ನೀಲಗಿರಿ ಜೀವಗೋಳ ಮೀಸಲು ಪ್ರದೇಶದಲ್ಲಿನ (ಬಯೋಸ್ಪಿಯರ್ ರಿಸರ್ವ್ ಏರಿಯಾ) ಸ್ಥಳೀಯ ಸಮುದಾಯಗಳು ತಮ್ಮ ಜೀವನೋಪಾಯದ ಭದ್ರತೆಗಾಗಿ ರೈತ ಉತ್ಪಾದಕ ಕಂಪನಿಗಳನ್ನು ಕಟ್ಟಿಕೊಂಡಿದ್ದಾರೆ. ಕಂಪನಿಯ ಸದಸ್ಯತ್ವದಲ್ಲಿನ ಹೆಚ್ಚಳ ಮತ್ತು ವ್ಯಾಪಾರದ ಬೆಳವಣಿಗೆಯು ಸ್ಥಳೀಯ ಸಮುದಾಯಗಳಿಗೆ ಸುಸ್ಥಿರ ಹಾಗೂ ಉತ್ತಮ ಜೀವನೋಪಾಯದ ಆಯ್ಕೆಗಳನ್ನು ಒದಗಿಸುವಲ್ಲಿ ಈ ಮಾದರಿಯು ಯಶಸ್ವಿಯಾಗಿದೆ ಎನ್ನುವುದನ್ನು ತೋರುತ್ತದೆ.
ನೀಲಗಿರಿ ಬಯೋಸ್ಫಿಯರ್ ರಿಸರ್ವ್ (NBR) ನ ಸ್ಥಳೀಯ ಸಮುದಾಯಗಳು ಕಾಫಿ, ಮೆಣಸು, ರೇಷ್ಮೆ ಹತ್ತಿ, ಸಿರಿಧಾನ್ಯಗಳು, ಬೇಳೆಕಾಳುಗಳು, ಧಾನ್ಯಗಳು, ಮಸಾಲೆಗಳು ಮತ್ತು ಹಣ್ಣುಗಳನ್ನು ಬೆಳೆಯುತ್ತವೆ. ಇದರೊಂದಿಗೆ ಅವರು ಮೊದಲಿನಿಂದಲೂ ಕಾಡಿನಿಂದ ಕಾಲಕಾಲಕ್ಕೆ ಸಿಗುವ ಜೇನು, ನೆಲ್ಲಿಕಾಯಿ, ಸೀಗೆಕಾಯಿ, ಅಂಟುವಾಳ, ಹಣ್ಣುಗಳು, ತಾಳೆ (ಫೀನಿಕ್ಸ್) ಎಲೆಗಳನ್ನು ಸಂಗ್ರಹಿಸುತ್ತಾರೆ. ಈ ಸಮುದಾಯಗಳು ತಾವು ಕಾಡಿನಿಂದ ಸಂಗ್ರಹಿಸಿ ತಂದ ಉತ್ಪನ್ನಗಳ ಮಾರಾಟದಲ್ಲಿ ನ್ಯಾಯಯುತ ಬೆಲೆ ಸಿಕ್ಕದಿರುವುದು, ಮಾರಕಟ್ಟೆ ಏರಿಳಿತಗಳು, ದಲ್ಲಾಳಿಗಳ ಶೋಷಣೆ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಆದಿಮಲೈ ಪಳಂಗುಡಿಯಿನಾರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (APPCL) ಹುಟ್ಟಿಕೊಂಡಿತು. ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸುವುದು, ಸುಸ್ಥಿರ ಮಾರುಕಟ್ಟೆ ಒದಗಿಸುವುದು ಮತ್ತು ಬೆಲೆ ಏರಿಳಿತದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
ಆರಂಭ
ಆದಿಮಲೈನ ಹಿಂದಿನ ಪ್ರೇರಕ ಶಕ್ತಿಯಾದ ಕೀಸ್ಟೋನ್ ಫೌಂಡೇಶನ್, ಗ್ರಾಮ ಮಟ್ಟದಲ್ಲಿ ಸಮುದಾಯಗಳು ಸಂಗ್ರಹಿಸಿದ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಳಕ್ಕೆ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಇದನ್ನು ಆರಂಭಿಸಿತು. 2004-05ರಲ್ಲಿ ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನಾದ್ಯಂತ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಗ್ರಾಮವೊಂದನ್ನು ಕೇಂದ್ರವಾಗಿರಿಸಿಕೊಂಡು ಉಳಿದ ಗ್ರಾಮಗಳಿಗೆ ಅದರ ಮೂಲಕ ಸೇವೆಯನ್ನು ನೀಡಲಾಯಿತು.
ಕಾಲಕ್ರಮೇಣ, ಈ ಸಂಪನ್ಮೂಲ ಕೇಂದ್ರಗಳು NTFP ಗಳು ಮತ್ತು ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ಪ್ರಮುಖ ಚಟುವಟಿಕೆಗಳನ್ನು ಕೈಗೊಂಡಿದೆ. ಕೀಸ್ಟೋನ್‌ನ ಜೀವನೋಪಾಯದ ಮಧ್ಯಸ್ಥಿಕೆಗಳ ಮೂಲಕ ಉತ್ತೇಜಿಸಲಾದ ಚಟುವಟಿಕೆಗಳು ಸಾವಯವ ಹಾಗೂ ಸುಸ್ಥಿರವಾಗಿ ಕೊಯ್ಲು ಮಾಡಿದ ಉತ್ಪನ್ನಗಳಿಗೆ ಕಾರಣವಾಯಿತು. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು ಮೌಲ್ಯವರ್ಧನೆ ಮಾಡಿ ಸ್ಥಳೀಯವಾಗಿ ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಲಾಯಿತು. ಈ ಕೇಂದ್ರಗಳಲ್ಲಿ ಸಮುದಾಯ ಸದಸ್ಯತ್ವವನ್ನು ಹೊಂದಲು ಒತ್ತುನೀಡಲಾಯಿತು. ಇದರಿಂದ ಅನೇಕ ಕುಟುಂಬಗಳ ಉತ್ಪನ್ನಗಳನ್ನು ಒಗ್ಗೂಡಿಸುವುದು ಸಾಧ್ಯವಾಯಿತು. ಆಯ್ದ ಅದರಲ್ಲೂ ಮಹಿಳೆಯರಿಗೆ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯಲ್ಲಿ ತರಬೇತಿ ನೀಡಲಾಯಿತು.
ಕಾಲಕ್ರಮೇಣ ಕೇಂದ್ರಗಳ ಪಾತ್ರವು ವೈವಿಧ್ಯಮಯವಾಯಿತು. ಅವು ಪ್ರಾಥಮಿಕವಾಗಿ ಉತ್ಪಾದನಾ ಕೇಂದ್ರವಾಗಿ ಮಾತ್ರ ಕಾರ್ಯನಿರ್ವಹಿಸಲು ಆರಂಭಿಸಿತು. ಅದರೊಂದಿಗೆ ಈ ಕೆಳಗಿನವುಗಳನ್ನು ಮಾಡಲಾರಂಭಿಸಿತು
- ಅರಣ್ಯಗಳು, ಭೂಮಿ, ವನ್ಯಜೀವಿಗಳು ಮತ್ತು ನೀರಿನ ಬಗ್ಗೆ ಮಾಹಿತಿ ಮತ್ತು ತಿಳುವಳಿಕೆ ನೀಡುವ ಸಂಪನ್ಮೂಲ ಕೇಂದ್ರವಾಯಿತು.
- ಸೂಕ್ತ ಕೌಶಲಗಳು ಮತ್ತು ತಂತ್ರಜ್ಞಾನವನ್ನು ಕಲಿಯುವ ಸ್ಥಳವಾಯಿತು.
- ಮಕ್ಕಳಿಗೆ ಪರಿಸರ ಶಿಕ್ಷಣ ನೀಡುವ ಮತ್ತು ಕಾರ್ಯಕ್ರಮ ನಡೆಸುವ ಸ್ಥಳವಾಯಿತು
- ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುವ ಕೇಂದ್ರ
- ಆದಿವಾಸಿಗಳು ಮತ್ತು ಅರಣ್ಯಗಳ ಬಗೆಗಿನ ಪ್ರಸ್ತುತ ಕಾನೂನುಗಳು ಹಕ್ಕುಗಳ ಕುರಿತು ತಿಳಿವಳಿಕೆ ನೀಡುವ ಸ್ಥಳ
2013 ರ ಹೊತ್ತಿಗೆ, ಈ ಎಲ್ಲಾ ಘಟಕಗಳನ್ನು ಒಗ್ಗೂಡಿಸಿ ಸ್ವತಂತ್ರ ಉತ್ಪಾದಕ ಕಂಪನಿಯಾಗಿ ನೋಂದಾಯಿಸಲಾಯಿತು. ಉತ್ಪಾದನಾ ಕೇಂದ್ರಗಳನ್ನು ಆದಿಮಲೈ ಪಳಂಗುಡಿಯಿನಾರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಅಡಿಯಲ್ಲಿ ನೋಂದಾಯಿಸಲಾಗಿದೆ.
ಆದಿಮಲೈ ಪಳಂಗುಡಿಯಿನಾರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (APPCL) ಸ್ಥಳೀಯ ಸಮುದಾಯಗಳ ಒಡೆತನದ ಕಂಪನಿಯಾಗಿದ್ದು, ಸುಮಾರು 147 ಹಳ್ಳಿಗಳಲ್ಲಿ ಹರಡಿಕೊಂಡಿದೆ. ರಾಷ್ಟ್ರ ಮಟ್ಟದಲ್ಲಿ ಈ ಮಾದರಿಯ ಮೊದಲ ಕಂಪನಿಯಾಗಿದೆ. ಉತ್ಪಾದಕ ಸಮೂಹವನ್ನು 3ನೇ ಏಪ್ರಿಲ್ 2013 ರಂದು 1956 ರ ಭಾರತೀಯ ಕಂಪನಿಗಳ ಕಾಯಿದೆ ಅಡಿಯಲ್ಲಿ ಆದಿಮಲೈ ಪಳಂಗುಡಿಯಿನಾರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎಂದು ನೋಂದಾಯಿಸಲಾಗಿದೆ. APPCL ಅನ್ನು ಕೀಸ್ಟೋನ್ ಫೌಂಡೇಶನ್ (www. keystone-foundation.org) ಕೂಸು. ಸಾಂಪ್ರದಾಯಿಕ ಸಾವಯವ ಆಹಾರ ಕೃಷಿ, ಕರಕುಶಲ, ಜಾನುವಾರು ಸಾಕಣೆ, ಅರಣ್ಯ ಉತ್ಪನ್ನಗಳ ಸುಸ್ಥಿರ ಕೊಯ್ಲು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನು ಉತ್ತೇಜಿಸುವ ಮೂಲಕ ಸ್ಥಳೀಯ ಸಮುದಾಯಗಳ ಜೀವನೋಪಾಯಕ್ಕೆ ಆಧಾರ ಒದಗಿಸಲು 2013 ರಲ್ಲಿ ಪ್ರಾರಂಭಿಸಲಾಯಿತು. ಆ ಮೂಲಕ ಸಮುದಾಯಗಳ ಹಾಗೂ ಭೂಮಿಯ ಆರೋಗ್ಯವನ್ನು ಸಂರಕ್ಷಿಸಲಾಗಿದೆ.
ಆದಿಮಲೈನ ದೃಷ್ಟಿಕೋನದ ಮುಖ್ಯ ಅಂಶವೆಂದರೆ ವ್ಯಾಪಾರ ನಿರ್ವಹಣೆ ಪದ್ಧತಿಗಳು ಮತ್ತು ಅಂಚಿನಲ್ಲಿರುವ ಸ್ಥಳೀಯ ಸಮುದಾಯಗಳ ಅಗತ್ಯಗಳ ನಡುವೆ ಸೇತುವೆ ನಿರ್ಮಿಸುವುದು. ಉದ್ಯಮವು ಗುಣಮಟ್ಟ, ಪರಿಸರ ಸ್ನೇಹಿ ಹಾಗೂ ನ್ಯಾಯಯುತ ಬೆಲೆ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದು, ಮಧ್ಯವರ್ತಿಗಳ ಶೋಷಣೆಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಆದಿಮಲೈ ಪ್ರಸ್ತುತ 1809 ಷೇರುದಾರರನ್ನು ಹೊಂದಿದೆ. ಅವರೆಲ್ಲರೂ ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನಲ್ಲಿರುವ ಸ್ಥಳೀಯ ಸಮುದಾಯಗಳಿಗೆ ಸೇರಿದವರು. ಕೆಳಗಿನ ಕೋಷ್ಟಕವು ವಿವಿಧ ಪ್ರದೇಶಗಳಲ್ಲಿನ ಷೇರುದಾರರ ವಿವರವನ್ನು ಒಳಗೊಂಡಿದೆ.
ಸ್ಥಳೀಯ ಸಮುದಾಯಗಳ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ FPO ರೂಪುಗೊಂಡಿತು. ಸಮುದಾಯದ ಸದಸ್ಯರಿಂದ ಆಯ್ಕೆಯಾದ ನಿರ್ದೇಶಕರ ಮಂಡಳಿಯೊಂದಿಗೆ ಪ್ರಜಾಪ್ರಭುತ್ವ ಮಾದರಿಯ ಆಡಳಿತದಲ್ಲಿ, FPO ಚಟುವಟಿಕೆಗಳು ಸಮುದಾಯದ ಆಸಕ್ತಿಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳುತ್ತದೆ. ಮಾಲೀಕತ್ವ ಮತ್ತು ಒಳಗೊಳ್ಳುವಿಕೆಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.
ಪ್ರಮುಖ ಲಾಭಗಳು
ಆದಿಮಲೈ ವಿವಿಧ ಉಪಕ್ರಮಗಳ ಮೂಲಕ ಸ್ಥಳೀಯ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತದೆ. ಪ್ರಮುಖ ಲಾಭಗಳು ಹೀಗಿವೆ:
ಆದಿಮಲೈ ಪ್ರಮುಖ ಅರಣ್ಯ ಉತ್ಪನ್ನಗಳಾದ ಜೇನುತುಪ್ಪ, ಮೇಣ, ಸೀಗೆಕಾಯಿ, ನೆಲ್ಲಿ, ಅಂಟುವಾಳ, ನೇರಳೆ, ಅಂಜೂರದ ಹಣ್ಣುಗಳು ಮತ್ತು ಅಳಲೆಕಾಯಿ, ಹಾಗೆಯೇ ಕಾಫಿ, ಬೂರುಗ ಹತ್ತಿಮರ, ಸಿರಿಧಾನ್ಯಗಳು ಮತ್ತು ಮೆಣಸು ಮುಂತಾದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುತ್ತದೆ. ಸ್ಥಳೀಯ ವ್ಯಾಪಾರಿಗಳಿಗಿಂತ ಸಮುದಾಯದ ಸದಸ್ಯರಿಗೆ ಹೆಚ್ಚಿನ ಬೆಲೆ ಸಿಗುವಂತೆ ಸಂಸ್ಥೆಯು ನಿಗಾವಹಿಸುತ್ತದೆ. ಉದಾಹರಣೆಗೆ ಸ್ಥಳೀಯ ವ್ಯಾಪಾರಿಗಳು ಒಂದು ಕೆಜಿ ಕಾಫಿಗೆ ರೂ. 100 – ರೂ. 110 ನೀಡುತ್ತಿದ್ದರೆ ಆದಿಮಲೈ ಕೆಜಿಗೆ ರೂ. 190 ಪಡೆಯುತ್ತಿದೆ.
ಆದಿಮಲೈ ಪ್ರಮಾಣವನ್ನು ನಿಖರವಾಗಿ ಅಳೆಯಲು, ತೂಕ ಹಾಕುವಲ್ಲಿ ಆಗುವ ವ್ಯತ್ಯಾಸಗಳನ್ನು ತಪ್ಪಿಸಲು ಎಲೆಕ್ಟ್ರಾನಿಕ್ ತೂಕ ಯಂತ್ರಗಳನ್ನು ಬಳಸುತ್ತಿದೆ. ಈ ಪದ್ಧತಿಯು ಸಮುದಾಯದ ಸದಸ್ಯರಿಗೆ ವ್ಯಾಪಾರ ವಹಿವಾಟುಗಳಲ್ಲಿನ ಆಧುನಿಕ ವ್ಯವಸ್ಥೆಗಳ ಪರಿಚಯ ಮಾಡಿಕೊಡುತ್ತದೆ.
ಸೀಗೆಕಾಯಿ, ಮೇಣ, ಅಂಜೂರ, ಅಳಲೆಕಾಯಿ, ಅಂಟುವಾಳ ಇತ್ಯಾದಿ ಅರಣ್ಯ ಉತ್ಪನ್ನಗಳಿಗೆ ಇದು ಮಾರುಕಟ್ಟೆಯನ್ನು ಒದಗಿಸುತ್ತದೆ. ಇವುಗಳಿಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿದಾರರು ಇಲ್ಲದಿರಬಹುದು. ಆದಿಮಲೈ ಜೇನಿನಂತಹ ಕೆಲವು ಉತ್ಪನ್ನಗಳಿಗೆ ಮಾರುಕಟ್ಟೆಗಿಂತ ದುಪ್ಪಟ್ಟು ದರವನ್ನು ನೀಡುತ್ತದೆ. ಜೇನು ಸಂಗ್ರಹಣೆಯಲ್ಲಿರುವ ಅಪಾಯಗಳನ್ನು ಮನಗಂಡು ಜೇನುಸಂಗ್ರಹಕಾರರಿಗೆ ಆದಿಮಲೈ ರೂ. 1ಲಕ್ಷದಷ್ಟು ಅಪಘಾತ ವಿಮೆಯನ್ನು ಒದಗಿಸಿದೆ. ವಿಮಾರಕ್ಷಣೆಯು ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಬೆಂಬಲವನ್ನು ನೀಡುತ್ತದೆ.
ಕೋಷ್ಟಕ 1: ಷೇರುದಾರರ ವಿತರಣೆ
| ಪ್ರದೇಶ | ಒಟ್ಟು ಸದಸ್ಯರು | ಪುರುಷರು | ಮಹಿಳೆಯರು |
| ಕೋನವಕ್ಕರೈ | 223 | 108 | 115 |
| ಅರಕ್ಕೋಡ್ | 471 | 242 | 229 |
| ಕುನ್ನೂರ್ | 282 | 141 | 141 |
| ಪಿಲ್ಲೂರ್ | 182 | 79 | 103 |
| ಸಿಗೂರ್ | 2 | 1 | 1 |
| ಹಸನೂರ್ | 649 | 363 | 286 |
| ಒಟ್ಟು | 1809 | 875 | 934 |
ಆದಿಮಲೈ ಕೀಸ್ಟೋನ್ ಫೌಂಡೇಶನ್‌ನೊಂದಿಗೆ ಸೇರಿ ಅರಣ್ಯ ಉತ್ಪನ್ನಗಳಿಗೆ ಸುಸ್ಥಿರ ಕೊಯ್ಲು ತಂತ್ರಗಳ ಕುರಿತು ಸಮುದಾಯದ ಸದಸ್ಯರಿಗೆ ತರಬೇತಿ ನೀಡುತ್ತಾರೆ. ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಈ ಉಪಕ್ರಮವು ನಿರ್ಣಾಯಕವಾಗಿದೆ.
ಆದಿಮಲೈ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಾರೆ. ಸಹಭಾಗಿತ್ವ ಖಾತರಿ ವ್ಯವಸ್ಥೆಯ (PGS) ಭಾಗವಾಗಿ ಗುಂಪುಗಳನ್ನು ರೂಪಿಸಿಕೊಳ್ಳಲು ಸಂಸ್ಥೆಯು ರೈತರಿಗೆ ಬೆಂಬಲ ನೀಡುತ್ತದೆ. ಸಮರ್ಥನೀಯವಾದ ಸಾವಯವ ಕೃಷಿ ಪದ್ಧತಿಗಳನ್ನು ಪೋಷಿಸುತ್ತದೆ.
ಸವಾಲುಗಳು ಮತ್ತು ಸಾಧನೆಗಳು
ಆರಂಭಿಕ ಹಂತದಲ್ಲಿ ಆದಿಮಲೈ ಹಲವಾರು ಸವಾಲುಗಳನ್ನು ಎದುರಿಸಿತು. ಕಾರ್ಯಸಾಧುವಾದ ಮಾರುಕಟ್ಟೆಯನ್ನು ಸ್ಥಾಪಿಸುವುದು, ಬೇಗ ಹಾಳಾಗುವ ವಸ್ತುಗಳನ್ನು ಗಣನೀಯವಾಗಿ ಪೂರೈಸುವುದು, ಬೆಲೆಗಳ ಏರಿಳಿತವನ್ನು ನಿಭಾಯಿಸುವುದು, ಬ್ರ್ಯಾಂಡ್ ನಿರ್ಮಾಣ ಮಾಡುವುದು ಈ ರೀತಿಯ ಹಲವು ಅಡಚಣೆಗಳನ್ನು ಎದುರಿಸಬೇಕಾಯಿತು. ಪ್ರಸ್ತುತದಲ್ಲಿನ ಅಸಮರ್ಪಕ ಸಂಪರ್ಕ ಮೂಲಸೌಕರ್ಯಗಳಿಂದಾಗಿ ಹಳ್ಳಿಗಳನ್ನು ಸಂಪರ್ಕಿಸುವ ವ್ಯವಸ್ಥೆಗಳು ಸೀಮಿತವಾಗಿರುವುದು ಮಹತ್ವದ ಸವಾಲನ್ನು ಒಡ್ಡುತ್ತದೆ.
ಆದಿಮಲೈನ ಕಾರ್ಯಾಚರಣೆಗಳ ಮುಖ್ಯವಾದ ಅಂಶ ಅದರ ಸಂಗ್ರಹಣಾ ತಂತ್ರ. ಅದು ಮುಖ್ಯವಾಗಿ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ (PVTG) ಉತ್ಪಾದಕರ ಮೇಲೆ ಗಮನಕೇಂದ್ರೀಕರಿಸುತ್ತದೆ. ಈ ಸಮುದಾಯಗಳೊಂದಿಗಿನ ನೇರ ಹಾಗೂ ನ್ಯಾಯಯುತ ಸಂಬಂಧವು ಸ್ಥಳೀಯ ಮಾರುಕಟ್ಟೆಗಿಂತ ಹೆಚ್ಚಿನ ದರ ನೀಡುವಲ್ಲಿ ಪ್ರತಿಬಿಂಬಿತವಾಗಿದೆ. ಸಾಮಾಜಿಕ ಸಮಾನತೆ ಮತ್ತು ಗುಣಮಟ್ಟದ ಬಗೆಗಿನ ಆದಿಮಲೈನ ಬದ್ಧತೆಯನ್ನು ಎತ್ತಿತೋರುತ್ತದೆ.
ಆದಿಮಲೈ ಸುಸ್ಥಿರತೆ ಮತ್ತು ಸಾವಯವ ಪದ್ಧತಿಗಳ ಮೇಲೆ ಒತ್ತುನೀಡುತ್ತದೆ. ಅವರ ಸಹಭಾಗಿತ್ವ ಖಾತ್ರಿ ವ್ಯವಸ್ಥೆ (PGS) ಇದಕ್ಕೆ ಪುರಾವೆಯಾಗಿದೆ. ಸಂಸ್ಥೆಯು ಉತ್ಪಾದನೆಯ ಪ್ರತಿಯೊಂದು ಹಂತವನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ನೆಡುವಿಕೆಯಿಂದ ಕೊಯ್ಲಿನವರೆಗೆ, ಸಾವಯವ ಸಮಗ್ರತೆ ಮತ್ತು ಸುಸ್ಥಿರ ಕೊಯ್ಲಿನಂತಹ ಮೌಲ್ಯಗಳೊಂದಿಗೆ ಸಂಯೋಜಿಸುತ್ತದೆ.
ಸಂಗ್ರಹಣೆ, ಉತ್ಪಾದನೆ ಮತ್ತು ಪ್ಯಾಕಿಂಗ್ ಹಂತಗಳಲ್ಲಿ ನಡೆಸಲಾಗುವ ಈ ರೀತಿಯ ಕಟ್ಟುನಿಟ್ಟಾದ ಗುಣಮಟ್ಟದ ಪರಿಶೀಲನೆಗಳು ಆದಿಮಲೈನ ಕಾರ್ಯಾಚರಣೆಯ ಅವಿಭಾಜ್ಯ ಅಂಗವಾಗಿದೆ. ಈ ರೀತಿಯ ಕಟ್ಟುನಿಟ್ಟಾದ ಪರಿಶೀಲನೆಯಿಂದಾಗಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದ್ದು ಗ್ರಾಹಕರ ಹಿತಾಸಕ್ತಿಯನ್ನು ಮತ್ತು ಆದಿಮಲೈನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ.
ಫೋಟೋ: ಪೊರಕೆ ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರ ಗುಂಪು
ಪರಿಣಾಮ
ಆದಿಮಲೈ ಕಾಲಾಂತರದಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದೆ. 15 ಸದಸ್ಯರೊಂದಿಗೆ ಆರಂಭವಾದದ್ದು 1809 ಷೇರುದಾರರಿಗೆ ವಿಸ್ತರಿಸಿದೆ. ಈ ಬೆಳವಣಿಗೆಯು ನೀಲಗಿರಿ ಜೀವಗೋಳದ ಸ್ಥಳೀಯ ಸಮುದಾಯಗಳಿಗೆ ಸಮರ್ಥನೀಯ ಮತ್ತು ನ್ಯಾಯಯುತ ಜೀವನೋಪಾಯದ ಆಯ್ಕೆಗಳನ್ನು ಒದಗಿಸುವಲ್ಲಿ ಯಶಸ್ವಿಯಾದ ಮಾದರಿಯನ್ನು ಪ್ರತಿಬಿಂಬಿಸುತ್ತದೆ.
ಆದಿಮಲೈ ತನ್ನ ಉತ್ಪನ್ನಗಳನ್ನು ದೇಶದಾದ್ಯಂತ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳಿಗೆ ಯಶಸ್ವಿಯಾಗಿ ಮಾರಾಟ ಮಾಡಿದ್ದು, ಗಣನೀಯ ಬೆಳವಣಿಗೆಯನ್ನು ಪ್ರದರ್ಶಿಸುತ್ತಿದೆ. 2023 ರಲ್ಲಿ ಷೇರುದಾರರ ಸಂಖ್ಯೆಯು 1609 ರಿಂದ 1809 ಕ್ಕೆ ಏರಿದ್ದು, ಇದು ವಿಸ್ತರಣೆಯ ವೇಗವನ್ನು ತೋರುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು ರೂ. 1.2 ಕೋಟಿಯಷ್ಟು ಗಮನಾರ್ಹ ವಹಿವಾಟನ್ನು ನಡೆಸಿದೆ. ಈ ಲಾಭವನ್ನು ಸ್ಥಳೀಯ ಉತ್ಪಾದಕರಿಗೆ ವಿತರಿಸಲಾಗುತ್ತದೆ.
2022-23 ರ ಆರ್ಥಿಕ ವರ್ಷದಲ್ಲಿ, ಆದಿಮಲೈ ಮಹಿಳೆಯರಿಗೆ 5,115 ಉತ್ಪಾದಕ ಕೆಲಸದ ದಿನಗಳನ್ನು ಸೃಷ್ಟಿಸಿತು. ಸರಿಸುಮಾರು 135 ಹಳ್ಳಿಗಳಲ್ಲಿ 2,200 ಸ್ಥಳೀಯ ಕುಟುಂಬಗಳನ್ನು ತಲುಪಿತು. ಅದೇ ವರ್ಷ, ಕಂಪನಿಯು ತಮ್ಮ ಉತ್ಪನ್ನಗಳನ್ನು ಪೂರೈಸಿದ ಸಮುದಾಯದ ಸದಸ್ಯರಿಗೆ ರೂ. 2.25 ಲಕ್ಷ ಬೋನಸ್ ವಿತರಿಸಿತು.
ಸಮುದಾಯದೆಡೆಗಿನ ಸಂಸ್ಥೆಯ ಬದ್ಧತೆಯನ್ನು ಗುರುತಿಸಿದ UNDP 2021 ರಲ್ಲಿ ಪ್ರತಿಷ್ಠಿತ ಈಕ್ವೇಟರ್ ಪ್ರಶಸ್ತಿಯನ್ನು ನೀಡಿತು. ಇದು ಸಂಸ್ಥೆಗೆ ಇನ್ನಷ್ಟು ಕೆಲಸ ಮಾಡಲು ಪ್ರೋತ್ಸಾಹ ನೀಡಿತು.
ಆದಿಮಲೈನ ಭವಿಷ್ಯವು ಸ್ಥಳೀಯ ಸಮುದಾಯಗಳ ಪೋಷಣ ಸಮರ್ಥ್ಯದೊಂದಿಗೆ ಸಂಕೀರ್ಣ ಸಂಬಂಧ ಹೊಂದಿದೆ. ಸಮುದಾಯದ ಉನ್ನತಿಗೆ ಮೀಸಲಾಗಿರುವ ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸಲು ಸಂಸ್ಥೆ ಬದ್ಧವಾಗಿದೆ. ಸಾವಯವ ಮತ್ತು ಸುಸ್ಥಿರ ಕೊಯ್ಲು ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಲಾಗುತ್ತದೆ. ಸ್ವಾಯತ್ತತೆಯ ಮನೋಭಾವವನ್ನು ಬೆಳೆಸುವ ಸಂದರ್ಭದಲ್ಲಿ ಸಮುದಾಯದ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಕಂಪನಿಯು ಹೊಂದಿದೆ.
Jestin Pauls
Aadhimalai Pazhangudiyinar Producer
Company Ltd,
41/111E, Groves Hill Road, Kotagiri 643217
E-mail: ceo@aadhimalai.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೪ ; ಡಿಸಂಬರ್ ೨೦೨೩



