ಸಂಯೋಜಿತ ಮೀನು ಕೃಷಿ ಮೂರು ಚಟುವಟಿಕೆಗಳ ಸಮ್ಮಿಲನ ವಿಧಾನ


ಬೆಟ್ಟ ಪ್ರದೇಶಗಳಲ್ಲಿ ಬೇಕಾದಷ್ಟು ನೀರಿನ ಸಂಪನ್ಮೂಲಗಳು ಲಭ್ಯವಿರುವುದರಿಂದ ಉತ್ತರಖಾಂಡದ ಬೆಟ್ಟಪ್ರದೇಶಗಳ ಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯೊಂದಿಗೆ ಮತ್ತೊಂದು ದಾರಿಯನ್ನು ಕಂಡುಕೊಂಡಿದ್ದಾರೆ. ಗ್ರಾಮ ಸಮುದಾಯಗಳು ಮೀನುಸಾಕಣೆ, ಕೋಳಿ ಸಾಕಣೆ ಮತ್ತು ತರಕಾರಿ ಕೃಷಿಯನ್ನು ಒಟ್ಟಾಗಿ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ಕಂಡುಕೊಂಡವು. ಆದಾಯದೊಂದಿಗೆ ಈ ಸಂಯೋಜಿತ ಮಾದರಿ ಕೃಷಿಯು ಕುಟುಂಬದ ಸದಸ್ಯರ ಪೌಷ್ಟಿಕಾಂಶ ಮಟ್ಟವನ್ನು ಉತ್ತಮಗೊಳಿಸಿತು.


ಫೋಟೊ : ರೈತರ ಜಮೀನುಗಳಲ್ಲಿಯೇ ಮೀನು ಕೃಷಿಯನ್ನು ಉತ್ತೇಜಿಸುವ ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು

ಉತ್ತರಾಖಾಂಡವು ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿರುವ ರಾಜ್ಯ. ಕೃಷಿ ಅಲ್ಲಿನ ಪ್ರಧಾನ ಉದ್ಯೋಗ. ರಾಜ್ಯದ ಬಯಲು ಪ್ರದೇಶದಲ್ಲಿನ ಕೃಷಿಯು ಅಭಾದಿತವಾಗಿದ್ದು ಸಾಕಷ್ಟು ಆಹಾರವನ್ನು ಉತ್ಪಾದಿಸುತ್ತದೆ. ಆದರೆ ಬೆಟ್ಟಪ್ರದೇಶಗಳಲ್ಲಿನ ಕೃಷಿಯು ಫಲವತ್ತತೆಯಿಲ್ಲದ ಮಣ್ಣು, ನೀರಿನ ಅಭಾವ ಮತ್ತು ಸಣ್ಣ ಸಣ್ಣ ಭೂಮಿಯಿಂದಾಗಿ ಸೊರಗಿದೆ. ಹವಾಮಾನ ಅನಿಶ್ಚತತೆಯೊಂದಿಗೆ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆ ಉತ್ಪಾದನೆಯು ಕುಂಠಿತವಾಗಿದೆ.  ಈ ರೀತಿಯ ಸನ್ನಿವೇಶವು ರೈತರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಕೃಷಿ ಭೂಮಿಯನ್ನು ವಿಸ್ತರಿಸುವುದು ಸಾಧ್ಯವಿಲ್ಲದ ಮಾತು. ಇರುವುದರಲ್ಲೇ ಹೊಸ ಕೃಷಿ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ಈ ಪ್ರದೇಶದಲ್ಲಿ ನೀರಿನ ಸಂಪನ್ಮೂಲಗಳು ಹೆಚ್ಚಿವೆ. ಇದು ಕೃಷಿಯೊಂದಿಗೆ ಮೀನು ಸಾಕಣೆಯನ್ನು ಮಾಡಲು ಅನುಕೂಲವಾಗಿದೆ (integrated fish farming (IFF). ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡುವ ಸಲುವಾಗಿ ಇರುವ ನೀರು ಮತ್ತು ಭೂ ಸಂಪನ್ಮೂಲವನ್ನು ಬಳಸಿಕೊಂಡು ಉದ್ಯೋಗ ಮತ್ತು ಆದಾಯವನ್ನು ಸೃಷ್ಟಿಸುವ ಸಲುವಾಗಿ ಮತ್ತು ಗ್ರಾಮೀಣ ಜನರಿಗೆ ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುವ ಸಲುವಾಗಿ ಜಿ.ಬಿ. ಪಂತ್‌ ನ್ಯಾಷನಲ್‌ ಇನ್ಸ್‌ಟ್ಯೂಟ್‌ ಆಫ್‌ ಹಿಮಾಲಯನ್‌ ಎನ್ವಿರಾನ್ಮೆಂಟ್‌ ಅಂಡ್‌ ಸಸ್ಟೈನಬಲ್‌ ಡೆವಲಪ್‌ಮೆಂಟ್‌ ಕೊಸಿಕತಾರ್‌ಮಲ್‌, ಅಲ್ಮೊರದವರು ಸಂಯೋಜಿತ ಮೀನು ಕೃಷಿಯನ್ನು ಪ್ರಚುರಪಡಿಸಿದರು. ಅಲ್ಮೊರಾ ಜಿಲ್ಲೆಯ ಬಸೊಲಿ ಮತ್ತು ಮನಾನ್‌ನಲ್ಲಿ ರೈತರ ಜಮೀನಿನಲ್ಲಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಇದರಲ್ಲಿ ತರಕಾರಿ ಕೃಷಿ, ಮೀನು, ಜಾನುವಾರು ಮತ್ತು ಕೋಳಿ ಸಾಕಣಿಕೆಯ ಸಂಯೋಜಿತ ಕೃಷಿ ವಿಧಾನವನ್ನು ತಿಳಿಸಿಕೊಡಲಾಯಿತು. ಇದನ್ನು 2004-07ರ ನಡುವೆ ನಡೆಸಲಾಯಿತು.

 ಜೀವನೋಪಾಯ ಭದ್ರತೆಗಾಗಿ ತಂತ್ರಜ್ಞಾನ ಕೇಂದ್ರಿತ ಮಾದರಿಯ ಅಭಿವೃದ್ಧಿ

ಈ ಭಾಗದ ರೈತರು ಕೃಷಿ ಮತ್ತಿತರ ಚಟುವಟಿಕೆಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ನಡೆಸುತ್ತಾರೆ. ಎರಡು ವರ್ಷಗಳಲ್ಲಿ ಧಾನ್ಯಗಳು ಮತ್ತು ಕಾಳುಗಳು ಹೀಗೆ ಒಂದಾದ ನಂತರ ಒಂದರಂತೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಗೋಧಿ, ಬಾರ್ಲಿ, ಭತ್ತ, ರಾಗಿ, ಊದಲು, ಸೊಯಾ ಬೀನ್‌, ಹುರಳ ಮತ್ತು ತರಕಾರಿಯನ್ನು ಹೀಗೇ ಒಂದರ ನಂತರ ಒಂದರಂತೆ ಬೆಳೆಯುತ್ತಾರೆ. ಡೈರಿ ಮತ್ತು ತರಕಾರಿ ಕೃಷಿಯು ಸಣ್ಣರೈತರ ಆದಾಯ ಮೂಲಗಳು. ಕೆಲವರು ತಮ್ಮ ಜಮೀನಿನಲ್ಲಿ ನೀರಿನ ಮೂಲಗಳನ್ನು ಹೊಂದಿದ್ದರೂ ಕೂಡ ಮೀನು ಕೃಷಿಯು ಉತ್ತರಖಾಂಡದ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ.

2004-05ರಲ್ಲಿ ಹಳ್ಳಿಗಳಲ್ಲಿನ ಸ್ಥಿತಿಯನ್ನು ತಿಳಿಯುವ ಸಲುವಾಗಿ ಹಳ್ಳಿಗರಿಗೆ ಪಾರ್ಟಿಸಿಪೇಟರಿ ರೂರಲ್‌ ಅಪ್ರೈಸಲ್‌ ನಡೆಸಲಾಯಿತು. ಇದರಲ್ಲಿ ವೃದ್ಧರು, ಮಹಿಳೆಯರು ಮತ್ತು ಗ್ರಾಮಪಂಚಾಯ್ತಿಯ ಸದಸ್ಯರು ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ ಬಹುಪಾಲು ರೈತರು ಸಾಂಪ್ರದಾಯಿಕ ಬೆಳೆ ಪದ್ಧತಿಯೊಂದಿಗೆ ಸಂಯೋಜಿತ ಮೀನು ಕೃಷಿಯಲ್ಲಿ ಆಸಕ್ತಿ ತೋರಿದರು. ರೈತರ ಅವಶ್ಯಕತೆ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಸಂಪನ್ಮೂಲಗಳಿಗೆ ತಕ್ಕಂತೆ ರೈತರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆಯ್ಕೆಯಾದ ಎಲ್ಲ ರೈತರ ಜಮೀನುಗಳ ಹತ್ತಿರ ನೀರಿನ ಮೂಲಗಳಿದ್ದವು.

ಫೋಟೊ : ಕೋಳಿ ಮತ್ತು ಮೀನು ಸಾಕಾಣಿಕೆ ಸಂಯೋಜಿತ ಕೃಷಿ

ಆರಂಭದಲ್ಲಿ ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ತಂತ್ರಜ್ಞಾನ ಕೇಂದ್ರದಲ್ಲಿ ಜಾಗೃತಿ ಮೂಡಿಸುವ ಮತ್ತು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಭಾಷಣಗಳು, ದೃಶ್ಯ -ಶ್ರಾವ್ಯ ಕಾರ್ಯಕ್ರಮಗಳು, ಕ್ಷೇತ್ರ ಭೇಟಿ ಇವುಗಳ ಮೂಲಕ ತರಬೇತಿಯನ್ನು ನೀಡಲಾಯಿತು. ಸಂಯೋಜಿತ ಮೀನು ಕೃಷಿಯ ಒಟ್ಟು 9 ಮಾದರಿಗಳನ್ನು ಕ್ಷೇತ್ರಗಳಲ್ಲಿ ಸ್ತಾಪಿಸಲಾಯಿತು. ಇವುಗಳನ್ನು ಅಭಿವೃದ್ಧಿ ಪಡಿಸುವ ಪ್ರತಿಹಂತದಲ್ಲೂ ರೈತರನ್ನೂ ಒಳಗೊಳ್ಳಲಾಯಿತು.

ಅಲ್ಮೊರ ಜಿಲ್ಲೆಯ ಬಾಸೊಲಿ ಮತ್ತು ಮನಾನ್‌ ಹಳ್ಳಿಗಳಲ್ಲಿ ಮೀನು ಹೊಂಡ ಮತ್ತು ಕೋಳಿ/ಬಾತು ಸಾಕಾಣಿಕೆ ಗೂಡನ್ನು ಹೊಂಡದ ಹತ್ತಿರವೇ ಕಟ್ಟಲಾಯಿತು. ಎಲ್ಲ ಬಗೆಯ ವಾತಾವರಣಕ್ಕೂ ಆಹಾರಕ್ಕೂ ಹೊಂದಿಕೊಳ್ಳುವ ಮೀನಿನ ತಳಿಗಳನ್ನು ಸಾಕಲಾಯಿತು. ಇವುಗಳಿಗೆ ಹೊಂಡದಲ್ಲಿಯೇ ಲಭ್ಯವಿರುವ ನೈಸರ್ಗಿಕ ಆಹಾರವನ್ನೇ ಒದಗಿಸಲಾಯಿತು. ಕಾರ್ಪ್‌ ತಳಿಯ ಮೀನಿನ ಮರಿಗಳು (5.5-10.0 ಸೆಂಮೀ) ಉದಾಹರಣೆಗೆ ಸಿಲ್ವರ್‌ ಕಾರ್ಪ್‌ (45%), ಗ್ರಾಸ್‌ ಕಾರ್ಪ್‌ (35%) ಮತ್ತು ಕಾಮನ್‌ ಕಾರ್ಪ್‌(20%) ಇವುಗಳನ್ನು ಮಾರ್ಚ್‌ ಮೊದಲ ವಾರದಲ್ಲಿ ಹೊಂಡಕ್ಕೆ ಬಿಡಲಾಯಿತು.  ಆಗ ನೀರಿನ ತಾಪಮಾನ >160ಸೆಂ ನಷ್ಟಿತ್ತು. ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಸಲುವಾಗಿ ಮತ್ತು ಮೀನುಗಳಿಗೆ ಅಗತ್ಯವಾದ ಆಹಾರ ಮತ್ತು ಗೊಬ್ಬರ ಸಿಗುವಂತೆ ಮಾಡಲು ಹೈಬ್ರಿಡ್‌ ಕೋಳಿಗಳನ್ನು (ಕುರೈಲರ್) (3000/ಹೆ) ಬಾಸೊಲಿಯಲ್ಲಿ ಸಾಕಲಾಯಿತು. ಮೀನಿನ ಬೆಳವಣಿಗೆಯೊಂದಿಗೆ ಆರ್ಥಿಕವಾಗಿ ಅನುಕೂಲವಾಗಲು ಬಾತುಕೋಳಿಗಳನ್ನು (300/ಹೆ) ಅದರಲ್ಲೂ ಹೆಚ್ಚು ಮೊಟ್ಟೆಗಳನ್ನಿಡುವ ಖಾಕಿ ಕ್ಯಾಂಪ್ಬೆಲ್‌ ತಳಿಯನ್ನು 1 ಗಂಡು 5 ಹೆಣ್ಣು ಈ ಅನುಪಾತದಲ್ಲಿ ಮನಾನ್‌ನಲ್ಲಿ ಮೊದಲ ವರ್ಷ ಸಾಕಲಾಯಿತು. ಮೀನಿನೊಂದಿಗೆ ಬಾತುಗಳನ್ನು ಸಾಕಿದ್ದರಿಂದ ಕಡಿಮೆ ವರಮಾನ ಬಂದದ್ದರಿಂದ ಎರಡನೇ ವರ್ಷ ಬಾತುಗಳಿಗೆ ಬದಲಾಗಿ ಕೋಳಿಗಳನ್ನು ಮನಾನ್‌ನಲ್ಲಿ ಸಾಕಲಾಯಿತು.

ಕೋಷ್ಟಕ : ಎರಡು ಸ್ಥಳಗಳಲ್ಲಿನ ಸಣ್ಣ ಹೊಂಡಗಳಲ್ಲಿನ ಮೀನಿನ ಇಳುವರಿ

ವರ್ಷಬಾಸೊಲಿ (100 m2) ಮನಾನ್ (264 m2)
ಉತ್ಪಾದನೆ (ಕೆಜಿ)ಇಳುವರಿ(ಕೆಜಿ/ಹೆ)ಉತ್ಪಾದನೆ (ಕೆಜಿ)ಇಳುವರಿ(ಕೆಜಿ/ಹೆ)
ಮೊದಲ ವರ್ಷ56.55650122.04621
ಎರಡನೆಯ ವರ್ಷ60.36030127.44825
ಮೂರನೆಯ ವರ್ಷ57.95790112.74269
ಸರಾಸರಿ58234572

ಎರಡೂ ಸ್ಥಳಗಳಲ್ಲಿ ಮೀನು ಕೃಷಿಯೊಂದಿಗೆ ತರಕಾರಿಯನ್ನು ಕೂಡ ಬೆಳೆಯಲಾಯಿತು. ಮೊದಲು ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯಂತೆ ಧಾನ್ಯಗಳು ಮತ್ತು ಕಾಳುಗಳ ಕೃಷಿಯೊಂದಿಗೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸ್ಥಳೀಯವಾಗಿ ಸೌತೆ, ಹುರುಳಿಕಾಯಿ, ಬೆಂಡೆಕಾಯಿ, ಟೊಮೊಟೊ ಇತ್ಯಾದಿಗಳನ್ನು ಸಾಂಪ್ರದಾಯಿಕವಾಗಿ ಖಾರಿಫ್‌ ಬೆಳೆಯೊಂದಿಗೆ ಬೆಳೆಯಲಾಗುತ್ತಿತ್ತು. ಈಗ 600 ಚದುರ ಮೀ ಪ್ರದೇಶದಲ್ಲಿ ವಿವಿಧ ಸುಧಾರಿತ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ರೈತರು ತರಕಾರಿ ಕೃಷಿಯ ಎಷ್ಟರಮಟ್ಟಿಗೆ ಹೊಂದುತ್ತದೆ ಎನ್ನುವುದನ್ನು ಅರಿತಿದ್ದಾರೆ.

ಫಲಿತಾಂಶ

ಕಾರ್ಪ್‌ ಮೀನುಗಳ ಕೃಷಿ ಮತ್ತು ಬಾತು ಸಾಕಣೆಯ ಸಂಯೋಜಿತ ಮಾದರಿಯಲ್ಲಿ ವರ್ಷವೊಂದಕ್ಕೆ 4621ಕೆಜಿ/ಹೆ ಇಳುವರಿ ದಕ್ಕಿತು. 900 ಮೊಟ್ಟೆಗಳು ಮತ್ತು 14ಕೆಜಿ ಬಾತು ಮನಾನ್‌ನ 264 ಮೀ ಅಗಲದ ಹೊಂಡದಲ್ಲಿ ಸಿಕ್ಕಿತು. ಗುಡ್ಡಗಾಡು ಪ್ರದೇಶದ ಮಾರುಕಟ್ಟೆಗಳಲ್ಲಿ ಬಾತುಗಳ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿರಲಿಲ್ಲ.

ಕೋಳಿಗಳೊಂದಿಗೆ ಮಾಡಿದ ಮೀನು ಸಾಕಾಣಿಕೆಯಲ್ಲಿ ವರ್ಷವೊಂದಕ್ಕೆ 4269 ಇಂದ 4825ಕೆಜಿ ಮೀನು /ಹೆ ಸಿಕ್ಕಿತು. 120 ರಿಂದ 130 ಕೆಜಿ ಕೋಳಿ ಮತ್ತು 4200-4400 ಮೊಟ್ಟೆಗಳು ಮನಾನ್‌ನಲ್ಲಿ ಸಿಕ್ಕಿತು. ವರ್ಷವೊಂದಕ್ಕೆ ಸುಮಾರು 5650 – 6030 ಕೆಜಿ ಮೀನು/ಹೆ, 55-65 ಕೆಜಿ ಕೋಳಿ ಮತ್ತು 2500-3000 ಮೊಟ್ಟೆಗಳು ಬಾಸೊಲಿಯಲ್ಲಿ ಸಿಕ್ಕವು. ಈ ಇಳುವರಿಯನ್ನು ಭಾರತ ಮತ್ತಿತರ ಏಷ್ಯನ್‌ ದೇಶಗಳಲ್ಲಿನ ಸಂಯೋಜಿತ ಮಾದರಿಯ ಇಳುವರಿಯೊಂದಿಗೆ ಹೋಲಿಸಲಾಯಿತು. ಇದಕ್ಕಿಂತ ಹೆಚ್ಚಿನ ಇಳುವರಿಯನ್ನು ಆರಂಭಿಕ ಹಂತದಲ್ಲಿ ಹೆಚ್ಚುವರಿ ಆಹಾರವನ್ನು ನೀಡುವುದರಿಂದ ಮತ್ತು ಗೊಬ್ಬರದ ಮರುಬಳಕೆ ಮಾಡುವ ಮೂಲಕ ಪಡೆಯಬಹುದು.

ಫೋಟೊ : ಸಂಯೋಜಿತ ಮಾದರಿಯಲ್ಲಿ ಮೀನು ಉತ್ಪಾದನೆ ಹೆಚ್ಚಾಯಿತು

ಕುರೈಲರ್‌ ಕೋಳಿಗಳು 18ವಾರಗಳ ನಂತರ ಮೊಟ್ಟೆಗಳನ್ನಿಟ್ಟರೆ ಬಾತುಗಳು 22 ವಾರಗಳ ನಂತರ ಮೊಟ್ಟೆಗಳನ್ನಿಡುತ್ತವೆ. ಇದರೊಂದಿಗೆ ಹೊಂಡದಲ್ಲಿನ ನೀರನ್ನು ಬಳಸಿಕೊಂಡು ವರ್ಷಪೂರ್ತಿ ತರಕಾರಿ ಕೃಷಿ ಮಾಡಬಹುದಾಗಿದೆ. ವಾರ್ಷಿಕ ಬಾಸೊಲಿ ಮತ್ತು ಮನಾನ್‌ನಲ್ಲಿ 1200 – 1400 ಕೆಜಿ ಮತ್ತು 1900 – 2300 ಕೆಜಿ ವಿವಿಧ ತರಕಾರಿಗಳನ್ನು ಬೆಳೆಯಲಾಯಿತು. ತರಕಾರಿ ಉತ್ಪಾದನೆ ಹೆಚ್ಚಿದ್ದರಿಂದ ಹೆಚ್ಚುವರಿ ಆದಾಯ ಸಿಗುವಂತಾಯಿತು ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾದವು. ಸರಾಸರಿ ಒಟ್ಟಾರೆ ರೂ. 21,829 ಮತ್ತು ರೂ. 36,823ಗಳನ್ನು IFF ಮಾದರಿಯಿಂದ ಗಳಿಸಲಾಯಿತು. ಇದಕ್ಕಾಗಿ ಬಾಸೋಲಿ ಮತ್ತು ಮನಾನ್‌ನ ರೈತರು ಹೂಡಿದ ಬಂಡವಾಳ ರೂ. 8,109 ಮತ್ತು ರೂ. 11,925. ಆರ್ಥಿಕ ಲಾಭದೊಂದಿಗೆ ರೈತಾಪಿ ಕುಟುಂಬಗಳು ತಾಜಾ ತರಕಾರಿ, ಉತ್ತಮ ಪ್ರಾಣಿಗಳ ಪ್ರೋಟಿನ್‌ ಪಡೆಯುವಂತಾಯಿತು. ಇದು ಮಕ್ಕಳು ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆಯನ್ನು ಕಡಿಮೆ ಮಾಡಿತು.

ಇದರಿಂದ ಮೀನುಕೋಳಿ ಸಾಕಾಣಿಕೆ ಕೃಷಿಯು ಆರ್ಥಿಕವಾಗಿ ಗುಡ್ಡಗಾಡು ಪ್ರದೇಶದಲ್ಲಿ ಲಾಭದಾಯವಾದದ್ದು ಎಂದು ಸಾಬೀತಾಯಿತು. ಈ ಸಂಯೋಜಿತ ಮಾದರಿಯಲ್ಲಿ ಬಾತುಕೋಳಿಗಳನ್ನು ಸಾಕುವುದು ಕೋಳಿಗಳನ್ನು ಸಾಕುವುದಕ್ಕಿಂತ ಕಡಿಮೆ ಲಾಭದಾಯದ ಎನ್ನುವುದು ತಿಳಿದುಬಂದಿತು. ಸ್ಥಳೀಯ ಮಾರುಕಟ್ಟೆಗಳಲ್ಲಿ ಬಾತುಕೋಳಿಗಳ ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಿರುವುದರಿಂದ ಅದನ್ನು ಸಾಕುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವುದು ಸಾಬೀತಾಯಿತು.

ರೈತರು ಈ ಮಾದರಿಯನ್ನು ಅಳವಡಿಸಿಕೊಳ್ಳುವಾಗ ಕೆಲವು ಸವಾಲುಗಳನ್ನು ಎದುರಿಸಿದರು. ಉದಾಹರಣೆಗೆ ಮೀನು ಮರಿಗಳು ಗುಡ್ಡಗಾಡುಪ್ರದೇಶಗಳಲ್ಲಿ ಸಿಗುವುದು ಕಷ್ಟವಿತ್ತು. ಅದನ್ನು ದೂರದ ತಾರೈ ಪ್ರದೇಶದಿಂದ (150-200 ಕಿಮೀ) ತರಿಸಬೇಕಿತ್ತು. ಇದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತಿತ್ತು ಮತ್ತು ಬಹಳ ತ್ರಾಸದಾಯಕವಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ ರೈತರು ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ರಾಜ್ಯ ಮೀನುಗಾರಿಕಾ ಇಲಾಖೆ ಇತರ ಸರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳ ನೆರವನ್ನು ಪಡೆದರು.

ಉಪಸಂಹಾರ

IFF ಮಾದರಿಯು ಸಣ್ಣ ರೈತರಿಗೆ ವರದಾನವಾಗಿದ್ದು ಉದ್ಯೋಗ ಮತ್ತು ಆದಾಯ ಸೃಷ್ಟಿ ಮಾಡುವುದರೊಂದಿಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದೆ. ಗುಡ್ಡಗಾಡು ಪ್ರದೇಶದಲ್ಲಿನ ರೈತರಿಗೆ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡುವುದು ಈ ಎರಡು ಮುಖ್ಯ ಹೆಜ್ಜೆಗಳ ಮೂಲಕ ತಂತ್ರಾಜ್ಞಾನವನ್ನು ತಿಳಿಸಿಕೊಡಲಾಯಿತು. ಈ ಮಾದರಿಯ ಯಶಸ್ಸನ್ನು ಒಂಭತ್ತು ಹಳ್ಳಿಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರದರ್ಶಿಸಲಾಯಿತು. ಇದರಿಂದ ಬೇರೆ ಹಳ್ಳಿಗಳಲ್ಲಿನ ರೈತರು ಕೂಡ ಉತ್ತೇಜಿತರಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರು. ರಾಜ್ಯ ಸರ್ಕಾರವು ಈ ರೀತಿಯ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ.

ಫೋಟೊ : ಸಂಯೋಜಿತ ಮಾದರಿಯಲ್ಲಿ ಬಾತುಕೋಳಿಗಳನ್ನು ಸಾಕುವುದರಿಂದ ಉತ್ಪಾದನೆ ಕಡಿಮೆ ಮತ್ತು ಕಡಿಮೆ ಲಾಭದಾಯಕ

ಕೃತಜ್ಞತೆಗಳು

ಲೇಖಕರು ನಿರ್ದೇಶಕರು ಜಿ.ಬಿ. ಪಂತ್‌, ನ್ಯಾಷನಲ್‌ ಇನ್ಸ್‌ಟ್ಯೂಟ್‌ ಆಫ್‌ ಹಿಮಾಲಯನ್‌ ಎನ್ವಿರಾನ್ಮೆಂಟ್‌ ಅಂಡ್‌ ಸಸ್ಟೈನಬಲ್‌ ಡೆವಲಪ್‌ಮೆಂಟ್‌, ಕೊಸಿ – ಖತಾರ್ಮಾಲ್‌, ಅಲ್ಮೊರಾ, ಭಾರತ ಇವರು ಪ್ರೋತ್ಸಾಹಿಸಿ  ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಜೊತೆಗೆ ಡಿಎಸ್‌ಟಿ, ಭಾರತ ಸರ್ಕಾರ, ನವದೆಹಲಿಯವರು ಆರ್ಥಿಕ ನೆರವನ್ನು ನೀಡಿದ್ದಕ್ಕಾಗಿ ಇವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾರೆ.

ದೀಪಾ ಬೀಶ್ತ್ಮತ್ತು ಆರ್ಸಿ ಸುಂದರಿಯಾಲ್


Deepa Bisht

Scientist- DST

E-mail: deepabisht1234@rediffmail.com

R C Sundriyal

Scientist-G and Head

Centre for Socio-Economic Development

G.B. Pant National Institute of Himalayan

Environment and Sustainable Development

Kosi-Katarmal, Almora-263 643

Uttarakhand, India.

E-mail: sundriyalrc@yahoo.com

ದೀಪಾ ಬೀಶ್ತ್ಮತ್ತು ಆರ್ಸಿ ಸುಂದರಿಯಾಲ್


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೧; ಮಾರ್ಚ್‌ ೨೦೧೯

Recent Posts

ಒರಿಸ್ಸಾ: ಕುಂಬಳಕಾಯಿ ಕೃಷಿಯ ಹೊಸ ಕೇಂದ್ರ

ಒರಿಸ್ಸಾ: ಕುಂಬಳಕಾಯಿ ಕೃಷಿಯ ಹೊಸ ಕೇಂದ್ರ

ಕಣ್ಣಿಗೆ ಕಾಣುವಷ್ಟು ದೂರಕ್ಕೂ ಹಬ್ಬಿದ ಕುಂಬಳಕಾಯಿ ಹೊಲಗಳು. ಪೂರ್ವ ಒರಿಸ್ಸಾದ ಮಯೂರ್‌ಭಂಜ್ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಕಾರಂಜಿಯಾ ಬ್ಲಾಕ್‌ನಲ್ಲಿ ನೀವು ಅದನ್ನು ಕಾಣಬಹುದು.

ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹರೇಲಾ ಹಬ್ಬದ ಆಚರಣೆ

ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹರೇಲಾ ಹಬ್ಬದ ಆಚರಣೆ

ಹರೇಲಾ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಆಚರಿಸಲಾಗುವ ರೋಮಾಂಚಕ ಮತ್ತು ಮಹತ್ವದ ಹಬ್ಬ. ಇದು ಪ್ರಕೃತಿ, ಕೃಷಿ ಸಂಪ್ರದಾಯಗಳು ಮತ್ತು ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯೊಂದಿಗಿನ ಆಳವಾದ ಸಂಪರ್ಕದ ಪ್ರತಿಬಿಂಬ. ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ ಆಚರಿಸಲಾಗುವ ಹರೇಲಾ, ಮಾನವೀಯತೆ ಮತ್ತು ಪರಿಸರದ ಸಾಮರಸ್ಯದ ಸಹಬಾಳ್ವೆಯನ್ನು ನೆನಪಿಸುತ್ತದೆ, ಆಧ್ಯಾತ್ಮಿಕತೆಯನ್ನು ಪರಿಸರ ಜಾಗೃತಿಯೊಂದಿಗೆ ಬೆರೆಸುತ್ತದೆ.

ಕಾರಂಜಾ ಪರಿವರ್ತನೆ- ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಸ್ಥಳೀಯ ಆರ್ಥಿಕತೆಯ ಮರು ವ್ಯಾಖ್ಯಾನ

ಕಾರಂಜಾ ಪರಿವರ್ತನೆ- ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಸ್ಥಳೀಯ ಆರ್ಥಿಕತೆಯ ಮರು ವ್ಯಾಖ್ಯಾನ

ಕೃಷಿ, ಜೀವನೋಪಾಯ ಮತ್ತು ಹವಾಮಾನ-ನಿರೋಧಕ ತಂತ್ರಜ್ಞಾನಗಳನ್ನು ಸಂಯೋಜಿಸುವ ಬಹುಮುಖಿ ವಿಧಾನದಿಂದ ಮಹಿಳಾ ರೈತರಿಗೆ ಸಮೃದ್ಧವಾದ, ಸುಸ್ಥಿರವಾದ ಮತ್ತು ಆರ್ಥಿಕವಾಗಿ ಸುರಕ್ಷಿತವಾದ ಭವಿಷ್ಯವನ್ನು ನಿರ್ಮಿಸಬಹುದು. ಕಾರಂಜಾದ ಪರಿವರ್ತನೆಯು ಈ ವಿಧಾನದ ಪ್ರಮುಖ ಉದಾಹರಣೆಯಾಗಿದೆ.