ಕೃಷಿಪರಿಸರ ವಿಜ್ಞಾನ ಪ್ರತಿಕೂಲ ಹವಾಮಾನ ತಾಳಿಕೆ ಆಹಾರ ವ್ಯವಸ್ಥೆಯೆಡೆಗೆ


ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದರೊಂದಿಗೆ ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮರ್ಥ ರೀತಿಯಲ್ಲಿ ಆದಾಯವನ್ನು ಗಳಿಸಬಹುದು. ಹಳ್ಳಿಯಲ್ಲಿನ ಶೇ.೫೦%ರಷ್ಟು ಮಂದಿ ಸುಸ್ಥಿರ ಬೇಸಾಯವನ್ನು ಅಳವಡಿಸಿಕೊಂಡರೂ ಅದು ಗ್ರಾಮೀಣ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರಬಲ್ಲುದು. ಹವಾಮಾನ ತಾಳಿಕೆಯ ಗುಣವುಳ್ಳ ಕೃಷಿಪರಿಸರ ಆಹಾರ ಪದ್ಧತಿಗಳನ್ನು ಅನುಸರಿಸಲು ಇದು ಸೂಕ್ತ ಸಮಯ. ಈ ಪದ್ಧತಿಗಳು ಸಂಪನ್ಮೂಲದ ಮರುಬಳಕೆಯೊಂದಿಗೆ ಕೃಷಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುತ್ತದೆ.


ನಾನು ಕರ್ನಾಟಕದ ಗದಗ ಜಿಲ್ಲೆಯ ಶ್ಯಾಗೊಟಿಗೆ ಭೇಟಿ ನೀಡಿದ್ದೆ. ಹಳ್ಳಿಯ ಒಳಕ್ಕೆ ಹೋಗುತ್ತಿದ್ದಂತೆ ಆ ಹಳ್ಳಿ ನಿಶ್ಯಬ್ಧವಾಗಿರುವುದು ಗಮನಕ್ಕೆ ಬಂದಿತು. ಹಳ್ಳಿಯ ಆ ಮಣ್ಣಿನ ರಸ್ತೆ ನೇರವಾಗಿ ದೊಡ್ಡ ಗುಂಪೊಂದು ನೆರೆದಿದ್ದ ಸಣ್ಣ ಕಟ್ಟಡದ ಬಳಿಗೆ ಕರೆದೊಯ್ದಿತು. ಅಲ್ಲಿ ನೆರೆದಿದ್ದ ಊರಿನ ಗಂಡಸರು ಮತ್ತು ಹೆಂಗಸರು ಯಾವುದೋ ಗಂಭೀರ ಚರ್ಚೆಯಲ್ಲಿ ತೊಡಗಿಕೊಂಡಿದ್ದರು. ಕಾಳುಒಕ್ಕಣೆ ಯಂತ್ರವನ್ನು ಬಾಡಿಗೆಗೆ ಕೊಡಲು ಹರಾಜು ನಡೆಯುತ್ತಿದ್ದು ಆ ಕುರಿತೇ ಚರ್ಚಿಸುತ್ತಿದ್ದರು. ಮಳೆ ಕೈಕೊಟ್ಟಿದ್ದರಿಂದ ಯಂತ್ರವನ್ನು ತೆಗೆದುಕೊಳ್ಳಲು ಜನ ಹಿಂದುಮುಂದು ನೋಡುತ್ತಿದ್ದರು. ಮೂರು ವರ್ಷಗಳಿಂದ ಮಳೆ ಕೈಕೊಟ್ಟು ಸತತ ಬರದ ಪರಿಸ್ಥಿತಿ ಉಂಟಾಗಿರುವುದರಿಂದ ಸಣ್ಣ ರೈತರ ಬದುಕು ಅಸ್ಥಿರವಾದದ್ದು ಸಹಜವೇ ಆಗಿತ್ತು.

ಮಹದೇವಗೌಡ ಎನ್ನುವ ರೈತ ಮುಂದೆಬಂದು ಹರಾಜಿನಲ್ಲಿ ಒಂದು ವರ್ಷದ ವಾಯಿದೆಗೆ ಯಂತ್ರವನ್ನು ಬಾಡಿಗೆಗೆ ಕೊಳ್ಳಲು ಮುಂದಾದರು. ಉಳಿದ ಸದಸ್ಯರು ಹಿಂಜರಿಯುತ್ತಿದ್ದಾಗಲೂ ಈತ ಮುಂದೆ ಬಂದು ಅದನ್ನು ಕೊಳ್ಳಲು ಕಾರಣವೇನೆಂದರೆ ಇವರು ಅನುಸರಿಸುತ್ತಿದ್ದ ಕೃಷಿಪರಿಸರ ಪದ್ಧತಿ. ಮಹದೇವಗೌಡ ಅವರ ಆತ್ಮವಿಶ್ವಾಸವನ್ನು ನೋಡಿ ಖುಷಿಯಾಗಿ ಅವರನ್ನು ಮಾತಾಡಿಸಲು ಹೋದೆ. ಉಳಿದ ರೈತರು ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅವರು ಬರದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಮುಂದಾದೆ.

ಅದು ರಿಲೆಯೆನ್ಸ್‌ ಫೌಂಡೇಶನ್‌ರವರ  “ಶ್ಯಾಗೊಟಿ ಗ್ರಾಮ ರೈತ ಸಂಘ”ದ ಮಹಾಸಭೆಯಾಗಿತ್ತು. ಮಹದೇವಗೌಡ ಅವರ ಮಾತುಕತೆಯಿಂದ ತಿಳಿದು ಬಂದಿದ್ದೇನೆಂದರೆ ಅವರು ಸಂಘದ ಸಹಾಯದಿಂದ ನಾಲ್ಕು ವರ್ಷಗಳಲ್ಲಿ ತಮ್ಮ ಜಮೀನನ್ನು ಸಾಂಪ್ರದಾಯಿಕ ಕೃಷಿಯಿಂದ ಸುಸ್ಥಿರ ಕೃಷಿಗೆ ಬದಲಾಯಿಸಿಕೊಂಡರು. ಉಳಿದ ರೈತರು ತಮ್ಮ ಜಮೀನಿನಿಂದ ಸರಾಸರಿ ಇಳುವರಿಯನ್ನು ಕೂಡ ಪಡೆಯಲು ಕಷ್ಟ ಪಡುತ್ತಿದ್ದಾಗ ಇವರು ತಮ್ಮ ಭೂಮಿಯಿಂದ ಹೆಚ್ಚಿನ ಇಳುವರಿಯನ್ನು ಪಡೆದಿದ್ದರು.  ಇದರಿಂದ ಹಳ್ಳಿಯ ಉಳಿದ ರೈತರಿಗೆ ಇವರು ಮಾದರಿಯಾದರು.

ಪಯಣದ ಯಶೋಗಾಥೆ

ಮಹದೇವಗೌಡ ಅವರು ತಮ್ಮ ಜಮೀನಿನಿಂದ ಹೆಚ್ಚಿನ ಆದಾಯ ಸಿಗದೆ ಹಲವು ವರ್ಷಗಳವರೆಗೆ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದರು. ನಂತರ ತಮ್ಮದೇ ಜಮೀನಿನಲ್ಲಿ ಕೃಷಿಯನ್ನು ಆರಂಭಿಸಿದರು. ಆರಂಭದ ವರ್ಷಗಳಲ್ಲಿ ಬಹಳ ಕಷ್ಟಪಡಬೇಕಾಯಿತು. ಆಗ ಅವರು ತಮ್ಮ ಮೂರು ಎಕರೆ ಭೂಮಿಯಲ್ಲಿ ಏಕಬೆಳೆ ಪದ್ಧತಿಯಡಿಯಲ್ಲಿ ನೆಲಗಡಲೆಯನ್ನು ಬೆಳೆಯುತ್ತಿದ್ದರು. ಉಳಿದ ರೈತರಂತೆ ಇವರು ಕೂಡ ರಸಗೊಬ್ಬರವನ್ನು ಹಾಕುತ್ತಿದ್ದರು. ವಾರ್ಷಿಕವಾಗಿ ಅವರು ಗಳಿಸುತ್ತಿದ್ದ ಆದಾಯ ರೂ. 25000/

. ಇದು ಅವರ ಕುಟುಂಬ ನಿರ್ವಹಣೆಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಮಗಳ ವೈದ್ಯಕೀಯ ಖರ್ಚುಗಳಿಗೆ ಸಾಕಾಗುತ್ತಿರಲಿಲ್ಲ.

ಮಹದೇವಗೌಡ ಕೀಟನಿಯಂತ್ರಣಕ್ಕೆ ಅಂಟುಬಲೆಯನ್ನು ಬಳಸುತ್ತಾರೆ

ಮೊದಲಿಗೆ ರಸಗೊಬ್ಬರಗಳು ಉತ್ತಮ ಫಸಲನ್ನು ಕೊಟ್ಟವು. ಆದರೆ ಕಾಲಕ್ರಮೇಣ ಉತ್ಪಾದನೆ ಕಡಿಮೆಯಾಯಿತು. ಮೊದಲಿನಷ್ಟೇ ಇಳುವರಿ ಪಡೆಯಬೇಕೆಂದರೆ ಹೆಚ್ಚಿನ ಒಳಸುರಿಯುವಿಕೆಗಳನ್ನು ಭೂಮಿಗೆ ಹಾಕುವ ಅನಿವಾರ್ಯತೆ ಉಂಟಾಯಿತು. ರಸಗೊಬ್ಬರಗಳ ಬಳಕೆಯಿಂದ ಇಂಗಾಲದ ಪ್ರಮಾಣ ಹೆಚ್ಚಾಗಿ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ಅವರು ಮನಗಂಡರು. ನೈಟ್ರೊಜಿನ್‌ ರಸಗೊಬ್ಬರಗಳು ನೈಟ್ರಸ್‌ ಆಕ್ಸೈಡ್‌ ಬಿಡುಗಡೆ ಮಾಡುತ್ತಿತ್ತು. ಇದು ಅತ್ಯಂತ ಪ್ರಬಲವಾದ ಹಸಿರುಮನೆ ಅನಿಲ. ತೋಟದ ಬಾವಿಯ ನೀರು ಸಾಲದೆ ಗಿಡಗಳು ಒಣಗಿದವು. ಅದೇ ಸಮಯದಲ್ಲಿ ತೋಟದ ಮೂಲೆಯಲ್ಲಿ ಆರೋಗ್ಯವಂತ ಗಿಡಗಳು ಬೆಳೆಯುತ್ತಿರುವುದನ್ನು ಗಮನಿಸಿದರು. ಅಲ್ಲಿ ಅವರು ಸಾಮಾನ್ಯವಾಗಿ ಕೃಷಿತ್ಯಾಜ್ಯವನ್ನು ಎಸೆಯುತ್ತಿದ್ದರು ಮತ್ತು ಹೊಲದ ಗೊಬ್ಬರವನ್ನು ಶೇಖರಿಸಿಟ್ಟಿದ್ದರು. ಅಲ್ಲಿ ಮೊಳೆತ ಸಸಿಗಳು ಇವರಲ್ಲೊಂದು ಆಶಾಭಾವವನ್ನು ಹುಟ್ಟುಹಾಕಿತು. ಕೃಷಿತ್ಯಾಜ್ಯವು ಈ ಸಸಿಗಳಿಗೆ ನೈಸರ್ಗಿಕ ಹೊದಿಕೆಯಾಗಿ ಬೀಜಗಳು ಮೊಳೆಯುವಂತೆ ಮಾಡಿದ್ದವು.

2013 ಆತನ ಬದುಕಿಗೆ ತಿರುವನ್ನು ತಂದಂತಹ ವರ್ಷ. ಅವರು ಕೆಲವು ಹಣ್ಣಿನ ಫಾರಂಗಳಿಗೆ ಭೇಟಿ ನೀಡಿದರು. ಜೊತೆಗೆ ನರ್ಸರಿ ಆರಂಭಿಸುವುದು ಹೇಗೆ ಎನ್ನುವ ಕುರಿತು ತಾವು ಸದಸ್ಯರಾಗಿದ್ದ ಹಳ್ಳಿಯ ಸಂಘದಿಂದ ತರಬೇತಿ ಪಡೆದರು. ಒಣಭೂಮಿಯಲ್ಲೂ ಬೇಸಾಯ ಮಾಡಿ ಗೆದ್ದಿದ್ದ ರೈತರ ಭೂಮಿಗಳನ್ನು ನೋಡಿದಾಗ ಸುಸ್ಥಿರ ಕೃಷಿಯಲ್ಲಿ ಅವರ ಆಸಕ್ತಿ ಹೆಚ್ಚಿತು. ಅವರ ಆಸಕ್ತಿಯನ್ನು ಗಮನಿಸಿದ ಸಂಘವು ಅವರಿಗೆ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ನೆರವನ್ನು ನೀಡಿತು. ಅವರೊಂದು ನರ್ಸರಿಯನ್ನು ಆರಂಭಿಸಿ ತಮ್ಮ ಫಾರಂನಲ್ಲಿ ಕೃಷಿ ತೋಟಗಾರಿಕೆಯನ್ನು ಪ್ರಚುರಪಡಿಸಿದರು.

ಪ್ರಸ್ತುತ ಅವರ ಎರಡೆಕೆರೆ ನೀರಾವರಿ ಭೂಮಿಯಲ್ಲಿ ೨೦ ಮಾವು, ಅಂಚಿನಲ್ಲಿ ೨೦೦ ತೇಗ, ೨೦೦ ಸಪೋಟ, ೨೦ ನಿಂಬೆ, ೫೦ ಗೋಡಂಬಿ, ೧೦ ಪರಂಗಿ, ೬೦೦ ಬಾಳೆ, ೨ ಸೀಬೆ, ೨ ಫಿಗ್‌, ೫ ಖರ್ಜೀರ, ೧೦ ಅರ್ಕನಟ್‌, ೨೫ ತೆಂಗು, ೭೦ ಗ್ಲೈರಿಸಿಡಿಯಾ ಮತ್ತು ೫೦೦ಕ್ಕೂ ಹೆಚ್ಚು  ಕರಬೇವಿನ ಗಿಡಗಳಿವೆ. ಇದರೊಂದಿಗೆ ಜಮೀನಿನಲ್ಲಿ ಖಾಲಿಯಿರುವ ಸ್ಥಳಗಳಲ್ಲಿ ತರಕಾರಿಗಳು ಮತ್ತು ಮೇವಿನ ಹುಲ್ಲನ್ನು ಕೂಡ ಬೆಳೆಯುತ್ತಿದ್ದಾರೆ. ವರ್ಷದ ಯಾವುದೇ ಸಮಯದಲ್ಲಿ ನಮ್ಮ ಮನೆಗೆ ಯಾರಾದರೂ ಬಂದರೆ ಎರಡು ಹಣ್ಣುಗಳನ್ನಾದರೂ ಅವರಿಗೆ ತಿನ್ನಲು ಕೊಡಬೇಕು ಅಂತ ನನಗಾಸೆ. ನಾವಿಲ್ಲಿ ಬೆಳೆಯುವುದೆಲ್ಲವೂ ಸಾವಯವ. ಇದು ನಮ್ಮ ಆರೋಗ್ಯವಾಗಿ ಇಡುವುದರೊಂದಿಗೆ ಪರಿಸರವನ್ನು ಕೂಡ ಸುರಕ್ಷಿತವಾಗಿಡುತ್ತದೆ”. ಇದು ತನ್ನ ಆಹಾರವನ್ನು ತಾನೇ ಬೆಳೆಯುವುದರೊಂದಿಗೆ ಸುತ್ತಲ ಪರಿಸರವನ್ನು ಸುರಕ್ಷಿತವಾಗಿಟ್ಟಿರುವ ರೈತನ ಹೆಮ್ಮೆಯ ನುಡಿ.

ಕೋಷ್ಟಕ : ಆದಾಯ ವೆಚ್ಚಗಳ ವಿಶ್ಲೇಷಣೆ

ಕ್ರಮ ಸಂಖ್ಯೆ ವಿವರಗಳು ಪ್ರದೇಶ (ಎಕರೆ) ಮತ್ತು ಇಳುವರಿ ಆದಾಯ (ರೂ.ಗಳಲ್ಲಿ) ವೆಚ್ಚ (ರೂ.ಗಳಲ್ಲಿ)  ಒಟ್ಟು ಲಾಭ (ರೂ.ಗಳಲ್ಲಿ)
2014-15 2015-16 2014-15 2015-16 2014-15 2015-16 2014-15 2015-16
1 ಬೆಂಡೆ ಕಾಯಿ 0.5 0.25 10000 15000 3000 3000 7000 12000
2 ಗೋರಿ ಕಾಯಿ 0.25 0.5 8000 15000 2500 5000 5500 10000
3 ಟೊಮೊಟೊ 0.5 0.5 20000 60000 5000 10000 15000 50000
4 ಮೆಣಸಿನ ಕಾಯಿ 0.25 0.12 7000 5000 2500 2000 4500 3000
5 ಸೌತೆ ಕಾಯಿ 0.5 0.5 25000 20000 5000 5000 20000 15000
6 ಹೀರೆಕಾಯಿ 0.07 0.25 5000 7000 2000 2000 3000 5000
7 ಬೀಜಕ್ಕಾಗಿ ಬೆಳೆದ ಈರುಳ್ಳಿ 0.5 0.5 60000 90000 18000 20000 42000 70000
8 ಕರಿಬೇವು 10 ಕ್ವಿಂಟಾಲ್ 6000 20000 6000 20000
9 ಮೇವು _ 2000 2000
10 ಮೇವಿಗಾಗಿ ಹುಲ್ಲು _ 72 ಕ್ವಿಂಟಾಲ್ 36500 36000
11 ಸಪೋಟ 3 ಕ್ವಿಂಟಾಲ್ 6000 6000
12 ಬಾಳೆಹಣ್ಣು 600 ಗಿಡಗಳು 600 ಗಿಡಗಳು 150000 32000 30000 88000
                                                                                                                                                 ಒಟ್ಟು 1415000 317000

 

ಅಜೈವಿಕವಾದ ಒಳಸುರಿಯುವಿಕೆಗಳ ಬದಲಿಗೆ ಅವರು ಮಿಶ್ರ ಗೊಬ್ಬರ, ಬೆಳೆ ಪುನರಾವರ್ತನೆ, ಬೆಳೆಗಳಿಗೆ ಹೊದಿಕೆ, ಬಲೆ, ಸಂಯೋಜಿತ ಕೀಟ ನಿರ್ವಹಣೆ ಮತ್ತು ಹೊಲಗೊಬ್ಬರದ ಬಳಕೆಯನ್ನು ಹೆಚ್ಚು ಮಾಡಿದರು. ಅವರು ಸಾವಯವ ಅಂಶವನ್ನು ಹೆಚ್ಚಿಸುವುದರೊಂದಿಗೆ ವಾತಾವರಣದಲ್ಲಿನ ಇಂಗಾಲವನ್ನು ಗರಿಷ್ಠ ಮಟ್ಟದಲ್ಲಿ ಹೀರಿಕೊಳ್ಳುವಂತೆ ಮಾಡಿದ್ದಾರೆ. ಇಂಗಾಲ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುವುದರೊಂದಿಗೆ ನೈಟ್ರೊಜನ್‌ ಸಮತೋಲನವನ್ನು ಸಾಧಿಸುವಲ್ಲಿ ಸಹಕಾರಿಯಾಗಿದೆ. ಬೆಳೆ ವೈವಿಧ್ಯದಿಂದಾಗಿ ಕೃಷಿಯಲ್ಲಿ ಎದುರಾಗುವ ಅಪಾಯಗಳು ಕಡಿಮೆಯಾಗಿವೆ. ಪರಿಸರ ಸ್ನೇಹಿತ ಪದ್ಧತಿಗಳ ಅಳವಡಿಕೆಯಿಂದಾಗಿ ಪರಾಗಸ್ಪರ್ಶ ಜೀವಿಗಳು ಹೆಚ್ಚಾಗಿ ಕಾಡು ಉಳಿಯುವಂತಾಗಿದೆ.

ಮಹದೇವಗೌಡ ಅವರು ಅಂತರಬೆಳೆ, ನರ್ಸರಿ, ತರಕಾರಿ ಕೃಷಿ, ಮಡಿಗಳಿಗೆ ಹೊದಿಕೆ, ಮಿಶ್ರಗೊಬ್ಬರ, ಸಮರ್ಥ ನೀರಾವರಿ ಮತ್ತು ಬಯೋ ಗ್ಯಾಸ್‌ ಡೈಜೆಸ್ಟರ್‌ ಮೂಲಕ ಗೊಬ್ಬರ ನಿರ್ವಹಣೆ ಮಾಡುತ್ತಿದ್ದಾರೆ. ಇದರಿಂದ ಅವರೊಂದು ಆರ್ಥಿಕ ಮಾದರಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಈ ಮಾದರಿಯಲ್ಲಿ ಪುನರ್ಬಳಕೆ, ಮರು ಬಳಕೆ ಮತ್ತು ಸಂಪನ್ಮೂಲಗಳನ್ನು ಒಗ್ಗೂಡಿಸಿ ಹೊರ ಒಳಸುರಿಯುವಿಕೆಗಳ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ ಹವಾಮಾನ ಬದಲಾವಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಅವರು ಅಂತರ್ಜಲವನ್ನು ಕೂಡ ಸಾಕಷ್ಟು ಎಚ್ಚರಿಕೆಯಿಂದ ಬಳಸುತ್ತಾರೆ. ತಮ್ಮ ಮನೆಗೆ ಕುಡಿಯುವ ನೀರನ್ನು ಛಾವಣಿ ಮಳೆನೀರು ಕೊಯ್ಲು ವ್ಯವಸ್ಥೆಯ ಮೂಲಕ ಪಡೆಯುತ್ತಿದ್ದಾರೆ.

ಅವರು ನೆಟ್ಟ ಹಣ್ಣಿನ ಮರಗಳು ಈಗ ಹಣ್ಣು ಬಿಡಲು ಶುರುಮಾಡಿವೆ. ಅವರು ಹಣ್ಣುಗಳ ಮಾರಾಟದ ಮೂಲಕ ಲಾಭವನ್ನು ಪಡೆಯುತ್ತಿದ್ದಾರೆ. ಮರಗಳ ತ್ಯಾಜ್ಯವನ್ನು ಎರೆಹುಳ ಗೊಬ್ಬರದ ಗುಂಡಿಗಳಿಗೆ ಬಳಸುವ ಮೂಲಕ ಮರುಬಳಕೆ ಮಾಡುತ್ತಿದ್ದಾರೆ. ಎರೆಹುಳಗೊಬ್ಬರದ ಪರಿಣಾಮವಾಗಿ ಮಣ್ಣಿನ ತೇವಾಂಶ ಉಳಿದಿರುತ್ತದೆ. ಅವರ ತೋಟದಲ್ಲಿ ಎಲ್ಲೇ ನೆಲವನ್ನು ಅಗೆದರೂ ಎರೆಹುಳು ಕಾಣುವುದು ಇದಕ್ಕೆ ಸಾಕ್ಷಿ. ಇದು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಿದೆ. ಮೂರು ಬಾರಿಯಂತೆ ಪ್ರತಿ ಸಾರಿ ೩ ಕ್ವಿಂಟಾಲ್‌ನಷ್ಟು ಎರೆಹುಳುಗೊಬ್ಬರವನ್ನು ಪಡೆಯುತ್ತಾರೆ. ಹೀಗೆ ವರ್ಷಕ್ಕೆ ೧೮ ಕ್ವಿಂಟಾಲ್‌ ಗೊಬ್ಬರವನ್ನು ಪಡೆಯುತ್ತಾರೆ. ಅವರು ನಿಯಮಿತವಾಗಿ ಜೀವಾಮೃತವನ್ನು ಬಳಸುತ್ತಾರೆ.

ಅವರು ತಮ್ಮ ದುರುಸ್ಥಿಗೊಳಿಸಿದ ಬಾವಿಯಲ್ಲಿ ಮೀನನ್ನು ಬೆಳೆಸುತ್ತಿದ್ದು ಮುಂದಿನ ವರ್ಷದಿಂದ ಮೀನುಕೊಯ್ಲು ಕೂಡ ಆರಂಭವಾಗಲಿದೆ. ಚೆಂಡು ಹೂಗಳು ಹಲವು ವಿಧದ ಜೇನ್ನೊಣಗಳು ಮತ್ತು ಕೀಟಗಳನ್ನು ಆಕರ್ಷಿಸುವುದರೊಂದಿಗೆ ಪರಿಸರ ಚಕ್ರವನ್ನು ಪೂರ್ಣಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಮೂರು ವರ್ಷಗಳ ಸತತ ಪರಿಶ್ರಮದ ಫಲವಾಗಿ ಅವರ ತೋಟದಲ್ಲಿ ಸಹಜ ಪರಿಸರ ನಿರ್ಮಾಣವಾಗಿದ್ದು ಅದು ಹಕ್ಕಿಗಳು ಮತ್ತು ನೈಸರ್ಗಿಕ ಪರಾಗಸ್ಪರ್ಶ ಜೀವಿಗಳನ್ನು ಆಕರ್ಷಿಸುತ್ತಿದ್ದು ಪರಿಸರವು ಸುರಕ್ಷಿತ ಮತ್ತು ಆರೋಗ್ಯಕಾರಿಯಾಗಿರುವಂತೆ ಮಾಡಿದೆ. ಇದರೊಂದಿಗೆ ಸುಸ್ಥಿರ ಕೃಷಿಯನ್ನು ಕಲಿಯಲು ಬಯಸುವ ಸಂದರ್ಶಕರು ವಿವಿದೆಡೆಗಳಿಂದ ಇವರ ಫಾರಂಗೆ ಭೇಟಿ ನೀಡಲು ಬರುತ್ತಾರೆ. “ಜೇನ್ನೊಣಕ್ಕೂ ಇಲ್ಲಿ ಬದುಕಲು ಜಾಗ ಬೇಕಿದೆ. ಅದು ಸಾಧ್ಯವಾಗದೆ ಹೋದಾಗ ನಮ್ಮ ನಡೆಗಳಿಂದ ಪರಿಸರದ ಮೇಲಾಗುತ್ತಿರುವ ನೇತ್ಯಾತ್ಮಕ ಪರಿಣಾಮಗಳನ್ನು ಸುಲಭವಾಗಿ ಗ್ರಹಿಸಬಹುದು. ಇದು ಅಂತಿಮವಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ತಂದೊಡ್ಡುತ್ತದೆಎಂದು ಮಹದೇವಗೌಡ ಹೇಳುತ್ತಾರೆ. ಅವರ ತೋಟದಲ್ಲಿನ ಪರಿಸರ ಆರೋಗ್ಯವಂತ ವಾತಾವರಣವನ್ನು ಸೂಚಿಸುತ್ತದೆ.

ಫೋಟೊ : ತೋಟದಲ್ಲಿನ ವೈವಿಧ್ಯತೆ ಹಲವು ಲಾಭಗಳನ್ನು ತಂದುಕೊಡುತ್ತದೆ

ಮಹದೇವ ಗೌಡ ಅವರು ಪೂರ್ಣಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದು ವಾರ್ಷಿಕವಾಗಿ ೨ ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ (ಕೋಷ್ಟಕ ೧). ಜಿಲ್ಲೆಯಲ್ಲಿ ಮೂರು ವರ್ಷಗಳ ಸತತ ಬರಪರಿಸ್ಥಿತಿಯ ನಡುವೆಯೂ ಇವರ ತೋಟವು ಕೃಷಿ ಪರಿಸರ ವ್ಯವಸ್ಥೆಯ ಮಾದರಿಯಾಗಿ ನಿಂತಿದೆ. ಜೊತೆಗೆ ಸಂಪನ್ಮೂಲಗಳ ಮರುಬಳಕೆಗೆ ಮಾದರಿಯಾಗಿದೆ. ಅವರಿಂದ ಸ್ಪೂರ್ತಿಗೊಂಡು ಸಂಘದ ಇತರ ಸದಸ್ಯರು ಕೂಡ ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರು. ಪರಿಸರವ್ಯವಸ್ಥೆಯನ್ನು ಸಂರಕ್ಷಿಸುವುದರೊಂದಿಗೆ ಒಂದುವೇಳೆ ಹಳ್ಳಿಯಲ್ಲಿನ ಶೇ.೫೦%ರಷ್ಟು ರೈತರು ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಂಡರೆ ಅದು ಮೂರು ಕೋಟಿಯಷ್ಟು ಆದಾಯವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಗ್ರಾಮೀಣ ಆರ್ಥಿಕತೆಯಲ್ಲಿ ಬಹುದೊಡ್ಡ ಕ್ರಾಂತಿಯಾಗಬಲ್ಲುದು. ಹವಾಮಾನ ತಾಳಿಕೆಯ ಗುಣಹೊಂದಿರುವ ಕೃಷಿಪರಿಸರ ಆಹಾರ ಪದ್ಧತಿಗಳ ಅಳವಡಿಕೆಗೆ ಇದು ಸಕಾಲ. ಇದರಿಂದ ಆಹಾರ ಉತ್ಪಾದನೆ ಹೆಚ್ಚಿ ಆಹಾರಭದ್ರತೆ ಉಂಟಾಗುತ್ತದೆ. ಪರಿಸರದ ಸುಸ್ಥಿರತೆ ಕೂಡ ಹಾಳಾಗುವುದಿಲ್ಲ.

ರಂಚಿತ ಕುಮಾರನ್ಮತ್ತು ಭಾಸ್ಕರಭಟ್ಟ ಜೋಶಿ


Ranchitha Kumaran & Bhaskarabhatta Joshi

Reliance Foundation,

RCP, Project Office, 1st floor,

Ghansoli, Navi Mumbai- 400701

E-mail: ranchitha.kumaran@reliancefoundation.org

Bhaskarabhatta.Joshi@reliancefoundation.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ‌೨ ; ಜೂನ್‌ ೨೦೧೯

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp