ಮಹಿಳಾ ರೈತರು ಕೃಷಿ ಪರಿಸರ ವಿಜ್ಞಾನದ ತತ್ವಗಳನ್ನು ತಾವಾಗಿಯೇ ಅಭ್ಯಾಸ ಮಾಡಿದರು. ಅವರ ಗಮನವು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣು ಮತ್ತು ಬೆಳೆಗಳೊಂದಿಗೆ ತಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನಹರಿಸಿದರು. ಹಿಮಾಚಲ ಪ್ರದೇಶದ ಎರಡು ಪ್ರಕರಣಗಳನ್ನು ಇಲ್ಲಿ ನೀಡಲಾಗಿದೆ. ಇದು ಜ್ಞಾನ ಮತ್ತು ತಂತ್ರಜ್ಞಾನವನ್ನು ಮಹಿಳೆಯರು ತಮ್ಮ ವೈವಿಧ್ಯಮಯ ಜೀವನೋಪಾಯಕ್ಕಾಗಿ ಮತ್ತು ತಮ್ಮ ತೋಟಗಳನ್ನು ಸುಸ್ಥಿರಗೊಳಿಸಲು ಆಯ್ಕೆ ಮಾಡಿಕೊಂಡರು ಎಂಬುದನ್ನು ಸಾಬೀತುಪಡಿಸುತ್ತದೆ.
ಭಾರತದಲ್ಲಿ ಮಹಿಳೆಯರು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಿದ್ದೂ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾವಾಗಲೂ ಪುರುಷರು ಅಥವಾ ಹಿರಿಯ ಮಹಿಳೆಯರ ಕೈಯಲ್ಲೇ ಉಳಿದಿದೆ. ಸಾಮಾನ್ಯವಾಗಿ ಅವರು ವಹಿಸುವ ಪಾತ್ರಗಳು ಲಿಂಗ ಹಾಗೂ ತಂತ್ರಜ್ಞಾನ ಪಕ್ಷಪಾತದಿಂದ ನಿರ್ಧಾರಿತವಾಗುತ್ತವೆ. ಟ್ರ್ಯಾಕ್ಟರ್ ಅಥವಾ ಎತ್ತುಗಳನ್ನು ಬಳಸಿ ಉಳುಮೆ ಮಾಡಬೇಕಾದಂತಹ ಕಡೆ ಆ ಕೆಲಸಗಳನ್ನು ಗಂಡಸರು ಮಾಡುತ್ತಾರೆ. ಬೀಜ ಬಿತ್ತನೆ, ಕಳೆ ಕೀಳುವುದು, ಕೊಯ್ಲು ಮೊದಲಾದ ಕೆಲಸಗಳನ್ನು ಹೆಂಗಸರು ಮಾಡುತ್ತಾರೆ.
ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ, ಸಣ್ಣ ಭೂಮಿಯನ್ನು ಹೊಂದಿರುವ, ಸೀಮಿತ ಜೀವನೋಪಾಯದ ಅವಕಾಶಗಳ ಕಾರಣದಿಂದ ಗಂಡಸರು, ಇತರ ಆದಾಯದ ಮೂಲಗಳನ್ನು ಹುಡುಕಿಕೊಂಡು ಬಯಲು ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಮಹಿಳೆಯರು ಕೃಷಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಕಾರಣವಾಗಿದೆ. ಹೆಚ್ಚಿನ ಸ್ವಾಯತ್ತತೆಯೊಂದಿಗೆ, ಮಹಿಳೆಯರು ಬೆಳೆ ಪೋಷಣೆಯನ್ನು ಮೀರಿ ಕುಟುಂಬಕ್ಕೆ ಹೆಚ್ಚು ಉಪಯೋಗವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿನ ನಮ್ಮ ಯೋಜನಾ ಪ್ರದೇಶಕ್ಕೆ ಸೇರಿದ ಈ ಕೆಳಗಿನ ಪ್ರಕರಣಗಳು ಇದನ್ನು ಎತ್ತಿ ತೋರಿಸುತ್ತವೆ.
ಅತ್ತಿ ಅವರ ಪ್ರಕರಣ
ಅತ್ತಿ ಸಕ್ರಿ ಪಂಚಾಯತ್‌ನ ಸುಕರ್ಣ ಗ್ರಾಮದಲ್ಲಿ ವಾಸಿಸುವ 40 ವರ್ಷದ ರೈತ ಮಹಿಳೆ. ಆಕೆ ಪರಿಶಿಷ್ಟ ಜಾತಿಗೆ ಸೇರಿದವಳು. ಆಕೆಯ ಗಂಡ ದಿನಗೂಲಿ ಕೆಲಸ ಮಾಡುತ್ತಾನೆ. ಅವರು 27 ಕನಾಲ್‌ಗಳು (8 ಕನಾಲ್‌ಗಳು ಒಂದು ಎಕರೆಗೆ ಸಮ) ಕೃಷಿ ಭೂಮಿಯನ್ನು ಹೊಂದಿದ್ದಾರೆ. ಅದರಲ್ಲಿ 25 ಕನಾಲ್‌ಗಳಲ್ಲಿ ಕೃಷಿ ಮಾಡಲಾಗುತ್ತದೆ. 18 ಕನಾಲ್‌ಗಳು ಅವರ ಮನೆಯ ಪಕ್ಕದಲ್ಲಿದ್ದರೆ, 7 ಕನಾಲ್‌ಗಳು ದೂರದಲ್ಲಿವೆ.
2017 ರವರೆಗೆ, ಅವರ ಮನೆಯ ಪಕ್ಕದಲ್ಲಿರುವ 18 ಕನಾಲ್‌ಗಳ ಭೂಮಿ ಮುಳ್ಳಿನ ಪೊದೆಗಳು, ಮರಗಳು ಮತ್ತು ಬಳ್ಳಿಗಳಿಂದ ಆವೃತವಾಗಿತ್ತು. ” ಈ ಕಡೆ ನಿಂತ ಮನುಷ್ಯ ಆ ಕಡೆ ಕಾಣದೇ ಇರೋಷ್ಟು ಇಲ್ಲಿ ಕಾಡಿತ್ತು.” ಅದನ್ನು ತೆರವುಗೊಳಿಸಲು ಆಕೆ ಸ್ಥಳೀಯ ಪಶುಪಾಲಕರಾದ ಗಡ್ಡಿ ಸಮುದಾಯದವರಿಗೆ ಅಲ್ಲಿ ಜಾನುವಾರುಗಳನ್ನು ಮೇಯಿಸಲು ಆಹ್ವಾನಿಸಿದಳು. ಜಾನುವಾರುಗಳು ಆ ಭೂಮಿಯನ್ನು ಸ್ವಚ್ಛಗೊಳಿಸಲು ಅವಳಿಗೆ ಮೊದಲು ಸಹಾಯಮಾಡಿದವು. ಆಮೇಲೆ ಉಳಿದಿದ್ದ ಗಿಡಗಂಟಿಗಳು, ಬಳ್ಳಿಗಳನ್ನು ಕತ್ತರಿಸಿದಳು. ಕಡಿದುಹಾಕಲು ಕಷ್ಟವಾದ ಮರಗಳನ್ನು, ಪೊದೆಗಳನ್ನು ಪಕ್ಕದ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ನೆಡಲು ಬಂದಿದ್ದ ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ತೆರೆವುಗೊಳಿಸಲು. ನಿಧಾನವಾಗಿ ಒಂದೊಂದೇ ಭೂಮಿಯನ್ನು ಹೀಗೆ ಸ್ವಚ್ಛಗೊಳಿಸಿ ವಿವಿಧ ಬೆಳೆ ಬೆಳೆಯಲು ಸಿದ್ಧಪಡಿಸಿಕೊಂಡಳು. ಅವುಗಳ ಮಾರಾಟಕ್ಕೆ ಗ್ರಾಮಸ್ಥರು ಹಾಗೂ ಮಾರುಕಟ್ಟೆಯನ್ನು ಅವಲಂಬಿಸಿದ್ದಳು.
ಹಲವು ವರ್ಷಗಳ ಕಾಲ ಭೂಮಿ ಮರಗಳಿಂದ ಆವೃತವಾಗಿದ್ದ ಕಾರಣ, ಅವುಗಳನ್ನು ತೆರವುಗೊಳಿಸಿದ ಭೂಮಿ ಅತ್ಯಂತ ಫಲವತ್ತಾಗಿತ್ತು. ಈ ಭೂಮಿಯಿಂದ ಬರುವ ಇಳುವರಿಯು ಅವರ ಕುಟುಂಬವು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿದ್ದ ಇತರ ಕೃಷಿ ಭೂಮಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಿತ್ತು. ಹೆಚ್ಚಿನ ಇಳುವರಿಯು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುವರಿಯನ್ನು ಮಾರಾಟ ಮಾಡಲು ಮತ್ತು ಹೆಚ್ಚುವರಿ ಆದಾಯವನ್ನು ಗಳಿಸಲು ಅವಕಾಶವನ್ನು ನೀಡಿತು. ಮುಂದಿನ ಋತುವಿನಲ್ಲಿ, ಅಲ್ಲಿ ಸೋಯಾಬೀನ್ ಬೆಳೆದರು. ನಂತರ ಸ್ಥಳೀಯ ಭಾಷೆಯಲ್ಲಿ “ಸುವಾಡು” ಎಂದು ಕರೆಯಲಾಗುವ ಕೈತೋಟವನ್ನು (ಹಿತ್ತಲ ತೋಟ) ಮಾಡಿದರು. ಭೂಮಿ ಅತ್ಯಂತ ಫಲವತ್ತಾಗಿದ್ದರಿಂದ ಈ ಹೊಸ ಜಮೀನಿನಲ್ಲಿ ರಾಸಾಯನಿಕಗಳನ್ನು ಬಳಸುವ ಅಗತ್ಯ ಅತ್ತಿಗೆ ಎಂದಿಗೂ ಬರಲಿಲ್ಲ. ಧಾನ್ಯಗಳು, ಕೈ ತೋಟದ ಜೊತೆಗೆ, ಮಾವು, ಬ್ಲ್ಯಾಕ್‌ಬೆರಿ, ನಿಂಬೆ, ನೆಲ್ಲಿಕಾಯಿ, ಮಲ್ಬೆರಿ ಮತ್ತು ಪೇರಲ ಮುಂತಾದ ವಿವಿಧ ಹಣ್ಣಿನ ಮರಗಳನ್ನು ನೆಟ್ಟರು. ಅತ್ತಿ 4 ಹಸುಗಳನ್ನು ಸಹ ಹೊಂದಿದ್ದು, ಅವುಗಳಲ್ಲಿ ಒಂದು ದೇಸಿ ಮತ್ತು 3 ಮಿಶ್ರತಳಿಗಳು. ಆಕೆ ಮನೆಯಲ್ಲಿ ಮೊಸರು, ತುಪ್ಪ ಮತ್ತು ಚೀಸ್‌ನಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸುವುದರಿಂದ, ಮಾರಾಟ ಮಾಡಲು ಅವರ ಬಳಿ ಸಾಮಾನ್ಯವಾಗಿ ಸಾಕಷ್ಟು ಹಾಲು ಇರುವುದಿಲ್ಲ.
2022 ರಲ್ಲಿ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ATMA) ಯೋಜನೆಯಡಿಯಲ್ಲಿ, ಅತ್ತಿ ಸಾಂಪ್ರದಾಯಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾದಳು. ಈ ಯೋಜನೆಯನ್ನು ಆಕೆಗೆ ಸ್ಥಳೀಯ ಸರ್ಕಾರೇತರ ಸಂಸ್ಥೆಯಾದ ಗ್ರಾಮೀಣ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ (RTDC) ಪರಿಚಯಿಸಿತು. ಸಮಕಾಲೀನ ಕೃಷಿ ತಂತ್ರಗಳನ್ನು ಕಲಿಯಲು ಆಕೆ ವಿವಿಧ ಆನ್-ಫೀಲ್ಡ್ ತರಬೇತಿಗಳು ಮತ್ತು ಪ್ರದರ್ಶನ (ಎಕ್ಸ್‌ಪೋಸರ್) ಕ್ಷೇತ್ರಗಳಿಗೆ ಭೇಟಿ ನೀಡಿದರು. ಕಳೆದ ಖಾರಿಫ್ ಋತುವಿನಲ್ಲಿ ಬಟಾಣಿ, ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಆಲೂಗಡ್ಡೆ, ಬೀಟ್ರೂಟ್, ಕೇಸರಿ ತೊಗರಿ, ಹತ್ತರಿಕೆ ಸೊಪ್ಪು, ಚಪ್ಪರದವರೆ ಮತ್ತು ಅರಿಶಿನದಂತಹ ತರಕಾರಿಗಳನ್ನು; ಬಾರ್ಲಿ, ರಾಗಿ, ಗೋಧಿ, ಭತ್ತದಂತಹ ಧಾನ್ಯಗಳು ಮತ್ತು ಸಾಸಿವೆ ಮತ್ತು ಅಗಸೆಬೀಜಗಳನ್ನು ಬೆಳೆಸಿದಳು.
ತರಕಾರಿಗಳು ಮತ್ತು ಧಾನ್ಯಗಳ ಜೊತೆಗೆ, ಕ್ಯಾಮೊಮೈಲ್ ಮತ್ತು ಸ್ಪೈಕ್‌ನಾರ್ಡ್‌ನಂತಹ ಔಷಧೀಯ ಸಸ್ಯಗಳನ್ನು ಸಹ ಬೆಳೆಸಿದಳು. ಒಣಗಿದ ಕ್ಯಾಮೊಮೈಲ್ ಹೂವುಗಳನ್ನು ಚಹಾಕ್ಕಾಗಿ ಬಳಸಬಹುದು. ಇದು ಔಷಧೀಯ ಮೌಲ್ಯವನ್ನು ಕೂಡ ಹೊಂದಿದೆ. 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸ್ಪೈಕ್‌ನಾರ್ಡ್‌ನ ಬಲಿತ ಬೇರುಗಳನ್ನು ಆಯುರ್ವೇದ ಔಷಧ ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಆಕೆ ನವೆಂಬರ್ 2022 ರಲ್ಲಿ ಜೇನುಸಾಕಣೆಯನ್ನು ಪ್ರಾರಂಭಿಸಿದಳು. ಜೇನ್ನೊಣ ಪೆಟ್ಟಿಗೆಗಳಿಂದ ಪಡೆದ ಜೇನುತುಪ್ಪವು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿತು ಮಾತ್ರವಲ್ಲದೆ ಜೇನ್ನೊಣಗಳು ಪರಾಗಸ್ಪರ್ಶಕ್ಕೂ ಸಹಾಯ ಮಾಡಿತು. ಇದು ಇಳುವರಿಯ ಮೇಲೆ ಪರಿಣಾಮ ಬೀರಿತು.
ಬ್ರಾಹ್ಮಿದೇವಿ ಪ್ರಕರಣ
ಬ್ರಾಹ್ಮಿ ತನ್ನ ಗಂಡ ಮತ್ತು ಮಗನೊಂದಿಗೆ ಕಾಂಗ್ರಾ ಜಿಲ್ಲೆಯ ಕುಡೈಲ್ ಪಂಚಾಯತ್‌ನ ರಾಜೋಡು ಗ್ರಾಮದ ದೂರದ ಮೂಲೆಯಲ್ಲಿ ವಾಸಿಸುತ್ತಿದ್ದಾಳೆ. 22 ನೇ ವಯಸ್ಸಿನಲ್ಲಿ, ಕೂಡು ಕುಟುಂಬದಿಂದ ದೂರವಾದ ನಂತರ, ಬ್ರಾಹ್ಮಿ ಮತ್ತವಳ ಕುಟುಂಬವು ಪೂರ್ವಜರ ಮನೆಯನ್ನು ತೊರೆದು ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸಿದರು. ಆ ಸಮಯದಲ್ಲಿ ಆಕೆಯ ಗಂಡ ಹತ್ತಿರದ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ತಿಂಗಳಿಗೆ ರೂ. 250 ಗಳಿಸುತ್ತಿದ್ದ. ಉತ್ತಮ ಅವಕಾಶಗಳನ್ನು ಹುಡುಕಿಕೊಂಡು, ಆಕೆಯ ಗಂಡ ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಸೌದಿ ಅರೇಬಿಯಾಕ್ಕೆ ತೆರಳಿದರು, ಆದರೆ ಮುಂದಿನ 3 ವರ್ಷಗಳಲ್ಲಿ, ಅವರು ತಮ್ಮ ಎಲ್ಲಾ ಉಳಿತಾಯವನ್ನು ಕಳೆದುಕೊಂಡರು. 5 ಸದಸ್ಯರ ಕುಟುಂಬವು ಬ್ರಾಹ್ಮಿ ಒಬ್ಬರ ಆದಾಯವನ್ನೇ ಅವಲಂಬಿಸುವಂತಾಯಿತು.
ಮೊದಲಿಗೆ ಬ್ರಾಹ್ಮಿ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ವೆಚ್ಚವನ್ನು ಕಡಿಮೆಗೊಳಿಸಿಕೊಂಡಳು. ತನ್ನ ಮನೆಯ ಪಕ್ಕದಲ್ಲಿದ್ದ 4 ಕನಾಲ್ ಭೂಮಿಯಲ್ಲಿ ಕೃಷಿ ಆರಂಭಿಸಿದಳು. ವರ್ಷಗಳು ಉರುಳಿದಂತೆ, ಅವರು ಕೈತೋಟದಲ್ಲಿ ವೈವಿಧ್ಯಮಯ ತರಕಾರಿಗಳಾದ ಸೊಪ್ಪು, ಗಡ್ಡೆಕೋಸು, ಅರಿಶಿನ, ಹೂಕೋಸು, ಸೌತೆ ಮತ್ತಿತರ ಕಾಲೋಚಿತ ಎಲೆ ತರಕಾರಿಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ ಕೆಲವು ಅಪರೂಪದ ಕಾಡು ತರಕಾರಿಗಳಾದ ಸ್ಥಳೀಯವಾಗಿ “ಪಡೋಲ್” ಎಂದು ಕರೆಯಲಾಗುವ ಪಡವಲಕಾಯಿ ಮತ್ತು ಸ್ಥಳೀಯವಾಗಿ ಟಾರ್ಡಿ ಎಂದು ಕರೆಯಲಾಗುವ ಹೆಗ್ಗೆಣಸು “ಡಯೋಸ್ಕೋರಿಯಾ ಅಲಾಟಾ” ಬೆಳೆಯುತ್ತಿದ್ದಾರೆ. ತಾನು ಮಾರುಕಟ್ಟೆಯಿಂದ ತರುತ್ತಿದ್ದ ತರಕಾರಿಗಳ ರುಚಿಗಿಂತ ತನ್ನ ತರಕಾರಿಗಳ ರುಚಿ ಬಹಳ ಚೆನ್ನಾಗಿದೆ ಎಂದು ಅವಳು ಹೇಳಿಕೊಳ್ಳುತ್ತಾಳೆ. ಆರಂಭದಲ್ಲಿ, ಅವಳು ಕೈತೋಟವನ್ನು ಮಾಡಿದಾಗ, ಹೆಚ್ಚಿನ ತರಕಾರಿಗಳನ್ನು ಪಡೆದಳು. ಅದನ್ನು ಬಂಧುಗಳು ಮತ್ತು ಸ್ನೇಹಿತರಿಗೆ ಉಚಿತವಾಗಿ ವಿತರಿಸುತ್ತಿದ್ದಳು. ಆದರೆ ನಂತರ ತನ್ನ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ, ಮೂಲಂಗಿಗಳನ್ನು ಸಂಗ್ರಹಿಸಿ, ತೊಳೆದು ಮನೆ ಮನೆಗೆ ಮಾರಾಟ ಮಾಡಲು ಆರಂಭಿಸಿದಳು. ಇದೇ ಮೊದಲ ಬಾರಿಗೆ ಅವಳು ತಾನು ಬೆಳೆದ ತರಕಾರಿಗಳ ಮಾರಾಟದಿಂದ ಲಾಭ ಗಳಿಸಿದಳು. ಈ ಸಣ್ಣ ಯಶಸ್ಸು ತನ್ನ ಕೈತೋಟದ ಹೆಚ್ಚುವರಿ ಇಳುವರಿಯನ್ನು ನಿಯಮಿತವಾಗಿ ಗ್ರಾಮಸ್ಥರಿಗೆ ಮಾರಾಟ ಮಾಡಲು ಪ್ರೇರೇಪಿಸಿತು.
ನಂತರ ತನ್ನ ತೋಟದಲ್ಲಿ ಮಾವು, ಪ್ಲಮ್, ನಿಂಬೆ, ಕಿತ್ತಳೆ, ಸೀಬೆ, ದಾಳಿಂಬೆಯಂತಹ ಮರಗಳನ್ನು ನೆಟ್ಟಳು. ಇದರಿಂದ ತತ್‌ತಕ್ಷಣದ ಯಶಸ್ಸೇನೂ ದೊರಕಲಿಲ್ಲ. ಬ್ರಾಹ್ಮಿ ಎದುರಿಸಿದ ಮೊದಲ ಸವಾಲು ಕಾಡು ಕೋತಿಗಳ ಹಾವಳಿ. ಕೋತಿಗಳು ಹಲವಾರು ಬಾರಿ ಬೆಳೆ ನಾಶಮಾಡಿದವು. ಆದರೆ ಇದರಿಂದ ಬ್ರಾಹ್ಮಿ ಎದೆಗುಂದಲಿಲ್ಲ. ಕೋತಿಗಳಿಂದ ಹಾನಿಗೊಳಗಾದ ಹಣ್ಣುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಕೆಲವನ್ನು ಉಳಿಸಿ ಮನೆಯ ಬಳಕೆಗಾಗಿ ಚಟ್ನಿ ಮತ್ತು ಉಪ್ಪಿನಕಾಯಿಗಳನ್ನು ತಯಾರಿಸಿದಳು. ಕಳೆದ ಮೂರು ವರ್ಷಗಳಲ್ಲಿ, ಅವಳ ತೋಟಕ್ಕೆ ಬರುತ್ತಿದ್ದ ಕೋತಿಗಳ ಸಂಖ್ಯೆ ಕಡಿಮೆಯಾಗಿದೆ.
೧೯೯೯ ರಲ್ಲಿ, ಆಕೆಗೆ ಅಂಗನವಾಡಿಯಲ್ಲಿ ಸಹಾಯಕಿಯ ಕೆಲಸ ಸಿಕ್ಕಿತು. ಹೊಸ ಕೆಲಸದ ಹೊರತಾಗಿಯೂ ಅವರು ತಮ್ಮ ಭೂಮಿಯಲ್ಲಿ ಕೆಲಸ ಮಾಡುವುದನ್ನು, ಹೊಸ ತಂತ್ರಗಳು ಮತ್ತು ವಿಧಾನಗಳನ್ನು ಕಲಿಯುವುದನ್ನು ಮುಂದುವರೆಸಿದರು. ೨೦೦೩ ರಲ್ಲಿ, ಪ್ರಾದೇಶಿಕ ಕೃಷಿ ಬ್ಲಾಕ್ ಅಧಿಕಾರಿಯೊಬ್ಬರು ಆಕೆಯನ್ನು ಎರೆಹುಳು ಗೊಬ್ಬರ ತರಬೇತಿಗೆ ಆಯ್ಕೆ ಮಾಡಿದರು. ಕಾರ್ಯಾಗಾರದ ನಂತರ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ತಮ್ಮ ಜಮೀನಿನಲ್ಲಿ ಹಸುವಿನ ಸಗಣಿ, ಗಂಜಲವನ್ನು ಬಳಸಲು ಆರಂಭಿಸಿದರು. ನಂತರ 2019 ರಲ್ಲಿ, ಗ್ರಾಮೀಣ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ (RTDC) ತಂಡದಿಂದ ಇತರ ಕೃಷಿ ತಂತ್ರಗಳನ್ನು ಕಲಿತರು. ಶ್ರೀ ಸುಭಾಷ್ ಪಾಳೇಕರ್ಜಿಯವರ ನೈಸರ್ಗಿಕ ಕೃಷಿ ವಿಧಾನದ ಬಗ್ಗೆ ಕಲಿತರು. ತಮ್ಮ ಬಳಿ ಇದ್ದ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ನೈಸರ್ಗಿಕ ಕೃಷಿ ತತ್ವಗಳನ್ನು ಅಭ್ಯಾಸ ಮಾಡಲು ಆರಂಭಿಸಿದರು. ಹಸುವಿಗೆ ಬದಲಾಗಿ ಎಮ್ಮೆಯ ಸಗಣಿ ಮತ್ತು ಗಂಜಲವನ್ನು ಬಳಸಿ, ಅದರಿಂದ ಉತ್ತಮ ಫಲಿತಾಂಶಗಳನ್ನು ಪಡೆದರು. ಸಾಂಕ್ರಾಮಿಕ ಸಮಯದಲ್ಲಿ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚು ಶ್ರಮ ಪಡಬೇಕಾಗಿರಲಿಲ್ಲ. ಗ್ರಾಮಸ್ಥರು ಆಕೆಯ ಮನೆಗೆ ಬಂದು ಉತ್ತಮ ಗುಣಮಟ್ಟದ ಸಾವಯವ ತರಕಾರಿಗಳನ್ನು ಮಾರುಕಟ್ಟೆ ಬೆಲೆಗಿಂತ 3 ಪಟ್ಟು ಹೆಚ್ಚು ಬೆಲೆಗೆ ಖರೀದಿಸುತ್ತಿದ್ದರು. ಸಂಪನ್ಮೂಲಗಳ ಕೊರತೆಯಿಂದಾಗಿ ಬೇಡಿಕೆ ಹೆಚ್ಚಾದಾಗ, ಮೊದಲು ಬಿಸಾಡುತ್ತಿದ್ದ ಗಡ್ಡೆಕೋಸು ಮತ್ತು ಮೂಲಂಗಿಯ ಎಲೆಗಳನ್ನು ಕೂಡ ಮಾರಾಟ ಮಾಡುವಂತಾಯಿತು.
ಈ ವರ್ಷ ಆಕೆ ದೊಡ್ಡ ಏಲಕ್ಕಿ ಮತ್ತು ರಾಗಿ ಬೆಳೆಯಲು ಆರಂಭಿಸಿದ್ದಾರೆ. ಎರಡು ಎಮ್ಮೆಗಳು ಮತ್ತು ಹಸುವಿನಿಂದ ಮೊಸರು ಮತ್ತು ತುಪ್ಪದಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ತಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಮಾರ್ಚ್ ತಿಂಗಳಲ್ಲಿ, RTDC ತಂಡದ ಬೆಂಬಲದೊಂದಿಗೆ ಹಿತ್ತಲಿನಲ್ಲಿ ಕೋಳಿ ಸಾಕಣೆಯನ್ನು ಆರಂಭಿಸಿದರು.
ಉಪಸಂಹಾರ
ಅವಕಾಶ ದೊರೆತಾಗ ಮಹಿಳಾ ರೈತರು ತಾವೇ ಆಸಕ್ತಿಯಿಂದ ಕೃಷಿಪರಿಸರ ವಿಜ್ಞಾನದ ತತ್ವಗಳನ್ನು ಅಭ್ಯಸಿಸಿದರು. ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳುವ ಮೂಲಕ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿಕೊಂಡರು. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಕುಟುಂಬದ ಆರೋಗ್ಯದೊಂದಿಗೆ ಬೆಳೆ ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನಕೇಂದ್ರಿಕರಿಸಿದರು. ಕೃಷಿ ಪರಿಸರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಈ ಮಹಿಳೆಯರು ಸಾಂಪ್ರದಾಯಿಕ ವ್ಯವಸ್ಥೆಯೊಂದಿಗೆ ಕೆಲಸ ಮಾಡಿದರು. ಆದರೆ ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಅಳವಡಿಸಿಕೊಳ್ಳಲು ಹಿಂಜರಿಯಲಿಲ್ಲ. ಜ್ಞಾನ ಮತ್ತು ತಂತ್ರಜ್ಞಾನಗಳ ಲಭ್ಯತೆಯನ್ನು ಸ್ಥಳೀಯ ಸಮುದಾಯಗಳಿಗೆ ವಿವಿಧ ಉತ್ಪನ್ನಗಳನ್ನು ಒದಗಿಸುವ ಮೂಲಕ ತಮ್ಮ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಿಕೊಳ್ಳಲು ಬಳಸಿಕೊಂಡರು.
ಈ ಮಹಿಳೆಯರು ತಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಮುಗ್ಗಟ್ಟುಗಳಿಂದ ಎದೆಗುಂದಲಿಲ್ಲ. ಮಕ್ಕಳಿಗೆ ಉತ್ತಮ ಆರೋಗ್ಯಕರ ಜೀವನವನ್ನು ಒದಗಿಸಲು ಅತ್ತಿ ಕಷ್ಟಪಟ್ಟು ಕೆಲಸ ಮಾಡಿದರು. ಇದಕ್ಕಾಗಿ ತಮಗೆ ಸಿಕ್ಕ ಜ್ಞಾನ ಮತ್ತು ಬೆಂಬಲವನ್ನು ಬಳಸಿಕೊಂಡರು. ಬ್ರಾಹ್ಮಿ ನೈಸರ್ಗಿಕ ಕೃಷಿಯಲ್ಲಿನ ಪ್ರಚಲಿತ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಹೊಸ ಫಲಿತಾಂಶಗಳನ್ನು ಪಡೆಯಲು ಪ್ರಯೋಗಗಳನ್ನು ಮಾಡಿದರು. ಇಬ್ಬರೂ ಮಹಿಳೆಯರು ತಮ್ಮದೇ ಆದ ಪ್ರಯತ್ನಗಳು ಮತ್ತು ತಿಳಿವಳಿಕೆಯೊಂದಿಗೆ ಕೃಷಿ ಪರಿಸರ ವಿಜ್ಞಾನದ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಅಸಾಧಾರಣ ಯಶಸ್ಸನ್ನು ತೋರಿಸಿದರು.
ಕೃತಜ್ಞತೆಗಳು
ಗ್ರಾಮೀಣ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ (ಆರ್‌ಟಿಡಿಸಿ)ದ ಸಮುದಾಯ ಸಂಪನ್ಮೂಲ ವ್ಯಕ್ತಿ (ಹಿಮಾಚಲ ಪ್ರದೇಶ) ಮೀನಾ ದೇವಿ ಅವರು ನೀಡಿದ ನೆರವನ್ನು ಕೃತಜ್ಞತೆಯಿಂದ ಸ್ಮರಿಸಲಾಗಿದೆ.
Chhavi Bathla
Regional Coordinator (Himachal Pradesh)
Watershed Support Services and Activities Network
(WASSAN)
E-mail: chhavi@wassan.org
Sai Nikam
Program Officer (Hyderabad)
Organization- Watershed Support Services and
Activities Network (WASSAN)
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ :೩; ಸೆಪ್ಟಂಬರ್ ೨೦೨೩


