ಮಹಿಳಾ ನೇತೃತ್ವದ ರೈತ ಕ್ಷೇತ್ರ ಶಾಲೆಗಳು


ಒರಿಸ್ಸಾದ ಕಲಾಮುಂಡಾವು ಒಂದು ಸಣ್ಣ ಹೆಜ್ಜೆಯೊಂದಿಗೆ ಕೃಷಿ ಪರಿಸರ ಕೃಷಿಯತ್ತ ಹೊರಳಿತು. ಅನೇಕ ಏಜೆನ್ಸಿಗಳ ಬೆಂಬಲದೊಂದಿಗೆ, ಮಹಿಳಾ ರೈತರು ನೈಸರ್ಗಿಕ ಕೃಷಿಯ ತಂತ್ರಗಳನ್ನು ಕಲಿತರು ಮತ್ತು ಸುರಕ್ಷಿತ ಆಹಾರ ಉತ್ಪಾದನೆಯತ್ತ ಪರಿವರ್ತನೆಗೊಂಡರು. ಬದಲಾವಣೆಗೆ ರೈತ ಕ್ಷೇತ್ರ ಶಾಲೆಯೇ ಮೆಟ್ಟಿಲು.


ಬರ ಮತ್ತು ಹಠಾತ್ ಪ್ರವಾಹಗಳು ಒರಿಸ್ಸಾದ ಕಲಾಮುಂಡಾದಲ್ಲಿ ವರ್ಷ ಬಿಟ್ಟು ವರ್ಷ ಸಂಭವಿಸುವ ಎರಡು ಪ್ರಮುಖ ಹವಾಮಾನ ಘಟನೆಗಳಾಗಿವೆ. ಮಳೆಯ ಕೊರತೆ ಮತ್ತು ಅಸಮಾನ ಹಂಚಿಕೆಯ ಮಳೆ, ಕಿರುಧಾನ್ಯ ಪದ್ಧತಿಯಿಂದ ನಗದು ಬೆಳೆಗೆ ಪರಿವರ್ತನೆ, ರಸಗೊಬ್ಬರಗಳು ಮತ್ತು ಕೀಟನಾಶಕಗಳ ಹೆಚ್ಚಿದ ಬಳಕೆ ಬೆಳೆಗಳ ಇಳುವರಿ ಮತ್ತು ಜೈವಿಕ ವೈವಿಧ್ಯತೆ, ಹೆಚ್ಚಿದ ಕೃಷಿ ವೆಚ್ಚ ಮತ್ತು ಸಾಲಕ್ಕೆ ಕಾರಣವಾಗಿದೆ. ರಾಸಾಯನಿಕ ಒಳಸುರಿಯುವಿಕೆಗಳ ಕೃಷಿ ಅದರಲ್ಲೂ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳ ಅತಿಯಾದ ಬಳಕೆ ಮಹಿಳೆಯರ ಮೇಲೆ ನೇತ್ಯಾತ್ಮಕ ಪರಿಣಾಮವನ್ನು ಬೀರುತ್ತದೆ.

ಕೃಷಿಪರಿಸರ ವಿಧಾನದ ಕೃಷಿಯತ್ತ ಹೊರಳುವ ಅಗತ್ಯವಿತ್ತು. ಇದೊಂದು ಸಮಗ್ರ ಕೃಷಿ ವಿಧಾನವಾಗಿದ್ದು ಏಕಕಾಲಕ್ಕೆ ಕೃಷಿಪರಿಸರ ಮತ್ತು ಸಾಮಾಜಿಕ ಪರಿಕಲ್ಪನೆಗಳು, ತತ್ವಗಳನ್ನು ಸುಸ್ಥಿರ ಕೃಷಿ, ಆಹಾರ ವ್ಯವಸ್ಥೆಗಳ ವಿನ್ಯಾಸ ಮತ್ತು ನಿರ್ವಹಣೆಗೆ ಅನ್ವಯಿಸುತ್ತದೆ. ಇದು ವರ್ಷಪೂರ್ತಿ ವೈವಿಧ್ಯಮಯ, ಸುಸ್ಥಿರ ಉತ್ಪಾದನಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಆಹಾರವನ್ನು ಉತ್ಪಾದಿಸುತ್ತದೆ. ಇದು ರೈತರ ಜೀವನೋಪಾಯವನ್ನು ಹೆಚ್ಚಿಸುತ್ತದೆ. ರೈತರ ಬಾಹ್ಯ ಒಳಸುರಿಯುವಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ.

ಈ ಹಿನ್ನೆಲೆಯಲ್ಲಿ, IGSSS “ಕಲಹಂಡಿಯಲ್ಲಿ ಕ್ಲೈಮೆಟ್‌ ರಿಸೈಲೆನ್ಸ್‌ ಅಡಾಪ್ಟಿವ್ ಫಾರ್ಮಿಂಗ್” (CRAFT-K) ಯೋಜನೆಯನ್ನು ಜಾರಿಗೊಳಿಸಿತು. ಇದರ ಗುರಿ ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಬರ ಮತ್ತು ಇತರ ಹವಾಮಾನ ವೈಪರೀತ್ಯದ ವಿರುದ್ಧ ಸಣ್ಣ ಮತ್ತು ಅತಿ ಸಣ್ಣ ರೈತರಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು. ಯೋಜನೆಯ ಮುಖ್ಯ ಉದ್ದೇಶಗಳು:

  • ಕೃಷಿ ವೆಚ್ಚ ಮತ್ತು ಅಪಾಯಗಳನ್ನು ತಗ್ಗಿಸುವುದು. ಸಣ್ಣ ಮತ್ತು ಅತಿ ಸಣ್ಣ ರೈತರ ಉತ್ಪಾದಕತೆಯನ್ನು ಸ್ಥಿರಗೊಳಿಸುವುದು. ಕೃಷಿಯ ಮೇಲೆ ಪರಿಣಾಮ ಬೀರುವ ಹವಾಮಾನ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ವರ್ಷಪೂರ್ತಿ ಜೀವನೋಪಾಯದ ಅವಕಾಶಗಳು ಮತ್ತು ಆದಾಯದ ಹರಿವನ್ನು ಸೃಷ್ಟಿಸುವುದು.
  • ರಾಸಾಯನಿಕ ತ್ಯಾಜ್ಯಗಳಿಂದ ಮುಕ್ತವಾಗಿರುವ ಹೆಚ್ಚು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಉತ್ಪಾದಿಸುವುದು.
  • ಮಣ್ಣಿನ ಆರೋಗ್ಯ ಹೆಚ್ಚಳ, ನೀರಿನ ಸಂರಕ್ಷಣೆ ಮತ್ತು ಜೀವವೈವಿಧ್ಯವನ್ನು ಮರಳಿ ಬೆಳೆಯುವಂತೆ ಮಾಡುವುದು.

ಮಹಿಳಾ ರೈತರ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಕೃಷಿ ಪರಿಸರ ಪದ್ಧತಿಯ ಬಗ್ಗೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ರೈತ ಕ್ಷೇತ್ರ ಶಾಲೆಯನ್ನು ರೂಪಿಸಲಾಯಿತು. ಕಾರ್ಯಕ್ರಮದ ಕಾರ್ಯತಂತ್ರವು ರೈತ-ಚಾಲಿತ ವಿಸ್ತರಣಾ ವ್ಯವಸ್ಥೆ (ಎಫ್‌ಎಫ್‌ಎಸ್) ಮೂಲಕ ನಿಯಮಿತವಾಗಿ ಜ್ಞಾನ ಪ್ರಸಾರ ಮತ್ತು ಮೊದಲ ಸಲ ಇದರಲ್ಲಿ ತೊಡಗಿಸಿಕೊಳ್ಳುವವರಿಗೆ ಬೆಂಬಲವನ್ನು ಒಳಗೊಂಡಿತ್ತು. ಜೈವಿಕ ಕೀಟನಾಶಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಕೂಡ ಜೈವಿಕ ಒಳಸುರಿಯುವಿಕೆಗಳ ಬಳಕೆಯನ್ನು ಹೆಚ್ಚಿಸುವ ಕಾರ್ಯತಂತ್ರದ ಒಂದು ಭಾಗವಾಗಿತ್ತು.

ವಿಮರ್ಶಾತ್ಮಕ ಪರ್ಯಾಲೋಚನೆ

2017 ರಲ್ಲಿ, ಐಜಿಎಸ್ಎಸ್ಎಸ್ ಜ್ಞಾನ ವಿನಿಮಯ ಅಭಿಯಾನಗಳು ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆ ಕುರಿತಾದ ಪ್ರದರ್ಶನ ಮತ್ತು ತರಬೇತಿಗಳ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹೆಚ್ಚಿನ ರೈತರು, ತಮ್ಮ ವಿಮರ್ಶಾತ್ಮಕ ಪರ್ಯಾಲೋಚನೆಯ ಮೂಲಕ ಕೀಟ ಮತ್ತು ರೋಗ ನಿರ್ವಹಣೆಗೆ ಸಾಂಪ್ರದಾಯಿಕ ತಂತ್ರಗಳ ಬಗ್ಗೆ ಅರಿವಿನ ಕೊರತೆ; ಯುವಕರು ಕೃಷಿಯ ಬಗ್ಗೆ ಆಸಕ್ತರಾಗಿಲ್ಲದಿರುವುದು ಇತ್ಯಾದಿ ಅನೇಕ ಸಮಸ್ಯೆಗಳನ್ನು ಮುಂದಿಟ್ಟರು.

ಅವರು ಈ ಬದಲಾವಣೆಗೆ ಕಾರಣಗಳನ್ನು ಪಟ್ಟಿ ಮಾಡಿದರು, ಉದಾಹರಣೆಗೆ, ಕೀಟನಾಶಕಗಳ ಸುಲಭ ಲಭ್ಯತೆ; ರಾಸಾಯನಿಕಗಳು ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲವು ಎಂಬ ನಂಬಿಕೆ; ವಿವಿಧ ಯೋಜನೆಗಳ ಮೂಲಕ ವ್ಯಾಪಾರಿಗಳು ಮತ್ತು ಸರ್ಕಾರದಿಂದ ಹೇರಲಾದ ರಾಸಾಯನಿಕಗಳು; ಜೈವಿಕಗಳ ಬಗೆಗಿನ ಅರಿವಿನ ಕೊರತೆ ಮತ್ತು ಅವುಗಳನ್ನು ಹೇಗೆ ತಯಾರಿಸುವುದು ಎಂದು ಗೊತ್ತಿಲ್ಲದಿರುವುದು ಇತ್ಯಾದಿ. ಸಮುದಾಯದ ಪರ್ಯಾಲೋಚನೆಗಳು ಮತ್ತು ನೈಸರ್ಗಿಕ ಕೃಷಿ ವಿಧಾನಗಳಿಗೆ ಬದಲಾಗುವ ಅಗತ್ಯತೆಯ ಆಧಾರದ ಮೇಲೆ, ಕೀಟಗಳು ಮತ್ತು ಪೋಷಕಾಂಶಗಳ ಸಮಗ್ರ ನಿರ್ವಹಣೆಯ ಕುರಿತು ಸಂವಾದಾತ್ಮಕ ಮತ್ತು ಭಾಗವಹಿಸುವ ಮೂಲಕ ಕಲಿಯಲು IGSSS ರೈತರ ಕ್ಷೇತ್ರ ಶಾಲೆಯನ್ನು ಪ್ರಾರಂಭಿಸಿತು.

ಫಲ್ಗುಣಿ ಭೋಯಿ ಮತ್ತು ಜಯಂತಿ ಭೋಯಿ ಈ ರೈತ ಕ್ಷೇತ್ರ ಶಾಲೆಯನ್ನು ಪ್ರಾರಂಭಿಸಿದರು. ಪರಿಸರ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಸುಮಾರು 10 ಮಂದಿ ಮಹಿಳಾ ಕೃಷಿಕರನ್ನು ಗುರುತಿಸಿ ಗುಂಪುಗಳನ್ನು ರಚಿಸಲಾಯಿತು. ಆರಂಭದಲ್ಲಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಸಮಸ್ಯೆಗಳನ್ನು ಗುರುತಿಸಿಕೊಳ್ಳಲಾಯಿತು. ಗಿಡಗಳ ಬೆಳವಣಿಗೆಯ/ಉತ್ಪಾದನಾ ಹಂತದಲ್ಲಿ ನಿಯಮಿತವಾಗಿ ವಾರಕ್ಕೊಮ್ಮೆ ಸದಸ್ಯರು ಪರಸ್ಪರರನ್ನು ಬೇಟಿಯಾದರು. ಉತ್ಪಾದನಾ ಹಂತದಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯೋಗಗಳನ್ನು ಮಾಡಲಾಯಿತು. ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಅಧ್ಯಯನದ ಉದ್ದೇಶಕ್ಕಾಗಿ ರಾಸಾಯನಿಕ ಒಳಸುರಿಯುವಿಕೆಗಳನ್ನು ಬಳಸಿದ ಕೃಷಿಪದ್ಧತಿ ಮತ್ತು ಪರಿಸರ ಕೃಷಿ ಪದ್ಧತಿಗಳನ್ನು ಅನುಸರಿಸಿದ ಕೃಷಿಯನ್ನು ಕೈಗೊಳ್ಳಲಾಯಿತು.

ಮೊದಲ ಹಂತದಲ್ಲಿ, 20 ಮಹಿಳಾ ರೈತರೊಂದಿಗೆ ಎರಡು FFS ಅನ್ನು ಧನರಖ್ಮನ್ ಮತ್ತು ಕಾನ್ಸಿಲ್ ಗ್ರಾಮಗಳಲ್ಲಿ ಸ್ಥಾಪಿಸಲಾಯಿತು. ಪ್ರತಿ FFSನಿಂದ ಹತ್ತು ಮಹಿಳಾ ರೈತರು ರಾಸಾಯನಿಕ ಒಳಸುರಿಯುವಿಕೆ ಬಳಸುವ ಕೃಷಿ ವಿಧಾನ ಮತ್ತು ನೈಸರ್ಗಿಕ ಕೃಷಿ ವಿಧಾನವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲು 20 ಮಾದರಿ ಕೃಷಿಭೂಮಿಯನ್ನು ಆಯ್ಕೆಮಾಡಿಕೊಳ್ಳಲಾಯಿತು. ಭೂಮಿಯ ಆಯ್ಕೆಯ ಪ್ರಕ್ರಿಯೆಯಲ್ಲಿ ಆ ಭೂಮಿಯ ಬಗೆ, ಮಣ್ಣಿನ ಬಗೆ, ನೀರಾವರಿ ಸೌಲಭ್ಯಗಳು, ಬೆಳೆ ವೈವಿಧ್ಯತೆ, ಬೀಜ ವೈವಿಧ್ಯತೆ, ಕಾಲೋಚಿತ ಬೆಳೆ ಕ್ಯಾಲೆಂಡರ್‌ ಮತ್ತು ಕೃಷಿ ಉಪಕರಣಗಳಿಗೆ ಆದ್ಯತೆ ನೀಡಲಾಯಿತು.

ಮಹಿಳಾ ರೈತರು ಎಫ್‌ಎಫ್‌ಎಸ್‌ನಲ್ಲಿ ಬೆಳೆಗಳ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆಗಾಗಿ ತಾವು ಕಲಿತ ತಂತ್ರಗಳನ್ನು ಪ್ರಯೋಗಿಸಿದರು. ಈ ಎರಡು ರೈತರ ಶಾಲೆಗಳು ಹೆಚ್ಚಿನ ಇಳುವರಿ ನೀಡುವ ಭತ್ತ, ಸಾಂಪ್ರದಾಯಿಕ ಭತ್ತ, ಹೆಸರುಕಾಳು, ಉದ್ದಿನ ಬೇಳೆ, ಅರ್ಹರ್ ಮತ್ತು ಕಾಲೋಚಿತ ತರಕಾರಿಗಳ ಮೇಲೆ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆಯ ಪ್ರಯೋಗವನ್ನು ಪ್ರಾರಂಭಿಸಿದವು.

ಗ್ರಾಮದ ಅನುಭವಿ ರೈತರೊಂದಿಗೆ 20 ಮಹಿಳಾ ರೈತರು ಮತ್ತು ಕೃಷಿ ಇಲಾಖೆಯ ಕೃಷಕ್ ಸತಿ ಜಂಟಿ ಪ್ರಯತ್ನದಲ್ಲಿ, ಕೈಪಿಡಿ ಹಾಗೂ ಪದ್ಧತಿಗಳ ಪ್ಯಾಕೇಜನ್ನು ಸಿದ್ಧಪಡಿಸಲಾಯಿತು. ಇದು ಕಾಂಪೋಸ್ಟ್ ತಯಾರಿಕೆ ಮತ್ತು ಬಳಕೆ, ದ್ರವ ಗೊಬ್ಬರ, ಕೀಟ ನಾಶಕ, ನೈಸರ್ಗಿಕ ಹಾರ್ಮೋನ್ ಮತ್ತು ಸಮಗ್ರ ಕೀಟ ಕೀಟ ಮತ್ತು ರೋಗ ನಿರ್ವಹಣೆಯ ಪ್ರಭಾವದ ಮೌಲ್ಯಮಾಪನದಂತಹ ವಿಷಯಗಳನ್ನು ಒಳಗೊಂಡಿದೆ. ಜೈವಿಕ ನಿಯಂತ್ರಣ, ಕೀಟಗಳ ನೈಸರ್ಗಿಕ ಶತ್ರುಗಳಿಗೆ ಸ್ನೇಹಿವಾತಾವರಣ, ಸಾಂಸ್ಕೃತಿಕ ಅಭ್ಯಾಸಗಳ ಬದಲಾವಣೆ ಮತ್ತು ನಿರೋಧಕ ಪ್ರಭೇದಗಳ ಬಳಕೆಯ ಮೂಲಕ ಪ್ರಯೋಜನಕಾರಿ ಕೀಟಗಳ ರಕ್ಷಣೆಯಂತಹ ತಂತ್ರಗಳೊಂದಿಗೆ ಕ್ಷೇತ್ರ ಪ್ರದರ್ಶನಕ್ಕಾಗಿ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.

2018 ರಲ್ಲಿ ಕೇವಲ 20 ರೈತರಿಂದ ಆರಂಭವಾದ ಅಭಿಯಾನಕ್ಕೆ 2022 ರ ಹೊತ್ತಿಗೆ,  ಆರು ನೂರು ಮಹಿಳಾ ರೈತರು ಈಗಾಗಲೇ ಸೇರಿದ್ದಾರೆ. ಒರಿಸ್ಸಾ ಲೈವ್ಲಿಹುಡ್ ಮಿಷನ್, ಕಲಹಂಡಿ (ಒರಿಸ್ಸಾ) ಮೂಲಕ ಮಹಿಳಾ ರೈತರ ಈ ಪ್ರಯತ್ನವನ್ನು ಸಾಮೂಹಿಕಗೊಳಿಸಲು ವ್ಯಾಪಾರ ಬಂಡವಾಳ ಮತ್ತು ಪರಿಸರ ಸ್ನೇಹಿ ಯಂತ್ರೋಪಕರಣಗಳನ್ನು ರೈತ ಉತ್ಪಾದಕ ಗುಂಪುಗಳ ಮೂಲಕ ಒದಗಿಸಿದೆ.

IGSSS 600 ಮಹಿಳಾ ರೈತರಿಗೆ ಎರೆಹುಳು ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ಉತ್ಪಾದಿಸಲು ಬೆಂಬಲ ನೀಡಿದೆ. ಕರ್ಲಮುಂಡ ಬ್ಲಾಕ್ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಪ್ರತಿನಿಧಿಗಳು ರೈತರ ಕ್ಷೇತ್ರ ಶಾಲೆಯಲ್ಲಿ ಆಯೋಜಿಸಿದ್ದ ಕ್ಷೇತ್ರ ದಿನಾಚರಣೆಯಲ್ಲಿ ತಾಂತ್ರಿಕ ಜ್ಞಾನವನ್ನು ಒದಗಿಸಿದರು. ಈ ಜಂಟಿ ಪ್ರಯತ್ನ ಮತ್ತು ಸಹಕಾರವು ರೈತರ ಉತ್ಪಾದಕ ಗುಂಪಿನ ಮೂಲಕ ಎರೆಹುಳು ಗೊಬ್ಬರ, ಕೀಟ ನಿವಾರಕಗಳು, ಹಾರ್ಮೋನುಗಳು, ತರಕಾರಿ ಸಸಿಗಳು ಮತ್ತು ಕಾಲೋಚಿತ ಬೆಳೆಗಳ ಮಾರುಕಟ್ಟೆಗೆ ಸಹಾಯ ಮಾಡಿದೆ.

ಪರಿಣಾಮಗಳು

ಮೊದಲ ವರ್ಷದ ಪ್ರಯತ್ನವು ರೈತರಿಗೆ ಅನೇಕ ಯಶಸ್ಸನ್ನು ತಂದುಕೊಟ್ಟಿತು. ಮೊದಲನೆಯದಾಗಿ, ರೈತರು ಮಾರುಕಟ್ಟೆಯಿಂದ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಹಾರ್ಮೋನುಗಳನ್ನು ಖರೀದಿಸುವುದನ್ನು ನಿಲ್ಲಿಸಿದರು. ಸಬೂಜ ಕೃಷಿಕರ ಕ್ಷೇತ್ರ ಶಾಲೆಯ ಪ್ರಾಂಶುಪಾಲರಾದ ಭಾನುಮತಿ ಭೋಯಿ ಅವರು, ಹಲವು ವರ್ಷಗಳಿಂದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಅಂಗಡಿಗಳಿಂದ ಖರೀದಿಸುತ್ತಿದ್ದೆವು. ರೈತ ವರ್ಷಕ್ಕೆ ಸುಮಾರು ರೂ. 12,000 ರಿಂದ ರೂ.18,000ದವರೆಗೆ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಖರೀದಿಸುತ್ತಿದ್ದ. ರೈತ ಕ್ಷೇತ್ರ ಶಾಲೆಯಲ್ಲಿ, ನೈಸರ್ಗಿಕ ರೀತಿಯಲ್ಲಿ ಸಮಗ್ರ ಕೀಟ ಮತ್ತು ರೋಗ ನಿಯಂತ್ರಣವನ್ನು ಕಲಿತ ಬಳಿಕ, ಸಾವಯವ ಗೊಬ್ಬರ, ರೋಗ ಮತ್ತು ಕೀಟ ನಿವಾರಕಗಳನ್ನು ಬಳಸಿದ್ದೇವೆ. ಇದರಿಂದಾಗಿ, ಮೊದಲಿಗೆ ಅಂಗಡಿಯಲ್ಲಿ ಮಾಡಿದ್ದ ಸಾಲವನ್ನು ತೀರಿಸಿದೆವು. ಯಶಸ್ಸು ನಮ್ಮ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿತು. ನಮ್ಮ ಯಶಸ್ಸಿನ ಬಗ್ಗೆ ಕೇಳಿದ ನಂತರ 600 ಕ್ಕೂ ಹೆಚ್ಚು ರೈತರು ನಮ್ಮೊಂದಿಗೆ ಕೈಜೋಡಿಸಿದರು.”

ಕೀಟ ನಿಯಂತ್ರಣಕ್ಕೆ ಸಾವಯವ ವಿಧಾನಗಳನ್ನು ಅಳವಡಿಸಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಾಣುತ್ತದೆ. ಸುಮಾರು 600 ರೈತರು ಜೈವಿಕ ಕೀಟನಾಶಕ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ವಿವಿಧ ರೀತಿಯ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ತಯಾರಿಕೆ ಮತ್ತು ಅನುಭವಗಳನ್ನು ಹಂಚಿಕೊಂಡ ನಂತರ ಕೀಟ ನಿಯಂತ್ರಣಕ್ಕಾಗಿ ಸಾವಯವ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ.

VDC ನಡೆಸಿದ FGD ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಪ್ರತಿ ವರ್ಷ ಸಬುಜಾ  ರೈತ ಕ್ಷೇತ್ರ ಶಾಲೆಯು 20120 ಕಿಲೋಗ್ರಾಂ/ಲೀಟರ್ ಕಾಂಪೋಸ್ಟ್ ಮತ್ತು ಕೀಟ ನಿವಾರಕಗಳನ್ನು ಉತ್ಪಾದಿಸುತ್ತದೆ. 310 ರೈತರು ತಮ್ಮ ಮಳೆಗಾಲದ ಬೆಳೆಗಳಲ್ಲಿನ ಭತ್ತದ ಬೆಳೆ ಮತ್ತು ಚಳಿಗಾಲದ ಬೆಳೆಗಳಾದ ಬೇಳೆಕಾಳುಗಳು ಮತ್ತು ತರಕಾರಿಗಳಿಗೆ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕವನ್ನು ಬಳಸಿಲ್ಲ. 290 ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕವನ್ನು ಭಾಗಶಃ ಬಳಸಿದ್ದಾರೆ.

ಒಬ್ಬ ಸಣ್ಣ ರೈತ ಚಳಿಗಾಲ ಮತ್ತು ಮಳೆಗಾಲದಲ್ಲಿ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಹಾರ್ಮೋನ್‌ಗಳನ್ನು ಖರೀದಿಸಲು ವರ್ಷಕ್ಕೆ ರೂ. 12,000 ದಿಂದ ರೂ. 18,000ವರೆಗೆ ಖರ್ಚು ಮಾಡುತ್ತಾನೆ. ಈ ಅಂದಾಜಿನ ಆಧಾರದ ಮೇಲೆ, ರಾಸಾಯನಿಕಗಳನ್ನು ಬಳಸದ ಸುಮಾರು 310 ರೈತರು ಒಂದು ವರ್ಷದಲ್ಲಿ ಸುಮಾರು ರೂ.55,80,000/- ಉಳಿಸಿದ್ದಾರೆ. ಹೊಸ ಜ್ಞಾನವನ್ನು ಪಡೆದ ರೈತರು, ಈಗ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಹಸಿರು ಗೊಬ್ಬರ, ಎರೆಹುಳು ಗೊಬ್ಬರ, ಕೀಟ ನಿವಾರಕ ಮತ್ತು ಹಾರ್ಮೋನುಗಳನ್ನು ತಯಾರಿಸಬಹುದು. ಈ ಒಳಸುರಿಯುವಿಕೆಗಳನ್ನು ತಮ್ಮ ಸ್ವಂತ ಬಳಕೆಗೆ ಬಳಸಿದ ನಂತರ ಆತ ಅಥವಾ ಆಕೆ ಅದರಲ್ಲಿ ಶೇಕಡ 20 ರಿಂದ 30ರಷ್ಟನ್ನು ಮಾರಾಟ ಮಾಡಿ  ರೂ. 4,000 ದಿಂದ ರೂ. 5,000ದವರೆಗೆ ಗಳಿಸಬಹುದು. ಹೀಗೆ ರೈತ ಕ್ಷೇತ್ರ ಶಾಲೆಯು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಾಯ ಮಾಡುವುದರ ಜೊತೆಗೆ ಸುರಕ್ಷಿತ ಆಹಾರ ಉತ್ಪಾದನೆ ಮತ್ತು ಕೃಷಿ ಜೀವವೈವಿಧ್ಯವನ್ನು ಸಂರಕ್ಷಿಸುತ್ತದೆ.

ಚೌಕ 1 – ಎಫ್ಎಫ್ಎಸ್ ವಿಧಾನ

  • ಎಲ್ಲೋ ಅಭಿವೃದ್ಧಿ ಪಡಿಸಿದ ವೈಜ್ಞಾನಿಕ ಪರಿಕಲ್ಪನೆಗಳನ್ನು ದೇಸಿ ಜ್ಞಾನ ವ್ಯವಸ್ಥೆಯ ಆಧಾರದ ಮೇಲೆ ಪರೀಕ್ಷಿಸಿ, ಮೌಲ್ಯೀಕರಿಸುತ್ತದೆ.

  • ಭಾಗವಹಿಸುವವರ ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲಗಳನ್ನು ಹೆಚ್ಚಿಸುತ್ತದೆ.

  • ವೀಕ್ಷಣಾ ಕೌಶಲಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ವೈಜ್ಞಾನಿಕ ಪುರಾವೆಯಾಗಿ ಪರಿವರ್ತಿಸುತ್ತದೆ.

  • ಕೃಷಿ ಹಾಗೂ ಜೀವನೋಪಾಯವನ್ನು ಸುಧಾರಿಸಲು ಸಾಮೂಹಿಕ ಕ್ರಿಯೆಗಳನ್ನು ಉತ್ತೇಜಿಸುವ ಮೂಲಕ ಗುಂಪಿನಲ್ಲಿ ಒಗ್ಗಟ್ಟು ಹಾಗೂ ಸಾಮುದಾಯಿಕ ನಿರ್ಧಾರವನ್ನು ಉತ್ತೇಜಿಸುತ್ತದೆ.

  • ಪ್ರಸ್ತುತ ಉತ್ಪಾದನಾ ವ್ಯವಸ್ಥೆಗಳನ್ನು ಪರಿವರ್ತಿಸಲು ರೈತರಿಗೆ ಸಹಾಯ ಮಾಡುತ್ತದೆ. ಹೆಚ್ಚು ಸಮರ್ಥನೀಯ ಅಭ್ಯಾಸಗಳು ಮತ್ತು ವ್ಯವಸ್ಥೆಗಳಂತಹ ಬದಲಾವಣೆಗಳಿಗೆ ಚಾಲನೆ ನೀಡುತ್ತದೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ರೈತರು ರೈತ ಕ್ಷೇತ್ರ ಶಾಲೆಯ ಉತ್ತಮ ಪರಿಣಾಮವನ್ನು ಇನ್ನಷ್ಟು ಅರ್ಥಮಾಡಿಕೊಂಡರು. ಈ ಅವಧಿಯಲ್ಲಿ ಕೃಷಿ ಸಾಮಗ್ರಿಗಳು ಮತ್ತು ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಹೆಚ್ಚಾಗಿ ಮುಚ್ಚಲ್ಪಟ್ಟವು. 310 ಸಾವಯವ ರೈತರಿಗೆ ತಮ್ಮ ಘರ್ಬಾಡಿ (ಕೈ ತೋಟ) ಮತ್ತು ಕೃಷಿ ಭೂಮಿಯಲ್ಲಿ ತರಕಾರಿ ಕೃಷಿಗೆ ವಸ್ತುಗಳನ್ನು ಸಂಗ್ರಹಿಸಲು ಯಾವುದೇ ತೊಂದರೆಯಾಗಲಿಲ್ಲ.  ಸಬುಜಾ ಚಾಯ್ ಪಾಠಶಾಲಾದಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಗೊಬ್ಬರ, ದ್ರವರೂಪದ ಗೊಬ್ಬರಗಳು, ಜೈವಿಕ ಕೀಟ ನಿವಾರಕಗಳು ಮತ್ತು ಹಾರ್ಮೋನುಗಳ ಉತ್ಪಾದನೆಯು ಹೆಚ್ಚಿದೆ ಎಂದು ಡೇಟಾ ಸ್ಪಷ್ಟವಾಗಿ ತೋರಿಸುತ್ತದೆ.

ಮಹಿಳಾ ರೈತರ ಈ ನಾಲ್ಕು ವರ್ಷಗಳ ಪ್ರಯತ್ನಗಳು ನಿಧಾನವಾಗಿ ಯಶಸ್ವಿಯಾಗುತ್ತಿವೆ. ರೈತರ ಶಾಲೆಯ ಭಾಗವಾಗಿರುವ ಮಹಿಳಾ ರೈತರು ಈಗ ವಿವಿಧ ಎನ್‌ಜಿಒಗಳು ಮತ್ತು ಆಸಕ್ತ ರೈತರೊಂದಿಗೆ ಸಮಗ್ರ ಕೀಟ ನಿರ್ವಹಣೆ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಕೃಷಿ ಜೀವವೈವಿಧ್ಯದ ಸಂರಕ್ಷಣೆ ಕುರಿತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಬ್ಲಾಕ್ ಮತ್ತು ಜಿಲ್ಲಾಡಳಿತ ಕೂಡ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ರೈತರಿಗೆ ಸೂಕ್ತ ಮನ್ನಣೆ ನೀಡಿದೆ.

ಕೃತಜ್ಞತೆ

ಸಿಬ್ಬಂದಿ ವರ್ಗ, ಸಮುದಾಯದ ಪ್ರತಿನಿಧಿಗಳು ಮತ್ತು ರೈತರು ನೀಡಿದ ಸಹಕಾರಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಇಲ್ಲಿನ ಅವಲೋಕನಗಳು ಕ್ಷೇತ್ರ ಭೇಟಿಗಳು ಮತ್ತು ರೈತರೊಂದಿಗಿನ ಸಂವಾದವನ್ನು ಆಧರಿಸಿದೆ.


Amar Kumar Gouda
Capacity Building Coordinator, Livelihood, Climate
Change and Natural Farming,
Indo-Global Social service society, 28 Institutional
Area, Lodhi Road, New Delhi
E-mail: amar@igsss.net

Krushna Chandra Sahu
IGSSS
E-mail: sahu@igsss.net


Information and Photographs
Pradeep Kumar Sahu (pradip@igsss.net)and Jagadish Prasad Rana (jagadish@igsss.net )

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೩ ; ಸೆಪ್ಟಂಬರ್‌ ೨೦‌೨‌೩

 

 

 

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp