ಸಣ್ಣಪ್ರಮಾಣದಲ್ಲಿ ಜಲಚರ ಸಾಕಣೆ ಗ್ರಾಮೀಣರ ಬದುಕಿಗೊಂದು ವರದಾನ


ಒರಿಸ್ಸಾದ ರೈತರು ಜಲಚರ ಸಾಕಣೆ ಕ್ಷೇತ್ರ ಶಾಲೆಗಳಲ್ಲಿ ಭಾಗವಹಿಸಿ ಸಣ್ಣ ಪ್ರಮಾಣದ ಜಲಚರ ಸಾಕಣೆಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಮೀನುಸಾಕಣೆಯನ್ನು ಕೂಡ ಕೈಗೊಂಡಿದ್ದು ಮೀನು ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ.


ದೇಶದ ಅರ್ಥವ್ಯವಸ್ಥೆಗೆ ಜಲಚರ ಸಾಕಣೆಯು ಅತ್ಯಂತ ಮಹತ್ವದ ಕೊಡುಗೆಯನ್ನು ನೀಡುತ್ತದೆ. ಮೀನು ಅತ್ಯಂತ ಮುಖ್ಯವಾದ ಆಹಾರವಾಗಿದ್ದು ಜನಸಂಖ್ಯೆಯ ಹೆಚ್ಚಳ ಮತ್ತು ಅದರ ಸೇವನೆಯಿಂದಾಗುವ ಆರೋಗ್ಯ ಲಾಭಗಳ ಕುರಿತು ಹೆಚ್ಚಿರುವ ಜಾಗೃತಿಯ ಪರಿಣಾಮವಾಗಿ ಬೇಡಿಕೆ ಹೆಚ್ಚಿದೆ. ಜಲಚರ ಸಾಕಣೆಯು ಬಹು ಮುಖ್ಯ ಪರಿಹಾರವಾಗಿ ಹೊರಹೊಮ್ಮಿದೆ. ಅದು ಎಲ್ಲವನ್ನೂ ಒಳಗೊಂಡಂತೆ ಸಮಗ್ರ ರೀತಿಯಲ್ಲಿ ಬೆಳವಣಿಗೆ ಹೊಂದುವಂತೆ ಮಾಡುವ ಸವಾಲು ನಮ್ಮೆದುರಿಗಿದೆ. ನೈಸರ್ಗಿಕ ಸಂಪನ್ಮೂಲಗಳ ಕುರಿತಾದ ಒತ್ತಡ, ಹವಾಮಾನ ಬದಲಾವಣೆಯ ಸವಾಲುಗಳು ಇವೆಲ್ಲವುಗಳ ನಡುವೆ ಇದನ್ನು ಸುಸ್ಥಿರವಾಗಿರುವಂತೆ ನೋಡಿಕೊಳ್ಳಬೇಕಿದೆ. ಜಲಚರ ಸಾಕಣೆಯು ಸ್ಥಳೀಯ ಯುವಕರಿಗೆ ಆದಾಯ ಮತ್ತು ಉದ್ಯೋಗ ಸೃಷ್ಟಿ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಅಪಾಯ ಕಡಿಮೆಯಿರುವುದರಿಂದ ಸಂಪನ್ಮೂಲಗಳ ಕೊರತೆಯಿರುವ ಸಣ್ಣ ರೈತರು ಕೂಡ ಸಣ್ಣ ಪ್ರಮಾಣದಲ್ಲಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ.

ಸುಸ್ಥಿರ ಜೀವನೋಪಾಯ ವಿಧಾನ

ಗ್ರಾಮೀಣ ಪ್ರದೇಶಗಳಲ್ಲಿ ಮೀನು ಕೃಷಿಯು ಹೊಂಡದ ಉತ್ಪಾದನಾ ಸಾಮರ್ಥ್ಯವನ್ನು ಅವಲಂಭಿಸಿರುತ್ತದೆ. ಪ್ರಾಣಿಗಳ ಗೊಬ್ಬರವನ್ನು ನೀರಿಗೆ ಸೇರಿಸುವುದರ ಮೂಲಕ ಹೊಂಡದ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಸಣ್ಣ ಪ್ರಮಾಣದಲ್ಲಿ ಆಹಾರ ಭದ್ರತೆ, ಪೌಷ್ಟಿಕಾಂಶ ಭದ್ರತೆ ಅದರಲ್ಲೂ ಉತ್ತಮ ಪ್ರೊಟೀನ್‌ ಇವುಗಳನ್ನು ಗ್ರಾಮೀಣ ಭಾಗದ ಜನ ಪಡೆಯಬಹುದು. ಇದು ನಿಸ್ಸಂಶಯವಾಗಿ ಅವರ ಬದುಕಿನ ಮೇಲೆ ಇತ್ಯಾತ್ಮಕ ಪರಿಣಾಮವನ್ನು ಬೀರುತ್ತದೆ.

ಒರಿಸ್ಸಾದ ಬೆಟ್ನೋಟಿಯಲ್ಲಿ ೫೯೯ ಹೆಕ್ಟೇರ್‌ ಪ್ರದೇಶದಲ್ಲಿ ೧೬೫೪ ಹೊಂಡಗಳಿವೆ. ಇದರಲ್ಲಿ ಗ್ರಾಮಪಂಚಾಯ್ತಿ ಮತ್ತು ಖಾಸಗಿಯವರ ಹೊಂಡಗಳು ಸೇರಿದೆ. ಈ ಭಾಗದ ರೈತರು ಸಾಂಪ್ರದಾಯಿಕ ಮತ್ತು ಸುಧಾರಿತ ಮೀನು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಉತ್ತಮ ಮೀನು ಕೃಷಿಯನ್ನು ಮಾಡಬಹುದು. ಹೀಗಾಗಿ ಮಯೂರಭಂಜನ ಕೃಷಿ ವಿಜ್ಞಾನ ಕೇಂದ್ರವು ಮೀನುಕೃಷಿಯನ್ನು ಪ್ರಚುರಪಡಿಸುವ ಸಲುವಾಗಿ ಸುಸ್ಥಿರ ಜೀವನೋಪಾಯ ವಿಧಾನ (SLA) ಅಳವಡಿಸಿಕೊಂಡಿತು.

ಫೋಟೊ : ರೈತರಿಗೆ ಜಲಚರ ಸಾಕಣೆ ಕ್ಷೇತ್ರ ಶಾಲೆಗಳ ಮೂಲಕ ಮೀನು ಕೃಷಿ ಕುರಿತು ಶಿಕ್ಷಣ ನೀಡಲಾಯಿತು

ಸುಸ್ಥಿರ ಜೀವನೋಪಾಯ ವಿಧಾನ (SLA)ದ ಉದ್ದೇಶ ಬಡತನವನ್ನು ತಗ್ಗಿಸುವುದು, ದುರ್ಬಲ ಸಮುದಾಯಗಳು ಸಣ್ಣ ಪ್ರಮಾಣದಲ್ಲಿ ಜಲಚರ ಮತ್ತು ಮೀನುಸಾಕಣೆ ಕೈಗೊಳ್ಳುವಂತೆ ಮಾಡುವುದು. SLA ಮೂಲಕ ಮೀನು ಕೃಷಿಕರು ತಮ್ಮ ಹೊಂಡಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಯಿತು. ಕೃಷಿ ಕುಟುಂಬಗಳನ್ನು ಇದರಲ್ಲಿ ಒಳಗೊಳ್ಳಲಾಯಿತು. ಸಂಪನ್ಮೂಲಗಳ ಬಳಕೆಯನ್ನು ಉತ್ತಮಗೊಳಿಸಲಾಯಿತು. ವಿವಿಧ ಅಂಶಗಳನ್ನು ಮೀನುಕೃಷಿಯಲ್ಲಿ ಸೇರಿಸಿಕೊಳ್ಳಲಾಯಿತು. ಕೃಷಿ ಭೂಮಿ, ಕೃಷಿ ತ್ಯಾಜ್ಯ (ಸಗಣಿ, ಎರೆಹುಳುಗೊಬ್ಬರ) ಇವುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ರೈತ ಕುಟುಂಬದ ಆದಾಯವನ್ನು ಹೆಚ್ಚಿಸಿ ಸುಸ್ಥಿರತೆ ಸಾಧಿಸುವಂತೆ ಮಾಡಲಾಯಿತು.

ಜನರೇ ಈ ಅಭಿವೃದ್ಧಿಯ ಕೇಂದ್ರಬಿಂದು. ೧೫-೨೦ ಮಂದಿಯಿರುವ ಮಹಿಳಾ ಗುಂಪುಗಳು ಮತ್ತು ಮೀನು ಕೃಷಿಕರ ಗುಂಪುಗಳನ್ನು ರಚಿಸಲಾಯಿತು. ಮನೆಗೆ ಹತ್ತಿರವಿರುವ ಸಣ್ಣ ಹಾಗೂ ಮಳೆಗಾಲದ ಹೊಂಡಗಳನ್ನು ಬಳಸಲಾಯಿತು. ಹೊಂಡದ ನೀರಿಗೆ ಗೊಬ್ಬರವನ್ನು ಹಾಕುವ ಮೂಲಕ ನೈಸರ್ಗಿಕ ಆಹಾರ ಹೆಚ್ಚಾಗುವಂತೆ ಮಾಡಲಾಯಿತು (ಪಾಚಿ): ಅಡುಗೆ ಮನೆ ಮತ್ತು ಕೃಷಿ ತ್ಯಾಜ್ಯವನ್ನು ಆಹಾರಕ್ಕಾಗಿ ಬಳಸಲಾಯಿತು. ಹೊಂಡದ ಬದುಗಳಲ್ಲಿ ಆ ನೀರನ್ನೇ ಬಳಸಿಕೊಂಡು ತರಕಾರಿಗಳನ್ನು ಬೆಳೆಯಲಾಯಿತು.

ಜಲಚರ ಸಾಕಣೆ ಕ್ಷೇತ್ರ ಶಾಲೆ

ಜಲಚರ ಸಾಕಣೆ ಕ್ಷೇತ್ರ ಶಾಲೆ  (AFS) ಎನ್ನುವುದು ರೈತರಿಂದ ರೈತರಿಗೆ ಎನ್ನುವ ತತ್ವವನ್ನಾಧರಿಸಿದ ಐಸಿಎಆರ್‌ – ಸಿಐಎಫ್‌ಎನವರು ಅಳವಡಿಸಿಕೊಂಡ ವಿಧಾನ. ಮೀನು ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವುದು ಇದರ ಉದ್ದೇಶ. ಇದು ಬಯಲು ಶಾಲೆಯಾಗಿದ್ದು ಮೀನು ಕೃಷಿಕರ ಸಮುದಾಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ನರ್ಸರಿ, ಆಹಾರ ನಿರ್ವಹಣೆ, ರೋಗ ನಿಧಾನ, ಆಹಾರ ನೀಡಿಕೆಯ ಕ್ರಮ, ಸಮಗ್ರ ಕೃಷಿ, ಮಣ್ಣು, ನೀರು ಮತ್ತು ತಂತ್ರಜ್ಞಾನ ಈ ಕುರಿತು ಕಲಿಯಬಯಸುವವರಿಗೆ ಈ ಶಾಲೆಯು ಕಲಿಕಾ ಕೇಂದ್ರದಂತೆ ನೆರವಾಗುತ್ತದೆ. ಇಲ್ಲಿ ೨೫ಕ್ಕೂ ಹೆಚ್ಚಿನ ಮೀನು ತಳಿಗಳ ಕುರಿತು ತಿಳಿವಳಿಕೆ ಮತ್ತು ಸಿಹಿನೀರು ಮೀನುಸಾಕಣೆ ಕುರಿತು ಕೂಡ ತಿಳಿದುಕೊಳ್ಳಬಹುದು.

ಇದರ ಮುಖ್ಯ ಉದ್ದೇಶ ಮಯೂರ್‌ಭಂಜ್‌ ಜಿಲ್ಲೆಯಲ್ಲಿ ಪ್ರತಿವರ್ಷ ೨೦೦೦ ರೈತರಿಗೆ ಶಿಕ್ಷಣ ನೀಡುವುದು. ಒರಿಸ್ಸಾ ಕೌಶಲ್ಯಾಭಿವೃದ್ಧಿ ಕೇಂದ್ರವು ಇದಕ್ಕೆ ಸಹಯೋಗ ನೀಡಿದೆ. ೨೪ನೇ ಜುಲೈ ೨೦೧೭ರಂದು ಕೈಲಾಶ್‌ ಫಿಶ್‌ ಹ್ಯಾಚರಿ, ಅಷ್ಟಪುರ ಇವರು ಮಯೂರ್ಭುಂಜ್‌ನಲ್ಲಿ ಐಸಿಎಆರ್‌ – ಸಿಐಎಫ್‌ಎನ ಸಹಯೋಗದೊಂದಿಗೆ ಕ್ಷೇತ್ರಶಾಲೆಯನ್ನು ಆರಂಭಿಸಿದರು.

ವಾರದಲ್ಲಿ ಒಮ್ಮೆ ಕ್ಷೇತ್ರಶಾಲೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ತಳಿ ಅಭಿವೃದ್ಧಿ, ಹಾಪಾ ತಳಿವಿಧಾನ, ಚೀನಿ ಮಾದರಿಯ ಹ್ಯಾಚರಿ, ನರ್ಸರಿ ಮತ್ತು ಭಾರತೀಯ ಮುಖ್ಯ ತಳಿಗಳು ಮತ್ತು ಇತರೇ ತಳಿಗಳ ಸಾಕಣಿಕೆ ಪದ್ಧತಿಗಳನ್ನು ಕಲಿಸಿಕೊಡಲಾಗುತ್ತದೆ. ಅಭ್ಯರ್ಥಿಗಳಿಗೆ ಸಮತೋಲಿತ ಪೌಷ್ಟಿಕ ಆಹಾರ ತಯಾರಿಕೆ ಮತ್ತು ನಿರ್ವಹಣಾ ಪದ್ಧತಿಗಳನ್ನು ಕುರಿತು ಕೂಡ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಸೂಕ್ತ ಪ್ರೌಢ ಮೀನುಗಳನ್ನು ಗುರುತಿಸುವುದು, ಅವುಗಳನ್ನು ಸಾಕುವ ಬಗೆ, ಆಹಾರ ನೀಡಿಕೆ ಕ್ರಮಗಳು, ಮೀನು ಕೃಷಿಯಲ್ಲಿ ಸಾವಯವ ಹಾಗೂ ಸಾವಯವವಲ್ಲದ ಗೊಬ್ಬರಗಳ ಮಹತ್ವ, ಸೂಕ್ತ ಸಮಯದಲ್ಲಿ ಕೊಯ್ಲು ಮಾಡಿ ಮಾರಾಟ ಮಾಡುವ ಮಾರುಕಟ್ಟೆ ತಂತ್ರಗಳು ಇವುಗಳನ್ನು ಸಹ ತಿಳಿಸಿಕೊಡಲಾಗುತ್ತದೆ. ಕಾರ್ಯಕ್ರಮದ ನಂತರ ರೈತರಿಗೆ ಸಣ್ಣ ಮಟ್ಟದ ಆದಾಯ ಗಳಿಸಿಕೊಡುವ ಚಟುವಟಿಕೆಗಳಾದ ಮಳೆ ಹೊಂಡಗಳಲ್ಲಿ ಮೀನುಮರಿ ಉತ್ಪಾದನೆ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದಾದ ಮೊಟ್ಟೆ ಉತ್ಪಾದನೆ ಇವುಗಳ ಕುರಿತು ಕೂಡ ತಿಳಿಸಲಾಗುತ್ತದೆ.

ಚೌಕ : ಪೌಷ್ಟಿಕಾಂಶಯುಕ್ತ ಆರೋಗ್ಯಕ್ಕೆ ಮೀನಿನ ಕೊಡುಗೆ

ಮೀನು ಪೌಷ್ಟಿಕಾಂಶಯುಕ್ತ ಆಹಾರ. ಅದರಲ್ಲಿ ಸುಲಭವಾಗಿ ಜೀರ್ಣವಾಗಬಲ್ಲ ಹೆಚ್ಚಿನ ಮಹತ್ವವುಳ್ಳ ಪ್ರೋಟಿನ್‌ ಅಂಶವಿದೆ. ಮೀನಿನಲ್ಲಿ ಒಮೆಗಾ ೩ ಇದೆ. ಇದು  ಸಹಜವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯವಾದ ಪೌಷ್ಟಿಕಾಂಶ.  ಅದರಲ್ಲೂ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಇದು ಅತ್ಯಗತ್ಯ. ಮೀನಿನಲ್ಲಿ ವಿಟಮಿನ್‌ ಮತ್ತು ಖನಿಜಾಂಶಗಳು ಕೂಡ ಹೆಚ್ಚಾಗಿವೆ. ಆದ್ದರಿಂದ ಮೀನು ಡಯಟ್‌ ಮಾಡುವವರಿಗೆ ಕೂಡ ಬಹಳ ಉಪಯುಕ್ತವಾದ ಆಹಾರ. ಇದರ ಸೇವನೆಯಿಂದ ಅಗತ್ಯವಾದ ಪೌಷ್ಟಿಕಾಂಶಗಳು ಲಭ್ಯವಾಗುತ್ತವೆ.

ಶ್ರೀ ಅಕ್ಷಯ್‌ ಕುಮಾರ್‌ ಸಾಹು ಅವರ ತೋಟದಲ್ಲಿ ಜಲಚರ ಸಾಕಣೆ ತಂತ್ರಜ್ಞಾನ ಕುರಿತ ಪ್ರದರ್ಶನವನ್ನು ಇರಿಸಲಾಗಿದೆ. ರೈತರು ಇಲ್ಲಿಗೆ ಯಾವಾಗ ಬೇಕಾದರೂ ಭೇಟಿ ನೀಡಿ ಜಲಚರ ಸಾಕಣೆಯ ತಂತ್ರಜ್ಞಾನಗಳನ್ನು ಕಲಿಯಬಹುದಾಗಿದೆ.  ಇವರು ಐಸಿಎಆರ್-‌ ಸಿಐಎಫ್‌ಎ ಮತ್ತು ಒರಿಸ್ಸಾದ ಮೀನುಗಾರಿಕಾ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರೈತರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆವಿಕೆಯ ಸಂಪನ್ಮೂಲ ವ್ಯಕ್ತಿಗಳಿಗೆ ವಿವಿಧ ವಿಷಯಗಳಲ್ಲಿ ಅಂದರೆ ಬಾತುಕೋಳಿ ಸಾಕಣೆ, ಅಣಬೆ ಕೃಷಿ, ಜೇನು ಸಾಕಣೆ, ಕೋಳಿ ಸಾಕಣೆ ಮತ್ತು ತರಕಾರಿ ಕೃಷಿಯಲ್ಲಿ ಕೂಡ ತರಬೇತಿ ನೀಡಿರುತ್ತದೆ.

ಕಾರ್ಯಕ್ರಮದ ನಂತರ ಶ್ರೀ ಅಕ್ಷಯ ಕುಮಾರ್‌ ಸಾಹು ಅವರು ಪ್ರತಿ ತಂಡದಲ್ಲಿನ ೨೫-೩೦ ಅಭ್ಯರ್ಥಿಗಳಲ್ಲಿ  ೫-೭ ಮಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರನ್ನು ತಮ್ಮ ತೋಟದಲ್ಲಿ ಒಂದು ತಿಂಗಳವರೆಗೆ ತಮ್ಮೊಂದಿಗೆ ಕೆಲಸ ಮಾಡಲು ಅವಕಾಶ ನೀಡುತ್ತಾರೆ.

ಜಲಚರ ಸಾಕಣೆ ಕ್ಷೇತ್ರ ಶಾಲೆ

ಜಲಚರ ಸಾಕಣೆ ಕ್ಷೇತ್ರ ಶಾಲೆ ನಿರ್ಮಾಣದ ಹಂತಗಳು

  • ಸಾವಿರಾರು ರೈತರಿಗೆ ಮಾದರಿಯಾಗಬಲ್ಲ ಸೂಕ್ತ ರೈತ್ಯೋದ್ಯಮಿಯ ಆಯ್ಕೆ.
  • ಆ ಪ್ರದೇಶದಲ್ಲಿ ಸೀಮಿತ ಅವಧಿಗೆ ಪಡೆಯಬಹುದಾದ ಸಮುದಾಯದ ಹೊಂಡಗಳು, ಜಲಚರ ಸಾಕಣೆ ನಿರ್ವಹಣಾ ಪದ್ಧತಿಗಳು, ಉತ್ಪಾದನೆ, ಮಾರ್ಕೆಟಿಂಗ್‌ ಇತ್ಯಾದಿ ಕುರಿತ ಮಾಹಿತಿ ಸಂಗ್ರಹ.
  • ಸಿಐಎಫ್‌ಎ ಮತ್ತು ಕೆವಿಕೆ ಸಿಬ್ಬಂದಿಗಳು ರೈತ್ಯೋದ್ಯಮಿಗಳಿಗೆ ತರಬೇತಿ ನೀಡುತ್ತಾರೆ.
  • ಜಲಚರ ಸಾಕಣೆ ಕ್ಷೇತ್ರ ಶಾಲೆಗಳಲ್ಲಿ ಮೂಲಭೂತ ಕಲಿಕಾ ಸೌಲಭ್ಯಗಳನ್ನು ರೂಪಿಸಲು ನೆರವು ನೀಡುತ್ತಾರೆ.
  • ಜಲಚರ ಸಾಕಣೆ ಕ್ಷೇತ್ರ ಶಾಲೆಯನ್ನು ಸಿಹಿನೀರು ಜಲಚರ ಸಾಕಣೆಯಲ್ಲಿ ಆರಂಭಿಸಲಾಗುತ್ತದೆ.
  • ರೈತರನ್ನು ಕೇಂದ್ರವಾಗಿರಿಸಿಕೊಂಡ ಪಠ್ಯ ರಚನೆ.
  • ಕಾರ್ಯಕ್ರಮದ ಅವಧಿಯಲ್ಲಿ ರೈತರಿಗೆ ಅಗತ್ಯವಾದ ತಂತ್ರಜ್ಞಾನದ ನೆರವು ನೀಡಿಕೆ.
  • ತರಬೇತಿ ಪಡೆದ ರೈತರ ತೋಟಗಳಿಗೆ ನಿರಂತರವಾಗಿ ಭೇಟಿ ನೀಡುವ ಮೂಲಕ ಅವರ ಕಲಿಕೆಯನ್ನು ಸುಧಾರಿಸುವುದು.

ಫೋಟೊ : ಹಳ್ಳಿಯ ಸಮುದಾಯಕ್ಕೆ ಸೇರಿದ ಹೊಂಡದಲ್ಲಿ ಒಟ್ಟಾಗಿ ಮೀನು ಕೃಷಿ ಮಾಡುತ್ತಿರುವುದು

ಸುಮಾರು ೮೦೦ ಮಂದಿ ಅಭ್ಯರ್ಥಿಗಳು ಜಲಚರ ಸಾಕಣೆ ಕ್ಷೇತ್ರಶಾಲೆಯಲ್ಲಿ ತರಬೇತಿಯನ್ನು ಪಡೆದರು. ಅವರಲ್ಲಿ ನಾಲ್ಕು ಮಂದಿ ಎಫ್‌ಆರ್‌ಪಿ ಹ್ಯಾಚರಿಯನ್ನು ಹೊಂದಿದ್ದು ಮೀನು ತಳಿ ಅಭಿವೃದ್ಧಿ ಮಾಡುತ್ತಿದ್ದಾರೆ. ೨೦೦-೨೫೦ ರೈತರು ತಮ್ಮ ತೋಟಗಳಲ್ಲಿನ ಹೊಂಡದಲ್ಲಿ ಮತ್ತು ಬಾಡಿಗೆಗೆ ಪಡೆದ ಹಳ್ಳಿಯ ಸಮುದಾಯದ ಹೊಂಡದಲ್ಲಿ ಮೀನು ಕೃಷಿ ಮಾಡುತ್ತಿದ್ದಾರೆ. ೭೦-೮೦ ರೈತರು ಮೀನಿನ ಮೊಟ್ಟೆಗಳ ಸಾಕಣೆ ಮಾಡುತ್ತಿದ್ದಾರೆ.

ಸಮುದಾಯ ಆಧಾರಿತ ನಿರ್ವಹಣೆ

ಸಮುದಾಯಕ್ಕೆ ಸೇರಿದ ಸಂಪನ್ಮೂಲವನ್ನು ಮೀನುಗಾರಿಕೆಗಾಗಿ ಬಳಸಿಕೊಳ್ಳುವ ಮೂಲಕ ಸಮುದಾಯ ಆಧಾರಿತ ನಿರ್ವಹಣಾ ವಿಧಾನವನ್ನು ಪ್ರಯತ್ನಿಸಲಾಯಿತು. ಸರ್ಕಾರದ ನೆರವಿನಿಂದ ಸಮುದಾಯಕ್ಕೆ ಸೇರಿದ ಪ್ರದೇಶದಲ್ಲಿ ಒಟ್ಟಾಗಿ ಮೀನು ಕೃಷಿಯನ್ನು ಮಾಡಲಾಯಿತು. ಕ್ಷೇತ್ರ ಶಾಲೆಯ ಮೂಲಕ ಬಾದಸಾಹಿಯ ಸ್ವಸಹಾಯ ಸಂಘದ ಮೂವರು ಮಹಿಳೆಯರು ಮತ್ತು ಉದ್ಲಾದ ಇಬ್ಬರು ಮಹಿಳೆಯರು ಮತ್ತು ಮೂವರು ಗಂಡಸರು ಈ ಕೃಷಿಯಲ್ಲಿ ಒಟ್ಟಾಗಿ ತೊಡಗಿಕೊಂಡರು. ಕೆವಿಕೆ ಅವರಿಗೆ ಮೀನುಸಾಕಣೆಗೆ ಅಗತ್ಯವಾದ ನೆರವನ್ನು ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ನೀಡಿತು. ಈ ರೀತಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಅವರು ೮-೧೨ ಕ್ವಿಂಟಾಲ್‌ ಮೀನು ಉತ್ಪಾದನೆ ಮಾಡಿದರು. ಪ್ರತಿ ಎಕರೆಗೆ ರೂ.೫೮,೦೦೦ ಆದಾಯವನ್ನು ೬-೮ ತಿಂಗಳೊಳಗೆ ಗಳಿಸಿದರು. ಲಾಭವನ್ನು ಪ್ರತಿಯೊಬ್ಬರು ಕೆಲಸ ಮಾಡಿದ ಒಟ್ಟುದಿನಗಳ ಆಧಾರದ ಮೇಲೆ ಹಂಚಿಕೆ ಮಾಡಿಕೊಳ್ಳಲಾಯಿತು.

ಮಯೂರ್ಭುಂಜ್‌ ಜಿಲ್ಲೆಯ ಉಡ್ಲಾದ ಭಿಮತಲ್ಲಿಯಲ್ಲಿ ಮಹಿಳಾ ಸ್ವಸಹಾಯ ಸಂಘದವರು ಮತ್ತು ಆಸಕ್ತ ರೈತರ ಗುಂಪಿನವರು ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಗುಂಪಿನಲ್ಲಿ ೧೦ ಅಭ್ಯರ್ಥಿಗಳಿದ್ದಾರೆ. ಆ ಪ್ರದೇಶದಲ್ಲಿ ಹಲವಾರು ಮಳೆ ಹೊಂಡಗಳಿದ್ದು ಕೆವಿಕೆಯವರ ಮಾರ್ಗದರ್ಶನದಲ್ಲಿ ಮಹಿಳಾ ಗುಂಪಿನವರು ಆರು ಖಾಸಗಿ ಹೊಂಡಗಳನ್ನು ಬಾಡಿಗೆಗೆ ಪಡೆದರು. ಮೀನು ಮರಿಗಳ ಸಾಕಣೆ ಮಾಡಿ ನಾಲ್ಕು ತಿಂಗಳಲ್ಲಿ ರೂ.೪೨,೦೦೦ವನ್ನು ಪಡೆದರು. ರೈತರ ಆಸಕ್ತ ಗುಂಪಿನಲ್ಲಿ ೧೫ ಅಭ್ಯರ್ಥಿಗಳಿದ್ದು ಅವರು ಹಳ್ಳಿಯ ಎರಡು ಕೆರೆಗಳನ್ನು ಬಾಡಿಗೆಗೆ ಪಡೆದು ಮೀನು ಸಾಕಣೆ ಮಾಡಿದರು. ಎಂಟು ತಿಂಗಳಲ್ಲಿ ರೂ.೭೧,೦೦೦ ಗಳಿಸಿದರು. ಮಹಿಳಾ ಗುಂಪಿನವರು ಆಸಕ್ತ ರೈತರ ಗುಂಪಿಗೆ ಮತ್ತು ಹತ್ತಿರದ ಹಳ್ಳಿಗಳಿಗೆ ಮೀನು ಮರಿಗಳನ್ನು ಪೂರೈಸಿದರು. ಮೀನು ಮರಿಗಳ ಪೂರೈಕೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಾಯಿತು.

ಸಮುದಾಯಕ್ಕೆ ಸೇರಿದ ಸಂಪನ್ಮೂಲವನ್ನು ಮೀನುಗಾರಿಕೆಗಾಗಿ ಬಳಸಿಕೊಳ್ಳುವ ಮೂಲಕ ಸಮುದಾಯ ಆಧಾರಿತ ನಿರ್ವಹಣಾ ವಿಧಾನವನ್ನು ಪ್ರಯತ್ನಿಸಲಾಯಿತು.

ಸಮುದಾಯ ಸಂಪನ್ಮೂಲ ನಿರ್ವಹಣೆಯ ಯಶಸ್ಸಿಗೆ ಕೆಲವು ಅಂಶಗಳು ಅತ್ಯಗತ್ಯ ಎಂದು ಬಳಕೆದಾರರು ಗುರುತಿಸಿದ್ದಾರೆ. ಅವುಗಳಲ್ಲೊಂದು ಕೆಲವು ಹೀಗಿವೆ  ಸಣ್ಣಗುಂಪು ಒಳ್ಳೆಯದು. ಇದರಿಂದ ಗಮನಿಸುವಿಕೆ, ಮೇಲ್ವಿಚಾರಣೆಗೆ ಅನುಕೂಲವಾಗುತ್ತದೆ. ಪರಿಣಾಮಕಾರಿ ಗ್ರಾಮೀಣ ಸಮುದಾಯ ವಿಧಾನದಿಂದ ಮಳೆಹೊಂಡಗಳು, ಜವುಗುಪ್ರದೇಶಗಳು, ನೆರೆಆವೃತ ಅಡವಿಗಳು ಮತ್ತು ಮ್ಯಾಂಗ್ರೋವ್‌ ಕಾಡುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ.

 ಕೊನೆಯ ಮಾತು

ಸುಸ್ಥಿರ ಜೀವನೋಪಾಯ ವಿಧಾನದ ಅಳವಡಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರ ಶಾಲೆಗಳು ಮೀನುಗಾರಿಕಾ ಸಮುದಾಯಗಳಿಗೆ ವರವಾಗಿ ಪರಿಣಮಿಸಿದೆ. ಸಾಕಣೆ ಮಾಡಿದ ಮೀನಿನಲ್ಲಿ ಸುಮಾರು ೪೦% ಮನೆಬಳಕೆಗೆ ಬಳಸಿದ್ದರೆ ೬೦% ಮೀನನ್ನು ಮಾರಾಟಮಾಡಲಾಗಿದೆ. ಇದರಿಂದ ಮೀನುಕೃಷಿ ಕುಟುಂಬಗಳಿಗೆ ಆದಾಯ ಮತ್ತು ಪೌಷ್ಟಿಕಾಂಶ ಭದ್ರತೆ ಸಿಕ್ಕಂತಾಗಿದೆ. ಸೂಕ್ತ ವಿಧಾನ ಮತ್ತು ತಂತ್ರಜ್ಞಾನಗಳನ್ನು ಅನುಸರಿಸಿದರೆ ಗ್ರಾಮೀಣ ಮಹಿಳೆಯರು ಸುಸ್ಥಿರ ಜಲಚರ ಸಾಕಣೆ ಮಾಡಬಹುದು ಎನ್ನುವುದು ಸಾಬೀತಾಗಿದೆ. ಸಮುದಾಯದ ಸಂಪನ್ಮೂಲಗಳ ಸೂಕ್ತ ನಿರ್ವಹಣೆಯಿಂದ ಜೀವನ ಮಟ್ಟ ಸುಧಾರಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯಾಗುತ್ತದೆ. ಗ್ರಾಮೀಣ ಜಲಚರಸಾಕಣೆಯು ಉದ್ಯಮವಾಗಿ ಬೆಳೆಯುತ್ತಿದೆ. ಸಹ ನಿರ್ವಹಣೆ ಮತ್ತು ಸಮುದಾಯ ಆಧಾರಿತ ನಿರ್ವಹಣಾ ವಿಧಾನಗಳು ಆರ್ಥಿಕವಾಗಿ ಲಾಭದಾಯಕವಾಗಿದೆ.

ಬಿಸ್ವಾ ರಂಜನ್ಸಮಂತರಾಯ್‌, ಸತ್ಯಜಿತ್ಕುಮಾರ್ಭುಯಾನ್ಮತ್ತು ಸುರೇಂದ್ರ ಕುಮಾರ್ಘಡೆ


Biswa Ranjan Samantaray

Scientist (Fishery Sc.), Krishi Vigyan Kendra

Mayurbhanj-1

Shayamakhunta, Mayurbhanj-757049, Odisha

E-mail: brsamantaray@yahoo.co.in

Satyajit Kumar Bhuyan

Associate Professor, College of Fisheries, OUAT,

Rangeilunda, Berhampur, Odisha

Surendra Kumar Ghadei

District Fisheries Officer , Mayurbhanj, Odisha-757049

 

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೧; ಮಾರ್ಚ್‌ ೨೦೧೯

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp