ಪುನರುತ್ಪಾದಕ ಕೃಷಿವಿಜ್ಞಾನದ ಸಲಕರಣೆಯಾಗಿ ತಂತ್ರಜ್ಞಾನದ ಬಳಕೆ


ಸಾಂಪ್ರದಾಯಿಕ ಡಿಜಿಟಲ್ಮಾರುಕಟ್ಟೆಯ ವೇದಿಕೆಗಳು ಕೇವಲ ಬಳಕೆಗಷ್ಟೇ ಗಮನ ನೀಡುತ್ತವೆ. ತಮಿಳುನಾಡಿನ ಕೃಷಿಜನನಿ ಎನ್ನುವ ವೇದಿಕೆಯು ವಿಕೇಂದ್ರಿಕರಣ ಮತ್ತು ಪುನರುತ್ಪಾದನೆಗೆ ಒತ್ತು ನೀಡುವ ಬದಲಿ ಮಾದರಿಯಾಗಿದೆ. ಜನನಿ ಗ್ರೋ ಮೊಬೈಲ್ತಂತ್ರಾಂಶವು ಸಣ್ಣ ರೈತರಿಗೆ ಪುನರುತ್ಪಾದನಾ ಪದ್ಧತಿಗಳ ಕುರಿತು ತಿಳಿಸಿಕೊಡುತ್ತದೆ. ಜೊತೆಗೆ ಇದು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ತಂದುಕೊಡುವ ಸಾವಯವ ಮಾರುಕಟ್ಟೆ ಒದಗಿಸುತ್ತದೆ.


ಕೃಷಿಜನನಿ ಎನ್ನುವುದು ಅಗ್ರಿಟೆಕ್‌ನವರ ಸೋಶಿಯಲ್‌ ಎಂಟರ್‌ಪ್ರೈಸ್‌. ಇದು ತಮಿಳುನಾಡಿನ ತಿರಪ್ಪೂರು ಜಿಲ್ಲೆಯ ಕರೈಪಾಳ್ಯಂನಲ್ಲಿ ಐದು ವರ್ಷಗಳ ಹಿಂದೆ ಆರಂಭವಾಯಿತು. ಇದರ ಉದ್ದೇಶ ಪುನರುತ್ಪಾದಕ ಕೃಷಿವಿಜ್ಞಾನದ ಸೃಷ್ಟಿ. ಆ ಮೂಲಕ ರೈತರು, ಗ್ರಾಹಕರು, ಕಂಪನಿಗಳು ಮತ್ತು ಭೂಮಿಯನ್ನು ಕಾಪಾಡುವುದು.

ಆರಂಭದಲ್ಲಿ ಇದು ಪ್ರಯೋಗವಾಗಿತ್ತು. ನಮ್ಮ ಉದ್ದೇಶ ಭೂಮಿಯಿಂದ ಆದಷ್ಟು ಕಲಿಯುವುದು, ಕೃಷಿ ಸಮುದಾಯಗಳ ವಿಶ್ವಾಸ ಗಳಿಸುವುದು ಮತ್ತು ರೈತರಿಗೆ ತಂತ್ರಜ್ಞಾನದಿಂದ ಸಾಧ್ಯವಾದಷ್ಟು ನೆರವು ಒದಗಿಸುವುದು. ಪ್ರಯೋಗದ ಹಂತದಲ್ಲಿ ನಾವು ಎರಡು ಜಿಲ್ಲೆಗಳ ರೈತರ ನಡುವೆ ಸಂಪರ್ಕ ಸಾಧಿಸಲು ಗಮನಕೇಂದ್ರೀಕರಿಸಿದೆವು. ಅವರ ಕೃಷಿ ಪದ್ಧತಿಗಳ ಕುರಿತು ತಿಳಿದುಕೊಂಡು ಅವರ ಅಗತ್ಯಗಳಿಗನುಗುಣವಾಗಿ ಅವರನ್ನು ಕೊಳ್ಳುವ ಗುಂಪುಗಳಾಗಿ ವಿಂಗಡಿಸಿದೆವು.  ಕೃಷಿಜನನಿಯು ಒಳಸುರಿಯುವಿಕೆಗಳನ್ನು ದೊಡ್ಡಪ್ರಮಾಣದಲ್ಲಿ ಕೊಂಡು ಅದನ್ನು ನಮ್ಮ ಸಂಪರ್ಕಜಾಲದಲ್ಲಿನ ರೈತರೊಂದಿಗೆ ಹಂಚಿಕೊಳ್ಳುತ್ತಿತ್ತು. ಈ ಪ್ರಯೋಗವು ಹಲವು ಸೋಲು,ಗೆಲವು ಮತ್ತು ಕಲಿಕೆಗಳ ಮಿಶ್ರಣವಾಯಿತು. ಈ ಸಮಯದಲ್ಲಿಯೇ ತಂತ್ರಜ್ಞಾನವು ಪುನರುತ್ಪಾದಕ ಕೃಷಿವಿಜ್ಞಾನದ ಮೂಲಕ ಕೃಷಿಬಿಕ್ಕಟ್ಟುಗಳನ್ನು ಪರಿಹರಿಸಲು ಸಾಧ್ಯವೇ ಎನ್ನುವ ಕುರಿತು ಪ್ರಯೋಗಶೀಲರಾಗಿದ್ದೆವು.

ಈ ಅವಧಿಯಲ್ಲಿನ ಕಲಿಕೆಯು ನಮ್ಮ ಮುಂದಿನ ಹಂತದ ಪಯಣಕ್ಕೆ ನೆರವಾಯಿತು. ತಂತ್ರಜ್ಞಾನವನ್ನು ಬಳಸಿಕೊಂಡ ತಮಿಳುನಾಡಿನಾದ್ಯಂತದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಜನನಿಯು ಲಾಭತಂದುಕೊಡುವ ಪುನರುತ್ಪಾದಕ ಕೃಷಿವಿಜ್ಞಾನದ ವೇದಿಕೆಯಾಯಿತು. ಇದೊಂದು ತಂತ್ರಜ್ಞಾನ ವೇದಿಕೆಯಾಗಿದ್ದು ತಮಿಳುನಾಡಿನ ಸಣ್ಣ ರೈತರಿಗೆ ಪರಿವರ್ತನಾ ಕೃಷಿಯನ್ನು ಅಭ್ಯಸಿಸಲು ಹಾಗೂ ತಯಾರಿಕರಿಗೆ ಉತ್ತಮ ಸಾವಯವ ಬೆಳೆ ಹಾಗೂ ಉತ್ಪನ್ನಗಳನ್ನು ಹುಡುಕಿಕೊಳ್ಳಲು ವೇದಿಕೆಯಾಗಿದೆ. ಒಂದು ಕಡೆ ಜನನಿ ಗ್ರೋ ಮೊಬೈಲ್‌ ತಂತ್ರಾಂಶವು ಸಣ್ಣರೈತರಿಗೆ ಪುನರುತ್ಪಾದಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿದೆ. ಜೊತೆಗೆ ಅವರ ಉತ್ಪನ್ನಗಳ ಉತ್ತಮ ಬೆಲೆ ತಂದುಕೊಡುವ ಸಾವಯವ ಮಾರುಕಟ್ಟೆಯನ್ನು ಒದಗಿಸಿದೆ. ಮತ್ತೊಂದೆಡೆ ಜನನಿ ಮಾರುಕಟ್ಟೆ ಪೋರ್ಟಲ್‌ ಸಗಟು ವ್ಯಾಪಾರಿಗಳು, ವಿಶೇಷ ತಯಾರಕರು ಮತ್ತು ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಉತ್ತಮವಾದ ಪ್ರಮಾಣೀಕೃತ ಸಾವಯವ ಉತ್ಪನ್ನಗಳನ್ನು ನೂರಾರು ಸಣ್ಣ ರೈತರ ಮೂಲಕ ಕೊಳ್ಳಲು ನೆರವಾಗುತ್ತದೆ.

ಎಲ್ಲ ಆರಂಭಿಕ ಉದ್ದಿಮೆಗಳಂತೆ ನಾವು ಕೂಡ ತಂತ್ರಜ್ಞಾನದೊಂದಿಗೆ ರೈತರಿಗೆ ನೆರವಾಗಲು ನಿಧಾನವಾಗಿ ಒಂದೊಂದೇ ಹೆಜ್ಜೆ ಇಟ್ಟೆವು. ನಮ್ಮ ಗುರಿ ತಲುಪಲು ಒಂದು ಸಲಕ್ಕೆ ಒಂದು ತಂತ್ರಾಂಶದೊಂದಿಗೆ ಮುಂದಡಿಯಿಟ್ಟೆವು. ರೈತರು, ಸಾವಯವ ಸಗಟು ವ್ಯಾಪಾರಿಗಳು, ಕಂಪನಿಗಳು, ಎಫ್‌ಪಿಒಗಳು ಇತ್ಯಾದಿ ಹೀಗೆ ಈ ಆಹಾರದ ಮೌಲ್ಯ ಸರಪಳಿಯ ಹಲವು ಭಾಗೀದಾರರ ವಿವರಗಳನ್ನು ಒಳಗೊಂಡ ಹಲವು ಡೇಟಾಬೇಸ್‌ ಲಭ್ಯವಿತ್ತು. ಮುಂದಿನದು ಸಂವಹನದ ಹಂತ. ಬಾಹ್ಯ ಸೇವೆಗಳು ವಹಿವಾಟು ಸಂದೇಶಗಳನ್ನು ರವಾನಿಸುವುದು ಹಾಗೂ ಮೊಬೈಲ್‌ ಆಪ್‌ಗಳಿಗೆ ಸಂದೇಶ ಸೇವೆಗಳನ್ನು ರವಾನಿಸುವುದು ಇದರ ಭಾಗವಾಗಿತ್ತು. ತಮಿಳು ಭಾಷೆಯಲ್ಲಿಯೇ ಈ ಮೊಬೈಲ್‌ ತಂತ್ರಾಂಶವನ್ನು ರೈತರಿಗಾಗಿ ರೂಪಿಸಲಾಯಿತು (ಪ್ರಸ್ತುತ ಆಂಡ್ರಾಯ್ಡ್‌ ಮತ್ತು ಐಒಎಸ್‌ನ ಸೀಮಿತ ಆವೃತ್ತಿಗೆ ಬಿಡುಗಡೆ ಮಾಡಲಾಗಿದೆ). ತಯಾರಕರು ಮತ್ತು ಸಗಟು ವ್ಯಾಪಾರಿಗಳಿಗಾಗಿ ಇಂಗ್ಲೀಷಿನಲ್ಲಿ ವೆಬ್‌ಪೋರ್ಟಲ್‌ ರೂಪಿಸಲಾಗಿದೆ (ಇದರ ಕೆಲಸ ಜಾರಿಯಲ್ಲಿದೆ).

ಎಲ್ಲಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ವೇದಿಕೆಯನ್ನು ನಿರ್ಮಿಸುವುದು ಸುಲಭ ಎನ್ನುವುದು ನಾವು ಕಲಿತ ಮುಖ್ಯ ಪಾಠ. ತಂತ್ರಜ್ಞಾನವು ಎಲ್ಲ ಅಗತ್ಯಗಳಿಗೆ ಸಲಕರಣೆಯಾಗಬಲ್ಲುದು. ಇದು ಸಮಾಜದ ಒಳಿತಿಗೆ ಸಾಧಕವಾಗಬಲ್ಲುದು ಮತ್ತು ಕೆಡುಕನ್ನು ಕಿತ್ತೊಗೆಯಬಲ್ಲುದು. ಯಾವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕರ್ಷಣೆಗಳು ತಂತ್ರಜ್ಞಾನವನ್ನು ಸೇವೆಯ ಸಲಕರಣೆಯಾಗಿ ಇಲ್ಲವೇ ವಿನಾಶದ ಶಸ್ತ್ರಾಸ್ತ್ರವಾಗಿ ಮಾಡುತ್ತದೆ ಎನ್ನುವುದು ಚಿಂತನಾರ್ಹ ವಿಷಯ. ನಮ್ಮ ಯೋಜನೆಯನ್ನು ಅಂತಿಮಗೊಳಿಸುವ ಮೊದಲು ನಮ್ಮ ಆಲೋಚನೆಗಳು ಹೇಗಿತ್ತು ಎನ್ನುವುದನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮಂತೆ ತಂತ್ರಜ್ಞಾನ ಆಧಾರಿತ ಸಾಮಾಜಿಕ ಎಂಟರ್‌ಪ್ರೈಸ್‌ ಆರಂಭಿಸಲು ಯೋಚಿಸುತ್ತಿರುವವರಿಗೆ ಇದರಿಂದ ಉಪಯೋಗವಾಗಬಹುದು.

ತಂತ್ರಾಶದ ಸ್ಕ್ರೀನ್ಶಾಟ್

ಎಲ್ಲವನ್ನೂ ಒಳಗೊಳ್ಳಬಲ್ಲ ತಂತ್ರಜ್ಞಾನ

ತಂತ್ರಜ್ಞಾನ ಆಧಾರಿತ ವೇದಿಕೆ ಸಿದ್ಧಪಡಿಸುವ ಮುನ್ನ ಅದರ ಸುತ್ತ ಇರುವ ಎಲ್ಲ ಅಂಶಗಳನ್ನು ಪರಿಗಣಿಸಬೇಕು. ನಾವು ತಂತ್ರಜ್ಞಾನೇತರ ಅಂಶಗಳನ್ನು ಗಮನಿಸಲು ಕೆಲವು ಮೂಲಭೂತ ಪ್ರಶ್ನೆಗಳನ್ನು ರೂಪಿಸಿಕೊಂಡೆವು. ಇದು ಸವಾಲಿನ ಕೆಲಸವಾಗಿತ್ತು. ಏಕೆಂದರೆ ತಪ್ಪು ಆಯ್ಕೆ ಅಥವ ತಪ್ಪು ನಡೆಯಿಂದ ಮಿಲಿಯನ್‌ಗಟ್ಟಲೆ ರೈತ ಕುಟುಂಬಗಳು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ನಾವು ರೂಪಿಸಿಕೊಂಡ ಪ್ರಶ್ನೆಗಳು :

