ಜೀವವೈವಿಧ್ಯದ ಸಮಗ್ರ ಹೊಲಗಳು – ಗ್ರಾಮೀಣ ಬಡತನ ತಗ್ಗಿಸುವ ಮಾರ್ಗ

ಪೂರ್ಣಭ ದಾಸ್‌ಗುಪ್ತಾ, ರೂಪಕ್ ಗೋಸ್ವಾಮಿ, ಮಹಮದ್ ನಸೀಮ್ ಆಲಿ, ಸುದರ್ಶನ್ ಬಿಸ್ವಾಸ್ ಮತ್ತು ಶುಭ್ರಜಿತ್ ಕೆ ಸಹಾ

ಬದಲಾಗುತ್ತಿರುವ ಹವಾಗುಣ ಸ್ಥಿತಿಗಳು, ಕುಸಿಯುತ್ತಿರುವ ಮಣ್ಣಿನ ಫಲವತ್ತತೆ ಮತ್ತು ಇಳಿಯುತ್ತಿರುವ ಕೃಷಿವರಮಾನ ಮುಂತಾದ ಅಂಶಗಳನ್ನು ಸಹಿಸಿಕೊಳ್ಳುವಂಥ ವಿಶಿಷ್ಟವಾದ ಸಮಗ್ರ ಕೃಷಿ ವ್ಯವಸ್ಥೆಗಳನ್ನು ಶಿಥಿಲಾವಸ್ಥೆಯಲ್ಲಿರುವ ಕೃಷಿ-ಪರಿಸರ ವ್ಯವಸ್ಥೆಯಲ್ಲಿರುವ ರೈತರು ಅಭಿವೃದ್ಧಿಪಡಿಸಿದ್ದಾರೆ. ಇಂಥ ಸುಧಾರಿತ ವ್ಯವಸ್ಥೆಗಳನ್ನು ಹಲವು ಎನ್‌ಜಿಓಗಳು ಉತ್ತೇಜಿಸಿವೆ; ಈ ವ್ಯವಸ್ಥೆಗಳನ್ನು ಈಗ ಬೃಹತ್ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವಂಥ ಘಟಕಗಳು ಎಂದು ಪರಿಗಣಿಸುವ ಕಾಲ ಬಂದಿದೆ.

ಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಪಾರಿಸರಿಕ ಸುಸ್ಥಿರತೆಯಂಥ ಅಂಶಗಳಿಗೆಯಾವುದೇ ಧಕ್ಕೆ ತರದಂತೆ ಆಹಾರ, ಪೌಷ್ಟಿಕತೆ ಮತ್ತು ಜೀವನ ನಿರ್ವಹಣೆಯ ಭದ್ರತೆಯ ಖಾತ್ರಿಯನ್ನು ಒದಗಿಸುವುದು ನಿಜಕ್ಕೂ ಒಂದು ಸವಾಲಿನ ಕೆಲಸವಾಗಿದೆ. ಕೃಷಿಭೂಮಿಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸದಾ ಹೆಚ್ಚಾಗುತ್ತಿರುವ ಒತ್ತಡ, ಜಾಗತೀಕರಣ ಮತ್ತು ನಗರೀಕರಣ ಇವುಗಳ ಹಿನ್ನೆಲೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಪಶ್ಚಿಮ ಬಂಗಳಾದಲ್ಲಿ ಈ ಸನ್ನಿವೇಶ ಇನ್ನೂ ಪೇಲವವಾಗಿದೆ. ಇಲ್ಲಿ ಶೇಕಡಾ ೮೫ರಷ್ಟು ರೈತರು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರು. ಮಳೆ ಆಧಾರಿತ ಮತ್ತು ಕರಾವಳಿಯ ಜವುಗು ಭೂಮಿಯಲ್ಲಿ ಉತ್ಪಾದನೆಗೆ ಮುಂದಾಗಿರುವ ಮಧ್ಯಮ ಗುಣಮಟ್ಟದ ಮತ್ತು ಸಾಧಾರಣ ಕೃಷಿ ಪ್ರದೇಶಗಳಲ್ಲಿ ಈ ಸನ್ನಿವೇಶವು ಇನ್ನೂ ಕಠಿಣವಾಗುತ್ತದೆ. ಇಲ್ಲೇ ಬಡವರು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ಸಣ್ಣ ಹಿಡುವಳಿ ಕೃಷಿಗೆ ಹೆಚ್ಚಿನ ಮಹತ್ವ ಬಂದಿದೆ. ಸುಸ್ಥಿರ ಮತ್ತು ಸಮಗ್ರ ಕುಟುಂಬ ಕೃಷಿಯ ಮೂಲಕ ನಾವು ಹೇಗೆ ಆಹಾರ, ಪೌಷ್ಟಿಕತೆ ಮತ್ತು ಜೀವನ ನಿರ್ವಹಣೆಯ ಖಾತ್ರಿಯನ್ನು ನೀಡುತ್ತೇವೆ ಎಂಬುದರ ಮೇಲೆ ಕೃಷಿಯ ಮತ್ತು ಗ್ರಾಮೀಣ ಬಡತನದ ಭವಿಷ್ಯವು ಅಡಗಿದೆ. ಇಂಥ ಕೃಷಿ ವ್ಯವಸ್ಥೆಯು ಹವಾಗುಣದ ಮತ್ತು ಮಾರುಕಟ್ಟೆಯ ಅನಿಶ್ಚಿತತೆಗಳನ್ನು ಸಹಿಸಿಕೊಳ್ಳುತ್ತದೆ. ಸುಸ್ಥಿರ ಕೃಷಿಯನ್ನು ಬಡತನ ನಿವಾರಣೆಯ ಕಾರ್ಯತಂತ್ರವಾಗಿ ಉತ್ತೇಜಿಸುವುದು ಒಂದು ಯೋಗ್ಯ ಪರಿಹಾರ ಆಗಬಹುದು. ಇದು ಸರಳವಾಗಿ ಕಂಡರೂ, ಒಂದು ಸವಾಲಿನ ಕಾರ್ಯವಂತೂ ಹೌದು.

ಸಮಗ್ರ ಜೀವವೈವಿಧ್ಯ ಕುಟುಂಬ ಕೃಷಿ

ಪಶ್ಚಿಮ ಬಂಗಾಳ ರಾಜ್ಯದ ಕರಾವಳಿ ತಟದ ಜಿಲ್ಲೆಯಾದ ದಕ್ಷಿಣ ಪರಗಣದಲ್ಲಿ ಏಕ ಬೆಳೆ ಕೃಷಿಯೇ ಮುಖ್ಯ ಚಹರೆಯಾಗಿಬಿಟ್ಟಿದೆ. ಬೇಸಗೆಯ ದಿನಗಳಲ್ಲಿ ಮಣ್ಣಿನ ಸೌಳು ಒಂದು ದೊಡ್ಡ ಸಮಸ್ಯೆಯಾಗಿದೆ. ಇಲ್ಲಿನ ಕೃಷಿಕರು ಆ ಕೃಷಿ ರಹಿತ ಕಾಲದಲ್ಲಿ ಹತ್ತಿರದ ನಗರ ಮತ್ತು ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಕೃಷಿ ಉತ್ಪಾದನೆಯು ಕುಸಿಯುತ್ತದೆ. ಹೀಗೆ ಉತ್ಪಾದಕತೆಗೆ ಸಂಬoಧಿಸಿದ ಬಡತನವು ರೈತರನ್ನು ಬಾಧಿಸುತ್ತಿದೆ. ಸಣ್ಣ ಹಿಡುವಳಿಗಳಾದ್ದರಿಂದ ಸಾoಪ್ರದಾಯಿಕ ಕೃಷಿಯ ವಿಸ್ತರಣೆಗೆ ಮಿತಿಯಿದೆ; ಯುವಕರು ಕೃಷಿಯನ್ನು ಒಂದು ವೃತ್ತಿಯಾಗಿ ಮುಂದುವರಿಸಲು ಹಿoಜರಿಯುತ್ತಿದ್ದಾರೆ.

ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಪಶ್ಚಿಮ ಬಂಗಾಲದ ಕರಾವಳಿ ತಟದ ಹಲವು ನೂರು ರೈತರು ಸಮಗ್ರ ಜೀವವೈವಿಧ್ಯ ಕುಟುಂಬ ಕೃಷಿನ್ನು ಡೆವಲಪ್‌ಮೆಂಟ್ ರಿಸರ್ಚ್ ಕಮ್ಯುನಿಕೇಶನ್ ಎಂಡ್ ಸರ್ವಿಸ್ ಸೆಂಟರ್ ಎಂಬ ಕೋಲ್ಕತ ಮೂಲದ ಎನ್‌ಜಿಓದ ಬೆಂಬಲದೊoದಿಗೆ ಸ್ಥಾಪಿಸಿದ್ದಾರೆ. ಇಂಥ ಸಾವಿರಾರು ಐಬಿಎಫ್‌ಎಫ್‌ಗಳಿವೆ; ರೈತರೇ ತಮ್ಮ ಸಣ್ಣ ಹಿಡುವಳಿಗಳಿಂದಲೇ ಜೀವನ ನಿರ್ವಹಣೆ ಮಾಡಿಕೊಳ್ಳಲೆಂದು ಇವುಗಳನ್ನು ರೂಪಿಸಿದ್ದಾರೆ. ೩೦ ದಶಮಾಂಶಕ್ಕಿoತಲೂ ಕಡಿಮೆ ಹಿಡುವಳಿ ಇರುವಲ್ಲಿಯೂ ಐಎಫ್‌ಎಸ್‌ನ್ನು ಕಾಣಬಹುದಾಗಿದೆ.

ರಾಮಕೃಷ್ಣ ಮಿಶನ್ ವಿವೇಕಾನಂದ ಯೂನಿವರ್ಸಿಟಿಯು  ಸಮಗ್ರ ಗ್ರಾಮೀಣ ಅಭಿವೃದ್ಧಿಯ ಆಧಾರದಲ್ಲಿ ಒಂದು ಮಾದರಿ ಗ್ರಾಮವನ್ನು ರೂಪಿಸಲು ಯೋಜಿಸಿತು. ಇದಕ್ಕಾಗಿ ವಿಶ್ವವಿದ್ಯಾಲಯವು ಐಎಫ್‌ಎಸ್ ಮಾದರಿಗಳನ್ನು ಅಭ್ಯಾಸ ಮಾಡಲೆಂದು ಐಬಿಎಫ್‌ಎಫ್‌ಗಳನ್ನು ತೀವ್ರವಾಗಿ ಅಧ್ಯಯನ ಮಾಡಿತು. ಈ ಅಧ್ಯಯನವನ್ನು ಶೈಕ್ಷಣಿಕ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ನಡೆಸಲಾಯಿತು.

ನಾವು ನಮ್ಮ ಅಧ್ಯಯನಕ್ಕಾಗಿ ದಕ್ಷಿಣ ೨೪ ಪರಗಣಗಳ ಜಿಲ್ಲೆಯ ಪಥಾರ್‌ಪ್ರತಿಮಾ ಬ್ಲಾಕಿನ ಒಂದು ಎಕರೆ (೬೦ ಖಾತಾ) ಗಾತ್ರದ ಒಂದು ಐಎಫ್‌ಎಸ್ ಹೊಲವನ್ನು ಆಯ್ದುಕೊಂಡೆವು. ಈ ಒಂದು ಎಕರೆಯನ್ನು ಈ ರೀತಿಯಾಗಿ ಬಳಸಿಕೊಳ್ಳಲಾಗಿತ್ತು: ೩೦-೪೦ ಖಾತಾದಲ್ಲಿ ಬೆಳೆ ಬೆಳೆಯುವುದು (೫೦-೬೬%), ೧೦-೧೨ ಖಾತಾದಲ್ಲಿ ಮನೆಗೆ ಬೇಕಾದ ಪದಾರ್ಥಗಳನ್ನು ಬೆಳೆಯುವುದು (೧೬-೨೦%); ೮-೧೦ ಖಾತಾವನ್ನು ಜಲಮೂಲಗಳಿಗಾಗಿ ಬಳಸುವುದು (೧೩-೧೬%) ಮತ್ತು ೪-೬ ಖಾತಾಗಳನ್ನು ರಾಸುಗಳ ಮೇವಿಗಾಗಿ ಬಳಸುವುದು (೬-೧೦%). ಬದುಗಳನ್ನು ಅಗಲೀಕರಿಸಿ ಏರಿಸಿದ್ದರಿಂದ ಗಮನಾರ್ಹವಾದ ಪ್ರದೇಶವನ್ನು ಕೃಷಿಯು ಆವರಿಸಿತ್ತು. ಪ್ರತಿಯೊಂದೂ ೦.೨೭ ಹೆಕ್ಟೇರ್ ಹೊಲದಲ್ಲಿ ೦.೦೨-೦.೦೩ ಹೆಕ್ಟೇರ್‌ಗಳಷ್ಟು ಪ್ರದೇಶವನ್ನು ಬದುಗಳ ಮೇಲೆ ರೂಪಿಸಲಾಯಿತು. ಇಲ್ಲಿ ವರ್ಷವಿಡೀ ತರಕಾರಿಗಳನ್ನು ಬೆಳೆಯಲಾಯಿತು. ಹೊಲಗಳ ಪ್ರದೇಶಗಳ ಸುತ್ತ ಇದ್ದ ಕೊಳಗಳು ಮತ್ತು ನಾಲೆಗಳನ್ನು ಪರಸ್ಪರ ಜೋಡಿಸಿ ನೀರು ಹರಿಯುವಂತೆ ನೋಡಿಕೊಳ್ಳಲಾಯಿತು. ಆದ್ದರಿಂದ ಇಲ್ಲಿ ಮೀನುಗಳ ಸಾಕಾಣಿಕೆಯೂ ನಡೆಯಿತು. ಇದಲ್ಲದೆ ಸ್ವಲ್ಪ ಜಾಗದಲ್ಲಿ ಬಿದಿರು ಮತ್ತು ಹಗ್ಗಗಳನ್ನು ಬಳಸಿ ಕಟ್ಟಿದ ಚಪ್ಪರದ ಮೂಲಕ ಗಾಳಿ ಕೃಷಿಯನ್ನೂ ಕೈಗೊಳ್ಳಲಾಯಿತು. ಹೊಲವು ತುಂಬಾ ಚಿಕ್ಕ ಗಾತ್ರದ್ದಾಗಿದ್ದರಿಂದ ಕಡಿಮೆ ನೀರನ್ನು ಬಳಸಿ ಬೆಳೆಯುವ ಬೆಳೆಗಳನ್ನೇ ಆಯ್ಕೆ ಮಾಡಿಕೊಂಡು ಹೆಚ್ಚು ಅಂತರಬೆಳೆಗಳು, ಹಣ್ಣಿನ ಮರಗಳ ಕೃಷಿ ಅರಣ್ಯ, ಚಿಕ್ಕ ಮೇವು ಪ್ರದೇಶ, ಚಪ್ಪರದ ಕೃಷಿ – ಹೀಗೆ ಕೃಷಿಪ್ರಮಾಣವನ್ನು ತೀವ್ರಗೊಳಿಸಲಾಯಿತು.

ನಾವು ಈ ಹೊಲಗಳ ಸುಮಾರು ೪೦ ಪಾರಿಸರಿಕ, ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳನ್ನು ಅಳೆದೆವು. ಮೂಲತಃ ಕೃಷಿಕರು ಹೊಲಗಳಿಂದ ಹೊಂದಿದ ಲಾಭವನ್ನು ಪರಿಶೀಲಿಸಲು ನಾವು ಎರಡು ಮುಖ್ಯವಾದ ಬಡತನ ಸಂಬoಧಿತ ಮಾನದಂಡಗಳನ್ನು – ಆಹಾರ ಬಳಕೆ (ಕ್ಯಾಲೋರಿ) ಮತ್ತು ಕೃಷಿ ವರಮಾನ – ಆಯ್ಕೆ ಮಾಡಿಕೊಂಡೆವು. ಐವರು ಸದಸ್ಯರ ಕುಟುಂಬಗಳಿಗೆ ಐಬಿಎಫ್‌ಎಫ್ ನಿಜಕ್ಕೂ ಇಡೀ ವರ್ಷದಾದ್ಯಂತ ಆಹಾರ ಒದಗಿಸಲು ಸಾಧ್ಯವೇ ಎಂಬ ಅಂಶವನ್ನು ನಾವು ಪರಿಶೀಲಿಸಿದೆವು.

ಈ ಅಧ್ಯಯನದ ಮೂಲಕ ನಮಗೆ ಕಂಡು ಬಂದ ಸoಗತಿಯೆoದರೆ, ಈ ಮಾದರಿಯು ಕುಟುಂಬದ ಸದಸ್ಯರಿಗೆ ಅಗತ್ಯವಾದ ಕ್ಯಾಲೊರಿಗಳಷ್ಟು ಆಹಾರವನ್ನು ಒದಗಿಸುತ್ತಿದೆ; ಅಂದರೆ ಅನುಕ್ರಮವಾಗಿ ಪುರುಷ ಮತ್ತು ಮಹಿಳೆಯರಿಗೆ, ಪ್ರತಿ ಕುಟುಂಬದ ಪ್ರತೀ ವ್ಯಕ್ತಿಗೆ ೨೪೦೦ ಮತ್ತು ೨೨೦೦ ಕಿಲೋ ಕ್ಯಾಲೊರಿಗಳು. ಕುಟುಂಬವು ಕೇವಲ ಬೇಳೆಕಾಳುಗಳನ್ನು ಮತ್ತು ಈರುಳ್ಳಿಯನ್ನು ಮಾರುಕಟ್ಟೆಯಿಂದ ಖರೀದಿಸಬೇಕಾಗಿತ್ತು. ಇದು ಅವರ ಆಹಾರ ಅಗತ್ಯದ ಶೇಕಡಾ ೫ಕ್ಕಿಂತ ಕಡಿಮೆ ಪ್ರಮಾಣದ್ದಾಗಿತ್ತು. ಐಬಿಎಫ್‌ಎಫ್ ಮಾದರಿಯ ಹಣಕಾಸು ಲೆಕ್ಕದ ಲಾಭವು ಸುಮಾರು ೭೫,೦೦೦ – ೮೦,೦೦೦ ರೂ.ಗಳಷ್ಟಾಗಿತ್ತು. ಇದರಲ್ಲಿ ಶೇಕಡಾ ೬೦ಕ್ಕಿಂತ ಹೆಚ್ಚಿನ
ಹಣವನ್ನು ನಗದು ವರಮಾನವಾಗಿ ಪಡೆಯಲಾಗಿತ್ತು. ವೈದ್ಯಕೀಯ ಸಸ್ಯಗಳ (ಇಲ್ಲಿ ಆರೋಗ್ಯದ ವೆಚ್ಚದಲ್ಲಿ ಉಳತಾಯವಾಗುತ್ತದೆ), ಪೌಷ್ಟಿಕಾಂಶಗಳ ಮರುಬಳಕೆ ಮತ್ತು ಸಾವಯವ ಗೊಬ್ಬರ (ಇಲ್ಲಿ ರಸಗೊಬ್ಬರದ ಮೇಲಿನ ಖರ್ಚಿನ ಉಳಿತಾಯವಾಗುತ್ತದೆ), ಮನೆಗಾಗಿ ಬಳಸಿದ ವಸ್ತುಗಳು ಮುಂತಾದವುಗಳನ್ನು ಲೆಕ್ಕಕ್ಕೆ ಹಿಡಿಯಲಿಲ್ಲ. ಹೀಗಿದ್ದರೂ ಈ ಮಾದರಿಯಲ್ಲಿ ದಕ್ಕಿದ ಹಣಕಾಸಿನ  ವರಮಾನವು ಮನೆಗಳು ಸರ್ಕಾರವು ನಿಗದಿಪಡಿಸಿದ ಬಡತನ ರೇಖೆಗಿಂತ ಮೇಲೆ ಇರುವಲ್ಲಿ ನೆರವಾದವು (ಬಡತನದ ರೇಖೆ ಎಂದರೆ, ಪ್ರತೀ ಮನೆಗೆ ಪ್ರತೀ ವರ್ಷ ೪೧,೦೬೨ ರೂ.ಗಳ ವರಮಾನ, ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ತಲಾವಾರು ದಿನವಹಿ ೨೨.೫೦ರೂ. ಲೆಕ್ಕದಲ್ಲಿ).

ಮಾದರಿಯ ವಿಸ್ತರಣೆ
ಆರ್‌ಕೆಎಂವಿಯುವು ಸಮಗ್ರ ಗ್ರಾಮೀಣ ಅಭಿವೃದ್ಧಿ ಆಧಾರದಲ್ಲಿ ಮಾದರಿ ಹಳ್ಳಿಯೊಂದನ್ನು ಸ್ಥಾಪಿಸಲು ಉದ್ದೇಶಿಸಿತು. ಇದಕ್ಕಾಗಿ ಅದು ಪಾರುಲ್ದಾ ಗ್ರಾಮದಲ್ಲಿ ಸಮೀಕ್ಷೆಯನ್ನು ನಡೆಸಿತು. ಇದರಲ್ಲಿ ಒಟ್ಟು ಒಂಬತ್ತು ಗ್ರಾಮೀಣ ವಸತಿ ಪ್ರದೇಶಗಳಿವೆ. ೨೦೧೧-೧೨ರ ಸಮೀಕ್ಷೆಯ ಆರಂಭದ ದಿನಗಳಲ್ಲಿ ಕೃಷಿಯೇ ಇಲ್ಲಿನ ಪ್ರಧಾನ ಜೀವನ ನಿರ್ವಹಣಾ ಆಯ್ಕೆ ಎಂಬುದನ್ನು ಕಂಡುಕೊAಡೆವು. ಆದರೆ ಇದಕ್ಕೆ ಸಣ್ಣ ಮತ್ತು ವಿಭಜಿತ ಕೃಷಿ ಹಿಡುವಳಿಂದಾಗಿ ಹಾಗೂ ಸೌಳಿನಿಂದಾಗಿ ಸಮಸ್ಯೆ ಎದುರಾಗಿತ್ತು. ಪಾರುಲ್ದಾ ಗ್ರಾಮದ ೫೬೧ಮನೆಗಳ ಪೈಕಿ ಶೇ. ೮೮ ಮನೆಗಳು ಪರಿಶಿಷ್ಟ ಜಾತಿಗೆ ಸೇರಿದ್ದವು; ಇವರಲ್ಲಿ ಶೇಕಡಾ ೫೦ಕ್ಕಿಂತಲೂ ಹೆಚ್ಚು ಜನರು ಬಡತನದ ರೇಖೆಗಿಂತ ಕೆಳಮಟ್ಟದಲ್ಲಿದ್ದರು. ಆರ್‌ಕೆಎಂವಿಯುವು ರೈತರೊಂದಿಗೆ ಅವರ ಅಗತ್ಯಗಳು ಮತ್ತು ಆಯ್ಕೆಗಳ ಬಗ್ಗೆ ಸಂವಾದ ನಡೆಸಿತು. ಇದಲ್ಲದೆ ಸ್ಥಳೀಯ ಸಮುದಾಯ ಆಧಾರಿತ ಸಂಘಟನೆಯಾದ ನರೇಂದ್ರಪುರದ ರಾಮಕೃಷ್ಣ ಮಿಶನ್ ಆಶ್ರಮ (ಇಲ್ಲಿಯೇ ವಿಶ್ವವಿದ್ಯಾಲಯದ ಶಿಕ್ಷಕ ಸಿಬ್ಬಂದಿ ಕೇಂದ್ರವಿದೆ)ದೊoದಿಗೂ ಅದು ಚರ್ಚೆ ನಡೆಸಿತು. ಈ ಸಂಸ್ಥೆಗೆ ಜಿಲ್ಲೆಯಲ್ಲಿ ಇಂಥ ಮಾದರಿಗಳನ್ನು ಉತ್ತೇಜಿಸಿದ ಅನುಭವವಿದೆ. ಅದಲ್ಲದೆ ಸೂಕ್ತವಾದ ಮತ್ತು ಶಕ್ತಿಯು ಪರಿಹಾರಗಳನ್ನು ಹುಡುಕುವಲ್ಲಿ ತಜ್ಞರನ್ನೂ ಸಂಪರ್ಕಿಸಲಾಯಿತು. ದಕ್ಷಿಣ ೨೪ ಪರಗಣಗಳ ಜಿಲ್ಲೆಯ ಐಎಫ್‌ಎಸ್ ಮಾದರಿಗಳು ಸಣ್ಣ ಹಿಡುವಳಿಗಳಿಗೆ ಸೂಕ್ತವಾದ ಪ್ರದೇಶವಾಗಿದ್ದವು; ಇದರಿಂದಾಗಿ ಕೃಷಿ ಕುಟುಂಬಗಳಿಗೆ ಹಲವು ಆಯಾಮಗಳಲ್ಲಿ ಲಾಭವಾಯಿತು.

೨೦೧೩ರಲ್ಲಿ ಆರ್‌ಕೆಎಂವಿಯುವು ಈ ಮಾದರಿಯನ್ನು ಉನ್ನತೀಕರಿಸಲು ಆರಂಭಿಸಿತು. ಪಾರುಲ್ದಾ ಗ್ರಾಮದಲ್ಲಿ ಕೃಷಿರಂಗಕ್ಕೇ ನಿರ್ದಿಷ್ಟವಾದ ಸುಧಾರಣೆಗಳನ್ನು ತರಲಾಯಿತು. ಈ ಮಾದರಿಯನ್ನು ಮನೆಗಳ ಸಂಪನ್ಮೂಲ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಯಿತು; ಇದನ್ನೇ ಎಲ್ಲರಿಗೂ ಸಿದ್ಧ ಮಾದರಿಯಾಗಿ ಶಿಫಾರಸು ಮಾಡಲಿಲ್ಲ. ಪಾರಿಸರಿಕ ಕೃಷಿಯ ನೀತಿಗಳ ಮೇಲೆ ಗಮನ ಕೇಂದ್ರೀಕೃತವಾಗಿದ್ದರೂ, ಈ ಐಬಿಎಫ್‌ಎಫ್ ಮಾದರಿಗಳು ಸಾಮಾಜಿಕ ಬಂಡವಾಳವನ್ನು ಸೃಷ್ಟಿಸುವ ಮತ್ತು ಸಾಂಸ್ಥಿಕ
ವಾತಾವರಣವನ್ನು ರೂಪಿಸುವ ಗುರಿಯನ್ನು ಇಟ್ಟುಕೊಂಡಿವೆ.

ರೈತರನ್ನು `ಪರ’ (ಹೋಬಳಿ) ಸಮಿತಿಗಳಾಗಿ ಸಂಘಟಿಸಲಾಯಿತು; ಪ್ರತಿಯೊoದೂ ಯೋಜನಾ ಗ್ರಾಮದಲ್ಲಿ ೨೦ ಪುರುಷರು ಮತ್ತು ಮಹಿಳೆಯರು ಇದ್ದರು. ಈ ರೈತರನ್ನು ಹದಿನೈದು ದಿನಗಳಿಗೊಮ್ಮೆ ನಡೆಯುವ ಪರ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ ಮತ್ತು ಈ ಆಯ್ಕೆಯನ್ನು ಗ್ರಾಮದ ತಿಂಗಳ ಸಭೆಯಲ್ಲಿ ಅನುಮೋದಿಸಲಾಗುತ್ತದೆ.

ರೈತರ ಒಂದು ಗುಂಪನ್ನು ಕೃಷಿ ಕ್ಷೇತ್ರ ಶಾಲೆಯಾಗಿ (ಫಾರ್ಮರ್ ಫೀಲ್ಡ್ ಸ್ಕೂಲ್ FFS) ಸಂಘಟಿಸಲಾಯಿತು. ರೈತರು ತಜ್ಞರು ಮತ್ತು ವಿಜ್ಞಾನಿಗಳಿಂದ ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ಮತ್ತು ಕೀಟ ನಿರ್ವಹಣೆಯ ಬಗ್ಗೆ ತರಬೇತಿಯನ್ನು ಪಡೆದರು. ಎಫ್‌ಎಫ್‌ಎಸ್ ಸದಸ್ಯರನ್ನು ಪರ ಮತ್ತು ಗ್ರಾಮ ಸಮಿತಿಯ ನಿರ್ಣಯಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯಾಗತ ರೈತರಿಂದ ತನ್ನ ಹಣಕಾಸಿನ ಲಾಭದಲ್ಲಿ ಶೇ. ೧೦ರಷ್ಟು ಪ್ರಮಾಣವನ್ನು ಅಥವಾ ಹಣಕಾಸೇತರ ವಸ್ತುಗಳನ್ನು (ಬೀಜ, ಕೂಲಿ ಇತ್ಯಾದಿ) ಗ್ರಾಮ ಸಮಿತಿಗೆ ವಾಪಸು ಮಾಡುವುದಾಗಿ ಭರವಸೆ ಪಡೆಯಲಾಗುತ್ತದೆ. ಬೆಳೆ ಅಂಕಿ ಅಂಶಗಳಲ್ಲದೆ ಈ ಜಾಲದ ಸದಸ್ಯರು ಹವಾಮಾನ ಮಾಹಿತಿಯನ್ನೂ ಗ್ರಾಮೀಣ ಸಂಪನ್ಮೂಲ ಕೇಂದ್ರದಿoದ ಪಡೆಯುತ್ತಾರೆ. ಈ ಕೇಂದ್ರಗಳಲ್ಲಿ ಹೈಗ್ರೋಮೀಟರ್ ಮತ್ತು ಡಿಜಿಟಲ್ ಮಳೆ ಮಾಪನ ಸಾಧನವನ್ನು ಅಳವಡಿಸಿ ಗ್ರಾಮ ಸಮಿತಿಯ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದಲ್ಲದೆ ಎಫ್‌ಎಫ್‌ಎಸ್ ನ ನಾಯಕರು, ರೈತ ತರಬೇತುದಾರರು ನಿಯಮಿತ ಕಾಲಾವಧಿಗಳಲ್ಲಿ ಇತರೆ ರೈತರಿಗೆ ತರಬೇತಿಯನ್ನು ನೀಡುತ್ತಾರೆ.

ಐಎಫ್‌ಎಸ್ ಮಾದರಿಯನ್ನು ಅಳವಡಿಸಿಕೊಂಡ ಎಲ್ಲಾ ರೈತರೂ ಬೀಜ ಹಂಚಿಕೆ ಜಾಲದ (SSN – ಸೀಡ್ ಶೇರಿಂಗ್ ನೆಟ್‌ವರ್ಕ್)ನ ಸದಸ್ಯರಾಗಿರುತ್ತಾರೆ. ಎಲ್ಲಾ ಸದಸ್ಯರೂ ತಂತಮ್ಮ ಅಗತ್ಯಕ್ಕೆ ತಕ್ಕಂತೆ ತಮ್ಮ ಕೃಷಿಯ ಆರಂಭಿಕ ಹಂತದಲ್ಲಿ ಬೀಜಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಫಸಲು ಬಂದಮೇಲೆ ಪಡೆದ ಬೀಜಕ್ಕಿಂತ ಶೇ. ೨೦ರಷ್ಟು ಹೆಚ್ಚು ಬೀಜವನ್ನು ಸೇರಿಸಿ ಈ ಬೀಜ ಹಂಚಿಕೆ ಜಾಲವನ್ನು ಬೆಳೆಸುತ್ತಾರೆ. ಈ ಪ್ರಕ್ರಿಯೆಯನ್ನು ರೈತರು ನಿಯಮಿತವಾಗಿ ಪರಾಮರ್ಶಿಸುತ್ತಾರೆ ಮತ್ತು ಜನನದ್ರವ್ಯಗಳ ಗುಣಮಟ್ಟದ ಮೇಲ್ವಿಚಾರಣೆಯನ್ನೂ ಮಾಡುತ್ತಾರೆ. ಈ ಜನನದ್ರವ್ಯಗಳನ್ನು ಬೀಜದ ಬುಟ್ಟಿಗಳಲ್ಲಿ ತಣ್ಣನೆಯ ಮತ್ತು ಒಣ ಪ್ರದೇಶದಲ್ಲಿ ಸಂರಕ್ಷಿಸಲಾಗುತ್ತದೆ.ಪ್ರಸ್ತುತ ತರಕಾರಿಗಳು ಮತ್ತು ಸಾಸಿವೆಯ ಬೀಜಗಳನ್ನು ಹಂಚಕೊಳ್ಳಲಾಗುತ್ತಿದ್ದು ಇವುಗಳನ್ನು ಬೀಜದ ಬುಟ್ಟಿಗಳಲ್ಲಿ ಸಂರಕ್ಷಿಸಲಾಗುತ್ತಿದೆ.

ಕೃಷಿ ಮಿಗತೆಯ ಪ್ರಮಾಣವು ಕಡಿಮೆ ಇರುವ ಕಾರಣ ಕೃಷಿಕರು ತಮ್ಮ ಎಲ್ಲಾ ಉತ್ಪನ್ನಗಳನ್ನೂ ಸಾಮೂಹಿಕವಾಗಿ ಮಾರುಕಟ್ಟೆ ಸಂಪರ್ಕ ಜಾಲವನ್ನು ಸ್ಥಾಪಿಸಿ ಅದರ ಮೂಲಕ ಮಾರಲು ನಿರ್ಧರಿಸಿದ್ದಾರೆ. ಇದು ಇನ್ನೂ ಆರಂಭಿಕ ಹಂತದಲ್ಲಿದೆ. ಭವಿಷ್ಯದಲ್ಲಿ ಇಡೀ ಮಾದರಿಯನ್ನು ಕೃಷಿ ಉತ್ಪನ್ನ ಕಂಪನಿ ಅಥವಾ ಸಹಕಾರ ಸಂಘಕ್ಕೆ ಜೋಡಿಸಬಹುದಾಗಿದೆ.

ಹೀಗೆ ಫಾರ್ಮರ್ ಫೀಲ್ಡ್ ಸ್ಕೂಲ್, ಸೀಡ್ ಶೇರಿಂಗ್ ನೆಟ್‌ವರ್ಕ್  ಮತ್ತು ಮಾರ್ಕೆಟ್ ಲಿಂಕೇಜ್ ನೆಟ್‌ವರ್ಕ್ (ಒಐಓ) – ಇವುಗಳನ್ನು ಸ್ಥಾಪಿಸಲಾಗಿದೆ. ಒಬ್ಬ ರೈತನು ಈ ಮೂರೂ ಜಾಲಗಳ ಸದಸ್ಯನಾಗಿರಬಹುದು; ಆದರೆ ಇದೇನೂ ಕಡ್ಡಾಯವಲ್ಲ. ಹಳ್ಳಿಯ ಆಸಕ್ತಿ ಕೃಷಿಯೇತರ ವ್ಯಕ್ತಿಗಳೂ ಒಂದು ಅಥವಾ ಹೆಚ್ಚಿನ ಸಂಸ್ಥೆಗಳ ಸದಸ್ಯರಾಗಿದ್ದಾರೆ.

ಆರಂಭದ ಲಾಭಗಳು

ಇದರ ಪರಿಣಾಮವನ್ನು ಕೂಡಲೇ ಅಳೆಯುವುದು ಕಷ್ಟವಾದರೂ, ಇಲ್ಲಿ ವಿಧಾಯಕ ಫಲಿತಾಂಶ ದೊರಕುತ್ತಿದೆ ಎಂಬುದನ್ನು ಕೆಲವು ಬೆಳವಣಿಗೆಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ರೈತರು ಇದೇ ಮೊದಲ ಬಾರಿಗೆ ಫಾರ್ಮರ್ ಫೀಲ್ಡ್ ಸ್ಕೂಲ್ ಮೂಲಕ ನಿಯಮಿತ ಸಂವಾದಕ್ಕೆ ಬರುತ್ತಿದ್ದಾರೆ. ಇಲ್ಲಿ ರೈತರ ನಡುವೆ ಮುಖ್ಯವಾದ ಕೃಷಿ ಸಂಬoಧಿತ ಮಾಹಿತಿ ಮತ್ತು ತಂತ್ರಜ್ಞಾನವನ್ನು  ಹಂಚಿಕೊಳ್ಳಲಾಗುತ್ತದೆ. ಉದಾಹರಣೆಗೆ, ಇಬ್ಬರು ಪ್ರಗತಿಪರ ರೈತರು ಮುಕ್ತವಾಗಿ ತಮ್ಮ `ಅಡಗಿಸಿಟ್ಟ ಅನುಭವ’ವನ್ನು ಎಫ್‌ಎಫ್‌ಎಸ್ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಉತ್ಸಾಹಿ ಸದಸ್ಯರು ಗ್ರಾಮ ಸಂಪನ್ಮೂಲ ಕೇಂದ್ರದಲ್ಲಿರುವ ಸ್ಥಳೀಯ ಭಾಷೆಯಲ್ಲಿ ಮುದ್ರಿತವಾದ ವಿಸ್ತರಣಾ ಸಾಹಿತ್ಯವನ್ನು ಬಳಸಿಕೊಳ್ಳುತ್ತಾರೆ.

ಬೀಜ ಹಂಚಿಕೆ ಜಾಲವು ರೈತರನ್ನು ಬೀಜ ಖರೀದಿಗೆ ಹೆಚ್ಚು ಖರೀದಿ ಮಾಡುವ ತಾಪತ್ರಯದಿಂದ ರಕ್ಷಣೆ ನೀಡಿದೆ. ಮೊದಲ ವರ್ಷದಲ್ಲಿ ರೈತರು ಸರಾಸರಿ ೪೦೦-೫೦೦ ರೂ.ಗಳ ಉಳಿತಾಯವನ್ನು ಸಾಧಿಸಿದ್ದಾರೆ. ಬೀಜಗಳ ಲಭ್ಯತೆಯು ಒಂದು ಅನುಕೂಲವಾದರೆ, ಸ್ಥಳೀಯ ಜನನದ್ರವ್ಯದ ಸಂರಕ್ಷಣೆಯೂ ಸಾಧ್ಯವಾಗಿರುವುದು ಇನ್ನೊಂದು ಅಂಶ. ಸೌತೆಕಾಯಿ, ಸೋರೆಕಾಯಿ,ಮೆಣಸಿನಕಾಯಿ ಇತ್ಯಾದಿ ಸ್ಥಳೀಯ ತಳಿಗಳನ್ನು ಸಂರಕ್ಷಿಸಲಾಗಿದೆ. ಇವುಗಳನ್ನು ಮನೆಯ ಸುತ್ತಮುತ್ತ ಕೃಷಿಕ ಮಹಿಳೆಯರು ಬೆಳೆಯುತ್ತಾರೆ.

ಈ ಹೊಲಗಳಿಂದ ವರಮಾನವು ಖಚಿತವಾಗಿಯೂ ಹೆಚ್ಚಾಗಿದೆ. ಉದಾಹರಣೆಗೆ ರೈತರಲ್ಲಿ ಒಬ್ಬರಾದ ರಂಜನ್ ಮೊಂಡಲ್ ಮನೆ ಬಳಕೆಗೆ ಉಳಿಸಿಕೊಂಡ ಮೇಲೆ ೧೮ ಲೇಯರ್ ಹಕ್ಕಿಗಳಿಂದ (ರೋಡ್ ಐಲ್ಯಾಂಡ್) ೮೦೦೦ ರೂ., ಮೀನಿನಿಂದ ೮೦೦೦ ರೂ. ಮತ್ತು ತರಕಾರಿಗಳಿಂದ ೧೫೦೦೦ ರೂ. ಗಳಿಸಿದ್ದಾರೆ. ಕಳೆದ ವರ್ಷ ಅವರಿಗೆ ಬೇರಾವುದೇ ವರಮಾನವೂ ಇರಲಿಲ್ಲ.

ಇದಲ್ಲದೆ ಈ ಮನೆಗಳಲ್ಲಿ ಆಹಾರ ವ್ಯವಸ್ಥೆಯ ವೈವಿಧ್ಯವೂ ಹೆಚ್ಚಾಗಿದೆ. ಈ ಹಿಂದೆ ಕಾರ್ಬೋಹೈಡ್ರೇಟ್‌ನ ಪ್ರಮಾಣವು ಶೇಕಡಾ ೮೦ರಷ್ಟನ್ನು ಮೀರಿತ್ತು. ಈಗ ತರಕಾರಿ, ಮೀನು ಮತ್ತು ಮೊಟ್ಟೆಗಳನ್ನು ತಿನ್ನುವುದರೊಂದಿಗೆ, ಅವರ ಆಹಾರದಲ್ಲಿ ಪ್ರೋಟೀನ್ ಮತ್ತು ಜೀವಸತ್ವಗಳ ಅಂಶವು ಹೆಚ್ಚಾಗಿದೆ. ಇದಲ್ಲದೆ ರೈತರು ಕೀಟನಾಶಕ ರಹಿತ ಆರೋಗ್ಯಕರ ಉತ್ಪನ್ನವನ್ನು ಬಳಸುವಂತಾಗಿದೆ.

ಇವೆಲ್ಲಕ್ಕಿoತ ಮುಖ್ಯವಾಗಿ ರೈತರಲ್ಲಿ ಪರಸ್ಪರ ಸಂಘಟನಾ ಮನೋಭಾವ ಹೆಚ್ಚಾಗಿದೆ. ಇದಕ್ಕೆ ಮುನ್ನ ಈ ಒಂಬತ್ತು ಹೋಬಳಿಗಳ ರೈತರು ನಿಯಮಿತ ಚರ್ಚೆಗೆಂದು ಒಟ್ಟಾಗಿ ಕೂತಿದ್ದೇ ಅಪರೂಪವಾಗಿತ್ತು.

ಭವಿಷ್ಯದ ಸಾಧ್ಯತೆಗಳು

ಸಮಗ್ರ ಕೃಷಿ ವ್ಯವಸ್ಥೆಯು (ಐಎಫ್‌ಎಸ್) ಸುಸ್ಥಿರ ಕೃಷಿ ಉತ್ಪಾದನೆ ಮತ್ತು ಪಾರಿಸರಿಕ ಗುಣಮಟ್ಟದೊಂದಿಗೇ ಆರ್ಥಿಕ ಲಾಭವನ್ನು ಸಾಧಿಸಲು ವಿಶಿಷ್ಟವಾದ ಸಂಪನ್ಮೂಲ ನಿರ್ವಹಣಾ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಈ ವ್ಯವಸ್ಥೆಗಳು ಆಹಾರ ಭದ್ರತೆ, ಉದ್ಯೋಗ ಸೃಷ್ಟಿ ಮತ್ತು ಪಾರಿಸರಿಕ ಸ್ಥಿರತೆ ಮುಂತಾದ ಗುಣಗಳನ್ನು ಹೊಂದಿದ್ದು ಎನ್‌ಜಿಓಗಳು ಅಲ್ಲಲ್ಲಿ ಇದನ್ನು ಪ್ರಚುರಪಡಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಈಗ ಬೃಹತ್ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಸಮಯ ಒದಗಿದೆ.

ಇದಲ್ಲದೆ, ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡುವ ಕಾಲವೂ ಈಗ ಬಂದಿದೆ. ಉದಾಹರಣೆಗೆ ಪಶ್ಚಿಮ ಬಂಗಾಳದ ಸುಂದರಬನ ಅಭಿವೃದ್ಧಿ ಮಂಡಳಿಯು ಸುಂದರಬನ ಪ್ರದೇಶದಲ್ಲಿ ಸಾವಿರಾರು ಭೂಪ್ರದೇಶಗಳನ್ನು ಮರುರೂಪಿಸುವ ಮತ್ತು ನೀರಾವರಿ ಕೆರೆಗಳ ಹೂಳೆತ್ತುವ ಕೆಲಸವನ್ನು ಉತ್ತೇಜಿಸುತ್ತದೆ. ಇಂಥ ಭಾರೀ ಸಂಖ್ಯೆಯ ಕೆರೆಗಳನ್ನು ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯೂ ರೂಪಿಸಲಾಗುತ್ತಿದೆ. ಇಂಥ ಪ್ರದೇಶಗಳಲ್ಲಿ ಐಎಫ್‌ಎಸ್ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಭಾರೀ ಪ್ರಮಾಣದಲ್ಲಿ ಇಲ್ಲಿನ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮತ್ತು ಪಾರಿಸರಿಕ ಸಮತೋಲನವನ್ನು ಸಾಧಿಸುವ ಅವಕಾಶಗಳು ಇವೆ. ಈ ಪ್ರದೇಶದಲ್ಲಿ ಕೇವಲ ೫೦ ಸಾವಿರ ಹೊಲಗಳಿವೆ ಎಂಬ ಸಾಧಾರಣ ಲೆಕ್ಕದಲ್ಲೂ ಇಲ್ಲಿನ ವಾರ್ಷಿಕ ಪ್ರಾಥಮಿಕ ಕೃಷಿ ಉತ್ಪನ್ನದ ಸಾಮರ್ಥ್ಯವು ಸುಮಾರು ೩೫೦ ಕೋಟಿ ರೂ. ಗಳಾಗಬಹುದು. ಇದರಲ್ಲಿ ಸುಮಾರು ೧೨೫ ಕೋಟಿ ರೂ.ಗಳು ನೇರವಾಗಿ ಮಾರುಕಟ್ಟೆಗೆ ಬರಬಹುದು. ಇನ್ನು ಈ ಹೊಲಗಳಲ್ಲಿ ಸೃಷ್ಟಿಯಾಗುವ ಉದ್ಯೋಗಾವಕಾಶ ಮತ್ತು ಕಾರ್ಮಿಕ ಆರ್ಥಿಕತೆಯ ಅನುಕೂಲಗಳನ್ನು ಮರೆಯಲಾಗದು. ಪೌಷ್ಟಿಕತೆಯ ಸಮತೋಲನ, ಉಳಿತಾಯವಾದ ನೀರು, ಇಂಗಿಸಿದ ಇಂಗಾಲ, ಉಳಿಸಿದ ಇಂಧನ, ಹೆಚ್ಚಿದ ಜೀವ ವೈವಿಧ್ಯ – ಇವೆಲ್ಲದರ ಬೆಲೆಯನ್ನು ಲೆಕ್ಕ ಹಾಕಿದರೆ ಒಟ್ಟಾರೆ ಜೀವಿವ್ಯವಸ್ಥೆಗೆ ನೀಡುವ ಕೊಡುಗೆಯು ಅಪಾರವಾಗಿದೆ. ಇವು ಅತ್ಯಂತ ವಾಸ್ತವಿಕ ಪ್ರಾಮುಖ್ಯದ ಸಂಗತಿಗಳಾಗಿವೆ. ಆಶ್ಚರ್ಯವೆಂದರೆ ಇವುಗಳತ್ತ ಗಮನ ನೀಡುವ ಯಾವುದೇ ನೀತಿ ಉಪಕ್ರಮಗಳನ್ನು ಸರ್ಕಾರವು ಕೈಗೊಂಡಿಲ್ಲ. ಐಬಿಎಫ್‌ಎಫ್‌ನ್ನು ಪ್ರಾದೇಶಿಕ ಯೋಜನೆಯಡಿ ಎನ್‌ಆರ್‌ಎಂ ಘಟಕಗಳಾಗಿ ಜಾರಿಗೊಳಿಸುವ ಅಗತ್ಯವಿದೆ. ಇದನ್ನು ಒಟ್ಟಾರೆಯಾಗಿ ಬಡತನ
ನಿವಾರಣಾ ಕಾರ್ಯತಂತ್ರದಲ್ಲಿ ಜೋಡಿಸಬಹುದು.

ಕೃತಜ್ಞತೆಗಳು
ಭಾರತದ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸೀಡ್ ಡಿವಿಜನ್‌ನ ಹಣಕಾಸಿನ ನೆರವಿಗಾಗಿ ನಮ್ಮ ಕೃತಜ್ಞತೆಗಳು. ಹಾಗೆಯೇ ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ನೆರವು ನೀಡಿದ್ದಕ್ಕಾಗಿ ಕೋಲ್ಕತಾದ ಡಿಆರ್‌ಸಿಎಸ್‌ಸಿಗೂ ವಂದನೆಗಳು.

Purnabha Dasgupta, Rupak Goswami, Nasim Ali, Sudarsan Biswas

Ramakrishna Mission Vivekananda University, Ramakrishna Mission Ashrama, Narendrapur, Kolkata-700103

E-mail: goswamirupak@rediffmail.com

Subhrajit K Saha Department of Biology, Georgia Southern University, Statesboro, GA 30458, USA

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೨, ಜೂನ್ ೨೦೧೪

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp