಿ ಅರುಣ್ನ ಸಲಹೆಯಂತೆ ಜೈವಿಕ ಕೀಟ ನಿರ್ವಹಣೆ, ಜೈವಿಕ ಗೊಬ್ಬರಗಳ ಕುರಿತು ಸಲಹೆ ನೀಡಲು ಸಾಧ್ಯವಾಯಿತು. ಈಗ ಥನಾಲ್ ಮೊಬೈಲ್ ಅಗ್ರಿ ಕ್ಲಿನಿಕ್ ತಂಡದಿಂದ ನಮ್ಮ ಸಮುದಾಯದಲ್ಲಿ ಕೃಷಿ ತಂಡವನ್ನು ರೂಪಿಸಿಕೊಂಡು ತರಬೇತಿ ಕೊಡಿಸುವ ಕುರಿತು ಯೋಚಿಸುತ್ತಿದ್ದೇನೆ. ಈ ಪಿಡುಗು ಕೊನೆಯಾಗಿ ಪರಿಸ್ಥಿತಿ ಬದಲಾಗುವುದಕ್ಕೆ ಕಾಯುತ್ತಿದ್ದೇನೆ. ಆಗ ನಮ್ಮ ಕೃಷಿ ಸಮುದಾಯಕ್ಕೆ ಇನ್ನಷ್ಟು ಜನರನ್ನು ಸೇರಿಸಿಕೊಂಡು ಸ್ವಾವಲಂಬಿಗಳಾಗಬಹುದು” ಎಂದು ಕೋವಲಂ ಹತ್ತಿರದ ವೆಲ್ಲಾರಿನ ಪ್ರಮೀಳ ಹೇಳಿದರು.
ಆರ್ಗಾನಿಕ್ ಬಜಾರ್‌ನ ಮ್ಯಾನೇಜರ್ ದೀಪಕ್ “ನಾವು ಏಳು ಮಂದಿ ಸೇರಿ ಸಾವಯವ ಕೃಷಿಕರಾದ ನಮ್ಮ ಸ್ನೇಹಿತರೊಬ್ಬರಿಂದ ೧.೫ ಎಕರೆ ಭೂಮಿಯನ್ನು ವಾಯಿದೆಗೆ ಪಡೆದುಕೊಂಡೆವು. ಅಲ್ಲಿ “ವೆನಾಡ್ ಆರ್ಗಾನಿಕ್ ಫಾರಂ” ಶುರುಮಾಡಿದೆವು. ಬಾಳೆ, ಶುಂಠಿ, ಅರಿಶಿಣ, ಸುವರ್ಣಗಡ್ಡೆ, ಕೆಸುವಿನ ಗಡ್ಡೆ, ಗೆಣಸು, ತರಕಾರಿಗಳಾದ ಟೊಮೊಟೊ, ಮೆಣಸಿನ ಕಾಯಿ, ಬದನೆ, ಹಾಗಲಕಾಯಿ, ಸೋರೆಕಾಯಿ, ಕುಂಬಳ ಕಾಯಿಯನ್ನು ಬೆಳೆದೆವು. ಒಳಸುರಿಯುವಿಕೆಗಳ ಮೇಲೆ ಯಾವುದೇ ಖರ್ಚನ್ನು ಮಾಡದೆ ಸ್ವಾವಲಂಬನೆಯನ್ನು ಸಾಧಿಸಲು ಎಲ್ಲ ಕೃಷಿ ಕೆಲಸಗಳನ್ನು ನಾವೇ ಮಾಡಿದೆವು. ಮನೆಯಲ್ಲೇ ಬೀಜಗಳನ್ನು ಬಿತ್ತಿ ಸಸಿಗಳನ್ನು ಬೆಳೆಸಿಕೊಂಡೆವು. ಗೊಬ್ಬರ, ಕೀಟನಾಶಕಗಳನ್ನು ತಯಾರಿಸಿದೆವು. ಪಾಟಿಂಗ್ ಮಣ್ಣು ಸಿದ್ಧಪಡಿಸಿದೆವು. ಹೊಂಡದಲ್ಲಿ ಮೀನುಗಳನ್ನು ಬೆಳೆಸಿದೆವು. ಈ ಹೊಂಡದ ನೀರನ್ನು ಬದಲಿಸುವಾಗ ಅದನ್ನು ಕಾಲುವೆಗಳ ಮೂಲಕ ಗಿಡಗಳಿಗೆ ಹಾಯಿಸಲಾಯಿತು. ಈ ನೀರು ಗಿಡಗಳಿಗೆ ಗೊಬ್ಬರವಾಯಿತು. ಅಂತರಬೆಳೆ ಪದ್ಧತಿಯಂತೆ ಬಾಳೆಯ ನಡುವೆ ಸುವರ್ಣಗಡ್ಡೆ, ಕೆಸುವಿನ ಗಡ್ಡೆ, ಬದನೆ ಮತ್ತು ಸೌತೆಕಾಯಿ ಬೆಳೆಸಲಾಯಿತು. ಕೀಟ ನಿಯಂತ್ರಣ ಗುಣಗಳನ್ನು ಹೊಂದಿರುವ ಅರಿಷಿಣ ಮತ್ತು ಶುಂಠಿಯನ್ನು ಇವುಗಳ ನಡುವೆ ಬೆಳೆಸಲಾಯಿತು. ಗಿಡಗಳ ಪಾತಿಗೆ ಹೊದಿಕೆ ಹೊದಿಸುವ ಪ್ರಾಮುಖ್ಯತೆಯ ಅರಿವಿದ್ದರಿಂದ ಸೆಣಬಿನ ಚೀಲಗಳು ಹಾಗೂ ಒಣಗಿದ ಎಲೆಗಳನ್ನು ಗಿಡದ ಪಾತಿಗಳಿಗೆ ಹಾಕಲಾಯಿತು. ನಮ್ಮ ಗುರಿ ಆರ್ಗಾನಿಕ್ ಬಜಾರಿನಲ್ಲಿ ಅಭಾವವಿದ್ದ ಬಾಳೆಹಣ್ಣು ಮತ್ತಿತರ ತರಕಾರಿಗಳನ್ನು ಬೆಳೆಯುವುದಾಗಿತ್ತು. ನಾವು ತಯಾರಿಸಿದ ಪಾಟಿಂಗ್ ಮಿಕ್ಸ್ಚರ್ ಅನ್ನು ಮಾರಾಟಮಾಡಿದೆವು. ಇದರಿಂದ ನಮ್ಮ ಖರ್ಚನ್ನು ಸ್ವಲ್ಪ ಮಟ್ಟಿಗೆ ವಾಪಸ್ ಪಡೆಯಲು ಸಾಧ್ಯವಾಯಿತು. ನಾವೆಲ್ಲರೂ ಪ್ರತಿದಿನ ಬೆಳಿಗ್ಗೆ ಕನಿಷ್ಠ ಮೂರು ಗಂಟೆ ತೋಟದಲ್ಲಿ ಕೆಲಸ ಮಾಡಿದೆವು. ನಾವೆಲ್ಲವರೂ ಬಹಳ ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಮುಂಜಾನೆ ಪ್ರಕೃತಿಯ ನಡುವೆ ಕೆಲಸ ಮಾಡುವುದು ಇಡಿ ದಿನ ಚಟುವಟಿಕೆಯಿಂದ ಉಲ್ಲಸಿತವಾಗಿರುವಂತೆ ಮಾಡುತ್ತಿತ್ತು. ನಮ್ಮ ಆರೋಗ್ಯವು ಕೂಡ ಬಹಳಷ್ಟು ಸುಧಾರಿಸಿತು”.
ಕೇರಳದಲ್ಲಿ ಪ್ರತಿರೋಧಕ ಶಕ್ತಿಯನ್ನು ಬೆಳೆಸುವುದು ಸ್ವಾಗತಾರ್ಹ ಬೆಳವಣಿಗೆಯಾಗಿತ್ತು. ಪೌಷ್ಟಿಕಾಂಶಯುಕ್ತ ಆಹಾರವನ್ನು ಅದರಲ್ಲೂ ಹಣ್ಣು, ತರಕಾರಿಗಳನ್ನು ಸೇವಿಸುವುದು ಆರೋಗ್ಯವಂತ ಜೀವನಕ್ಕೆ ಅತ್ಯಗತ್ಯ. ಕೇರಳದ ಭೂಪ್ರದೇಶ, ಮಣ್ಣು ಹಣ್ಣು, ತರಕಾರಿ ಕೃಷಿಗೆ ಸೂಕ್ತವಾದದ್ದು. ಕೃಷಿ ಇಲಾಖೆಯು ರಾಜ್ಯದಲ್ಲಿನ ಸುಮಾರು ೧ ಲಕ್ಷ ಹೆಕ್ಟೇರ್ ಭೂಮಿಯನ್ನು ಗುರುತಿಸಿತು. ಇದನ್ನು ಆಹಾರ ಉತ್ಪಾದನಾ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಬಹುದು. ಹಲವು ಸುಶಿಕ್ಷಿತ ಯುವಸಮುದಾಯದವರು ʼನನ್ನ ಆಹಾರ ನನ್ನ ಜವಾಬ್ದಾರಿʼ ಎಂದು ಮುಂದೆಬರುತ್ತಿರುವುದನ್ನು ನೋಡಿದರೆ ಆಶಾಭಾವ ಮೂಡುತ್ತಿದೆ.
ಉಷಾ ಎಸ್, ಮಂಜು ಎಂ ನಾಯರ್ ಮತ್ತು ದೇವಿಕ ಎ ಎಸ್
Usha S
Thanal, OD- 3,
Jawahar Nagar, Kowdiar P.O
Thiruvananthapuram – 695003
Kerala.
E-mail: ushathanal@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೩ ; ಸೆಪ್ಟಂಬರ್ ೨೦೨೦



