ಭಾರತದಲ್ಲಿನ ಕೃಷಿವಿಜ್ಞಾನಕ್ಕೆ ಶಕ್ತಿ ತುಂಬಿದ ಮಹಿಳೆಯರು


“ನಮಗೆ ದೇಸಿ ತಳಿಗಳ ಬೀಜಗಳನ್ನು ಸಂರಕ್ಷಿಸಿ ಸಾಂಪ್ರದಾಯಿಕ ಕೃಷಿಜ್ಞಾನವನ್ನು ಪಸರಿಸುವುದರ ಮಹತ್ವ ಗೊತ್ತಿತ್ತು. ಈ ಕೃಷಿಪರಿಸರ ವಿಜ್ಞಾನವು ಪರಿಸರಕ್ಕೆ ಹಾನಿ ಮಾಡುವುದಿಲ್ಲವೆಂದು ಕೂಡ ತಿಳಿದಿತ್ತು” ಎಂದು ಚುಕ್ಕಿ ನಂಜುಂಡಸ್ವಾಮಿಯವರು ಹೇಳುತ್ತಾರೆ. ಇವರು ಕರ್ನಾಟಕದ ಬೆಂಗಳೂರಿನ ಅಮೃತ ಭೂಮಿಯ ಸಂಚಾಲಕಿ. ಇದೊಂದು ಕೃಷಿಪರಿಸರ ವಿಜ್ಞಾನ ಸಂಸ್ಥೆ. ಬದಲಿ ಕೃಷಿ ಮಾದರಿಯನ್ನು ಅನುಸರಿಸಬಹುದು ಎನ್ನುವುದನ್ನು ಸಾಬೀತು ಪಡಿಸಲು ಈ ಸಂಸ್ಥೆಯನ್ನು ಕಟ್ಟಲಾಯಿತು. ಲಾ ವಯಾ ಕ್ಯಾಂಪೆಸಿನಾದ ಸದಸ್ಯತ್ವವನ್ನು ಪಡೆದಿರುವ ಈ ಸಂಸ್ಥೆಯು ರೈತರೊಂದಿಗೆ ಮುಖಾಮುಖಿ ಭೇಟಿ ತರಬೇತಿಯನ್ನು ನೀಡುತ್ತದೆ. ಕೃಷಿಪರಿಸರ ವಿಜ್ಞಾನ, ರೈತರ ಹಕ್ಕುಗಳು, ಆಹಾರ ಸಾರ್ವಭೌಮತ್ವ ಮತ್ತು ಸಾಮಾಜಿಕ ನ್ಯಾಯ ಇವೆಲ್ಲವುಗಳ ಕುರಿತು ಕೂಡ ತಿಳಿವಳಿಕೆ ನೀಡುತ್ತದೆ.


 ವಾಣೀಜ್ಯೀಕರಣ ಮತ್ತು ಕೈಗಾರಿಕರಣಕ್ಕೆ ತುತ್ತಾಗಿರು ಕೃಷಿಯಿಂದ ಮಹಿಳಾ ಕೃಷಿಕರು ಕಣ್ಮರೆಯಾಗುತ್ತಿದ್ದಾರೆ. ಭಾರತವು ಇದಕ್ಕೆ ಹೊರತಲ್ಲ. ಭಾರತದ ಶೂನ್ಯಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಗಳು ಇದನ್ನು ಬದಲಾಯಿಸಿವೆ (ಸಮುದಾಯ ನಿರ್ವಹಣೆಯ ನೈಸರ್ಗಿಕ ಕೃಷಿ ಎಂದು ಹೇಳಲಾಗುತ್ತದೆ). ಇದನ್ನು ಮಿಲಿಯನ್‌ಗಟ್ಟಲೇ ಸಣ್ಣರೈತರು ಅಳವಡಿಸಿಕೊಂಡಿದ್ದಾರೆ. ಸಾಲ, ಭೂಮಿ ಅಥವ ವಾಣಿಜ್ಯ ಬೀಜಗಳು ಇವೆಲ್ಲ ಮಹಿಳೆಯರಿಗೆ ಸಿಗುವುದು ಕಷ್ಟ. ಆದರೆ ನೈಸರ್ಗಿಕ ಕೃಷಿಯಿಂದ ಇಂದು ಅವರು ಸಬಲ ಕೃಷಿಕರಾಗಿದ್ದಾರೆ. 

ತಮ್ಮ ಸಮುದಾಯಗಳ ನಡುವಿನ ಸಂಪರ್ಕ ಮತ್ತು ಸ್ವಸಹಾಯ ಸಂಘಗಳ ನೆರವಿನಿಂದ ಅವರು ಕೃಷಿಪರಿಸರವಿಜ್ಞಾನವನ್ನು ಹಳ್ಳಿಯಿಂದ ಹಳ್ಳಿಗೆ ಪಸರಿಸುತ್ತಿದ್ದಾರೆ. ಇದರಿಂದ ಕುಟುಂಬದ ಪೌಷ್ಟಿಕತೆ, ಆದಾಯ ಮತ್ತು ಮಣ್ಣಿನ ಆರೋಗ್ಯ ಉತ್ತಮಗೊಳ್ಳುವುದರ ಜೊತೆಗೆ ಸಮಾಜದಲ್ಲಿ ಅವರ ಕುರಿತು ಗೌರವ ಕೂಡ ಹೆಚ್ಚಾಗಿದೆ. ಅವರ ಪದ್ಧತಿಗಳಲ್ಲಿ ಸ್ತ್ರೀವಾದಿ ತರ್ಕವು ಸಾಂಪ್ರದಾಯಿಕ ಮಾರುಕಟ್ಟೆ ಲೆಕ್ಕಾಚಾರಗಳನ್ನು ಬದಲುಮಾಡಿದೆ. ಇದು ರಾಜಕೀಯ ಕರ್ಷಣ ಮತ್ತು ವಿವಾದಗಳಿಗೆ ಕೂಡ ಎಡೆಮಾಡಿಕೊಟ್ಟಿದೆ.

 ಆಂಧ್ರಪ್ರದೇಶದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಕೃಷಿಪರಿಸರವಿಜ್ಞಾನದ ತತ್ವಗಳನ್ನು ಹಳ್ಳಿಯಿಂದ ಹಳ್ಳಿಗೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ತಳಮಟ್ಟದಿಂದ ಬೆಳೆದ ಈ ಮಹಿಳಾ ಕೃಷಿಕರ ಚಳುವಳಿ ಇಲ್ಲದೇ ಹೋಗಿದ್ದಲ್ಲಿ ಈ ಪದ್ಧತಿಗಳನ್ನು ಇಷ್ಟು ತ್ವರಿತ ಗತಿಯಲ್ಲಿ ಹರಡುವುದು ಸಾಧ್ಯವಾಗುತ್ತಿರಲಿಲ್ಲ. ಇಂದು ಇದನ್ನು ೬೦೦,೦೦೦ ಮಂದಿ ಕೃಷಿಕರಿಗೆ ತಲುಪಿಸಲಾಗಿದೆ. ಈ ದಶಕದ ಕೊನೆಯ ವೇಳೆಗೆ ಇದನ್ನು ೬ ಮಿಲಿಯನ್‌ ರೈತರಿಗೆ ತಲುಪಿಸುವ ಉದ್ದೇಶವಿದೆ. ಈ ಕಾರ್ಯಕ್ರಮದ ಬಹುತೇಕ ಸಿಬ್ಬಂದಿಗಳು ಮತ್ತು ತರಬೇತಿದಾರರು ಮಹಿಳಾ ಕೃಷಿಕರು.

 ಅನಂತಪುರದಲ್ಲಿ ಭೂಮಿಯಿಲ್ಲದ ಹಲವಾರು ಮಂದಿ ಮಹಿಳಾ ಕೃಷಿಕರಿದ್ದಾರೆ. ಅವರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡ ರೈತರ ಹೆಂಡತಿಯರು. ಮತ್ತೆ ಕೆಲವರು ಮಾನವಸಾಗಾಣಿಕೆಯ ಜಾಲದಿಂದ ಬಿಡಿಸಿಕೊಂಡು ಬಂದವರು. ಇವರೆಲ್ಲರೂ ಜಾತಿತಾರತಮ್ಯಕ್ಕೆ ಒಳಗಾದವರು. ಅವರಲ್ಲೊಂದು ಗುಂಪು ಒಟ್ಟಾಗಿ ಬೀಳು ಬಿದ್ದ ಭೂಮಿಯನ್ನು ವಾಯಿದೆಯ ಅವಧಿಗೆ ತೆಗೆದುಕೊಳ್ಳಲು ಮುಂದಾದರು. ಈ ಮಹಿಳೆಯರು ತಮ್ಮ ಕೌಶಲಗಳನ್ನು, ತಿಳಿವಳಿಕೆಯನ್ನು, ಶ್ರಮವನ್ನು ತಮ್ಮಲ್ಲೇ ಹಂಚಿಕೊಂಡು ರಾಸಾಯನಿಕ ಮುಕ್ತ ಆಹಾರವನ್ನು ತಮ್ಮ ಕುಟುಂಬಗಳಿಗಾಗಿ ಬೆಳೆದುಕೊಳ್ಳುತ್ತಿದ್ದಾರೆ.  ತಮ್ಮ ಬಳಕೆಗೆ ಆಗಿ ಉಳಿದದ್ದನ್ನು ಕೃಷಿ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ತರಕಾರಿಗಳನ್ನು ಸೈಕಲ್‌ಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಈ ಪುಟ್ಟ ಉದ್ಯಮವು ಬೆಳೆದು ದೊಡ್ಡದಾಗುವುದನ್ನೇ ಕಾಯುತ್ತಿದ್ದಾರೆ. ಮಹಿಳೆಯರು ಕೃಷಿ ಕೆಲಸ ಮಾಡಲು ಒಟ್ಟಾಗಿ ರೋಟಾ ಸಿಸ್ಟಂ ಅನ್ನು ಅನುಸರಿಸುತ್ತಿದ್ದಾರೆ. ಈ ವಿಧಾನದ ಮೂಲಕ ಅವರು ಉತ್ಪಾದನೆ ಮತ್ತು ಮನೆಯ ಜವಾಬ್ದಾರಿ ನಿರ್ವಹಣೆ ಎರಡೂ ಸಾಧ್ಯವಾಗುತ್ತಿದೆ. ಇಲ್ಲಿ ಸ್ತ್ರೀವಾದಿ ತರ್ಕವು ಸಾಂಪ್ರದಾಯಿಕ ಮಾರುಕಟ್ಟೆ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಈ ಮಹಿಳೆಯರು ಕೃಷಿಯ ಸಮಯದಲ್ಲಿ ಒಬ್ಬರಿಗೊಬ್ಬರು ಅರ್ಧವೇತನವನ್ನು ಕೊಡುತ್ತಾರೆ. ಇದರಿಂದ ಕೊಯ್ಲಿಗೆ ಮುನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಹಣಕ್ಕೆ ಅಡಚಣೆಯಾಗುವುದಿಲ್ಲ. ಮುಂದುವರೆದ ಆರ್ಥಿಕ ವ್ಯವಸ್ಥೆಗಿಂತಲೂ ಕೃಷಿಪರಿಸರವಿಜ್ಞಾನವು ಆಹಾರ ಸಾರ್ವಭೌಮತ್ವ, ಸ್ವಾವಲಂಬನೆ ಮತ್ತು ಆತ್ಮಗೌರವವನ್ನು ಗಳಿಸಿಕೊಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ. 

ಕರ್ನಾಟಕದ ಗೊಟ್ಟಿಗೆಹಳ್ಳಿಯ ಸುಜಾತ ಮತ್ತು ಆಕೆಯ ಗಂಡ ಜಗದೀಶ್‌ ತಮ್ಮ ೪ ಎಕರೆ ಜಮೀನಿನಲ್ಲಿ ಕಳೆದ ಹತ್ತು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಮಾಡುತ್ತಿದ್ದಾರೆ. ರಾಸಾಯನಿಕ ಕೃಷಿಯಿಂದ ಇದಕ್ಕೆ ಬದಲಾಗುವುದು ಕಷ್ಟವಾಗಿತ್ತು ಎನ್ನುತ್ತಾರೆ ಸುಜಾತ. ಆದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಉಂಟುಮಾಡುವ ಆರೋಗ್ಯದ ಸಮಸ್ಯೆಗಳ ಅರಿವಾದ ಮೇಲೆ ಅವರು ಈ ಬದಲಾವಣೆಗೆ ಮುಂದಾದರು. ಈ ಅವರು ತಮ್ಮ ಜಮೀನಿನಲ್ಲಿ ಐದು ಹಂತದ ಮಾದರಿಯ ನೈಸರ್ಗಿಕ ಕೃಷಿಯನ್ನು ಮಾಡುತ್ತಿದ್ದಾರೆ. ಪರಿಸರದಲ್ಲಿ ತೋಟಕ್ಕಿಂತ ಕಾಡೇ ಹೆಚ್ಚಿರುವುದು. “ನಮ್ಮಲ್ಲಿ ೨೦೦ಕ್ಕೂ ಹೆಚ್ಚು ವಿಧದ ಮರಗಳಿವೆ” ಎಂದು ಜಗದೀಶ್‌ ಹೇಳುತ್ತಾರೆ. ಬಾಳೆ, ಹಲಸು, ತೆಂಗು, ಸೀಬೆ, ಗೆಣಸು, ದ್ವಿದಳ ಧಾನ್ಯಗಳು ಮತ್ತು ನಿಂಬೆಹಣ್ಣನ್ನು ಬೆಳೆಯುತ್ತಿದ್ದಾರೆ. ತಮ್ಮ ಜಮೀನಿನ ತಗ್ಗು ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಕಾಫಿ ಕೂಡ ಬೆಳೆಯುತ್ತಿದ್ದಾರೆ. ಕೋಳಿಗಳು ಮತ್ತು ಮೇಕೆಗಳು ಸಾಕಷ್ಟಿವೆ. ಸ್ವಿಲರ್‌ ಓಕ್‌ ಮತ್ತು ನುಗ್ಗೆ ನೈಸರ್ಗಿಕ ಬೇಲಿಯನ್ನು ರೂಪಿಸಿದೆ. ಈ ಮರಗಳು ಎಲೆಗಳನ್ನು ಉದುರಿಸಿದಾಗ ಅವು ಪಾತಿಗಳಿಗೆ ಹೊದಿಕೆಯಾಗಿ ಮಣ್ಣಿನ ತೇವಾಂಶವನ್ನು ಕಾಪಾಡುತ್ತಿದೆ.

 ಈ ಪುಟದಲ್ಲಿನ ಫೋಟೋಗಳನ್ನು ತೆಗೆದವರು ಸೌಮ್ಯ ಶಂಕರ್‌ ಬೋಸ್.‌ ಅಮೃತ ಅವರು ಅದರ ವಿವರಣೆಯನ್ನು ಬರೆದಿರುವರು. ಇವರು ಆಗ್ರೋಇಕಾಲಜಿ ಫಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವರು.

ಅವರ ಮಿಂಚಂಚೆ ವಿಳಾಸ : amrita.agroecologyfund@gmail.com

ಈ ಫೋಟೊ ಸ್ಟೋರಿಯನ್ನು ಅವರು ಫೆಬ್ರವರಿ ೨೦೨೦ರಲ್ಲಿ ಒಂದು ವಾರದ ಮಟ್ಟಿಗೆ ನಡೆದ ಕಲಿಕಾ ವಿನಿಮಯ ಕಾರ್ಯಾಗಾರದಲ್ಲಿ ಅವರು ಮಾಡಿದ ಕ್ಷೇತ್ರ ಭೇಟಿ ಮತ್ತು ಕಾರ್ಯಾಗಾರದ ಆಧಾರದ ಮೇಲೆ ರಚಿಸಿದ್ದಾರೆ. ಈ ಕಾರ್ಯಾಗಾರದಲ್ಲಿ ೩೦ ದೇಶಗಳ ಸರಿಸುಮಾರು ನೂರು ಮಂದಿ ಕೃಷಿಪರಿಸರ ವಿಜ್ಞಾನವನ್ನು ಅಭ್ಯಸಿಸುತ್ತಿರುವವರು, ವಕೀಲರು, ಸಂಶೋಧಕರು ಮತ್ತು ನೀತಿರೂಪಕರು ಭಾಗವಹಿಸಿದ್ದರು.

ನಿಸರ್ಗ ಸಾವಯವ ಕೃಷಿಕರ ಸಂಘವು ಕರ್ನಾಟಕದ ಹೊನ್ನೂರಿನಲ್ಲಿರುವ ಸ್ವಸಹಾಯ ಸಂಘ. ಇದರ ಎಲ್ಲ ಸದಸ್ಯರು ವರ್ಗ ಮತ್ತು ಜಾತಿ ಅಸಮಾನತೆಯನ್ನು ಬದಿಗಿರಿಸಿ ಒಟ್ಟಾಗಿ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯು ಜನಪ್ರಿಯವಾಗಿದ್ದು ರಾಜಕೀಯ ಸವಾಲುಗಳನ್ನು ಮತ್ತು ವಿವಾದಗಳನ್ನು ತಂದೊಡ್ಡಿದೆ. ಈ ಮಾದರಿಯಲ್ಲಿ ಸಗಣಿ ಗೊಬ್ಬರ ಮತ್ತು ಗಂಜಲವನ್ನು ಮಣ್ಣಿನಲ್ಲಿನ ಜೀವಾಣುಗಳ ಹೆಚ್ಚಳಕ್ಕೆ ಬಳಸಲಾಗುತ್ತದೆ. ಇಲ್ಲಿ ಎದುರಾಗಿರುವ ಪ್ರಮುಖ ಸವಾಲೆಂದರೆ ಉಗ್ರ ಹಿಂದುತ್ವವಾದಿಗಳು ಗೋವು ಪವಿತ್ರ ಅದರ ಹತ್ಯೆ ಮಾಡಬಾರದು ಎಂದು ಪ್ರತಿಪಾದಿಸುವವರು ಈ ಪದ್ಧತಿಗಳತ್ತ ಬೊಟ್ಟುಮಾಡಿ ಅದಕ್ಕೆ ರಾಜಕೀಯದ ಬಣ್ಣ ಬಳಿಯುತ್ತಿದ್ದಾರೆ. ಈ ರೀತಿಯ ನಿಲುವುಗಳು ಗೋವನ್ನು ಆಹಾರ ಮತ್ತಿತರ ಕಾರಣಗಳಿಗೆ ಅವಲಂಭಿಸಿರುವ ಭಾರತದಲ್ಲಿ ಮುಸ್ಲಿಂರು ಮತ್ತಿತರ ಅಲ್ಪಸಂಖ್ಯಾತರನ್ನು ಅಪರಾಧಿಗಳಂತೆ ಬಿಂಬಿಸುತ್ತಿವೆ. ಈ ರೀತಿಯ ನಡೆಯಿಂದಾಗಿ ಈ ವಿಧಾನವನ್ನು ಇನ್ನೂ ಅಳವಡಿಸಿಕೊಳ್ಳದ ಸಮುದಾಯಗಳು ಅವುಗಳಿಂದ ಹೊರಗುಳಿಯುವ ಅಪಾಯವಿದೆ ಎಂದು ಕೆಲ ವಿಮರ್ಶಕರು ಹೇಳುತ್ತಿದ್ದಾರೆ. ಕುಲಾಂತರಿ ಬೀಜಗಳ ಬಳಕೆ ಕುರಿತು ಮತ್ತೊಂದು ಪ್ರಶ್ನೆ ಎದ್ದಿದೆ. ಆಂಧ್ರ ಪ್ರದೇಶ ಸರ್ಕಾರವು ಈ ವಿಧಾನದಲ್ಲಿ ಕುಲಾಂತರಿ ಹಾಗೂ ಹೈಬ್ರಿಡ್‌ ಬೀಜಗಳ ಬಳಕೆಯನ್ನು ನಿಷೇಧಿಸಿದೆ. ಉಳಿದ ಗುಂಪುಗಳು ಇದನ್ನು ಬಳಸುತ್ತಿವೆ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಗಳು ಒಳ್ಳೆಯ ಫಲಿತಾಂಶವನ್ನು ನೀಡುತ್ತಿದ್ದರೂ ಕೂಡ  ಕೈಗಾರಿಕೆಯ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಸಾಧ್ಯವೇ ಎನ್ನುವ ಅನುಮಾನಗಳಿವೆ. ಬಿಟಿ ಹತ್ತಿಯನ್ನು ಅವಲಂಭಿಸಿರುವ ಕೈಗಾರಿಕೆಗಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು.

ಪ್ರಪಂಚದಲ್ಲಿ ಬೈಯಮ್ಮ ರೆಡ್ಡಿಯಂತಹ ಮಹಿಳೆಯರೇ ದೇಸಿ ಬೀಜಗಳ ನಿಜವಾದ ಸಂರಕ್ಷಕರು. ಅವರಿಗಿರುವ ಪಾರಂಪರಿಕ ತಿಳಿವಳಿಕೆಯು ಮಹತ್ತರವಾದುದು. ಬೈಯಮ್ಮನ ಮಕ್ಕಳು ಓದನ್ನು ನಿಲ್ಲಿಸಿದ ನಂತರ ಆಕೆ ತನ್ನ ಮನೆಯ ಹತ್ತಿರವಿದ್ದ ತನ್ನ ಜಮೀನಿನಲ್ಲಿ ನೈಸರ್ಗಿಕ ಕೃಷಿಯನ್ನು ಆರಂಭಿಸಿದಳು. ತನಗೆ ತಲೆಮಾರುಗಳಿಂದ ದತ್ತವಾಗಿ ಬಂದಿದ್ದ ತಿಳಿವಳಿಕೆ ಮತ್ತು ಕೌಶಲ್ಯವನ್ನು ಕೃಷಿಯಲ್ಲಿ ಬಳಸಿಕೊಂಡಳು.  ಆಕೆ ಆಂಧ್ರಪ್ರದೇಶದ ಬಾಳಕಬ್ರಿ ಪಲ್ಲಿಯವಳು. ಇದು ದೇಶದ ಬರಪೀಡಿತ ಪ್ರದೇಶಗಳಲ್ಲೊಂದು. ಈ ಪ್ರದೇಶದಲ್ಲಿ ಹೆಚ್ಚಿನ ನೀರಾವರಿಯನ್ನು ಹಾಗೂ ದುಬಾರಿ ಒಳಸುರಿಯುವಿಕೆಗಳನ್ನು  ಬೇಡುವಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಅಸಾಧ್ಯ. ಆಹಾರದಲ್ಲಿ ವೈವಿಧ್ಯ ಮತ್ತು ಬೆಳೆನಷ್ಟದ ಅಪಾಯವನ್ನು ತಡೆಯಲು ಆಕೆ ಮತ್ತು ಆಕೆಯ ಗಂಡ ಸಾಂಪ್ರದಾಯಿಕ ಪದ್ಧತಿಯಾದ ನವಧಾನ್ಯ (ಒಂಭತ್ತು ಕಾಳುಗಳು ಮತ್ತು ಕಿರುಧಾನ್ಯಗಳ ಬಿತ್ತನೆ)ಗಳನ್ನು ಮಳೆಗಾಲಕ್ಕೆ ಮೊದಲು ಬಿತ್ತನೆ ಮಾಡುತ್ತಾರೆ.

 ಕವಿತ ಕುರುಗಂಟಿ ಆಶಾ ಎನ್ನುವ ಸುಸ್ಥಿರ ಮತ್ತು ಸಮಗ್ರ ಕೃಷಿ ಸಂಸ್ಥೆಯ ಸಂಸ್ಥಾಪಕಿ. ಆಕೆ ರಾಷ್ಟ್ರಮಟ್ಟದ ಮಕ್ಕಂ ಎನ್ನುವ ಸಂಸ್ಥೆಯೊಂದಿಗೂ ಸಂಬಂಧ ಹೊಂದಿದ್ದಾರೆ. ಇದರಲ್ಲಿ ೨೪ ರಾಜ್ಯಗಳ  ೧೨೦ ಕ್ಕೂ ಹೆಚ್ಚು ಮಂದಿ, ಮಹಿಳಾ ಕೃಷಿಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಭಾರತದಲ್ಲಿನ ಮಹಿಳಾ ಕೃಷಿಕರ ಹಕ್ಕುಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಕವಿತಾ ಅವರು ಸಾಂಪ್ರದಾಯಿಕವಾಗಿ ಮಹಿಳೆಯರನ್ನು ಬಿತ್ತನೆ, ಕಳೆ ಕೀಳುವುದು ಮತ್ತು ಕೊಯ್ಲಿನಂತಹ ಶ್ರಮದಾಯಕ ಕೆಲಸಗಳಲ್ಲಿ ಹೇಗೆ ಬಳಸಿಕೊಳ್ಳುತ್ತಿದ್ದರು ಎಂದು ವಿವರಿಸಿದ್ದಾರೆ. “ಕೃಷಿಯು ಮಾರುಕಟ್ಟೆ, ಕೈಗಾರಿಕೆ, ಯಂತ್ರಗಳನ್ನು ಆಧರಿಸಲು ತೊಡಗಿದಾಗಿನಿಂದ ಪುರುಷರೇ ನಿರ್ಧಾರ ತೆಗೆದುಕೊಳ್ಳಲಾರಂಭಿಸಿದ್ದಾರೆ” ಎಂದು ಆಕೆ ಹೇಳುತ್ತಾರೆ. ಕೃಷಿ ಪರಿಸರ ವಿಜ್ಞಾನವನ್ನು ಅನುಸರಿಸುವುದರಿಂದ ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವ ತಮ್ಮ ಹಕ್ಕನ್ನು ಮತ್ತೆ ಪಡೆಯುತ್ತಾರೆ.

ಸೌಮ್ಯ ಶಂಕರ್ಬೋಸ್ಮತ್ತು ಅಮೃತ ಗುಪ್ತಾ ಅವರ ಫೋಟೊಸ್ಟೋರಿ


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧, ಸಂಚಿಕೆ : 4 ; ಡಿಸೆಂಬರ್ 2020

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp