ಕಿರುಧಾನ್ಯ ಉತ್ಪಾದನೆ ಪರಸ್ಪರ ಕಲಿಕೆಯ ಅನುಭವ


ಸಣ್ಣ ಬೆಂಬಲವು ಮಹತ್ವದ ಬದಲಾವಣೆಗಳನ್ನು ತರಬಲ್ಲದು. RAWE ಕಾರ್ಯಕ್ರಮದ ವಿದ್ಯಾರ್ಥಿಗಳಾಗಿ ಇದು ನಮ್ಮ ಅನುಭವ. ಕಿರುಧಾನ್ಯ ರೈತರಿಗೆ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ನೆರವು ನೀಡುವುದರ ಮೂಲಕ ಕಾರ್ಯಕ್ರಮದಿಂದ ಬಹಳಷ್ಟನ್ನು ಕಲಿತೆವು.


ನಮ್ಮ ಬಿ.ಎಸ್ಸಿ. ಕೃಷಿ ಪಠ್ಯಕ್ರಮ, 7 ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳನ್ನು ಗ್ರಾಮೀಣ ಕೃಷಿ ಕೆಲಸದ ಅನುಭವ (RAWE) ಕಾರ್ಯಕ್ರಮದ ಅಡಿಯಲ್ಲಿ ಹಳ್ಳಿಯೊಂದಕ್ಕೆ ಕಳಿಸಿಕೊಡಲಾಯಿತು. ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ಬೆಳೆ ಬೆಳೆಯುವ ಋತುವಿನುದ್ದಕ್ಕೂ ಹಳ್ಳಿಯಲ್ಲೇ ಇದ್ದುಕೊಂಡು ಅತಿಥೇಯ ರೈತರೊಂದಿಗೆ ಕೆಲಸ ಮಾಡುತ್ತಾ ಕಲಿಯುತ್ತಾರೆ. 2022 ರ ಜುಲೈನಿಂದ ನವೆಂಬರ್ ನಡುವೆ, 22 ವಿದ್ಯಾರ್ಥಿಗಳನ್ನು ಮಧ್ಯಪ್ರದೇಶದ ಉಮಾರಿಯಾದ ಬರ್ಬಾಸ್‌ಪುರ ಎಂಬ ಸಣ್ಣ ಹಳ್ಳಿಯಲ್ಲಿ ಇರಿಸಲಾಯಿತು.

ಬರ್ಬಾಸ್‌ಪುರ ಗ್ರಾಮದಲ್ಲಿ ಸುಮಾರು 450 ರೈತರಿದ್ದು, ಜೀವನಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಬರ್ಬಾಸ್ಪುರ್ ಛತ್ತೀಸ್‌ಗಢದ ಉತ್ತರದಲ್ಲಿನ ಬೆಟ್ಟಗಳ ವಲಯದಲ್ಲಿದೆ. ಇದು ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ಕೆಂಪು, ಹಳದಿ ಹಾಗೂ ಮರಳು ಮಿಶ್ರಿತ ಮಣ್ಣನ್ನು ಕಾಣಬಹುದು. ಭತ್ತ, ಮೆಕ್ಕೆಜೋಳ, ತೊಗರಿ ಇವು ಮಳೆಗಾಲದ ಮುಖ್ಯ ಬೆಳೆಗಳಾದರೆ, ಗೋಧಿ, ಕಾಳುಗಳು, ಮಸೂರ ಅವರೆ/ಮಸೂರ್‌ ದಾಲ್‌ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಅನಿಶ್ಚಿತ ಮಳೆಯಿಂದಾಗಿ ಹಳ್ಳಿಯ ಅರ್ಧದಷ್ಟು ರೈತರು ಮಳೆಗಾಲದಲ್ಲಿ ತಮ್ಮ ಜಮೀನುಗಳನ್ನು ಪಾಳು ಬಿಡುತ್ತಾರೆ. ಎತ್ತರವಾದ ಅಥವಾ ಇಳಿಜಾರು ಭೂಮಿ ಹೊಂದಿರುವ ರೈತರು ನಾಟಿ ಮಾಡಿದ ಭತ್ತಕ್ಕೆ ನೀರು ನಿಲ್ಲಿಸಲು ಕಷ್ಟಪಡುತ್ತಾರೆ. ಹೀಗಾಗಿ ರೈತರು ಚಳಿಗಾಲದ ಬೆಳೆಗಳನ್ನು ಮಾತ್ರ ಬೆಳೆಸಲು ಆದ್ಯತೆ ನೀಡುತ್ತಾರೆ.

ನನ್ನ ಅತಿಥೇಯ ರೈತರಾದ ಶ್ರೀ ಪ್ಯಾರೇಲಾಲ್‌ ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ತಮ್ಮ 2 ಎಕರೆ ಭೂಮಿಯಲ್ಲಿ ಹಾರಕವನ್ನು ಬೆಳೆಯಲಾರಂಭಿಸಿದರು. ಬೆಳೆಗೆ ನೀರಾವರಿ ಮತ್ತು ರಸಗೊಬ್ಬರಗಳಂತಹ ಹೆಚ್ಚಿನ ಒಳಹರಿವಿನ ಅಗತ್ಯವಿಲ್ಲ ಎಂದು ಅವರಿಗೆ ತಿಳಿಯಿತು. ಇಡೀ ಹಳ್ಳಿಯಲ್ಲಿ ಹಾರಕವನ್ನು ಬೆಳೆಯುವ ಮೂರು ಕುಟುಂಬಗಳಲ್ಲಿ ಇವರ ಕುಟುಂಬವೂ ಒಂದು. ಮಾರುಕಟ್ಟೆಯ ಬಗ್ಗೆ ಖಚಿತತೆಯಿಲ್ಲದ ಕಾರಣ ಹೆಚ್ಚಿನ ರೈತರು ಹಾರಕವನ್ನು ಬೆಳೆಯುವ ಧೈರ್ಯ ತೋರುವುದಿಲ್ಲ.

ಸಣ್ಣ ಬದಲಾವಣೆಗಳು, ದೊಡ್ಡ ಲಾಭಗಳು

ವಿದ್ಯಾರ್ಥಿಗಳಾಗಿ ಉತ್ಸಾಹಿ ಕಲಿಕಾರ್ಥಿಗಳಾಗಿ ನಾವೊಂದು ಅವಕಾಶ ಹಾಗೂ ಪರಿಹಾರವನ್ನು ಕಂಡುಕೊಂಡೆವು. ಮಳೆಗಾಲದಲ್ಲಿ ಭತ್ತಕ್ಕೆ ಬದಲಾಗಿ ಹಾರಕವನ್ನು ಬೆಳೆಯವುದು ಉತ್ತಮ ಆಯ್ಕೆ. ಅದರಲ್ಲೂ ಏರಿಳಿತವಿರುವ ನೀರು ನಿಲ್ಲಿಸಲು ಕಷ್ಟವಾದ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದು ಎನ್ನುವುದು ಅರ್ಥವಾಯಿತು. ಪ್ಯಾರೇಲಾಲ್ ಮತ್ತು ಇತರ ಆಸಕ್ತ ರೈತರನ್ನು ಹತ್ತಿರದ ಕೆವಿಕೆ – ಕೆವಿಕೆ ಉಮಾರಿಯಾ ಅವರೊಂದಿಗೆ ಸಂಪರ್ಕಿಸಲು ನಿರ್ಧರಿಸಿದೆವು. KVK ಯ ತಾಂತ್ರಿಕ ಮಾರ್ಗದರ್ಶನದೊಂದಿಗೆ, ರೈತರು ಉತ್ತಮ ಬೆಳೆ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಖಚಿತಪಡಿಸಿಕೊಂಡೆವು. ಉದಾಹರಣೆಗೆ, ಕಾಡು ಪ್ರಾಣಿಗಳಿಂದ ಬೆಳೆಗೆ ಹಾನಿಯಾಗುವ ಸಮಸ್ಯೆಯನ್ನು ಪ್ಯಾರೇಲಾಲ್ ಎದುರಿಸುತ್ತಿದ್ದರು. ಮೊದಲು ರಾತ್ರಿಯಿಡೀ ಹೊಲಕ್ಕೆ ಕಾವಲು ಕಾಯುತ್ತಿದ್ದದ್ದು ಬಹಳ ಶ್ರಮದಾಯಕವಾಗಿತ್ತು. ಕೆವಿಕೆ ಅವರ ಮಾರ್ಗದರ್ಶನದೊಂದಿಗೆ, ಅವರು ಪ್ರಾಣಿ ನಿವಾರಕ ನೀಲ್ಬೊ ದ್ರಾವಣದಲ್ಲಿ ಅದ್ದಿದ ಹಗ್ಗದಿಂದ ಹೊಲಗಳಿಗೆ ಬೇಲಿ ಹಾಕಿದರು. ಕೆವಿಕೆಯು ಜೀವಾಮೃತ ತಯಾರಿಕೆಯ ಬಗ್ಗೆ ರೈತರಿಗೆ ತರಬೇತಿ ನೀಡಿತು. ರೈತರು ಮುಂದಿನ ಬೆಳೆಯನ್ನು ಬಿತ್ತನೆ ಮಾಡುವಾಗ ರೈಜೋಬಿಯಂ ಮತ್ತು ಫಾಸ್ಫರಸ್ ಸೋಲ್ಯುಬಿಲೈಸಿಂಗ್ ಬ್ಯಾಕ್ಟೀರಿಯಾಗಳನ್ನು ಮಣ್ಣಿನಲ್ಲಿ ಅಳವಡಿಸುವಂತೆ ಸಲಹೆ ನೀಡಿದರು. ಈ ಸಣ್ಣ ಬದಲಾವಣೆಗಳಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆ ವರ್ಷ ಇಳುವರಿಯಲ್ಲಿ 30% ಹೆಚ್ಚಳವಾಯಿತು. ಇದು ಅವರ ಆತ್ಮವಿಶ್ವಾಸವನ್ನು ಬಲಗೊಳಿಸಿತು.

ರೈತರಿಗೆ ಹೆಚ್ಚು ಮಾರಾಟದ ಆಯ್ಕೆಗಳಿವೆ ಎಂದು ಖಚಿತಪಡಿಸಿಕೊಂಡೆವು. ಇದರಿಂದ ಅವರನ್ನು ಕಿರುಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಬಹುದು. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಆಶಾ ಫೌಂಡೇಶನ್‌ನ ಕಾರ್ಯನಿರ್ವಾಹಕರೊಂದಿಗೆ ನಾವು ರೈತರ ಸಭೆಯನ್ನು ಏರ್ಪಡಿಸಿದೆವು. ಫೌಂಡೇಶನ್ ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸಲು ಒಪ್ಪಿಕೊಂಡಿತು. ರೈತರಿಗೆ ಖರೀದಿ ಬೆಲೆ ಸೂಕ್ತವಾಗಿದೆ ಎಂದೆನ್ನಿಸಿದಲ್ಲಿ ನಾಸಿಕ್‌ನಲ್ಲಿನ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿತು. ನಾವು ಜಬಲ್‌ಪುರದ ವ್ಯಾಪಾರಿಗಳೊಂದಿಗೆ ಮಾತಾಡಿದೆವು, ಅವರು ತಮ್ಮ ದಾಸ್ತಾನನ್ನು ದೇಶದ ದಕ್ಷಿಣ ರಾಜ್ಯಗಳಿಗೆ ಸಾಗಿಸಿದ್ದಾರೆ. ಉತ್ತಮ ಗುಣಮಟ್ಟದ ಧಾನ್ಯಗಳು ಹತ್ತಿರದ ಜಿಲ್ಲೆಗಳ ರೈತರಿಂದ ಸಿಗುವುದು ಅವರಿಗೂ ಸಂತೋಷದ ವಿಷಯ. ಪ್ಯಾರೆಲಾಲ್‌ ಅವರು ಎಲ್ಲ ಆಯ್ಕೆಗಳನ್ನು ಹೋಲಿಸಿ ನೋಡಿದ ಬಳಿಕ, ತಮ್ಮ ಉತ್ಪನ್ನವನ್ನು ಪಕ್ಕದ ಜಿಲ್ಲೆಯ ಕಿರುಧಾನ್ಯಗಳ ಸಂಸ್ಕರಣಾ ಘಟಕದವರಿಗೆ ಮಾರಾಟ ಮಾಡಲು ನಿರ್ಧರಿಸಿದರು. ಏಕೆಂದರೆ ಈ ವರ್ಷ ಅವರಿಗೆ ಅಲ್ಲಿ ಉತ್ತಮ ಬೆಲೆ ದೊರಕಿತು.

ಕಾಕತಾಳೀಯವೆಂಬಂತೆ, ಅದೇ ಸಮಯದಲ್ಲಿ ಪಕ್ಕದ ಜಿಲ್ಲೆಯ ದಿಂಡೋರಿಯಲ್ಲಿ ದೊಡ್ಡ ಕಿರುಧಾನ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾತಿ ದೊರೆತಿದೆಯೆಂದು ಘೋಷಣೆಯಾಯಿತು. ದಿಂಡೋರಿಯು ಅಲ್ಲಿಂದ ಕೇವಲ ೧೦೦ ಕಿ.ಮೀ ದೂರದಲ್ಲಿತ್ತು. ಅಲ್ಲಿ ಕಿರುಧಾನ್ಯಗಳನ್ನು ಒಳ್ಳೆಯ ಬೆಲೆಗೆ ಖರೀದಿಸಲಾಗುತ್ತಿತ್ತು. ಕೊನೆಗೆ ಎಲ್ಲವೂ ಬೆಳೆಗೆ ಸಿಕ್ಕುವ ಹಣದ ಮೇಲೆ ನಿರ್ಭರವಾಗಿದ್ದು, ಹಣ ಎನ್ನುವುದು ಬಹುದೊಡ್ಡ ನಿರ್ಣಾಯಕ ಅಂಶವಾಗಿದೆ. ಸಂವಾದದ ಸಮಯದಲ್ಲಿ ಪ್ಯಾರೇಲಾಲ್‌ ಹೇಳಿದರು, ಇಷ್ಟು ಹತ್ತಿರದಲ್ಲಿ ಸಂಸ್ಕರಣಾ ಗಿರಣಿ ತೆರೆದದ್ದು ನಮ್ಮ ಅದೃಷ್ಟ. ಭತ್ತಕ್ಕಿಂತ ಹಾರಕ ಉತ್ತಮ ಆಯ್ಕೆ.” ಝಲ್ಕಿ ಬಾಯಿ ಎನ್ನುವ ರೈತ ಮಹಿಳೆ,ಸಿಗುತ್ತಿರುವ ಬೆಲೆ ಹಾಗೂ ಗಿರಣಿಗೆ ಹಾಕುವುದು ಸುಲಭವಾದದ್ದು ಮುಂದಿನ ಋತುವಿನಲ್ಲಿ ಇನ್ನೂ ಉತ್ತಮ ಆದಾಯ ನೀಡುತ್ತಿದೆ ಎನ್ನುವ ಭರವಸೆಯನ್ನು ನೀಡುತ್ತಿದೆ,” ಎಂದು ಹೇಳಿದಳು. ದಿಂಡೋರಿಯಲ್ಲಿ ಶೀಘ್ರದಲ್ಲೇ ತೆರೆಯಲಿರುವ ಕಿರುಧಾನ್ಯ ಸಂಸ್ಕರಣಾ ಘಟಕವು ಈ ಪ್ರದೇಶದಲ್ಲಿ ಹಾರಕ ಬೆಳೆಯುವಂತೆ ಮಾಡುವ ವೇಗವರ್ಧಕವಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಿಲ್ಲಿಂಗ್‌ಗೆ ಕಳುಹಿಸಲು ಮತ್ತು ನಂತರ ಅದನ್ನು ತಮ್ಮ ಆಯ್ಕೆಯ ಖರೀದಿದಾರರಿಗೆ ಮಾರಾಟ ಮಾಡಲು ಅಥವಾ ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಪರಸ್ಪರ ಕಲಿಕೆ

ರೈತರು ತಮ್ಮ ಪಾಳು ಭೂಮಿಯಲ್ಲಿ ಕಡಿಮೆ ನೀರಿನಲ್ಲಿಯೇ ಕಿರುಧಾನ್ಯಗಳನ್ನು ಬೆಳೆಯಬಹುದೆಂದು ಕಲಿತರು. ಕಿರುಧಾನ್ಯಗಳನ್ನು ದೀರ್ಘಕಾಲ ಸಂಗ್ರಹಿಸಿ ಇಡಬಹುದಾದ ಗುಣಹೊಂದಿದ್ದು, ಅವುಗಳನ್ನು ಬೇಗ ಮಾರಾಟ ಮಾಡಬೇಕು ಎನ್ನುವ ಒತ್ತಡವಿರುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರು. ಧಾನ್ಯವನ್ನು ಸಂಗ್ರಹಿಸಿ ಸರಿಯಾದ ಸಮಯಕ್ಕೆ ಮಾರಾಟ ಮಾಡುವ ಮಹತ್ವವನ್ನು ರೈತರು ಅರ್ಥಮಾಡಿಕೊಂಡರು. ಅಲ್ಲದೆ, ವಿದ್ಯಾರ್ಥಿಗಳೊಂದಿಗಿನ ನಿಯಮಿತ ಸಂವಾದದಿಂದ, ಕಿರುಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ. ಸಂಸ್ಕರಣಾ ಘಟಕಗಳ ಸ್ಥಾಪನೆಯು ಉತ್ತಮ ಮಾರುಕಟ್ಟೆ ಅವಕಾಶಗಳನ್ನು ನೀಡುತ್ತದೆ ಎಂದು ತಿಳಿದುಕೊಂಡರು. ಈ ಹೆಚ್ಚಿನ ಅರಿವಿನೊಂದಿಗೆ ೨೦೨೩ರ ಮಳೆಗಾಲದ ಬೆಳೆ ಋತುವಿನಲ್ಲಿ ಹಳ್ಳಿಯ ಹೆಚ್ಚಿನ ರೈತರು ಕಿರುಧಾನ್ಯಗಳನ್ನು ಬೆಳೆಯಲು ಮುಂದಾಗುತ್ತಾರೆ ಎಂದು ನಿರೀಕ್ಷಿಸಿದ್ದೆವು. ಕಿರುಧಾನ್ಯಗಳ ಹೆಚ್ಚಿದ ಉತ್ಪಾದನೆಯೊಂದಿಗೆ ಆಹಾರ ಪದ್ಧತಿಯಲ್ಲಿ ಅವುಗಳ ಒಳಗೊಳ್ಳುವ ಮೂಲಕ ಕುಟುಂಬಗಳ ಆರೋಗ್ಯವನ್ನು ಉತ್ತಮಗೊಳಿಸುತ್ತೇವೆ.

RAWE ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಅವಕಾಶವಾಗಿದೆ. ಸ್ಥಳೀಯ ಭೌಗೋಳಿಕತೆ ಮತ್ತು ಬದಲಾಗುತ್ತಿರುವ ಮಳೆಯ ನಮೂನೆಗಳನ್ನು ಆಧರಿಸಿ ಬೆಳೆ ಆಯ್ಕೆಗಳನ್ನು ಹೇಗೆ ಮಾಡಬೇಕು, ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದನ್ನು ಕಲಿತೆವು. ಸರಳ ಮೌಲ್ಯವರ್ಧನೆಯು ರೈತರ ಆರ್ಥಿಕ ಸ್ಥಿತಿಯಲ್ಲಿ ತರಬಹುದಾದ ಬದಲಾವಣೆಯನ್ನೂ ವಿದ್ಯಾರ್ಥಿಗಳು ಕಲಿತರು.


Surabhi

Student,

Jawaharlal Nehru Krishi Vishva Vidhyalaya,

Jabalpur, M.P. 482004

E-mail: surabhisingh3909@gmail.com


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೧ ; ಮಾರ್ಚ್‌ ೨೦‌೨‌೩

Recent Posts

ವಿಶ್ವ ಆಹಾರ ದಿನ 2025

ವಿಶ್ವ ಆಹಾರ ದಿನ 2025

ಆರೋಗ್ಯಕರ ಹಸಿವು ಮುಕ್ತ ಜಗತ್ತನ್ನು ನಿರ್ಮಿಸಲು ಸುಸ್ಥಿರ ಕೃಷಿ, ನ್ಯಾಯಯುತ ಆಹಾರ ವಿತರಣೆ ಮತ್ತು ಜವಾಬ್ದಾರಿಯುತ ಸೇವನೆಯ ಮೂಲಕ ಸಾಮೂಹಿಕ ಕ್ರಮಕ್ಕೆ ಇದು ಕರೆ ನೀಡುತ್ತದೆ. ಅಂದಾಜು 673 ಮಿಲಿಯನ್ ಜನರು ಹಸಿವಿನಿಂದ ಬದುಕುತ್ತಿದ್ದಾರೆ, ಇದು ಸಾಮೂಹಿಕ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಬಸನಗೌಡರ ವೈವಿಧ್ಯಮಯ ಬೆಳೆಗಳ ತೋಟ

ಹುಣಸೆ ಮರ ಮುಪ್ಪಾದರೂ, ಹುಳಿ ಮುಪ್ಪಲ್ಲ ಅನ್ನುವ ಗಾದೆ ಮಾತಿನಂತೆ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಪ್ರಗತಿಪರ ರೈತರಾದ ಬಸನಗೌಡ ರಾಯನಗೌಡ ಪಾಟೀಲರು ತಮ್ಮ ೭೭ನೇ ವಯಸ್ಸಿನಲ್ಲೂ ಅಪರಿಮಿತ ಉತ್ಸಾಹದೊಂದಿಗೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಬಿ.ಎ. ಪದವಿ ಕಲಿಯುವಾಗ ಒಕ್ಕಲುತನ ಮಾಡಿ ಭೂಮಿ ತಾಯಿಯ ಮಡಿಲಲ್ಲಿ ಸಂತೃಪ್ತಿಯ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ನಂತರ ಬಿ.ಎ. ಪದವಿಯನ್ನು ಅರ್ದದಲ್ಲಿಯೇ ಕೈಬಿಟ್ಟು ಮಾದರಿ ಪ್ರಗತಿಪರ ರೈತನಾಗಬೇಕು ಎಂಬ ದೃಡಸಂಕಲ್ಪದಿಂದ ತಮ್ಮ ತಂದೆಯೊಂದಿಗೆ ವ್ಯವಸಾಯ ಪ್ರಾರಂಭಿಸಿದರು. ಒಕ್ಕಲುತನ  ಪ್ರಾರಂಭಿಸಿದಾಗ ಗೌಡರ ವಯಸ್ಸು ೨೧, ಸುಮಾರು ೫೫ ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಕೃಷಿ, ತೋಟಗಾರಿಕೆ, ಅರಣ್ಯ  ಬೆಳೆಗಳನ್ನು ಬೆಳೆಯುತ್ತಾ ಅವುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವರು. ಅವರ ಚಿಕ್ಕ ಮಗ ಪ್ರವೀಣಗೌಡ ಪಾಟೀಲ ತೋಟ ನಿರ್ವಹಣೆ ಮಾಡಲು ಸಹಾಯ ಮಾಡುವನು.

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ಟರ್ಕಿ ಕೋಳಿ ಸಾಕಾಣಿಕೆ ಮಹಿಳೆಯರಿಗೆ ಪರ್ಯಾಯ ಜೀವನೋಪಾಯದ ಅವಕಾಶ

ದಕ್ಷಿಣ ಪರಗಣ ಜಿಲ್ಲೆಯ ಮಹಿಳೆಯರು ಟರ್ಕಿ ಕೋಳಿ ಸಾಕಾಣಿಕೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಕೆವಿಕೆಯ ಪ್ರಚುರಪಡಿಸಿದ ಈ ಮಾದರಿಯು ಅಭಿವೃದ್ಧಿಗಿದ್ದ ಅಡೆತಡೆಗಳನ್ನು ನಿವಾರಿಸಿ ಮಹಿಳಾ ಗುಂಪುಗಳ ಸಾಮರ್ಥ್ಯವನ್ನು ತೆರೆದಿಟ್ಟಿದೆ.

YouTube
Instagram
WhatsApp