ನೀರು ನಿರ್ವಹಣೆ – ಭಾರತೀಯ ಕೃಷಿಗೆ ನಿರ್ಣಾಯಕ


ಹವಾಮಾನ ಬದಲಾವಣೆಗಳ ಪರಿಣಾಮವಾಗಿ ಅನಿಯಮಿತ ಮತ್ತು ಅನಿರೀಕ್ಷಿತ ಮಳೆಯಿಂದಾಗಿ, ಲಭ್ಯವಿರುವ ನೀರಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು, ಸೆಹಗಲ್ ಫೌಂಡೇಶನ್ ನೀರಿನ ಸಂರಕ್ಷಣಾ ತಂತ್ರಗಳು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಿದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿಸುವ ಮೂಲಕ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ದಾರಿಮಾಡಿಕೊಟ್ಟಿದೆ.


ಮಳೆ-ಆಧಾರಿತ ಕೃಷಿಯು ದೇಶದ ಒಟ್ಟು ಬಿತ್ತನೆ ಪ್ರದೇಶದ ಸುಮಾರು 51% ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದು, ಒಟ್ಟು ಆಹಾರ ಉತ್ಪಾದನೆಯ ಸುಮಾರು 40% ನಷ್ಟಿದೆ. ಗ್ರಾಮೀಣ ಭಾರತದಲ್ಲಿ, ನೀರಿನ ಕೊರತೆಯು ಬಡತನ, ಹಸಿವು ಮತ್ತು ರೋಗದ ನಡುವಿನ ಕೊಂಡಿಯಾಗಿದೆ. ನೀರಿನ ಕೊರತೆಯು ಬೆಳೆ ನಷ್ಟ, ಕಡಿಮೆ ಇಳುವರಿ, ಕಳಪೆ ಗುಣಮಟ್ಟ ಮತ್ತು ಉಳದೆ ಉಳಿದ ಎಕರೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ನೀರು, ಕೃಷಿ ಉತ್ಪಾದನೆಯಲ್ಲಿ ಅತ್ಯಂತ ನಿರ್ಣಾಯಕ ಒಳಹರಿವಾಗಿದ್ದು, ಅರೆ-ಶುಷ್ಕ ಪ್ರದೇಶಗಳಲ್ಲಿ ಇದೇ ಕೃಷಿಯನ್ನು ಸೀಮಿತಗೊಳಿಸುವ ಅಂಶವಾಗಿದೆ. ಹವಾಮಾನ ಬದಲಾವಣೆ, ಸಿಹಿನೀರಿನ ಮಾಲಿನ್ಯ ಮತ್ತು ಜೌಗು ಪ್ರದೇಶಗಳ ನಷ್ಟವು ನೀರಿನ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ನೀರು ಮತ್ತು ಗಾಳಿಯಿಂದಾಗಿ ಮಣ್ಣಿನ ಸವಕಳಿಯು> 71% ಭೂಮಿ ಅವನತಿಗೆ ಕಾರಣವಾಗುತ್ತದೆ (ಭಾರತ ಸರ್ಕಾರ 2001). ಅಸಮರ್ಥ ನೀರಿನ ಬಳಕೆಯು ನೀರು ನಿಲ್ಲುವ ಅಪಾಯವನ್ನು ತಂದೊಡ್ಡುತ್ತದೆ. ಇದರಿಂದ ಲವಣಾಂಶದ ಹೆಚ್ಚಳವು ಪರಿಸರ ಅವನತಿಗೆ ಕಾರಣವಾಗುತ್ತದೆ. ಸುಧಾರಿತ ನೀರಾವರಿಯ ಅವಶ್ಯಕತೆಯಿದೆ. 85% ಕ್ಕಿಂತ ಹೆಚ್ಚು ನೈಸರ್ಗಿಕ ಜೌಗು ಪ್ರದೇಶಗಳು ಈಗಾಗಲೇ ಕಳೆದುಹೋಗಿವೆ ಮತ್ತು 75% ಭೂ ಮೇಲ್ಮೈ ಗಮನಾರ್ಹವಾಗಿ ಬದಲಾಗಿದೆ, ಇದು ಸಮರ್ಥನೀಯ ನೀರಿನ ಪೂರೈಕೆಯನ್ನು ಬೆಂಬಲಿಸುವ ಭೂಮಿಯ ಪರಿಸರ ವ್ಯವಸ್ಥೆಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಕಳೆದ ನಲವತ್ತು ವರ್ಷಗಳಲ್ಲಿ ನೀರಿನ ಬಳಕೆ ವರ್ಷಕ್ಕೆ ಶೇ.1ರಷ್ಟು ಹೆಚ್ಚುತ್ತಿದೆ.

1940 ರಿಂದ, ಭಾರತದಲ್ಲಿ (30%), ಮೆಕ್ಸಿಕೊ (80%), ಮತ್ತು ಚೀನಾ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ (50%) ದಲ್ಲಿ ನೀರಾವರಿಗಾಗಿ ಸಾರ್ವಜನಿಕ ಹೂಡಿಕೆಯು ಹೆಚ್ಚಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹೂಡಿಕೆಗಳು ಮತ್ತು ಸಬ್ಸಿಡಿಗಳ ಹೊರತಾಗಿಯೂ, ನೀರಾವರಿ ಕಾರ್ಯಕ್ಷಮತೆಯ ಸೂಚಕಗಳು ಇಳುವರಿ ಹೆಚ್ಚಳ, ನೀರಾವರಿ ಪ್ರದೇಶ ಮತ್ತು ನೀರಿನ ಬಳಕೆಯಲ್ಲಿನ ತಾಂತ್ರಿಕ ದಕ್ಷತೆಯ ನಿರೀಕ್ಷೆಗಿಂತ ಕಡಿಮೆಯಾಗುತ್ತಿವೆ. ಅಂದಾಜು 60% ನೀರನ್ನು ನೀರಾವರಿಗಾಗಿ ಬಳಸಲಾಗುತ್ತದೆ ಅಥವಾ ಪಂಪ್ ಮಾಡಲಾಗುತ್ತದೆ (FAO 1990). ನೀರಿನ ಕೊರತೆಯು ವನ್ಯಜೀವಿಗಳಿಗೂ ಬಿಕ್ಕಟ್ಟು ಸೃಷ್ಟಿಸುತ್ತದೆ. ಕೃಷಿಯು ಹೆಚ್ಚಿನ ಪ್ರಮಾಣದ ಸಿಹಿನೀರನ್ನು ಬಳಸುತ್ತದೆ (70%). ನದಿಗಳು ಬತ್ತಿ ಹೋಗುತ್ತಿವೆ ಮತ್ತು ನೀರಿನ ಮಟ್ಟವು ವೇಗವಾಗಿ ಕುಸಿಯುತ್ತಿದೆ. ಪ್ರಪಂಚದ ಧಾನ್ಯದ ಕೊಯ್ಲಿನ ನಲವತ್ತು ಪ್ರತಿಶತವು ನೀರಾವರಿ ಭೂಮಿಯಲ್ಲಿ ಉತ್ಪತ್ತಿಯಾಗುತ್ತದೆ; ಆದ್ದರಿಂದ, ಮುಂದಿನ ದಿನಗಳಲ್ಲಿ ನೀರಿನ ಕೊರತೆಯು ಖಂಡಿತವಾಗಿಯೂ ಆಹಾರದ ಕೊರತೆಯಾಗಿ ಪರಿಣಮಿಸುತ್ತದೆ.

ಪ್ರಸ್ತುತ, 2,400 ಮಿಲಿಯನ್ ಜನರು ಉದ್ಯೋಗ, ಆಹಾರ ಮತ್ತು ಆದಾಯಕ್ಕಾಗಿ ನೀರಾವರಿ ಕೃಷಿಯನ್ನು ಅವಲಂಬಿಸಿದ್ದಾರೆ. ಮುಂದಿನ ಮೂವತ್ತು ವರ್ಷಗಳಲ್ಲಿ, ಜಗತ್ತನ್ನು ಪೋಷಿಸಲು ಅಗತ್ಯವಿರುವ ಹೆಚ್ಚುವರಿ ಆಹಾರದ ಅಂದಾಜು  80% ರಷ್ಟು ನೀರಾವರಿಯ ಮೇಲೆ ಅವಲಂಬಿತವಾಗಿದೆ (IIMI 1992). ಅದೇ ಸಮಯದಲ್ಲಿ, ನೀರಾವರಿ ಕೃಷಿಯು ಇಂದು ಬಳಸುವುದಕ್ಕಿಂತ ಕಡಿಮೆ ನೀರನ್ನು ಬಳಸಿ ಭವಿಷ್ಯದಲ್ಲಿ ಹೆಚ್ಚು ಉತ್ಪಾದಿಸುವ ನಿರೀಕ್ಷೆಯಿದೆ. ಈ ನೀರಿನ ಸಂದಿಗ್ಧತೆ-ಕಡಿಮೆ ನೀರಿನಿಂದ ಸಮರ್ಥನೀಯ ರೀತಿಯಲ್ಲಿ ಹೆಚ್ಚು ಉತ್ಪಾದಿಸಲು- ಅಸ್ತಿತ್ವದಲ್ಲಿರುವ ಸರಬರಾಜುಗಳನ್ನು ಮರುಹಂಚಿಕೆ ಮಾಡಲು, ಹೆಚ್ಚು ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಹೆಚ್ಚು ಸಮಾನ ಪ್ರವೇಶವನ್ನು ಉತ್ತೇಜಿಸಲು ಬೇಡಿಕೆ-ನಿರ್ವಹಣೆಯ ಕಾರ್ಯವಿಧಾನಗಳ ಅಗತ್ಯವನ್ನು ಸೂಚಿಸುತ್ತದೆ.

ಸಮಸ್ಯೆ ಸ್ಪಷ್ಟವಾಗಿದೆ, ಉತ್ತರ ಕಷ್ಟ. ನಾವು ನೀರಿನ ಅಗತ್ಯ ಹೆಚ್ಚಿರುವ ಬೆಳೆಗಳನ್ನು, ಅಕ್ಕಿ, ಕಬ್ಬುಗಳನ್ನು ಕಡಿಮೆ ಬೆಳೆಯಬೇಕು. ಪರಿಣಾಮಕಾರಿ ನೀರಾವರಿ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕು. ಕಡಿಮೆ ನೀರು ಬೇಡುವ ಸಾಂಪ್ರದಾಯಿಕ ಬೆಳಗಳಿಗೆ ಮರಳಬೇಕಾಗಿದೆ. ಸ್ಟೇಟ್ ಆಫ್ ಇಂಡಿಯನ್ ಅಗ್ರಿಕಲ್ಚರ್ ವರದಿ 2011-2012 ರ ಪ್ರಕಾರ, 5% ನೀರಾವರಿ ದಕ್ಷತೆ ಸಾಧಿಸುವ ಮೂಲಕ10-15 ಮಿಲಿಯನ್ ಹೆಕ್ಟೇರ್ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಬಹುದು. ದೀರ್ಘಕಾಲೀನ ನೀರಿನ ನಿರ್ವಹಣೆ ಮತ್ತು ಸಂರಕ್ಷಣೆಯನ್ನು ಮಾಡುವ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ನೀರಿನ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವುದು ಸ್ಥಳೀಯ ಸಮುದಾಯದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಗ್ರಾಮೀಣ ಸಮುದಾಯಗಳಲ್ಲಿ ನೀರನ್ನು ಬುದ್ಧಿವಂತಿಕೆಯಿಂದ ಬಳಸುವ ಮನೋಭಾವ ಹಾಗೂ ನಡವಳಿಕೆಗಳನ್ನು ಪ್ರೋತ್ಸಾಹಿಸಬೇಕು.

SMSF ಮಧ್ಯಸ್ಥಿಕೆಗಳು

ಸೆಹಗಲ್ ಫೌಂಡೇಶನ್ ನೀರಿನ ಕೊರತೆಯ ಪ್ರದೇಶಗಳಲ್ಲಿನ ಹಳ್ಳಿ ಸಮುದಾಯಗಳೊಂದಿಗೆ ಸ್ಥಳೀಯ ನೀರು ಸರಬರಾಜುಗಳನ್ನು ಸುರಕ್ಷಿತಗೊಳಿಸಲು ಮತ್ತು ಉಳಿಸಿಕೊಳ್ಳಲು ಕೆಲಸ ಮಾಡುತ್ತದೆ. ನೈರ್ಮಲ್ಯವನ್ನು ಸುಧಾರಿಸಲು ಗ್ರಾಮಸ್ಥರಿಗೆ ಸಹಾಯ ಮಾಡುತ್ತದೆ. ಶಾಲೆಗಳು, ಮನೆಗಳು ಮತ್ತು ಹಳ್ಳಿಗಳಲ್ಲಿ ತ್ಯಾಜ್ಯ ನೀರನ್ನು ನಿರ್ವಹಿಸುತ್ತದೆ. ಫೌಂಡೇಶನ್ ತಂಡವು ಮುಖ್ಯವಾದ ಕಾರ್ಯಕ್ರಮ ಕ್ಷೇತ್ರಗಳಲ್ಲಿ ತಳಮಟ್ಟದ, ಸಮುದಾಯ-ನೇತೃತ್ವದ ಅಭಿವೃದ್ಧಿ ಉಪಕ್ರಮಗಳನ್ನು ಉತ್ತೇಜಿಸುತ್ತದೆ. ನೀರು ನಿರ್ವಹಣಾ ಕಾರ್ಯಕ್ರಮವು ಸಮುದಾಯದಲ್ಲಿ ನೀರು ಮತ್ತು ನೀರಿನ ವಿತರಣಾ ವ್ಯವಸ್ಥೆಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಕೃಷಿ ಅಭಿವೃದ್ಧಿ ಕಾರ್ಯಕ್ರಮವು ಮಹಿಳಾ ರೈತರನ್ನು ಸಬಲೀಕರಣಗೊಳಿಸುವ ಮೂಲಕ, ನೀರು ಸಂರಕ್ಷಣೆಯ ಪ್ರಯತ್ನಗಳನ್ನು ಹೆಚ್ಚಿಸುವ ಮತ್ತು ಬೆಳೆ ಉತ್ಪಾದಕತೆಯನ್ನು ಸುಧಾರಿಸುವ ಮೂಲಕ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತದೆ. ಸ್ಥಳೀಯ ಭಾಗವಹಿಸುವಿಕೆ ಮತ್ತು ಸುಸ್ಥಿರತೆ ಕಾರ್ಯಕ್ರಮವು ವ್ಯಕ್ತಿಗಳು ಮತ್ತು ಗ್ರಾಮ ಮಟ್ಟದ ಸಂಸ್ಥೆಗಳಲ್ಲಿ ಜಾಗೃತಿ ಹಾಗೂ ಕೌಶಲಗಳನ್ನು ನಿರ್ಮಿಸುತ್ತದೆ. ಇದು ತಮ್ಮದೇ ಅಭಿವೃದ್ಧಿಯಲ್ಲಿ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ದೀರ್ಘಾವಧಿಯಿಂದ ಅನಾನುಕೂಲತೆಯನ್ನು ಎದುರಿಸುತ್ತಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸಬಲೀಕರಣವನ್ನು ಎಲ್ಲ ಕಾರ್ಯಕ್ರಮಗಳು ಬೆಂಬಲಿಸುತ್ತವೆ. ಸಮುದಾಯದ ನಾಯಕರು ಮತ್ತು ನಾಗರೀಕರಿಗೆ ಗ್ರಾಮೀಣ ಪ್ರದೇಶಗಳು ಅಸಮರ್ಪಕ ವಿತರಣಾ ಸೇವೆಗಳಿಂದ ಎದುರಿಸಬೇಕಾಗುವ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಿಳಿವಳಿಕೆ, ಕೌಶಲಗಳು ಹಾಗೂ ಆತ್ಮವಿಶ್ವಾಸವನ್ನು ಒದಗಿಸಲಾಗುತ್ತದೆ.

ಕೋಷ್ಟಕ 1: ಸೆಹಗಲ್ ಫೌಂಡೇಶನ್ ನೀರಿನ ನಿರ್ವಹಣಾ ಮಧ್ಯಸ್ಥಿಕೆಗಳು

ಕ್ರ. ಸಂ ನೀರು ಕೊಯ್ಲು ಮತ್ತು ಸಂರಕ್ಷಣಾ ರಚನೆಗಳು/ಮಧ್ಯಸ್ಥಿಕೆಗಳು ಸಂಖ್ಯೆ
1 ಚೆಕ್‌ ಡ್ಯಾಂಗಳು 86
2 ನಾಲಾ ಅಣೆಕಟ್ಟುಗಳು 74
3 ಹೊಂಡಗಳು/ತೊಟ್ಟಿಗಳ ಅಭಿವೃದ್ಧಿ ಮತ್ತು ಪುನಶ್ಚೇತನ 120
4 ಮರುಹೂರಣ ಬಾವಿಗಳು 421
5 ಇಂಗು ಗುಂಡಿಗಳು 2,210
6 ಇಂಗು ಬಾವಿಗಳು 217
7 ಡ್ರಿಪ್‌ ಮತ್ತು ಸ್ಪ್ರಿಂಕ್ಲರ್‌ಗಳು (ಎಕರೆಗಳಲ್ಲಿ) 1,525
8 ಲೇಸರ್ ಲೆವೆಲಿಂಗ್ (ಎಕರೆಗಳಲ್ಲಿ) 4,983
9 ಶೂನ್ಯ ಬೇಸಾಯ (ಎಕರೆಗಳಲ್ಲಿ) 6,374
10 ಫಾರ್ಮ್‌ ಬಂಡಿಂಗ್‌ (ಎಕರೆಗಳಲ್ಲಿ) 514
11 ಫಾರ್ಮ್‌ ಬಂಡಿಂಗ್‌ (ಮೀಟರ್‌ಗಳಲ್ಲಿ) 55,959
12 ಸಮುದಾಯ ನೀರಿನ ಟ್ಯಾಂಕ್‌ಗಳು 38
13 ಶಾಲೆಗಳಲ್ಲಿ ಛಾವಣಿ ನೀರು ಕೊಯ್ಲು 183
14 WUG/TUGಗಳ ರಚನೆ 41
15 WUG/TUGಗಳ ಕುರಿತು ಜಾಗೃತಿ ಅಧಿವೇಶನಗಳು 187
16 ಸಮುದಾಯಗಳೊಂದಿಗೆ ಸಾಮರ್ಥ್ಯ ನಿರ್ಮಾಣ ಮತ್ತು ಜಾಗೃತಿ ಅಧಿವೇಶನಗಳು 3,646

 

ಸೆಹಗಲ್ ಫೌಂಡೇಶನ್, 1999 ರಿಂದ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಮಹಾರಾಷ್ಟ್ರ ಸೇರಿದಂತೆ ಭಾರತದಲ್ಲಿ ಇದುವರೆಗೆ ಹನ್ನೆರಡು ರಾಜ್ಯಗಳಾದ್ಯಂತ 1,959 ಹಳ್ಳಿಗಳಲ್ಲಿ ಕೃಷಿ ಮತ್ತು ನೀರಿನ ಮಧ್ಯಸ್ಥಿಕೆಗಳನ್ನು ಜಾರಿಗೆ ತಂದಿದೆ.

ನೀರು ನಿರ್ವಹಣೆಯ ಉಪಕ್ರಮಗಳು

ಹೆಚ್ಚುತ್ತಿರುವ ನೀರಿನ ಕೊರತೆ, ಬರ, ಬತ್ತಿದ ಬಾವಿಗಳು ಮತ್ತು ಕುಸಿಯುತ್ತಿರುವ ನೀರಿನ ಮಟ್ಟದಿಂದಾಗಿ ನೀರಾವರಿ ಮತ್ತು ಬೆಳೆ ಇಳುವರಿಯು ಕಡಿಮೆ ಆಗುತ್ತಿದೆ. ನೀರಿನ ಕೊರತೆ ಮತ್ತು ನೀರು ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ತಗ್ಗಿಸಲು, ಸೆಹಗಲ್ ಫೌಂಡೇಶನ್ ತಂಡವು ಕುಡಿಯುವ ಮತ್ತು ಗೃಹಬಳಕೆ ಮತ್ತು ಕೃಷಿ ಉದ್ದೇಶಗಳಿಗಾಗಿ ಸ್ಥಳೀಯ ನೀರಿನ ಸರಬರಾಜುಗಳನ್ನು ಸುರಕ್ಷಿತಗೊಳಿಸಲು ಮತ್ತು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ತಂಡವು ಗ್ರಾಮೀಣ ಸಮುದಾಯಗಳೊಂದಿಗೆ ನೀರು ಕೊಯ್ಲು ಮತ್ತು ಸಂರಕ್ಷಣಾ ರಚನೆಗಳನ್ನು ನಿರ್ಮಿಸುತ್ತದೆ. ಉದಾಹರಣೆಗೆ ಚೆಕ್ ಡ್ಯಾಮ್‌ಗಳ ನಿರ್ಮಾಣ, ಹೊಸ ಹೊಂಡಗಳು ಮತ್ತು ಅಸ್ತಿತ್ವದಲ್ಲಿರುವ ಹೊಂಡಗಳ ಆಳಗೊಳಿಸುವಿಕೆ, ಕೆರೆಗಳ ಹೂಳು ತೆಗೆಯುವುದು ಮತ್ತು ಪುನಶ್ಚೇತನಗೊಳಿಸುವುದು, ಮರುಹೂರಣ ಹೊಂಡಗಳನ್ನು ನಿರ್ಮಿಸುವುದು, ಭೂಮಿಯ ಲೇಸರ್ ಲೆವೆಲಿಂಗ್, ತುಂತುರು/ಹನಿ ನೀರಾವರಿ, ಇತ್ಯಾದಿ. ನೀರನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಮ್ಮ ವಿಧಾನವು ಪರಿಣಾಮಕಾರಿಯಾಗಿರಲು, ನಾವು ಸ್ಥಳೀಯರನ್ನು ಮಧ್ಯಸ್ಥಗಾರರನ್ನಾಗಿ ಮತ್ತು ಹಕ್ಕುದಾರರನ್ನಾಗಿ ಸೇರಿಸಿಕೊಳ್ಳಬೇಕು. ಅವರ ಕೌಶಲ್ಯಗಳು, ಮೌಲ್ಯಗಳು ಮತ್ತು ಸಮಗ್ರ ದೃಷ್ಟಿಕೋನಗಳಿಂದ ಸ್ಫೂರ್ತಿ ಪಡೆಯಬೇಕು.

ಚೌಕ 1: ಕೋಲಾರದ ಕೆಂಪಸಂದ್ರ ಗ್ರಾಮದಲ್ಲಿ ನಲವತ್ತು ವರ್ಷಗಳ ನಂತರ ಕೆರೆ ಹಬ್ಬವನ್ನು ಗ್ರಾಮಸ್ಥರು ಆಚರಿಸಿದರು

ಕೆರೆ ಹಬ್ಬ, ಕರ್ನಾಟಕದಲ್ಲಿನ ಸಾಂಪ್ರದಾಯಿಕ ಕೆರೆಗಳಲ್ಲಿ ನಡೆಸುವ ವಾರ್ಷಿಕ ಆಚರಣೆಯಾಗಿದೆ. ಈ ಹಬ್ಬವನ್ನು ಪ್ರಮುಖ ಕೆರೆಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಲವು ಹಳ್ಳಿಗಳವರು ಮರೆತೆಹೋಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆಂಪಸಂದ್ರದಲ್ಲಿ  ಕಳೆದ ನಲವತ್ತು ವರ್ಷಗಳಿಂದ ಈ ಹಬ್ಬ ಆಚರಿಸಿರಲಿಲ್ಲ. ಏಕೆಂದರೆ ಇಲ್ಲಿನ ಕೆರೆಯಲ್ಲಿ ಹೂಳು ತುಂಬಿಕೊಂಡು ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿತ್ತು.

ಈ ವರ್ಷ ಕೆರೆಯಲ್ಲಿ ನೀರು ತುಂಬಿ ಹೊಸ ಭರವಸೆಯನ್ನು ತಂದಿತು. ಕೆಂಪಸಂದ್ರದಲ್ಲಿ ಕೆರೆಯ ಹೂಳೆತ್ತಿ ಪುನಶ್ಚೇತನ ಕಾರ್ಯ ಕೈಗೊಂಡಿದ್ದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವು ಹೆಚ್ಚಿತು. ಎರಡು ವಾರಕ್ಕಿಂತ ಹೆಚ್ಚು ಕಾಲ ಸ್ಥಳಿಯರು ಕೆರೆ ತುಂಬಿರುವುದನ್ನು ಕಂಡರು. ತುಂಬಿದ ಕೆರೆಯಿಂದಾಗಿ ಹಳ್ಳಿಯ ಅಂತರ್ಜಲ ಮಟ್ಟವು ಹೆಚ್ಚಿ ನೀರು ಹೆಚ್ಚಿತು.

ಕೆರೆ ತುಂಬಿದ್ದನ್ನು ಕಂಡ ಜನ, ಉತ್ಸಾಹದಿಂದ ಹಳ್ಳಿ ಪಂಚಾಯ್ತಿಯ ಮೂಲಕ ತಮ್ಮ ಹಳ್ಳಿಯ ಸಂಪ್ರದಾಯವಾದ ಕೆರೆ ಹಬ್ಬ ಆಚರಿಸಲು ನಿರ್ಧರಿಸಿದರು. ಕೋಕಾ-ಕೋಲಾ ಫೌಂಡೇಶನ್‌ನ ಆರ್ಥಿಕ ಬೆಂಬಲದೊಂದಿಗೆ ಸೆಹಗಲ್ ಫೌಂಡೇಶನ್ ಕಾರ್ಯಗತಗೊಳಿಸಿದ ಯೋಜನೆಗೆ ಅನುಕೂಲವಾಗುವಂತೆ ರಚಿಸಲಾದ ಟ್ಯಾಂಕ್‌(ಕೆರೆ) ಬಳಕೆದಾರರ ಗುಂಪಿನ (TUG) ಮಾರ್ಗದರ್ಶನದಲ್ಲಿ ಕೆರೆಯ ಹೂಳೆತ್ತುವ ಮತ್ತು ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳಲಾಯಿತು.

ಕೆರೆ ಹಬ್ಬ ಎನ್ನುವುದು ಸಮುದಾಯ ಹಬ್ಬವಾಗಿದ್ದು ಒಗ್ಗಟ್ಟನ್ನು ಸೂಚಿಸುವುದರೊಂದಿಗೆ, ಹಳ್ಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿರುವುದನ್ನು ಸೂಚಿಸುತ್ತದೆ. ಇಡೀ ಹಳ್ಳಿಯ ಜನ ಒಗ್ಗೂಡಿ ಪೂಜೆ, ಕುಣಿತ, ಊಟದಲ್ಲಿ ಭಾಗಿಯಾಗುತ್ತಾರೆ. ಹೆಂಗಸರು, ಗಂಡಸರು, ತೊಂಬತ್ತು ವರ್ಷದ ಹಿರಿಯರು ಕೂಡ ಈ ಸಮಯದಲ್ಲಿ ಕುಣಿಯುವುದನ್ನು ಕಾಣಬಹುದು. ಈ ಸಂಭ್ರಮಾಚರಣೆ ಇಡೀ ದಿನ ನಡೆಯುತ್ತದೆ. ಹಳ್ಳಿಯವರೊಬ್ಬರು ದೊಡ್ಡ ತಂಬಿಟ್ಟಿನ ದೀಪವನ್ನು ತಲೆಮೇಲೆ ಹೊತ್ತು ಇಡೀ ಹಳ್ಳಿಯನ್ನು ಸುತ್ತುಹಾಕುತ್ತಾರೆ. ಮೆರವಣಿಗೆಯಲ್ಲಿ ಅದನ್ನು ಕೆರೆಯ ಹತ್ತಿರ ತಂದಾಗ ಹೆಂಗಸರು ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಅಂದು ಯಾರ ಮನೆಯಲ್ಲೂ ಅಡುಗೆ ಮಾಡುವುದಿಲ್ಲ. ಎಲ್ಲರೂ ಒಟ್ಟಾಗಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಅಂದು ಸಾಮಾನ್ಯವಾಗಿ ಮಾಡುವ ತಿಂಡಿ ಪಲಾವ್‌.

ದೀಪವನ್ನು ವಿಶಿಷ್ಟವಾಗಿ ಸ್ಥಳೀಯವಾಗಿ ನಿರ್ಮಿಸಲಾದ ಅಲಂಕೃತ ತೆಪ್ಪದಲ್ಲಿ ಇರಿಸಿ, ಕೆರೆಯ ನೀರಿನಲ್ಲಿ ಬಿಡಲಾಗುತ್ತದೆ. ಇದಕ್ಕೆ ಗ್ರಾಮಸ್ಥರು ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ. ರಾತ್ರಿಯ ಊಟಕ್ಕೆ ವೇಳೆಯಲ್ಲಿ ಒಂದೆರಡು ಆಡು/ಕುರಿಗಳನ್ನು ಕಡಿದು ಅಡುಗೆ ಮಾಡುತ್ತಾರೆ. ಇಡೀ ಗ್ರಾಮವು ಸ್ಥಳೀಯ ಖಾದ್ಯಗಳಾದ ರಾಗಿ ಮುದ್ದೆ, ಸಾಂಬಾರ್, ಅನ್ನ ಇತ್ಯಾದಿಗಳನ್ನು ಆಸ್ವಾದಿಸುತ್ತಾರೆ.

ಈ ಸಂದರ್ಭದಲ್ಲಿ ಕೆಂಪಸಂದ್ರದಲ್ಲಿ ಗ್ರಾಮಸ್ಥರು, ಕೆಲ ಸ್ಥಳೀಯ ಮುಖಂಡರು, ಸಮೀಪದ ಹಳ್ಳಿಗಳಲ್ಲಿನ ಸಂಬಂಧಿಕರು ಸೇರಿದಂತೆ 200ಕ್ಕೂ ಹೆಚ್ಚು ಜನರು ಕೆರೆಯ ಮೇಲೆ ಜಮಾಯಿಸಿದ್ದರು. ಕೆರೆಯ ಹೂಳನ್ನು ಎತ್ತಿದ್ದರ ಫಲಿತಾಂಶಗಳನ್ನು ನೋಡಿ ಜನರು ರೋಮಾಂಚನಗೊಂಡು, ಆಶ್ಚರ್ಯಚಕಿತರಾದರು. ಈ ಪ್ರದೇಶದಲ್ಲಿ ಕೆರೆ ಅಭಿವೃದ್ಧಿಗೆ ಮಾದರಿ ಕೆರೆ ಎಂದು ಸಾಬೀತಾಗಿರುವ ಕೆಂಪಸಂದ್ರ ಕೆರೆಯ ಹೂಳು ತೆಗೆದದ್ದಕ್ಕಾಗಿ ಮತ್ತು ಪುನಶ್ಚೇತನದ ಅದ್ಭುತ ಕಾರ್ಯಕ್ಕಾಗಿ ಗ್ರಾಮಸ್ಥರು ಸೆಹಗಲ್ ಫೌಂಡೇಶನ್ ಮತ್ತು ಕೋಕಾ-ಕೋಲಾ ಫೌಂಡೇಶನ್‌ಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಸಲಾವುದ್ದೀನ್ ಸೈಫಿ ಮತ್ತು ಸುಭಾಷಿಣಿ ಜಿ, ಎಸ್ ಎಂ ಸೆಹಗಲ್ ಫೌಂಡೇಶನ್

ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಕೃಷಿಯು ಮಳೆಯಾಧಾರಿತವಾಗಿರುವುದರಿಂದ, ಆಹಾರ ಉತ್ಪಾದಕತೆಯ ಹೆಚ್ಚಳಕ್ಕಾಗಿ ಕೃಷಿ ಬೇಡಿಕೆಯನ್ನು ಪೂರೈಸಲು ಲಭ್ಯವಿರುವ ನೀರನ್ನು ಸೂಕ್ತವಾಗಿ ನಿರ್ವಹಿಸಬೇಕು. ಹವಾಮಾನ ಬದಲಾವಣೆಗಳ ಪರಿಣಾಮವಾಗಿ ಅನಿಯಮಿತ ಮತ್ತು ಅನಿರೀಕ್ಷಿತ ಮಳೆ ಇವೆಲ್ಲದರ ಪರಿಣಾಮವಾಗಿ ಲಭ್ಯವಿರುವ ನೀರಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಸೆಹಗಲ್ ಫೌಂಡೇಶನ್ ರೈತರೊಂದಿಗೆ ಕೆಲಸ ಮಾಡುತ್ತದೆ. ತುಂತುರು ಮತ್ತು ಹನಿ ನೀರಾವರಿಯ ಬಳಕೆಯನ್ನು ಉತ್ತೇಜಿಸುತ್ತದೆ. ವ್ಯಕ್ತಿಗಳಿಗೆ, ಸಮುದಾಯಗಳಿಗೆ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಕಡಿಮೆ ವೆಚ್ಚದ ನೀರಿನ ಸಂಗ್ರಹ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀರಿನ ಸಂರಕ್ಷಣಾ ತಂತ್ರಗಳು, ಸುಸ್ಥಿರ ಕೃಷಿ ಉತ್ಪಾದನೆಯ ಪ್ರದರ್ಶನವು ಉತ್ಪಾದಕತೆಯನ್ನು ಹೆಚ್ಚಿಸಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಲಭ್ಯತೆಯ ಅವಕಾಶವನ್ನು ಒದಗಿಸಿದೆ.

SM ಸೆಹಗಲ್ ಫೌಂಡೇಶನ್, CSR ಬೆಂಬಲಿತ ಪಾಲುದಾರಿಕೆಯ ಯೋಜನೆಯಡಿಯಲ್ಲಿ, ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಈ ಕೆರೆಯನ್ನು ಪುನಶ್ಚೇತನಗೊಳಿಸುವ ಉಪಕ್ರಮವನ್ನು ಕೈಗೊಂಡಿತು. ಕಳೆದ ನಲವತ್ತು ವರ್ಷಗಳಿಂದ ಹಳ್ಳಿಯ ಕೆರೆಯಲ್ಲಿ ಹೂಳು ತುಂಬಿ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿ ನೀರು ಸಂಗ್ರಹವಾಗುತ್ತಿರಲಿಲ್ಲ. ಕೋಲಾರದ ಮಾಲೂರು ತಾಲ್ಲೂಕಿನ ಕೆಂಪಸಂದ್ರ (ಬಾಕ್ಸ್ 1) ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾಂಪ್ರದಾಯಿಕ ಕೆರೆಗಳ ವಾರ್ಷಿಕ ಆಚರಣೆಯಾದ ಕೆರೆ ಹಬ್ಬ (ಕೆರೆ ಹಬ್ಬ) ಬಹಳ ಹಿಂದೆಯೇ ಮರೆತುಹೋಗಿತ್ತು. ಯೋಜನೆಗೆ ಅನುಕೂಲವಾಗುವಂತೆ ರಚಿಸಲಾದ ಟ್ಯಾಂಕ್(ಕೆರೆ) ಬಳಕೆದಾರರ ಗುಂಪಿನ (TUG) ಮಾರ್ಗದರ್ಶನದಲ್ಲಿ ಕೆರೆ ಹೂಳೆತ್ತುವಿಕೆ, ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಾಯಿತು. ಕೋಕಾ-ಕೋಲಾ ಫೌಂಡೇಶನ್‌ನ ಆರ್ಥಿಕ ಬೆಂಬಲದೊಂದಿಗೆ S M ಸೆಹಗಲ್ ಫೌಂಡೇಶನ್ ಇದನ್ನು ಕಾರ್ಯಗತಗೊಳಿಸಿತು.

ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸಲು ಭಾರತದ ನೀರಿನ ನಿರ್ವಹಣೆಯಲ್ಲಿ ಬದಲಾವಣೆಯ ಅಗತ್ಯವಿದೆ

ಭಾರತದ ಕೃಷಿಯು ಹವಾಮಾನ ಬದಲಾವಣೆಯಿಂದಾಗಿ ಅಪಾಯವನ್ನು ಅದರಲ್ಲೂ ಬರಗಾಲವನ್ನು ಎದುರಿಸುತ್ತದೆ. ಏಕೆಂದರೆ ಭಾರತದಲ್ಲಿನ ಮೂರನೇ ಎರಡರಷ್ಟು ಕೃಷಿಭೂಮಿಯು ಮಳೆಯಾಧಾರಿತವಾಗಿದೆ. ನೀರಾವರಿ ವ್ಯವಸ್ಥೆ ಕೂಡ ಮಳೆಯನ್ನಾಶ್ರಯಿಸಿದೆ. ಪ್ರವಾಹವು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ದೇಶದ ಹಲವು ಭಾಗಗಳಲ್ಲಿ, ಅದರಲ್ಲೂ ಪೂರ್ವ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯು ತಲೆದೋರುತ್ತಲೇ ಇರುತ್ತದೆ. ಇದರೊಂದಿಗೆ ವಾಯುವ್ಯದಲ್ಲಿ ಹಿಮಪಾತ, ಮಧ್ಯ ಹಾಗೂ ಉತ್ತರ ಭಾಗಗಳಲ್ಲಿ ಬಿಸಿಗಾಳಿ, ಪೂರ್ವ ಕರಾವಳಿಯಲ್ಲಿ ಚಂಡಮಾರುತಗಳು ಹಾನಿಯನ್ನುಂಟು ಮಾಡುತ್ತದೆ. ತಾಪಮಾನ ಹೆಚ್ಚಳದಿಂದಾಗಿ ಕೃಷಿಯು ಅಪಾಯಗಳನ್ನು ಎದುರಿಸುತ್ತಿದ್ದು, ಕೃಷಿ ಉತ್ಪಾದನೆಯು ನಷ್ಟವನ್ನು ಅನುಭವಿಸುತ್ತಿದೆ.

ಹವಾಮಾನ ಬದಲಾವಣೆಯಿಂದ ತಲೆದೋರಿರುವ ಬಿಕ್ಕಟ್ಟನ್ನು ಎದುರಿಸಲು ಭಾರತದಲ್ಲಿ ನೀರಿನ ನಿರ್ವಹಣೆಯಲ್ಲಿ ನಾವು ಯಾವ ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು:

  1. ನೀರಾವರಿ ವ್ಯವಸ್ಥೆಗಳ ದಕ್ಷತೆಯನ್ನು ಸುಧಾರಿಸುವುದು.
  2. ಎಲ್ಲಿ ಮೇಲ್ಮಟ್ಟದ ನೀರಿನ ಸಂಪನ್ಮೂಲಗಳು ಇರುವುದಿಲ್ಲವೋ, ಅಂತರ್ಜಲ ಮಟ್ಟವು ಕುಸಿದಿದೆಯೋ ಅಂತಲ್ಲಿ ಅಕ್ಕಿ, ಕಬ್ಬು, ಮೆಕ್ಕೆಜೋಳ ಮತ್ತಿತರ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬೆಳೆಯುವುದನ್ನು ನಿರ್ಬಂಧಿಸಬೇಕು.
  3. ಅಂತರ್ಜಲ ನೀರನ್ನು ಬಳಸಿ ಬೆಳೆಯುವ ನೀರು ಹೆಚ್ಚು ಬೇಡುವ ಬೆಳೆಗಳನ್ನು ನಿರ್ಬಂಧಿಸಬೇಕು (ಇಲ್ಲದಿದ್ದಲ್ಲಿ ನಾವು ಅಕ್ಕಿ, ಸಕ್ಕರೆ ಇತ್ಯಾದಿ ರೂಪದಲ್ಲಿ ನಮ್ಮ ನೀರನ್ನು ರಫ್ತು ಮಾಡುತ್ತೇವೆ)
  4. ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಮತ್ತು ಪ್ರಧಾನ ಬೆಳೆಗಳನ್ನು ವಿಶೇಷವಾಗಿ ಮಳೆ-ಆಧಾರಿತ ಕೃಷಿ ವಲಯಗಳಲ್ಲಿ ಉತ್ತೇಜಿಸಿ.
  5. ಸಾಧ್ಯವಿರುವಲ್ಲಿ ಎಲ್ಲಾ ಬೆಳೆಗಳಿಗೆ ಹನಿ/ಸ್ಪ್ರಿಂಕ್ಲರ್ ಗಳಂತಹ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ.
  6. ಉಚಿತ ವಿದ್ಯುತ್ ಮೇಲಿನ ಸಬ್ಸಿಡಿ ಹಿಂಪಡೆಯಿರಿ.
  7. ನೀರಿನ ಬಳಕೆಯ ಸಮರ್ಥ ಸಾಧನಗಳು, ಪದ್ಧತಿಗಳನ್ನು ಉತ್ತೇಜಿಸಿ.
  8. ನೀರನ್ನು ಸಮರ್ಥವಾಗಿ ಬಳಸಿ ಬೆಳೆಯುವ ಸಾಂಪ್ರದಾಯಿಕ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಸಂಗ್ರಹಣೆ ಬೆಂಬಲವನ್ನು ಒದಗಿಸಿ.

ಪರಾಮರ್ಶನ

ಕೃಷಿ ಇಲಾಖೆ, ಸಹಕಾರ ಮತ್ತು ಕೃಷಿ ಕಲ್ಯಾಣ, ವಾರ್ಷಿಕ ವರದಿ - 2020-21, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಭಾರತ ಸರ್ಕಾರ, ಕೃಷಿಭವನ, ನವದೆಹಲಿ.
https://wotr.org/2023/02/18/the-water-governancestandard- launch/
https://statetimes.in/india-to-showcase-traditionalwater- management-techniques-as-g20-side-event/

Salahuddin Saiphy
Principal Lead, Water management
S M Sehgal Foundation
Survey No. 361 & 362, Village: Ravalkole
Mandal: Medchal, District: Medchal Malkajgiri
Hyderabad, Telangana 501401, India
E-mail: s.saiphy@smsfoundation.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೨ ; ಜೂನ್‌ ೨೦‌೨‌3

 

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp