ಫಾರುಕ್ ರಿಯಾಜ್, ಅನಿತಾ ಸೂದ್, ಸರೋಜ್ ಭಾಯನಾ ಮತ್ತು ಅಲ್ಪನಾ ಶರ್ಮ
ಬರಡಾಗಿದ್ದ ಕಲ್ಪವಲ್ಲಿ ಅರಣ್ಯ ಪ್ರದೇಶವನ್ನು ಪುನರ್ನಿರ್ಮಾಣ ಮಾಡಿ, ಕಾಯಕಲ್ಪ ನೀಡಿದ್ದೇನೋ ಸರಿಯೇ. ಆದರೆ ಹಸಿರು ಶಕ್ತಿಯ ನೆವದಲ್ಲಿ ಅದೀಗ ಮತ್ತೆ ಶಿಥಿಲವಾಗಿದೆ. ಗಾಳಿ ಗಿರಣಿಗಳಿಂದ ಸ್ವಚ್ಛ ಶಕ್ತಿ ಉತ್ಪಾದನೆಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವುಗಳಿಗೆ ತೆರುತ್ತಿರುವ ಬೆಲೆಯಾದರೂ ಎಷ್ಟು ಗೊತ್ತಿದೆಯೆ? ಈ ಪ್ರದೇಶದಲ್ಲಿ
ಗಾಳಿ ಗಿರಣಿ ಸ್ಥಾಪನೆ ಬೇರೆಯದೇ ಕತೆಯನ್ನು ನಮ್ಮೆದುರು ಬಿಚ್ಚಿಡುತ್ತದೆ
ಕಲ್ಪವಲ್ಲಿ ಅರಣ್ಯಪ್ರದೇಶವು ಅನಂತಪುರ ಜಿಲ್ಲೆಯ ರೊದ್ದಂ ಮಂಡಲದ ವ್ಯಾಪ್ತಿಗೆ ಸೇರುತ್ತದೆ. ಇದು ಹುಲ್ಲುಗಾವಲಿನ ಪ್ರದೇಶವಾಗಿದ್ದು ದಟ್ಟ ಕಾಡನ್ನು ಹೊಂದಿದೆ. ಕಲ್ಪವಲ್ಲಿ ಅರಣ್ಯದ ಒಟ್ಟು ವಿಸ್ತೀರ್ಣ ೭,೫೦೦ ಎಕರೆಗಳು. ಉರುಡಾಳ ಕೊಂಡ ಮತ್ತು ತುಮ್ಮಾ ಕೊಂಡ ಗ್ರಾಮಕ್ಕೆ ಹೊಂದಿಕೊoಡAತಿದೆ. ಅರಣ್ಯ ಮತ್ತು ಸಮೀಪದ ಪ್ರದೇಶಗಳಲ್ಲಿ ತಾಳೆಮರಗಳ ಸಂಖ್ಯೆ ಹೆಚ್ಚಿದೆ. ತಾಳೆ ಮರದ ಹಣ್ಣುಗಳ ಮಾರಾಟವೇ ಇಲ್ಲಿನ ಸಾಕಷ್ಟು ಕುಟುಂಬಗಳ ಜೀವನಾಧಾರ.
ದಟ್ಟಕಾಡು ಮತ್ತು ಹುಲ್ಲುಗಾವಲಿನಿಂದ ಕೂಡಿರುವ ಕಲ್ಪವಲ್ಲಿ ಅರಣ್ಯ ಪ್ರಾಕೃತಿಕ ಸಮತೋಲನ ಮತ್ತು ಸ್ಥಳೀಯರ ಜೀವನಕ್ಕೆ ಆಧಾರವಾದ ವ್ಯವಸ್ಥೆಗಳನ್ನು ಒಳಗೊಂಡಿದೆ. ಗ್ರಾಮಸ್ಥರು ಕಾಡಿನಲ್ಲಿ ಹುಲ್ಲನ್ನು ಕೊಯ್ದು, ಅದರಿಂದ ಪೊರಕೆಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಕೆರೆಕಟ್ಟೆಗಳ ವ್ಯವಸ್ಥೆಯು ಈ ಪ್ರದೇಶದ ಇನ್ನೊಂದು ಮುಖ್ಯ ಅಂಶ. ಇದು ನೀರಿಗೆ ಸಂಬoಧಿಸಿದ ಪ್ರಮುಖ ಜೀವಿಪರಿಸ್ಥಿತಿ ಸೇವೆಗಳನ್ನು ನೀಡುತ್ತಿವೆ. ಮುಸ್ತಿಕೋವೆಲಾದಿಂದ ಆರಂಭಣವಾಗುವ ಕೆರೆಕಟ್ಟೆಗಳ ಸರಣಿಯ ಜೀವನಾಧಾರವಾಗಿ ಕಲ್ಪವಲ್ಲಿ ಕಾಡು ಹಬ್ಬಿದೆ. ಈ ಕೆರೆಕಟ್ಟೆಗಳ ನೀರನ್ನು ರೈತರು ಕೃಷಿ ಚಟುವಟಿಕೆಗಳಿಗೆ, ನೀರಾವರಿಗೆ, ಕುಡಿಯಲು ಹಾಗೂ ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತಾರೆ. ಕಲ್ಪವಲ್ಲಿ ಕಣಿವೆಯಲ್ಲಿ ಸಾವಿರಾರು ಖರ್ಜೂರದ ಮರಗಳಿವೆ. ಕಣಿವೆಯಲ್ಲಿರುವ ಸಣ್ಣ ತೊರೆಗಳು ಇವುಗಳಿಗೆ ಮುಖ್ಯ ಆಧಾರವಾಗಿವೆ.
ಕಲ್ಪವಲ್ಲಿಯಲ್ಲಿರುವ ಸಣ್ಣ ತೊರೆಗಳು ಆ ಪ್ರಾಂತ್ಯದ ಮುಖ್ಯ ಜಲ ಮೂಲಗಳಾಗಿದ್ದು, ಕೇವಲ ಗ್ರಾಮೀಣ ಭಾಗದ ಜನರಿಗೆ ಮಾತ್ರವಲ್ಲ; ಹಲವು ವಿನಾಶದಂಚಿನ ಪಕ್ಷಿಗಳೂ ಸೇರಿದಂತೆ ವನ್ಯಮೃಗಗಳಿಗೆ ಜೀವನಾಡಿಯಾಗಿವೆ.
ಸಮುದಾಯದಿಂದ ಪರಿಸರ ರಕ್ಷಣೆ
ಕಳೆದ ಕೆಲ ವರ್ಷಗಳಿಂದ ಈ ಅರಣ್ಯಪ್ರದೇಶ ನಾಶವಾಗುತ್ತಿದೆ. ಕಾಡಿನ ಪರಿಸರವನ್ನು ಉಳಿಸುವ ಸಲುವಾಗಿ ಅರಣ್ಯ ಪುನರ್ನಿರ್ಮಾಣ ಮಾಡುವ, ಹಾಗೂ ಆ ಮೂಲಕ ಜೀವನಾಧಾರ ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ಸೂಕ್ತ ವ್ಯವಸ್ಥೆಯನ್ನು ರೂಪಿಸಲು ಟಿಂಬಕ್ಟು ಕಲೆಕ್ಟಿವ್ ಎಂಬ ಎನ್‌ಜಿಒ ಸಂಸ್ಥೆಯು ಕಾರ್ಯನಿರತವಾಗಿದೆ.
ಈ ಸಂಸ್ಥೆಯು ೧೯೯೨ರಲ್ಲಿ ಮುಸ್ತಿಕೊವೆಲಾ ಗ್ರಾಮದಲ್ಲಿ ನೈಸರ್ಗಿಕ ಮರುಬೆಳವಣಿಗೆಯ ಮೂಲಕ ಪರಿಸರ ಮರುಸ್ಥಾಪಿಸುವ ಕಾರ್ಯಕ್ಕೆ ಕೈಹಾಕಿತು. ಕಂದಾಯ ವ್ಯಾಪ್ತಿಗೊಳಪಡದ ೧೨೫ ಎಕರಿಗಿಂತಲೂ ಹೆಚ್ಚು ವಿಸ್ತಾರದ, ಸುತ್ತಲೂ ಗುಡ್ಡಗಳಿಂದ ಸುತ್ತುವರಿಯಲ್ಪಟ್ಟ ಭೂಮಿಯನ್ನು ಸಂರಕ್ಷಿಸುವ ಕುರಿತು ಗ್ರಾಮಸ್ಥರಲ್ಲಿ ಅರಿವು
ಮೂಡಿಸಲು ಒಂದು ವರ್ಷವೇ ಬೇಕಾಯ್ತು. ಆದರೆ ಅನಂತರದಲ್ಲಿ ಮಾತ್ರ ಪರಿಣಾಮವು ಅತಿ ಶೀಘ್ರದಲ್ಲೇ ಗೋಚರಿಸಿತು. ವರ್ಷಗಳು ಕಳೆದಂತೆ ಮತ್ತೆ ೭ ಗ್ರಾಮಗಳು ಇದರೊಂದಿಗೆ ಕೈಜೋಡಿಸಿದವು. ಇಂದು ಸುಮಾರು ೭,೫೦೦ ಎಕರೆಗಳಿಗೂ ಹೆಚ್ಚು ಸುತ್ತಮುತ್ತಲಿನ ನಿರುಪಯುಕ್ತ ಪ್ರದೇಶವು ರಕ್ಷಿತವಾಗಿ ಅವನ್ನು ಅರಣ್ಯವಾಗಿ
ಮರುಸ್ಥಾಪನೆ ಮಾಡಲಾಗುತ್ತಿದೆ.
ಭಾಗಿತ್ವದ ವಿಧಾನವು ಈ ಸಮುದಾಯಗಳು ತಾವೇ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಸಹಕರಿಸಿದವು. ಪ್ರತಿ ಹಳ್ಳಿಯೂ ಅರಣ್ಯ ಕಾವಲು ಸಮಿತಿ (ವನ ಸಂರಕ್ಷಣಾ ಸಮಿತಿ -ವಿಎಸ್‌ಸಿ)ಯನ್ನು ಹೊಂದಿದೆ. ಈ ನಿಟ್ಟಿನ ಎಲ್ಲಾ ಚಟುವಟಿಕೆಗಳ ಪರಿಶೀಲನೆ ಹಾಗೂ ಅನುಷ್ಠಾನದ ಉಸ್ತುವಾರಿಯನ್ನು ವಿಎಸ್‌ಸಿ ನೋಡಿಕೊಳ್ಳುತ್ತದೆ. ಅದಕ್ಕಾಗಿ ಒಂದು ನಿರೀಕ್ಷಣಾ ಪಡೆಯೂ ಇರುತ್ತದೆ. ಈ ಕಾವಲು ಪಡೆಯವರು ಪ್ರತಿನಿತ್ಯ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಾರೆ. ಎಲ್ಲಿಯಾದರೂ ಬೆಂಕಿಯ ಅವಘಡ ಸಂಭವಿಸಿದರೆ, ಕಾಡುಗಳ್ಳರು ಅಥವಾ ಮರಕಟುಕರು ಒಳನುಗ್ಗಿದರೆ ಅವರು ವಿಎಸ್‌ಸಿ ಗೆ ಸುಳಿವು ನೀಡುತ್ತಾರೆ. ವಿಎಸ್‌ಸಿಯು ಆ ಕೂಡಲೇ ಕಾರ್ಯಪ್ರವೃತ್ತವಾಗಿ ಕಾಡಿನ ರಕ್ಷಣೆಗೆ ಮುಂದಾಗುತ್ತದೆ. ಮರ ಕಡಿಯುವವರಿಗೆ ಭಾರೀ ದಂಡವನ್ನು ವಿಧಿಸುತ್ತದೆ. ಹೀಗಾಗಿ ಸ್ಥಳೀರ‍್ಯಾರೂ ಮರಕಡಿಯುವ ಕೆಲಸಕ್ಕೆ ಕೈ ಹಾಕಿಲ್ಲ.
ಪ್ರತಿಯೊಂದು ವಿಎಸ್‌ಸಿಯಲ್ಲೂ ಬೆಂಕಿಯನ್ನು ನಿಯಂತ್ರಿಸುವ ಸ್ವಯoಸೇವಕರಿದ್ದಾರೆ. ಈ ವ್ಯವಸ್ಥೆಯಿಂದ ಪ್ರತಿ ವರ್ಷ ಸರಿಸುಮಾರು ೬೦ ರಿಂದ ೭೫ ಕಿ.ಮೀ.ನಷ್ಟು ಕಾಡ್ಗಿಚ್ಚು ಹಬ್ಬುವಿಕೆಯನ್ನು ತಪ್ಪಿಸಲಾಗಿದೆ.
ವಿಎಸ್‌ಸಿಯ ಸದಸ್ಯರು, ಕಾವಲು ಪಡೆಯವರು ಹಾಗೂ ಕಲೆಕ್ಟಿವ್‌ನ ಕಾರ್ಯಕರ್ತರು ೨೫ ಕಿಲೋಮೀಟರ್‌ಗಳಷ್ಟು ದೂರದಿಂದ ಕುರಿ ಮೇಯಿಸಲು ಬರುವ ಕುರಿಗಾಹಿಗಳು ಬೆಂಕಿ ಹಾಕದoತೆ ಮನವೊಲಿಸಲು ಸಾಕಷ್ಟು ಸಮಯ ವ್ಯಯಿಸುತ್ತಾರೆ. ಈ ವಿಎಸ್‌ಸಿಗಳು ೨೦೦೨ರಲ್ಲಿ ಕಲ್ಪವಲ್ಲಿ ಟ್ರೀ ಗ್ರೋರ‍್ಸ್ ಕೋ ಆಫರೇಟಿವ್ ಆಗಿ ಪರಿವರ್ತಿತವಾಯಿತು. ಅನಂತರ ೨೦೦೮ರಲ್ಲಿ ಎಪಿಎಮ್‌ಎಸಿಎಸ್ ಕಾಯ್ದೆಯಡಿಯಲ್ಲಿ ನೋಂದಣಿಗೊoಡಿತು. ಕಲ್ಪವಲ್ಲಿಯ ಸಂಘಟನೆಯ ಮೂಲಕ ಗ್ರಾಮಸ್ಥರು ಬರಡಾದ ಭೂಮಿಯನ್ನು ಮತ್ತೆ ಹಸಿರಾಗಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪರಿಸರದಿಂದ ಸಾಕಷ್ಟು ಲಾಭವನ್ನೂ ಪಡೆದಿದ್ದಾರೆ.
ಕಲೆಕ್ಟಿವ್ ಸಂಸ್ಥೆಯು ಈ ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯಾರಂಭ ಮಾಡಿದಾಗ ಬರಡಾಗಿದ್ದ ನೆಲವು ಕ್ರಮೇಣ ಬದಲಾಗತೊಡಗಿತು. ಅಳಿದುಳಿದ ಮರದ ಬೊಡ್ಡೆಗಳು ಟಿಸಿಲೊಡೆಯತೊಡಗಿದವು. ಹುಲ್ಲುಬೀಜಗಳು ಮೊಳೆತು ಹಸಿರು ನಳನಳಿಸತೊಡಗಿತು. ಒಣಗಿದ ಮರಗಳು ಕ್ರಮೇಣ ತಲೆಯೆತ್ತಲಾರಂಭಿಸಿ, ಹಕ್ಕಿಗಳು ಮರಳಿಬಂದವು. ಮಣ್ಣಿನ ಗುಣಮಟ್ಟ ಉತ್ತಮಗೊಂಡಿದ್ದರ ಪರಿಣಾಮವಾಗಿ ವಿವಿಧ ತಳಿಯ ಹುಲ್ಲುಗಳು ಮರಳಿ ಚಿಗಿತುಕೊಂಡವು. ಮರಗಳನ್ನು ನೆಡುವ ಹವ್ಯಾಸವನ್ನು ಅಭಿವೃದ್ಧಿಪಡಿಸಲಾಯ್ತು. ಈ ಪದ್ಧತಿಯು ಕೊಳಗಳ ಮರುಪೂರಣಕ್ಕೆ ಸಹಕಾರಿಯಾಗಿದ್ದಲ್ಲದೆ ಅಂತರ್ಜಲಮಟ್ಟ ಹೆಚ್ಚಿಸಲೂ ಪೂರಕವಾಯ್ತು. ಕಲ್ಪವಲ್ಲಿಯ ಮುಳ್ಳುಕಾಡುಗಳ
ಪುನಶ್ಚೇತನದ ಸಂದರ್ಭದಲ್ಲಿ ಕೆರೆಕಟ್ಟೆಗಳ ಪುನಶ್ಚೇತನ ಕಾರ್ಯವು ಮಹತ್ವದ್ದಾಗಿ ಪರಿಣಮಿಸಿತು.
ಕಲ್ಪವಲ್ಲಿ ಸಮುದಾಯವು ನಿರ್ವಹಿಸುತ್ತಿರುವ ಈ ಜೈವಿಕ ಮೀಸಲು ಪ್ರದೇಶವು ಚೆನ್ನೆಕೋತಪಳ್ಳಿ ಮತ್ತು ರೊದ್ದಮ್ ಮಂಡಲಗಳ ಏಳು ಹಳ್ಳಿಗಳಿಗೆ ಮುಖ್ಯವಾದ ಮೇಯುವ ತಾಣ, ಜಲಾನಯನ ಪ್ರದೇಶ, ಸೌದೆಯೇತರ ಅರಣ್ಯ ಉತ್ಪನ್ನದ ಮೂಲವಾಗಿದೆ.ಅರಣ್ಯವಾಗಿ ವಿಸ್ತಾರವಾಗಿ ಹರಡಿಕೊಂಡ ಈ ಪ್ರದೇಶವು ವನ್ಯಜೀವಿಗಳ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿತು. ಈ ಅರಣ್ಯಪ್ರದೇಶದಲ್ಲಿ ಮಿಶ್ರಾಹಾರಿಗಳಾದ ತೋಳಗಳು ಹಾಗೂ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು, ಈ ಪ್ರದೇಶವು ಕೇವಲ ಸಂರಕ್ಷಿತಾರಣ್ಯವಲ್ಲ, ಬದಲಿಗೆ ಜೀವವೈವಿಧ್ಯವನ್ನು ಕಾಯ್ದಿಟ್ಟ ಪ್ರದೇಶವೂ ಆಗಿದೆ ಎಂಬುದನ್ನು ತೋರಿಸುತ್ತದೆ.
ಇಲ್ಲಿನ ಸಮುದಾಯಗಳಿಗೆ ಅರಣ್ಯವು ಪ್ರಕೃತಿ ಸಂಪನ್ಮೂಲ ಒದಗಿಸುವ ಸಾಮಾನ್ಯ ಪರಿಸರಕ್ಕಿಂತಲೂ ಅತಿ ಹೆಚ್ಚು ಲಾಭದಾಯಕವಾಗಿ ಪರಿಣಮಿಸಿದೆ. ಕಲ್ಪವಲ್ಲಿಯಲ್ಲಿ
ಗೋಪಾಲಸ್ವಾಮಿ ಗುಡಿ ಎನ್ನುವ ಮಂದಿರವಿದ್ದು, ಅದು ಕಾಡಿನಿಂದ ಸುತ್ತುವರಿಯಲ್ಪಟ್ಟಿದೆ. ಈ ಮಂದಿರವು ಸಮುದಾಯಕ್ಕೆ ಅತ್ಯಂತ ಪೂಜನೀಯ. ಮಂದಿರದ ಸುತ್ತಮುತ್ತಲಿನ ಪ್ರದೇಶವೆಲ್ಲ ಆ ಮಂದಿರದ ದೇವತೆಯದೇ ಸೊತ್ತು ಎಂಬ ಧಾರ್ಮಿಕ ನಂಬಿಕೆಯೂ ಈ ಪ್ರದೇಶದ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಅಭಿವೃದ್ಧಿಯ ಹೆಸರಲ್ಲಿ ಹಸ್ತಕ್ಷೇಪ
೨೦೧೧ರಲ್ಲಿ ಗಾಳಿಗಿರಣಿ ಸ್ಥಾಪನಾ ಯೋಜನೆಯು ಕಲ್ಪವಲ್ಲಿಯ ಪ್ರಶಾಂತ ಪರಿಸರದಲ್ಲಿ ಕೋಲಾಹಲವನ್ನೇ ಎಬ್ಬಿಸಿತು. ಎನೆರ್‌ಕಾನ್ ಎಂಬ ಹೆಸರಿನ ಗಾಳಿಗಿರಣಿ ಕಂಪೆನಿಯು ಕಲ್ಪವಲ್ಲಿ ಕಾಡಿನ ಪ್ರದೇಶದಲ್ಲಿ ಗಾಳಿ ಗಿರಣಿಗಳನ್ನು ಸ್ಥಾಪಿಸಿ ಹಸಿರು ಕಣಿವೆಯನ್ನು ಗಾಳಿ ಪ್ರದೇಶವನ್ನಾಗಿ ಪರಿವರ್ತಿಸಿತು. ಕಂಪೆನಿಯ ಹಿತಾಸಕ್ತಿಗಳು
ಸಮುದಾಯ ಆಧಾರಿತ ವಿಧಾನವನ್ನು ಬದಿಗೆ ಸರಿಸಿದವು. ಇದರಿಂದ ಪ್ರದೇಶದ ಪಾರಿಸರಿಕ ಮತ್ತು ಸಮಾಜೋ-ಆರ್ಥಿಕ ಸಂರಚನೆಗಳು ಧಕ್ಕೆಗೆ ಒಳಗಾದವು.
ಸ್ಥಳೀಯ ಸಮುದಾಯದ ಭಾವನೆಗಳು ಮತ್ತು ಕಾಳಜಿಗಳನ್ನು ನಿರ್ಲಕ್ಷಿಸಿ ಬೃಹತ್ತಾದ ಗಾಳಿ ಗಿರಣಿಗಳ ನಿರ್ಮಾಣಕ್ಕಾಗಿ ಬೆಟ್ಟದ ತುದಿಯನ್ನು ಸಮತಟ್ಟು ಮಾಡಲಾಯಿತು. ಅದಕ್ಕಾಗಿ ಯಥೇಚ್ಛವಾಗಿ ಜಲಸಂಪನ್ಮೂಲವನ್ನು ಬಳಸಿಕೊಳ್ಳಲಾಯಿತು. ಗಾಳಿಯಂತ್ರದ ಬಿಡಿಭಾಗಗಳ ಸಾಗಣಿಕೆಗಾಗಿ ಅಂಕುಡೊoಕಿನ ಬೃಹತ್ ರಸ್ತೆಗಳನ್ನು ನಿರ್ಮಿಸಲಾಯ್ತು. ಈ ರಸ್ತೆಗಳನ್ನು ನಿರ್ಮಿಸಲು ಬೆಟ್ಟ, ಗುಡ್ಡಗಳನ್ನು ಕಡಿಯಲಾಯಿತು, ದೊಡ್ಡ ದೊಡ್ಡ ಮರಗಳನ್ನು ಕೆಳಗೆ ಉರುಳಿಸಲಾಯಿತು ಎಂದು ಸ್ಥಳೀಯ ಗ್ರಾಮಸ್ಥರು ದೂರುತ್ತಾರೆ.
ಬೆಟ್ಟದ ಮೇಲೆ ಉಂಟಾದ ವಾಹನ ಸಂಚಾರದ ಹೆಚ್ಚಳದಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಬೆಟ್ಟ ಗುಡ್ಡಗಳ ಮೇಲ್ಬದಿಯಲ್ಲಿ ನಿರ್ಮಿಸಲಾದ ಅಂಕು, ಡೊಂಕಾದ ರಸ್ತೆಗಳಿಂದಾಗಿ ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಅಸಮತೋಲನ ಉಂಟಾಯಿತು. ಅದರಿಂದಾಗಿ ಕುರಿ ಮತ್ತು ದನಗಳ ಮೇವಿಗೆ ತೊಂದರೆಯಾಯಿತು. ಅವು ಸಮತಟ್ಟಾದ ನೆಲವನ್ನೇ ಅರಸಿಕೊಂಡು ಹೋಗುವಂತಾಯಿತು. ರಸ್ತೆಯ ಎತ್ತರ ಸುಮಾರು ಏಳು ಮೀಟರ್‌ನಷ್ಟಿದ್ದು, ಕುರಿಗಳಿಗೆ ಅದನ್ನು ಹತ್ತುವುದೇ ಕಷ್ಟವಾಗುತ್ತಿತ್ತು. ಸಮೀಪದ ಗ್ರಾಮಗಳಿಂದ ಹುಲ್ಲು ಮೇಯಲು ಬರುತ್ತಿದ್ದ ಕುರಿಗಳು ಇದೀಗ ಹುಲ್ಲಿಗಾಗಿ, ಮೇವಿಗಾಗಿ ಮೈಲುಗಟ್ಟಲೆ ಸಾಗುವಂತಹ ಪರಿಸ್ಥಿತಿ ಬಂದೊದಗಿತು.
ಬೆಟ್ಟದ ಮೇಲೆ ನಿರ್ಮಿಸಲಾದ ರಸ್ತೆಗಳಿಂದಾಗಿ ಕಲ್ಪವಲ್ಲಿ ಅರಣ್ಯದ ಹುಲ್ಲುಗಾವಲಿನ ಪ್ರದೇಶ ಹಾಳಾಯಿತು. ಇರುವ ಹುಲ್ಲು ಒಣಗಿ ಹೋಯಿತು. ಹುಲ್ಲುಗಾವಲಿನ ಪ್ರದೇಶದ ತುಂಬೆಲ್ಲಾ ಧೂಳು ಆವರಿಸಿಕೊಂಡಿತು. ದನ, ಕರುಗಳಿಗೆ, ಕುರಿ, ಮೇಕೆಗಳ ಆಹಾರಕ್ಕೆ ಕೊರತೆ ಉಂಟಾಯಿತು. ಧೂಳಿನಿಂದಾಗಿ ಕೃಷಿ ಭೂಮಿಯೂ ಹಾಳಾಯಿತು. ವಿಪರೀತವಾದ ಶಬ್ಧಮಾಲಿನ್ಯದಿಂದ ಸ್ಥಳೀಯ ಗ್ರಾಮಸ್ಥರಿಗೆ ಮತ್ತು ರೈತರಿಗೆ ವಿಪರೀತ ಅನಾನುಕೂಲವಾಯಿತು.
ಗೋಪಾಲಸ್ವಾಮಿ ಗುಡಿ ಪ್ರದೇಶದಲ್ಲಿದ್ದ ಸಾಕಷ್ಟು ಜಾನುವಾರುಗಳು ಪ್ಲಾಸ್ಟಿಕ್ ಸೇವಿಸಿ ಸಾವಿಗೀಡಾದವು ಎನ್ನಲಾಗಿದೆ. ಈ ಪ್ಲಾಸ್ಟಿಕ್ ವಸ್ತುಗಳು ಗಾಳಿಗಿರಣಿ ಸ್ಥಾಪನೆಯ ಸಮಯದಲ್ಲಿ ಕಾರ್ಮಿಕರು ತಮ್ಮೊಂದಿಗೆ ತಂದುದಾಗಿದ್ದವು. ಅಷ್ಟೇ ಅಲ್ಲ ವಾಹನಗಳು ಢಿಕ್ಕಿ ಹೊಡೆದ ಪರಿಣಾಮ ಅದೆಷ್ಟೋ ಜಾನುವಾರುಗಳು ದುರ್ಮರಣಕ್ಕೆ ಈಡಾಗಿವೆ. ಪೂಜನೀಯವಾದ ಜಾನುವಾರುಗಳ ಸಾವಿನಿಂದ ಸ್ಥಳೀಯ ಸಮುದಾಯದ ಭಾವನೆಗಳಿಗೂ ಧಕ್ಕೆಯಾಗಿದೆ. ದೇವಸ್ಥಾನದ ಸಮೀಪದಲ್ಲಿದ್ದ ಹಳ್ಳ, ಕೊಳ್ಳಗಳು ಒಣಗಿ ಹೋಗಿದ್ದು, ನೀರು ಕಲುಷಿತವಾಗಿದೆ. ಜಾನುವಾರುಗಳು ಕೂಡ ಕುಡಿಯಲು ಆಗದಷ್ಟು ದುರ್ನಾತ ಬೀರುತ್ತಿವೆ.
ಕಲ್ಪವಲ್ಲಿ ಅರಣ್ಯದಲ್ಲಿರುವ ಹಳ್ಳ, ಕೊಳ್ಳಗಳು, ಸಣ್ಣ ತೊರೆಗಳು ಗಾಳಿಯಂತ್ರಗಳನ್ನು ಅಳವಡಿಸಿದ ನಂತರ ಒಣಗಲು ಆರಂಭಿಸಿದವು. ವಿದ್ಯುತ್ ಕಂಬಗಳ ನೆಡುವಿಕೆ ಮತ್ತು ಗ್ರೌಂಡಿoಗ್ ಮಾಡುವುದರಿಂದ ಭೂಮಿಯೊಳಗಿನ ತಾಪಮಾನ ಹೆಚ್ಚಿ, ಅಂತರ್ಜಲ ಮೂಲಕ್ಕೆ ಧಕ್ಕೆಯುಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ. ಅರಣ್ಯ ಪ್ರದೇಶದ ಕಣಿವೆಯಲ್ಲಿರುವ ಹಳ್ಳ, ಕೊಳ್ಳಗಳು ಭೂಕುಸಿತದ ಕಾರಣ ಮುಚ್ಚಿಹೋಗುತ್ತಿವೆ. ಅದರ ಪರಿಣಾಮ ತಾಳೆ ಮರಗಳ ಮೇಲಾಗಿ, ಅವು ಒಣಗಿ ಹೋಗುತ್ತಿವೆ. ಒಣಗಿದ ಮರಗಳಲ್ಲಿ ಹಣ್ಣು ಬಿಡುತ್ತಿಲ್ಲ. ಅದರ ನೇರ ಪರಿಣಾಮ ಹಳ್ಳಿಗರ ಆರ್ಥಿಕ ಸ್ಥಿತಿಯ ಮೇಲೆ ಉಂಟಾಗಿ, ಅವರ ಜೀವನಮಟ್ಟ ಇಳಿಕೆ ಕಂಡಿದೆ. ಇದೀಗ ಕಲ್ಪವಲ್ಲಿ ಅರಣ್ಯ ಪ್ರದೇಶದಲ್ಲಿರುವ ಬಹುತೇಕ ಹಳ್ಳಗಳು, ತೊರೆಗಳು ಬತ್ತಿಯೇಹೋಗಿವೆ. ಅದರಿಂದಾಗಿ ಕಾಡು ಕೂಡ ಅಳಿವಿನ ಅಂಚಿಗೆ ಸಾಗುತ್ತಿದೆ.
| ಟಿಂಬಕ್ಟು ಕಲೆಕ್ಟಿವ್ ೧೯೯೦ರ ಆಸುಪಾಸಿನ ಸಮಯ. ಅನಂತಪುರ ಜಿಲ್ಲೆ ಬರಡು ಭೂಮಿಯಾಗಿತ್ತು. ಆ ಸಂದರ್ಭದಲ್ಲಿ ಸಿ.ಕೆ.ಗಂಗೂಲಿ (ಬಾಬ್ಲು) ಮತ್ತು ಅವರ ತಂಡ ಹೊಸ ಸಂಸ್ಥೆಯೊoದನ್ನು ಹುಟ್ಟುಹಾಕಿತು. ಪರಿಸರ ಸಂಬoಧಿ ಕಾರ್ಯಗಳನ್ನು ಈ ಪ್ರದೇಶದಲ್ಲಿ ಕೈಗೆತ್ತಿ- ಕೊಂಡಿತು. ಅಂದಿನ ಪರಿಸ್ಥಿತಿಯಲ್ಲಿ ವಾತಾವರಣ ತೀರಾ ಪ್ರತಿಕೂಲದ್ದಾಗಿತ್ತು. ಧಗೆಯ ವಾತಾವರಣದಲ್ಲಿ ಬದುಕುವುದೇ ದುಸ್ತರವಾಗಿತ್ತು. ಅಂತಹ ಸನ್ನಿವೇಶದಲ್ಲಿ ಅವರು ೪೦ ಎಕೆರೆಗಳಷ್ಟು ಬರಡು ಭೂಮಿಯನ್ನು ಆಯ್ಕೆ ಮಾಡಿಕೊಂಡರು. ಅದನ್ನು ಹಸಿರಾಗಿಸುವ ಯೋಜನೆಗೆ ಕೈ ಹಾಕಿದರು. ಸಾಕಷ್ಟು ಗಿಡಗಳನ್ನು ಬರಡು ಭೂಮಿಯಲ್ಲಿ ನೆಟ್ಟರು. ಅದಕ್ಕೆ ಅವರಿಟ್ಟ ಹೆಸರು ಟಿಂಬಕ್ಟು. ಅದರರ್ಥ – ‘ಭೂಮಿಯ ಕೊನೆಯ ಕ್ಷಿತಿಜ’ ಎಂದು. ಟಿಂಬಕ್ಟು ಸ್ಥಳೀಯ ಸಮುದಾಯದ ಜತೆಗೂಡಿ ಕೆಲಸಮಾಡಲು ಪ್ರಾರಂಭಿಸಿತು. ಕ್ರಮೇಣ ವಿಸ್ಥಾರಗೊಳ್ಳುತ್ತಾ ಈ ಸಂಸ್ಥೆಯು ೩೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು. ಅದರ ವ್ಯಾಪ್ತಿ ಚೆನ್ನಕೋತಪಳ್ಳಿ, ರೊದ್ದಂ ಮತ್ತು ರಾಮಗಿರಿ ಮಂಡಲ ಪ್ರದೇಶದಲ್ಲಿದ್ದ ೧೦೦ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವ್ಯಾಪಿಸಿತ್ತು. ಮೊದಲಿಗೆ ಈ ಸಂಸ್ಥೆಯ ಗಮನ ಸಣ್ಣ ಪುಟ್ಟ ರೈತರು, ದಲಿತರು ಮತ್ತು ಭೂರಹಿತ ಕೂಲಿಕಾರ್ಮಿಕರ ಮೇಲೆ ನೆಟ್ಟಿತ್ತು. ಮೊದಲನೆಯದಾಗಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಯಿತು. ಆ ನಂತರ ನೆಲ, ಜಲ, ಅರಣ್ಯ ರಕ್ಷಣೆಗಾಗಿ ಸಾಕಷ್ಟು ಸಮುದಾಯಗಳನ್ನು ರಚಿಸಲಾಯಿತು. ಸಂಸ್ಥೆಯ ಕಾರ್ಯಕರ್ತರು ಗ್ರಾಮಗಳಲ್ಲಿ ಸಾವಯವ ಕೃಷಿ ಮತ್ತು ಮರಗಳ ನೆಡುವಿಕೆಗೆ ಪ್ರೋತ್ಸಾಹ ನೀಡಿದರು. ಸಮುದಾಯಗಳಸಮಗ್ರ ಅಭಿವೃದ್ಧಿಗೆ ಕಾರಣರಾದರು. |
ಕಣಿವೆಯಲ್ಲಿ ತಳಮಳ
ಕಲ್ಪವಲ್ಲಿ ಅರಣ್ಯ ಪ್ರದೇಶದಲ್ಲಿ ಗಾಳಿಗಿರಣಿಗಳ ಸ್ಥಾಪನೆ ಮತ್ತು ಪರಿಣಾಮಗಳು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇದರಿoದಾಗಿ ಒಂದೆಡೆ ಪರಿಸರದಲ್ಲಿ ಅಸಮತೋಲನತೆ
ಉಂಟಾಗಿದ್ದರೆ ಮತ್ತೊಂದು ಕಡೆ ಸ್ಥಳೀಯರ ಜೀವನಾಧಾರವಾಗಿದ್ದ ಪರಿಸರ ಸಂಪನ್ಮೂಲಕ್ಕೇ ತೊಂದರೆಯುoಟಾಗಿದೆ. ಇದೀಗ ಗುಡ್ಡಗಳ ತುದಿಯಲ್ಲಿ ವಿದ್ಯುತ್ ಉತ್ಪಾದನೆಯ ದೃಷ್ಟಿಯಿಂದ ಗಾಳಿಯoತ್ರಗಳನ್ನು ನಿಲ್ಲಿಸಲಾಗಿದೆ. ಈ ಗಾಳಿಯಂತ್ರಗಳು ಕಾಂಕ್ರೀಟ್ ಕಾಡಿನ ನಿರ್ಮಾಣಕ್ಕೆ ಕಾರಣವಾಗಿದೆ. ಈ ಯೋಜನೆಯಿಂದಾಗಿ ಟಿಂಬಕ್ಟು ಕಲೆಕ್ಟಿವ್ ಸಂಸ್ಥೆಯು ಎರಡು ದಶಕಗಳಿಂದ ನಡೆಸಿದ್ದ ಪರಿಸರ ಸ್ನೇಹಿ ಕಾರ್ಯಗಳು ನೆನಗುದಿಗೆ ಬೀಳುವಂತಾಗಿವೆ.
ಗಾಳಿ ಗಿರಣಿಗಳ ಸ್ಥಾಪನೆಯಿಂದ ಕಾಡಿನ ಪರಿಸರ ಮತ್ತು ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿದೆ. ಹಸಿರು ಕಣಿವೆಯು ವಿನಾಶದ ಭೀತಿಯನ್ನು ಎದುರಿಸುತ್ತಿದೆ. ಕಾಡಿನ ವ್ಯಾಪ್ತಿ ಕಡಿಮೆಯಾಗುತ್ತದೆ. ಹಳ್ಳಕೊಳ್ಳಗಳು, ತೊರೆಗಳು, ಹುಲ್ಲುಗಾವಲು, ಜೀವನಾಧಾರ ಸಂಪನ್ಮೂಲಗಳು ಮತ್ತು ಜಲಸಂಪನ್ಮೂಲ ವ್ಯವಸ್ಥೆಗಳು ಕಲುಷಿತಗೊಂಡಿವೆ. ಸಮೀಪದ ಗ್ರಾಮಸ್ಥರು ತೊಂದರೆಗೆ ಈಡಾಗಿದ್ದಾರೆ. ಸ್ಥಳೀಯ ಗ್ರಾಮಸ್ಥರ ಬದುಕಿನ ಮೇಲೆ ಅಡ್ಡ ಪರಿಣಾಮ ಉಂಟಾಗಿರುವುದರ ಜತೆ ಜತೆಗೇ, ಈ ಪ್ರದೇಶಕ್ಕೆ ವಲಸೆ ಬರುತ್ತಿದ್ದ ಕುರಿಕಾಯುವವರಿಗೂ ತೊಂದರೆ ಉಂಟಾಗಿದೆ. ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಕಣಿವೆ ಇದೀಗ ಗೊಂದಲಗಳ ಗೂಡಾಗಿದೆ.
ಗಾಳಿಯಂತ್ರಗಳಿಗೆ ಅಳವಡಿಸಿರುವ ಬ್ಲೇಡ್‌ಗಳ ತಿರುಗುವಿಕೆಯಿಂದಾಗಿ ಈ ಮೌನ ಕಣಿವೆಯು ಒರಟೊರಟಾದ ಶಬ್ದಗಳಿಂದ ತುಂಬಿಹೋಗಿದೆ. ಗಾಳಿಗಿರಣಿಯು ಚಾಲೂ ಆಗುವುದು ಮತ್ತು ನಿಂತುಹೋಗುವುದರ ಕಿರಿಕಿರಿ ಸದ್ದು ನಮಗೆ ಒಂದೇ ಸoದೇಶ ಕೊಡುತ್ತಿದೆ: ನಮ್ಮ ಸುತ್ತಮುತ್ತಲೂ ನಾವು ನೋಡುವ ಸಮೃದ್ಧಿಯು ಅಲ್ಲೇ ಉತ್ಪಾದಿತವಾಗುವ ಮೆಗಾವಾಟ್ ವಿದ್ಯುತ್ತನ್ನೂ ಪಡೆಯಲಾಗದ ಸ್ಥಳೀಯ ಜನರ ರಕ್ತ ಮತ್ತು ಬೆವರಿನ ಮೇಲೆ ಕಾಲಿಟ್ಟ ಬೆಲೆ.
Farukh Riaz, Anita Sood, Saroj Bhayana and Alpna Sharma
Paryavaran Jagriti Abhiyan Committee
Society for Promotion of Wastelands Develop ment 14 A Vishnu Digamber Marg
New Delhi 110002
E- mail: spwdenvironment2012@gmail.com