  • ಮಾಲೀಕತ್ವ ಮತ್ತು ವಿನ್ಯಾಸ : ತಂತ್ರಜ್ಞಾನದ ಮಾಲೀಕತ್ವ ಯಾರ ಬಳಿಯಿರುತ್ತದೆ. ಅದರಲ್ಲು ಅದರ ಮಾಹಿತಿಗಳು ಮತ್ತು ಸಂಬಂಧಗಳು ಒಡೆತನ ಯಾರದ್ದಾಗಿರುತ್ತದೆ. ಯಾವ ಸಾಮಾಜಿಕ ರಚನೆ ತಂತ್ರಜ್ಞಾನವನ್ನು ರೂಪಿಸುತ್ತದೆ ಇಲ್ಲವೆ ಬಲಪಡಿಸುತ್ತದೆ? ಸಮುದಾಯವು ಮಾಲೀಕತ್ವ ಅದರ ಸಂರಚನೆ ಕುರಿತು ಏನಾದರೂ ಹೇಳುತ್ತದೆಯೇ?
  • ವಿಪತ್ತು ಮತ್ತು ಲಾಭ : ಯಾರು ವೇದಿಕೆಯ ಆಪತ್ತಿನ ಹೊಣೆ ಹೊರುವರು? ಯಾರಿಗೆ ಇದರಿಂದ ಲಾಭವಾಗುತ್ತದೆ? ವಿಪತ್ತು ಮತ್ತು ಲಾಭಗಳು ನ್ಯಾಯಯುತವಾಗಿ ಹಂಚಿಕೆಯಾಗುತ್ತದೆಯೇ?
  • ಹಣಕಾಸು ಮತ್ತು ಮೌಲ್ಯದ ಹರಿವು : ಯಾವ ದಿಕ್ಕಿನಲ್ಲಿ ಹಣಕಾಸು ಮತ್ತು ಮೌಲ್ಯದ ಹರಿವು ಹರಿಯುತ್ತಿದೆ? ಇದು ‍ಮೌಲ್ಯ ಸರಪಳಿಯಲ್ಲಿರುವ ಎಲ್ಲರಿಗೂ ಸಿಗುತ್ತದೆಯೇ ಹಾಗೂ ಸಾಮರ್ಥ್ಯ ವೃದ್ಧಿಸುತ್ತಿದೆಯೇ?
  • ಅನುದ್ದೇಶಿತ ಪರಿಣಾಮಗಳು ಮತ್ತು ಕಲಿಕಾ ಸರಣಿ : ತಂತ್ರಜ್ಞಾನ ವೇದಿಕೆಯನ್ನು ಸೃಷ್ಟಿಸುವವರ ಮನಸ್ಸಿನಲ್ಲೊಂದು ಉದ್ದೇಶವಿರುತ್ತದೆ. ಆ ಉದ್ದೇಶವನ್ನು ಪೂರೈಸುವ ಧಾವಂತದಲ್ಲಿ ನಾವು ಯಾವ ಅನುದ್ದೇಶಿತ ಪರಿಣಾಮಗಳನ್ನು ಗಮನಿಸದೆ ಇರಬಹುದು? ಇದನ್ನು ಸರಿಪಡಿಸಿ ಪ್ರತಿಕ್ರಿಯೆಗಳನ್ನಾಧರಿಸಿ ಹಾಗೂ ಕಲಿಕೆಯನ್ನಾಧರಿಸಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದೆ? ಭವಿಷ್ಯದ ಯೋಜನೆಗಳು ಮತ್ತು ಕಾರ್ಯಗಳಿಗೆ ಯಾವ ರೀತಿಯ ಕಲಿಕಾ ಸರಣಿಯ ವಿನ್ಯಾಸವನ್ನು ರೂಪಿಸಬಹುದು?

ಈ ಪ್ರಶ್ನೆಗಳ ಅನ್ವೇಷಣೆಯು ನಮಗೆ ಎರಡು ಭಿನ್ನ ದಾರಿಗಳನ್ನು ತೋರಿಸಿತು. ತಂತ್ರಜ್ಞಾನವು ಸಂಗ್ರಹವನ್ನಷ್ಟೇ ಸಮರ್ಥಿಸುವ ವ್ಯಾಪಾರದ ಮಾದರಿಯಾಗುವುದು. ಇಲ್ಲವೇ ತಂತ್ರಜ್ಞಾನವು ಪುನರುತ್ಪಾದಕ ಕೃಷಿವಿಜ್ಞಾನದ ಸಲಕರಣೆಯಾಗುವುದು.

ಸಾರಹೀರಲು ಬಲತುಂಬುವ ತಂತ್ರಜ್ಞಾನ

ಜನನಿ ಮಾರುಕಟ್ಟೆಯ ಯಶಸ್ಸು ಅದರಲ್ಲಿ ಭಾಗಿಯಾದವರಿಗೂ ಲಾಭ ತಂದುಕೊಡುತ್ತದೆ. “ಯಶಸ್ಸಿನ” ಮಾದರಿಗಳು ಹಲವಾರಿವೆ. ಅವುಗಳಲ್ಲಿ ಯಶಸ್ಸನ್ನು ಬೆಳವಣಿಗೆ, ಲಾಭ, ಕಂಪನಿಯ ಮೌಲ್ಯಮಾಪನ ಹೀಗೆ ಆರ್ಥಿಕ ಹಿನ್ನಲೆಯಲ್ಲಿ ವಿವರಿಸಲಾಗುತ್ತದೆ. ಅಮೆಜಾನ್‌, ಫೇಸ್‌ಬುಕ್‌ ಮತ್ತು ಊಬರ್‌ ಈ ರೀತಿಯ ಕೆಲವು ಯಶಸ್ವಿ ಉದಾಹರಣೆಗಳು.

ಸಾರವನ್ನು ಹೀರಿ ಸಂಗ್ರಹ ಮಾಡುವುದು ವ್ಯಾಪಾರದ ಮಾದರಿಗೆ ಹೆಚ್ಚು ಸೂಕ್ತವಾದದ್ದು. ತಂತ್ರಜ್ಞಾನವನ್ನು ಹಲವು ವರ್ಷಗಳ ಕಾಲ ಕಟ್ಟಲಾಗುತ್ತದೆ, ಬದಲಿಸಲಾಗುತ್ತದೆ, ಮುರಿದು ಮತ್ತೆ ಕಟ್ಟಲಾಗುತ್ತದೆ. ತಂತ್ರಜ್ಞಾನದ ಅಂಶಗಳನ್ನು ಅನ್ಯರು ಬಳಸಲೆಂದು ಮುಕ್ತ ತಂತ್ರಾಶವಾಗಿರಿಸುತ್ತಾರೆ. ನಾವು ಕೂಡ ಮೊದಲು ಇದೇ ರೀತಿಯ  ಜನನಿಯನ್ನು ಮುಕ್ತತಂತ್ರಾಶವಾಗಿಸಿದೆವು. ಫೇಸ್‌ಬುಕ್‌ ನಮಗೆ ನೆರವನ್ನು ನೀಡಿತು. ಈಗ ಇದನ್ನು ನೋಡಿದಾಗ ನಾವು ಅಭಿವೃದ್ಧಿಪಡಿಸಲು ಬಯಸಿದ ಮಾದರಿ ಇದಲ್ಲ ಅನ್ನಿಸುತ್ತದೆ.

ಈ ವೇದಿಕೆಗಳು ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ತಂತ್ರಜ್ಞಾನಗಳು ಸೇವೆಯನ್ನು ಪಡೆಯುತ್ತವೆ. ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವ ನೆಪದಲ್ಲಿ ಕಡಿಮೆ ವೆಚ್ಚ (ಅಮೆಜಾನ್)‌ ಅಥವ ಅನುಕೂಲ (ಊಬರ್)‌ ಅಥವ ಸಂಪರ್ಕ ಸುಲಭ ಸಾಧ್ಯವಾಗಿಸುವುದು (ಫೇಸ್‌ಬುಕ್)‌ ಈ ಎಲ್ಲ ವೇದಿಕೆಗಳು ತಮಗೆ ಸೇವೆ ಒದಗಿಸುತ್ತಿರುವವರನ್ನು ಗ್ರಾಹಕರಿಂದ ದೂರವಿಡುತ್ತದೆ. ನಮ್ಮ ಸಂಬಂಧ ವೇದಿಕೆಯೊಂದಿಗೆ ಹೊರತು ವ್ಯಕ್ತಿಯೊಂದಿಗಲ್ಲ ಎನ್ನುತ್ತವೆ. ಈ ಮಾದರಿಯಲ್ಲಿ ವಿಪತ್ತುಗಳು ತಳದಲ್ಲಿ ಕೂರುತ್ತವೆ. ಸನ್ಮಾನಗಳು ಮೇಲೆ ತೇಲುತ್ತವೆ. ಹಲವಾರು ಸೇವಾದಾರರು ಕಡಿಮೆ ಬೆಲೆಗೆ ತಮ್ಮ ಸೇವೆಯನ್ನು ಒದಗಿಸಬೇಕಾಗುತ್ತದೆ. ಅಸಂಖ್ಯಾತ ಊಬರ್‌ ಚಾಲಕರು ತಮ್ಮ ಕಾರುಗಳ ಸಾಲದ ಕಂತನ್ನು ಕಟ್ಟಲಾಗುವುದಿಲ್ಲ. ಅಮೆಜಾನ್‌ಗೆ ತಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ವ್ಯಾಪಾರಸ್ಥರು ಉತ್ಪನ್ನಗಳ ನಡುವೆ ಸ್ಪರ್ಧೆಗೆ ಅದನ್ನು ಬಳಸಿಕೊಳ್ಳಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ. ಸನ್ಮಾನ, ಹಣಕಾಸು, ಮೌಲ್ಯ, ಮಾಲೀಕತ್ವ ಹಾಗೂ ವಿನ್ಯಾಸ ಇವೆಲ್ಲವೂ ಮೇಲೆ ತೇಲುತ್ತವೆ. ಸ್ಥಳೀಯ ಸಮುದಾಯಗಳಿಂದ ದೂರವಾಗುತ್ತವೆ. ಕಡೆಗೆ ಇದು ವೇದಿಕೆ ಕಾರ್ಯನಿರ್ವಾಹಕ ಮಾಲೀಕರ ಹಿಡಿತದಲ್ಲಿ ಉಳಿಯುತ್ತದೆ.

ಈ ಮಾದರಿಗಳ ನ್ಯೂನ್ಯತೆಗಳು ಕಣ್ಣಿಗೆ ಕಾಣುವಂತಿದ್ದು ಇವು ಬೇಕೆಂದೇ ಈ ವಿಷಯಗಳನ್ನು ಕಡೆಗಣಿಸಿವೆ ಇಲ್ಲವೇ ಅದನ್ನು ಬದಲಾಯಿಸಲು ಅವುಗಳಿಗೆ ಸಾಧ್ಯವಾಗಿಲ್ಲ. ಫೇಸ್‌ಬುಕ್‌ ಸುಳ್ಳು ಸುದ್ದಿಗಳ ಹಾವಳಿಗೆ ಸಿಲುಕಿರುವುದನ್ನು ನೋಡಬಹುದು. ಈ ವೇದಿಕೆಯು ಸುದ್ದಿ ಮಾಧ್ಯಮ ಕ್ಷೇತ್ರದ ಲೆಕ್ಕಾಚಾರವನ್ನು ಬದಲು ಮಾಡಿ ಜಾಹಿರಾತುಗಳಲ್ಲಿ ಡಾಲರುಗಟ್ಟಲೇ ಹಣ ಸಂಪಾದಿಸಿತು. ಒಂದು ಅನುದ್ದೇಶಿತ ಪರಿಣಾಮವು ಈಗ ಅದರ ಪರಿಸ್ಥಿತಿಯನ್ನು ತಲೆಕೆಳಗಾಗಿಸಿದೆ. ಇಡೀ ವಿಶ್ವದಾದ್ಯಂತ ಈಗ ರಾಜಕೀಯ ಸಾಮಾಜಿಕ ಸುಳ್ಳು ಸುದ್ದಿಗಳ ಆತಂಕ ಹೆಚ್ಚಿದೆ. ಆರಂಭದಲ್ಲಿ ಜಾಹಿರಾತಿನ ಆದಾಯಕ್ಕೆ ಮಾತ್ರ ಗಮನಕೊಟ್ಟ ಫೇಸ್‌ಬುಕ್‌ ಈಗ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೆಣಗುತ್ತಿದೆ.

ಈ ಮಾದರಿಯು ತಾಂತ್ರಿಕವಾಗಿ ಹಾಗೂ ಹಣಕಾಸಿನ ದೃಷ್ಟಿಯಿಂದ ಯಶಸ್ವಿಯಾದಂತೆ ಕಂಡರೂ ದೀರ್ಘಾವಧಿಯಲ್ಲಿ ನಿಲ್ಲಬಲ್ಲ ಸುಸ್ಥಿರ ಮಾದರಿಯಲ್ಲ.  ಈ ರೀತಿಯ ಮಾದರಿಗಳು ಯಾವುದೇ ವಲಯದಲ್ಲಾದರೂ ಕೂಡ ಕೈಗಾರಿಕರಣದ ಪಳೆಯುಳಿಕೆಯಂತಿರುತ್ತದೆ ಹಾಗೂ ಕೇಂದ್ರೀಕರಣದತ್ತಲೇ ಸಾಗುತ್ತದೆ. ಅದು ಉಂಟುಮಾಡುವ ಹಾನಿಯನ್ನು ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ. ಜನನಿ ವೇದಿಕೆಗೆ ನಾವು ಬೇರೆ ರೀತಿಯ ಮಾದರಿಯ ಕುರಿತು ಯೋಚಿಸಿದೆವು.

ಪುನರುತ್ಪಾದಕ ಕೃಷಿವಿಜ್ಞಾನಕ್ಕೆ ತಂತ್ರಜ್ಞಾನವೊಂದು ಸಲಕರಣೆ

ತಮಿಳುನಾಡಿನ ಕೃಷಿಯಲ್ಲಿ ಈಗಾಗಲೇ ಸಾರಹೀರುವ ಸಂಗ್ರಹಿಸುವ ಸಮಸ್ಯೆಯಿದೆ. ನೀರಿಗಾಗಿ ಆಳವಾದ ಕೊಳವೆಬಾವಿಗಳನ್ನು ಕೊರೆಯುತ್ತಿದ್ದೇವೆ. ಬಳಲಿದ ಮಣ್ಣನ್ನು ಹಿಂಡಿ ಇಳುವರಿ ಪಡೆಯಲು ಪ್ರಯತ್ನಿಸುತ್ತೇವೆ. ಹವಾಮಾನ ಬದಲಾವಣೆಯು ಹೆಚ್ಚಾಗುತ್ತಿದೆ. ಪ್ರಕೃತಿ ವಿಕೋಪಗಳ ತೀವ್ರತೆಯು ಹೆಚ್ಚಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಪುನರುತ್ಪಾದಕ ಕೃಷಿವಿಜ್ಞಾನವು ಕಡಿಮೆ ವೆಚ್ಚದ, ಕಡಿಮೆ ತಾಂತ್ರಿಕತೆಯ, ದೀರ್ಘಾವಧಿ ಪರಿಹಾರಗಳನ್ನು ಕೃಷಿಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ನೀಡಿದೆ.

ಪುನರುತ್ಪಾದಕ ಕೃಷಿವಿಜ್ಞಾನವು ಸಾರಹೀರುವ ಕೃಷಿವ್ಯವಹಾರಕ್ಕೆ ಬದಲಿಯಾಗಬಲ್ಲುದಾದರೆ ತಂತ್ರಜ್ಞಾನಕ್ಕೆ ಬದಲಿ ಯಾವುದು? ತಂತ್ರಜ್ಞಾನವು ತನ್ನ ಸ್ವರೂಪವನ್ನು ಬದಲಿಸಿಕೊಂಡು ಪುನರುತ್ಪಾದಕ ಕೃಷಿವಿಜ್ಞಾನಕ್ಕೆ ಪೂರಕ ಸಲಕರಣೆಯಾಗಬಲ್ಲುದೆ? ಪುನರುತ್ಪಾದಕತೆಯ ಸಾರವನ್ನು ತನ್ನಲ್ಲಿಟ್ಟುಕೊಂಡಂತಹ ತಂತ್ರಜ್ಞಾನ ಹಾಗೂ ಮಾರುಕಟ್ಟೆ ವೇದಿಕೆಯನ್ನು ನಿರ್ಮಿಸಲು ಸಾಧ್ಯವೆ? ಜನನಿಯು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶ್ರಮಿಸುತ್ತಿದೆ. ನಮಗಿನ್ನೂ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಜೊತೆಗೆ ಈಗ ದೊರಕಿರುವ ಉತ್ತರಗಳನ್ನು ಪರೀಕ್ಷಿಸಬೇಕಿದೆ. ಆ ಪ್ರಕ್ರಿಯೆಯಲ್ಲಿ ಮತ್ತಷ್ಟು ತಪ್ಪುಗಳು ಕಂಡುಬರಬಹುದು. ಈ ಎಲ್ಲ ತೊಡಕುಗಳ ನಡುವೆಯೂ ಜನನಿ ಮಾರುಕಟ್ಟೆಯು ಮೇಲಿನ ಮೂಲಭೂತ ಪ್ರಶ್ನೆಯನ್ನು ಹೇಗೆ ನಿರ್ವಹಿಸುತ್ತಿದೆ?

  • ಮಾಲೀಕತ್ವ ಮತ್ತು ವಿನ್ಯಾಸ : ಜನನಿಯ ಮಾರುಕಟ್ಟೆಯಲ್ಲಿ ಮಾಹಿತಿ ಹಾಗೂ ಸಂಬಂಧಗಳ ಮಾಲೀಕತ್ವ ರೈತರು ಮತ್ತು ರೈತ ಗುಂಪುಗಳ ಬಳಿಯೇ ಇರುತ್ತವೆ. ಮಾಹಿತಿಯು ಸ್ವಲ್ಪ ತಡವಾಗಿ ಗಮನಸೆಳೆಯುತ್ತದೆ. ಉತ್ಪಾದಕರು ಗ್ರಾಹಕರ ನಡುವೆ ಸಂಪರ್ಕ ಏರ್ಪಡಿಸುವಲ್ಲಿ ಸಂಬಂಧವು ಮುಖ್ಯಪಾತ್ರ ವಹಿಸುತ್ತದೆ. ಜನನಿಯ ವೇದಿಕೆಯು ಎಲ್ಲ ಸಂಪರ್ಕಗಳನ್ನು ಒಂದೆಡೆ ಬೆಸೆದಿದ್ದು ಯಶಸ್ಸು ಎಲ್ಲರ ಮೇಲೂ ಅವಲಂಭಿಸಿರುತ್ತದೆ. ಈ ಮಾದರಿಯು ತಾಂತ್ರಿಕವಾಗಿ ಸವಾಲನ್ನುಂಟು ಮಾಡುವಂತದ್ದಾಗಿತ್ತು. ಮಾಹಿತಿ, ಫೈಲುಗಳ ಸಂಗ್ರಹ, ಸಂವಹನ, ಪಾವತಿ ಪ್ರಕ್ರಿಯೆ ಇತ್ಯಾದಿಗಳನ್ನು ಇದರಲ್ಲಿ ನಿರ್ವಹಿಸುವುದು ಸವಾಲಿನ ಸಂಗತಿಯಾಗಿತ್ತು. ಸಮುದಾಯ ಮಾಲೀಕತ್ವ ಎನ್ನುವುದು ಬಹಳ ಸೂಕ್ಷ್ಮವಾದ ಸಂಗತಿ. ಇದನ್ನು ಮಾಲೀಕ ಮತ್ತು ಬಳಕೆದಾರರ ವೇದಿಕೆಯನ್ನಾಗಿಸಲು ಸಾಗಬೇಕಾದ ಹಾದಿ ದೂರವಿದೆ.
  • ವಿಪತ್ತು ಮತ್ತು ಲಾಭ : ರೈತರು ಈಗಾಗಲೇ ಕೃಷಿಯಲ್ಲಿ ಹೆಚ್ಚಿನ ಅಪಾಯದ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ವೇದಿಕೆಯನ್ನು ನಿರ್ಮಿಸಿ ಇನ್ನಷ್ಟು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ವಿಪತ್ತು ಮತ್ತು ಸನ್ಮಾನ ಎರಡನ್ನೂ ಹಂಚಿಕೊಳ್ಳುವ ಪಾರದರ್ಶಕ ಮಾದರಿಗಳನ್ನು ಹುಡುಕಲು ಬಯಸುವ ಹೂಡಿಕೆದಾರರನ್ನು ಹುಡುಕುವುದು ಕಷ್ಟದ ಕೆಲಸ.
  • ಹಣಕಾಸು ಮತ್ತು ಮೌಲ್ಯದ ಹರಿವು : ತಂತ್ರಜ್ಞಾನ ಆಧಾರಿತ ವೇದಿಕೆಯನ್ನು ಕಟ್ಟುವಾಗ ಮೌಲ್ಯ ಸರಪಳಿಯ ಉದ್ದಕ್ಕೂ ಹಣಕಾಸು ಹಾಗೂ ಮೌಲ್ಯದ ಹರಿವನ್ನು ನಿಭಾಯಿಸುವುದು ಬಹುದೊಡ್ಡ ಸವಾಲು. ಈ ಪ್ರಕ್ರಿಯೆಯ ಹಲವು ವಿಧಗಳನ್ನು ಗಮನಿಸಿದ ಮೇಲೆ ಜನನಿಯು ಬದಲಿ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕೆ ಒಂದು ಉದಾಹರಣೆ ಪಿಜಿಎಸ್‌ ಇಂಡಿಯಾವನ್ನು ಅಳವಡಿಸಿಕೊಂಡಿದ್ದು. ಇದು ಸಾವಯವ ವಿಧಾನವನ್ನು ಪ್ರಮಾಣೀಕರಿಸುತ್ತದೆ. ಸ್ಥಳೀಯವಾಗಿ ರೈತರು ಬಳಸುತ್ತಿರುವ ತಿಳಿವಳಿಕೆಯನ್ನು ವಿಮರ್ಶಿಸುತ್ತದೆ. ರೈತರು ಈ ವೇದಿಕೆಯಲ್ಲಿ ತಮ್ಮ ತಿಳಿವಳಿಕೆಯ ಸಂಪನ್ಮೂಲಗಳನ್ನು, ಮಾಹಿತಿಯನ್ನು ಕೊಳ್ಳುವವರು ಮತ್ತು ಇತರ ರೈತರೊಂದಿಗೆ ಹಂಚಿಕೊಳ್ಳಬಹುದು.
  • ಅನುದ್ದೇಶಿತ ಪರಿಣಾಮಗಳು ಮತ್ತು ಕಲಿಕಾ ಸರಣಿ : ಜನನಿಯು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಶೀಘ್ರ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ. ಅದು ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡುತ್ತದೆ. ಪ್ರತಿಯೊಂದು ಬಾರಿ ಬಿಡುಗಡೆಯಾದಾಗಲೂ ಅದರ ಕೊರತೆಗಳು ಏನಿವೆ ಅದನ್ನು ಬಳಕೆದಾರರ ಪ್ರತಿಕ್ರಿಯೆಯಿಂದ ತಿಳಿದುಕೊಂಡು ಮತ್ತೊಮ್ಮೆ ತಂತ್ರಾಂಶ ಅಭಿವೃದ್ಧಿಗೊಳಿಸುವಾಗ ಅದನ್ನು ಗಮನದಲ್ಲಿಟ್ಟುಕೊಳ್ಳುತ್ತದೆ. ಇದೇ ವಿಧಾನವನ್ನು ಕ್ಷೇತ್ರ ಚಟುವಟಿಕೆಗಳಲ್ಲೂ ಅನುಸರಿಸಲಾಗುತ್ತದೆ. ಹೀಗೆ ಕಲಿಕೆಯಿಂದ ತಂತ್ರಜ್ಞಾನ ವೇದಿಕೆಯು ಕ್ಷೇತ್ರದ ಚಟುವಟಿಕೆಗಳಿಂದ ಕಲಿಯುತ್ತದೆ. ಅದೇ ರೀತಿ ತಂತ್ರಜ್ಞಾನದಿಂದ ಕ್ಷೇತ್ರದ ಚಟುವಟಿಕೆಗಳು ರೂಪುಗೊಳ್ಳುತ್ತವೆ.

ನಮ್ಮ ಆಹಾರ ವ್ಯವಸ್ಥೆಗಳು ಇಂದಿಗೂ ಕೈಗಾರಿಕರಣದ ಮನಸ್ಥಿತಿಯಿಂದ ಹೊರಬಂದಿಲ್ಲ. ಎಲ್ಲವೂ ಸಾರಹೀರುವ ವ್ಯವಹಾರದ ಮಾದರಿಯಲ್ಲೇ ಕೇಂದ್ರೀಕೃತವಾಗಿದೆ. ಆಹಾರವನ್ನು ಒಂದು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಸಂಸ್ಕರಣಕ್ಕೆ ಮೈಲಿಗಟ್ಟಲೇ ಹಾದಿಯನ್ನು ಕ್ರಮಿಸಬೇಕಾಗುತ್ತದೆ. ನಂತರ ಗ್ರಾಹಕರಿಗೆ ತಲುಪಲು ಮತ್ತೆ ಹಲವು ಮೈಲಿಗಳನ್ನು ಕ್ರಮಿಸಬೇಕಾಗುತ್ತದೆ. ಕೋವಿಡ್‌ ೧೯ ಹಾಗೂ ಇಂತಹದ್ದೇ ಪರಿಸ್ಥಿತಿಗಳು ಈ ವ್ಯವಸ್ಥೆಯ ಟೊಳ್ಳುತನವನ್ನು ತೋರಿಸಿಕೊಟ್ಟವು.

ವಿಕೇಂದ್ರಿಕರಣ ಹಾಗೂ ಪುನರುತ್ಪಾದಕತೆಗೆ ಒತ್ತು ನೀಡುವ ಮಾದರಿಯು ಈ ಕಾಲದ ತುರ್ತು. ಜನನಿಯ ಮಾರುಕಟ್ಟೆ ವೇದಿಕೆಯು ಈ ರೀತಿಯ ಒಂದು ಪರಿಹಾರವಾಗಿದೆ. ಸಮಾಜಕ್ಕೆ ಇನ್ನಷ್ಟು ಪುನರುತ್ಪಾದಕ ಪರಿಹಾರಗಳ ಅವಶ್ಯಕತೆಯಿದೆ. ಆಹಾರ ವ್ಯವಸ್ಥೆಗೆ ಸಂಬಂಧಿಸಿದ ವಿವಿಧ ಉತ್ತರಗಳನ್ನು ಹುಡುಕಿಕೊಳ್ಳುವ ಅವಶ್ಯಕತೆಯಿದೆ.

ಉಷಾ ದೇವಿ ವೆಂಕಟಾಚಲಂ


Usha Devi Venkatachalam

Founder and CEO

Krishi Janani PBC

E-mail: team@krishijanani.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್ ೨೦೨೦

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp