ಮನೆಯ ಕೈತೋಟಗಳಲ್ಲಿ ಆಹಾರ ಉತ್ಪಾದನೆಯ ಮೂಲಕ ಬದುಕಿನಮಟ್ಟವನ್ನು ಸುಧಾರಿಸಿಕೊಳ್ಳುವ ಕುರಿತು ಹೊಸ ದೃಷ್ಟಿಕೋನದ ಅಗತ್ಯವಿದೆ. ಕೃಷಿ ಪರಿಸರದ ಕಲಿಕಾ ವಿನಿಮಯವು ಕೃಷಿ ತ್ಯಾಜ್ಯದ ಮರುಬಳಕೆ ಮತ್ತು ನಿರ್ವಹಣೆ ಕುರಿತಾದ ಪ್ರಾಯೋಗಿಕ ಕಲಿಕೆಯು ಹೊಸ ಐಡಿಯಾಗಳನ್ನು ನೀಡಿದ್ದು ಇವು ಕೈತೋಟಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ತ್ಯಾಜ್ಯದಂತಹ ವಸ್ತು ಬೇರೊಂದಿಲ್ಲ. ತ್ಯಾಜ್ಯ ಎನ್ನುವುದು ಮತ್ತೊಂದು ಉತ್ಪನ್ನಕ್ಕೆ ಬಹುಮುಖ್ಯ ವಸ್ತುವಾಗಬಲ್ಲಂತಹ ಸಂಪನ್ಮೂಲ. ಯಾವುದೇ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಮೊದಲ ಗುರಿಯೆಂದರೆ ತ್ಯಾಜ್ಯ ಸಂಪನ್ಮೂಲದಿಂದ ಗರಿಷ್ಟ ಆರ್ಥಿಕ ಪ್ರಯೋಜನವನ್ನು ಪರಿಸರ ಮಾನದಂಡಗಳಿಗನುಗುಣವಾಗಿ ಪಡೆಯುವುದು. ವಾಸ್ತವವಾಗಿ ಕೂಡ ಈ ವ್ಯವಸ್ಥೆಯು ಅಳವಡಿಸಿಕೊಳ್ಳಲು ಸಾಧ್ಯವಾಗುವಂತಿರಬೇಕು. ತ್ಯಾಜ್ಯವನ್ನು ಸರಿಯಾಗಿ ಬಳಸದೆ ಹೋದಲ್ಲಿ ಅದು ಭೂಮಿಯ ಮೇಲಿರುವ ನೀರನ್ನು, ಅಂತರ್ಜಲವನ್ನು ಮಲಿಗೊಳಿಸಿ ವಾಯುಮಾಲಿನ್ಯ ಉಂಟುಮಾಡಬಲ್ಲುದು. ತ್ಯಾಜ್ಯವನ್ನು ಸಂಪನ್ಮೂಲವೆನ್ನುವ ದೃಷ್ಟಿಕೋನದಿಂದ ನೋಡುವುದು ಪರಿಸರಕೃಷಿಯ ತತ್ವವನ್ನು ಅರ್ಥಮಾಡಿಕೊಳ್ಳಲು ಸಹಕಾರಿ.
ಜಾಗತಿಕವಾಗಿ ಕೃಷಿಭೂಮಿಯಲ್ಲಿ ಉತ್ಪಾದನೆಯಾಗುವ ಸಾವಯವ ತ್ಯಾಜ್ಯವನ್ನು ಸುಸ್ಥಿರ ರೀತಿಯಲ್ಲಿ ಬಳಸುವ ದಾರಿಯನ್ನು ಕಂಡುಕೊಳ್ಳುವ ತುರ್ತಿದೆ. ಸಾವಯವ ತ್ಯಾಜ್ಯವನ್ನು ಪರಿಣಾಮಕಾರಿಯಾದ ಬಗೆಯಲ್ಲಿ ಮರುಬಳಕೆ ಮಾಡಿದಲ್ಲಿ ಖನಿಜಾಂಶಯುಕ್ತ ರಸಗೊಬ್ಬರಗಳ ಅವಶ್ಯಕತೆಯನ್ನು ತಗ್ಗಿಸಬಹುದು. ಮಣ್ಣಲ್ಲಿ ಇಂಗಾಲದ ಅಂಶವು ಹೆಚ್ಚುತ್ತದೆ. ಬೆಳೆ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಜತನದಿಂದ ಸಂಗ್ರಹಿಸಿ, ಸಂರಕ್ಷಿಸಿ ಭೂಮಿಯಲ್ಲಿ ಮರುಬಳಕೆ ಮಾಡಬಹುದು. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅತಿ ಉತ್ಪಾದನೆ ಮಾಡುವಂಥ ಪರಿಸ್ಥಿತಿಯಲ್ಲಿ ಖನಿಜಾಂಶಗಳ ಕೊರತೆಯನ್ನು ತಗ್ಗಿಸುತ್ತದೆ. ಸಂಪನ್ಮೂಲಗಳ ಮರುಬಳಕೆಯು ಕೃಷಿಪರಿಸರವನ್ನು ಪ್ರಚುರಪಡಿಸಿ ಕೃಷಿ ಜೀವವೈವಿಧ್ಯವನ್ನು ಹೆಚ್ಚಿಸುತ್ತದೆ.

