ಕೃಷಿಯಲ್ಲಿ ಹೆಚ್ಚುತ್ತಿರುವ ಸವಾಲುಗಳ ನಡುವೆಯೂ ಕೆಲವು ಉತ್ಸಾಹಿ ವ್ಯಕ್ತಿಗಳು ಭೂಮಿಯ ಮೇಲೆ ನಮ್ಮ ಬದುಕನ್ನು ಚಂದಗಾಣಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದು ನಮಗೆ ಪ್ರೋತ್ಸಾಹ ನೀಡುವಂಥದ್ದು. ಅಂತಹ ಕೆಲವು ಸ್ಪೂರ್ತಿ ನೀಡುವಂತಹವರ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.
ಎಡಿ ನೇಗಿ ಎಂಬ ಕರ್ಮಯೋಗಿ
ಹಿಮಾಚಲ ಪ್ರದೇಶದ ಕಿಣ್ಣಾರು ಹಿಮಮರಭೂಮಿಯು ನೀವು ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಹರಡಿಕೊಂಡಿದೆ. ಈ ಸ್ಥಳವನ್ನು ಥಾಂಗ್ ಕರ್ಮ ಎಂದು ಕರೆಯುತ್ತಾರೆ. ಸ್ಥಳೀಯ ಭಾಷೆಯಲ್ಲಿ ಹೀಗೆಂದರೆ ʼಬಿಳಿ ಬಯಲುʼ ಎಂದರ್ಥ. ಇಲ್ಲೊಂದು ಗರಿಕೆಹುಲ್ಲು ಕೂಡ ಹುಟ್ಟುತ್ತಿರಲಿಲ್ಲ. ಈ ಇಡೀ ಪ್ರದೇಶವು ಮರಳು ಮಣ್ಣು ಮತ್ತು ಕಲ್ಲುಗಳಿಂದ ಆವೃತವಾಗಿದೆ. ಆ ವ್ಯಕ್ತಿ ಈ ಮರುಭೂಮಿಯತ್ತ ಆಶಾವಾದಿಯಾಗಿ ನೋಡುತ್ತಿದ್ದ. ಆತ ಹಿಮಾಚಲ ಪ್ರದೇಶ ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಭಾರತ ಸರ್ಕಾರದ ಈ ಪ್ರದೇಶದ ಅರಣ್ಯ ಯೋಜನೆಯ ಆರ್ಥಿಕ ವಿಭಾಗದ ಉಸ್ತುವಾರಿಯನ್ನು ವಹಿಸಿದ್ದ. ಆತನ ಹೆಸರು ಆನಂದ ಧ್ವಜ್ ನೇಗಿ ಅಥವಾ ಎಡಿ ನೇಗಿ. ೧೯೭೭ರಿಂದ ಸರ್ಕಾರ ಈ ಮರುಭೂಮಿಯ ಸ್ವರೂಪವನ್ನು ಬದಲಿಸಲು ಪ್ರಯತ್ನಿಸುತ್ತಿತ್ತು. ಆದರೆ ಈ ಕಲ್ಲು, ಮರಳು ಮಣ್ಣು ತುಂಬಿರುವ ಭೂಮಿಯಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ ಎನ್ನುವುದು ಪರಿಣಿತರ ಅಭಿಪ್ರಾಯವಾಗಿತ್ತು. ೧೯೯೯ರಲ್ಲಿ ನೇಗಿಯವರು ಆಫೀಸಿಗೆ ರಜೆ ಹಾಕಿ ಈ ಮರುಭೂಮಿಯಲ್ಲಿ ಮರಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ೨೦೦೩ರಲ್ಲಿ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದುಕೊಂಡು ಇಡಿಯಾಗಿ ಇದೇ ಕೆಲಸದಲ್ಲಿ ತೊಡಗಿಸಿಕೊಂಡರು. ತಮ್ಮ ಜೀವಮಾನದ ಉಳಿತಾಯವನ್ನು ಈ ಯೋಜನೆಗಾಗಿ ವಿನಿಯೋಗಿಸಿದರು.

ಫೋಟೊ : ಶಾ ಅವರ ಪರ್ಮಾಕಲ್ಚರ್ ಫಾರಂ
ಅವರ ಅವಿರತ ಪರಿಶ್ರಮದ ಫಲವಾಗಿ ೯೦ ಎಕರೆ ಮರಭೂಮಿ ಇಂದು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಕರಗುವ ಮಂಜುಗಡ್ಡೆಗಳ ನೀರನ್ನೇ ಗಿಡಗಳನ್ನು ಬೆಳೆಸಲು ಬಳಸಿಕೊಂಡರು. ಅಂಚಿನಲ್ಲಿ ಬಟಾಣಿ, ಸೇಬು ಮತ್ತಿತರ ಮರಗಳನ್ನು ಬೆಳೆಸಿದರು. ಅವರೀಗ ʼಮರುಭೂಮಿ ಮಾಂತ್ರಿʼ ಎಂದು ಜನಪ್ರಿಯರಾಗಿದ್ದಾರೆ. ಈ ಬೆಟ್ಟದಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಕೃಷಿಯನ್ನು ಬಿಟ್ಟುಬಿಟ್ಟಿದ್ದ ಇಲ್ಲಿನ ರೈತರೀಗ ನೇಗಿಯವರ ಬಳಿಗೆ ಕೃಷಿ ತಂತ್ರಗಳನ್ನು ಕಲಿಯಲು ಬರುತ್ತಿದ್ದಾರೆ. ನೇಗಿಯವರು ಕೃಷಿತಜ್ಞರು ರಾಸಾಯನಿಕ ಗೊಬ್ಬರಗಳನ್ನು ಬಳಸಲು ಕೊಟ್ಟ ಸಲಹೆಯನ್ನು ತಿರಸ್ಕರಿಸಿ ತೋಟದಲ್ಲಿ ಸಂಗ್ರವಾದ ಪ್ರಾಣಿಗಳ ತ್ಯಾಜ್ಯವನ್ನೇ ಬಳಸಿದರು. ಇದು ಮಣ್ಣಿನ ಪೋಷಾಕಾಂಶವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಒಂದೊಮ್ಮೆ ಅಸಾಧ್ಯವೆನಿಸಿದ್ದನ್ನು ನೇಗಿಯವರು ಸಾಧಿಸಿ ತೋರಿದರು. ನಾವಿಂದು ಗಾಯಗೊಂಡ ಭೂಮಿಯನ್ನು ಹೇಗೆ ಗುಣಪಡಿಸಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ನಮ್ಮ ಭೂಮಿಯ ಮೇಲಿನ ಹಲವು ಪ್ರದೇಶಗಳು ಮರುಭೂಮಿಗಳಾಗುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಕಡಿಯುತ್ತಿದ್ದಾರೆ. ನಮ್ಮ ಜಗತ್ತಿಂದು ಹಲವು ರೀತಿಯ ವಿಶ್ವಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರತಿಕೂಲ ಹವಾಮಾನ, ಆಹಾರದ ಕೊರತೆ, ನೀರಿನ ಕೊರತೆ, ಬಡತನ ಮತ್ತು ಹೆಚ್ಚುತ್ತಿರುವ ಜನರ ಆರೋಗ್ಯ ಪರಿಸ್ಥಿತಿ. ನಮಗೆ ಅನ್ನವನ್ನು ನೀಡುತ್ತಿರುವ ರೈತರ ಅಸಹಾಯಕರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯು ಚದುರಿಹೋಗಿದೆ ಮತ್ತು ನಗರಗಳು ವಲಸಿತರಿಂದ ತುಂಬಿತುಳುಕುತ್ತಿದೆ. ಹಳ್ಳಿಗಳಲ್ಲಿರುವ ಜನ ಹಸಿವಿನಿಂದ ನರಳುತ್ತಿದ್ದು ಸರ್ಕಾರಗಳು ನೀಡುವ ಸಬ್ಸಿಡಿ ಆಹಾರದ ಮೇಲೆ ಅವಲಂಭಿತರಾಗಿದ್ದಾರೆ. ಈ ಎಲ್ಲ ಸಮಸ್ಯೆಗಳು ಒಂದರೊಡನೊಂದು ಸಂಬಂಧ ಹೊಂದಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ನಾವು ಮನುಷ್ಯರು ನೈಸರ್ಗಿಕ ಸಂಪನ್ಮೂಲಗಳನ್ನು ಹಾಳುಮಾಡುತ್ತಿರುವುದು ಈ ಎಲ್ಲ ಸಮಸ್ಯೆಗಳ ಮೂಲ.
ಅಹಮದಬಾದಿನಲ್ಲೊಂದು ಬೃಂದಾವನ
ವಿವೇಕ್ ಶಾ ಮತ್ತು ಅವರ ಹೆಂಡತಿ ಬೃಂದ ಸ್ಯಾನ್‌ಫ್ರಾನ್ಸಿಕೋದ ಹಳ್ಳಿಯೊಂದನ್ನು ಹಾದು ಹೋಗುತ್ತಿದ್ದರು. ಇಬ್ಬರೂ ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಆ ಹಳ್ಳಿಯನ್ನು ಹಾದುಹೋಗುತ್ತಿದ್ದಾಗ ಅಲ್ಲೊಂದು ಸ್ಟ್ರಾಬೆರಿ ಫಾರಂ ಇವರ ಕಣ್ಣಿಗೆ ಬಿತ್ತು. ಅದು ತೋಟಕ್ಕಿಂತ ಹೆಚ್ಚಾಗಿ ಮಿಲಿಟರಿ ಬರಾಕ್‌ನಂತೆ ಕಂಡಿತು. ಸಾಲಾಗಿ ನೆಟ್ಟಿದ್ದ ಗಿಡಗಳಿಗೆ ಕೆಲಸಗಾರರು ರಕ್ಷಾಕವಚ, ಮುಖಗವಸು ಎಲ್ಲ ಧರಿಸಿಕೊಂಡು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು. ಸಿಂಪಡಣೆಗೆ ಇಷ್ಟು ಎಚ್ಚರಿಕೆ ವಹಿಸಬೇಕೆಂದರೆ ಅವು ಎಷ್ಟು ವಿಷಕಾರಿಯಾಗಿರಬೇಕು. ಇನ್ನು ಅವುಗಳನ್ನು ಸಿಂಪಡಿಸಿದ ಹಣ್ಣುಗಳನ್ನು ತಿಂದರೆ ಗ್ರಾಹಕನ ಗತಿ ಏನಾಗಬೇಡ? ಈ ಯೋಚನೆ ಆ ದಂಪತಿಗಳ ಜೀವನವನ್ನೇ ಬದಲಿಸಿಬಿಟ್ಟಿತು. ಅವರು ತಮ್ಮದೇ ಕಾಡೊಂದನ್ನು ಅಭಿವೃದ್ಧಿ ಪಡಿಸುವ ಪಯಣಕ್ಕೆ ಮುಂದಾದರು. ಇದಕ್ಕಾಗಿಯೇ ೨೦೧೬ರಲ್ಲಿ ಅಮೆರಿಕಾದಲ್ಲಿನ ತಮ್ಮ ಉದ್ಯೋಗವನ್ನು ಬಿಟ್ಟು ಭಾರತಕ್ಕೆ ವಾಪಸ್ಸಾದರು. ಇಲ್ಲಿ ಪರ್ಮಿಕಲ್ಚರ್ (ಶಾಶ್ವತ ಕೃಷಿ) ತತ್ವಗಳಿಗನುಸಾರವಾಗಿ ಕೃಷಿ ಮಾಡಲು ಮುಂದಾದರು. ಮೂರೇ ವರ್ಷಗಳಲ್ಲಿ ಅವರು ಲಾಭಗಳಿಸುವುದರೊಂದಿಗೆ ಸ್ಥಳೀಯರ ಅಗತ್ಯಗಳನ್ನೂ ಕೂಡ ಪೂರೈಸಲಾರಂಭಿಸಿದರು.
ನಿಜ ಹೇಳಬೇಕೆಂದರೆ ಇಂದು ಕೃಷಿಯನ್ನು ಆಹಾರ ಬೆಳೆಯುವ ಕ್ರಿಯೆ ಎನ್ನುವುದಕ್ಕಿಂತ ಹೆಚ್ಚಾಗಿ ಕೈಗಾರಿಕೆ ಎಂದೇ ನೋಡಲಾಗುತ್ತಿದೆ. ಇದಕ್ಕೆ ಕಾರಣ ಕಣ್ಪಟ್ಟಿಕೊಂಡು ನಡೆಸಿದ ಹಸಿರು ಕ್ರಾಂತಿ ಎನ್ನುವ ಪಯಣ. ರಾಸಾಯನಿಕ ಗೊಬ್ಬರ, ಹೆಚ್ಚು ಇಳುವರಿ ಕೊಡುವ ಬೀಜಗಳು ಮತ್ತು ಕೀಟನಾಶಕಗಳು ಎನ್ನುವುದು ಮುಂದುವರೆದ ವಿಜ್ಞಾನದ ಮೂಲಮಂತ್ರವಾಯಿತು. ಈ ಅನ್ವೇಷಣೆಗಳು ಮನುಷ್ಯರು ಕೃಷಿಯನ್ನು ಕೈಗಾರಿಕೆಯಂತೆ ಕಾಣುವಂತೆ ಮಾಡಿದವು. ಇದರೊಂದಿಗೆ ಕೃಷಿ ಸಲಕರಣೆಗಳ ಯಂತ್ರೀಕರಣ, ನೀರಾವರಿ ಸೌಲಭ್ಯಗಳಲ್ಲಾದ ಸುಧಾರಣೆ, ಆಹಾರ ಸಂಸ್ಕರಣೆ, ಪ್ಯಾಕೆಜಿಂಗ್ ಮತ್ತು ಸಂಗ್ರಹಣೆಯಲ್ಲಾದ ಸುಧಾರಣೆಗಳು ಕೂಡ ಪ್ರಭಾವ ಬೀರಿತು. ಇದರೊಂದಿಗೆ ಸಾರಿಗೆ ಸೌಲಭ್ಯವು ಬೆಳೆಯುತ್ತಿದ್ದ ಕೃಷಿ ವಲಯದ ಮಾರುಕಟ್ಟೆಗೆ ವರದಾನವಾಯಿತು. ಗ್ರಾಮೀಣ ಸಂಸ್ಕೃತಿಯ ಭಾಗವಾಗಿದ್ದ ಕೃಷಿಯು ಮನೆಯ ಸುಸ್ಥಿರ ಆಹಾರ ಬದ್ಧತೆಗಾಗಿ ಇತ್ತು. ಅದು ಬದಲಾಗಿ ಆಧುನಿಕ, ಯಾಂತ್ರಿಕೃತ, ಆಹಾರ ಉತ್ಪಾದನ ಉದ್ದಿಮೆಯಾಯಿತು.
ಕೃಷಿಯ ಸುಸ್ಥಿರತೆಯನ್ನು ಕಾಪಾಡುವಲ್ಲಿ ಮರಗಳು ಮುಖ್ಯಪಾತ್ರ ವಹಿಸುತ್ತವೆ.
ಮೋರಿನಿ ಬೆಟ್ಟದಲ್ಲಿನ ಪವಾಡ
ಚಂಡೀಗಢದಿಂದ ಮೋರಿನಿ ಬೆಟ್ಟದ ತಪ್ಪಲಿಗೆ ಒಂದು ಗಂಟೆಯ ಹಾದಿ. ಆ ತಪ್ಪಲಲ್ಲಿರುವುದೇ ಆನಂದ ಫಾರಂ. ಈ ಹಿಂದೆ ಇದು ಬಂಜರುಭೂಮಿಯಾಗಿತ್ತು. ಇಲ್ಲಿ ಮನೀಷ ಮತ್ತವರ ಗಂಡ ಆಗಂ ಪರ್ಮಾಕಲ್ಚರ್ ಕೃಷಿ ಪದ್ಧತಿ ಅನುಸರಿಸಿ ಫಾರಂ ಬೆಳೆಸಲು ನಿರ್ಧರಿಸಿದರು. ಮಣ್ಣಿನ ಗುಣವನ್ನು ಬದಲಿಸಲು ಗಿಡದ ಮಡಿಗಳಿಗೆ ಹೊದಿಕೆಯನ್ನು ಹಾಕುವ ವಿಧಾನವನ್ನು ಅನುಸರಿಸಿದರು. ನಿಧಾನವಾಗಿ ಇಡೀ ಪ್ರದೇಶ ವೈವಿಧ್ಯಮಯವಾದ ಆಹಾರದ ಕಾಡಾಗಿ ಪರಿವರ್ತಿತವಾಯಿತು. ಅವರಿನ್ನೂ ತಾವು ಬೆಳೆದದ್ದನ್ನು ಮಾರಾಟ ಮಾಡುತ್ತಿಲ್ಲ. ತಮ್ಮ ಕುಟುಂಬಕ್ಕೆ ಆಗುವಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ತಮ್ಮ ಸ್ನೇಹಿತರಿಗೆ ಹಂಚಿಬಿಡುತ್ತಿದ್ದಾರೆ. ಮುಂಬೈ ನಗರದಲ್ಲಿ ಬದುಕು ಸಾಗಿಸಿದ್ದ ಈ ದಂಪತಿಗಳ ಬದುಕೀಗ ನಿಸರ್ಗದ ಮಡಿಲಲ್ಲಿ ಬದಲಾಗಿಬಿಟ್ಟಿದೆ.
ಸಾಮಾನ್ಯವಾಗಿ ಸಮಸ್ಯೆಗೆ ಉತ್ತರ ಸಮಸ್ಯೆಯ ಒಳಗಡೆಯೇ ಇರುತ್ತದೆ. ಕಾಡಿನ ನಿರ್ನಾಮವೇ ಇಂದಿನ ಕೃಷಿ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಮೂಲವಾಗಿರುವುದರಿಂದ ಕಾಡನ್ನು ಮತ್ತೆ ಬೆಳೆಸುವುದೊಂದೆ ಇದಕ್ಕಿರುವ ತಾರ್ಕಿಕ ಪರಿಹಾರ. ಪ್ರಸ್ತುತ ನಾವು ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಜಗತ್ತಿನಾದ್ಯಂತ ಕುಟುಂಬ ಆಧಾರಿತ ಆಹಾರದ ಕಾಡುಗಳು ಸುಸ್ಥಿರವಾಗಿ ಅಭಿವೃದ್ಧಿ ಹೊಂದುವಂತೆ ಮಾಡಬೇಕು. ನಾವು ಮಾಡಿರುವ ಹಾನಿಯನ್ನು ಸರಿಪಡಿಸಬೇಕೆಂದರೆ ಹಿಮ್ಮುಖ ಚಲನೆ ಅಗತ್ಯ. ಅಂದರೆ ಹಂತಹಂತವಾಗಿ ಸಿನೆಮಾದಲ್ಲಿ ತೋರಿಸುವಂತೆ ಹಿಮ್ಮುಖವಾಗಿ ಚಲಿಸಬೇಕು. ಮೊದಲಿದ್ದಂತೆ ಮನುಷ್ಯರು, ಪ್ರಾಣಿಗಳು, ಗಿಡಮರಗಳ ಬದುಕಲ್ಲಿ ಕಾಡು ಅವಿಭಾಜ್ಯ ಅಂಗವಾಗಿದ್ದ ಕಾಲಕ್ಕೆ ಹಿಂತಿರುಗಬೇಕು. ಸಂಸ್ಕೃತ ಪದವಾದ “ಜೀವನ” ಪದದರ್ಥ “ಜೀ” ಎಂದರೆ ಬದುಕು ಮತ್ತು “ವನ” ಎಂದರೆ ಕಾಡು.
ಅಂದರೆ ಮರಗಳನ್ನು ಬೆಳೆಸುವುದು, ಅವುಗಳೊಂದಿಗೆ ವಾಸಿಸುವುದು, ಕಾಡಿನಲ್ಲೇ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳುವುದು, ನಮ್ಮೆಲ್ಲ ಅವಶ್ಯಕತೆಗಳನ್ನು ಅದರ ಮೂಲಕವೇ ಪೂರೈಸಿಕೊಳ್ಳುವುದು ಮತ್ತು ಕಾಡಿನ ಸಂರಕ್ಷಣೆ ಮತ್ತು ಪೋಷಣೆ ಮಾಡುವುದು ನಮಗೆ ರಕ್ತಗತವಾಗಿದೆ. ಇಂದು ಅದನ್ನೇ ಕೃಷಿ ಕಾಡು ಅಥವ ಪರ್ಮಾಕಲ್ಚರ್ ಅಥವ ಆಹಾರ ಕಾಡು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಆದರೆ ಅದರ ಮೂಲತತ್ವ ಒಂದೇ. ಕಾಡಿನ ಪರಿಸರದೊಂದಿಗೆ ಒಂದಾಗಿ ಬದುಕುವುದು ಮನುಷ್ಯರಿಗೆ ಸಹಜವಾದದ್ದು. ಯಾವುದೇ ಬಗೆಯ ಸಾಮೂಹಿಕ ಏಕಸಂಸ್ಕೃತಿಯು ವೈವಿಧ್ಯತೆಯನ್ನು, ಸಹಜ ಪರಿಸರ ವ್ಯವಸ್ಥೆಯನ್ನು, ಸುಸ್ಥಿರತೆಯನ್ನು ನಾಶಪಡಿಸುತ್ತದೆ. ಇದು ನಮ್ಮ ಆಹಾರ ಸಮಸ್ಯೆಗಳಿಗೆ ಉತ್ತರವಾಗಲಾರದು. ಕೃಷಿಯ ಸುಸ್ಥಿರತೆಯನ್ನು ಕಾಪಾಡುವಲ್ಲಿ ಮರಗಳು ಮುಖ್ಯಪಾತ್ರ ವಹಿಸುತ್ತವೆ. ನಮಗೆ ಅವಶ್ಯಕತೆಯಿರುವಷ್ಟನ್ನು ಮಾತ್ರ ನಿಸರ್ಗದಿಂದ ಪಡೆಯಬೇಕು. ಪರಿಸರ ವ್ಯವಸ್ಥೆಯನ್ನು ಸುಸ್ಥಿರವಾಗಿಡುವುದೊಂದೇ ನಮ್ಮ ಮುಂದಿರುವ ದಾರಿ.
ಶೋಗಪುರದ ಅಚ್ಚರಿಯ ಕತೆ
ಕೃಷಿ ಪರಿಸರ ವ್ಯವಸ್ಥೆಯಲ್ಲಿ ಮರಗಳ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ. ಮರಗಳು ಭೂಮಿಯೊಳಗಿನ ಸಾರವನ್ನು ಹೊರತರುವುದರೊಂದಿಗೆ ಸಾವಯವ ಅಂಶವನ್ನು ಮಣ್ಣಿನ ಮೇಲ್ಪದರಕ್ಕೆ ಸೇರಿಸುವ ಮೂಲಕ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುತ್ತದೆ. ಅದು ಮಣ್ಣಿನ ಸವಕಳಿಯನ್ನು ತಡೆಯುತ್ತದೆ. ಗಾಳಿಯ ಭರತದ ಹಾನಿ ತಪ್ಪಿಸುತ್ತದೆ, ಮಳೆನೀರು ಮಣ್ಣಿನ ಪೌಷ್ಟಿಕಾಂಶಗಳನ್ನು ಕೊಚ್ಚಿಕೊಂಡು ಹೋಗುವುದನ್ನು ತಪ್ಪಿಸುತ್ತದೆ. ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ. ಹಕ್ಕಿಗಳು, ಪ್ರಾಣಿಗಳು ಮತ್ತು ಕೀಟಗಳಿಗೆ ಆಶ್ರಯ ನೀಡಿ ನೈಸರ್ಗಿಕ ಪರಾಗಸ್ಪರ್ಶ ಕ್ರಿಯೆಗೆ ನೆರವು ನೀಡುತ್ತದೆ. ಕೀಟಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಭೂಮಿಯ ಉಷ್ಣಾಂಶವನ್ನು ತಗ್ಗಿಸುತ್ತದೆ. ಆಮ್ಲಜನಕವನ್ನು ಉತ್ಪಾದಿಸುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ. ಮೋಡಗಳನ್ನು ಆಕರ್ಷಿಸಿ ಮಳೆಯಾಗುವಂತೆ ಮಾಡುತ್ತದೆ. ಅಂತರ್ಜಲ ಸಂಪನ್ಮೂಲವನ್ನು ಕಾಪಾಡುವುದರೊಂದಿಗೆ ನೈಸರ್ಗಿಕ ರಿಚಾರ್ಜ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಭೂಮಿಯಿಂದ ಅನಾವಶ್ಯಕವಾಗಿ ನೀರು ಆವಿಯಾಗುವುದನ್ನು ತಡೆಯುತ್ತದೆ. ತನ್ನೆಲೆಗಳ ಮೇಲೆ ಬೀಳುವ ಸೂರ್ಯರಶ್ಮಿಯನ್ನು ಹೀರಿಕೊಂಡು ಆಹಾರವನ್ನು ಉತ್ಪಾದಿಸುತ್ತದೆ.
೨೦೦೬ರಲ್ಲಿ ಐಐಟಿ-ಐಐಎಂನ ಮಾಜಿ ವಿದ್ಯಾರ್ಥಿಯಾಗಿದ್ದ ಸಂದೀಪ್ ಸಕ್ಸೇನ ಅಮೆರಿಕಾದಲ್ಲಿ ಕೆಲಸ ಮಾಡುವಾಗ ಭಾರತದ ಕೃಷಿ ಆದಾಯ ಕುರಿತು ಸರ್ವೇ ಮಾಡಬೇಕಾಗಿ ಬಂದಿತು. ಇದಕ್ಕಾಗಿ ಅವರು ಗ್ರಾಮೀಣ ಭಾರತವನ್ನು ಸುತ್ತಬೇಕಾಯಿತು. ಹೀಗೆ ಸುತ್ತಾಡುವಾಗ ಅವರಿಗೆ ಅಭಿವೃದ್ಧಿಯ ಹೆಸರಲ್ಲಿ ಕಾಡನ್ನು ಕಡಿಯುತ್ತಿರುವುದು ಮತ್ತು ಅಂತರ್ಜಲಮಟ್ಟವು ಕುಸಿಯುತ್ತಿರುವುದು ಭಾರತದ ರೈತರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿರುವುದು ಅರಿವಾಯಿತು. ಅವರು ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ ಪ್ರಸ್ತುತದ ಕೃಷಿ ಬಿಕ್ಕಟ್ಟಿಗೆ ಆಹಾರ ಕಾಡುಗಳನ್ನು ಬೆಳೆಸುವುದೊಂದೇ ಮಾರ್ಗ ಎಂದು ಕಂಡುಕೊಂಡರು. ಮಧ್ಯಪ್ರದೇಶದ ಶೋಗಪುರದಲ್ಲಿದ್ದ ತಮ್ಮ ೧೦೦ ಎಕರೆ ಜಮೀನಿನಲ್ಲಿ ಇದರ ಪ್ರಯೋಗಕ್ಕೆ ಮುಂದಾದರು. ತಮ್ಮ ಯೋಜನೆಗೆ ಅಡವಿ ದೇವತೆ ಅರಣ್ಯಾನಿಯ ಹೆಸರಿಟ್ಟರು. ಮೊದಲನೆಯ ಹೆಜ್ಜೆಯಾಗಿ ಆಲ, ಅರಳಿ ಮತ್ತು ಬೇವಿನ ಮರಗಳನ್ನು ಮಧ್ಯದಲ್ಲಿ ನೆಟ್ಟು ಅದರ ಸುತ್ತ ಹಣ್ಣಿನ ಮರಗಳಾದ ಪರಂಗಿ, ಬಾಳೆ ಮತ್ತು ನಿಂಬೆಯನ್ನು ನೆಟ್ಟರು. ನಂತರ ಸುತ್ತ ಧಾನ್ಯಗಳು ಮತ್ತು ಕಾಳುಗಳ ಗಿಡಗಳನ್ನು ನೆಟ್ಟರು. ನಾಲ್ಕೇ ವರ್ಷಗಳಲ್ಲಿ ಮರಗಳು ಅದ್ಭುತವಾದ ಆಹಾರದ ಕಾಡಾಗಿ ಬೆಳೆಯಿತು. ಬೇಸಿಗೆಯಲ್ಲೂ ವಾತಾವರಣ ತಂಪಾಗಿತ್ತು. ಇಂದು ಅವರ ಕಾಡಿನ ಉತ್ಪನ್ನಗಳನ್ನು ಇ-ವೇದಿಕೆಯ ಮೂಲಕ ನೂರಾರು ಗ್ರಾಹಕರು ಖರೀದಿಸುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತನಿಗೆ ಸೂಕ್ತ ದರ ಸಿಗುವಂತಾಗಿದೆ.

ಸುಸ್ಥಿರತೆಗೆ ಮರಗಳೊಂದಿಗೆ ಬದುಕುವುದು ಅತ್ಯವಶ್ಯಕ
ಶೋಗಾಪುರದಲ್ಲಿ ಸುಮಾರು ೧೭೫ ಜಾತಿಯ ಮರಗಳು ಒಂದರೊಡನೊಂದು ಬೆಳೆಯುತ್ತಿದ್ದು ಒಂದು ಇನ್ನೊಂದಕ್ಕೆ ಪೂರಕವಾಗಿ ಭೂಮಿಗೆ ಜೈವಿಕತ್ಯಾಜ್ಯದ ಹೊದಿಕೆಯನ್ನು ಹೊದಿಸಿದೆ. ಒಂದು ಕಾಲದಲ್ಲಿ ಇದೇ ಭೂಮಿ ಬಂಜರಾಗಿ ಕಲ್ಲುಗಳಿಂದ ತುಂಬಿತ್ತು. ಅವರು ದೇಶದೆಲ್ಲೆಡೆಯ ರೈತರಿಗೆ ಈ ಮಾದರಿಯನ್ನು ಅನುಸರಿಸಿ ಸುಸ್ಥಿರ ಆಹಾರದ ಕಾಡುಗಳನ್ನು ಬೆಳೆಯಲು ನೆರವು ನೀಡುತ್ತಿದ್ದಾರೆ. ಮಧ್ಯಪ್ರದೇಶದ ಹಳ್ಳಿಗಳಲ್ಲಿನ ಈ ಬಗೆಯ ಕಾಡುಗಳು ಸಾವಯವ ಮತ್ತು ವಿದೇಶಿ ಉತ್ಪನ್ನಗಳನ್ನು ಬೆಳೆಯುತ್ತಿವೆ. ಸಂಸ್ಕರಿಸಿರದ ಅರಿಷಿಣ ಮತ್ತ ಅಮೃತಬಳ್ಳಿ ಅರಣ್ಯಾನಿಯ ಪ್ರಸಿದ್ಧ ಉತ್ಪನ್ನಗಳು. ಸರಳವಾಗಿ ಸಂಸ್ಕರಿಸಿದ ಉತ್ಪನ್ನಗಳಾದ ಸಾವಯವ ಮಾವಿನ ಕಾಯಿಯ ಉಪ್ಪಿನಕಾಯಿ ಮತ್ತು ಕೈಯಲ್ಲಿ ತೆಗೆದ ಸಾಸಿವೆ ಎಣ್ಣೆ ಇವುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ನೀಡಿ ಮಾರಾಟ ಮಾಡಲಾಗುತ್ತದೆ. ಇದರ ಹಿನ್ನೆಲೆಯಲ್ಲಿ ನಿರಂತರ ಸಂಶೋಧನೆ ಮತ್ತು ಜ್ಞಾನ ಹಂಚಿಕೆಯು ಇಡೀ ವ್ಯವಸ್ಥೆಯನ್ನು ಚಟುವಟಿಕೆಯಿಂದ ಹೊಸತನದಿಂದ ಕೂಡಿರುವಂತೆ ಮಾಡಿದೆ.
ಕುಟುಂಬ ಕೃಷಿಯ ಭವಿಷ್ಯ
ಇಂದಿನ ಸಂದರ್ಭದಲ್ಲಿ ಸುಸ್ಥಿರ ಕೃಷಿಕಾಡಿನ ಸಾಮರ್ಥ್ಯ ಮತ್ತು ಸಾಧ್ಯತೆಗಳು ಹೇರಳವಾಗಿದೆ. ಆದರೆ ಇದರ ಪ್ರಯೋಜನಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಲು ಇರುವ ದೊಡ್ಡ ತೊಡಕೆಂದರೆ ಪ್ರಸ್ತುತದಲ್ಲಿರುವ ಕೃಷಿ ವ್ಯವಸ್ಥೆ. ಕಾರ್ಯಾಗಾರದಲ್ಲಿ ರೈತನೊಬ್ಬ ಸರಿಯಾಗಿ ಗುರುತಿಸಿದಂತೆ ನಮ್ಮೆಲ್ಲ ಕೃಷಿ ಸಂಸ್ಥೆಗಳು ಉತ್ತಮ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನೇ ಬಳಸಿ ಎಂದು ಹೇಳುತ್ತಿವೆ. ಇಂದಿಗೂ ಬಹುರಾಷ್ಟ್ರೀಯ ಕಂಪನಿಗಳು ಉತ್ತಮ ಇಳುವರಿಗಾಗಿ ತಾವು ಪೇಟೆಂಟ್ ಪಡೆದ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಬೀಜಗಳನ್ನು ಬಳಸುವಂತೆ ಪ್ರಚಾರ ಮಾಡಲು ಅನುಮತಿಯಿದೆ. ಕೃಷಿ ಇಲಾಖೆಗಳು ಹೈಬ್ರೀಡ್ ಬೀಜಗಳು ಮತ್ತು ಕೀಟನಾಶಕಗಳನ್ನು ಬಳಸುವಂತೆ ಹೇಳುತ್ತಿವೆ. ಈ ಕೀಟನಾಶಕಗಳಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ ಎಂದಾಗಲಿ ನೀರು ಕಲುಷಿತಗೊಳ್ಳುತ್ತದೆ ಎಂದಾಗಲಿ ಅವರು ಹೇಳುವುದಿಲ್ಲ. ಈ ವಿಷಕಾರಿ ಕೀಟನಾಶಕಗಳಿಂದ ಉಂಟಾಗುವ ಆರೋಗ್ಯದ ತೊಂದರೆಗಳ ಕುರಿತು ಅವರು ರೈತರಿಗೆ ಹೇಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬದಲಿ ಕೃಷಿ ಪದ್ಧತಿಯ ಕುರಿತು ರೈತರಿಗೆ ಮನವರಿಕೆ ಮಾಡಿಸಬಹುದೆಂದು ಯೋಚಿಸಲು ಕೂಡ ಸಾಧ್ಯವಿಲ್ಲ. ಸರ್ಕಾರದ ನೀತಿಗಳಲ್ಲಿ ಬದಲಾವಣೆ ಕೃಷಿ ಅರಣ್ಯದ ಮಹತ್ವ ಕುರಿತು ನಾವೆಲ್ಲರೂ ಸತತವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸಿದಲ್ಲಿ ಮಾತ್ರ ಈ ದುರಂತದಿಂದ ಪಾರಾಗಲು ಸಾಧ್ಯ. ನಾವು ಹಿಂತಿರುಗಿ ಹೋಗಲು ತಡಮಾಡುತ್ತಿದ್ದೇವೆಯೇ? ಪ್ರತಿಕ್ರಿಯಿಸಲು ತಡಮಾಡುತ್ತಿದ್ದೇವೆಯೇ? ಬದಲಾವಣೆಗೆ ಹಿಂಜರಿಯುತ್ತಿದ್ದೇವೆಯೇ? ಈ ಪ್ರಶ್ನೆಗಳು ಮನುಷ್ಯಕುಲದ ಭವಿಷ್ಯವನ್ನು ನಿರ್ಧರಿಸಲಿವೆ. ಒಂದಲ್ಲ ಒಂದು ಹಂತದಲ್ಲಿ ಮನುಷ್ಯ ಮರಳಿ ತನ್ನ ನಿರ್ಸಗದೆಡೆಗೆ ಹೋಗಿ ಕಾಡಿನೊಂದಿಗೆ ಸಹಜೀವನ ನಡೆಸಿದರೆ ಮಾತ್ರ ಈ ಜಗತ್ತು ಉಳಿಯಬಲ್ಲುದು. ನಾವು ಎಷ್ಟು ಬೇಗ ಎಚ್ಚೆತ್ತುಕೊಂಡರೆ ಅಷ್ಟು ಒಳ್ಳೆಯದು. ಆಗ ಮಾತ್ರ ನಮ್ಮ ಮಕ್ಕಳಿಗೆ ಸುಂದರ ಭೂಮಿಯನ್ನು ಕೊಡಲು ಸಾಧ್ಯ.
ದೀಪಾಂಕುರ್ ದಾಸಗುಪ್ತ
Dipankar Dasgupta
Nandalaya Clinic
Sarbodaya Nagar
Puri 2 – Odisha – 752002
E-mail: drdipankar123@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೩ ; ಸೆಪ್ಟಂಬರ್ ೨೦೧೯



