ರಂಜನ್ ಕೆ ಪಾಂಡ ಮತ್ತು ಅಜಿತ್ ಕುಮಾರ್ ಪಾಂಡ
ಒಡಿಶಾದ ಸಣ್ಣ ರೈತರು ತಮ್ಮ ಕುಟುಂಬದ ಪೌಷ್ಟಿಕತೆ ಮತ್ತು ಆಹಾರ ಭದ್ರತೆ ಹಾಗೂ ಹವಾಮಾನ ಬದಲಾವಣೆಗಳನ್ನು ಭರಿಸುವ ನಿಟ್ಟಿನಲ್ಲಿ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ತರಕಾರಿ ತೋಟಗಳ ಅಭಿವೃದ್ಧಿ ಮತ್ತು ಭತ್ತ – ಮೀನು ಸಂಯೋಜಿತ ಕೃಷಿಯ ನೂತನ ವಿಧಾನಗಳು ರೈತ ಕುಟುಂಬಗಳ ನಿರ್ವಹಣೆ ಹಾಗೂ ಅಗತ್ಯ ಪೌಷ್ಟಿಕ ಆಹಾರ ಪೂರೈಕೆಗೆ ಸಹಕಾರಿಯಾಗಿ ಪರಿಣಮಿಸಿವೆ.
ಸಣ್ಣಪ್ರಮಾಣದ ರೈತರು – ಅವರಲ್ಲಿ ಹಲವರು ತಾವೇ ಸ್ವತಃ ವಿಶ್ವದ ಹಸಿವಿನ ಸಮಸ್ಯೆಗೆ ತುತ್ತಾದ ಜನರಲ್ಲಿ ಒಬ್ಬರಾಗಿದ್ದರೂ ಜಗತ್ತಿಗೆ ಆಹಾರ ಪೂರೈಸುವಲ್ಲಿ ದೊಡ್ಡ ಕೊಡುಗೆಯನ್ನೇ ನೀಡುತ್ತಿದ್ದಾರೆ. ಈ ರೈತರು ಆಹಾರ ಬಳಕೆಯ ದೊಡ್ಡಪಾಲನ್ನು ಪೂರೈಸುವುದರ ಜೊತೆಗೆ ಪರಿಸರ ಸಂರಕ್ಷಣೆಯನ್ನೂ ಮಾಡುತ್ತಾರೆ. ಇವರು ತುಟ್ಟಿಯಾಗುತ್ತಿರುವ ಉತ್ಪಾದನಾ ವೆಚ್ಚ, ಕಡಿಮೆ ಇಳುವರಿ, ಅಸಹಕಾರಿ ಕೃಷಿನೀತಿಗಳು, ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳೇ ಮುಂತಾದ ಸಮಸ್ಯೆಗಳ ನಡುವೆಯೂ ತಮ್ಮ ಕೃಷಿಯನ್ನು ಮುಂದುವರಿಸಿಕೊoಡು ನಡೆದಿದ್ದಾರೆ.
ತರಕಾರಿ ಬೆಳೆಯಿಂದ ತಿರುಗೇಟು
ಭೌಗೋಳಿಕ ಕಾರಣಗಳಿಂದಾಗಿ ಒಡಿಶಾದ ರೈತರು ಸತತವಾಗಿ ಪ್ರಾಕೃತಿಕ ವಿಕೋಪ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಕೃಷಿಗಾರಿಕೆ
ನಡೆಸಬೇಕಾದ ಪರಿಸ್ಥಿತಿ ಇದೆ. ನೌಪಾಡ ಜಿಲ್ಲೆಯ ಖರಿಯಾರ್ ಬ್ಲಾಕಿನಲ್ಲಿ ದೊಹೆಲ್ಪಾಡ ಎಂಬ ಹಳ್ಳಿ ಇದೆ. ಇಲ್ಲಿ ಎರಡು ಎಕರೆ ಕೃಷಿ ಭೂಮಿ ಹೊಂದಿರುವ ಬನಮಾಲಿ ಬೆಹೆರ ಎಂಬ ರೈತರೊಬ್ಬರು ಇದ್ದಾರೆ. ತಮ್ಮ ಭೂಮಿಯ ಅರ್ಧ ಎಕರೆಯಲ್ಲಿ ಇವರು ವರ್ಷ ಪೂರ್ತಿ ತರಕಾರಿ ಬೆಳೆಯುತ್ತಾರೆ. ಗದ್ದೆಯಲ್ಲೊಂದು ಬಾವಿ ತೋಡಿದ್ದು, ಸಾಂಪ್ರದಾಯಿಕ ‘ಟೆಂಡಾ’ ಪದ್ಧತಿಯಿಂದ ನೀರೆತ್ತಿ ಗದ್ದೆಗೆ ಉಣಿಸುತ್ತಾರೆ. ಪ್ರತಿದಿನ ಮನೆ ಮಂದಿಯೆಲ್ಲ ಸೇರಿ ಎರಡು ಗಂಟೆ ಹೊಲದಲ್ಲಿ ದುಡಿದರೆ ಸಾಕು, ಕುಟುಂಬದ ಅಗತ್ಯ ಪೂರೈಸಿ ಮಾರಾಟ ಮಾಡುವಷ್ಟು ಫಸಲು ದೊರೆಯುತ್ತದೆ.
`ದಿನದಲ್ಲಿ ಒಂದು ಗಂಟೆ ಕಾಲ ಸಸಿಗಳಿಗೆ ನೀರುಣಿಸಲು ಬೇಕಾಗುತ್ತದೆ. ಕಳೆ ಕೀಳಲು, ಸಸಿಗಳ ಬೇರಿನ ಬುಡದಲ್ಲಿ ಮಣ್ಣು ಬಿಡಿಸುವುದೇ ಮೊದಲಾದ ಕೆಲಸಗಳಿಗೆ ಒಂದು ಗಂಟೆ ಬೇಕಾಗುತ್ತದೆ’ ಎಂದು ತಮ್ಮ ಕಾರ್ಯವಿಧಾನ ಹಂಚಿಕೊಳ್ಳುತ್ತಾರೆ ಬನಮಾಲಿ, `ನೀವೆಷ್ಟು ಕಾಲ ಹೊಲದಲ್ಲಿ ದುಡಿಯುತ್ತೀರೋ ಅಷ್ಟು ಲಾಭ ಪಡೆಯುತ್ತೀರಿ. ಭೂಮಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುತ್ತದೆ. ಈ ತರಕಾರಿ ಕೃಷಿಗೆ ನಾನು ಕೃತಜ್ಞನಾಗಿದ್ದೇನೆ. ನಾವೆಲ್ಲರೂ ನಮ್ಮ ಹೊಲದ ತರಕಾರಿಯನ್ನು ಪ್ರತಿನಿತ್ಯವೂ ಆಹಾರದಲ್ಲಿ ಬಳಸುವುದರ ಜೊತೆಗೆ ಫಸಲಿನ ಅರ್ಧದಷ್ಟನ್ನು ಸಮೀಪದ ಮಾರುಕಟ್ಟೆಯಲ್ಲಿ ಬಿಕರಿ ಮಾಡಿ ಹಣವನ್ನೂ ಸಂಪಾದಿಸುತ್ತೇವೆ’ ಎಂದು ಮಾತು ಸೇರಿಸುತ್ತಾರೆ ಅವರ ಪತ್ನಿ ಸಂಜುಕ್ತಾ.
ಬನಮಾಲಿಯAತೆಯೇ ಮೂವತ್ತಕ್ಕೂ ಹೆಚ್ಚು ಸಣ್ಣ ರೈತರು ತಮ್ಮ ಹಿತ್ತಲಿನಲ್ಲಿ ಇಲ್ಲವೇ ಗದ್ದೆಯ ಒಂದು ಭಾಗದಲ್ಲಿ ತರಕಾರಿ ಬೆಳೆದು ತಮ್ಮ ಕುಟುಂಬಕ್ಕೆ ಅಗತ್ಯವಾದ ಪೌಷ್ಟಿಕ ಆಹಾರ ಪೂರೈಕೆ- ಯ ಜೊತೆಗೆ ಸಂಪಾದನೆಯನ್ನೂ ಮಾಡುತ್ತಿದ್ದಾರೆ. `ವಾಸ್ತವದಲ್ಲಿ ಈ ಹಳ್ಳಿ ಇಡಿಯ ಈ ಪ್ರಾಂತ್ಯಕ್ಕೇ ಮಾದರಿಯಾಗಿದೆ’ ಎನ್ನುತ್ತಾರೆ
ಸ್ಥಳೀಯ ಎನ್ ಜಿ ಓ ಸ್ವಯಂಸೇವಕ ಅಶೋಕ್ ಪಟ್ನಾಯಕ್. ಈ ಪ್ರಾಂತ್ಯದಲ್ಲಿ KARRBYA ಹಾಗೂ VIKASH ಎಂಬ ಎರಡು ಸ್ಥಳೀಯ ಎನ್ ಜಿ ಓಗಳು ಕ್ಷಾಮ ಡಾಮರಗಳನ್ನು ಎದುರಿಸುವ ನಿಟ್ಟಿನಲ್ಲಿ ರೈತರಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿವೆ. ಇಲ್ಲಿಗೆ ಸಮೀಪದ ಮೊಡೊಸಿಲ್ ಎಂಬ ಹಳ್ಳಿ ಕೂಡ ಇಂಥದೇ ಪ್ರಗತಿ ಸಾಧಿಸಿದೆ.
ಈ ಪ್ರದೇಶದ ಹಳ್ಳಿಗಳು ಭತ್ತ ಬೆಳೆಯಲು ಅನಿಶ್ಚಿತವಾದ ಮಳೆಯನ್ನೇ ನೀರಿನ ಮುಖ್ಯ ಮೂಲವಾಗಿ ನೆಚ್ಚಿಕೊಂಡಿದ್ದು, ಅದರ ಕೊರತೆ ಉಂಟಾದಾಗೆಲ್ಲ ಹಳ್ಳಿಗರು ಆಂಧ್ರಪ್ರದೇಶದ ಇಟ್ಟಿಗೆ ಭಟ್ಟಿಗಳಿಗೆ ಮತ್ತು ಇತರೆಡೆ ಕೆಲಸ ಅರಸಿ ವಲಸೆ ಹೋಗುತ್ತಿದ್ದರು. ಮತ್ತೆ ಮತ್ತೆ ಎರಗುವ ಬರಗಾಲ ಹಾಗೂ ಬೆಳೆ ವೈಫಲ್ಯಗಳಿಂದಾಗಿ ಜನ ವಲಸೆಹೋಗುವುದು ಸಾಮಾನ್ಯವಾಗಿಬಿಟ್ಟಿತು. ಆದರೆ ಗ್ರಾಮಸ್ಥರು ಸಮಸ್ಯೆಗಳ ವಿರುದ್ಧ ಹೋರಾಡಿ ತರಕಾರಿ ಕೃಷಿಯನ್ನು ಆರಂಭಿಸಿದರು. ಮತ್ತು ಎರಡು ಸ್ಥಳೀಯ ಎನ್ ಜಿ ಓಗಳು ರೈತರಿಗೆ ಸಹಾಯಹಸ್ತ ಚಾಚಿದ್ದಲ್ಲದೇ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಚಯಿಸುವಲ್ಲಿಯೂ ಸಹಕರಿಸಿದವು.
ಅದೃಷ್ಟದ ಕೊಳಗಳು
ಬೋದೆನ್ ಬ್ಲಾಕ್ ನ ಕುಸುಮ್ ಕುಂತ ಹಳ್ಳಿಯ ಛತರ್ ಮಜಿ ಮತ್ತು ಉಜಾಲ್ ಮಜಿಯವರ ಕಥೆ ಆಸಕ್ತಿಕರವಾಗಿದೆ. ಈ ಇಬ್ಬರೂ ರೈತರು ಜೀವನಕ್ಕಾಗಿ ದಿನಗೂಲಿ ಮಾಡುತ್ತಿದ್ದರು. ಅವರಿಗೆ ಸ್ವಂತದ್ದಾದ ತುಂಡು ಭೂಮಿಯೂ ಇತ್ತು. ಮಳೆನೀರು ಬಳಸಿ ನಡೆಸುವ ಕೃಷಿಯಿಂದ ದಕ್ಕುವ ಫಸಲು ಅವರ ಕುಟುಂಬದ ಪ್ರಾಥಮಿಕ ಅಗತ್ಯ ಪೂರೈಸಲೂ ಸಾಕಾಗುತ್ತಿರಲಿಲ್ಲ. ಆದರೆ ಕಳೆದ ವರ್ಷ ಹೊಲದಲ್ಲಿ ಕೆರೆ ನಿರ್ಮಾಣಮಾಡಲು “ಪಳ್ಳಿಸಭಾ” ದಿಂದ ಅವರು ಆಯ್ಕೆಯಾಗಿದ್ದೇ ತಡ ಅವರ ನಸೀಬು ಬದಲಾಯಿತು. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ, MGNREGS ಕಾರ್ಯಕ್ರಮದಡಿಯಲ್ಲಿ ಅವರಿಗೆ ಕೆರೆ ತೋಡುವ ಕೆಲಸ ದೊರೆಯಿತು. ಅವರಿಬ್ಬರಿಗೂ ಮೊ ಪೊಖಾರಿ ಯೋಜನಾ (ಕೃಷಿ ಹಳ್ಳ ಯೋಜನೆ) ವತಿಯಿಂದ ತಲಾ ೨೦೦೦೦ ರೂಗಳಷ್ಟು ಸಹಾಯಧನ ದೊರೆಯಿತು.
೨೦,೦೦೦ರೂಗಳಲ್ಲಿ, ಛತರ್ ಮತ್ತು ಉಜಾಲ್ ಗೆ ಸಾಮಗ್ರಿಗಳ ವೆಚ್ಚ ಮತ್ತು ಇತರೆ ವೆಚ್ಚಗಳನ್ನು ಕಳೆದು ಕ್ರಮವಾಗಿ ತಲಾ ೧೫,೦೦೦ ಮತ್ತು ೧೪,೦೦೦ ರೂಗಳು ದೊರೆತವು. ಛತರ್ ತಮ್ಮ ೭೦ ಡೆಸಿಮಲ್ ಭೂಮಿಯಲ್ಲಿ ೪ಡೆಸಿಮಲ್ ಜಾಗ ಬಳಸಿಕೊಂಡು ಕೊಳ ನಿರ್ಮಾಣಮಾಡಿದರು. ಹೊಲದ ಸುತ್ತಲೂ ಬೇಲಿ ನಿರ್ಮಾಣ ಮಾಡಿ ತರಕಾರಿಗಳನ್ನು ಬೆಳೆದರು. ಅವರು ೪೫ ಡೆಸಿಮಲ್ ಜಾಗದಲ್ಲಿ ಈರುಳ್ಳಿಯನ್ನೂ, ೧೦ ಡೆಸಿಮಲ್ ಜಾಗದಲ್ಲಿ ಟೊಮೆಟೋವನ್ನೂ ಮತ್ತು ಕೊಳದ ಸಮೀಪ ಬೆಂಡೇಕಾಯಿ,
ಸೂರ್ಯಕಾoತಿ ಮತ್ತಿತರ ಬೆಳೆಗಳನ್ನೂ ಬೆಳೆದರು. `ನಾವು ವರ್ಷವಿಡೀ ತರಕಾರಿ ಬಳಸಿದೆವು ಮತ್ತು ಉಳಿದವುಗಳನ್ನು ಮಾರಾಟಮಾಡಿ ಈ ವರ್ಷ ೧೫,೦೦೦ರೂಗಳಷ್ಟು ಆದಾಯ ಗಳಿಸಿದೆವು. ಸದ್ಯ, ಇನ್ನೀಗ ನಾವು ದೂರದ ಆಂಧ್ರಕ್ಕೆ ವಲಸೆಹೋಗುವ ಪ್ರಮೇಯವಿಲ್ಲ’ ಎಂದು ಛತರ್ ಹೇಳುವಾಗ ಮುಖದಲ್ಲಿ ಆನಂದ ಎದ್ದು ಕಾಣುತ್ತಿತ್ತು.
ಉಜಲ್ ಕೂಡಾ ತಮ್ಮ ೫೦ ಡೆಸಿಮಲ್ ಭೂಮಿಯಲ್ಲಿ ಈರುಳ್ಳಿ ಬೆಳೆಯಲು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರು ಈ ವರ್ಷ ೧೪,೦೦೦ ರೂ ಆದಾಯ ಗಳಿಸಿದ್ದಾರೆ ಮತ್ತು ವಲಸೆ ಹೋಗುವ ನಿರ್ಧಾರ ಕೈಬಿಟ್ಟಿದ್ದಾರೆ. ಈ ಇಬ್ಬರು ರೈತರು ಕೆರೆ ನಿರ್ಮಾಣ ಮಾಡಲು ತಮ್ಮ ಕುಟುಂಬದ ಸದಸ್ಯರನ್ನೇ ಕೂಲಿಗಳನ್ನಾಗಿ ಬಳಸಿಕೊಂಡಿದ್ದಾರೆ. ಅಂದರೆ MGNREGS ನಿಂದ ದೊರೆಯುವ ಕೂಲಿಯ ಹಣ ಅವರ ಕುಟುಂಬಕ್ಕೇ ದೊರೆತಂತಾಯಿತು. ನಂತರದಲ್ಲಿ ಅದೇ ಹಳ್ಳಿಯ ಇತರೆ ೮
ಸಣ್ಣರೈತರು ಕೂಡ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಈಗ ಈ ಗ್ರಾಮ ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಪೂರ್ತಿಯಾಗಿದೆ.
ಅಶೋಕ್ ಪಟ್ನಾಯಕ್ ಹೇಳುವಂತೆ, ಹಿತ್ತಲು ಕೃಷಿ ಈ ಪ್ರದೇಶದ ರೈತರ ಹಳೆಯ ರೂಢಿಯೇ ಆಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಹಿತ್ತಲಲ್ಲೂ ತರಕಾರಿ ಬೆಳೆಯಲಾಗುತ್ತಿತ್ತು. ಇದರಿಂದ ಮನೆಮಂದಿಗೆಲ್ಲ ಸಾಕಾಗುವಷ್ಟು ಪೌಷ್ಟಿಕ ಆಹಾರ ಪೂರೈಕೆಯಾಗುತ್ತಿತ್ತು. ನಂತರದ ದಿನಮಾನಗಳಲ್ಲಿ ಕಾರ್ಮಿಕರ ಸಮಸ್ಯೆ ಮತ್ತು ಇತರೆ ಸಮಸ್ಯೆಗಳಿಂದ ಈ ರೂಢಿ ಅಳಿಯುತ್ತ ಹೋಯ್ತು. ಆದರೆ ಈಗ ಸ್ಥಳೀಯ ಎನ್ ಜಿ ಓ ಗಳ ಸತತ ಪರಿಶ್ರಮದಿಂದ ಈ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲಿ ಶೇಕಡಾ
೨೦-೩೦ ರಷ್ಟು ಕುಟುಂಬಗಳು ತರಕಾರಿ ಕೃಷಿಯಲ್ಲಿ ತೊಡಗಿಕೊಂಡಿವೆ. ಬಹುತೇಕ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಬಿಕರಿ ಮಾಡಿ ದೊಡ್ಡ ಮೊತ್ತದ ಆದಾಯವನ್ನೂ ಗಳಿಸುತ್ತಿವೆ.
ಭತ್ತ ಹಾಗೂ ಮೀನು ಸಂಯೋಜಿತ ಕೃಷಿ
ಕೇಂದ್ರಪಾಡ ಜಿಲ್ಲೆಯಲ್ಲಿನ ರಾಜನಗರ್ ಬ್ಲಾಕ್‌ನ ಪದ್ಮನವಪಟ್ಟಣ ಗ್ರಾಮದಲ್ಲಿ ಪದೇಪದೇ ಮರುಕಳಿಸುತ್ತಿದ್ದ ಪ್ರವಾಹದಿಂದ ಭತ್ತದ ಕೃಷಿ ಕಷ್ಟಕರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯುರೋಪಿಯನ್ ಒಕ್ಕೂಟ ಹಾಗೂ ಕನ್ಸರ್ನ್ ವರ್ಲ್ಡ್ ವೈಡ್ ಸಂಸ್ಥೆಗಳ ಬೆಂಬಲದೊAದಿಗೆ ಆರ್ ಸಿ ಡಿ ಸಿ ಎಂಬ ಸ್ಥಳೀಯ ಎನ್ ಜಿ ಓ ‘ಪರಿವರ್ತನೆ’ ಎಂಬ ಕಾರ್ಯಕ್ರಮವನ್ನು ಪರಿಚಯಿಸಿತು. ಇದರಿಂದಾಗಿ ಕಂಚನ್ ಸಮಾಲ್ ರಂತಹ ಸಣ್ಣ ರೈತರು ತಮ್ಮ ಭತ್ತದ ಹೊಲಗಳಲ್ಲಿ ತರಕಾರಿ ಬೆಳೆಯುವುದರೊಂದಿಗೆ
ಮೀನುಗಾರಿಕೆ ನಡೆಸುವುದು ಸಾಧ್ಯವಾಯಿತು.
ಕಂಚನ್ ರವರಿಗೆ ೨,೦೦೦ ಮೀನುಗಳು, ಅದರ ಆಹಾರ ಮತ್ತು ತರಕಾರಿ ಬೀಜ ಮತ್ತು ಸಸಿಗಳನ್ನು ನೀಡಲಾಯಿತು. ಜೂನ್ ೨೦೧೩ರಲ್ಲಿ ಅವರು ತಮ್ಮ ೫೦ ಡೆಸಿಮಲ್ ನಷ್ಟು ಜಾಗವನ್ನು ಸಂಯೋಜಿತ ಕೃಷಿಗೆ ಅನುಕೂಲಕರವಾಗಿ ಮಾರ್ಪಡಿಸಿಕೊಂಡರು. ಆ ಭೂಮಿಯನ್ನು ಬೆಳೆ ಬೆಳೆಯುವ ಜೊತೆಜೊತೆಗೇ ಮೀನುಸಾಕಣೆಗೆ ಉಪಯುಕ್ತವಾಗುವಂತೆಯೂ ಪರಿವರ್ತಿಸಲಾಯಿತು. ಹೆಚ್ಚಿನ ನೀರು ಹೊರಹೋಗಲು ಹಾಗೂಮೀನುಗಳಿಗೆ ಅಗತ್ಯವಾದಷ್ಟು ನೀರನ್ನು ಉಳಿಸಿಕೊಳ್ಳಲು ಸೂಕ್ತ
ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಹೊಲದ ದಂಡೆಗಳನ್ನು ತರಕಾರಿ ಕೃಷಿಗೆ ಬಳಸಿಕೊಳ್ಳಲಾಯಿತು. ಭತ್ತದ ಬೆಳೆಗೆ ಮತ್ತು ತರಕಾರಿ ಬೆಳೆಗೆ
ಮೀನುಗಳ ತ್ಯಾಜ್ಯ ಹಾಗೂ ಸಾವಯವ ಗೊಬ್ಬರ ಬಳಸಲಾಯಿತು.
ಕಂಚನ್ ಈಗ ಒಂದು ವರ್ಷದಲ್ಲೇ ಈ ಮೊದಲಿಗಿಂತ ಪ್ರತಿಶತ ೨೦೦ರಷ್ಟು ಹೆಚ್ಚು ಗಳಿಸುವ ಹೆಮ್ಮೆಯ ರೈತ ಮಹಿಳೆಯಾದರು. `ನಾನು ಈ ಹಿಂದೆ ಭತ್ತದ ಬೆಳೆಯಿಂದ ೫,೦೦೦ ರೂಪಾಯಿ ಆದಾಯಗಳಿಸುತ್ತಿದ್ದೆ. ಆದರೆ ಈ ವರ್ಷ ಮೀನುಗಾರಿಕೆಯಿಂದ ೮,೦೦೦, ತರಕಾರಿ ಮಾರಾಟದಿಂದ ೩,೦೦೦ ರೂ (ಭತ್ತದ ಆದಾಯ ಹೊರತುಪಡಿಸಿ) ಆದಾಯ ಗಳಿಸಿದ್ದೇನೆ’ ಎಂದು ಲೆಕ್ಕ ಕೊಡುವ ಕಂಚನ್, ‘ನೀವೇ ನೋಡುತ್ತೀರಲ್ಲ, ನಾವು ನಮ್ಮ ಕುಟುಂಬಕ್ಕೆ ತರಕಾರಿ ಮತ್ತು ಮೀನುಗಳನ್ನು ಕೊಳ್ಳುವಹಾಗೇ ಇಲ್ಲ!’ ಎಂದು
ಬೀಗುತ್ತಾರೆ. ‘ಕಂಚನ್ ತನ್ನ ಮಕ್ಕಳಿಗಾಗಿ ಸೈಕಲ್ ಖರೀದಿಸಿದ್ದಾರೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೀಗೆ ಅವರು ತನ್ನ ಕುಟಂಬಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಎನ್ ಜಿ ಓ ಸಂಸ್ಥೆಯ ಸಿಬ್ಬಂದಿ ಜನ್ಮೇಜಯ. `ಈ ವ್ಯವಸ್ಥೆಯಡಿಯಲ್ಲಿ ಪ್ರಯೋಜನ ಪಡೆದುಕೊಂಡ ಅನೇಕ ರೈತರು ಇದೇ ರೀತಿಯಲ್ಲಿ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಪೌಷ್ಟಿಕ ಆಹಾರ ಪೂರೈಸುವುದರ ಜೊತೆಗೆ, ಆರ್ಥಿಕ ಪರಿಸ್ಥಿತಿಯನ್ನೂ ಉತ್ತಮ ಪಡಿಸಿಕೊಂಡಿದ್ದಾರೆ’ ಎನ್ನುತ್ತಾರವರು.
‘ಸೈಕ್ಲೋನ್ ಮತ್ತು ಪ್ರವಾಹಗಳಿಂದ ತೊಂದರೆಗೀಡಾಗಿರುವ ಕರಾವಳಿಯ ಜಗತ್ ಸಿಂಗ್ ಪುರ್ ಮತ್ತು ಕೇಂದ್ರಪಾಡ ಜಿಲ್ಲೆಗಳಲ್ಲಿನ ಸಣ್ಣ ರೈತರು ಈ ಕೃಷಿಪದ್ಧತಿಯನ್ನು
ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಅವರು ಕುಟುಂಬದ ಪೌಷ್ಟಿಕತೆ, ಆಹಾರಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂಬುದನ್ನು ಮನಗoಡಿದ್ದಾರೆ. ಈ ರೀತಿಯ ಭತ್ತ – ಮೀನು ಸಂಯೋಜಿತ ಕೃಷಿಯು ಬಾಂಗ್ಲಾದೇಶದಲ್ಲಿಯೂ ಪ್ರಸಿದ್ಧಿಯಾಗಿದೆ. ಈ ಕೃಷಿಪದ್ಧತಿಯಿಂದ ಹವಾಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಭತ್ತ ಕೃಷಿಯ ಹೊರಸೂಸುವಿಕೆಯ ಪ್ರಮಾಣವನ್ನು ಶೇಕಡಾ ೨೩ರಷ್ಟು ಇಳಿಸಬಹುದಾಗಿದೆ’ ಎನ್ನುತ್ತಾರೆ ಟೆಕ್ನಿಕಲ್ ಕೋ- ಆರ್ಡಿನೇಟರ್ (ಕ್ಲೈಮೇಟ್ ಚೇಂಜ್ ) ಸರೋಜ್ ದಾಶ್.
ಈ ಎಲ್ಲಾ ರೈತರು ಪ್ರಾಕೃತಿಕ ವಿಕೋಪದ ವಿರುದ್ಧ ಹೋರಾಡಿ ಬಡತನವನ್ನು ಗೆಲ್ಲುವುದರ ಜೊತೆಗೆ ಆಹಾರ ಭದ್ರತೆ ಹಾಗೂ ಪೌಷ್ಟಿಕ ಆಹಾರ ಪೂರೈಕೆಯನ್ನು ಕಾಯ್ದುಕೊಂಡಿದ್ದಾರೆ. ಅವರು ಸಂಪತ್ತಿನಲ್ಲಿ ಬಡವರಾಗಿದ್ದರೂ, ಸಣ್ಣ ಸೊತ್ತಿನಲ್ಲಿಯೇ ಅಮೋಘ ಸಾಧನೆ ಮಾಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಭೂಮಿಯನ್ನು
ಹೊಂದಿದ್ದರೂ ಹವಾಮಾನ ವೈಪರೀತ್ಯದ ವಿರುದ್ದ ಹೋರಾಡಿ ಕೃಷಿಗಾರಿಕೆ ನಡೆಸಬಹುದೆಂಬುದನ್ನು ಸಾಬೀತು ಮಾಡಿದ್ದಾರೆ.
Ranjan K Panda
BASERA, R/3-A-4, J. M. Colony, Budharaja Sambalpur 768 004
Odisha, India
E-mail: ranjanpanda@gmail.com
Ajit Kumar Panda
Co-Conveno
Water Initiatives, Odisha
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೬, ಸಂಚಿಕೆ ೪, ಡಿಸೆಂಬರ್ ೨೦೧೪



