ಭವಿಷ್ಯದ ಆಹಾರ ಅಗತ್ಯ ಪೂರೈಕೆ, ಸ್ಥಳೀಯ ಸಂಪನ್ಮೂಲಗಳ ಸಂರಕ್ಷಣೆ, ಪೌಷ್ಟಿಕಾಂಶಗಳ ಸುಧಾರಣೆ ಹಾಗೂ ಕೃಷಿ ಮತ್ತು ಕೃಷಿಕರ ಜೀವನಮಟ್ಟ ಸುಧಾರಣೆ ಇವು ೨೧ನೇ ಶತಮಾನದ ಬಹುದೊಡ್ಡ ಸವಾಲುಗಳು. ಈ ಸವಾಲುಗಳನ್ನು ಎದರಿಸಲು ಸಮಸ್ಯೆ ಪರಿಹರಿಸುವ ಹೊಸ ವಿಧಾನಗಳು, ಹೊಸ ಬಗೆಯ ಚಿಂತನೆ ಮತ್ತು ಹೊಸ ಪಾಲುದಾರಿಕೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
ತುರ್ತಾಗಿ ಆಹಾರ ಉತ್ಪಾದನೆ, ಸಂಸ್ಕರಣೆ, ಸಾಗಣೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆ ಇವುಗಳ ಸ್ವರೂಪದಲ್ಲಿ ಬದಲಾವಣೆಗಳಾಗಬೇಕಾಗಿದೆ. ಕೃಷಿಪರಿಸರವನ್ನು ಉತ್ತಮಗೊಳಿಸುವುದರಿಂದ ಆಹಾರ ಭದ್ರತೆ, ತಾಳಿಕೆ, ಜೀವನಮಟ್ಟ ಮತ್ತು ಸ್ಥಳೀಯ ಆರ್ಥಿಕತೆ ಚೇತರಿಕೆ, ಆಹಾರ ಉತ್ಪಾದನೆಯಲ್ಲಿ ವೈವಿಧ್ಯತೆ, ಆರೋಗ್ಯ ಮತ್ತು ಪೌಷ್ಟಿಕಾಂಶ ಮಟ್ಟದಲ್ಲಿ ಸುಧಾರಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಜೈವಿಕ ವೈವಿಧ್ಯತೆ ಹಾಗೂ ಪರಿಸರವ್ಯವಸ್ಥೆ ಇವೆಲ್ಲವೂ ಕೂಡ ಉತ್ತಮಗೊಳ್ಳುತ್ತವೆ. ಕೃಷಿಪರಿಸರವನ್ನು ಉತ್ತಮಗೊಳಿಸಲು ಕುಟುಂಬದ ಸದಸ್ಯರ ಸಹಭಾಗಿತ್ವ ಅತ್ಯಗತ್ಯ. ಅದರಲ್ಲೂ ಸಣ್ಣ ರೈತ ಕುಟುಂಬದ ಮಹಿಳೆಯರು ಮತ್ತು ಯುವಜನಾಂಗವು ಇದರಲ್ಲಿ ಭಾಗಿಯಾಗಬೇಕು.
ಈ ಸಂದರ್ಭದಲ್ಲಿ ಹೊಸ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತಹವರು, ಹೊಸ ರೀತಿಯಲ್ಲಿ ಯೋಚಿಸಿ ಜೀವನಮಟ್ಟ, ಆರ್ಥಿಕತೆ, ಆಹಾರ ಪೌಷ್ಟಿಕಾಂಶವನ್ನು ಉತ್ತಮಗೊಳಿಸುವವರು ಮತ್ತು ವೈವಿಧ್ಯಮಯ ಆಹಾರ ಉತ್ಪಾದನೆಯನ್ನು ಉತ್ತಮಗೊಳಿಸಲಬಲ್ಲ ವ್ಯಕ್ತಿಗಳ ಅಗತ್ಯವಿದೆ. ಜಾನಪದತಜ್ಞೆ ಮತ್ತು ಬುಡ ಜಾನಪದ ವಸ್ತುಸಂಗ್ರಹಾಲಯ ಎನ್ನುವ ಸಾಂಸ್ಕೃತಿಕ ಕೇಂದ್ರದ ಸ್ಥಾಪಕಿಯಾದ ಸವಿತಾ ಉದಯ್ ಎನ್ನುವ ಶಿಕ್ಷಕಿಯ ಪಯಣದ ಕತೆ ಸ್ಪೂರ್ತಿದಾಯಕವಾದದ್ದು. ಬಹುಮುಖಪ್ರತಿಭೆಯ ಮಹಿಳೆಯಾದ ಈಕೆ ಹಲವರಿಗೆ ಸ್ಪೂರ್ತಿದಾಯಕವಾಗಿದ್ದಾಳೆ. ಸ್ಥಳೀಯ ಬದುಕು ಮತ್ತು ಆರ್ಥಿಕತೆಯನ್ನು ಉತ್ತಮಗೊಳಿಸುವ, ಆಹಾರ ಉತ್ಪಾದನೆಯಲ್ಲಿ ವೈವಿಧ್ಯತೆಯನ್ನು ತಂದು ಆರೋಗ್ಯ ಮತ್ತು ಪೌಷ್ಟಿಕಾಂಶ ಮಟ್ಟದಲ್ಲಿ ಸುಧಾರಣೆ ತರುವುದು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಜೀವವೈವಿಧ್ಯತೆ ಮತ್ತು ಪರಿಸರವ್ಯವಸ್ಥೆಯ ಸಂರಕ್ಷಣೆಯನ್ನು ಆಕೆಯ ಕತೆ ತೆರೆದಿಡುತ್ತದೆ.
ಸವಿತಾ ಉದಯ್ ತಮ್ಮ ಪಿಎಚ್‌ಡಿ ಮುಗಿಸಿದ ಬಳಿಕ ಕೆಲವು ಶಾಲೆಗಳಲ್ಲಿ ಕೆಲಸಮಾಡಿದರು. ಬಹುಬೇಗನೇ ತರಗತಿಗಳಲ್ಲಿ ಪಾಠಮಾಡುವುದರ ಹಿಂದಿನ ಮಿತಿಯನ್ನು ಕಂಡುಕೊಂಡರು. ಹೀಗಾಗಿ ಅಹಮದಾಬಾದ್, ಬೆಂಗಳೂರು, ಮಸ್ಕಟ್ ಹೀಗೆ ವಿವಿಧೆಡೆಗಳಲ್ಲಿ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಶಾಲೆಗಳಲ್ಲಿ ಪಾಠಮಾಡಿದರು. ಬೆಂಗಳೂರಿನ ಪ್ರಕ್ರಿಯಾ ಮತ್ತು ವ್ಯಾಲಿ ಶಾಲೆಗಳಂತಹ ಅಸಾಂಪ್ರದಾಯಿಕ ಶಾಲೆಗಳಲ್ಲಿ ಪಾಠ ಮಾಡಿದರು. ಸವಿತ ಶಾಲೆಯಲ್ಲಿ ಭೂಗೋಳವನ್ನು ಪಾಠಮಾಡುತ್ತಿದ್ದರು. ಬಹುತೇಕ ಮಕ್ಕಳಿಗೆ ಭೂಮಿ, ಕಾಡು ಮತ್ತು ನದಿಗಳ ಅನುಭವವಿಲ್ಲದಿರುವುದನ್ನು ಆಕೆ ಕಂಡುಕೊಂಡರು. ಶಾಲೆಗಿಂತ ಪರಿಸರದ ನಡುವೆ ಮಕ್ಕಳಿಗೆ ಪಾಠ ಹೇಳುವುದರ ಮಹತ್ವವನ್ನು ಕಂಡುಕೊಂಡರು. ಆಕೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಶಾಲೆಗಳಿಗೆ ಹೊಸದೊಂದು ಪಠ್ಯಕ್ರಮವನ್ನು ರೂಪಿಸಿದರು. ನಿಸರ್ಗದ ನಡುವೆ ಮಕ್ಕಳು ಹೆಚ್ಚು ಚೆನ್ನಾಗಿ ಕಲಿಯಬಲ್ಲರು ಎನ್ನುವುದರಲ್ಲಿ ಆಕೆಗೆ ನಂಬಿಕೆಯಿತ್ತು.
ಸವಿತಾ ಉದಯ್ ಅವರು ರೂಪಿಸಿದ ಬುಡ ಸ್ಟಡಿ ಟೂರ್ ಪ್ರೋಗ್ರಾಂ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ನದಿ, ಸಮುದ್ರ ಇಲ್ಲವೇ ಕಾಡಿನ ಹಾದಿಯಲ್ಲಿ ನಡೆದು ಸಮೃದ್ಧ ಪರಿಸರ ವೈವಿಧ್ಯವನ್ನು ಪರಿಚಯ ಮಾಡಿಕೊಳ್ಳುವ, ವಿವಿಧ ಬುಡಕಟ್ಟು ಸಮುದಾಯಗಳ ಜನರನ್ನು ಭೇಟಿ ಮಾಡಿ ಅವರ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಿತು. ವಿದ್ಯಾರ್ಥಿಗಳು ಒಂದು ವಾರದಿಂದ ಒಂದು ತಿಂಗಳವರೆಗೆ ಈ ನದಿಗಳು, ಸಮುದ್ರಗಳು , ಕಾಡಿನ ನಡುವೆಯಿದ್ದು ಬುಡಕಟ್ಟು ಜನರಿಂದ ಅಲ್ಲಿನ ವಿಷಯಗಳನ್ನು ಕಲಿಯುತ್ತಾರೆ (ಹಾಲಕ್ಕಿ ಮತ್ತು ಸಿದ್ಧಿ) (ಚೌಕ ೧ನ್ನು ನೋಡಿ). ಈ ಕಾರ್ಯಕ್ರಮದಲ್ಲಿ ಆಕೆ ಬುಡಕಟ್ಟಿನ ಮಂದಿಯೇ ತರಗತಿಗಳನ್ನು ತೆಗೆದುಕೊಳ್ಳುವಂತೆ ಮಾಡಿ ಆ ಶಾಲೆಗಳ ಮಕ್ಕಳಿಗೆ ಜಾನಪದವನ್ನು ಕಲಿಸುವಂತೆ ಮಾಡಿದ್ದಾರೆ. ಅವರ ಈ ಹೆಜ್ಜೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
| ಚೌಕ ೧ : ಬುಡ ಕಾರ್ಯಕ್ರಮಕನ್ನಡದಲ್ಲಿ ಬುಡ ಎಂದರೆ ತಳ, ಆಧಾರ ಎಂದರ್ಥ. ಎಲ್ಲವೂ ಇದರ ಮೇಲೆಯೇ ನಿರ್ಮಾಣವಾಗುತ್ತದೆ. ಪ್ರಸ್ತುತ ಬುಡ ಜಾನಪದವು ಹೊನ್ನಾವರ ಮತ್ತು ಅಂಗಡಿಬೈಲು (ಅಂಕೋಲ) ಎರಡು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಕೆಯ ಕಾರ್ಯಕ್ರಮಗಳು ಮೊದಲಾದದ್ದು ಅವರ ತವರೂರಾದ ಹೊನ್ನಾವರದಲ್ಲಿ. ಡಾ. ಶಾಂತಿ ನಾಯಕ್ ಮತ್ತು ಡಾ. ಎನ್.ಆರ್. ನಾಯಕ್ ಅವರ ತಂದೆ ತಾಯಿ. ಇಬ್ಬರೂ ಕನ್ನಡ ಪ್ರಾಧ್ಯಾಪಕರು. ಸತತ ೪೦ ವರ್ಷಗಳಿಂದ ಉತ್ತರಕನ್ನಡದ ಜಾನಪದವನ್ನು ಕಾಪಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಸುಮಾರು ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಸಾಹಿತ್ಯ, ಕಲೆ, ಕರಕುಶಲ ಕಲೆ, ನೃತ್ಯ, ಆಹಾರ, ಪಾನೀಯ, ಹಾಡುಗಳು, ಆಟಗಳು, ಔಷಧಿಯ ಸಸ್ಯಗಳು ಮತ್ತು ವಸ್ತ್ರಗಳು ಹೀಗೆ ವಿವಿಧ ಬಗೆಗಳಲ್ಲಿ ಜಾನಪದವನ್ನು ಕಾಪಾಡಿಕೊಂಡುಬಂದಿದ್ದಾರೆ. ಬುಡ ಕಾರ್ಯಕ್ರಮಗಳನ್ನು ಈ ಸ್ಥಳಗಳಲ್ಲಿ ನಡೆಸಲಾಗುತ್ತದೆ. ನಿಸರ್ಗ ಮತ್ತು ಮನುಷ್ಯನ ನಡುವಿನ ಸಂಬಂಧ, ಈ ಸಮುದಾಯಗಳ ಸಂಸ್ಕೃತಿಯನ್ನು ಇಲ್ಲಿ ಅರಿಯಬಹುದಾಗಿದೆ. ಬುಡ ಜಾನಪದವು ಪ್ರಯೋಗಶೀಲ ಕಲಿಕೆಯಲ್ಲಿ ನಂಬಿಕೆಯನ್ನಿಟ್ಟಿದೆ. ಅದಕ್ಕೆ ತಕ್ಕನಾಗಿ ಶಾಲಾ ಕಾಲೇಜುಗಳಿಗೆ ಕಲಿಕೆಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇದರಲ್ಲಿ ಉತ್ತರ ಕನ್ನಡದ ಕರಾವಳಿ ಪ್ರದೇಶದ ನೈಸರ್ಗಿಕ ಸಮೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತು ತಿಳಿಯಬಹುದಾಗಿದೆ. |
ಅಧ್ಯಯನ ಪ್ರವಾಸ ಕಾರ್ಯಕ್ರಮ
ನದಿ ಮಾರ್ಗ
ಇದು ಶರಾವತಿಯ ಉಗಮ ಸ್ಥಾನದಿಂದ ಹಿಡಿದು ಅದು ಅರೇಬಿಯನ್ ಸಮುದ್ರ ಸೇರುವವರೆಗಿನ ಹಾದಿಯನ್ನು ಒಳಗೊಂಡಿದೆ. ಚಾರಣ, ದೋಣಿ ಮತ್ತು ರಸ್ತೆಯ ಮೂಲಕ ಈ ಹಾದಿಯನ್ನು ಕ್ರಮಿಸಲಾಗುತ್ತದೆ. ಈ ಪಯಣದಲ್ಲಿ ವಿದ್ಯಾರ್ಥಿಗಳು ಸುಂದರವಾದ ಐತಿಹಾಸಿಕ ದ್ವೀಪಗಳು, ನದೀ ತೀರ ಪ್ರದೇಶಗಳು, ನದಿ ಸೃಷ್ಟಿಸಿದ ವಿವಿಧ ಭೂಭಾಗಗಳು, ಕರಕುಶಲಕಲೆ, ಕಲೆ, ಆಹಾರ, ಜನಪದ ದೇವತೆಗಳು ಮತ್ತು ಜನ ಹಾಗೂ ಅವರ ಬದುಕಿನ ಕ್ರಮವನ್ನು ನೋಡಿ ತಿಳಿಯುತ್ತಾರೆ.
ಸಮುದ್ರ ಮಾರ್ಗ
ಸಮುದ್ರ ತೀರ ಚಾರಣವು ಹೊನ್ನಾವರದಿಂದ ಗೋಕರ್ಣದವರೆಗಿದೆ. ಬೆಟ್ಟ ಮಾರ್ಗವನ್ನು ಹಾದು ಸಮುದ್ರತೀರಗಳಲ್ಲಿ ಕ್ಯಾಂಪಿಂಗ್ ಮಾಡಲಾಗುತ್ತದೆ. ಈ ಭಾಗದಲ್ಲಿ ಮಾತ್ರ ಸಾಧ್ಯವಾಗುವಂತಹ ವಿಶಿಷ್ಟ ಚಾರಣ. ಇಲ್ಲಿ ನಮಗೆ ಎದುರಾಗುವವರು ಹಾಲಕ್ಕಿ ಸಮುದಾಯದವರು ಮತ್ತು ಮೀನುಗಾರರು.
ಕಾಡು ಮಾರ್ಗ
ವಿದ್ಯಾರ್ಥಿಗಳು ಕಾಡಿನಲ್ಲಿ ವಾಸವಿರುತ್ತಾರೆ. ಇದಕ್ಕಾಗಿಯೇ ಉತ್ತರ ಕನ್ನಡ ಜಿಲ್ಲೆಯ ಅಂಗಡಿಬೈಲಿನಲ್ಲಿ ಕಾಡು, ಝರಿಗಳು ಮತ್ತು ಗಿರಿಶ್ರೇಣಿಗಳಿಂದ ಆವೃತವಾದ ಭತ್ತದ ಬಯಲಿನ ನಡುವೆ ತೋಟದ ಮನೆಯನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಈ ಪ್ರದೇಶದ ಶ್ರೀಮಂತ ಜಾನಪದ ಪರಂಪರೆಯನ್ನು ಪರಿಚಯಿಸಿಕೊಳ್ಳುತ್ತಾರೆ. ಈ ಪ್ರದೇಶದಲ್ಲಿ ವಾಸಿಸುವ ವಿವಿಧ ಸಮುದಾಯಗಳ ಜನರನ್ನು ಪರಿಚಯಿಸಿಕೊಳ್ಳುತ್ತಾರೆ (ಹಾಲಕ್ಕಿ, ಗಾಮೊಕ್ಕಲು, ಗೊಂಡಾ, ಸಿದ್ಧಿ ಮತ್ತು ಕರೆ ಒಕ್ಕಲು). ಈ ಸಮುದಾಯದವರ ಆಹಾರ, ಕಲೆ, ಕರಕುಶಲಕಲೆ, ಸಂಗೀತ, ನೃತ್ಯ, ವಾಸ್ತುಶಿಲ್ಪ ಮತ್ತು ಅವರ ಬದುಕಿನ ಕ್ರಮವನ್ನು ಅಭ್ಯಸಿಸುತ್ತಾರೆ. ಅವರು ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಚಾರಣ ಮಾಡುತ್ತಾ ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ಚಾರಣವು ಈ ಭಾಗದ ಅತಿ ಎತ್ತರ ಪ್ರದೇಶವಾದ ಯಾಣ ಮೋತಿಗುಡ್ಡವನ್ನು ಕೂಡ ಒಳಗೊಂಡಿದೆ. ಭೂಪ್ರದೇಶ/ಹವಾಮಾನವು ಈ ಪ್ರದೇಶದ ಜನರ ಬದುಕಿನ ಮೇಲೆ ಬೀರಿರುವ ಪ್ರಭಾವವನ್ನು ಅಧ್ಯಯನಮಾಡುತ್ತಾರೆ. ಸುತ್ತಲ ಪರಿಸರಕ್ಕನುಗುಣವಾಗಿ ತಮ್ಮ ಬದುಕಿನಕ್ರಮವನ್ನು ಸಮುದಾಯಗಳವರು ಕಟ್ಟಿಕೊಳ್ಳುವುದನ್ನು ಅಭ್ಯಸಿಸುತ್ತಾರೆ.
ತೋಟದಲ್ಲಿ ಕಲಿಕೆ
ಶಿಕ್ಷಕ ವೃತ್ತಿ ಆಕೆಗೆ ಆತ್ಮತೃಪ್ತಿಯನ್ನು ತಂದುಕೊಡಲಿಲ್ಲ. ಆಕೆಯ ಒಳದನಿ ಮರಳಿ ಮಣ್ಣಿಗೆ ಎಂದು ಹಾಡುತ್ತಿತ್ತು. ಇದೆಲ್ಲ ಶುರುವಾದದ್ದು ಭೂಮಿಯನ್ನುಳಿಸಿ ಎನ್ನುವ ವ್ಯಾಲಿ ಶಾಲೆಯ ಚಟುವಟಿಕೆಯಿಂದ. ಅಲ್ಲಿಂದ ಆಕೆ ತನ್ನ ತೋಟದೆಡೆಗೆ ನಡೆದಳು.
ಸವಿತಾ ಅವರು ಶಿಕ್ಷಣವನ್ನು ಪುನಶ್ಚೇತನಗೊಳಿಸಿ ಮುಂದಿನ ಪೀಳಿಗೆಗಳವರಿಗೂ ಈ ಜ್ಞಾನದ ಲಾಭ ದೊರಕುವಂತೆ ಮಾಡಬೇಕೆಂದು ಬಯಸಿದ್ದಾರೆ. ಆಕೆ ಉತ್ತರ ಕನ್ನಡದ ಪಶ್ಚಿಮ ಘಟ್ಟಗಳಲ್ಲಿ ಗೋಕರ್ಣದಿಂದ ೩೦ಕಿಮೀ ದೂರದಲ್ಲಿ ೨೫ ಎಕರೆ ಭೂಮಿಯನ್ನು ಖರೀದಿ ಮಾಡಿದರು. ಆಕೆಗೆ ಕೃಷಿಯ ಬಗ್ಗೆ ಏನೂ ತಿಳಿದಿರಲಿಲ್ಲ. ಅದಕ್ಕೆ ಮುಂಚೆ ಎಂದೂ ಕೃಷಿಯನ್ನು ಮಾಡಿರಲಿಲ್ಲ. ಆರಂಭದ ಎರಡುವರ್ಷಗಳು ಬಹಳ ಕಷ್ಟಪಟ್ಟರು. ಭೂಮಿಯನ್ನು ತೆಗೆದುಕೊಂಡು ತಪ್ಪುಮಾಡಿಬಿಟ್ಟೆ ಎಂದು ಕೂಡ ಆ ದಿನಗಳಲ್ಲಿ ಯೋಚಿಸಿದ್ದರಂತೆ. ಅವರಂದುಕೊಂಡಂತೆ ಏನೂ ಆಗುತ್ತಿರಲಿಲ್ಲ. ಆಕೆಯ ಗಂಡ ದೂರದ ತಾಂಜೇನಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದ ವರ್ಷಗಳಲ್ಲಿ ಅವರಿಗೆ ಎಲ್ಲವೂ ಅಯೋಮಯವಾಗಿತ್ತೆಂದು ಹೇಳುತ್ತಾರೆ.
ತಮ್ಮ ಒಡೆತನದ ೨೫ ಎಕರೆ ಭೂಮಿಯಲ್ಲಿ ಕೃಷಿ ಭೂಮಿಯಲ್ಲಿ (೪ ಎಕರೆ) ಭೂಮಿಗೆ ರಾಸಾಯನಿಕವನ್ನು ಬಳಸಲಾಗಿತ್ತು. ಹೈಬ್ರೀಡ್ ಅಕ್ಕಿಯನ್ನು ಅಲ್ಲಿ ಬೆಳೆಯಲಾಯಿತು. ಇದಕ್ಕೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕದ ಅವಶ್ಯಕತೆಯಿತ್ತು. ನಂತರ ನಿಧಾನವಾಗಿ ಕಳೆದ ಐದು ವರ್ಷಗಳಿಂದ ಸವಿತಾ ಸಾವಯವ ಕೃಷಿಯ ಕಡೆ ಹೊರಳಿದ್ದಾರೆ. ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ.
ಪ್ರಸ್ತುತ ಅವರು ದೇಸಿ ತಳಿಗಳಾದ ರತ್ನಚೂಡ, ಹಾಲಗ ಮತ್ತು ಹೆಗ್ಗೆಯನ್ನು ಬೆಳೆಯುತ್ತಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಬೆಳೆಯುತ್ತಿದ್ದಾರೆ ಜೊತೆಗೆ ತಮ್ಮ ಸ್ನೇಹಿತರಿಗೂ ಹಂಚುತ್ತಿದ್ದಾರೆ. ವರ್ಷಗಳುರುಳಿದಂತೆ ನಗರಗಳಲ್ಲಿರುವ ಆಕೆಯ ಸ್ನೇಹಿತರು ನಾಟಿ ಸಮಯದಲ್ಲಿ ಆಕೆಗೆ ಸಹಾಯ ಮಾಡುತ್ತಿದ್ದು ಅಲ್ಲಿ ತಂಗಲು ಮತ್ತು ಊಟಕ್ಕೆ ತಗಲುವ ವೆಚ್ಚವನ್ನು ಅವರೇ ಭರಿಸುತ್ತಿದ್ದಾರೆ. ಇದರಿಂದಾಗಿ ಆಕೆಗೆ ತೋಟದ ಚಟುವಟಿಕೆಗಳನ್ನು ನೋಡಿಕೊಳ್ಳಲು ಸ್ವಲ್ಪಮಟ್ಟಿಗೆ ಸಹಾಯವಾಗಿದೆ. ಈ ವ್ಯವಸ್ಥೆಯು ಮುಂದುವರೆದು ಆಗಸ್ಟ್ ತಿಂಗಳಲ್ಲಿ ಎರಡು ದಿನಗಳ ನಾಟಿ/ಗಿಡನೆಡುವ ಉತ್ಸವ ಮುಂಗಾರುವಿನ ಹುಟ್ಟಿಗೆ ಕಾರಣವಾಯಿತು.
ಸವಿತಾ ಅವರಿಗೆ ವರ್ಷಪೂರ್ತಿ ತೋಟದಲ್ಲಿ ಕೆಲಸವಿರುತ್ತದೆ. ಇದು ಅವರಿಗೆ ಮತ್ತು ಅವರ ತೋಟದಲ್ಲಿ ಕೆಲಸಮಾಡುವ ಸ್ಥಳೀಯ ಸಮುದಾಯದ ಜನರಿಗೆ ಸ್ಥಿರ ಆದಾಯವನ್ನು ಒದಗಿಸುತ್ತಿದೆ.
ಕೋಕುಂ(ಪುನರ್ಪುಳಿ/ಮುರುಗಲ) ಹಬ್ಬ
ಕೋಕಂ ಭಾರತದಲ್ಲಿ ಬೆಳೆಯುವ ಹಣ್ಣಿನ ಮರ. ಈ ಹಣ್ಣು ಕೆಂಪಗಿದ್ದು ಪೂರ್ತಿ ಮಾಗಿದಾಗ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಹುಳಿ – ಸಿಹಿ ಮಿಶ್ರಿತ ಸ್ವಾದವನ್ನು ಹೊಂದಿರುತ್ತದೆ. ಕೋಕಂನಲ್ಲಿ ಹಲವು ಔಷಧೀಯ ಗುಣಗಳಿವೆ.
ಕೋಕಂ ಹಬ್ಬವೆನ್ನುವುದು ಕೋಕಂ ಮರದಿಂದ ಜಾಡಿಯೊಳಗೆ ಶೇಖರಗೊಳ್ಳುವರೆಗಿನ ಪಯಣ. ಈ ಸಮಯದಲ್ಲಿ ಮಾಗಿದ ಹಣ್ಣುಗಳನ್ನು ಕಿತ್ತು, ಸಂಸ್ಕರಿಸಿ ಶೇಖರಿಸಿಡಲಾಗುತ್ತದೆ. ಕೋಕುಂಗಳನ್ನು ಕೀಳುವುದರೊಂದಿಗೆ ಇದು ಆರಂಭವಾಗುತ್ತದೆ. ಈ ಹಬ್ಬದಲ್ಲಿ ಭಾಗಿಯಾಗಲು ಬಂದವರು ದೊಡ್ಡ ಬಿದಿರಿನ ಬುಟ್ಟಿಗಳನ್ನು ಹಿಡಿದು ಕಾಡುಮೇಡುಗಳನ್ನು ಅಲೆಯುತ್ತಾ ಈ ಹಣ್ಣಗಳನ್ನು ಕಿತ್ತು ಮನೆಗೆ ತರುತ್ತಾರೆ.
ಮುಂದಿನ ಹಂತವೆಂದರೆ ಕೋಕಂನ ಹೊರ ಭಾಗದ ಸಿಪ್ಪೆಯನ್ನು ಸುಲಿದು ಬೀಜವನ್ನು ಬೇರ್ಪಡಿಸುತ್ತಾರೆ. ಆಮೇಲೆ ಬೀಜದಿಂದ ಬೆಣ್ಣೆ ಮಾಡುತ್ತಾರೆ. ಇದು ಸೌಂದರ್ಯವರ್ಧಕಗಳಾದ ಲಿಪ್‌ಸ್ಟಿಕ್, ಮಾಶ್ಚಿರೈಸಿಂಗ್ ಕ್ರೀಮಂಗಳು, ಕಂಡೀಷನರ್‌ಗಳು ಮತ್ತು ಸೋಪುಗಳಲ್ಲಿ ಬಳಕೆಯಾಗುವ ಶಿಯಾ ಅಥವ ಕೊಕೊ ಬಟರ್ ಮಾದರಿಯಲ್ಲಿರುತ್ತದೆ. ಇದರ ಒಳತಿರುಳಿಗೆ ಬೆಲ್ಲವನ್ನು ಸೇರಿಸಿ ಜಾಮ್, ಸ್ಕ್ವಾಷ್ ಮತ್ತಿತರ ಉತ್ಪನ್ನಗಳನ್ನು ತಯಾರಿಸುತ್ತಾರೆ.
ಒಣಗಿಸಿದ ಹಣ್ಣಿನ ಸಿಪ್ಪೆಯನ್ನು ಔಷಧಿಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಇದರ ಬಣ್ಣ ಬಿಸಿಲಿಗೆ ಕಪ್ಪಿನಿಂದ ನೇರಳೆಗೆ ತಿರುಗುತ್ತದೆ. ಕೋಕಂ ಹಣ್ಣುಗಳಿಂದ ಜಾಮ್, ವೈನ್, ಶರಬತ್ತುಗ, ಕೋಕಂ ರಸಂ ಇತ್ಯಾದಿಗಳನ್ನು ತಯಾರಿಸಲಾಗುತ್ತದೆ.
ಕೋಕಂ ಬೀಜಗಳಿಂದ ಬೆಣ್ಣೆಯನ್ನು ಕೂಡ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ಕೋಕಂ ಬೀಜಗಳನ್ನು ಕುದಿಸಿ ಒರಳಿನಲ್ಲಿ ರುಬ್ಬುತ್ತಾರೆ. ಮತ್ತೆ ಅದನ್ನು ಕುದಿಸಿ ಅದರಿಂದ ಬೆಣ್ಣೆಯನ್ನು ತೆಗೆಯುತ್ತಾರೆ. ಇದು ಶಿಯಾ ಅಥವ ಕೊಕೊ ಬಟರ್ ಮಾದರಿಯಲ್ಲಿರುತ್ತದೆ. ಇದನ್ನು ಸಾಮಾನ್ಯವಾಗಿ ಸೌಂದರ್ಯವರ್ಧಕಗಳಾದ ಲಿಪ್‌ಸ್ಟಿಕ್ಸ್, ಮಾಶ್ಚಿರೈಸಿಂಗ್ ಕ್ರೀಂಗಳು, ಕಂಡೀಷನರ್‌ಗಳು ಮತ್ತು ಸೋಪುಗಳಲ್ಲಿ ಬಳಸುತ್ತಾರೆ.

ಫೋಟೊ : ಹಣ್ಣುಗಳಿಂದ ತೆಗೆದ ಕೋಕಂ ಬಟರ್ ಸೌಂದರ್ಯವರ್ಧಕ ಕೈಗಾರಿಕೆಗಳಲ್ಲಿ ಬಳಸುತ್ತಾರೆ
ಎಲ್ಲ ಬಗೆಯ ಭತ್ತದ ಹುಲ್ಲು ಆಕೆಯ ಜಾನುವಾರುಗಳಿಗೆ ಮೇವಾಗಿ ಬಳಕೆಯಾಗುತ್ತದೆ. ಆಕೆಯ ಬಳಿ ೨ ದನಗಳು, ೪ ಹಸುಗಳು ಮತ್ತು ೩ ಕರುಗಳಿವೆ. ಜೊತೆಗೆ ಇತ್ತಿಚೆಗೆ ಆಕೆ ಬೆಳೆಯುವ ಮೇವಿಗೂ ಭಾರಿ ಬೇಡಿಕೆಯಿದೆ. ವರ್ಷವಿಡಿ ತೋಟದಲ್ಲಿ ಒಂದಲ್ಲ ಒಂದು ಕೆಲಸವಿದ್ದು ಸುಸ್ಥಿರ ಆದಾಯವನ್ನು ತಂದುಕೊಡುತ್ತಿದೆ. ಇದು ಆಕೆ ತೋಟದಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯರಿಗೆ ಕೂಡ ಆರ್ಥಿಕ ಸುಸ್ಥಿರತೆಯನ್ನು ನೀಡಿದೆ. ಈ ರೀತಿ ಆಕೆ ಸ್ಥಳೀಯ ಸಮುದಾಯಗಳ ಆರ್ಥಿಕ ಹಾಗೂ ಜೀವನ ಮಟ್ಟದ ಸುಧಾರಣೆಗೆ ಕಾರಣಳಾಗಿದ್ದಾಳೆ.
ಸವಿತಾ ಅಂಗಡಿಬೈಲಿನಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಫಾರಂ ಹೌಸ್ ನಿರ್ಮಿಸಿದ್ದಾರೆ. ಜನ ಇಲ್ಲಿ ತಂಗಬಹುದು ಹಾಗೂ ಸ್ವಯಂಪ್ರೇರಿತರಾಗಿ ತೋಟದ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಬುಡ ಹೊನ್ನಾವರದಲ್ಲಿರುವ ಕೇಂದ್ರದಂತೆಯೇ ಅಧ್ಯಯನ ಕೇಂದ್ರವಾಗಿ ರೂಪುಗೊಂಡಿದೆ. ಈ ಸುಂದರ ಪ್ರಯೋಗಶೀಲ ಕಲಿಕೆಯ ಕಾರ್ಯಕ್ರಮಕ್ಕೆ ಒಮ್ಮೆಗೆ ೧೫ ಮಂದಿಯನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಇವರಿಗೆ ಮರೆವೆಗೆ ಸಂದಿರುವ ಬುಡಕಟ್ಟು ಸಮುದಾಯಗಳ ಆಹಾರ ಮತ್ತು ಕಲೆಯನ್ನು ಪರಿಚಯಿಸಲಾಗುತ್ತದೆ. ಸ್ಥಳೀಯ ಜನರಾದ ಹಾಲಕ್ಕಿ ಮತ್ತು ಸಿದ್ಧಿಗಳನ್ನು ಕತೆ ಹೇಳಲು, ಹಾಡಲು ಮತ್ತು ಇತರೆ ಕೆಲಸಗಳಿಗೆ ನೆರವು ನೀಡಲು ಆಹ್ವಾನಿಸಲಾಗುತ್ತದೆ. ಇದರಿಂದ ಅವರಿಗೂ ಆದಾಯ ಸೃಷ್ಟಿಯಾಗುತ್ತದೆ.
ಮರೆತ ತಿನಿಸುಗಳ ಪುನಶ್ಚೇತನ
ಅವರು ವಿವಿಧ ಕಾಲಗಳಲ್ಲಿ ವಿವಿಧ ಹಬ್ಬಗಳನ್ನು ಆಯೋಜಿಸುತ್ತಾರೆ. ಇವೆಲ್ಲವೂ ಆಹಾರ ವೈವಿಧ್ಯ, ಸಾಂಪ್ರದಾಯಿಕ ವಿಧಾನದಲ್ಲಿ ಮಾಡುವ ಅಡುಗೆ, ಮರೆತ ತಿನಿಸುಗಳು, ಹಸಿರು ತರಕಾರಿ ಮೊದಲಾದವನ್ನು ಬಳಸಿ ಮಾಡುವ ಅಡುಗೆಯ ವೈವಿಧ್ಯವನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಈ ಹಬ್ಬಗಳು ವೈವಿಧ್ಯತೆಯೇ ಆಹಾರ ಭದ್ರತೆಯ ಕೀಲಿ ಕೈ ಎನ್ನುವುದಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಈ ಹಬ್ಬಗಳು ವೈವಿಧ್ಯಮಯ ಆಹಾರಕ್ರಮಗಳು ಮತ್ತು ನಮ್ಮ ಆಹಾರ ಪದ್ಧತಿಯಲ್ಲಿರಬೇಕಾದ ವೈವಿಧ್ಯತೆಯು ಉತ್ತಮ ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕೆ ಹೇಗೆ ಮುಖ್ಯ ಎನ್ನುವುದನ್ನು ನಗರದ ಮಂದಿಗೆ ತಿಳಿಸಿಕೊಡುತ್ತವೆ. ಒಂದೇ ತಿಂಡಿಯನ್ನು ಹಲವು ರೀತಿಗಳಲ್ಲಿ ಮಾಡಬಹುದು ಎನ್ನುವುದನ್ನು ಇಲ್ಲಿ ಕಲಿಯಬಹುದಾಗಿದೆ. ಕೋಕಂನ ಹಲವು ಸಾಧ್ಯತೆಗಳ ಬಗ್ಗೆ ನಿಮಗೆ ತಿಳಿದಿತ್ತೇ? ಬುಡ ಕೋಕಂ ಹಬ್ಬವನ್ನು ಬೇಸಿಗೆಯಲ್ಲಿ (ಮೇ), ಬೆಲ್ಲದ ಹಬ್ಬವ್ನನು ಚಳಿಗಾಲದಲ್ಲಿ (ಫೆಬ್ರವರಿ) ಮತ್ತು ಮುಂಗಾರು ಹಬ್ಬವನ್ನು (ಭತ್ತದ ನಾಟಿ) ಮಳೆಗಾಲದಲ್ಲಿ (ಆಗಸ್ಟ್) ಆಯೋಜಿಸುತ್ತದೆ.

ಫೋಟೊ : ಕೋಕಂ ಹಬ್ಬದ ಸಮಯದಲ್ಲಿ ಹತ್ತಿರದ ಕಾಡುಗಳಿಂದ ಕೋಕಂ ಸಂಗ್ರಹಿಸಲಾಗುತ್ತದೆ
ಬಹಳ ಸಮಯದವರೆಗೆ ಸವಿತಾ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿರಲಿಲ್ಲ. ಆದರೆ ಆಕೆಯ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತವಾಗಿ ಜನಪ್ರಿಯತೆ ಹೆಚ್ಚಾದಂತೆ ಬೇಡಿಕೆಯ ಮಹಾಪೂರ ಹರಿಯಲಾರಂಭಿಸಿತು. ಆಕೆ ತನ್ನ ಉತ್ಪನ್ನಗಳನ್ನು ಬೆಂಗಳೂರಿನ ರಾಗಿಕಣದಲ್ಲಿ ಮಾರಾಟಮಾಡುತ್ತಾರೆ. ಆಕೆಯ ಉತ್ಪನ್ನಗಳು ನಗರಗಳಲ್ಲಿ ಮಾರಾಟವಾದರೂ ಕೂಡ ಆಕೆಗೆ ತನ್ನ ಉತ್ಪನ್ನಗಳ ಮಾರಾಟದೊಂದಿಗೆ ಅದರ ಹಿಂದಿನ ಕತೆಯನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುವ ಅವಕಾಶ ನೀಡುವ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಇಷ್ಟವಾಗುತ್ತದೆ.
ಸವಿತಾ ತರಹದ ವ್ಯಕ್ತಿಗಳು ಅನುಸರಿಸುತ್ತಿರುವ ಹಾದಿ ಮೆಚ್ಚುಗೆಗೆ ಅರ್ಹವಾದುದು ಅಲ್ಲವೆ? ಅವರು ತಮ್ಮ ಹೃದಯದ ಮಾತುಗಳನ್ನಾಡುತ್ತಾರೆ. ತಮ್ಮ ಉತ್ಪನ್ನಗಳಿಗೆ ಬ್ರಾಂಡ್ ಹಣೆಪಟ್ಟಿ ಹಚ್ಚುವುದನ್ನು ಒಪ್ಪುವುದಿಲ್ಲ. ಜನರು ತಾವಾಗಿ ಈ ಸ್ಥಳಗಳಿಗೆ ಭೇಟಿ ನೀಡಿ ಹಬ್ಬಗಳಲ್ಲಿ ಭಾಗಿಯಾಗಿ ನೆನಪುಗಳ ಮೂಟೆ ಹೊತ್ತು, ಮರೆತ ಅಡುಗೆಗಳ ಸ್ವಾದವನ್ನು ಸವಿದು ಖುಷಿಯಿಂದ ಹೋದರೆ ಅದಕ್ಕಿಂತ ಹೆಚ್ಚಿನದೇನು ಬೇಕು? ಅವರ ಸ್ಥಳಕ್ಕೆ ಭೇಟಿನೀಡುವುದು ನಿಜಕ್ಕೂ ಅದ್ಭುತ ಅನುಭವವನ್ನು ನೀಡುತ್ತದೆ. ಅಲ್ಲಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರ ಕಾರ್ಯಕ್ಕೆ ಮನ್ನಣೆ ನೀಡಿ ಕಲಿತು ಬರುವುದು ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ.
ಲಕ್ಷ್ಮಿ ಉನ್ನಿತನ್
Lakhmi Unnithan
Editor,
Agriculture World,
206, Narmada Apartments,
Near Don Bosco School, Alaknanda,
New Delhi 110019.
E-mail: dr.lakshmi@live.in
Kokum is collected from the nearby forestduring the
Kokum festiva
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೩ ; ಸೆಪ್ಟಂಬರ್ ೨೦೧೯