ಫೋಟೊ : ಶ್ರೀಲಂಕಾದಲ್ಲಿ ಪ್ರತಿಯೊಂದು ಮನೆಯ ಕೈತೋಟವು ಕುಟುಂಬದ ೮೦% ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತದೆ
ತತ್ವ ಮತ್ತು ವಿಧಾನಗಳನ್ನು ತಿಳಿಯಲು ಕೃಷಿ ಪರಿಸರ ವಿಜ್ಞಾನದಲ್ಲಿನ ಯುವಸಮುದಾಯಕ್ಕಾಗಿ ಕಲಿಕಾ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಮಲೇಷ್ಯಾದ PAN AP (ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್ ಏಷ್ಯಾ ಅಂಡ್ ಫೆಸಿಫಿಕ್)ನವರು ತಮ್ಮ ದಕ್ಷಿಣ ಏಷ್ಯಾದ ಸಹಭಾಗಿದಾರರಿಗಾಗಿ ಈ ಕಾರ್ಯಕ್ರಮವನ್ನು ಶ್ರೀಲಂಕಾದಲ್ಲಿ ಆಯೋಜಿಸಿದ್ದರು. ಈ ಸಂಸ್ಥೆಯ ಪರಿಸರಾತ್ಮಕ ಕೃಷಿ, ಆಹಾರ ಸಾರ್ವಭೌಮತ್ವ ಮತ್ತು ಕೃಷಿ ಪರಿಸರ ಇವುಗಳನ್ನು ಆಧರಿಸಿ ಜೈವಿಕ ವೈವಿಧ್ಯ ಕುರಿತಾದ ಕಲಿಕಾ ವಿನಿಮಯ ಮತ್ತು ಸಾಮರ್ಥ್ಯ ವರ್ಧನೆಯ ಅವಕಾಶವನ್ನು ತನ್ನ ಸಹಭಾಗಿದಾರರಿಗೆ ನೀಡುತ್ತದೆ.
ಮಾರ್ಚ್ ೨೦೧೮ರಂದು PAN AP ಸಹಭಾಗಿದಾರರು ಇಂಡೋನೇಷ್ಯಾದ ಜಕಾರ್ತದಲ್ಲಿನ “ಕೃಷಿ ಪರಿಸರ ವಿಜ್ಞಾನ” ಕುರಿತಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಕಲಿಕಾ ವಿನಿಯಮಯ ಕಾರ್ಯಕ್ರಮವನ್ನು ಆ ಪ್ರದೇಶದಲ್ಲಿ ನಡೆಸುವ ಕುರಿತು ನಿರ್ಧರಿಸಲಾಯಿತು. PAN APನೊಂದಿಗೆ ಎರಡು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿರುವ ಕುಟುಂಬಂ ಕೂಡ ಈ ಕಲಿಕಾ ವಿನಿಮಯದಲ್ಲಿ ಭಾಗವಹಿಸಿತ್ತು.
ಕೃಷಿ ಪರಿಸರ ವಿಜ್ಞಾನ ಕುರಿತ ಕಲಿಕಾ ವಿನಿಮಯ
ಮೊದಲೇ ನಿರ್ಧರಿಸಿದಂತೆ ಕೃಷಿ ಪರಿಸರ ವಿಜ್ಞಾನದಲ್ಲಿ ಕೆಲಸ ಮಾಡುತ್ತಿರುವ ಯುವಸಮುದಾಯಕ್ಕೆ ೪ ದಿನಗಳ ಕಲಿಕಾ ವಿನಿಮಯ ಕಾರ್ಯಕ್ರಮವನ್ನು ಫೆಬ್ರವರಿ ೨೦೧೯ರಂದು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ದೇಶ ಬಾಂಗ್ಲಾದೇಶ, ಕಾಂಬೋಡಿಯ, ಭಾರತ, ಮಲೇಷ್ಯಾ, ಪಾಕಿಸ್ತಾನ, ಫಿಲಿಫೈನ್ಸ್ ಮತ್ತು ಶ್ರೀಲಂಕಾ ದೇಶಗಳೊಂದಿಗೆ ಕಲಿಕಾ ವಿನಿಮಯ ನಡೆಸುವುದು. ವಿಕಲ್ಪನಿ ನ್ಯಾಷನಲ್ ವುಮೆನ್ ಫೆಡರೇಶನ್ ಎನ್ನುವ ಶ್ರೀಲಂಕಾದ ಎನ್‌ಜಿಒ ಸಂಸ್ಥೆ ಈ ಕಾರ್ಯಕ್ರಮದ ಆತಿಥ್ಯವನ್ನು ವಹಿಸಿಕೊಂಡು ಕ್ಷೇತ್ರ ಮತ್ತು ಸಂಸ್ಥೆಗಳಲ್ಲಿ ಕಲಿಕಾ ಚಟುವಟಿಕೆಗಳಿಗೆ ಅನುವುಮಾಡಿಕೊಟ್ಟಿತು.
ಕೊಲೊಂಬೊದಿಂದ ಪಶ್ಚಿಮಕ್ಕೆ ಸುಮಾರು ೩೫೦ ಕಿಮೀ ದೂರದಲ್ಲಿರುವ ಮೊನಾರವಾಗ್ಲಾದಲ್ಲಿರುವ ವಿಕಲ್ಪನಿ ನ್ಯಾಷನಲ್ ವುಮೆನ್ ಫೆಡರೇಶನ್‌ನಿನ ಜಮೀನಿಗೆ ಅಭ್ಯರ್ಥಿಗಳು ಭೇಟಿ ನೀಡಿದರು. ಈ ಫೌಂಡೇಶನ್‌ನವರು ಶ್ರೀಲಂಕಾದ ಮಹಿಳಾ ರೈತರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಕಳೆದೆರಡು ದಶಕಗಳಿಂದ ಇವರನ್ನು ಗುಂಪಾಗಿ ಸಂಘಟಿಸಿ ಸಾವಯವ ಮನೆ ಕೈತೋಟಗಳ ಬೆಳೆಸಲು ಪ್ರೋತ್ಸಾಹಿಸುತ್ತಿದ್ದಾರೆ. ಅಭ್ಯರ್ಥಿಗಳು ಈ ಫೌಂಡೇಶನ್‌ನ ನೆರವಿನೊಂದಿಗೆ ಈ ಮಹಿಳಾ ರೈತರ ಕೈತೋಟಗಳಿಗೆ ಭೇಟಿ ಕೊಟ್ಟರು. ಈ ಎಲ್ಲ ಕೈತೋಟಗಳು ಮನೆಯ ಬಳಕೆಗೆ ಬೇಕಾದಷ್ಟನ್ನು ಉತ್ಪಾದಿಸುತ್ತಿದ್ದವು. ಮನೆಯ ಸದಸ್ಯರೇ ಶ್ರಮದಲ್ಲೇ ಇಲ್ಲಿನ ಕೆಲಸಗಳು ನಡೆಯುತ್ತಿದ್ದವು. ಆಯಾ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಪ್ರತಿ ಕೈತೋಟವು ವಿಶಿಷ್ಟವಾಗಿತ್ತು.
ಈ ಕೈತೋಟಗಳಲ್ಲಿ ವೈವಿಧ್ಯಮಯ ತರಕಾರಿಗಳು, ಮಸಾಲೆ ಗಿಡಗಳನ್ನು ಸಾವಯವ ವಿಧಾನದಲ್ಲಿ ಬೆಳೆಸಿದ್ದಾರೆ. ಈ ಕೈತೋಟಗಳಲ್ಲಿ ಮಹಿಳಾರೈತರು ತರಕಾರಿಗಳು, ಮೂಲಿಕೆಗಳು, ಸೊಪ್ಪು ಮತ್ತು ಮರಗಳನ್ನು ಬೆಳೆಸಿದ್ದಾರೆ. ಇದರಲ್ಲಿ ಟೊಮೊಟೊ, ಬದನೆಕಾಯಿ, ಬೆಂಡೆಕಾಯಿ, ಮೆಣಸಿನ ಕಾಯಿ, ಈರುಳ್ಳಿ, ಸೊಪ್ಪು, ಚಪ್ಪರದ ಅವರೆ, ಮೆಣಸು, ಹಾಗಲಕಾಯಿ, ಪಡವಲ ಕಾಯಿ, ಸೊಪ್ಪು, ಮೂಲಂಗಿ, ಒಂದೆಲಗ, ಅಲೊವೆರ, ಕೊತ್ತಂಬರಿ, ಅರಿಷಿಣ, ಬೆಳ್ಳುಳ್ಳಿ, ಬಾಳೆ ಮತ್ತು ಮರಗಳಾದ ತೇಗ, ಗೊಬ್ಬರದ ಗಿಡ (ಗ್ಲೈರಿಸಿಡಿಯ), ಮಾವು, ಸೀಬೆ ಇತ್ಯಾದಿಗಳು ಸೇರಿವೆ. ಬೆಳೆಗಳ ಆಯ್ಕೆ, ಗಿಡಕ್ಕೆ ನೀಡಲಾಗುವ ಪೋಷಕಾಂಶಗಳು, ಕೊಯ್ಲು, ನಿರ್ವಹಣೆ ಇತ್ಯಾದಿ ಅಂಶಗಳು ಕುಟುಂಬದ ಬಳಕೆ ಮತ್ತು ಆದಾಯ ಉತ್ಪತ್ತಿ ಇವುಗಳನ್ನು ಆಧರಿಸಿರುತ್ತದೆ. ರೈತಾಪಿ ಕುಟುಂಬಗಳ ಶೇ.೮೦ರಷ್ಟು ಪೌಷ್ಟಿಕಾಂಶಗಳ ಅಗತ್ಯವನ್ನು ಪೂರೈಸಲು ಸಾಧ್ಯವಾಗುವಂತೆ ಈ ಕೈತೋಟಗಳನ್ನು ರೂಪಿಸಿಕೊಂಡಿರುತ್ತಾರೆ.
ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವುದು
ಇದರ ಯಶಸ್ಸಿನ ಶ್ರೇಯ ಇಡೀ ಕುಟುಂಬಕ್ಕೆ ಸಲ್ಲುತ್ತದೆ. ಇಡೀ ಕುಟುಂಬವು ಸಂಪನ್ಮೂಲಗಳ ಮರುಬಳಕೆಯಲ್ಲಿ ತೊಡಗಿಸಿಕೊಂಡು ತ್ಯಾಜ್ಯವನ್ನು ಉಪಯೋಗಕಾರಿ ಸಂಪನ್ಮೂಲವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಮಹಿಳಾ ರೈತರು ಅಡುಗೆ ಮನೆ ತ್ಯಾಜ್ಯ ಮತ್ತು ಬೆಳೆ ತ್ಯಾಜ್ಯಗಳಿಂದ ಹೇಗೆ ಗೊಬ್ಬರ ತಯಾರಿಸಿಕೊಳ್ಳುತ್ತಾರೆ ಎನ್ನುವುದನ್ನು ಅಭ್ಯರ್ಥಿಗಳು ಕಲಿಯಲು ಉತ್ತಮ ಅವಕಾಶವಾಯಿತು. ಅಡುಗೆಮನೆಯ ಬಳಸಿದ ನೀರನ್ನು ಕೈತೋಟಕ್ಕೆ ಬಳಸುವ ಮೂಲಕ ಅದನ್ನು ಮರುಬಳಕೆ ಮಾಡುತ್ತಾರೆ. ತ್ಯಾಜ್ಯದ ಮರುಬಳಕೆಯನ್ನು ಸ್ಥಳೀಯ ವಸ್ತುಗಳನ್ನು ಬಳಸಿ ಮಾಡುವ ವಿಧಾನವನ್ನು ನೋಡಿದ್ದು ಅಭ್ಯರ್ಥಿಗಳಿಗೆ ಉತ್ತಮ ಕಲಿಕೆಯಾಯಿತು. ಗ್ಲೈರಿಸಿಡಿಯಾ ಕಡ್ಡಿಗಳನ್ನು ಬಳ್ಳಿ ಹಬ್ಬಿಸಲು ಬಳಸಲಾಗುತ್ತದೆ. ಇದು ಮಣ್ಣಿನ ತೇವಾಂಶವನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಇದ್ದಿಲನ್ನು ತೋಟಕ್ಕೆ ಗೊಬ್ಬರವಾಗಿ ಬಳಸಲಾಗುತ್ತದೆ.
ಅಭ್ಯರ್ಥಿಗಳು ಶ್ರೀಲಂಕಾ ಸರ್ಕಾರದ ಕೃಷಿ ಇಲಾಖೆಯು ಅಳವಡಿಸಿಕೊಂಡಿರುವ ಕ್ರಮಗಳನ್ನು ಕೂಡ ಅಭ್ಯಸಿಸಿದರು. ಕೃಷಿ ಇಲಾಖೆಯು ಸಾವಯವ ಕೃಷಿಗಾಗಿಯೇ ಕೇಂದ್ರವೊಂದನ್ನು ಹೊಂದಿದ್ದು ಇದು ಶ್ರೀಲಂಕಾದಲ್ಲಿ ಸಾವಯವ ಕೃಷಿಯನ್ನು ವಿಸ್ತರಿಸುವಲ್ಲಿ ಕ್ರಿಯಾಶೀಲವಾಗಿದೆ. ಈ ಕೇಂದ್ರದಲ್ಲಿ ಅವರು ಜೈವಿಕ ಒಳಸುರಿಯುವಿಕೆಗಳ ಕುರಿತು ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಅಧ್ಯಯನದ ನಂತರವಷ್ಟೇ ಆ ಕುರಿತು ರೈತರಿಗೆ ತಿಳಿಸಿಕೊಡುತ್ತಾರೆ. ಅಭ್ಯರ್ಥಿಗಳು ಕೃಷಿ ಇಲಾಖೆಯ ಅಧಿಕಾರಿಯೊಬ್ಬರ ಅದ್ಭುತ ಕೈತೋಟಕ್ಕೂ ಭೇಟಿ ನೀಡಿದರು.
ಉಪಸಂಹಾರ
ಜಾಗತಿಕ ಆಹಾರ ಬಿಕ್ಕಟ್ಟು ಮತ್ತು ಏರುತ್ತಿರುವ ಆಹಾರದ ಬೆಲೆಗಳ ನಡುವೆ ಸ್ಥಳೀಯ ಆಹಾರ ಪದ್ಧತಿಗಳನ್ನು ಬಲಗೊಳಿಸಲು ಒತ್ತುನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಹಾರ ಉತ್ಪಾದನೆ ಮತ್ತು ಜೀವನಮಟ್ಟ ಸುಧಾರಣೆಯನ್ನು ಕೈತೋಟಗಳ ಮೂಲಕ ಮಾಡುವ ಕುರಿತು ಗಮನನೀಡಲಾಗುತ್ತಿದೆ. ಕೃಷಿ ಪರಿಸರ ವಿಜ್ಞಾನದ ಕಲಿಕಾ ವಿನಿಮಯವು ಹೊಸ ಐಡಿಯಾಗಳನ್ನು ನೀಡಿತು ಮತ್ತು ಕೈತೋಟಗಳಲ್ಲಿ ಕೃಷಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವುದು ಮತ್ತು ನಿರ್ವಹಿಸುವುದು ಹೇಗೆ ಎನ್ನುವ ಅರಿವನ್ನು ನೀಡಿತು.
ಸುರೇಶ್ ಕಣ್ಣಾ ಕೆ
Suresh Kanna K
Kudumbam,
No. 113/118, Sundaraj Nagar, Subramaniyapuram,
Trichy – 620 020, Tamil Nadu, India
E-mail: sureshkanna_kudumbam@yahoo.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೨ ; ಜೂನ್ ೨೦೧೯



