ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಬೆಳೆ ಅವಶೇಷಗಳನ್ನು ಬಯೋಚಾರ್ ಆಗಿ ಪರಿವರ್ತಿಸುವ ಮೂಲಕ ಅವುಗಳನ್ನು ನಿಭಾಯಿಸುವ ಪರಿಸರ ಸ್ನೇಹಿ ವಿಧಾನವನ್ನು ಎತ್ತಿ ತೋರಿಸುತ್ತದೆ. FPO ಈ ಪ್ರಕ್ರಿಯೆಯನ್ನು ಎಲ್ಲರ ಪ್ರಯೋಜನಕ್ಕಾಗಿ ಹೇಗೆ ಒಂದು ವ್ಯಾಪಾರ ಉದ್ಯಮವನ್ನಾಗಿ ಮಾಡಿದೆ ಎಂಬುದನ್ನು ವಿವರಿಸುತ್ತದೆ.
ಬಳಸದ ಬೆಳೆಯ ಅವಶೇಷಗಳನ್ನು ಸುಡುವುದು ಭಾರತದ ರೈತರಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇದು ಪರಿಸರ ಸ್ನೇಹಿ ವಿಧಾನವಲ್ಲ. ಇದು ಗಾಳಿಯನ್ನು ಕಲುಷಿತಗೊಳಿಸುವ ಮೂಲಕ ವಾತಾವರಣದ ಇಂಗಾಲದ ಡೈಆಕ್ಸೈಡ್ ಹೆಚ್ಚಿಸುತ್ತದೆ. ಅಲ್ಲದೆ, ರೈತರು ಸಾವಯವ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದು ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಕಡಿಮೆ ಮಾಡಲು ಕಾರಣವಾಗಿದೆ. ಇದರಿಂದಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಸೋಸುವಿಕೆ ಪ್ರಮಾಣ, ಹೀರಿಕೊಳ್ಳುವ ಸಾಮರ್ಥ್ಯ, ಸೂಕ್ಷ್ಮಜೀವಿಗಳ ಸಂಖ್ಯೆ ಮತ್ತು ಮಣ್ಣಿನ ಕಿಣ್ವಕ ಚಟುವಟಿಕೆಗಳು ಇಳಿಮುಖವಾಗುತ್ತದೆ. ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ಇದು ಗಂಭೀರ ಪರಿಸರ ಸಮಸ್ಯೆಯಾಗಿದ್ದು, ಅಲ್ಲಿ ವಾರ್ಷಿಕವಾಗಿ 405,000 ಹೆಕ್ಟೇರ್ ಹತ್ತಿ ಮತ್ತು 106,000 ಹೆಕ್ಟೇರ್ ತೊಗರಿ ಬೆಳೆಯಲಾಗುತ್ತದೆ.
ಹೆಚ್ಚಿದ ವಾಯು ಮಾಲಿನ್ಯ ಹಾಗೂ ಮಣ್ಣಿನ ಫಲವತ್ತತೆ ಕ್ಷೀಣಿಸುವಿಕೆ ಈ ಎರಡೂ ಸಮಸ್ಯೆಗಳನ್ನು ಪರಿಹರಿಸಲು, ಗ್ರಾಮೀಣಾಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಣೆ ಮೂಲದ ಸರ್ಕಾರೇತರ ಸಂಸ್ಥೆಯಾದ BAIF ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನವು ಬಯೋಚಾರ್ ಉತ್ಪಾದನೆ ಹಾಗೂ ಮಣ್ಣಿನ ಸುಧಾರಣೆಗೆ ಅದರ ಅಳವಡಿಕೆಯನ್ನು ಉತ್ಪಾದನಾ ಉದ್ಯಮವಾಗಿ ಪರಿಚಯಿಸಿತು. ಈ ಉದ್ಯಮವು ಬೆಳೆ ಅವಶೇಷಗಳನ್ನು ಕಚ್ಚಾ ವಸ್ತುಗಳಾಗಿ ಬಳಸುತ್ತದೆ. ರೈತರು ತಮ್ಮ ಮಣ್ಣು ಮತ್ತು ಬೆಳೆ ಇಳುವರಿಯನ್ನು ಸುಧಾರಿಸಲು ಅಂತಿಮ ಉತ್ಪನ್ನವಾದ ಬಯೋಚಾರ್ ಅನ್ನು ಬಳಸಬಹುದು. ಬಯೋಚಾರ್ ಬಳಕೆಯ ಜೊತೆಗೆ, BAIF ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಬಳಕೆ, ಸಾವಯವ ಕೀಟನಾಶಕಗಳ ಬಳಕೆ, ಸುಧಾರಿತ ಕೃಷಿ ಪದ್ಧತಿಗಳು, ಮಣ್ಣು ಮತ್ತು ನೀರಿನ ಸಂರಕ್ಷಣಾ ಪದ್ಧತಿಗಳು ಮತ್ತು ಸುಸ್ಥಿರ ಮಣ್ಣಿನ ಆರೋಗ್ಯ ನಿರ್ವಹಣೆಗಾಗಿ ಎರೆಹುಳು ಗೊಬ್ಬರ ಬಳಕೆಯನ್ನು ಉತ್ತೇಜಿಸಿತು.
ಬಯೋಚಾರ್ ಉತ್ಪಾದನಾ ತಂತ್ರಜ್ಞಾನದ ಬಗೆಗಿನ ತಿಳಿವಳಿಕೆಯ ಕೊರತೆಯಿಂದಾಗಿ ಈ ಉದ್ಯಮವನ್ನು ಕೈಗೆತ್ತಿಕೊಳ್ಳುವಲ್ಲಿ ರೈತರಿಗೆ ತೊಡಕುಗಳಿದ್ದವು. ರೈತರು ಕಿಲ್ನ್ ಮತ್ತು ಇತರ ಉತ್ಪಾದನಾ ಉಪಕರಣಗಳನ್ನು ಖರೀದಿಸಲು ಆಗುತ್ತಿರಲಿಲ್ಲ. ರೈತರು ವೈಯುಕ್ತಿಕವಾಗಿ ಈ ಘಟಕಗಳ ಕಾರ್ಮಿಕರ ಅವಶ್ಯಕತೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ಸಮಸ್ಯೆಗಳನ್ನು ಪರಿಹರಿಸಲು, BAIF, GIZ ಬೆಂಬಲದೊಂದಿಗೆ 2019 ರಲ್ಲಿ ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ತುಲ್ಜಾ ರೈತ ಉತ್ಪಾದಕ ಕಂಪನಿ ಎಂಬ ರೈತ ಉತ್ಪಾದಕ ಸಂಸ್ಥೆಯನ್ನು (FPO) ರೂಪಿಸಿತು. ಸಂಘದ ಸದಸ್ಯರ ಸಂಖ್ಯೆ 220. ಪ್ರತಿಯೊಬ್ಬ ಸದಸ್ಯರಿಂದ ರೂ.1000 ಪಡೆಯಲಾಯಿತು. ಯವತ್ಮಾಲ್ ಮತ್ತು ಅಮರಾವತಿ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶ ಹೆಚ್ಚಿದ್ದು, ರೈತರು ಬೆಳೆ ಕೊಯ್ಲಿನ ನಂತರ ಬೆಳೆ ಅವಶೇಷಗಳನ್ನು ಸುಡುವುದು ಸಾಮಾನ್ಯವಾಗಿತ್ತು. ಆದರೆ ಇದೊಂದು ಅಪಾಯಕಾರಿ ಅಭ್ಯಾಸವಾಗಿತ್ತು. ಇದನ್ನೇ ಅವಕಾಶವಾಗಿ ಬಳಸಿಕೊಂಡು, ಅವಶೇಷಗಳನ್ನು ಸುಡುವುದರಿಂದಾಗುವ ಅಪಾಯಗಳ ಬಗ್ಗೆ ಕೃಷಿ ಸಮುದಾಯಗಳಲ್ಲಿ ಅರಿವು ಮೂಡಿಸಲು FPO ಹಲವಾರು ಸಭೆಗಳನ್ನು ಆಯೋಜಿಸಿತು. ಅದೇ ರೀತಿ, ಮಣ್ಣಿನ ಉತ್ಪಾದಕತೆಯನ್ನು ಸುಧಾರಿಸಲು ಬಯೋಚಾರ್ ಬಳಕೆ ಮಾಡುವುದು ಕೂಡ ಈ ಸಭೆಯ ವಿಷಯಗಳಲ್ಲಿ ಒಂದಾಗಿತ್ತು. ಈ ಕಾರ್ಯಕ್ರಮಗಳನ್ನು ರೈತರ ಜಮೀನುಗಳಲ್ಲಿ, ಪ್ರಾತ್ಯಕ್ಷಿಕೆ ಕ್ಷೇತ್ರಗಳಲ್ಲಿ ಮತ್ತು ರೈತ ಶಾಲೆಗಳಲ್ಲಿ ಆಯೋಜಿಸಲಾಗಿತ್ತು.
ಬಯೋಚಾರ್ ಇಂಗಾಲದ ಸಮೃದ್ಧ ಮೂಲವಾಗಿದೆ. ಮಣ್ಣಿನಲ್ಲಿ ಇಂಗಾಲದ ಮಟ್ಟವನ್ನು ಹೆಚ್ಚಿಸುತ್ತದೆ. ನೀರು ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬಯೋಚಾರ್ ಬಳಕೆಯಿಂದ ಸೂಕ್ಷ್ಮಜೀವಿಗಳ ಸಂಖ್ಯೆ, ಕಿಣ್ವಕ ಚಟುವಟಿಕೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಇದರ ಬಳಕೆಯು ಬೆಳೆಗಳ ರೋಗ ನಿರೋಧಕ ಶಕ್ತಿ ಮತ್ತು ಬರ ತಾಳಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
ಜನವರಿ 2021 ರಿಂದ FPO ಹತ್ತಿ ಬೆಳೆ ಅವಶೇಷಗಳನ್ನು ಖರೀದಿಸಲು ಪ್ರಾರಂಭಿಸಿತು. ಪ್ರತಿ ಕೆಜಿಗೆ ರೂ. 2.5-3.0 ಪೂರ್ವನಿಗದಿತ ಬೆಲೆಯೊಂದಿಗೆ ಖರೀದಿಸಲು ಆರಂಭಿಸಿತು. ಇದು FPOಗಳಿಗೆ ರೈತರು ತಮ್ಮ ಬೆಳೆ ಅವಶೇಷಗಳನ್ನು ಮಾರಾಟ ಮಾಡಲು ಮುಂದಾಗುವಂತೆ ಮಾಡಿತು. ಇಲ್ಲದಿದ್ದರೆ, ಅವರು ಬೆಳೆ ಅವಶೇಷಗಳನ್ನು ತೆರೆದ ಸ್ಥಳದಲ್ಲಿ ಸುಡುತ್ತಿದ್ದರು. ಸಂಗ್ರಹಿಸಿದ ಅವಶೇಷಗಳನ್ನು ಪೈರೋಲಿಸಿಸ್ ಪ್ರಕ್ರಿಯೆಯ ಮೂಲಕ ಬಯೋಚಾರ್ ರೂಪದಲ್ಲಿ ಸಂಸ್ಕರಿಸಲಾಯಿತು. ಪೈರೋಲಿಸಿಸ್ ಪ್ರಕ್ರಿಯೆಗೆ ಬಳಸುವ ಕಿಲ್‌ಗಳ (ಡ್ರಮ್‌ಗಳ) (ಗಾತ್ರ – 200 ಕೆಜಿ) ಬೆಲೆ ಸುಮಾರು ರೂ. 60,000. ಇದಲ್ಲದೆ, ಬಯೋಚಾರ್ ಅನ್ನು ಪುಡಿ ಮಾಡಿ, ಗೋಣಿ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಇದನ್ನು ರೈತ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ (ಮಾರುಕಟ್ಟೆ ದರಕ್ಕಿಂತ ಸುಮಾರು ಪ್ರತಿ ಕೆಜಿಗೆ ರೂ. 2-3 ಕಡಿಮೆ).
2021-22ನೇ ವರ್ಷದಲ್ಲಿ, FPO 100 ಟನ್ ಬೆಳೆ ಅವಶೇಷಗಳನ್ನು 25 ಟನ್ ಬಯೋಚಾರ್ ಆಗಿ ಯಶಸ್ವಿಯಾಗಿ ಪರಿವರ್ತಿಸಿತು.
ಫಲಿತಾಂಶಗಳು
FPO ನಡೆಸುವ ಬಯೋಚಾರ್ ತಯಾರಿಕಾ ಘಟಕವು ವಿವಿಧ ಪಾಲುದಾರರಿಗೆ ಹೊಸ ಅವಕಾಶಗಳು ಮತ್ತು ಆರ್ಥಿಕ ಮೂಲವನ್ನು ಸೃಷ್ಟಿಸಿತು – ರೈತರು ಹತ್ತಿ ಬೆಳೆಯ ಅವಶೇಷಗಳನ್ನು ಮಾರಬಹುದಿತ್ತು; ಹತ್ತಿ ಅವಶೇಷಗಳ ಸಂಗ್ರಹ ಮತ್ತು ಬಯೋಚಾರ್ ಉತ್ಪಾದನೆಗೆ ಕಾರ್ಮಿಕರ ಅಗತ್ಯವಿತ್ತು; ಸಾಗಣೆದಾರರು ಅವಶೇಷಗಳನ್ನು ಸಂಸ್ಕರಣಾ ಕೇಂದ್ರಕ್ಕೆ ಸಾಗಿಸುವ ಅವಕಾಶ ಸೃಷ್ಟಿಯಾಯಿತು; ಅಂತಿಮವಾಗಿ, ರೈತರು ತಮ್ಮ ಬೆಳೆಗಳಿಗೆ ಬಳಸಲು ಬಯೋಚಾರ್ ಖರೀದಿದಾರರಾದರು.
ರೈತರು ಜಮೀನು ಸ್ವಚ್ಛತಾ ಕಾರ್ಯಾಚರಣೆಗಳಿಗೆ ಹಣ ಖರ್ಚು ಮಾಡುವ ಬದಲು ಕೃಷಿ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸಲು ಪ್ರಾರಂಭಿಸಿದರು. ಈ ಉದ್ಯಮವು ಕೌಶಲ್ಯವಿದ್ದ ಮತ್ತು ಕೌಶಲ್ಯರಹಿತ ಕೆಲಸಗಾರರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿತು. ರೈತರ ಜಮೀನಿನಲ್ಲಿನ ಅವಶೇಷಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಸಾಗಿಸಲು – ಹೀಗೆ ಎರಡು ಬಗೆಯ ಕೌಶಲ್ಯರಹಿತ ಕೆಲಸಗಾರರ ಅಗತ್ಯವಿರುತ್ತದೆ. ಕೌಶಲ್ಯಸಹಿತ ಅಥವಾ ಅರೆಕೌಶಲ್ಯ ಕೆಲಸಗಾರರು ಬಯೋಚಾರ್ ಉತ್ಪಾದನೆಯಲ್ಲಿನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಅವರು ಪುಡಿ ತಯಾರಿಕೆ ಹಾಗೂ ಪ್ಯಾಕೇಜಿಂಗ್ ಕೆಲಸ ಮಾಡುತ್ತಾರೆ. FPO ಪ್ಯಾಕ್ ಮಾಡಲಾದ ಬಯೋಚಾರ್ ಅನ್ನು ತನ್ನ ಸ್ಥಳೀಯ ಸದಸ್ಯರಿಗೆ ಮಾರಾಟ ಮಾಡುವ ಮೂಲಕ ಸ್ವಲ್ಪ ಆದಾಯವನ್ನು ಗಳಿಸುತ್ತದೆ.
ರೈತರು ತಮ್ಮ ಇಳುವರಿ ಉತ್ತಮಗೊಳಿಸಲು ಬಯೋಚಾರ್ ಬಳಸಲು ಆರಂಭಿಸಿರುವುದರಿಂದ, ಬೇಡಿಕೆ ಹೆಚ್ಚಾಗಿದೆ.
ಕ್ರಮೇಣ, FPO ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಿಕೊಂಡಿತು. ನವೆಂಬರ್ 2022 ರಿಂದ, FPO, ಪ್ರೊಸಾಯಿಲ್ ಯೋಜನೆಯಡಿಯಲ್ಲಿ ಬಯೋಚಾರ್ ಉತ್ಪಾದಿಸುವುದರ ಜೊತೆಗೆ, ಬೇಳೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಿತು. ಈ ಎಲ್ಲಾ ಕಾರ್ಯಾಚರಣೆಗಳು ಚಿತ್ರ 1 ರಲ್ಲಿ ತೋರಿಸಿರುವಂತೆ ಪ್ರದೇಶದ ಆರ್ಥಿಕತೆಗೆ ಕೊಡುಗೆ ನೀಡಿವೆ. ರೈತರು ಸಾಮೂಹಿಕವಾಗಿ ಕೆಲಸ ಮಾಡುವ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಇದರ ಪ್ರಯೋಜನ ಪಡೆದರು.
ರೈತರು ಬಯೋಚಾರ್ ಬಳಸಲು ಆರಂಭಿಸಿದ್ದಾರೆ. ಬಯೋಚಾರ್ ಬಳಕೆಯ ಪ್ರಯೋಜನವು ದೀರ್ಘಕಾಲಿಕವಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಹೂಡಿಕೆಯೆಂದು ಪರಿಗಣಿಸಲಾಗಿದೆ. ರೈತರು ರಸಗೊಬ್ಬರಕ್ಕೆ ತಗಲುತ್ತಿದ್ದ ವೆಚ್ಚ ಕಡಿಮೆಯಾಗಿದ್ದು ಅದನ್ನು ಬಯೋಚಾರ್‌ಗೆ ತಗಲುವ ವೆಚ್ಚದೊಂದಿಗೆ ಸರಿದೂಗಿಸಿಕೊಂಡಿದ್ದಾರೆ. ಬಯೋಚಾರ್ ಬೆಳೆಯ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅಗತ್ಯವಿರುವ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತದೆ. ದೊಡ್ಡ ಜಮೀನನ್ನು ಹೊಂದಿರುವ ರೈತರಿಗೆ ಬಯೋಚಾರ್ ಬಳಕೆ ದುಬಾರಿ ಅನ್ನಿಸಿದೆ. ಅವರಿಗೆ ಬೆಂಬಲ ಒದಗಿಸಿದರೆ ಬಳಸಲು ಸಿದ್ಧರಿದ್ದಾರೆ.
ಸೋಯಾಬೀನ್, ಹತ್ತಿ, ತೊಗರಿ ಮುಂತಾದ ಬೆಳೆಗಳಲ್ಲಿ ಹೆಕ್ಟೇರ್‌ಗೆ 2.5 ಟನ್ ಬಳಸಲಾಗಿದೆ ಎಂದು ರೈತರು ವರದಿ ಮಾಡಿದ್ದಾರೆ. ಭೂಮಿಯನ್ನು ಸಿದ್ಧಪಡಿಸುವ/ಹದಗೊಳಿಸುವ ಸಮಯದಲ್ಲಿ ಬಯೋಚಾರ್ ಬಳಸಲಾಗುತ್ತಿತ್ತು. ವಿವಿಧ ಋತುಗಳಲ್ಲಿ ರೈತರ ಕ್ಷೇತ್ರ ಸಂಶೋಧನಾ ಪ್ರಯೋಗಗಳಲ್ಲಿ ಕಂಡುಬಂದ ಬೆಳೆ ಇಳುವರಿ ಹೀಗಿದೆ: 2020 ರ ಚಳಿಗಾಲದ ಬೆಳೆ (ರಬಿ) – ಗೋಧಿಯಲ್ಲಿ 12.59% (12 ಪ್ಲಾಟ್‌ಗಳು); 13.44% ಗ್ರಾಂ (08 ಪ್ಲಾಟ್‌ಗಳು); 2021 ರ ಮಳೆಗಾಲದ ಬೆಳೆಗಳು (ಖಾರಿಫ್): ಹತ್ತಿಯಲ್ಲಿ 12.16% (20 ಪ್ಲಾಟ್‌ಗಳು); ಸೋಯಾಬೀನ್‌ನಲ್ಲಿ 7.04 (6 ಪ್ಲಾಟ್‌ಗಳು); 2021 ರ ಚಳಿಗಾಲದ ಬೆಳೆ (ರಬಿ): ಗೋಧಿಯಲ್ಲಿ 13.68% (12 ಪ್ಲಾಟ್‌ಗಳು); 13.07% ಗ್ರಾಂ (8 ಪ್ಲಾಟ್‌ಗಳು). ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಉತ್ತಮವಾಗಿರುವುದನ್ನು ವರದಿ ಮಾಡಿದ್ದಾರೆ. ಅಕ್ಕಪಕ್ಕದ ಹಳ್ಳಿಯ ರೈತರು ಬಯೋಚಾರ್ ಹಾಕಿದ ಜಮೀನುಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಕ್ಷೇತ್ರಗಳನ್ನು ನೋಡಿದ್ದಾರೆ. ಆ ಜಮೀನುಗಳಲ್ಲಿ ನಿಯಂತ್ರಿತ ಪ್ರಾತ್ಯಕ್ಷಿಕ ಕ್ಷೇತ್ರವನ್ನು ಸ್ಥಾಪಿಸಲಾಗಿತ್ತು.
ಮುಂದಿನ ಹಾದಿ
ಬಯೋಚಾರ್ ಬಳಕೆಯ ಪ್ರಯೋಜನಗಳನ್ನು ರೈತರಿಗೆ ಅರಿಯುವವರೆಗೆ ಸ್ವಲ್ಪ ಸಮಯದವರೆಗೆ ಬೆಂಬಲವನ್ನು ಒದಗಿಸಬೇಕಾಗಿದೆ. FPO ಗಳು ಉತ್ಪಾದಿಸುವ ಬಯೋಚಾರ್‌ಗೆ ಮಾರುಕಟ್ಟೆ ಬೆಂಬಲ ಅಗತ್ಯ. ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಈ ಬೆಂಬಲ ನೀಡಬಹುದಾಗಿದೆ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಬಯೋಚಾರ್ ಉತ್ಪಾದನಾ ಕಾರ್ಯವಿಧಾನಗಳನ್ನು ಪ್ರಮಾಣೀಕರಿಸಬೇಕಾಗಿದೆ. ಬಹು ಸಂಸ್ಕರಣಾ ಘಟಕಗಳನ್ನು ಸೇರಿಸುವುದರೊಂದಿಗೆ FPO ಗಳ ಸೇವೆಗಳನ್ನು ವಿಸ್ತರಿಸಲು ಹೆಚ್ಚುವರಿ ಆರ್ಥಿಕ ಬೆಂಬಲದ ಅಗತ್ಯವಿದೆ.
Ganesh R Bedare
Associate Thematic Programme Executive
BAIF Development Research Foundation
BAIF Bhavan, Dr. Manibhai Desai Nagar
Warje, Pune – 411058
E-mail: ganeshb@baif.org.in
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ : ೨೫; ಸಂಚಿಕೆ : ೪; ಡಿಸೆಂಬರ್ ೨೦೨೩



