ಟಿ. ಜೆ. ಜೇಮ್ಸ್
ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಏಲಕ್ಕಿಗೆ ಬೆಲೆಯೇನೋ ಹೆಚ್ಚು. ಆದರೆ ಸಂಶೋಧನಾ ಸಂಸ್ಥೆಗಳ ಸಹಕಾರ ಅಷ್ಟಾಗಿ ಇಲ್ಲದಿರುವುದರಿಂದ ಏಲಕ್ಕಿ ಸಂಸ್ಕರಣೆಯೂ ಅಷ್ಟೇ ಕಷ್ಟಕರ ಉದ್ದಿಮೆಯಾಗಿದೆ. ಬಹುಶಃ ಆ ಕಾರಣದಿಂದಲೇ ಏನೋ ಏಲಕ್ಕಿ ಬೆಳೆಗಾರರು ತಮ್ಮದೇ ಆದ ವಿನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲಿ ಏಲಕ್ಕಿಗೆ ಹೊಳಪೂಡುವ ಯಂತ್ರವೂ (ಏಲಕ್ಕಿ ಪಾಲಿಶಿಂಗ್ ಮೆಷಿನ್) ಒಂದಾಗಿದ್ದು, ಬಹಳಷ್ಟು ಏಲಕ್ಕಿ ಬೆಳೆಗಾರರು ಇದನ್ನು ಬಳಸುತ್ತಿದ್ದಾರೆ.
ಏಲಕ್ಕಿ ಸಂಸ್ಕರಣೆಯಲ್ಲಿ ಸಾಕಷ್ಟು ಹಂತಗಳಿವೆ; ತೊಳೆಯುವುದು, ಒಣಗಿಸುವುದು, ಪಾಲಿಷ್ ಮಾಡುವುದು ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಪ್ರತ್ಯೇಕಿಸುವುದು – ಹೀಗೆ. ಅದರಲ್ಲೂ ಏಲಕ್ಕಿಯನ್ನು ವಿಂಗಡಿಸುವುದು ಸುಲಭ ಸಾಧ್ಯವಾದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡಬೇಕು. ಶೇಕಡ ೭೦ರಷ್ಟು ಕೆಲಸಗಾರರು ಈ
ಹಂತದಲ್ಲೇ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇನ್ನು ಏಲಕ್ಕಿಯನ್ನು ಪಾಲಿಷ್ ಮಾಡುವ ವಿಚಾರ. ಅದು ಸಹ ಸರಳ ಪ್ರಕ್ರಿಯೆಯಲ್ಲ. ಮೊದಲು ಏಲಕ್ಕಿಯನ್ನು ಬಿಸಿಗಾಳಿಯಿಂದ ಒಣಗಿಸಿದ ನಂತರ ಅದನ್ನು ಹೂವಿನ ಭಾಗದಿಂದ ಬೇರ್ಪಡಿಸಲಾಗುತ್ತದೆ. ಆಮೇಲೆ ಅದರ ಮೇಲ್ಭಾಗದಲ್ಲಿರುವ ಕೊಳೆ ಮತ್ತು ಇತರೆ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಾಕಷ್ಟು ಧೂಳು ಉತ್ಪತ್ತಿಯಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಮಹಿಳೆಯರೇ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನೆಲದ ಮೇಲೆ ಮಂಡಿಯೂರಿ ತಂತಿಯ ಬಲೆಯನ್ನು ಜೋರಾಗಿ ಏಲಕ್ಕಿಗೆ ಆನಿಸಿ ಹಿಡಿಯುವ ಮಹಿಳೆಯರು ಸಾಕಷ್ಟು ದೈಹಿಕ ಶ್ರಮ ಪಡುತ್ತಾರೆ. ಅಷ್ಟೇ ಅಲ್ಲ, ಹೀಗೆ ಒತ್ತಿ ಹಿಡಿದಿಟ್ಟುಕೊಳ್ಳುವ ಸಂದರ್ಭದಲ್ಲಿ ಕೈಗಳಿಗೆ ಪೆಟ್ಟು ತಗಲುವ ಸಾಧ್ಯತೆಯೂ ಹೆಚ್ಚು. ಇದೊಂದು ಬಗೆಯಾದರೆ, ಏಲಕ್ಕಿಗೆ ಪಾಲಿಶ್ ನೀಡುವ ಸಂದರ್ಭದಲ್ಲಿ ಉಂಟಾಗುವ ಅಧಿಕ ಧೂಳು ಅಲರ್ಜಿಗೂ ಕಾರಣವಾಗುತ್ತದೆ.
ರೈತನ ಸಂಶೋಧನೆ
ಈ ಸಮಸ್ಯೆಗೊಂದು ಪರಿಹಾರ ಕಂಡುಕೊoಡು ಕೆಲಸವನ್ನು ಸರಳ ಮಾಡಿದ ಹಿರಿಮೆ ಥಾಮಸ್‌ರದ್ದು. ಎನ್.ಜೆ. ಥಾಮಸ್ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಪುಲಿಯನ್‌ಮಾಳಾದವರು. ಇವರ ತಂದೆಯೂ ಏಲಕ್ಕಿ ಬೆಳೆಗಾರರು. ಥಾಮಸ್ ಚಿಕ್ಕಂದಿನಿoದಲೇ ತoದೆ ಮೂರು ಎಕರೆ ಪ್ರದೇಶದಲ್ಲಿ ಆರಂಭಿಸಿದ್ದ ಏಲಕ್ಕಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸೋಜಿಗವೆಂದರೆ ಏಲಕ್ಕಿ ಬೆಳೆ ಬೆಳೆಯುವುದಕ್ಕಿಂತ ಅದನ್ನು ಸಂಸ್ಕರಿಸಿ, ವರ್ಗೀಕರಿಸುವ ಕೆಲಸವೇ ಕಷ್ಟಕರವಾಗಿತ್ತು. ತಂದೆಯ ಪರಿಪಾಟಲನ್ನು ಕಂಡ ಥಾಮಸ್ ಮೊದಲಿನಿಂದಲೂ ಏಲಕ್ಕಿ ಸಂಸ್ಕರಣೆಗೊoದು ಪರ್ಯಾಯ ಮಾರ್ಗ ಹುಡುಕುವ ಚಿಂತನೆಯಲ್ಲಿದ್ದರು. ಹೀಗೆ ಅವರ ಆಲೋಚನಾ ಧಾಟಿ ಸಾಗಿದ್ದಾಗ ಮೊದಲು ಅವರ ಕಣ್ಣಿಗೆ ಬಿದ್ದದ್ದೇ ಜೇನುತುಪ್ಪ ತೆಗೆಯುವ ಯಂತ್ರ. ಜೇನುತುಪ್ಪ ತೆಗೆಯುವ ಯಂತ್ರದ ಕಾರ್ಯವಿಧಾನ ತುಂಬಾ ಸರಳ. ಇದರಲ್ಲಿ ಒಂದು ಸುತ್ತುವ ಡ್ರಮ್ ಮತ್ತು ಅದಕ್ಕೆ ಹೊಂದಿಕೊoಡoತಿರುವ ಮರದ ಎಲೆಗಳನ್ನು ಅಳವಡಿಸಿರುತ್ತಾರೆ. ಡ್ರಮ್ ತಿರುಗುತ್ತಾ ಹೋದಂತೆ ಜೇನು ಹುಟ್ಟಿನಿಂದ ಜೇನು ಬೇರ್ಪಟ್ಟು ಹೊರಗೆ ಬರುತ್ತದೆ.
ಜೇಮ್ಸ್ ಥಾಮಸ್‌ರಿಗೆ ಈ ಯಂತ್ರದಲ್ಲಿ ಆಸಕ್ತಿ ಹುಟ್ಟಿತು. ಸರಿ ಅವರು ಈ ತಂತ್ರಾAಶವನ್ನೇ ಬಳಸಿ ಏಲಕ್ಕಿಯನ್ನು ಸಂಸ್ಕರಿಸಲು ಯತ್ನಿಸಿದರು.
ಮೊದಲು ಅವರು ಸಂಸ್ಕರಣೆಗಾಗಿ ಆಯ್ಕೆ ಮಾಡಿಕೊಂಡ ಏಲಕ್ಕಿಯ ಪ್ರಮಾಣ ಐದು ಕೆ.ಜಿ.ಯಷ್ಟಿತ್ತು. ಆದರೆ ಮೊದಲ ಪ್ರಯತ್ನವೇ ಕೈಕೊಟ್ಟಿತ್ತು. ಜೇನುತುಪ್ಪದ ಯಂತ್ರದೊಳಗೆ ಅಷ್ಟೊಂದು ಪ್ರಮಾಣದ ಏಲಕ್ಕಿಯನ್ನಿಟ್ಟು ತಿರುಗಿಸುವುದು ಸುಲಭದ ಮಾತಾಗಿರಲಿಲ್ಲ. ಸ್ವಲ್ಪ ಚಿಂತನೆಯ ನಂತರ ಥಾಮಸ್ ಯಂತ್ರಕ್ಕೆ ಹಾಕುವ ಏಲಕ್ಕಿಯ
ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋದರು. ಹೀಗೊಮ್ಮೆ ಕೇವಲ ಅರ್ಧ ಕೆಜಿಯಷ್ಟು ಏಲಕ್ಕಿಯನ್ನು ಯಂತ್ರಕ್ಕೆ ಹಾಕಿದರು. ಸೋಜಿಗವೆನ್ನುವಂತೆ ಅವರ ನಿರೀಕ್ಷೆಗೂ ಮೀರಿದ ಫಲಿತಾಂಶ ದೊರಕಿತ್ತು. ಸುತ್ತುವ ಡ್ರಮ್‌ನ ಒಳಮೈ ಮತ್ತು ಮರದ ಎಲೆಗಳ ನಡುವೆ ಸಿಲುಕಿಕೊಂಡಿದ್ದ ಏಲಕ್ಕಿಯ ಮೇಲೆ ಸಾಕಷ್ಟು ಒತ್ತಡ ಬಿದ್ದಿತ್ತು. ನಿರೀಕ್ಷಿತ ಯಶಸ್ಸು ದೊರಕಿತ್ತು.
ಹೀಗೆ ಏಲಕ್ಕಿ ಸಂಸ್ಕರಣಾ ವಿಧಾನ ಥಾಮಸ್‌ರಿಗೆ ಅರ್ಥವಾಯಿತು. ಈ ಸಿದ್ಧಾಂತವನ್ನು ಆಧರಿಸಿ ಅವರೊಂದು ಯಂತ್ರವನ್ನು ಒಂದು ವಾರಕ್ಕೂ ಅಲ್ಪಾವಧಿಯಲ್ಲೇ ತಯಾರಿಸಿದರು. ಅದಕ್ಕಾಗಿ ಸ್ಥಳೀಯ ಕೆಲಸಗಾರನ ಸಹಾಯ ಪಡೆದರು. ಜೇನುತುಪ್ಪ ತೆಗೆಯುವ ಯಂತ್ರದ ಮೂಲ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದರು. ತಿರುಗುವ ಡ್ರಮ್‌ಗೆ ಮರದ ಎಲೆಗಳನ್ನು ಹೊಂದಿಸುವ ಬದಲು ಅದನ್ನು ಡ್ರಮ್ ಸುತ್ತುವುದಕ್ಕೆ ಬಳಸುವ ಶಾಫ್ಟ್ನೊಂದಿಗೆ ಅಳವಡಿಸಿದರು. ಸಾಮಾನ್ಯವಾಗಿ ಜೇನುತುಪ್ಪ ತೆಗೆಯುವ ಯಂತ್ರದಲ್ಲಿ ಡ್ರಮ್‌ಗಳನ್ನು ನೇರವಾಗಿ ಇಟ್ಟಿರುತ್ತಾರೆ. ಆದರೆ ಥಾಮಸ್ ಅದನ್ನು ಸಮತಟ್ಟಾಗಿ ಇಟ್ಟರು. ಡ್ರಮ್‌ನ ಮೇಲ್ಬದಿಯಲ್ಲಿ ಒಂದು ತಂತಿ ಬಲೆಯನ್ನು ಹೊದಿಸಲಾಯಿತು. ಈ ಬಗೆಯ ವಿನ್ಯಾಸದಿಂದ ಥಾಮಸ್ ೧೦೦ ಕೆಜಿಯಷ್ಟು ಏಲಕ್ಕಿಯನ್ನು ಸಂಸ್ಕರಿಸಲು ಸಾಧ್ಯವಾಯಿತು.
ಏಲಕ್ಕಿ ಹೊಳಪು ಯಂತ್ರ ಬೆಳೆದ ಬಗೆ
| ೧೯೯೨-೯೩ | ಯಂತ್ರದ ಕಲ್ಪನೆ ಮೂಡಿ ಬಂತು, ಜೇನು ಹುಟ್ಟುಗಳನ್ನು ಸಂಸ್ಕರಿಸುವ ಯಂತ್ರವನ್ನು ಆಧರಿಸಿ ಪ್ರಥಮ ಪ್ರಾಯೋಗಿಕ ಯಂತ್ರವನ್ನು ರೂಪಿಸಲಾಯಿತು. ನಂತರ ಸುಧಾರಣೆಯಾಯಿತು. |
| ೧೯೯೪ | ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಲಾಯಿತು, ನಂತರ ರೈತರ ಎದುರು ಪ್ರದರ್ಶಿಸಲಾಯಿತು. ಸಾಂಬರು ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿದರು. ಮಾಡಿದ ಸಾಧನೆಯನ್ನು ಕೊಂಡಾಡಿದರು, ಸ್ಪೈಸ್ ಬೋರ್ಡ್ ಹೊರತರುತ್ತಿರುವ ಸ್ಪೈಸ್ ಇಂಡಿಯಾ ಮ್ಯಾಗಜೀನ್‌ನಲ್ಲಿ ಪ್ರಕಟವಾಯಿತು. |
| ೧೯೯೫ | ಮತ್ತೆ ಕೆಲವು ಏಲಕ್ಕಿ ಹೊಳಪು ಯಂತ್ರಗಳನ್ನು ಉತ್ಪಾದಿಸಲಾಯಿತು. ಸ್ಪೈಸ್ ಬೋರ್ಡ್ ಆಯೋಜಿಸಿದ್ದ ತರಬೇತಿ ಶಿಬಿರಗಳಲ್ಲಿ ಹೊಳಪು ಯಂತ್ರಗಳನ್ನು ಪ್ರದರ್ಶಿಸಲಾಯಿತು. ತಮ್ಮದೇ ಆದ ಕಾರ್ಯಾಗಾರವನ್ನು ಸ್ಥಾಪಿಸಿದರು. ಸಾಕಷ್ಟು ರೈತರು ಸ್ಥಳಕ್ಕೆ ಭೇಟಿಕೊಟ್ಟರು. ಅವರ ಸಾಧನೆಗೆ ಮಂಡಳಿಯಿAದ ಪ್ರಶಸ್ತಿಯೂ ಲಭಿಸಿತು. ಮಾಧ್ಯಮಗಳಲ್ಲಿ ಉತ್ತಮ ಪ್ರಚಾರವೂ ಲಭಿಸಿತು |
| ೧೯೯೫-೯೬ | ವ್ಯಾವಹಾರಿಕ ಯಂತ್ರೋತ್ಪಾದನೆಗೆ ಚಾಲನೆ. ೨೫ಕ್ಕೂ ಹೆಚ್ಚು ಯಂತ್ರಗಳ ಮಾರಾಟ. ಇವರ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ತನ್ನದೇ ಆದ ಕೇಂದ್ರವನ್ನು ತೆರೆದ ಅದರಲ್ಲಿ ಯಂತ್ರ ಉತ್ಪಾದನೆಯಲ್ಲಿ ತೊಡಗಿದ. |
| ೧೯೯೬-೯೭ | ಇಡುಕಿ ಜಿಲ್ಲೆಯಲ್ಲಿ ಸಾಕಷ್ಟು ಉತ್ಪಾದನಾ ಘಟಕಗಳು ಪ್ರಾರಂಭವಾದವು. ತಮ್ಮದೇ ಆದ ಯಂತ್ರವನ್ನು ಉತ್ಪಾದಿಸಲು ಪ್ರಾರಂಭಿಸಿದವು. ಅವರಿಗೆ ಪೈಪೋಟಿ ಕೊಡಲಾಗದೆ ಯಂತ್ರ ಸಂಶೋಧಕ ತನ್ನ ಘಟಕವನ್ನು ಮುಚ್ಚಬೇಕಾಯಿತು. |
| ೧೯೯೬-೯೭ | ಇಡುಕ್ಕಿ, ತಮಿಳುನಾಡು, ಕುಂಭoನ ಸಮೀಪ ಜಿಲ್ಲೆಗಳಲ್ಲಿ ೪೦ಕ್ಕೂ ಹೆಚ್ಚು ಏಲಕ್ಕಿ ಹೊಳಪು ಯಂತ್ರ ನಿರ್ಮಾಣ ಘಟಕಗಳು ಆರಂಭಗೊoಡವು. ಇಡುಕ್ಕಿಗೆ ಸಮೀಪದ ಕೈಗಾರಿಕಾ ಪ್ರದೇಶ ಕುಂಭo ಆಗಿತ್ತು. |
| ೧೯೯೬-೯೮ | ಸಂಶೋಧಕನ ಪಾತ್ರವಿಲ್ಲದೇ ಇತರೆ ಏಲಕ್ಕಿ ಬೆಳೆ ಬೆಳೆಯುವ ಜಿಲ್ಲೆಗಳಿಗೂ ತಂತ್ರಜ್ಞಾನ ಪ್ರಸಾರವಾಗುತ್ತಾ ಹೋಯಿತು. |
| ೧೯೯೮-೨೦೧೦
. |
ಗ್ರಾಹಕರ ಬೇಡಿಕೆಗೆ ತಕ್ಕಂತೆ ಈ ಘಟಕಗಳು ತಮ್ಮ ತಂತ್ರಜ್ಞಾನವನ್ನು ಸುಧಾರಿಸಿಕೊಂಡವು. ಅದರಲ್ಲಿ ಸಂಸ್ಕರಣೆಯ ಸoದರ್ಭದಲ್ಲಿ ಉಂಟಾಗುವ ಧೂಳನ್ನು ಹೊರತೆಗೆಯಲು ಎಕ್ಸಾಸ್ಟ್ ಫ್ಯಾನ್, ಮರದ ಬ್ಲೇಡ್‌ಗಳಿಗೆ ರಬ್ಬರ್ ಹೊದಿಕೆ ಅದರಿಂದಾಗಿ ಸರಾಗ ಸುತ್ತುವಿಕೆ, ಗುಣಮಟ್ಟಕ್ಕೆ ತಕ್ಕಂತೆ ಏಲಕ್ಕಿಯನ್ನು ವರ್ಗೀಕರಿಸಲು ಅನುವಾಗುವಂತೆ ಜರಡಿಯ ಅಳವಡಿಕೆ, ಧೂಳು ಸಂಗ್ರಹಣೆಗೆ ಟ್ರೇ ಜೋಡಣೆ ಮತ್ತಿತರ ಹೆಚ್ಚುವರಿ ಸಲಕರಣೆಗಳನ್ನು ಅಳವಡಿಸಲಾಯಿತು. ಅದರೊಂದಿಗೆ ಯಂತ್ರದ ಭಾಗವನ್ನು ಸುಲಭವಾಗಿ ಬದಲಾಯಿಸುವ ಸೌಲಭ್ಯವೂ ಲಭಿಸಿತು. ಒಟ್ಟಾರೆ ಯಂತ್ರದ ಹೊರನೋಟದಲ್ಲಿ ಸಾಕಷ್ಟು ಸುಧಾರಣೆಯಾದವು. ಆದರೆ ಯಂತ್ರದ ಮೂಲ ಕಾರ್ಯಾಚರಣೆಯ ತಂತ್ರಜ್ಞಾನದಲ್ಲಿ ಮಾತ್ರ ಯಾವುದೇ ಪರಿವರ್ತನೆಯಾಗಿಲ್ಲ |
ಮೊದಲಿಗೆ ಈ ಯಂತ್ರವನ್ನು ಕೈಯಿಂದಲೇ ತಿರುಗಿಸಲಾಗುತಿತ್ತು. ನಂತರದ ದಿನಗಳಲ್ಲಿ ಅದಕ್ಕೆ ೦.೫ ಅಶ್ವಶಕ್ತಿಯ ಮೋಟಾರನ್ನು ಅಳವಡಿಸಲಾಯಿತು. ೧೯೯೪ರಲ್ಲಿ ಥಾಮಸ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಏಲಕ್ಕಿ ಪಾಲಿಷ್ ಮಾಡುವ ಪ್ರಾಯೋಗಿಕ ಯಂತ್ರವನ್ನು ನಿರ್ಮಿಸಿದರು. ಸಾಮಾನ್ಯವಾಗಿ ೧೦ ರಿಂದ ೧೫ ಕೆ.ಜಿ.ಯಷ್ಟು ಏಲಕ್ಕಿಗೆ ಹೊಳಪು (ಪಾಲಿಶ್) ಕೊಡಲು ಅರ್ಧ ಗಂಟೆ ತಗಲುತ್ತದೆ ಮತ್ತು ಈ ಕಾರ್ಯಕ್ಕೆಂದೇ ಮೂವರು ಕೆಲಸಗಾರರನ್ನು ನಿಯೋಜಿಸಬೇಕಾಗುತ್ತದೆ. ಆದರೆ, ಯಂತ್ರದ ಸಹಾಯದಿಂದ ಅಷ್ಟೇ ಪ್ರಮಾಣದ ಏಲಕ್ಕಿಯನ್ನು ಐದು ನಿಮಿಷಗಳಲ್ಲೇ ಪಾಲಿಶ್ ಮಾಡಬಹುದಾಗಿದೆ.
ಜಗದಗಲ ಜನಪ್ರಿಯ
ಥಾಮಸ್ ತನ್ನ ಸಂಶೋಧನೆಯ ಫಲಶ್ರುತಿ ಬೇರೆ ರೈತಾಪಿ ವರ್ಗಕ್ಕೂ ತಲುಪಬೇಕೆಂದು ಚಿಂತಿಸಿದರು. ಇತರೆ ರೈತ ಸಮುದಾಯವನ್ನು ಆಹ್ವಾನಿಸಿ ಅವರ ಮುಂದೆ ತಮ್ಮ ಯಂತ್ರ ಕೆಲಸ ಮಾಡುವ ಬಗೆಯನ್ನು ಪ್ರದರ್ಶಿಸಿದರು. ಇದರಲ್ಲಿ ಪಾಲ್ಗೊಂಡವರು ಪ್ರಭಾವಿತರಾಗಿ, ತಮಗೂ ಅಂತಹದ್ದೊAದು ಯಂತ್ರವನ್ನು ತಯಾರಿಸಿಕೊಡುವoತೆ ಆಗ್ರಹಿಸಿದರು. ಇದಾದ ಸ್ವಲ್ಪ ದಿನದಲ್ಲೇ ಥಾಮಸ್ ಮಸಾಲೆ ಪದಾರ್ಥಗಳ ಮಂಡಳಿ ಕಛೇರಿಗೆ ಭೇಟಿಕೊಟ್ಟರು. ಅಲ್ಲಿನ ಕ್ಷೇತ್ರಾಧಿಕಾರಿಗಳಿಗೆ ತಮ್ಮ ಸಂಶೋಧನೆಯ ಬಗ್ಗೆ ವಿವರಿಸಿ ಅದನ್ನು ಒಮ್ಮೆ ನೋಡಬೇಕೆಂದು ಆಗ್ರಹಿಸಿದರು. ಮಸಾಲೆ ಪದಾರ್ಥಗಳ ಮಂಡಳಿಯ ಅಧಿಕಾರಿಗಳು ಥಾಮಸ್‌ರ ಸಂಶೋಧನೆಯನ್ನು ಮನಸಾರೆ ಮೆಚ್ಚಿಕೊಂಡರು. ಆ ಯಂತ್ರಕ್ಕೊAದು ಹೊಸ ಹೆಸರನ್ನು ಇಟ್ಟರು. ಅದೇ ಕರ‍್ಪಾಲ್ (ಏಲಕ್ಕಿ ಹೊಳಪು ಯಂತ್ರ).
ಹೀಗೆ ಥಾಮಸ್ ಸಂಶೋಧಿಸಿದ ಕರ‍್ಪಾಲ್ ಯಂತ್ರವನ್ನು ಜನಪ್ರಿಯಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆದವು. ಸಾಂಬರು ಮoಡಳಿ ಥಾಮಸ್‌ರ ಸಂಶೋಧನೆಯ ವಿವರಗಳನ್ನು ಮಂಡಳಿಯ ಜನಪ್ರಿಯ ವೃತ್ತಪತ್ರಿಕೆ ‘ಸ್ಪೈಸ್ ಇಂಡಿಯಾ’ದಲ್ಲಿ ಪ್ರಕಟಿಸಲಾಯಿತು. ಅದರೊಂದಿಗೇ ಸ್ಥಳೀಯ ಮಾಧ್ಯಮಗಳೂ ಯಂತ್ರಕ್ಕೆ ಸಾಕಷ್ಟು
ಪ್ರಚಾರ ಕೊಟ್ಟವು. ಯಂತ್ರಕ್ಕೆ ಬಂದ ಭಾರೀ ಬೇಡಿಕೆ ಕಂಡು ಥಾಮಸ್ ನಿಬ್ಬೆರಗಾದರು. ಹೀಗೆ ಯಂತ್ರದ ಸುದ್ದಿ ಕೃಷಿಕ ಸಮುದಾಯದಲ್ಲಿ ಬಾಯಿಂದ ಬಾಯಿಗೆ ಹರಡುತ್ತಾ ಹೋಯಿತು. ಪ್ರತಿ ವಾರ ಕನಿಷ್ಟ ಪಕ್ಷ ನೂರು ರೈತರಾದರೂ ಥಾಮಸ್‌ರ ತೋಟಕ್ಕೆ ಭೇಟಿ ಕೊಡುತ್ತಿದ್ದರು. ಮಸಾ ಪದಾರ್ಥ ಮಂಡಳಿ ಗ್ರಾಮಗಳಲ್ಲಿ ಸಾಕಷ್ಟು ಪ್ರಾಯೋಗಿಕ ತರಬೇತಿ ಶಿಬಿರಗಳನ್ನು ಆಯೋಜಿಸಿತು. ಈ ಶಿಬಿರಗಳಲ್ಲಿ ಥಾಮಸ್ ಯಂತ್ರ ಕಾರ್ಯನಿರ್ವಹಿಸುವ ಬಗ್ಗೆ ವಿವರಣೆ ನೀಡುತ್ತಿದ್ದರು. ಹೀಗೆ ಸುಮಾರು ೫೦ಕ್ಕೂ ಹೆಚ್ಚು ವಿಚಾರಗೋಷ್ಠಿ ಮತ್ತು ತರಬೇತಿ ಶಿಬಿರಗಳನ್ನು ರೈತಾಪಿ ವರ್ಗದವರಿಗೆಂದೇ ನಡೆಸಲಾಯಿತು. ಹೀಗೆ ಏಲಕ್ಕಿ ಬೆಳೆಗಾರರ ಸಮುದಾಯದಲ್ಲಿ ಯಂತ್ರದ ಜನಪ್ರಿಯತೆ ಹೆಚ್ಚುತ್ತಾ ಹೋಯಿತು. ಸಾಂಬರು ಮಂಡಳಿ ಥಾಮಸ್‌ರ ಪ್ರತಿಭೆಯನ್ನು ಗಮನಿಸಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅದರಿಂದಾಗಿ ಥಾಮಸ್‌ರ ಜನಪ್ರಿಯತೆ ಉತ್ತುಂಗಕ್ಕೆ ಏರಿತು. ಅದರಲ್ಲೂ ಮಸಾಲೆ ಪದಾರ್ಥಗಳ ಮಂಡಳಿಯ ಅಧಿಕಾರಿಗಳಂತೂ ಥಾಮಸ್‌ರ ಸಾಧನೆಯನ್ನು ಕೊಂಡಾಡಿದರು.
ಅನoತರ ಥಾಮಸ್ ಸ್ಥಳೀಯ ಯಂತ್ರಕರ್ಮಿಗಳ ಜೊತೆಗೂಡಿ ತಮ್ಮದೇ ಆದ ಯಂತ್ರ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು. ಮೊದಲಿಗೆ ೨೫ ಯಂತ್ರಗಳನ್ನು ತಯಾರಿಸಲಾಯಿತು. ಅದನ್ನು ತಲಾ ೫,೨೦೦ರೂಗಳಂತೆ ಮಾರಾಟ ಮಾಡಿದರು. ಇದಾದ ಕೆಲ ದಿನಗಳಲ್ಲಿ ಅವರ ಪ್ರದೇಶದ ಎಲ್ಲಾ ವರ್ಕ್ಶಾಪ್‌ಗಳಲ್ಲಿ ಯಂತ್ರ ಉತ್ಪಾದನೆ ಶುರುವಾಯಿತು. ಈ ವರ್ಕ್ಶಾಪ್‌ಗಳು ಆಧುನಿಕವಾಗಿದ್ದು, ಸುಸಜ್ಜಿತವಾಗಿದ್ದುದರಿಂದ ಅವುಗಳೊಂದಿಗೆ ಸ್ಪರ್ಧೆ ನಡೆಸಲು ಥಾಮಸ್‌ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಥಾಮಸ್ ಯಂತ್ರ ತಯಾರಿಕೆಯನ್ನು ಸ್ಥಗಿತಗೊಳಿಸಿದರು. ಬದಲಿಗೆ ಇತರೆ ವರ್ಕ್ಶಾಪ್‌ಗಳಲ್ಲಿ ಯಂತ್ರ ತಯಾರಿಕೆಗೆ ಪ್ರೋತ್ಸಾಹ ನೀಡಿದರು. ಇದಾದ ೨-೩ ವರ್ಷಗಳಲ್ಲಿ ಇಡುಕ್ಕಿಯಲ್ಲಿ ತಮ್ಮದೇ ಆದ ಏಲಕ್ಕಿ ಹೊಳಪು ಯಂತ್ರ ತಯಾರಿಸುವ ಸಾಕಷ್ಟು ಘಟಕಗಳು ಹುಟ್ಟಿಕೊಂಡವು. ಸುಮಾರು ಐದು ವರ್ಷದೊಳಗೆ, ಏಲಕ್ಕಿ ಹೊಳಪು
ಯಂತ್ರ ಸಾಕಷ್ಟು ಜನಪ್ರಿಯವಾಯಿತು.
ಸುಮಾರು ೧೦ ರಿಂದ ೧೩ ವರ್ಷದೊಳಗೆ (ಅಂದರೆ ೧೯೯೫ ರಿಂದ ೨೦೦೮ರೊಳಗೆ) ಯಂತ್ರದ ವಿನ್ಯಾಸ ಮತ್ತು ಕಾರ್ಯಾಚರಣೆಯಲ್ಲಿ ಸಾಕಷ್ಟು ಸುಧಾರಣೀಯ ಅಂಶಗಳನ್ನು ಸ್ಥಳೀಯ ಯಂತ್ರ ಮತ್ತು ಕಾರ್ಯಾಗಾರಗಳು ಅಳವಡಿಸಿವೆ. ಆದರೆ ಯಂತ್ರದ ಮೂಲ ಸಿದ್ಧಾಂತ ಮತ್ತು ತಂತ್ರಾoಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಏಲಕ್ಕಿ ಸಂಸ್ಕರಣೆಯಲ್ಲಿ ಉಂಟಾಗುವ ಧೂಳನ್ನು ಹೊರತೆಗೆಯಲು ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗಿದೆ. ಮರದ ಬ್ಲೇಡ್‌ಗಳಿಗೆ ರಬ್ಬರ್ ಲೈನಿಂಗ್ ಕೊಡಲಾಗಿದ್ದು ಇದರಿಂದಾಗಿ ಸುತ್ತುವಿಕೆ ಮತ್ತು ಏಲಕ್ಕಿಯನ್ನು ಗುಣಮಟ್ಟದ ಆಧಾರದಲ್ಲಿ ವರ್ಗೀಕರಿಸಲು ಸಾಧ್ಯವಾಗಿದೆ. ಜೊತೆಗೆ ಟ್ರೇಯನ್ನು ಅಳವಡಿಸಲಾಗಿದ್ದು, ಇದರಲ್ಲಿ ಧೂಳನ್ನು ಸಂಗ್ರಹಿಸಬಹುದಾಗಿದೆ. ಯಂತ್ರದ ಬಿಡಿಭಾಗಗಳನ್ನು ಬದಲಾಯಿಸುವಂತೆ ಮಾಡಲಾಗಿದೆ. ಒಟ್ಟಾರೆ ಯಂತ್ರದ ಬಾಹ್ಯನೋಟದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ.
ಇoದು, ಏಲಕ್ಕಿ ಪರಿಷ್ಕರಣಾ ಕೇಂದ್ರಗಳಲ್ಲಿ ಈ ಸುಧಾರಿತ ಮಾದರಿ ಯಂತ್ರವನ್ನು ಬಳಸಲಾಗುತ್ತಿದೆ. ಈ ವಿಚಾರದಲ್ಲಿ ಥಾಮಸ್ ಹೆಮ್ಮೆ ಪಡುತ್ತಾರೆ. ಥಾಮಸ್ ತಮ್ಮ ಸಂಶೋಧನೆಗೆ ಯಾವುದೇ ಪೇಟೆಂಟ್ (ಹಕ್ಕುಪತ್ರ) ಪಡೆಯದಿದ್ದರೂ ಅವರ ಸಂಶೋಧನೆಯ ಫಲವಾಗಿ ಸಾಕಷ್ಟು ಜನರಿಗೆ ಲಾಭವಾಗಿದೆ. ಏಲಕ್ಕಿ ಬೆಳೆಗಾರರ ಸಮಸ್ಯೆಗೆ
ಸಮರ್ಥವಾಗಿ ಸ್ಪಂದಿಸಿದ ಸಂತೃಪ್ತಿಯನ್ನು ಅವರು ಹೊಂದಿದ್ದಾರೆ. ತಮ್ಮ ಪುಟ್ಟ ಸಂಶೋಧನೆಯನ್ನು ಸಾಂಬರು ಮoಡಳಿ ಮಾನ್ಯ ಮಾಡಿರುವುದು ಮತ್ತು ತಮ್ಮ ಪ್ರಾಂತ್ಯದಲ್ಲಿ ರೈತಾಪಿ ಸಮುದಾಯದವರು ಯಂತ್ರವನ್ನು ಬಳಸುತ್ತಿರುವುದನ್ನು ಕಂಡು ಅವರು ಸಂತೋಷ ವ್ಯಕ್ತಪಡಿಸುತ್ತಾರೆ.
T J James
Director, Innoaction India
Innoaction India, Aaz complex, Calvary Junction
Poothole, Thrissur-680004, Kerala
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೫, ಸಂಚಿಕೆ ೪, ಡಿಸೆಂಬರ್ ೨೦೧೩



