ಜೀವವೈವಿಧ್ಯದ ಕೃಷಿ

ಪಿ ವಿ ಸತೀಶ್

ಭಾರತದ ದಖನ್ ಪ್ರದೇಶದಲ್ಲಿ ೬೦ ಸಾವಿರಕ್ಕೂ ಹೆಚ್ಚು ಮಹಿಳಾ ರೈತರು ತಮ್ಮ ಕುಟುಂಬ, ತಮ್ಮ ಸಂಸ್ಕೃತೀಯ ಮತ್ತು ತಮ್ಮ ಅಭಿಮಾನವನ್ನು ಜೀವವೈವಿಧ್ಯದ ಕೃಷಿ ವ್ಯವಸ್ಥೆಯನ್ನು ಅನುಸರಿಸುವ ಮೂಲಕ ರಕ್ಷಿಸಿಕೊಂಡಿದ್ದಾರೆ. ಅವರ ಜ್ಞಾನ ಮತ್ತು ಯಶಸ್ಸು – ಎರಡೂ ದೇಶದಾಚೆಗೆ, ಸಂಸ್ಥೆಗಳಾಚೆಗೆ ತಲುಪಿವೆ; ಅವರಿಗೆ ವಿಶ್ವವ್ಯಾಪಿ ಮಾನ್ಯತೆ ದೊರಕಿದೆ.

ಅದು ೨೦೦೩ರ ವರ್ಷ. ಸ್ಥಳ: ಭಾರತದ ಆಂಧ್ರಪ್ರದೇಶ.ದಿಡಗಿ ಹಳ್ಳಿಯ ಹುಲ್ಲಿನ ಛಾವಣಿಯ ಮೊಗಸಾಲೆಯಲ್ಲಿ ೫೦ಕ್ಕೂ ಹೆಚ್ಚು ಕೃಷಿ ಮಹಿಳೆಯರು ಹಿರಿಯ ಕೃಷಿ ವಿಜ್ಞಾನಿಗಳ ಗುಂಪಿನೊoದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಮಳೆ ಆಧಾರಿತವಾದ ಮೂರೆಕರೆ ಕೃಷಿಭೂಮಿಯನ್ನು ಹೊಂದಿದ, ೧೮ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಸಮ್ಮಮ್ಮ ಎದ್ದು ನಿಂತು ತಾನೇಕೆ ತನ್ನ ಕೃಷಿವ್ಯವಸ್ಥೆಯಲ್ಲಿ ಜೀವವೈವಿಧ್ಯಕ್ಕೆ ಬೆಲೆ ಕೊಡುತ್ತಿದ್ದೇನೆ ಎಂದು ವಿವರಿಸಲು ಆರಂಭಿಸುತ್ತಾರೆ. ತಕ್ಷಣವೇ ಆ
ಬದಿಯಲ್ಲಿದ್ದ ವಿಜ್ಞಾನಿಯೊಬ್ಬರು ಆಕೆಯನ್ನು ತಡೆದು `ಇಲ್ಲ, ಇಲ್ಲ… ನೀವು ಜೀವವೈವಿಧ್ಯದ ಬಗ್ಗೆ ಆತಂಕಪಡಬೇಡಿ. ಜೀವವೈವಿಧ್ಯದ ಬಗ್ಗೆ ಚಿಂತಿಸಬೇಕಾದವರು ನಾವು, ವಿಜ್ಞಾನಿಗಳು; ಆದ್ದರಿಂದ ನಾವಿಲ್ಲಿ ನೀವು ಬಳಸುವುದಕ್ಕೆ ಒಂದು ಬೀಜವನ್ನು ಶಿಫಾರಸು ಮಾಡುತ್ತೇವೆ’ ಎನ್ನುತ್ತಾರೆ. ಈಗಲೂ, ಹಲವಾರು ಸಂದರ್ಭಗಳಲ್ಲಿ ಕೃಷಿ ವಿಜ್ಞಾನ ಮತ್ತು ಜ್ಞಾನವು ಕೇವಲ ತಮ್ಮ ಅಧೀನದಲ್ಲಿರುವ ವಿಷಯವೆಂದೂ, ಕೃಷಿಕರು, ಅದರಲ್ಲೂ ಮಹಿಳೆಯರು ಕೃಷಿ ವಿಧಾನಗಳ ಚರ್ಚೆಯ ಸಂದರ್ಭದಲ್ಲಿ ಭಾಗವಹಿಸಲೇಬಾರದು ಎಂದೂ ವಿಜ್ಞಾನಿಗಳು ನಂಬಿದ್ದಾರೆ. ಹೀಗಿದ್ದರೂ, ದಖನ್ ಪ್ರದೇಶದ ಮಹಿಳೆಯರು ಈ ಚಿಂತನೆ ತಪ್ಪೆಂದು ಹಲವು ಬಗೆಗಳಲ್ಲಿ ತೋರಿಸಿಕೊಟ್ಟಿದ್ದಾರೆ.

ಜೀವವೈವಿಧ್ಯದ ಕೃಷಿ ವ್ಯವಸ್ಥೆದಿಡಗಿ ಗ್ರಾಮದ ಕೃಷಿಕ ಮಹಿಳೆಯರು ಅತ್ಯುನ್ನತ ಮಟ್ಟದ ಜೀವವೈವಿಧ್ಯ ಕೃಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಕೆಲವು ಸಾಮಾನ್ಯ ಚಹರೆಗಳಿವೆ: ಇವೆಲ್ಲವೂ ನೀರಾವರಿ ಇಲ್ಲದ, ಅಷ್ಟೇನೂ ಫಲವತ್ತಾಗಿರದ ಮತ್ತು ಎರಡು ಎಕರೆಗಿಂತ ಕಡಿಮೆ ಪ್ರದೇಶದ ಕೃಷಿಭೂಮಿಗಳು; ಇವರೆಲ್ಲರೂ ರಾಸಾಯನಿಕ ರಹಿತ
ಕೃಷಿಮಾಡುವವರು; ಎಲ್ಲರೂ ತಮ್ಮ ಚಿಕ್ಕ ಚಿಕ್ಕ ಹಿಡುವಳಿಯಲ್ಲಿ ೧೨-೨೩ ಬಗೆಯ ಬೆಳೆಗಳನ್ನು ಬೆಳೆಯುತ್ತಾರೆ; ಇಷ್ಟೇ ಅಲ್ಲ, ಅವರಲ್ಲಿ ಯಾರಿಗೂ ಮಾರುಕಟ್ಟೆಯಿಂದ ತಮ್ಮ ಆಹಾರವನ್ನು ಖರೀದಿಸುವ ಅಗತ್ಯವೇ ಇನ್ನೂ ಬಂದಿಲ್ಲ. ದಖನ್ ಪ್ರದೇಶದ ಈ ಎಲ್ಲಾ ಮಹಿಳೆಯರೂ ಬೀಜ ರಕ್ಷಕರೂ ಆಗಿದ್ದಾರೆ. ಅವರು ಬೀಜಗಳ ರಕ್ಷಣೆ ಮಾಡುವುದಷ್ಟೇ ಅಲ್ಲ, ನಾಟಿ ಮಾಡುವ ಸಮಯದಲ್ಲಿ ಮಾಡಬೇಕಾದ ಬೀಜಗಳ ಮಿಶ್ರಣ ಮತ್ತು ಪ್ರಮಾಣದ ಬಗ್ಗೆಯೂ ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಎಲ್ಲರಿಗೂ ಅನುಕೂಲಕರ. ಮಹಿಳೆಯರ ಈ ಕೃಷಿವಿಧಾನವು ಜೀವವೈವಿಧ್ಯವನ್ನು ಸಂರಕ್ಷಿಸುತ್ತದೆ; ಈ ವೈವಿಧ್ಯವು ಅವರ ಕೃಷಿವಿಧಾನವನ್ನು ಬೆಂಬಲಿಸುತ್ತದೆ. ಈ ಮಹಿಳೆಯರಿಗೆ ಜೀವವೈವಿಧ್ಯವು ಪ್ರಮುಖ ಎಂದು ಅನ್ನಿಸಿದ್ದಾದರೂ ಏಕೆ? ಅವರೇಕೆ ಕೃಷಿ ಇಲಾಖೆಯ ಸಲಹೆಯಂತೆ ಒಂದು ಅಥವಾ ಎರಡು ವಾಣಿಜ್ಯ ಬೆಳೆಗಳನ್ನು ಬೆಳೆದು ಸಮಾಧಾನದಿಂದ ಇರಬಾರದು? ಅವರಿಗೆ ಜೋಳದಂಥ ಆಹಾರ ಬೆಳೆಗಳ ಬಗ್ಗೆ ನಿರ್ದಿಷ್ಟವಾದ ಆದ್ಯತೆಗಳಿವೆ. ಈ ಧಾನ್ಯವು ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ದರವನ್ನು ಹೊಂದಿರುವುದರಿoದ ಕೃಷಿ ವಿಜ್ಞಾನಿಗಳು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆಮತ್ತು ಈ ಬೆಳೆಗೆ ಪ್ರೋತ್ಸಾಹವನ್ನೂ ನೀಡುತ್ತಿಲ್ಲ. ಆದರೆ ದಲಿತ ಮಹಿಳೆಯರಿಗೆ ಜೋಳವೆಂದರೆ ಪುಷ್ಟಿಕರ ಆಹಾರ ಮತ್ತು ಒಳ್ಳೆಯ ಮೇವು. ಈ ಬೆಳೆಯನ್ನು ಒಣಮಣ್ಣಿನಲ್ಲೂ ಬೆಳೆಯಬಹುದು; ಬೇಲಿಗೆ, ಛಾವಣಿಗೆ ಬಳಸಬಹುದು. ಈ ಎಲ್ಲಾ ಅಂಶಗಳನ್ನು ಅತಿ ಕಡಿಮೆ ವರಮಾನದ ಮಟ್ಟದಲ್ಲಿರುವ ಈ ಮಹಿಳೆಯರು ಸಂಪೂರ್ಣವಾಗಿ ನಿಯಂತ್ರಿಸಬಹುದು. ಇಂಥ `ಅನಾಥ ಬೆಳೆ’ಗಳಿಗೆ ಮಹಿಳಾ ಕೃಷಿಕರು ತೋರುವ ಗೌರವವು ಅವರಿಗೆ ಆಹಾರ ಮತ್ತು ಕೃಷಿಯಲ್ಲಿ ಇರುವ ವಿಶೇಷ ದೃಷ್ಟಿಕೋನವನ್ನು ಬಿಂಬಿಸುತ್ತದೆ.

ಆಹಾರಕ್ಕಿಂತ ಮಿಗಿಲಾದ ಸಂಗತಿಗಳು

ದುರ್ಬಲ ಸಮುದಾಯಗಳಿಂದಲೇ ಬಂದ ಈ ಮಹಿಳೆಯರಿಗೆ ಕೃಷಿಯ ಮೌಲ್ಯಗಳನ್ನು ಮತ್ತು ಕೃಷಿಯಲ್ಲಿ ಜೀವವೈವಿಧ್ಯವನ್ನು ಅನುಸರಿಸಿಕೊಂಡು ಗಟ್ಟಿಯಾಗಿ ಬಂದಿರುವುದೇ ಅವರ ಬದುಕು ಮತ್ತು ಸಾವಿನ ನಡುವಿನ ಅಂತರದAತೆ ಆಗಿಬಿಟ್ಟಿದೆ. ದುಬಾರಿಯಾದ ಮತ್ತು ಸಮಸ್ಯಾತ್ಮಕವಾದ ಸರಕುಗಳು, ರಾಸಾಯನಿಕ ಆಧಾರಿತ ಕೃಷಿ ವ್ಯವಸ್ಥೆ ಇವುಗಳಿಂದಾಗಿ ಸಾಲದ ಹೊರೆಯನ್ನು ಹೇರಿಕೊಂಡು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳೇ ಸಾಮಾನ್ಯವಾಗಿರುವ ಭಾರತದಲ್ಲಿ ಕಡಿಮೆ ಖರ್ಚಿನ ಜೀವವೈವಿಧ್ಯ ಕೃಷಿ ವಿಧಾನವನ್ನು ಅನುಸರಿಸಿದ ಈ ಕೃಷಿಕ ಮಹಿಳೆಯರ ಪೈಕಿ ಒಬ್ಬರೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿಲ್ಲ. ಈ ಸಮುದಾಯಗಳ ಸಂಪ್ರದಾಯಗಳಲ್ಲಿ ಕೃಷಿ ಜೀವವೈವಿಧ್ಯವೇ ಅತಿಪ್ರಮುಖವಾದ ಭಾಗ. ಅಷ್ಟೇ ಅಲ್ಲ, ಅದು ಅವರು ಕೃಷಿ ಮಾಡಲು ಇರುವ ಏಕೈಕ ತಾರ್ಕಿಕ ವಿಧಾನವೂ ಹೌದು. ಹವಾಗುಣದ ಏರಿಳಿತದ ವಿರುದ್ಧ ಇಂಥ ಜೀವವೈವಿಧ್ಯ ವ್ಯವಸ್ಥೆಯೇ ಅತ್ಯುತ್ತಮ ಸುರಕ್ಷತೆ ಎಂದು ಈ ಮಹಿಳೆಯರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇಷ್ಟಲ್ಲದೆ, ಅವರು ಬೆಳೆಯುತ್ತಿರುವ ಬೆಳೆಗಳು ಅವರ ಆಹಾರ ಸಂಸ್ಕೃತಿಯನ್ನುಬಿಂಬಿಸುತ್ತದೆ; ಆಹಾರ ಮತ್ತು ಅಡುಗೆಮನೆಯ ನಡುವಣ ಸಂಬoಧಗಳು ಹೊಲದಲ್ಲಿನ ಸಂಬoಧಗಳನ್ನು ಬಿಂಬಿಸುತ್ತವೆ. ಉದಾಹರಣೆಗೆ ಜೋಳದಿಂದ ಮಾಡಿದ ಆಹಾರವನ್ನು ಅವರು ತೊಗರಿಬೇಳೆಯ ಪದಾರ್ಥದೊಂದಿಗೆ ಸೇವಿಸುತ್ತಾರೆ. ಹಾಗೆಯೇ ಇವೆರಡೂ ಧಾನ್ಯಗಳನ್ನು ಅವರು ತಮ್ಮ ಹೊಲದಲ್ಲಿ ಸಹವರ್ತಿ ಬೆಳೆಗಳಾಗಿ ಬೆಳೆಯುತ್ತಾರೆ. ಈ ಬಗೆಯ `ತೋಟದಿಂದ ಊಟಕ್ಕೆ’ ಮಾದರಿಯು ಕೃಷಿಕರೇ ತಮ್ಮ ಹೊಲಗಳಲ್ಲಿ ಜೀವವೈವಿಧ್ಯವನ್ನು ಸಜೀವವಾಗಿ ಇಟ್ಟಿದೆ. ಈ ಆಹಾರ ಸಂಸ್ಕೃತಿಯ ಪ್ರಮುಖ ದೀಪಧಾರಿಗಳು ಮಹಿಳೆಯರೇ ಆಗಿರುವುದರಿಂದ ಅವರೇ ಕೃಷಿ ಜೀವವೈವಿಧ್ಯ ಸಂಪ್ರದಾಯದ ದೀಪಧಾರಿಗಳೂ ಆಗಿದ್ದಾರೆ.
ಈ ಪ್ರದೇಶದ ಜನರು ಕೇವಲ ಭೌತಿಕ ಬದುಕನ್ನಷ್ಟೇ ಸಾಗಿಸುತ್ತಿಲ್ಲ; ಜೊತೆಗೆ ನೈತಿಕ, ಪಾರಿಸರಿಕ ಮತ್ತು ಆಧ್ಯಾತ್ಮಿಕ ಬದುಕನ್ನೂ ನಡೆಸುತ್ತಿದ್ದಾರೆ. ಈ ಪ್ರದೇಶದ ಜನರು ಹಲವು ಧಾರ್ಮಿಕ ಹಬ್ಬಗಳ ಮೂಲಕ ಜೀವವೈವಿಧ್ಯವನ್ನು ಆಚರಿಸುತ್ತಾರೆ; ಇಲ್ಲಿ ನಾಯಕ ಪಾತ್ರಗಳು ಜೀವವೈವಿಧ್ಯವನ್ನು ಹರಸುತ್ತವೆ. ಉದಾಹರಣೆಗೆ ಎಂಗಲಗಟ್ಟೆ ಪುನ್ನo ಹಬ್ಬವನ್ನು ಚಳಿಗಾಲದ ಬೆಳೆಗಳು ಫಸಲಿಗೆ ಬಂದಾಗ ಆಚರಿಸುತ್ತಾರೆ; ಈ ಆಚರಣೆಯಲ್ಲಿ ಪ್ರತೀ ಮನೆಯ ಬಾಗಿಲಿನ ಮೇಲೆ ವೈವಿಧ್ಯಮಯ ಬೆಳೆಗಳ ತೆನೆಗಳನ್ನು ಕಟ್ಟುತ್ತಾರೆ. `ನೋಡಿ, ನನ್ನ ಹೊಲದ ವೈವಿಧ್ಯ ಹೀಗಿದೆ!’ ಎಂದು ಹೇಳುವಂತೆ ಈ ದೃಶ್ಯ ಕಾಣುತ್ತದೆ. ಮಹಿಳೆಯರು ಈ ಬೆಳೆಗಳನ್ನು ತಮ್ಮ ಹಣಕಾಸಿನ ಸಿರಿವಂತಿಕೆಗಿoತ ಹೆಚ್ಚಿನದಾಗಿ ಸಂರಕ್ಷಿಸುತ್ತಾರೆ. ಇದರ ಪರಿಣಾಮವಾಗಿಯೇ ಬೀಜಗಳನ್ನು ಕೊಳ್ಳುವುದೂ ಇಲ್ಲ, ಮಾರುವುದೂ ಇಲ್ಲ; ಕೇವಲ ವಿನಿಮಯ ಮಾಡಿಕೊಳ್ಳುತ್ತಾರೆ.

ಆಹಾರ ನೀತಿಯ ಮರುರಚನೆ
ಭಾರತದಲ್ಲಿ ಆಯ್ದ ಕೆಲವೇ ಧಾನ್ಯಗಳನ್ನು ಮಾತ್ರವೇ ಆಹಾರ ಧಾನ್ಯಗಳು ಎಂದು ಸರ್ಕಾರಿ ಸಂಸ್ಥೆಗಳು ಬೆಂಬಲಿಸಿ ಉತ್ತೇಜಿಸುತ್ತವೆ. ಆದರೆ ಇವುಗಳಲ್ಲಿ ಗ್ರಾಮೀಣ ಸಮುದಾಯಗಳು ಸಾಂಪ್ರದಾಯಿಕವಾಗಿ ಬೆಳೆಯುವ ಕಿರುಧಾನ್ಯಗಳು ಇಲ್ಲ. ೨೦೧೩ರಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕಿರುಧಾನ್ಯಗಳನ್ನು ನೂತನ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸೇರಿಸಿಕೊಂಡು ಅವುಗಳಿಗೆ ಆಹಾರ ಭದ್ರತಾ ಧಾನ್ಯಗಳು ಎಂದು ಮಾನ್ಯತೆ ನೀಡಲಾಯಿತು. ದಲಿತ ರೈತ ಮಹಿಳೆಯರ, ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ ಮತ್ತು ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ ಇವುಗಳ ಸುದೀರ್ಘ ಹೋರಾಟದ ನಂತರ ಕಿರುಧಾನ್ಯಗಳೀಗ ಭಾರತದ ಸಾರ್ವಜನಿಕ ಆಹಾರ ವ್ಯವಸ್ಥೆಯೊಳಗೆ ಬಂದಿವೆ. ಇದು ಕೇವಲ ನಮಗಷ್ಟೇ ಅಲ್ಲ, ಮಹಿಳೆಯರಿಗೂ ಸಂಭ್ರಮದ ಕ್ಷಣ. ಅವರು ತಮ್ಮ ಯಶೋಗಾಥೆಗಳನ್ನು ಮತ್ತು ಪಟ್ಟ ಶ್ರಮವನ್ನು ಹಂಚಿಕೊಳ್ಳಲು ರೇಡಿಯೋ ಬಳಸಿದರು, ಕಿರುಚಿತ್ರಗಳನ್ನು ನಿರ್ಮಿಸಿದರು. ಗಟ್ಟಿ ನಿಲುವಿನಿಂದಾಗಿ ಅವರು ತಮ್ಮ ಸಾಮಾಜಿಕ, ಆರ್ಥಿಕ ಮತ್ತು ಲಿಂಗ ತಾರತಮ್ಯವನ್ನು ಮೀರಿ ರಾಷ್ಟ್ರೀಯ
ನೀತಿಯನ್ನೇ ಮರುರೂಪಿಸಿದರು. ಇದಲ್ಲದೆ ೨೦೧೩ರಲ್ಲಿ ಕಿರುಧಾನ್ಯವಾದಿಗಳಾದ ನಾವು ಆಫ್ರಿಕಾ- ಭಾರತ ಮಿಲೆಟ್ ನೆಟ್‌ವರ್ಕ್ ಸ್ಥಾಪಿಸಿ ಇವುಗಳ ಮೂಲಸ್ಥಾನವಾದ ಆಫ್ರಿಕಾಗೂ ಸಂದೇಶ ನೀಡಲು ಸಾಧ್ಯವಾಯಿತು; ಎರಡೂ ದೇಶಗಳ ನಡುವೆ ಹೊಸ ಬಾಂಧವ್ಯ ಮೂಡಿತು.

 

ಹಂಚಿಕೊಳ್ಳುವಲ್ಲಿ ಅಭಿಮಾನ
ದಲಿತ ಸಮುದಾಯದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕಡೆಗಣಿಸಲ್ಪಟ್ಟ ಕೃಷಿಕ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿರುವ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ (ಡಿಡಿಎಸ್) ಎಂಬ ತಳಮಟ್ಟದ ಸ್ವಯಂಸೇವಾ ಸಂಸ್ಥೆಯು ಕೃಷಿಕರ ಮಾಹಿತಿ ಹಂಚಿಕೆಯನ್ನು ಕಳೆದ ೨೫ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ
ಪ್ರದೇಶದ ಮಹಿಳೆಯರು, ಅದರಲ್ಲೂ ಕೆಳ ಸಾಮಾಜಿಕ – ಆರ್ಥಿಕ ವರ್ಗಗಳಿಂದ ಬಂದವರು ಕನಿಷ್ಠಪಕ್ಷ ೧೦೦ ಸಲ ಪೆರು ದೇಶದಿಂದ ಕಾಂಬೋಡಿಯಾದವರೆಗೆ ಪ್ರವಾಸ ಮಾಡಿ ತಮ್ಮ ಅನುಭವ ಮತ್ತು ಕೃಷಿ ದೃಷ್ಟಿಕೋನವನ್ನು ಇತರೆ ಕೃಷಿಕರು, ವಿಜ್ಞಾನಿಗಳು ಮತ್ತು ನೀತಿ ನಿರೂಪಕರೊಂದಿಗೆ ಹಂಚಿಕೊoಡಿದ್ದಾರೆ. ಪುರುಷ ಅಥವಾ ಮಹಿಳಾ ರೈತರಿರಬಹುದು, ಅಂತಾರಾಷ್ಟ್ರೀಯ ಸಮ್ಮೇಳನಗಳಿರಬಹುದು – ಅವರಿಗೆ ತುಂಬಾ ಸ್ಪಂದನಶೀಲ ಶ್ರೋತೃವರ್ಗವೇ ದಕ್ಕಿದೆ. ೨೦೦೩ರಲ್ಲಿ ಅವರು ಕೆನಡಾದ ವಿಕ್ಟೋರಿಯಾದಲ್ಲಿ ನಡೆದ ವಿಶ್ವ ಸಾವಯವ ಸಮ್ಮೇಳನದಲ್ಲಿ ಭಾಷಣ ಮಾಡಿದ್ದಾರೆ. ಅವರ ಮಾತನ್ನು ಕೇಳಿದ ಹಲವರು ತಮಗೆ ಈ ಮಹಿಳೆಯರ ಅನುಭವಗಳು ನಿಜಕ್ಕೂ ಮುದ ಕೊಟ್ಟವು ಎಂದು ತಿಳಿಸಿದ್ದಾರೆ. ಆತ್ಮವಿಶ್ವಾಸದಿಂದ ಬೀಗುತ್ತಿರುವ ಈ ಮಹಿಳೆಯರು `ಸಂಚಾರಿ ಜೀವವೈವಿಧ್ಯ ಹಬ್ಬ’ – ಮೊಬೈಲ್ ಬಯೋಡೈವರ್ಸಿಟಿ ಫೆಸ್ಟಿವಲ್) ಆಚರಿಸುವುದಕ್ಕೆ ಆರಂಭಿಸಿದ್ದಾರೆ. ೧೯೯೮ರಿಂದ ಪ್ರತೀ ವರ್ಷವೂ ಅವರು ಒಂದು ತಿಂಗಳ ಕಾಲ ೫೦ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸುತ್ತಾರೆ; ಪಾರಿಸರಿಕ ಕೃಷಿ, ಬೀಜಗಳ ಮೇಲಿನ ನಿಯಂತ್ರಣಮತ್ತು ಸಾವಯವ ಮಾರುಕಟ್ಟೆಗಳ ಬಗ್ಗೆ ಚರ್ಚಿಸುತ್ತಾರೆ. ಇವೆಲ್ಲವೂ ಕೃಷಿಕರು ಮತ್ತು ಮಣ್ಣು, ಕೃಷಿ ಮತ್ತು ಪರಿಸರದ ನಡುವಣ ಆಳವಾದ ಸಂಬoಧಗಳನ್ನು ಬಿಂಬಿಸುತ್ತವೆ. ಅವರೀಗ ಈ ಪ್ರದೇಶದ ಒಂದೂವರೆ ಲಕ್ಷಕ್ಕೂ ಹೆಚ್ಚು ರೈತರನ್ನು ತಲುಪಿದ್ದಾರೆ; ಅವರಿಗೆಲ್ಲ ಸಾಂಪ್ರದಾಯಿಕ ಬೀಜಗಳ ಸಿರಿವಂತಿಕೆಯನ್ನು ಮತ್ತು ಆ ಪ್ರದೇಶದ ಬೆಳೆಗಳನ್ನು ತೋರಿಸಿಕೊಟ್ಟಿದ್ದಾರೆ. ಭಾರತ ಸರ್ಕಾರವು ಈ ಜೀವವೈವಿಧ್ಯ ಹಬ್ಬಗಳನ್ನು ಅತಿಮುಖ್ಯ ಸಮುದಾಯ ಸಾಂಸ್ಕೃತಿಕ ಅಭಿಯಾನ ಎಂದು ಗುರುತಿಸಿದೆ. ೨೦೦೩ರಲ್ಲಿ ವಿಜ್ಞಾನಿಗಳಿಂದ ಅತಿ ಸುಲಭವಾಗಿ ಅಲ್ಲಗಳೆಯಲ್ಪಟ್ಟಿದ್ದ ದಖನ್ ಪ್ರದೇಶದ ಕೃಷಿಕ ಮಹಿಳೆಯರು ಈಗ ಜೀವವೈವಿಧ್ಯದ
ಮೇಲಿನ ತಮ್ಮ ಕೆಲಸಕ್ಕಾಗಿ ರಾಷ್ಟ್ರೀಯ  ಮತ್ತು ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆಯುತ್ತಿದ್ದಾರೆ. ಉದಾಹರಣೆಗೆ ೫೫ರ ಹರೆಯದ ಅಂಜಮ್ಮ ಎಂದೂ ಶಾಲೆಗೆ ಹೋಗಿಲ್ಲ; ಅವರಿಗೆ ಬರೆಯಲು, ಓದಲು ಬರುವುದಿಲ್ಲ. ಆದರೆ ಅವರೀಗ ಆಂಧ್ರಪ್ರದೇಶದ ಕೃಷಿ ಜೀವವೈವಿಧ್ಯದ ತಜ್ಞ ತಂಡದ ಸದಸ್ಯೆಯಾಗಿದ್ದಾರೆ. ಈ ಮಹಿಳೆಯರ
 ಹೊಲಗಳನ್ನು ಮತ್ತು ಬೀಜ ಸಂಗ್ರಹವನ್ನು ನೋಡಲು ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ನಾಗರಿಕ ಸಮಾಜದ ಕಾರ್ಯಕರ್ತರು, ಮಾಧ್ಯಮದ ಪ್ರತಿನಿಧಿಗಳು ನಿಯಮಿತವಾಗಿ ಬರುತ್ತಿರುತ್ತಾರೆ. ಅವರ ಕಥೆಗಳು ನಿಯಮಿತವಾಗಿ ವೃತ್ತಪತ್ರಿಕೆಗಳಲ್ಲಿ ಮತ್ತು ಟೆಲಿವಿಜನ್ ಚಾನೆಲ್‌ಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಇಂದು, ೫೦ ಸಾವಿರ ಹೆಕ್ಟೇರುಗಷ್ಟು ವಿಸ್ತೀರ್ಣದ ಈ ಪ್ರದೇಶವನ್ನು ಕೃಷಿ ಜೀವವೈವಿಧ್ಯ ಪರಂಪರೆಯ ತಾಣ ಎಂದು  ರಾಷ್ಟ್ರೀಯ  ಜೀವವೈವಿಧ್ಯ ಮಂಡಳಿಯು ಘೋಷಿಸುವ ಹಂತದಲ್ಲಿದೆ. ಈ ಕ್ರಮವು ದೇಶದಲ್ಲೇ ಪ್ರಥಮ. ಜೀವವೈವಿಧ್ಯವನ್ನು ಆಚರಿಸುವ ಪ್ರದೇಶಗಳಿಗೆ ಗೌರವ ನೀಡಲು ಅಂತಾರಾಷ್ಟ್ರೀಯ ಸಂಘಟನೆಯಾದ ಕನ್‌ವೆನ್‌ಶನ್ ಆನ್ ಬಯಾಲಾಜಿಕಲ್ ಡೈವರ್ಸಿಟಿ (ಸಿಬಿಡಿ) ಒಂದು ಪರಿಕಲ್ಪನೆಯನ್ನು ರೂಪಿಸಿದೆ. ಪರಂಪರೆಯ ತಾಣ ಎಂಬ ಹಣೆಪಟ್ಟಿಯಿ0ದಾಗಿ ಈ ಪ್ರದೇಶವು ರಾಷ್ಟ್ರೀಯ ಅಭಯಾರಣ್ಯಗಳ ರಕ್ಷಣೆಯ ಸ್ಥಾನಮಾನವನ್ನು ಪಡೆಯುತ್ತದೆ; ಇದರಿಂದಾಗಿ ಈ ಪ್ರದೇಶದ ರೈತರಿಗೆ ಮತ್ತು ಸಮುದಾಯಗಳಿಗೆ ವಿಶೇಷ ಸ್ಥಾನಮಾನ, ಹಕ್ಕುಗಳು ಮತ್ತು ಉತ್ತೇಜಕಗಳು ದೊರಕುತ್ತವೆ. ಈ ಘೋಷಣೆಯಿಂದಾಗಿ ಭಾರತ ಸರ್ಕಾರವು ಕಡೆಗಣಿತವಾದ ಕುಟುಂಬದ ಸದಸ್ಯರನ್ನು ಬೆಂಬಲಿಸುತ್ತದೆ ಮತ್ತು ಅವರು ಜೀವವೈವಿಧ್ಯದ ಸಂರಕ್ಷಣೆಗೆ ಕೊಡುಗೆ ನೀಡಿದ್ದಾರೆ ಎಂಬುದಕ್ಕೆ ಮನ್ನಣೆ ನೀಡಿದಂತಾಗುತ್ತದೆ. ಪರಂಪರೆ ಎಂದರೆ ಏನನ್ನಿಸುತ್ತದೆ ಎಂದು ಕೇಳಿದಾಗ, ರೈತಮಹಿಳೆ ಮಹಬತ್‌ಪುರ್ ಸ್ವರೂಪ ಉತ್ತರಿಸುತ್ತಾರೆ: `ನಾವು ಯಾವುದೇ ಹಣಕಾಸಿನ ಅನುಕೂಲದಲ್ಲಿ ಆಸಕ್ತಿ ಹೊಂದಿಯೇ ಇಲ್ಲ. ಮನ್ನಣೆಯೊಂದನ್ನೇ ನಾವು ಅನುಭವಿಸುತ್ತೇವೆ.’

ಮಹಿಳಾ ಶಕ್ತಿ : ತಮ್ಮ ಕೃಷಿ ಮತ್ತು ದೃಷ್ಟಿಕೋನದ ಬಗ್ಗೆ ಮೂಡಿರುವ ಈ ಆಸಕ್ತಿಯಿಂದಾಗಿ ಮಹಿಳೆಯರ ಆತ್ಮವಿಶ್ವಾಸವು ತುಂಬಾ ಹೆಚ್ಚಿದೆ. ಪರಮ್ಮ ಎಂಬ ಖಾಸಿಂಪುರ ಗ್ರಾಮದ ಕೃಷಿಕ-ಬೀಜ ಸಂರಕ್ಷಕಿ ಒಮ್ಮೆ ಈ ಆತ್ಮವಿಶ್ವಾಸವನ್ನು ಪ್ರಕಟಿಸಿದ್ದು ಹೀಗೆ: ತನ್ನನ್ನು ಭೇಟಿಮಾಡಲು ಬಂದ ಸರ್ಕಾರಿ ಅಧಿಕಾರಿಗಳಿಗೆ ಆಕೆ ಹೇಳಿದರು `ಪ್ರತೀ ತಿಂಗಳೂ ನೀವು ನಿಮ್ಮ ಸಂಬಳ ತೆಗೆದುಕೊಂಡು ನೋಟುಗಳಿಂದ ನಿಮ್ಮ ಕಿಸೆ ಭರ್ತಿ ಮಾಡಿಕೊಳ್ಳುತ್ತೀರಿ. ಆದರೆ ನನ್ನ ಮನೆಗೆ ಬನ್ನಿ. ನಾನು ನನ್ನ ಮನೆಯನ್ನು ಬೀಜಗಳಿಂದ ತುಂಬಿಸಿದ್ದೇನೆ. ನೀವು ನನಗೆ ಸರಿಸಾಟಿಯಾಗುತ್ತೀರಾ?’ ಬದುಕಿನ ಇತರೆ ಆಯಾಮಗಳಲ್ಲಿ ಅವರೆಲ್ಲ ಕಡೆಗಣಿತವಾಗಿರುವ ಹಿನ್ನೆಲೆಯಲ್ಲಿ ಕೃಷಿ ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಅನುಸರಿಸುವ ತಮ್ಮ ಕೆಲಸವು ದೇಶದಲ್ಲಿ, ಸಮುದಾಯದಲ್ಲಿ ಮತ್ತು ತಮ್ಮ ಮನೆಗಳಲ್ಲಿ ಹೊಸ ಸ್ಥಾನಮಾನವನ್ನು ತಂದುಕೊಟ್ಟಿದೆ ಎoದು ಈ ಮಹಿಳೆಯರು ನಂಬಿದ್ದಾರೆ. ಈಗ ತಮ್ಮ ಕುಟುಂಬದ ಹೊಲಗಳಲ್ಲಿ ಮಾಡಬೇಕಾದ ಆಯ್ಕೆಗಳ ಬಗ್ಗೆ ತಮ್ಮ ಸಲಹೆಗಳನ್ನೂ ಕೇಳಲಾಗುತ್ತಿದೆ ಎಂದು ಇವರು ಹೇಳುತ್ತಾರೆ. ಚೀಲಮಾಮಿಡಿ ಲಕ್ಷ್ಮಮ್ಮ ಗಂಡನೊoದಿಗೆ ಮೂರೆಕರೆ ಹೊಲದಲ್ಲಿ ಡಜನ್‌ಗಟ್ಟಳೆ ಬೆಳೆಗಳನ್ನು ಬೆಳೆಯುತ್ತಾರೆ. ಒಮ್ಮೆ ಆಕೆಯ ಗಂಡನಿಗೆ ಪ್ರಗತಿಪರ ರೈತನಾಗಬೇಕು ಮತ್ತು ಹೊಲದಲ್ಲಿ ಈಗ ಬೆಳೆಯುತ್ತಿರುವ ಬೆಳೆಗೆ ತದ್ವಿರುದ್ಧವಾಗಿ ಕೆಲವು ಹೈಬ್ರಿಡ್ ಬೆಳೆಗಳನ್ನು ಬೆಳೆಯಬೇಕು ಎಂದು ಒತ್ತಾಯಿಸಿದಾಗ ಆತ ತನ್ನ ಹೆಂಡತಿಯ ಸಲಹೆಯನ್ನೇ ಕೇಳಬಯಸಿದ. ಆಗ ಆಕೆ ಸಿಡಿದೆದ್ದರು:`ನಿನಗೇನು ಹುಚ್ಚು ಹಿಡಿದಿದೆಯೆ? ನಮಗೆ ಹೈಬ್ರಿಡ್ ಬೀಜವಾಗಲೀ, ಏಕಬೆಳೆ ವ್ಯವಸ್ಥೆಯಾಗಲೀ ಏಕೆ ಬೇಕು? ನಾವು ಈಗ ಮಾಡ್ತಾ ಇರೋ ಕೃಷಿಯಿಂದ ನಾವು ಖುಷಿಯಾಗಿಲ್ವೆ?’ ವಿಷಯ ಅಲ್ಲಿಗೇ ನಿಂತಿತು. ಲಕ್ಷ್ಮಮ್ಮನಂತ ಚುರುಕು ಮತ್ತು ಜಾಗೃತ ಮಹಿಳೆಯರು ಸಮುದಾಯದಲ್ಲಿ ತಾವು ಗಳಿಸಿದ ಮನ್ನಣೆಯಿಂದಾಗಿ ತಮ್ಮ ಗಂಡoದಿರಿoದಲೂ ಗೌರವ ಪಡೆಯುತ್ತಿದ್ದಾರೆ.

 

P V Satheesh
one of the founders of DDS and its General Secretary. www.ddsindia.com
e-mail: satheeshperiyapatna@gmail.com

 

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೧, ಮಾರ್ಚ್ ೨೦೧೪

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp