ಸುಸ್ಥಿರ ಕೃಷಿ ಪರಿಸರ ಪದ್ಧತಿಗಳನ್ನು ಪ್ರಚುರ ಪಡಿಸುವುದರಿಂದ ಸಂಪನ್ಮೂಲಗಳ ಮರುಬಳಕೆಯಾಗಿ ಹೊರಗಿನ ಸಂಪನ್ಮೂಲಗಳ ಮೇಲೆ ಅವಲಂಭಿತವಾಗುವುದು ಕಡಿಮೆಯಾಗಿ ತ್ಯಾಜ್ಯದ ಪ್ರಮಾಣವು ತಗ್ಗುತ್ತದೆ. ತೋಟದಲ್ಲಿ ವೈವಿಧ್ಯತೆಯು ಹೆಚ್ಚಿ ಪೌಷ್ಟಿಕಾಂಶದೊಟ್ಟಿಗೆ ಆದಾಯವು ಹೆಚ್ಚಿ ಜೀವನಮಟ್ಟವು ಸುಧಾರಿಸುತ್ತದೆ. ಲಕ್ಷ್ಮೀ ಮತ್ತು ಶಂಕರಪ್ಪನವರ ಕತೆ ಇದನ್ನು ನಿರೂಪಿಸುತ್ತದೆ.
“ದಿನದ ದುಡಿಮೆಯ ನಂತರ ಅಡುಗೆ ಮನೆಯಲ್ಲಿ ಕಟ್ಟಿಗೆ ಒಲೆಯನ್ನು ಉರಿಸುವಷ್ಟು ಕಷ್ಟವಾದ ಕೆಲಸ ಬೇರೊಂದಿರಲಿಲ್ಲ. ಇಂದು ಕೇವಲ ಒಲೆಯ ನಾಬ್ ತಿರುಗಿಸುವ ಮೂಲಕ ಹೊಗೆರಹಿತವಾಗಿ ಅಡುಗೆ ಮಾಡಬಹುದಾಗಿದ್ದು ಇದು ನನ್ನ ಬದುಕನ್ನು ಸುಲಭಗೊಳಿಸಿದೆ” ಎಂದು ಕರ್ನಾಟಕದ ಬೋರ್ಗಿ ಹಳ್ಳಿಯ ಲಕ್ಷ್ಮೀಬಾಯಿಯವರು ಹೇಳುತ್ತಾರೆ. ಲಕ್ಷ್ಮೀಬಾಯಿಯವರು ತಮ್ಮ ಪತಿ ಶಂಕರಪ್ಪ ಹನುಮಂತರಾವ್ ಅವರೊಂದಿಗೆ ಜೊಜಾನ ಪಂಚಾಯ್ತಿಯ ಬೋರ್ಗಿ ಎನ್ನುವ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಇದು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿದೆ. ಈ ಹಳ್ಳಿಯಲ್ಲಿ ಲಿಂಗಾಯತರು ಮತ್ತು ಮುಸ್ಲಿಂ ಸಮುದಾಯವರು ಸೇರಿ ಒಟ್ಟು ೨೮೦ ಕುಟುಂಬಗಳಿವೆ. ಮಳೆಯಾಧಾರಿತ ಬೇಸಾಯದಲ್ಲಿ ಜೋಳ, ಮೆಕ್ಕೆಜೋಳ ಮತ್ತು ಕಾಳುಗಳನ್ನು ಬೆಳೆಯುತ್ತಾರೆ. ಇದೇ ಈ ಹಳ್ಳಿಯ ರೈತರ ಮುಖ್ಯ ಆದಾಯ ಸಂಪನ್ಮೂಲವಾಗಿದೆ.
ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿತ್ತು. ಈ ದಂಪತಿಗಳು ಆರಂಭದಲ್ಲಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಉದ್ದು, ಹೆಸರು, ಕಡಲೆ ಮತ್ತು ಮೇವನ್ನು ಬೆಳೆಯುತ್ತಿದ್ದರು. ಮಳೆಯೇ ಇವರ ಕೃಷಿಗೆ ಆಧಾರವಾಗಿತ್ತು. ಒಂದು ಎಕರೆ ಜಮೀನನ್ನು ಪಾಳುಬಿಡಲಾಯಿತು. ಕಳಪೆ ಗುಣಮಟ್ಟದ ಮಣ್ಣಿನ ಪರಿಣಾಮವಾಗಿ ಇಳುವರಿ ಕಡಿಮೆಯಾಯಿತು. ತಮಗೆ ಸಿಕ್ಕುತ್ತಿದ್ದ ಕಡಿಮೆ ಆದಾಯದಲ್ಲಿಯೇ ಸಂಸಾರ ಸಾಗಿಸುತ್ತಿದ್ದರು. ವರ್ಷಗಳುರುಳಿದಂತೆ ಕುಟುಂಬ ದೊಡ್ಡದಾಯಿತು. ಉಣ್ಣುವ ಬಾಯಿಗಳು ಹೆಚ್ಚಾದಂತೆ ಈ ಆದಾಯದಿಂದ ಸಂಸಾರ ನಡೆಸುವುದು ಕಷ್ಟವಾಯಿತು. ಅ ಊರಿನ ರಸಗೊಬ್ಬರಗಳನ್ನು ಮಾರುತ್ತಿದ್ದವನ ಸಲಹೆಯಂತೆ ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಲು ಶುರುಮಾಡಿದರು. ಆರಂಭದಲ್ಲಿ ಅದು ಉತ್ತಮ ಫಲಿತಾಂಶವನ್ನು ನೀಡಿತು. ಜಮೀನಿನಿಂದ ಪಡೆದ ಲಾಭದಲ್ಲಿ ನಾಲ್ಕು ಹಸುಗಳು ಮತ್ತು ಒಂದು ಎಮ್ಮೆಯನ್ನು ಕೊಂಡುತಂದರು.

ಬೆಳೆ ತ್ಯಾಜ್ಯವನ್ನು ಎರೆಹುಳು ಗೊಬ್ಬರವಾಗಿ ಪರಿವರ್ತಿಸಲಾಗಿದೆ
ವರ್ಷಗಳು ಕಳೆದಂತೆ ರಾಸಾಯನಿಕ ಒಳಸುರಿಯುವಿಕೆಗಳಿಂದ ಇಳುವರಿ ಕಡಿಮೆಯಾದದ್ದು ಅವರಿಗೆ ಅರಿವಾಯಿತು. ಜೊತೆಗೆ ಕೃಷಿ ವೆಚ್ಚವನ್ನು ಸರಿದೂಗಿಸಲು ಸಾಲಮಾಡಬೇಕಾಯಿತು. ೨೦೧೨ರಲ್ಲಿ ಇದ್ದಕ್ಕಿದ್ದಂತೆ ಸುರಿದ ಭೀಕರ ಮಳೆಯಿಂದಾಗಿ ಬೆಳೆ ಹಾಳಾಯಿತು. ಡೈರಿಯಿಂದ ಬರುತ್ತಿದ್ದ ಆದಾಯವೇ ಕುಟುಂಬಕ್ಕೆ ಆಧಾರವಾಯಿತು. ಮತ್ತೆ ಹೊಸದಾಗಿ ಕೃಷಿ ಆರಂಭಿಸಲು ಬಂಡವಾಳಕ್ಕೆ ಹಣವಿರಲಿಲ್ಲ. ಮತ್ತೊಂದೆಡೆ ಸಾಲ ಹೆಚ್ಚಾಯಿತು. ಹೀಗಾಗಿ ಆ ವರ್ಷ ಅವರು ಕೂಲಿಗಾಗಿ ಹೊರಗೆ ಕೆಲಸ ಮಾಡಬೇಕಾಯಿತು.
ಆರಂಭ ಬಿಂದು
೨೦೧೩ರಲ್ಲಿ ರಿಲಯನ್ಸ್ ಫೌಂಡೇಶನ್‌ನವರು ಹಳ್ಳಿಯ ಸಣ್ಣ ಮತ್ತು ಮಧ್ಯಮ ರೈತರು ಎದುರಿಸುತ್ತಿದ್ದ ಅಸ್ಥಿರತೆಗಳ ನಿವಾರಣೆಗೆ ಮುಂದಾದರು. ಈ ಫೌಂಡೇಶನ್‌ನವರು ಹಳ್ಳಿಯ ಸಂಘದವರ ನೆರವಿನಿಂದ ಒಟ್ಟು ಸಮುದಾಯದ ಹಿತಾಸಕ್ತಿಗೆ ಪೂರಕವಾದ ಕೆಲಸದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳುವಂತೆ ಮಾಡಿದರು. ಲಕ್ಷ್ಮಿ ಮತ್ತು ಶಂಕರಪ್ಪ ಕೂಡ ಈ ತಂಡದಲ್ಲಿದ್ದರು. ನಿರಂತರವಾಗಿ ನಡೆದ ಸಭೆಗಳು ಮತ್ತು ಕ್ಷೇತ್ರ ಭೇಟಿಗಳು ತಮ್ಮ ಸಮಸ್ಯೆ ಎಲ್ಲಿದೆ ಎನ್ನುವುದನ್ನು ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟವು. ಮಣ್ಣಿನ ಕಳಪೆ ಗುಣಮಟ್ಟ ಮತ್ತು ನೀರಿನ ಅಭಾವ ತಮ್ಮ ಸಮಸ್ಯೆಯ ಮೂಲ ಎಂದು ಅವರಿಗೆ ಅರಿವಾಯಿತು.
ಫೋಟೊ : ಸಗಣಿಯ ನೀರನ್ನು ಬಯೋಡೈಜಸ್ಟರ್ಗೆ ಹಾಕಲಾಯಿತು
ಫೌಂಡೇಶನ್‌ನ ನೆರವಿನಿಂದ ಸಂಘವು ಭೂಮಿಯನ್ನು ಆಳವಾಗಿ ಉತ್ತು, ಸಮತಟ್ಟು ಮಾಡಿ ಬದುಗಳನ್ನು ನಿರ್ಮಿಸಿತು. ಇದರಲ್ಲಿ ಲಕ್ಷ್ಮೀಯವರ ಜಮೀನು ಸೇರಿತ್ತು. ಗ್ರಾಮದ ಸಂಘವು ಇದರೊಂದಿಗೆ ಬಯೋಗ್ಯಾಸ್, ಎರೆಹುಳು ಗೊಬ್ಬರ, ಜೈವಿಕ ಕೀಟ ನಿರ್ವಹಣಾ ವಿಧಾನ ಮತ್ತು ಬೀಜೋಪಚಾರಗಳನ್ನು ದೇಸಿ ರೀತಿಯಲ್ಲಿ ಮಾಡುವುದರ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಲಕ್ಷ್ಮೀ ಉಳಿದ ಸದಸ್ಯರೊಂದಿಗೆ ಈ ವಿಧಾನಗಳನ್ನು ಕಲಿತು ಬಯೋಗ್ಯಾಸ್ ಮತ್ತು ಎರೆಹುಳುಗೊಬ್ಬರಗಳನ್ನು ಉತ್ಪಾದಿಸಿ ಬಳಸಲಾರಂಭಿಸಿದರು. ಫೌಡೇಂಶನ್‌ನವರು ಬೋರ್ಗಿಯಲ್ಲಿ ೧೪ ಬಯೋಗ್ಯಾಸ್ ಘಟಕಗಳು ಮತ್ತು ೪೭ ಎರೆಹುಳುಗೊಬ್ಬರ ತಯಾರಿಕಾ ಗುಂಡಿಗಳನ್ನು ಸ್ಥಾಪಿಸಲು ನೆರವು ನೀಡಿದರು.
ಪುನರ್ಬಳಕೆಗೆ ಪರಿವರ್ತನೆ ಮತ್ತು ಮರುಬಳಕೆ
ಲಕ್ಷ್ಮೀ ಬೆಳಿಗ್ಗೆ ಕೊಟ್ಟಿಗೆಯಿಂದ ಸಗಣಿಯನ್ನು ಸಂಗ್ರಹಿಸಿ ಬಯೋಡೈಜೆಸ್ಟರ್‌ಗೆ ಹಾಕುತ್ತಾರೆ. ಈ ಸಗಣಿ ಬಯೋಗ್ಯಾಸ್ ಆಗಿ ಪರಿವರ್ತಿತವಾಗುತ್ತದೆ. ೧.೮ ಘನ ಮೀಟರ್ ಸಾಮರ್ಥ್ಯದ ಈ ಡೈಜೆಸ್ಟರ್ ಅವರ ಮನೆಯ ಎರಡು ಹೊತ್ತಿನ ಊಟದ ತಯಾರಿಗೆ ಸಾಕಾಗುತ್ತದೆ. ಡೈಜೆಸ್ಟರ್‌ನಿಂದ ಹೊರಬರುವ ತ್ಯಾಜ್ಯವನ್ನು ಎರೆಹುಳುಗೊಬ್ಬರದ ಗುಂಡಿಗೆ ಹಾಕಲಾಗುತ್ತದೆ. ಇದರೊಂದಿಗೆ ಸೊಯಾಬೀನ್, ಹೆಸರು ಮತ್ತು ಉದ್ದಿನ ಬೆಳೆಯ ತ್ಯಾಜ್ಯವನ್ನು ಸೇರಿಸಲಾಗುತ್ತದೆ. ಇದರೊಂದಿಗೆ ಒಣಗಿದ ಎಲೆಗಳನ್ನು ಕೂಡ ಹಾಕಲಾಗುತ್ತದೆ. ಇವು ಎರೆಹುಳುಗಳಿಗೆ ಆಹಾರವಾಗಿ ಗೊಬ್ಬರ ತಯಾರಾಗುತ್ತದೆ. ಮೊದಲು ಎರೆಹುಳುಗೊಬ್ಬರ ತಯಾರಿಕೆಗೆ ೯೦ ದಿನಗಳು ಬೇಕಾಗುತ್ತಿತ್ತು ಈಗ ೪೦-೪೫ ದಿನಗಳಲ್ಲಿ ತಯಾರಾಗುತ್ತದೆ.
ಕೀಟನಾಶಕಗಳ ದ್ರವ್ಯವನ್ನು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯ ರಸವನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು ಎಲೆಕೊರಕ ಕಂಬಳಿಹುಳ, ಕಾಂಡಕೊರಕ ಹುಳ ಮತ್ತು ಹಳದಿ ನಂಜು ರೋಗಕ್ಕೆ ಬಳಸಲಾಗುತ್ತದೆ.
“ಇಲ್ಲಿ ತಯಾರಾಗುವ ಗೊಬ್ಬರವು ತೋಟದ ೯೦% ಅಗತ್ಯತೆಯನ್ನು ಪೂರೈಸುತ್ತದೆ. ಇದು ಒಳಸುರಿಯುವಿಕೆಗಳಿಗಾಗಿ ಮಾಡುತ್ತಿದ್ದ ವೆಚ್ಚವನ್ನು ಬಹುಪಾಲು ತಗ್ಗಿಸಿತು. ಇಳುವರಿಯು ೫ ಕ್ವಿಂಟಾಲ್ನಿಂದ ೨೦ ಕ್ವಿಂಟಾಲ್ಗೆ ಹೆಚ್ಚಿಸಿತು. ಇದು ತಂದ ಲಾಭವನ್ನು ನೋಡಿ ಇನ್ನೆರೆಡು ಎರೆಹುಳು ಗೊಬ್ಬರದ ಘಟಕಗಳನ್ನು ಮಾಡಿದೆವು. ನಮ್ಮ ಸ್ವಸಹಾಯ ಸಂಘದ ಮಹಿಳೆಯರಿಗೆ , ನಮ್ಮ ಊರು ಮತ್ತು ಪಕ್ಕದೂರಿನ ರೈತರಿಗೆ ಎರೆಹುಳುಗಳನ್ನು ಕೂಡ ಮಾರಾಟಮಾಡಿದೆ” ಎಂದು ಲಕ್ಷ್ಮೀ ಹೇಳುತ್ತಾರೆ.
ಇದರ ಜೊತೆಗೆ ಲಕ್ಷ್ಮೀ ಕೊಟ್ಟಿಗೆಯಲ್ಲಿ ಗಂಜಲವನ್ನು ಸಂಗ್ರಹಿಸಲು ತೊಟ್ಟಿಯೊಂದನ್ನು ನಿರ್ಮಿಸಿಕೊಂಡರು. ಗಂಜಲವನ್ನು ದ್ರವ ಗೊಬ್ಬರವಾಗಿ ಮತ್ತು ಗಿಡಗಳಿಗೆ ಸಗಣಿರಾಡಿಯಾಗಿ ಸಿಂಪಡಿಸಲು ಬಳಸಲಾಯಿತು. ಸಂಘವು ಆಯೋಜಿಸಿದ್ದ ಪ್ರಗತಿಪರ ರೈತರ ತೋಟಗಳಿಗೆ ಭೇಟಿಯಲ್ಲಿ ಆಕೆ ಪಂಚಗವ್ಯ, ಜೀವಾಮೃತ ಮತ್ತು ಮೆಣಸಿನಕಾಯಿ ಬೆಳ್ಳುಳ್ಳಿ ಸಿಂಪಡಣೆ ತಯಾರಿಸುವುದನ್ನು ಕಲಿತರು. ಇದನ್ನು ಕೀಟನಾಶಕವಾಗಿ ಬಳಸಲಾರಂಭಿಸಿದರು. ಸಗಣಿ, ಗಂಜಲ, ಬೆಲ್ಲ, ಕಾಳುಗಳ ಹಿಟ್ಟನ್ನು ಸ್ವಲ್ಪ ಮಣ್ಣಿನೊಂದಿಗೆ ಸೇರಿಸಿ ಅದಕ್ಕೆ ಸಗಣಿಯ ನೀರನ್ನು ಸೇರಿಸಿ ಅದನ್ನು ಎರಡು ದಿನಗಳವರೆಗೆ ನೆನೆಸಿ ಆಕೆ ಜೀವಾಮೃತವನ್ನು ತಯಾರಿಸುತ್ತಾರೆ. ಪ್ರತಿ ಬಾರಿ ಗಿಡಗಳಿಗೆ ನೀರುಣಿಸಿದಾಗ ಇದನ್ನು ಸಿಂಪಡಿಸುತ್ತಾರೆ. ಜೊತೆಗೆ ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಗೊಬ್ಬರದೊಂದಿಗೆ ಮಣ್ಣನ್ನು ಕೂಡ ಹಾಕುತ್ತಿದ್ದರು.
ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ರಸದಿಂದ ತಯಾರಿಸಿದ ಕೀಟನಾಶಕವನ್ನು ಎಲೆಕೊರಕ ಕಂಬಳಿಹುಳು, ಕಾಂಡ ಕೊರಕ ಹುಳು ಮತ್ತು ಹಳದಿ ಮೊಸಾಯಿಕ್ ನಿಯಂತ್ರಣಕ್ಕೆ ಬಳಸುತ್ತಾರೆ. ಬಾಳೆಹಣ್ಣು, ಹಸುವಿನ ತುಪ್ಪ, ಬೆಲ್ಲ, ಎಳನೀರು, ಹಾಲು, ಸಗಣಿ ಮತ್ತು ಗಂಜಲ ಹೀಗೆ ತಮ್ಮ ಅಡುಗೆಮನೆ ಮತ್ತು ತೋಟದ ಒಂಭತ್ತು ತರಹದ ವಿವಿಧ ವಸ್ತುಗಳನ್ನು ಬಳಸಿ ಪಂಚಗವ್ಯವನ್ನು ತಯಾರಿಸುತ್ತಾರೆ. ಇವೆಲ್ಲವನ್ನು ಬೆರೆಸಿ ತಂಪಾದ ಸ್ಥಳದಲ್ಲಿ ೩೦ ದಿನಗಳವರೆಗೆ ನೆನೆಸಿಡುತ್ತಾರೆ. “ಇದು ಜಾನುವಾರಗಳ ಆರೋಗ್ಯವರ್ಧನೆಗೆ ಸಹಕಾರಿ. ಇದನ್ನು ಮೇವಿನೊಂದಿಗೆ ಅವುಗಳಿಗೆ ನೀಡಿದರೆ ಹಾಲು ಉತ್ಪಾದನೆ ಹೆಚ್ಚಾಗುತ್ತದೆ” ಎಂದು ಲಕ್ಷ್ಮೀ ಹೇಳುತ್ತಾರೆ.
ಪ್ರಗತಿ
ಸಂಘವು ಲಕ್ಷ್ಮೀಗೆ ಬಾವಿಯನ್ನು ತೋಡಲು ಸಹಾಯ ಮಾಡಿತು. ಜೊತೆಗೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಲಕ್ಷ್ಮೀಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿಯನ್ನು ಸಬ್ಸಿಡಿ ದರದಲ್ಲಿ ಹಾಕಿಸಿಕೊಳ್ಳಲು ಸಹಾಯ ಮಾಡಿತು. ಮೊದಲ ಬಾರಿಗೆ ಅವರ ಕುಟುಂಬವು ಟೊಮೊಟೊ, ಸೋರೆಕಾಯಿ, ಬದನೆಕಾಯಿ, ಸೊಪ್ಪು ಮೊದಲಾದ ತರಕಾರಿಗಳನ್ನು ಬೆಳೆದರು. ಇದರೊಂದಿಗೆ ನೇರಳೆ, ಸಪೊಟ, ದಾಳಿಂಬೆ, ಸೀಬೆ ಮತ್ತು ನಿಂಬೆ ಗಿಡಗಳನ್ನು ನೆಟ್ಟರು. ಜೊತೆಗೆ ಇನ್ನೆರೆಡು ಹಸುಗಳನ್ನು ಕೊಂಡುಕೊಂಡರು. ವರ್ಷಾಂತರಗಳಿಂದ ಪಾಳುಬಿಟ್ಟಿದ್ದ ತಮ್ಮ ಒಂದೆಕೆರೆ ಜಮೀನಿನನ್ನು ಈಗ ಪುನಶ್ಚೇತನಗೊಳಿಸುವಲ್ಲಿ ದಂಪತಿಗಳು ನಿರತರಾಗಿದ್ದಾರೆ.

ಕೊಟ್ಟಿಗೆಯಲ್ಲಿ ಸಂಗ್ರಹಿಸಿದ ಗಂಜಲವನ್ನು ಸಗಣಿರಾಡಿ ಸಿಂಪಡಣೆಯಾಗಿ ಬಳಸಲಾಗುವುದು
ಉಪಸಂಹಾರ
ಲಕ್ಷ್ಮೀ ಬಾಯಿ ಮತ್ತವಳ ಗಂಡ ಶಂಕರಪ್ಪ ಹನುಮಂತರಾವ್‌ನಂತಹ ಸಣ್ಣ ಮತ್ತು ಮಧ್ಯಮ ರೈತರು ನಮಗೆ ೭೦% ಆಹಾರವನ್ನು ಒದಗಿಸುತ್ತಿದ್ದಾರೆ. ಅವರು ನೀರಿನ ಅಭಾವ, ಕಳಪೆಗುಣಮಟ್ಟದ ಮಣ್ಣು, ಒಳಸುರಿಯುವಿಕೆಗಳ ಕೊರತೆ, ಮಾರುಕಟ್ಟೆ, ಹಣಕಾಸು ಮತ್ತು ಆಪತ್ತು ನಿರ್ವಹಣೆ ಸಾಮರ್ಥ್ಯದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಳೆದ ಕೆಲವು ದಶಕಗಳಿಂದ ಹೆಚ್ಚಾಗುತ್ತಿರುವ ಹವಾಮಾನ ವೈಪರಿತ್ಯವು ಮಳೆಯಾಧಾರಿತ ಉತ್ಪಾದನಾ ವ್ಯವಸ್ಥೆಯನ್ನು ಹೆಚ್ಚು ಸೂಕ್ಷ್ಮ ಮತ್ತು ಅಸ್ಥಿರಗೊಳಿಸಿದೆ.
ಸುಸ್ಥಿರ ಕೃಷಿ ಪರಿಸರ ಪದ್ಧತಿಯಲ್ಲಿ ವಸ್ತುಗಳನ್ನು ಮರುಬಳಕೆಗೆ ತಕ್ಕಂತೆ ರೂಪಿಸಿ ಮರುಬಳಕೆ ಮಾಡಿದ್ದು ಲಕ್ಷ್ಮೀ ಮತ್ತು ಶಂಕರಪ್ಪನವರಿಗೆ ನೆರವಾಗಿದೆ. ಇದರಿಂದ ಹೊರಗಿನ ಸಂಪನ್ಮೂಲಗಳ ಮೇಲಿನ ಅವರ ಅವಲಂಬನೆ ತಗ್ಗಿದ್ದು, ತ್ಯಾಜ್ಯದ ಪ್ರಮಾಣ ಕಡಿಮೆಯಾಗಿದೆ ಮತ್ತು ಬದುಕಿನ ಮಟ್ಟವು ಕೂಡ ಸುಧಾರಿಸಿದೆ. ತೋಟದಲ್ಲಿನ ವೈವಿಧ್ಯತೆಯು ಆದಾಯವನ್ನು ಹೆಚ್ಚಿಸುವುದರೊಂದಿಗೆ ಕುಟುಂಬಕ್ಕೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುತ್ತಿದೆ. ಸಂಬಂಧಿಕರು ಮತ್ತು ಊರವರ ನಡುವೆ ಲಕ್ಷ್ಮೀಯವರ ಗೌರವ ಹೆಚ್ಚಿದ್ದು ಈಗ ಎಲ್ಲರೂ ಕೃಷಿಯ ಕುರಿತು ಅವರಿಂದ ಸಲಹೆ ಪಡೆದುಕೊಳ್ಳುತ್ತಿದ್ದಾರೆ.
ಜಸ್ಬೀರ್ ಸಂಧು ಮತ್ತು ಶಿವಾನಂದ ಮಠಪತಿ
Jasbir Sandhu
Reliance Foundation,
Mumbai, Maharashtra, India.
E-mail: Jasbir.Sandhu@reliancefoundation.org
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೨ ; ಜೂನ್ ೨೦೧೯



