ನಾನು ಎನ್ ಕೇಶವಮೂರ್ತಿ, ಕೃಷಿಕ ಕುಟುಂಬದಿಂದ ಬಂದವನು. ಸುಮಾರು ಮೂವತ್ತು ವರ್ಷಗಳ ಫ್ಯಾಕ್ಟರಿ ನಡೆಸಿದೆ. ಒಳ್ಳೆಯ ಆದಾಯ ಬರುತ್ತಿತ್ತು. ಆದರೆ ಕಾರ್ಮಿಕರ ಸಮಸ್ಯೆ, ಕೆಲಸದ ಒತ್ತಡ, ಆರೋಗ್ಯದ ಸಮಸ್ಯೆಗಳಿಂದಾಗಿ ಕೃಷಿಯ ಕಡೆಗೆ ವಾಲಿದೆ. ಮಾಗಡಿಯ ಕೃಷಿ ವಿಜ್ಞಾನ ಕೇಂದ್ರದವರು ಆಯೋಜಿಸಿದ್ದ “ನೋಡಿ ತಿಳಿ ಮಾಡಿ ಕಲಿ ” ತರಬೇತಿ ಕಾರ್ಯಕ್ರಮದಿಂದ ಬಹಳ ಪ್ರಭಾವಿತನಾದೆ. ಗೊಬ್ಬರ ಬಳಸಿ ಆಹಾರ ಬೆಳೆಯುವ ವಿಧಾನವೇ ಆರೋಗ್ಯ ಹದಗೆಡಲು ಕಾರಣ ಎಂಬುದು ಅರಿವಾಯಿತು. ಸಾವಯವ ಕೃಷಿಯಲ್ಲಿ ಆಸಕ್ತಿ ಮೂಡಿತು.
ನಾನು ಖರೀದಿಸಿದ ನಾಲ್ಕು ಎಕರೆ ಜಮೀನು ಜೊತೆಗೆ ತಂದೆಯವರಿಂದ ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಜಮೀನಿನಲ್ಲಿ ಕೃಷಿ ಜೀವನ ಆರಂಭಿಸಿದೆ. ಜಮೀನಿನಲ್ಲಿ ಮುಳ್ಳುಬೇಲಿ ಇತ್ತು. ಅಲ್ಲಿ ಕೆಲವು ಸಿಲ್ವರ್ ಓಕ್, ತೇಗ, ಮಹಾಗನಿ ಮರಗಳು ಮತ್ತು ಎರಡು ಬೋರ್‌ವೆಲ್‌ಗಳಿದ್ದವು. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಬೆಳೆಗಳ ಮಿಶ್ರಣವು ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಹಕಾರಿ ಎಂದರಿತು “ಅರಣ್ಯ ಆಧಾರಿತ ಸಮಗ್ರ ಸಾವಯವ ಕೃಷಿ” ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ.
ಆರಂಭದಲ್ಲಿ, ಮಿಶ್ರಧಾನ್ಯಗಳನ್ನು ಜಮೀನಿನಲ್ಲಿ ಚೆಲ್ಲಲಾಯಿತು. ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಹೊದಿಕೆ, ಜೀವರಾಶಿಯನ್ನು (ಬಯೋಮಾಸ್) ಮಣ್ಣಿನಲ್ಲಿ ಉಳುಮೆ ಮಾಡುವುದು ಇತ್ಯಾದಿಗಳನ್ನು ಅನುಸರಿಸಲಾಯಿತು. ಆರಂಭದಲ್ಲಿ ಅಲ್ಪಾವಧಿ ಬೆಳೆಗಳಾದ ಹುರಳಿಕಾಯಿ, ಬದನೆ, ಬಟಾಣಿ, ತೊಗರಿ, ಬೆಂಡೆಕಾಯಿ, ಟೊಮೊಟೊ, ಹಸಿರು ಮೆಣಸಿನಕಾಯಿ, ಬಳ್ಳಿ ಬೆಳೆಗಳು ಮತ್ತು ಸೋರೆ,ಹೀರೆಕಾಯಿಗಳಿಂದ ಆದಾಯವನ್ನು ಪಡೆಯಲಾರಂಭಿಸಿದೆ. ಮಧ್ಯಮಾವಧಿ ಬೆಳೆಗಳಾದ ನಿಂಬೆ (100), ಪೇರಲ (50), ಸಪೋಟ (40), ನೆಲ್ಲಿ (40), ಹಲಸು, ಸೀತಾಫಲ, ಹಸಿರು ಸೇಬು, ನೇರಳೆಯ ತಲಾ 30 ಗಿಡಗಳು ಮತ್ತು ಕರಬೇವು, ಕಾಳುಮೆಣಸು, ಏಲಕ್ಕಿ, ನುಗ್ಗೆಕಾಯಿಯ ತಲಾ 50 ಗಿಡಗಳನ್ನೂ ಬೆಳೆಸಿದೆ. ದೀರ್ಘಾವಧಿ ಬೆಳೆಗಳಲ್ಲಿ ಸಿಲ್ವರ್ ಓಕ್ (280), ತೇಗ (120), ಮಹಾಗನಿ (160), ಮಾವು (100), ತೆಂಗು (180), ಆಲ, ಬೇವು, ಹುಣಸೆ, ಅಲಂಜಿಯಮ್, ಫಿಕಸ್ ಜಾತಿಯ ಮರಗಳು, ಬಿದಿರು ಮತ್ತು ಶ್ರೀಗಂಧದ ಮರಗಳು ಇತ್ಯಾದಿಗಳನ್ನು ಒಳಗೊಂಡಿದೆ.
ನನ್ನ ಜಮೀನಿನಲ್ಲಿ ಜಾನುವಾರುಗಳು ಪ್ರಮುಖ ಭಾಗವಾಗಿದೆ. ವೈವಿಧ್ಯಮಯ ಜಾನುವಾರುಗಳಲ್ಲಿ ಇವು ಸೇರಿವೆ: ಹಳ್ಳಿಕಾರ್ ಹಸುಗಳು – 5, ಮಲೆನಾಡು ಗಿಡ್ಡ ಹಸುಗಳು – 5, ಕುರಿ ಮತ್ತು ಮೇಕೆಗಳು – 9, ಕೋಳಿ – 60 (ಟರ್ಕಿ – 10, ಕೋಳಿಗಳು – 6, ಫೈಟರ್ ಕೋಳಿಗಳು – 4, ಕಡಕ್ ನಾಥ್ ಕೋಳಿಗಳು – 10), ಬಾತುಕೋಳಿಗಳು – 9 , ಕಾವಲು ನಾಯಿಗಳು – 4, ಮತ್ತು ಬೆಕ್ಕುಗಳು -4 ಇತ್ಯಾದಿ.
ನನ್ನ ಜಮೀನಿನಲ್ಲಿ ಪರಿಸರ ಸ್ನೇಹಿ ಕೃಷಿ ಪದ್ಧತಿ ಅನುಸರಿಸುತ್ತಿದ್ದೇನೆ. ಸೀಮಿತ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಲು ಹನಿ ನೀರಾವರಿಯನ್ನು ಬಳಸಲಾಗುತ್ತದೆ, ಗೊಬ್ಬರ ಮತ್ತು ಎರೆಹುಳು ಗೊಬ್ಬರವನ್ನು ಜಾನುವಾರು ಮತ್ತು ಸಸ್ಯದ ಅವಶೇಷಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ಇವುಗಳನ್ನು ಜಮೀನಿನಲ್ಲಿ ಮರುಬಳಕೆ ಮಾಡಲಾಗುತ್ತದೆ. ಜಾನುವಾರುಗಳ ಸಗಣಿಯನ್ನು ಬಯೋಡೈಜೆಸ್ಟರ್‌ಗಳನ್ನು ಬಳಸಿಕೊಂಡು ಜೈವಿಕ ಅನಿಲವನ್ನು ಉತ್ಪಾದಿಸಲು ಬಳಸಲಾಗುತ್ತದೆ. ನನ್ನ ಜಮೀನಿನಲ್ಲಿ ಜೇನುಸಾಕಣೆ ಕೂಡ ಮಾಡುತ್ತಿದ್ದೇನೆ.
ಸಾಮೂಹಿಕ ಚಲನೆ
ಆರೋಗ್ಯಕರ ಮತ್ತು ಸುಸ್ಥಿರ ಕೃಷಿ ವಿಧಾನಗಳನ್ನು ಅಭ್ಯಾಸ ಮಾಡುವಲ್ಲಿ ನನ್ನೊಂದಿಗೆ ಹೆಚ್ಚಿನ ರೈತ ಸ್ನೇಹಿತರು ಸೇರಿಕೊಂಡು, ನಾವು “ಸತ್ವ ಆರ್ಗಾನಿಕ್ಸ್” ಎಂಬ 30 ಸದಸ್ಯರ ಗುಂಪನ್ನು ಕಟ್ಟಿಕೊಂಡಿದ್ದೇವೆ. ನಾವು ಸುರಕ್ಷಿತ ಆಹಾರವನ್ನು ಉತ್ಪಾದಿಸುತ್ತಿದ್ದು ವಿವಿಧ ಮಾರುಕಟ್ಟೆಗಳಾದ ರೈತ ಮಾರುಕಟ್ಟೆಗಳು, ಶಾಲೆಗಳಲ್ಲಿ ಮಾರಾಟ ಇತ್ಯಾದಿಗಳನ್ನು ಅನ್ವೇಷಿಸಿದ್ದೇವೆ.
ನಾವು ಕೇಂದ್ರ ಸರ್ಕಾರದ FPOಗಳ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಬೆಂಬಲದೊಂದಿಗೆ “ಸಾವನದುರ್ಗ ರೈತ ಉತ್ಪಾದಕ ಕಂಪನಿ ಲಿಮಿಟೆಡ್” ಎಂಬ ರೈತ ಉತ್ಪಾದಕ ಕಂಪನಿಯನ್ನು ರೂಪಿಸಿಕೊಂಡಿದ್ದೇವೆ. ಸಣ್ಣ ರೈತರ ವ್ಯಾಪಾರ ಒಕ್ಕೂಟ, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY), ಶ್ರೀ ಶ್ರೀ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಟ್ರಸ್ಟ್, ಬೆಂಗಳೂರಿನಂತಹ ಸಂಸ್ಥೆಗಳು ಈ ಉಪಕ್ರಮವನ್ನು ಬೆಂಬಲಿಸಿದವು.
ರೈತ ಉತ್ಪಾದಕ ಕಂಪನಿಯ ಮುಖ್ಯ ಉದ್ದೇಶಗಳು ತೆಂಗು, ಮಾವು ಮತ್ತು ತರಕಾರಿ ಬೆಳೆಗಳ ರೈತರಿಗೆ ತಾಂತ್ರಿಕ ಕೃಷಿ ತರಬೇತಿ ಮತ್ತು ಮಾಹಿತಿ ನೀಡುವುದು, ಸಕಾಲದಲ್ಲಿ ನೆಡುವ ಬೀಜಗಳನ್ನು ಒದಗಿಸುವುದು, ರಸಗೊಬ್ಬರಗಳ ಬಳಕೆ, ಸಾವಯವ ಜೈವಿಕ ಔಷಧಗಳು, ಮಾರುಕಟ್ಟೆಗೆ ಪ್ರವೇಶ, ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು,
ಜಾಗೃತಿ ಮತ್ತು ತರಬೇತಿಗಳಿಂದ, ರೈತರು ಈಗ ಸುರಕ್ಷಿತ ಆಹಾರವನ್ನು ಬೆಳೆಯುತ್ತಿದ್ದಾರೆ. ಮಣ್ಣಿನ ಫಲವತ್ತತೆಯನ್ನು ಸುಧಾರಿಸಿಕೊಂಡು, ತಮ್ಮ ಬೆಳೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡು ಜೀವವೈವಿಧ್ಯತೆಯನ್ನು ಹೆಚ್ಚಿಸಿ ಕೊಂಡಿದ್ದಾರೆ.
ತಿಂಗಳಿಗೆ 10,000 ಆದಾಯ ತರುವಂತಹ 10 ಬೆಳೆಗಳನ್ನು ಬೆಳೆಯಲು ಆಸಕ್ತ ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ. ತೆಂಗಿನ ಮರಗಳ ನಡುವೆ ಅಂತರ ಬೆಳೆಗಳಾಗಿ ನಿಂಬೆ, ನುಗ್ಗೆ, ಕರಬೇವು ಮತ್ತು ಏಲಕ್ಕಿಯಂತಹ ಗಿಡಗಳನ್ನು ಬೆಳೆಸಲಾಗಿದೆ. ಕುರಿ, ಮೇಕೆ, ಹಸು, ಜೇನು, ಮೀನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಮಾವು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಿಂದ ಕನಿಷ್ಠ ರೂ.60 ಸಾವಿರ ಗಳಿಸಲು ಸಹಾಯಕವಾಗಿದೆ.
FPO ನೇರ ಮಾರುಕಟ್ಟೆ ವ್ಯವಸ್ಥೆಯ ಮೂಲಕ ರೈತರಿಗೆ ಸಹಾಯ ಮಾಡುತ್ತಿದೆ. ಅನೇಕ ಮಾರ್ಕೆಟಿಂಗ್ ಹಾದಿಗಳನ್ನು ಅನ್ವೇಷಿಸಲಾಗುತ್ತಿದೆ. ಉದಾಹರಣೆಗೆ, ಗಿರಿನಗರದ ಪೂರ್ಣಪ್ರಮತಿ ಶಾಲಾ ಆವರಣ ಮತ್ತು ಬೆಂಗಳೂರಿನ ಪೂರ್ಣಪ್ರಜ್ಞ ಲೇಔಟ್‌ನಲ್ಲಿ ಪ್ರತಿ ಶನಿವಾರ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ನೇರವಾಗಿ ಸಾವಯವ ಮಳಿಗೆಗಳಿಗೆ ಮಾರಾಟ ಮಾಡಲಾಗುತ್ತಿದೆ.
ಎಫ್‌ಪಿಒ ರೈತರಿಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲು, ಮಾರಾಟ ಮಾಡಲು ಸಹಾಯ ಮಾಡುತ್ತಿದೆ. “ಸಮಗ್ರ ಸಿರಿ” ಬ್ರಾಂಡ್ ಹೆಸರಿನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಧಾನ್ಯಗಳಿಂದ ತಯಾರಿಸಿದ ಮಾಲ್ಟ್, ಉಪ್ಪಿನಕಾಯಿ, ಜೇನುತುಪ್ಪ, A2 ಹಾಲು, ಬೆಣ್ಣೆ, ತುಪ್ಪ ಮತ್ತು ಸಾವಯವ ಕೋಳಿ ಮೊಟ್ಟೆಗಳನ್ನು ಒಳಗೊಂಡಿದೆ.
ವನ ಅಭಿಯಾನ ಕಾರ್ಯಕ್ರಮದ ಜತೆಗೆ ಸಸಿ ನೆಡುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಅದರಂತೆ ಪ್ರತಿ ವರ್ಷ 365 ಹೊಸ ಗಿಡಗಳು, ದಿನಕ್ಕೆ ಒಂದು ಗಿಡ ನಮ್ಮ ತೋಟಕ್ಕೆ ಸೇರ್ಪಡೆಯಾಗುತ್ತಿದೆ.
ಒಟ್ಟಾರೆಯಾಗಿ, ಈ ಉಪಕ್ರಮವು ಗ್ರಾಹಕರಿಗೆ ತಾಜಾ ಮತ್ತು ವಿಷಕಾರಿಯಲ್ಲದ ಸಾವಯವ ತರಕಾರಿಗಳನ್ನು ಸಮಂಜಸವಾದ ಬೆಲೆಯಲ್ಲಿ ವಿತರಿಸಲು ಸಹಾಯ ಮಾಡಿದೆ. ತರಕಾರಿಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ನೀಡುವ ಮೂಲಕ ನಾವು ಸಮಾಜಕ್ಕೆ “ವಿಷ ಮುಕ್ತ ಆಹಾರ” ನೀಡುತ್ತಿದ್ದೇವೆ.
Keshavamurthy
S/o N. Nanjundayya
Ankanpalya, Motagondanahalli panchayat
Soluru Hobli, Magadi Taluk
Ramanagara District – 562127
E-mail: nkeshava42@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೪ ; ಡಿಸಂಬರ್ ೨೦೨೩



