ಬುಂದೇಲ್‌ಖಂಡ್ ಪ್ರದೇಶದ ಟಿಕಮ್‌ಗಢ್ ಜಿಲ್ಲೆಯ ಬುಡಕಟ್ಟು ರೈತರು ತಮ್ಮ ಸಾಂಪ್ರದಾಯಿಕ ಕಿರುಧಾನ್ಯಗಳ ತಳಿಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಗಳಿಸಿದರು. ಈ ಸಾಂಪ್ರದಾಯಿಕ ತಳಿಗಳ ಜರ್ಮ್ಪ್ಲಾಸಂ (ಸಸ್ಯಗಳ ಆನುವಂಶಿಕ ಸಂಪನ್ಮೂಲ)ಗಳನ್ನು ನ್ಯಾಷನಲ್ ಜೀನ್ ಬ್ಯಾಂಕ್‌ನಲ್ಲಿ ಸಂರಕ್ಷಿಸಿಟ್ಟು ಅವುಗಳನ್ನು ಸಸ್ಯ ಸುಧಾರಣಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು. ಹೀಗಾಗಿ, ರೈತರ ಸಾಂಪ್ರದಾಯಿಕ ಸಂರಕ್ಷಣೆಯ ಅಭ್ಯಾಸವು ಭವಿಷ್ಯದಲ್ಲಿ ಅನೇಕ ಉತ್ತಮ ಕಿರುಧಾನ್ಯಗಳನ್ನು ಅಭಿವೃದ್ಧಿಪಡಿಸಲು ದೇಶಕ್ಕೆ ಅಮೂಲ್ಯವಾದ ಕಚ್ಚಾ ವಸ್ತುಗಳನ್ನು ಒದಗಿಸಿತು.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕಿರುಧಾನ್ಯಗಳ ಪ್ರಾಮುಖ್ಯತೆ ಗಣನೀಯವಾಗಿ ಹೆಚ್ಚಾಯಿತು. ಕಿರುಧಾನ್ಯ ಕೃಷಿಯನ್ನು ಸಣ್ಣ ಮತ್ತು ಅತಿಸಣ್ಣ ರೈತರ ಬಾಧ್ಯತೆ ಎಂದು ಪರಿಗಣಿಸಲಾಗಿತ್ತು. ರಸಗೊಬ್ಬರಗಳು, ಕೀಟನಾಶಕಗಳು ಮುಂತಾದ ರಾಸಾಯನಿಕ ಒಳಹರಿವುಗಳಿಗಾಗಿ ಖರ್ಚು ಮಾಡಲು ಸಾಧ್ಯವಾಗದೆ, ಆರ್ಥಿಕ ಅಗತ್ಯಗಳನ್ನು ಪೂರೈಸಲು ಅವರು ಅವುಗಳನ್ನು ಬೆಳೆಸುತ್ತಾರೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ವಾಸ್ತವವಾಗಿ, ಅವರು ಸಾಂಪ್ರದಾಯಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳ ಆಧಾರದ ಮೇಲೆ ಅವುಗಳನ್ನು ಬೆಳೆಸಿದರು.
ಬುಂದೇಲ್‌ಖಂಡ್ ಪ್ರದೇಶವು ಒರಟಾದ ಧಾನ್ಯಗಳು ಮತ್ತು ಕಿರುಧಾನ್ಯಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಉತ್ತಮ ಇತಿಹಾಸವನ್ನು ಹೊಂದಿದೆ. ಅವುಗಳ ಕೃಷಿಗೆ ಸೂಕ್ತವಾದ ವಾತಾವರಣವನ್ನು ಹೊಂದಿರುವುದರ ಜೊತೆಗೆ, ಸ್ಥಳೀಯರು ತಮ್ಮ ಊಟದಲ್ಲಿ ಈ ಧಾನ್ಯಗಳಿಗೆ ಆದ್ಯತೆ ನೀಡಿದ್ದಾರೆ. ಸಮಾರಂಭಗಳು ಮತ್ತು ಹಬ್ಬಗಳ ಜೊತೆಗೆ ವಿವಿಧ ಋತುಗಳಲ್ಲಿ, ಕಿರುಧಾನ್ಯಗಳಿಂದ ತಯಾರಿಸಿದ ವೈವಿಧ್ಯಮಯ ಭಕ್ಷ್ಯಗಳನ್ನು ಇಂದಿಗೂ ಕಾಣಬಹುದು. ಹೀಗಾಗಿ, ಸಾಂಪ್ರದಾಯಿಕ ತಳಿಗಳ ಒರಟು ಧಾನ್ಯಗಳನ್ನು ಸಂರಕ್ಷಿಸಲು ಬುಡಕಟ್ಟು ರೈತರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ.
ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಟಿಕಮ್‌ಗಢ್ ಜಿಲ್ಲೆಗಳ ರೈತರು ಕಳೆದ ಹಲವು ವರ್ಷಗಳಿಂದ ಅನೇಕ ಬಗೆಯ ಕಿರುಧಾನ್ಯಗಳನ್ನು ಸಂರಕ್ಷಿಸುತ್ತಿದ್ದಾರೆ. ಸಾವನ್, ಚೀನಾ, ಸಾಥಿಯಾ, ಫಿಕಾರ್ ಇತ್ಯಾದಿ ಎಂದು ಅವುಗಳನ್ನು ತಮ್ಮ ಸ್ಥಳೀಯ ಹೆಸರುಗಳಿಂದ ಗುರುತಿಸುತ್ತಾರೆ. ರೈತರಿಗೆ ಇವುಗಳ ಭೌತಿಕ ಹಾಗೂ ಸಂತಾನೋತ್ಪತ್ತಿ ಗುಣಲಕ್ಷಣಗಳು ಚೆನ್ನಾಗಿ ಗೊತ್ತು. ಇವುಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಚಾಲ್ತಿಯಲ್ಲಿರುವ ಪುರಾಣಗಳ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಉದಾಹರಣೆಗೆ, ಓರ್ಚಾದ ಪ್ರಸಿದ್ಧ ರಾಮರಾಜ ದೇವಾಲಯ ಮತ್ತು ಜಿಲ್ಲಾ ಕೇಂದ್ರದಲ್ಲಿರುವ ಪ್ರಸಿದ್ಧ ಕುಂದೇಶ್ವರ ದೇವಾಲಯದಂತಹ ಇಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ದೇವರಿಗೆ ಸಲ್ಲಿಸಲಾಗುವ ನೈವೇದ್ಯದಲ್ಲಿ ಈ ಕಿರುಧಾನ್ಯಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ.
ಕೃಷಿ ವಿಜ್ಞಾನ ಕೇಂದ್ರದ ಪ್ರಯತ್ನಗಳು
ಕೃಷಿ ವಿಜ್ಞಾನ ಕೇಂದ್ರ, ಟಿಕಮ್‌ಗಢ್ ಕಳೆದ 8 ವರ್ಷಗಳಿಂದ “ರೈತರ ಹಕ್ಕುಗಳು – ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯಿದೆ 2001” ಎನ್ನುವ ಜಾಗೃತಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯ ಅಡಿಯಲ್ಲಿ, ಜಿಲ್ಲೆಯಲ್ಲಿ ಲಭ್ಯವಿರುವ ಸಾಂಪ್ರದಾಯಿಕ ಬೆಳೆ ಪ್ರಭೇದಗಳನ್ನು ಸಂರಕ್ಷಿಸಲು, ರಾಷ್ಟ್ರೀಯ ಜೀನ್ ಬ್ಯಾಂಕ್‌ನಲ್ಲಿ ಸಸ್ಯಗಳ ಆನುವಂಶಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಸಂರಕ್ಷಿಸಿ ಬೆಳೆಸುತ್ತಿರುವ ರೈತರಿಗೆ ಹಕ್ಕು ಮತ್ತು ಮಾನ್ಯತೆ ನೀಡಲು ಪ್ರಯತ್ನಿಸಲಾಯಿತು.
ಆರಂಭದಲ್ಲಿ, ದೂರದ ಪ್ರದೇಶಗಳಲ್ಲಿ ಬುಡಕಟ್ಟು ರೈತರು ಯಾವ ಬೆಳೆಗಳನ್ನು, ಯಾವ ತಳಿಗಳನ್ನು ಅದರಲ್ಲೂ ವಿಶೇಷವಾಗಿ ಯಾವ ಸಾಂಪ್ರದಾಯಿಕ ತಳಿಗಳನ್ನು ಬೆಳೆಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಮೀಕ್ಷೆಗಳನ್ನು ನಡೆಸಲಾಯಿತು. 2013-14 ರಿಂದ ಪ್ರತಿ ವರ್ಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಇದರಲ್ಲಿ 650 ಕ್ಕೂ ಹೆಚ್ಚು ರೈತರು ಸಂರಕ್ಷಣೆ ಅಂಶಗಳ ಬಗ್ಗೆ ತರಬೇತಿ ಪಡೆದರು. ಜಿಲ್ಲೆಯ ವಿವಿಧ ಅಪರೂಪದ ಬೆಳೆಗಳ ಮತ್ತು ಅಳಿವಿನಂಚಿನಲ್ಲಿರುವ ತಳಿಗಳನ್ನು ಪ್ರದರ್ಶನಗಳ ಮೂಲಕ ಪ್ರಚಾರ ಮಾಡಿ, ಸ್ಥಳೀಯರು ಅವುಗಳ ಸಂರಕ್ಷಣೆಯನ್ನು ಕೈಗೊಳ್ಳುವಂತೆ ಉತ್ತೇಜಿಸಲಾಯಿತು. ಜಾಗೃತಿ ಕಾರ್ಯಕ್ರಮಗಳನ್ನು ಪದೇಪದೇ ಕೈಗೊಂಡದ್ದರಿಂದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ತಳಿಗಳನ್ನು ಗುರುತಿಸಲು ಸಾಧ್ಯವಾಯಿತು. ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಮಸಾಲೆ ಪದಾರ್ಥಗಳು ಮತ್ತು ಧಾನ್ಯಗಳಂತಹ ಇತರ ಬೆಳೆಗಳೊಂದಿಗೆ, 2013-14, 2014-15 ಮತ್ತು 2015-16 ರಲ್ಲಿ ಕ್ರಮವಾಗಿ ಹನ್ನೊಂದು, ಏಳು ಮತ್ತು ಮೂವತ್ತೇಳು ಬಗೆಯ ಹಾರಕದ ತಳಿಗಳನ್ನು ಕೆವಿಕೆ ದತ್ತುಪಡೆದಿದ್ದ ಗ್ರಾಮಗಳ ರೈತರಿಂದ ಸಂಗ್ರಹಿಸಲಾಯಿತು.
ಈ ಗುರುತಿಸಲಾದ ಪ್ರಭೇದಗಳನ್ನು ನವದೆಹಲಿಯ ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ (NBPGR) ನಲ್ಲಿರುವ ರಾಷ್ಟ್ರೀಯ ಜೀನ್ ಬ್ಯಾಂಕ್‌ಗೆ ಕಳುಹಿಸಲಾಯಿತು. NBPGR ತನ್ನ ಪ್ರಾದೇಶಿಕ ಕೇಂದ್ರಗಳ ಜಮೀನುಗಳಲ್ಲಿ ಈ ಆಯ್ದ ಪ್ರಭೇದಗಳ ಇಳುವರಿ ಪ್ರಯೋಗಗಳನ್ನು ನಡೆಸಿತು. DUS (ವಿಶಿಷ್ಟ, ಏಕರೂಪ, ಸ್ಥಿರ) ಪರೀಕ್ಷೆಯನ್ನು ನಡೆಸುವ ಮೂಲಕ ಅವುಗಳ ವಿಶಿಷ್ಟತೆಯನ್ನು ಕಂಡುಹಿಡಿಯಲಾಯಿತು. DUS ಪರೀಕ್ಷೆಯು ಹೊಸದಾಗಿ ಗುರುತಿಸಲ್ಪಟ್ಟ ಪ್ರಭೇದವು ಅದೇ ಜಾತಿಯೊಳಗೆ ಅಸ್ತಿತ್ವದಲ್ಲಿರುವ ಇತರ ಪ್ರಭೇದಗಳಿಗಿಂತ ಭಿನ್ನವಾಗಿದೆಯೇ ಮತ್ತು ವರದಿ ಮಾಡಲಾದ ಗುಣಲಕ್ಷಣಗಳು ಏಕರೂಪವಾಗಿ ಮತ್ತು ಸ್ಥಿರವಾಗಿದೆಯೇ ಎಂಬುದನ್ನು ನಿರ್ಧರಿಸುವ ಒಂದು ಮಾರ್ಗವಾಗಿದೆ. ಮೂರು ವರ್ಷಗಳ ನಂತರ ಹಲವೆಡೆಗಳಲ್ಲಿ ಪ್ರಯೋಗಗಳನ್ನು ನಡೆಸಿದ ಬಳಿಕ, ಟಿಕಮ್‌ಗಢ್ ಜಿಲ್ಲೆಯ 12 ರೈತರಿಂದ ಸಂಗ್ರಹಿಸಲಾದ ಈ ಅಪರೂಪದ ತಳಿಗಳಲ್ಲಿ ಇರುವ ಜೀನ್‌ಗಳು ಬಹಳ ಮುಖ್ಯವಾದದ್ದು ಹಾಗೂ ಉಪಯುಕ್ತವೆಂದು ಕಂಡುಬಂದಿದೆ. ಈ ಪ್ರಭೇದಗಳು ಉತ್ತಮ ಇಳುವರಿ ಸಾಮರ್ಥ್ಯವನ್ನು ಹೊಂದಿರುವುದಲ್ಲದೆ, ಉತ್ತಮ ಕೀಟಬಾಧೆ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ಪ್ರಯೋಗಗಳು ಕಾಡು ಪ್ರಭೇದಗಳು ಸಾಮಾನ್ಯವಾಗಿ ಕೀಟ ರೋಗಭಾದೆಗಳಿಗೆ ನಿರೋಧಕ ಶಕ್ತಿಹೊಂದಿರುತ್ತವೆ ಎಂದು ಸಾಬೀತುಪಡಿಸಿದವು. ಅಲ್ಲದೆ, ಪೌಷ್ಟಿಕಾಂಶದಲ್ಲಿ, ಕಂಡುಬರುವ ಪ್ರೋಟೀನ್‌ಗಳ ಪ್ರಮಾಣ ಮತ್ತು ಗುಣಮಟ್ಟವು ದೇಶದಲ್ಲಿನ ಇತರ ಹಾರಕತಳಿಗಳಿಗಿಂತ ಉತ್ತಮವಾಗಿದೆ. ಈ ಪ್ರಭೇದಗಳಲ್ಲಿನ ನಾರಿನ ಅಂಶವು 11-13 ಗ್ರಾಂ /100 ಗ್ರಾಂರಷ್ಟಿದೆ. ಇದು ಸಂಸ್ಕರಿಸಿದ ಗೋಧಿ ಹಿಟ್ಟು ಅಥವಾ ಅಕ್ಕಿಗಿಂತ (<3 ಗ್ರಾಂ /100 ಗ್ರಾಂ) ಹೆಚ್ಚಿದೆ.
ಈ ರೈತರ ಪರಿಣಾಮಕಾರಿ ಪ್ರಯತ್ನಗಳನ್ನು ಕೃಷಿ ವಿಜ್ಞಾನ ಕೇಂದ್ರವು ರಾಷ್ಟ್ರಮಟ್ಟದಲ್ಲಿ ಪ್ರಚುರಪಡಿಸಿತು. ರೈತರ ಸಾಂಪ್ರದಾಯಿಕ ಸಂರಕ್ಷಣಾ ಅಭ್ಯಾಸಗಳು ಭವಿಷ್ಯದಲ್ಲಿ ಉತ್ತಮ ತಳಿಗಳ ಅಭಿವೃದ್ಧಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ವಿಶೇಷವಾಗಿ, ಇವುಗಳ ಗುಣಮಟ್ಟ ಮತ್ತು ಭವಿಷ್ಯದಲ್ಲಿ ಬೆಳೆ ಸುಧಾರಣಾ ಕಾರ್ಯಕ್ರಮಗಳಲ್ಲಿ ಅವುಗಳ ಉಪಯುಕ್ತತೆಯನ್ನು ಗಮನದಲ್ಲಿಟ್ಟುಕೊಂಡು, ಟೀಕಮ್‌ಗಢ್‌ನ ಈ 12 ಕಿರುಧಾನ್ಯಗಳ ರೈತರನ್ನು ಅಂದಿನ ಮಾನ್ಯ ಕೇಂದ್ರ ಕೃಷಿ ಸಚಿವರಾದ ಶ್ರೀ ರಾಧಾ ಮೋಹನ್ ಸಿಂಗ್ ಅವರು 18 ಏಪ್ರಿಲ್ 2017 ರಂದು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸಿದರು. ಪ್ರಶಸ್ತಿಯಾಗಿ ಪ್ರತಿ ರೈತನಿಗೆ ಗೌರವ ಪತ್ರ ಮತ್ತು ಒಂದು ಲಕ್ಷ ರೂಪಾಯಿ ಗೌರವಧನವನ್ನು ನೀಡಲಾಯಿತು. ಸಚಿವರು ತಮ್ಮ ಭಾಷಣದಲ್ಲಿ, “ಕೃಷಿ ವಿಜ್ಞಾನ ಕೇಂದ್ರ, ಟಿಕಮ್ಗಢ ಮತ್ತು ಸ್ಥಳೀಯ ರೈತರ ಈ ಜಂಟಿ ಪ್ರಯತ್ನವು ಅಮೂಲ್ಯವಾದ ಸಸ್ಯ ಪ್ರಭೇದಗಳ ಸಂರಕ್ಷಣೆಯೊಂದಿಗೆ ಭಾರತೀಯ ಸಾಂಪ್ರದಾಯಿಕ ಜ್ಞಾನದ ಮಹತ್ವವನ್ನು ಸೂಚಿಸುತ್ತದೆ. ಇದನ್ನೊಂದು ಮೈಲಿಗಲ್ಲಾಗಿ ಪರಿಗಣಿಸಬೇಕು,” ಎಂದು ಹೇಳಿದರು.
ಸೋರಿಯಾನ ಗ್ರಾಮದ ರಮಾಬಾಯಿ ಮಾತನಾಡಿ, “ನಮ್ಮ ಸಂಪ್ರದಾಯಕ್ಕೆ ರಾಷ್ಟ್ರಮಟ್ಟದಲ್ಲಿ ಇಷ್ಟು ದೊಡ್ಡ ಪ್ರಶಸ್ತಿ ಸಿಗುತ್ತದೆ ಎಂದು ಕನಸು ಕಂಡಿರಲಿಲ್ಲ,” ಎಂದು ಹೇಳಿದಳು.
ಸಾಮಾನ್ಯವಾಗಿ ಕಿರುಧಾನ್ಯಗಳನ್ನು ʼಒರಟುʼ ಧಾನ್ಯಗಳು ಎಂದು ಹೇಳಲಾದರೂ ಕೂಡ ಅವುಗಳಲ್ಲಿನ ಪೌಷ್ಟಿಕಾಂಶ, ಕಡಿಮೆ ಅವಧಿಯಲ್ಲಿ ಬೆಳೆಯುವ ಗುಣ, ದೀರ್ಘಾವಧಿ ಶೇಖರಣಾ ಸಾಮರ್ಥ್ಯ ಇವೆಲ್ಲವೂ ಭಾರತಕ್ಕೆ ಇದನ್ನೊಂದು ಸೂಕ್ತ ಆಯ್ಕೆಯನ್ನಾಗಿಸಿದೆ. ಬುಂದೇಲಖಂಡದ ಈ ರೈತರು ಕಿರುಧಾನ್ಯಗಳ ಸುಧಾರಣೆಗೆ ಅಭಿವೃದ್ಧಿ ವಿಧಾನಗಳ ಬಾಗಿಲನ್ನು ತೆರೆದಿದ್ದಾರೆ. ಜೊತೆಗೆ ಕಿರುಧಾನ್ಯಗಳ ಕೃಷಿಯಲ್ಲಿ ಹೆಚ್ಚು ಮಂದಿ ರೈತರು ತೊಡಗಿಕೊಳ್ಳುವಂತೆ ಮಾಡಿದೆ. ಉತ್ಪಾದನೆ ಹೆಚ್ಚಿದಂತೆ, ಗ್ರಾಹಕರು ಹೆಚ್ಚಾಗಿದ್ದಾರೆ. ಈ ರೀತಿ ಸಂಪ್ರದಾಯಕ್ಕಾಗಿ ಬೆಳೆಯುತ್ತಿದ್ದ ಹಾರಕ ಧಾನ್ಯವು ಈಗ ಆದಾಯದ ಮೂಲವಾಗಿ ಬದಲಾಗಿದೆ.
R.K. Prajapati
Scientist (Plant Pathology)
Krishi Vigyan Kendra, Tikamgarh,
M.P.-472001, India
E-mail: rkiipr@yahoo.com
B.S. Kirar
Principal Scientist and Head
Krishi Vigyan KendrA, Tikamgarh,
M.P.-472001, India
E-mail: kvktikamgarh@rediffmail.com
Yogranjan Singh
Scientist (Biotechnogy)
College of Agriculture, Tikamgarh,
M.P.-472001, India
E-mail: yogranjan@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೧ ; ಮಾರ್ಚ್ ೨೦೨೩



