ಸಂಕಲ್ಪತರು ಪರಿಸರದೊಂದಿಗೆ ತಂತ್ರಜ್ಞಾನವನ್ನು ವಿನೂತನ ರೀತಿಯಲ್ಲಿ ಬೆಸೆದಿದೆ. ಗಿಡಗಳನ್ನು ನೆಡಲು ಸಮಯ ಮತ್ತು ಸ್ಥಳದ ಅಭಾವವಿರುವವರು ಇದರ ಮೂಲಕ ಪರಿಸರಕ್ಕೆ ತಮ್ಮಸೇವೆಯನ್ನು ಸಲ್ಲಿಸಬಹುದಾಗಿದೆ. ಇದರ ಮೂಲಕ ವ್ಯಕ್ತಿಗಳನ್ನು ಪರಿಸರದೊಂದಿಗೆ ಬೆಸೆಯುವುದರೊಂದಿಗೆ ಗ್ರಾಮೀಣ ಸಮುದಾಯಗಳ ಬದುಕು ಉತ್ತಮಗೊಳ್ಳಲು ಸಹಕಾರಿಯಾಗಿದೆ.

ಮಹಾರಾಷ್ಟ್ರದ ರೈತನು ಸೀತಾಫಲ ಮತ್ತು ಸೀಬೆಕಾಯಿ ಮರಗಳನ್ನು ತನ್ನ ತೋಟದಲ್ಲಿ ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾನೆ
ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆಮಾಡಲು ನಾಗರೀಕರನ್ನು ಪರಿಸರ ಸಂರಕ್ಷಣೆಯ ಕಡೆಗೆ ಕರೆದೊಯ್ಯಲು ೨೦೧೧ರಲ್ಲಿ ಸಂಕಲ್ಪತರು ಹುಟ್ಟಿಕೊಂಡಿತು. ಎಂಬಿಎ ಪದವೀಧರರಾದ ಶ್ರೀ ಅಪೂರ್ವ ಭಂಡಾರಿಯವರು ಹಲವು ವರ್ಷಗಳ ಕಾಲ ಐಟಿ ವಲಯದಲ್ಲಿ ಸೇವೆಸಲ್ಲಿಸಿದವರು. ಅವರು ತಮ್ಮ ಪರಿಸರ ಪ್ರೇಮ ಮತ್ತು ತಂತ್ರಜ್ಞಾನವನ್ನು ಬದುಕನ್ನು ಹಸನುಗೊಳಿಸಲು ಬಳಸಲು ಬಯಸಿದರು. ಅವರ ಯೋಜನೆಯ ಉದ್ದೇಶ ಮರಗಳನ್ನು ನೆಡುವ ಮೂಲಕ ಆರೋಗ್ಯಕರವಾದ ಸ್ವಚ್ಛವಾದ ಹಸಿರು ಪರಿಸರವನ್ನು ನಿರ್ಮಿಸುವುದು. ಇದರಿಂದ ಭೂಮಿಯ ಮೇಲಿನ ಜೀವ ಹಾಗೂ ಸಸ್ಯ ವೈವಿಧ್ಯತೆಯು ಹೆಚ್ಚುತ್ತದೆ. ಇದರಿಂದ ಗ್ರಾಮೀಣ ಸಮುದಾಯಗಳಿಗೆ ನೆರವಾಗುತ್ತದೆ.
ಸಂಕಲ್ಪತರು ವೆಬ್‌ಸೈಟ್ ೨೦೧೨ರಲ್ಲಿ ಆರಂಭವಾಯಿತು. ೨೦೧೩ರಲ್ಲಿ ಇದರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಯಾಯಿತು. ೨೦೧೪ರ ವೇಳೆಗೆ ಈ ಸಂಸ್ಥೆಯು ೬ ಭಾರತೀಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವಂತಾಯಿತು. ಇದರಲ್ಲಿ ಲೇಹ್ ಲಡಾಕ್ ಕೂಡ ಸೇರಿದೆ. ವಿವಿಧ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತಾ ಸಂಕಲ್ಪತರು ತನ್ನ ಹಸಿರುಹೆಜ್ಜೆಗಳನ್ನು ಸುಮಾರು ೧೮ ರಾಜ್ಯಗಳಲ್ಲಿ ಪಡಿಮೂಡಿಸಿದೆ. ಅರ್ಧಮಿಲಿಯನ್ ಮರಗಳನ್ನು ಯಶಸ್ವಿಯಾಗಿ ನೆಡಲಾಗಿದೆ.
ಗ್ರಾಮೀಣರ ಬದುಕಿಗೆ ನೆರವು
ಗ್ರಾಮೀಣ ಭಾಗದ ರೈತರಿಗೆ ಹಣ್ಣು ಮತ್ತು ಮೇವನ್ನು ನೀಡುವ ಮರಗಳನ್ನು ಬೆಳೆಸಲು ನೆರವು ನೀಡಲಾಗುತ್ತದೆ. ಇದರಿಂದ ಅವರ ಜೀವನಮಟ್ಟ ಸುಧಾರಿಸುತ್ತದೆ. ಈ ಮರಗಳು ಮಹಿಳೆಯರ ಸಬಲೀಕರಣ, ಸ್ವಾತಂತ್ರ್ಯವನ್ನು ನೀಡುತ್ತದೆ. ಆಯಾ ಪ್ರದೇಶಗಳ ಜೀವವೈವಿಧ್ಯತೆಯನ್ನು ಹೆಚ್ಚಿಸುವುದರೊಂದಿಗೆ ಬಡತನ ನಿರ್ಮೂಲನೆ ಮಾಡಲು ನೆರವಾಗುತ್ತದೆ. ಇದರೊಂದಿಗೆ ಬರಡುಭೂಮಿಯಲ್ಲಿ ಹಸಿರುವಲಯದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮರಗಳನ್ನು ನೆಡಲು ಇಂತಹ ಬಂಜರುಭೂಮಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರ ಮುಖ್ಯ ಉದ್ದೇಶ ಇಂತಹ ಕಡೆಯಲ್ಲಿ ಹಸಿರು ಪರಿಸರ ಸೃಷ್ಟಿ ಮತ್ತು ಹಣ್ಣಿನ ಮರಗಳನ್ನು ಬೆಳೆಯಲು ರೈತರಿಗೆ ನೆರವು ನೀಡಿ ಅವರ ಜೀವನಮಟ್ಟವನ್ನು ಉತ್ತಮಗೊಳಿಸುವುದು.
೨೦೧೫ರಲ್ಲಿ ಭಾರತ ಸರ್ಕಾರದ ಥಾರ್ ಮರಭೂಮಿಯಲ್ಲಿ ಗಿಡನೆಡುವ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಸಂಕಲ್ಪತರು ಫೌಂಡೇಶನ್ ಬರ್ಮೆರ್ ಮತ್ತು ಜೈಸ್ಲಮೇರ್ ಜಿಲ್ಲೆಗಳಲ್ಲಿ ಕೆಲಸ ಮಾಡಲು ಆರಂಭಿಸಿತು. ಈ ಕಾರ್ಯಕ್ರಮದ ಉದ್ದೇಶ ಬಡರೈತರಿಗೆ ದಾಳಿಂಬೆ, ನಿಂಬೆ ಮೊದಲಾದ ಗಿಡಗಳನ್ನು ಬೆಳೆದು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ನೆರವುನೀಡುವುದು. ಈ ಕ್ರಮದಿಂದಾಗಿ ಈ ವಲಯದಲ್ಲಿ ಹಸಿರು ಪರಿಸರ ನಿರ್ಮಾಣವಾಗುವುದರೊಂದಿಗೆ ಬಡರೈತರ ಬದುಕು ಸುಧಾರಿಸಿತು. ಗ್ರೀನ್‌ಲ್ಯಾಮ್ ಲ್ಯಾಮಿನೇಟ್ಸ್ ಅವರ ಸಹಯೋಗದೊಂದಿಗೆ ರಾಜಸ್ಥಾನದ ಢಾಕಾ ಜಿಲ್ಲೆಯ ೫ ರೈತರ ತೋಟಗಳಲ್ಲಿ ೫,೦೦೨ ದಾಳಿಂಬೆ ಸಸಿಗಳನ್ನು ನೆಡಲಾಯಿತು. ಇದರೊಂದಿಗೆ ಆ ಪ್ರದೇಶದ ಸಮುದಾಯಕ್ಕೆ ಸೇರಿದ ಭೂಪ್ರದೇಶಗಳಲ್ಲಿ ಮತ್ತು ಶಾಲೆಗಳಲ್ಲೂ ಸಸಿಗಳನ್ನು ನೆಡಲಾಯಿತು.
ಸಂಜೀವಿನಿ ಎನ್ನುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿಯಲ್ಲಿ ಲೇಹ್ ಲಡಾಕ್ ಮತ್ತು ರಾಜಸ್ಥಾದ ಥಾರ್ ಮರುಭೂಮಿಯಲ್ಲಿ ಸುಮಾರು ೧೬,೦೦೦ ಹಣ್ಣಿನ ಮರಗಳು, ನೆರಳು ನೀಡುವ ಮರಗಳು ಮತ್ತು ಮೇವನ್ನು ನೀಡಬಲ್ಲ ಮರಗಳನ್ನು ಸಮುದಾಯಕ್ಕೆ ಸೇರಿದ ಭೂಮಿಗಳಲ್ಲಿ, ಹಲವಾರು ರೈತರ ಜಮೀನುಗಳಲ್ಲಿ ನೆಡಲಾಯಿತು. “ಹಳ್ಳಿಗರ ಕಾಡು ಹಳ್ಳಿಗಾಗಿ” ಎನ್ನುವ ಘೋಷಣೆಯೊಂದಿಗೆ ಸಮುದಾಯದ ಸದಸ್ಯರು ಆ ಮರಗಳ ಪೋಷಣೆ ಮಾಡಿದರು. ಈ ಯೋಜನೆಯು ಸ್ಥಳೀಯರ ಬದುಕನ್ನು ಸುಧಾರಿಸಿ ಮಹಿಳೆಯರ ಸಬಲೀಕರಣಕ್ಕೆ ನೆರವು ನೀಡಿತು.
ದಕ್ಷಿಣದಲ್ಲಿ ಫೌಂಡೇಶನ್ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ತಲುಪುಲ ಹಳ್ಳಿಯಲ್ಲಿ ಕೆಲಸ ಮಾಡಿತು. ಈ ಭಾಗದ ಜನರು ತೀವ್ರ ಬರ ಮತ್ತು ಬೆಳೆ ಬೆಳೆಯಲು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರು. ಈ ಭಾಗದಲ್ಲಿ ಬೆಳೆ ನಷ್ಟ ಮತ್ತು ಸೂಕ್ತ ಮಾರುಕಟ್ಟೆ ದರಗಳು ದೊರಕದೆ ರೈತರ ಆತ್ಮಹತ್ಯೆಗಳು ಹೆಚ್ಚು. ಅರಣ್ಯಕೃಷಿಯ ಮೂಲಕ ಇಲ್ಲಿ ೫೦೦೦೦ ಮರಗಳನ್ನು ನೆಡಲಾಯಿತು. ಇದು ಹಳ್ಳಿಗರ ಬದುಕು ಮತ್ತು ಆದಾಯಕ್ಕೊಂದು ಸುಸ್ಥಿರತೆಯನ್ನು ತಂದುಕೊಟ್ಟಿತು. ಅದೇ ರೀತಿ ಮಹಾರಾಷ್ಟ್ರದ ಸತಾರ ಮತ್ತು ಬುಲಧಾನ ಜಿಲ್ಲೆಗಳಲ್ಲಿ ೧೨,೫೦೦ ಮರಗಳನ್ನು ಆಯ್ದ ರೈತರ ಜಮೀನುಗಳಲ್ಲಿ ನೆಡಲಾಯಿತು.
ನಗರ ಪ್ರದೇಶದಲ್ಲಿ ಹಸಿರು ಪರಿಸರ
ವಸತಿ ಪ್ರದೇಶಗಳಲ್ಲಿ ಮತ್ತು ಶಾಲೆಗಳಲ್ಲಿ ವಾಯುಮಾಲಿನ್ಯವನ್ನು ತಗ್ಗಿಸಲು ಹಸಿರನ್ನು ಹೆಚ್ಚಿಸುವ ಸಲುವಾಗಿ ಮರಗಳನ್ನು ನೆಡಲಾಯಿತು. ಈ ಗಿಡನೆಡುವ ಕಾರ್ಯಕ್ರಮದ ಮುಖ್ಯ ಉದ್ದೇಶ ದೇಶದ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಗ್ಗಿಸುವುದು. ಇದಕ್ಕಾಗಿಯೇ ವಸತಿಪ್ರದೇಶಗಳಲ್ಲಿ ೨೫,೦೦೦ ಮರಗಳನ್ನು ನೆಡಲಾಯಿತು. ಈ ಕಾರ್ಯಕ್ರಮವು ನಗರದ ಜನತೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಿ ಗಿಡಗಳ ಕಾಳಜಿ ವಹಿಸುವಂತೆ ಮಾಡಿತು. ಈ ಪ್ರಯತ್ನವು ಯಶಸ್ವಿಯಾಗಿ ಆ ನಗರಗಳಲ್ಲಿನ ಇಂಗಾಲದ ಪ್ರಮಾಣವನ್ನು ತಗ್ಗಿಸಿ ಹಸಿರನ್ನು ಹೆಚ್ಚಿಸಿತು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಲುಪುಲದಲ್ಲಿ ೫೦,೦೦೦ಕ್ಕೂ ಹೆಚ್ಚು ಮರಗಳನ್ನು ಇಲ್ಲಿನ ರೈತರ ಕುಟುಂಬಗಳಿಗೆ ಸುಸ್ಥಿರ ಆದಾಯ ಒದಗಿಸಲು ನೆಡಲಾಯಿತು.

ಫೋಟೊ : ಹರಿಯಾಣದ ಪಂಚಗಾಂವ್‌ನ ಸಂಕಲ್ಪತರು ಫೌಂಡೇಶನ್ನಿನಲ್ಲಿ ಶಾಲಾ ವಿದ್ಯಾರ್ಥಿಗಳು ಸ್ವಚ್ಛ ಮತ್ತು ಹಸಿರು ಶಾಲೆ ಕಾರ್ಯಕ್ರಮದಡಿ ಗಿಡಗಳನ್ನು ನೆಟ್ಟರು
ಪರಿಸರದ ಸುಸ್ಥಿರ ಅಭಿವೃದ್ಧಿಯ ಕುರಿತು ಕಾಳಜಿ ಹೊಂದಿರುವ ಎನ್‌ಇಸಿ ಟೆಕ್ನಾಲಜೀಸ್‌ನವರು ಸಂಕಲ್ಪತರುವಿನೊಂದಿಗೆ ಕೂಡಿ ಭೂಮಿಯನ್ನು ಸಂರಕ್ಷಿಸಿ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡರು. ಇದರ ಉದ್ದೇಶ ಭೂಮಿಯನ್ನು ಹಸಿರಾಗಿ ಸ್ವಚ್ಛವಾಗಿಡುವುದು. ಇದರ ಅಂಗವಾಗಿ ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ೬೦೦ ಹಣ್ಣಿನ ಮರಗಳನ್ನು ನೆಟ್ಟರು. ಈ ಕೇಂದ್ರದಲ್ಲಿರುವವರಿಗೆ ಇದೊಂದು ಪ್ರೋತ್ಸಾಹಯದಾಯಕ ಮಾದರಿಯಾಯಿತು. ಉದ್ಯಾನ ನಗರಿಯ ಪರಿಸರಕ್ಕೆ ಕೊಡುಗೆ ನೀಡಿತು.
ಪುಣೆಯ ವಸತಿ ಪ್ರದೇಶದಲ್ಲಿ ೮೫ ದೇಸಿ ತಳಿಗಳ ಮರಗಳನ್ನು ನೆಡಲಾಯಿತು. ಉತ್ಸಾಹಿ ನಿವಾಸಿಗಳು ಮಕ್ಕಳು, ಮಹಿಳೆಯರಾದಿಯಾಗಿ ಎಲ್ಲರೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಾವು ನೆಟ್ಟ ಗಿಡಗಳನ್ನು ಕಾಳಜಿ ವಹಿಸಿ ಬೆಳೆಸಿದರು.
ಮಕ್ಕಳಿಗೆ ಶಿಕ್ಷಣ
ಸ್ವಚ್ಛ ಮತ್ತು ಹಸಿರು ಶಾಲಾ ಯೋಜನೆಯ ಉದ್ದೇಶ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದು. ಕಾರ್ಯಾಗಾರಗಳು, ಶೈಕ್ಷಣಿಕ ಚಿತ್ರಗಳ ಪ್ರದರ್ಶನ ಮೊದಲಾದ ಚಟುವಟಿಕೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು ಪಾಲ್ಗೊಂಡರು. ಅವರಿಗೆ ಪರಿಸರವ್ಯವಸ್ಥೆಯನ್ನು ಉಳಿಸಿಕೊಳ್ಳಲು ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.
ಟೆಕ್ ಇಂಡಿಯಾದ ಸಹಯೋಗದೊಂದಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶಗಳ ಮುನಿಸಿಪಲ್ ಕಾರ್ಪೊರೇಷನ್ ಶಾಲೆಗಳಲ್ಲಿ ಸಮಗ್ರ ಪರಿಸರ ಶಿಕ್ಷಣ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಟಾಟಾ ಪವರ್‌ನವರ ನೆರವಿನೊಂದಿಗೆ ೮ ರಾಜ್ಯಗಳಲ್ಲಿನ ವಿವಿಧ ಶಾಲೆಗಳಲ್ಲಿ ೫,೦೦೦ ಮರಗಳನ್ನು ನೆಡಲಾಯಿತು. ಇದರಲ್ಲಿ ೬,೦೦೦ ವಿದ್ಯಾರ್ಥಿಗಳು ಪಾಲ್ಕೊಂಡಿದ್ದರು. ತಾವು ನೆಟ್ಟ ಸಸಿಗಳನ್ನು ಬೆಳೆಸುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದರೊಂದಿಗೆ ತಮ್ಮ ಶಾಲೆಯ ಆವರಣವನ್ನು ಸ್ವಚ್ಛವಾಗಿ ಹಸಿರಾಗಿ ಇಟ್ಟುಕೊಳ್ಳುವ ಶಿಕ್ಷಣ ನೀಡಲಾಯಿತು.
ಸಂಕಲ್ಪತರು ಫೌಂಡೇಶನ್ ಮತ್ತು ಕೈರ್ನ್ ಇಂಡಿಯಾದೊಂದಿಗೆ ಬರ್ಮರ್‌ನ ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಾಗಾರವನ್ನು ಏರ್ಪಡಿಸಿತು. ಅವರ ಸ್ವಚ್ಛ ಮತ್ತು ಹಸಿರು ಶಾಲಾ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ನೀರು ಕೊಯ್ಲಿನ ಬಗ್ಗೆ ಶಿಕ್ಷಣ ನೀಡಲಾಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಪರಿಸರ ಸಂರಕ್ಷಣೆಯ ತಂತ್ರಗಳನ್ನು ಕಲಿತರು.
ಸಮುದಾಯದ ಭೂಮಿಯ ಪುನಶ್ಚೇತನ
ಸಮುದಾಯಕ್ಕೆ ಸೇರಿದ ಬಂಜರು ಭೂಮಿಯನ್ನು ಹಸಿರಾಗಿಸಲು ಗಿಡಗಳನ್ನು ನೆಡಲಾಯಿತು. ಸಮುದಾಯದ ಸದಸ್ಯರು ಮರಗಳನ್ನು ಬೆಳೆಸಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವಂತೆ ಮಾಡಲಾಯಿತು.
ದೆಹಲಿಯ ಎನ್‌ಸಿಆರ್ ವಲಯದ ಅರವಳ್ಳಿ ಕಾಂಕ್ರೀಟ್ ಕಾಡಾಗಿದ್ದು ಅಲ್ಲಿನ ಹಸಿರು ವಲಯವನ್ನು ನಾಶಗೊಳಿಸಿ ಬಂಜರು ಭೂಮಿಯಾಗಿಸಲಾಗಿದೆ. ರಿಯೊ ಟಿನ್ಟೊ ಮತ್ತು ಸಂಕಲ್ಪತರು ಒಟ್ಟಾಗಿ ಭವನಂ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡು ಈ ಪ್ರದೇಶದ ಹಸಿರನ್ನು ಪುನಶ್ಚೇತನಗೊಳಿಸಲಾಯಿತು. ಅರವಳ್ಳಿ ಶ್ರೇಣಿಯಲ್ಲಿ ಎರಡು ಸಾವಿರ ದೇಸಿ ತಳಿಗಳನ್ನು ನೆಡಲಾಯಿತು. ಆ ಮೂಲಕ ದೆಹಲಿಯ ಸುತ್ತಮುತ್ತಲ ರಾಷ್ಟ್ರೀಯ ರಾಜಧಾನಿಯ ಪ್ರದೇಶಗಳ ನೈಸರ್ಗಿಕ ಪರಿಸರವನ್ನು ಬಲಗೊಳಿಸಲಾಯಿತು.
೨೦೧೬ರಲ್ಲಿ ಉತ್ತರಾಖಾಂಡದಲ್ಲಿ ಸಂಭವಿಸಿದ ಕಾಳ್ಗಿಚ್ಚಿನಲ್ಲಿ ಆದ ನಷ್ಟಕ್ಕೆ ಪರಿಹಾರವಾಗಿ ದೇಸಿತಳಿಗಳ ಮರಗಳನ್ನು ನೆಡಲಾಯಿತು. ಈ ಕಾರ್ಯಕ್ರಮವನ್ನು ಸ್ಥಳೀಯರ ಅಗತ್ಯಗಳ ಪೂರೈಕೆಗೆ ತಕ್ಕಂತೆ ಹಾಗೂ ಜೀವವೈವಿಧ್ಯತೆಯನ್ನು ಹೆಚ್ಚಿಸಲು ಅನುವಾಗುವಂತೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮ ಆರಂಭವಾದಾಗಿನಿಂದ ಇಲ್ಲಿಯವರೆಗೆ ಹಿಮಾಲಯ ಪ್ರದೇಶದ ನೈಸರ್ಗಿಕ ಪರಿಸರವು ಪುನಶ್ಚೇತನಗೊಂಡಿದ್ದು ಸ್ಥಳೀಯರಲ್ಲಿ ಕಾಳ್ಚಿಚ್ಚನ್ನು ತಡೆಯುವ ಕ್ರಮಗಳ ಕುರಿತು ಅರಿವು ಮೂಡಿದೆ.
ಕ್ರಮಿಸಬೇಕಾದ ಹಾದಿ
ಪ್ರಸ್ತುತದಲ್ಲಿ ಸಂಕಲ್ಪತರು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿ ಭೂಮಿಗೆ ಸೇವೆ ಸಲ್ಲಿಸುವ ಹಾದಿಯಲ್ಲಿ ನಿಂತಿದೆ. ಬೀಜಯಾನ ೧ ಎನ್ನುವುದು ಟೆಹರಿಯಂತಹ ಕಠಿಣ ಪ್ರದೇಶಗಳಲ್ಲಿ ಬೀಜ ಬಾಂಬ್ ಎನ್ನುವ ವಿಧಾನದ ಮೂಲಕ ಸಸಿಗಳನ್ನು ನೆಡುವ ಪ್ರಯತ್ನವನ್ನು ಆರಂಭಿಸಿತು. ಪರಿಸರ ಜಾಗೃತಿ ಮತ್ತು ಹಸಿರು ವಲಯ ಹೆಚ್ಚಳದ ಉದ್ದೇಶದಿಂದ ಉದ್ಯೋಗಿಗಳನ್ನು ಇದರಲ್ಲಿ ಭಾಗಿಯಾಗಿಸಿಕೊಳ್ಳುವ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲಿ ಆರಂಭಿಸಲಾಯಿತು. ಇದರ ಉದ್ದೇಶ ಕಾರ್ಪೊರೇಟ್ ಉದ್ಯೋಗಿಗಳಿಗೆ ಮರದ ಮಹತ್ವವನ್ನು ತಿಳಿಸಿಕೊಟ್ಟು ಇಂಗಾಲದ ಪ್ರಮಾಣವನ್ನು ಕಡಿಮೆಮಾಡಲು ಪರಿಸರಕ್ಕೆ ಅವರು ಕೊಡುಗೆ ನೀಡುವಂತೆ ಮಾಡುವುದು.
ಚೌಕ : ಹಸಿರು ಲೇಹ್ ಲಡಾಕ್ ಯೋಜನೆ
ಹಿಮಾಚ್ಛಾದಿತವಾದ ಲೇಹ್ ಲಡಾಕ್‌ನ ಪರ್ವತಗಳು ೩೫೦೦ ಮೀಟರ್ ಎತ್ತರದಲ್ಲಿದೆ. ಅವುಗಳ ಸೌಂದರ್ಯ ಅದ್ಭುತವಾದದ್ದೇ ಆದರೆ ಅಲ್ಲಿ ಹಸಿರಿನ ಕೊರತೆಯಿದೆ. ಈ ಬಂಜರು ಭೂಮಿಯಲ್ಲಿ ಹಣ್ಣಿನ ಮರಗಳನ್ನು ಬೆಳೆಸಿ ಅಂತರ್ಜಲ ಮಟ್ಟವನ್ನು ಪುನಶ್ಚೇತನಗೊಳಿಸಲು ಸಂಕಲ್ಪತರು ಫೌಂಡೇಶನ್‌ನವರು ೨೦೧೪ರಲ್ಲಿ ʼಹಸಿರು ಲೇಹ್ ಲಡಾಕ್ ಯೋಜನೆʼಯನ್ನು ಹಮ್ಮಿಕೊಂಡರು. ಈ ತಂಡವು ಅಕ್ಟೋಬರ್ ಮತ್ತು ನವಂಬರ್ ತಿಂಗಳುಗಳಲ್ಲಿ ಸಸಿಗಳನ್ನು ಅಲ್ಲಿಗೆ ಸಾಗಿಸಿ ಹಿಮಪಾತದಿಂದ ಅದನ್ನು ರಕ್ಷಿಸಲು ಬಂಕರ್‌ಗಳಲ್ಲಿಟ್ಟಿರುತ್ತಾರೆ. ಹಿಮಪಾತವು ನಿಂತಮೇಲೆ ಇವುಗಳನ್ನು ಏಪ್ರಿಲ್ ತಿಂಗಳಲ್ಲಿ ಸ್ಥಳೀಯರ ನೆರವಿನಿಂದ ನೆಡಲಾಗುತ್ತದೆ.
ಇದನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ: ಗ್ರಾಮೀಣ ಜೀವನೋಪಾಯ ನೆರವು ಯೋಜನೆಯಡಿ ರೈತರ ಜಮೀನುಗಳಲ್ಲಿ ಸೇಬು ಮತ್ತು ಏಪ್ರಿಕಾಟ್ ಹಣ್ಣಿನ ಮರಗಳನ್ನು ನೆಡಲಾಗುತ್ತದೆ. ಸಮುದಾಯ ಗಿಡ ನೆಡುವಿಕೆಯಡಿ ಮೇವನ್ನು ಒದಗಿಸುವ ಮರಗಳನ್ನು ಖಾಲಿಯಿರುವ ಸಮುದಾಯ ಭೂಮಿಗಳಲ್ಲಿ ನೆಡಲಾಗುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಎನ್‌ಜಿಒಗಳ ಪ್ರಯತ್ನದಿಂದ ೯೫% ಮರಗಳು ಬದುಕುಳಿದಿವೆ. ಇಲ್ಲಿ ಗಿಡಗಳನ್ನು ನೆಡುವುದು ಮತ್ತು ಕಾಪಾಡಿಕೊಳ್ಳುವುದು ಎರಡೂ ಸವಾಲಿನ ಕೆಲಸ. ಸಂಕಲ್ಪತರು ಇಲ್ಲಿನ ೮೦೦ ರೈತರನ್ನು ಮತ್ತು ೫೦ ಶಾಲೆಗಳ ನೆರವಿನೊಂದಿಗೆ ಇಲ್ಲಿ ಸುಸ್ಥಿರ ಮತ್ತು ಜೈವಿಕವೈವಿಧ್ಯ ಪರಿಸರವನ್ನು ಸೃಷ್ಟಿಸಿದೆ. ಈ ಹಿಮಾಚ್ಛಾದಿತ ಬಂಜರು ಪ್ರದೇಶವಾದ ಲೇಹ್ ಲಡಾಕಿನಲ್ಲಿ ಸಾವಿರಾರು ಹಸಿರು ಮರಗಳನ್ನು ಬೆಳೆಸಿದ್ದಾರೆ. ಇಲ್ಲಿ ಬೆಳೆಯಲಾದ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದು ರೈತರಿಗೊಂದು ಆದಾಯಮೂಲವಾಗಿದೆ. ಈ ಹಣ್ಣುಗಳು ಅವರ ಪೌಷ್ಟಿಕಾಂಶ ಅಗತ್ಯವನ್ನು ಪೂರೈಸುವುದರೊಂದಿಗೆ ಹಣ್ಣಿನ ಮರಗಳು ಮಣ್ಣಿನ ಸವಕಳಿಯನ್ನು ತಡೆಯುತ್ತದೆ.
ಲೇಹ್‌ಲಡಾಕ್‌ನ ೧೨ ಹಳ್ಳಿಗಳು ಮತ್ತು ಇಂಡಿಯಾ ಚೀನಾದ ಗಡಿಯಾದ ನ್ಯೋಮಾ ಹಳ್ಳಿಯಲ್ಲಿ ಸುಮಾರು ೩೦,೦೦೦ ಮರಗಳನ್ನು ನೆಡಲಾಗಿದೆ. ಈ ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಪೂರೈಕೆಗಾಗಿ ಒಂದು ಸಾವಿರ ಜನಪ್ರಿಯ ಮತ್ತು ಆಯ್ದ ಸಸಿಗಳನ್ನು ಭಾರತೀಯ ಸೇನೆಯೊಂದಿಗೆ ನೆಡಲಾಯಿತು. ಸಂಕಲ್ಪತರು ಪ್ರವಾಹ ಪೀಡಿತ ಹಳ್ಳಿಗಳಾದ ಟಿಯಾ ಮತ್ತು ವನ್ಲಾಗಳಲ್ಲಿಯೂ ಸಸಿಗಳನ್ನು ನೆಟ್ಟಿದೆ.
ಕಳೆದ ಏಳು ವರ್ಷಗಳಲ್ಲಿ ಹಲವು ಸವಾಲುಗಳ ನಡುವೆಯೂ ಮಿಲಿಯನ್ ಮರಗಳನ್ನು ನೆಡುವ ತನ್ನ ಗುರಿಯತ್ತ ಸಾಗುತ್ತಿದೆ. ಆರಂಭದಲ್ಲಿ ಬೀಜಗಳ ಸಂಗ್ರಹಣೆಗೆ ನಿಧಿ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಲಾಭ ಗಳಿಸುವಂತಹ ಯೋಜನೆಗಳಿಗೆ ಬಂಡವಾಳ ಸಿಗುವಷ್ಟು ಸುಲಭವಾಗಿ ಈ ರೀತಿಯ ಲಾಭ ರಹಿತ ಯೋಜನೆಗಳಿಗೆ ಬಂಡವಾಳ ಹೊಂದಿಸಲಾಗುವುದಿಲ್ಲ.
ಮತ್ತೊಂದು ಬಹುಮುಖ್ಯ ಸವಾಲೆಂದರೆ ಭಾರತದಂತಹ ವೈವಿಧ್ಯಮಯ ಭೌಗೋಳಿಕ, ಸಾಂಸ್ಕೃತಿಕ ಮತ್ತು ಬಹುಭಾಷೆ ಇರುವ ದೇಶದಲ್ಲಿ ಸಂಪರ್ಕವನ್ನು ಸಾಧಿಸುವುದು. ಒಳಭಾಗಗಳಲ್ಲಿರುವ ಹಳ್ಳಿಗಳಿಗೆ ಈ ಕಾರ್ಯಕ್ರಮಗಳನ್ನು ತಲುಪಿಸುವುದು ಕೂಡ ಸವಾಲಿನ ಕೆಲಸವಾಗಿದೆ. ಏಕೆಂದರೆ ಪ್ರತಿಯೊಂದು ರಾಜ್ಯದ ಭಾಷೆ ಬೇರೆಯಾಗಿದ್ದು ಅಲ್ಲಿನ ರೈತರಿಗೆ ಅವರದೇ ಭಾಷೆಯಲ್ಲಿ ಈ ಕಾರ್ಯಕ್ರಮಗಳನ್ನು ವಿವರಿಸಿ ಅವರನ್ನು ಇದರಲ್ಲಿ ಭಾಗಿಯಾಗುವಂತೆ ಮಾಡುವುದು ಕಠಿಣವಾದ ಕೆಲಸ.
ವಿವಿಧೆಡೆಗಳಲ್ಲಿ ನೆಡಲಾಗಿರುವ ಮರಗಳಲ್ಲಿ ೯೫%ನಷ್ಟು ಮರಗಳು ಆರೋಗ್ಯಕರವಾಗಿ ಬೆಳೆಯುತ್ತಿದ್ದು ಹಸಿರನ್ನು ಪಸರಿಸುತ್ತಿದೆ. ಈ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹಸಿರನ್ನು ಹೆಚ್ಚಿಸುವುದರೊಂದಿಗೆ ಬದುಕಿನ ಮಟ್ಟವನ್ನು ಉತ್ತಮಗೊಳಿಸಿದೆ. ನಗರ ಪ್ರದೇಶಗಳಲ್ಲೂ ಇದರಿಂದಾಗಿ ಹಸಿರು ಹೆಚ್ಚಿದೆ. ಭವಿಷ್ಯದಲ್ಲಿ ಈ ಮರಗಳು ದೊಡ್ಡದಾಗಿ ವಾತಾವರಣದಲ್ಲಿನ ಮಾಲಿನ್ಯವನ್ನು ತಗ್ಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮವು ಸಮುದಾಯದ ನಡುವೆ ಪರಿಸರ ಜಾಗೃತಿಯನ್ನು ಮೂಡಿಸಿದೆ. ತಂತ್ರಜ್ಞಾನವನ್ನು ಪರಿಸರದೊಂದಿಗೆ ಒಗ್ಗೂಡಿಸುವ ಮೂಲಕ ಸಂಕಲ್ಪತರು ಸಮಯ ಮತ್ತು ಸ್ಥಳದ ಅಭಾವವಿರುವವರು ಕೂಡ ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡಲು ಅವಕಾಶ ಕಲ್ಪಿಸಿದೆ. ಈ ಕಾರ್ಯಕ್ರಮಗಳ ಮೂಲಕ ವ್ಯಕ್ತಿ ಮತ್ತು ಪರಿಸರ ಸಂಪರ್ಕವನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಜೊತೆಗೆ ಗ್ರಾಮೀಣ ಭಾಗದ ಜೀವನಮಟ್ಟವನ್ನು ಸುಧಾರಿಸಿದೆ.
ಸಂಕಲ್ಪತರು ಫೌಂಡೇಶನ್
SankalpTaru Foundation
Plot No. 12, Dhoran Khas, Kishanpur,
Near St. Xavier’s School, Canal Road,
Dehradun, Uttarakhand – 248001.
www.sankalptaru.org
E-mail: wishy@sankalptaru.org
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೪ ; ಡಿಸೆಂಬರ್ ೨೦೧೯



